ಶೈವಲ

(ಆಲ್ಗೆ ಇಂದ ಪುನರ್ನಿರ್ದೇಶಿತ)

ಆಲ್ಗೆಒಂದು ಸರಳವಾದ ಜೀವಾಣು. ಥಾಲ್ಲೊಫೈಟ ಗುಂಪಿಗೆ (ಗ್ರೀಕ್ ಪದ ಥಾಲ್ಲಸ್ ಅಂದರೆ ಎಳೆಕೊನರು, ಫೈಟಾನ್ ಅಂದರೆ ಒಂದು ಗಿಡ) ಸೇರಿದ ಕನಿಷ್ಠ ದರ್ಜೆಯ ಸಸ್ಯ. ಪಾಚಿ, ಶೈವಲ, ಶಿಲಾವಲ್ಕ ಮತ್ತು ಸಾಮಾನ್ಯ ಭಾಷೆಯಲ್ಲಿ ಜಲಕುಸುಮ (ವಾಟರ್ ಬ್ಲೂಮ್), ಕಪ್ಪೆಯ ಉಗುಳು, ಮಾಸಸ್ ಪರ್ಯಾಯನಾಮಗಳು, ತೇವಪೂರಿತ ಪ್ರದೇಶಗಳಿಂದ ತೊಡಗಿ ವಿಶಾಲಸಾಗರಗಳವರೆಗೆ ವಿವಿಧ ಉಷ್ಣತಾವಲಯಗಳಲ್ಲಿ ವಿವಿಧ ಎತ್ತರ ಆಳಗಳಲ್ಲಿ ಆಲ್ಗೆ ಸಸ್ಯಗಳ ವ್ಯಾಪ್ತಿ ಇದೆ.[] ಹೊಸ ನೀರಿನ ಕೊಳದ ತಳದ ತೆಳುಲೇಪ, ಕಲ್ಲುಬಂಡೆಗಳ ಮರದ ಕಾಂಡಗಳ ಮೇಲಿನ ಹೆಸರು ಕರೆಗಳು, ಸಾಗರಗಳ ಮಹಾ ಕಳೆಗಳು (ಸಮುದ್ರಕಳೆ-ಸೀ ವೀಡ್) ಎಲ್ಲವೂ ಆಲ್ಗೆಯ ವಿವಿಧ ರೂಪಗಳು.[] ಸಸ್ಯವಿಜ್ಞಾನಿಗಳು ಆಲ್ಗೆಯನ್ನು ಅತ್ಯಂತ ಪುರಾತನ ಮತ್ತು ಮೂಲ ರೂಪದ ಸಸ್ಯವೆಂದು ತಿಳಿದರೆ ಇದರ ಕೆಲವು ವಿಭಾಗಗಳಾದರೂ ಪ್ರಾಣಿವರ್ಗಕ್ಕೆ ಸೇರಿವೆಯೆಂದು ಪ್ರಾಣಿಶಾಸ್ತ್ರಜ್ಞರು ಸಾಧಿಸುತ್ತಾರೆ. ಆಲ್ಗೆಯ ವಿವಿಧ ಪ್ರಭೇಧಗಳು ಪ್ರದರ್ಶಿಸುವ ಗುಣಲಕ್ಷಣಗಳು ಇಂಥ ತರ್ಕಕ್ಕೆ ಎಡೆ ಮಾಡಿಕೊಟ್ಟಿವೆ-ಸ್ವಯಂಚಾಲನೆ ಇರುವ ಆಲ್ಗೆಗಳಿವೆ, ಇಲ್ಲದವೂ ಇವೆ. ಉನ್ನತದರ್ಜೆಯ ಸಸ್ಯಗಳನ್ನು ಹಲವಾರು ಆಲ್ಗೆಗಳು ತೋರಿಕೆಗೆ ಹೋಲುತ್ತವಾದರೂ ಈ ಆಲ್ಗೆಗಳಿಗೆ ನಿಜವಾದ ಎಲೆಗಳಿಲ್ಲ, ಕಾಂಡಗಳಿಲ್ಲ, ಬೇರುಗಳಿಲ್ಲ, ನಾಳವ್ಯವಸ್ಥೆಯೂ (ವಾಸ್ಕ್ಯುಲರ್ ಸಿಸ್ಟಂ) ಇಲ್ಲ.[]

ಕೆಂಪು ಆಲ್ಗೆ

ಪ್ರಾಪ್ತಿ ಮತ್ತು ವಿತರಣೆ

ಬದಲಾಯಿಸಿ

ಸಿಹಿನೀರಿನ ಆಲ್ಗೆ ಮತ್ತು ಉಪ್ಪುನೀರಿನ ಆಲ್ಗೆ ಎಂಬ ಸ್ಥೊಲ ವಿತರಣೆ ಆಲ್ಗೆಯ ಪ್ರಾಪ್ತಿ ಸ್ಥಾನವನ್ನು ಕುರಿತು ಇದೆ. ಸುಮಾರು 18,000 ಬಿನ್ನ ಪ್ರಭೇದಗಳಿರುವ ಅಲ್ಗೆ ಸಸ್ಯದಲ್ಲಿನ ಪ್ರತಿ ಪ್ರಭೇದವನ್ನೂ ಈ ಎರಡು ವಿಂಗಡಣೆಗಳಲ್ಲಿ ಒಂದರಲ್ಲಿ ಗುರುತಿಸಬಹುದು. ಒಟ್ಟಾಗಿ ಪರಿಶೀಲಿಸುವಾಗ ಸಿಹಿ ನೀರಿನ ಮತ್ತು ಉಪ್ಪು ನೀರಿನ ಆಲ್ಗೆಗಳು ಪ್ರದರ್ಶಿಸುವ ವೈವಿಧ್ಯ-ಅತಿ ಸರಳತೆಯಿಂದ ಬಲು ಸಂಕೀರ್ಣತೆ ವರೆಗೆ-ಬೆರಗುಗೊಳಿಸುವಂತಿದೆ.[]

ವರ್ಗೀಕರಣ

ಬದಲಾಯಿಸಿ

ವರ್ಣ ಪದಾರ್ಥಗಳ ರಾಸಾಯನಿಕ ಸ್ವಭಾವ, ಕಣಗಳಲ್ಲಿ ಶೇಖರವಾಗಿರುವ ಆಹಾರ ಪದಾರ್ಥಗಳ ಸಮ್ಮಿಳನ, ಚಲನಾಂಗಗಳ ವೈವಿಧ್ಯ, ಕಣ ಭಿತ್ತಿಯ ರಾಸಾಯನಿಕ ರಚನೆ, ಸಂತಾನೋತ್ಪತ್ತಿ ವಿಧಾನಗಳು-ಇವನ್ನು ಆಧರಿಸಿ ಆಲ್ಗೆ ಸಸ್ಯಗಳನ್ನು ಈ ಕೆಳಕಂಡಂತೆ ವರ್ಗೀಕರಿಸಲಾಗಿದೆ.[]

ಸೈಯನೋಫೈಸಿ (ನೀಲಿ ಹಸಿರು ಆಲ್ಗೆಗಳು )

ಬದಲಾಯಿಸಿ

ಜೀವಕಣದ ಒಳರಚನೆ ಬಲು ಸರಳ. ಈ ಶೈವಲದಲ್ಲಿ ನೈಜಕಣಬೀಜ ಮತ್ತು ಕ್ರೊಮಟೋಫೋರ್‍ಗಳು ಇರುವುದಿಲ್ಲ. ಇದರ ಕಣಗಳಲ್ಲಿರುವ ಕಣದ್ರವ್ಯವನ್ನು ಎರಡು ವಿಭಾಗಗಳಾಗಿ ನೋಡುತ್ತೇವೆ-ವರ್ಣದ್ರವ್ಯಗಳು, ತೈಲವಸ್ತುಗಳು ಮತ್ತು ನೀಲಹರಿತ ಶೈವಾಲೀಯ ಪಿಷ್ಟವನ್ನು ಒಳಗೊಂಡಿರುವ (ಪೆರಿಫೆರಲ್ ಪಿಗ್‍ಮೆಂಟೆಡ್ ರೀಜನ್ ಟುಗೆದರ್ ವಿತ್ ಆಯ್ಲ್ ಡ್ರಾಪ್ಸ್) ಪರಿಧಿಯ ಸಮೀಪದ ಹೊರವಿಭಾಗ ; ವರ್ಣ ದ್ರವ್ಯರಹಿತ ನಡುವಣ ವಿಭಾಗ. ಈ ವರ್ಣದ್ರವ್ಯದಲ್ಲಿ ಪತ್ರಹರಿತ್ತು ಎ. ಕೆರೊಟೀನ್, ಮಿಕ್ಸೊಸೆಂತೀನ್, ಮಿಕ್ಸೊಸೆಂತೊಫಿಲ್, ಫೈಕೊಸಯನಿನ್ ಮತ್ತು ಫೈಕೊ ಇರಿತ್ರಿನ್ ಇವೇ ಮೊದಲಾದ ವಸ್ತುಗಳಿವೆ. ಅವುಗಳಲ್ಲಿ ಲಿಂಗಕಣಗಳಾಗಲಿ ಚಲಿಸುವ ಕಣಗಳಾಗಲಿ ಇರುವುದಿಲ್ಲ. ಈ ಸಸ್ಯಗಳು ಒಮ್ಮೊಮ್ಮೆ ಆಕಸ್ಮಿಕವಾಗಿ ತುಂಡಾಗುವುದರ ಮೂಲಕ ಸಂತಾನೋತ್ಪತ್ತಿ ಕ್ರಿಯೆ ನಡೆಯುವುದು. ಇವುಗಳ ಇನ್ನು ಕೆಲವು ಪ್ರೆಭೇದಗಳಲ್ಲಿ ವಿಶೇಷ ಕಣಗಳು ರೂಪಗೊಂಡು ಅವು ಈ ಕ್ರಿಯೆಯನ್ನು ನಡೆಸುತ್ತವೆ.

ಕ್ಲೋರೊಫೈಸಿ (ಹಸಿರು ಬಣ್ಣದ ಆಲ್ಗೆಗಳು)

ಬದಲಾಯಿಸಿ

ಇವುಗಳಲ್ಲಿ ಉಚ್ಚವರ್ಗದ ಸಸ್ಯಗಳಲ್ಲಿರುವಷ್ಟೇ ಪ್ರಮಾಣದ ಮತ್ತು ವ್ಯತ್ಯಾಸಹೊಂದುವ ವರ್ಣಗ್ರಾಹಿಗಳಲ್ಲಿರುವ ವರ್ಣದ್ರವ್ಯಗಳಿವೆ. ಇವು ಸಂಗ್ರಹಿಸಿಡುವ ಪ್ರಮುಖ ಆಹಾರ ವಸ್ತು ಪಿಷ್ಟ ಪದಾರ್ಥಗಳು. ಈ ವರ್ಗದ ಬಹುಪಾಲು ಸಸ್ಯಗಳು ಸಮಯುಗ್ಮ, ಅಸಮಯುಗ್ಮ ಮತ್ತು ವಿಷಮಯುಗ್ಮ ಗ್ಯಾಮೀಟುಗಳಿಂದ ಸಂತಾನೋತ್ಪತ್ತಿ ಕ್ರಿಯೆ ನಡೆಸುತ್ತವೆ. ಇವುಗಳಲ್ಲಿ ವಿವಿಧ ಗಾತ್ರದ ಚಲಿಸುವ ಕಣಗಳಿದ್ದು ಅವುಗಳಲ್ಲಿ ಎರಡು ನಾಲ್ಕು ಅಥವಾ ಅನೇಕ ಕಶಾಂಗಗಳಿವೆ (ಮಲ್ಟಿಫ್ಲಾಗೆಲ್ಲೇಟ್).

ಯುಫೈಸಿ

ಬದಲಾಯಿಸಿ

ನಿಶ್ಚಿತಕಣ ಬೀಜವಿದೆ. ವರ್ಣದ್ರವ್ಯಗಳಲ್ಲಿ ಪತ್ರ ಹರಿತ್ತು ಇದೆ ಮತ್ತು ಅದರಲ್ಲಿನ ನಿರ್ದಿಷ್ಟ ವರ್ಣಗ್ರಾಹಿಗಳಲ್ಲಿ ಕಿರೊಟಿನಾಯಿಡ್ ಎಂಬ ವಸ್ತುಗಳಿವೆ. ಪಿಷ್ಟಜಾತಿಗೆ ಸೇರಿದ ಆದರೆ ಕರಗದ ಪ್ಯಾರಾಮೈಲಿಯಂ ಎಂಬ ಕಾರ್ಬೋಹೈಡ್ರೇಟ್ ಮತ್ತು ಮೇದಸ್ಸು ಪದಾರ್ಥಗಳು ಇವು ಸಂಗ್ರಹಿಸುವ ಮುಖ್ಯ ಆಹಾರವಸ್ತುಗಳು. ಇದರ ಎಲ್ಲ ಕಣಗಳಿಗೆ ಹೊರಪೊರೆ ಇರುವುದಿಲ್ಲ. ಈ ಏಕಕಣಯುಕ್ತ ಕಶಾಂಗಿಗಳಲ್ಲಿ (ಯೂನಿಸೆಲ್ಲುಲರ್ ಫ್ಲಾಜೆಲ್ಲೇಟ್ಸ್) ಒಂದು, ಎರಡು ಇನ್ನು ಕೆಲವೊಮ್ಮೆ ಮೂರು ಕಶಾಂಗಗಳು ಇರುವುವು. ಸಾಮಾನ್ಯವಾಗಿ ನೀಳ ಕಣವಿಭಜನೆಯ ಮೂಲಕ ಇವು ಸಂತಾನೋತ್ಪತ್ತಿ ಕ್ರಿಯೆಯನ್ನು ನಡೆಸುತ್ತವೆ. ಆದರೆ ಇದರ ಒಂದು ಪ್ರಭೇದ ಈ ನಿಯಮಕ್ಕೆ ಅಪವಾದವಾಗಿದ್ದು ಲಿಂಗ ರೀತಿಯಲ್ಲಿ ತನ್ನ ಸಂತಾನೋತ್ಪತ್ತಿಯನ್ನು ನಡೆಸುವುದು.

ಕ್ಸಾಂತೊಫೈಸಿ (ಹಳದಿ ಹಸಿರು ಬಣ್ಣದ ಆಲ್ಗೆಗಳು)

ಬದಲಾಯಿಸಿ

ಮುಖ್ಯವಾಗಿ ಸಿಹಿನೀರಿನಲ್ಲಿ ಬೆಳೆಯುತ್ತವೆ. ಆದರೆ ಕೆಲವು ಕಡಲಿನ ಉಪ್ಪು ನೀರಿನಲ್ಲಿ ಬೆಳೆಯುವುದೂ ಉಂಟು. ಇದರ ಸಸ್ಯಾಂಗ ಏಕಕಣಯುಕ್ತವಾಗಿರಬಹುದು ಅಥವಾ ಬಹುಕಣಯುಕ್ತವಾಗಿರಬಹುದು. ಇದರ ಕಣಭಿತ್ತಿ ಮುಖ್ಯವಾಗಿ ಪೆಕ್ಟಿಕ್ ವಸ್ತುಗಳಿಂದ ಸಂಯೋಜನೆಗೊಂಡಿರುವುದು. ಅವುಗಳಲ್ಲಿ ಪತ್ರಹರಿತ್ತು ವಿರಳ. ಕಣಗಳಲ್ಲಿ ಅನೇಕ ಉರುಟಾದ ಕ್ರೊಮಟೋಫೋರ್‍ಗಳಿವೆ. ಕ್ಸಾಂತೊಫಿಲ್ ಎಂಬ ವರ್ಣದ್ರವ್ಯ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಆಲ್ಗೆಯ ಬಣ್ಣ ಹಳದಿ-ಹಸಿರು. ಸಾಮಾನ್ಯವಾಗಿ ಇವುಗಳಲ್ಲಿ ಪೈರಿನಾಯಿಡುಗಳು ಇರುವುದಿಲ್ಲ. ಮೇದಸ್ಸು ಅಥವಾ ಲ್ಯೊಕೋಸಿನ್ ಪದಾರ್ಥಗಳು ಇವು ಸಂಗ್ರಹಿಸುವ ಪ್ರಮುಖ ಆಹಾರ ವಸ್ತುಗಳು. ಪಿಷ್ಟವನ್ನು ತಯಾರಿಸುವುದಿಲ್ಲ. ಗ್ಯಾಮಿಟುಗಳಲ್ಲಿ ಎರಡು ಕಶಾಂಗಗಳಿದ್ದು ಅವುಗಳ ಉದ್ದ ಭಿನ್ನ. ಇವು ಕಶಾಂಗಗಳಿರುವ ಅಥವಾ ಕಶಾಂಗಗಳಿಲ್ಲದ ಚಲಬೀಜಾಣುಗಳನ್ನು ಉದ್ಭವಿಸಿ ಅವುಗಳ ಮೂಲಕ ತಮ್ಮ ಸಂತಾನೋತ್ಪತ್ತಿ ಕ್ರಿಯೆಯನ್ನು ನಡೆಸುತ್ತವೆ.

ಬ್ಯಾಸಿಲೇರಿಯೋಫೈಸಿ (ಡೈಆಟಮ್ಸ್, ಸುವರ್ಣ ಹಸಿರು ಆಲ್ಗೆಗಳು)

ಬದಲಾಯಿಸಿ

ಇವುಗಳಿಗೆ ಸಾಮಾನ್ಯ ಹೆಸರು ಡೈಆಟಮ್ಸ್, ಬೆಳವಣಿಗೆ ವಿವಿಧ ಪರಿಸರಗಳಲ್ಲಿ : ಸಿಹಿನೀರು, ಉಪ್ಪು ನೀರು, ತೇವವಿರುವ ಮಣ್ಣು, ಮರಗಳ ತೊಗಟೆಗಳು, ಕಲ್ಲು ಬಂಡೆಗಳ ಇಳಿಜಾರುಗಳು ಇತ್ಯಾದಿ ತಾಣಗಳು. ಸಾಮಾನ್ಯವಾಗಿ ಒಂದೇ ಕಣವುಳ್ಳ ದ್ವಿಗುಣಿತ ಸಸ್ಯಾಂಗ ಪಡೆದಿವೆ. ಏಕಜೀವಿಯಾಗಿರಬಹುದು ಅಥವಾ ಸಂಘಜೀವಿಯಾಗಿರಬಹುದು. ಎರಡು ಅರ್ಧಭಾಗಗಳಿಂದ ಸಂಗತವಾಗಿ ಜೋಡಣೆಗೊಂಡಿರುವ ಡೈಆಟಮ್‍ಗಳ ಆಕಾರಗಳು ಬೇರೆ ಬೇರೆ. ಇವುಗಳಲ್ಲಿ ಪೆಕ್ಟಿಕ್ ವಸ್ತುಗಳಿಂದ ರಚನೆಗೊಂಡ ಕಣಭಿತ್ತಿಗಳಿವೆ. ಅದರಲ್ಲಿ ಸಿಲಿಕಾಕಣಗಳು ಹೇರಳವಾದ್ದರಿಂದ ಚಿಪ್ಪು ಬಲು ಸುಂದರವಾಗಿ ಕಾಣುವುದು. ಇವುಗಳ ಆಕಾರ ಭಿತ್ತಿಗಳಲ್ಲಿನ ರೇಖೆಗಳು ಅವುಗಳ ವರ್ಗೀಕರಣದ ದೃಷ್ಟಿಯಿಂದ ಪ್ರಮುಖ. ಈ ಡೈಆಟಮ್ ಕಣಗಳು ಸತ್ತ ಮಣ್ಣಿನ ಹೆಸರು ಡೈಆಟಮಿನ ಮಣ್ಣು. ಇದಕ್ಕೆ ಹೆಚ್ಚಿನ ಆರ್ಥಿಕಮೌಲ್ಯ ಇದೆ. ಡೈಆಟಮ್ ಕಣಗಳಲ್ಲಿ ಕೇವಲ ಒಂದೇಕಣಬೀಜವಿದೆ. ಇವುಗಳ ಕ್ರೋಮಟೋ ಫೋರ್‍ಗಳಲ್ಲಿ ವರ್ಣ ದ್ರವ್ಯವಿದೆ. ಅವುಗಳ ಆಕಾರ ಮತ್ತು ಸಂಖ್ಯೆಗಳಲ್ಲಿ ಹೆಚ್ಚು ಕಮ್ಮಿಯಿರಬಹುದು. ಇದರಲ್ಲಿರುವ ಕಂದು-ಸುವರ್ಣ ಬಣ್ಣದ ವರ್ಣದ್ರವ್ಯವಾದ ಡೈಆಟಮಿನ್ ಎಂಬ ವಿಶೇಷ ವರ್ಣದ್ರವ್ಯ ಅದರಲ್ಲಿರುವ ಪತ್ರಹರಿತ್ತನ್ನು ಮಸಕುಗೊಳಿಸುವುದು. ಮೇದಸ್ಸು ಪದಾರ್ಥ ಇದರಲ್ಲಿ ಸಂಗ್ರಹಗೊಳ್ಳುವ ಪ್ರಮುಖ ಆಹಾರವಸ್ತು. ಜೊತೆಗೆ ಕರಗದ ಅನಿಶ್ಚಿತ ರಾಸಾಯನಿಕ ಸಂಯೋಜನೆಯುಳ್ಳ ವೊಲ್ಯುಟಿನ್ ಎಂಬ ವಿಶೇಷ ಆಹಾರವಸ್ತುವೂ ಇದರಲ್ಲಿ ಸಂಗ್ರಹಗೊಳ್ಳುವುದುಂಟು. ಇವುಗಳಲ್ಲಿ ಸಾಮಾನ್ಯವಾಗಿ ಕಣವಿಭಜನೆಯ ಮೂಲಕ ಸಂತಾನೋತ್ಪತ್ತಿಕ್ರಿಯೆ ನಡೆಯುವುದು. ಆದರೆ ಈ ಕಣಗಳು ಅನುಕ್ರಮವಾಗಿ ವಿಭಜನೆಯಾಗುತ್ತ ಹೋದಂತೆ ಅವುಗಳ ಗಾತ್ರ ಚಿಕ್ಕದಾಗುತ್ತ ಹೋಗುವುದು. ಆಗ ಅವು ಆಕ್ಸೊಸ್ಟೋರುಗಳೆಂಬ ವಿಶೇಷ ರೀತಿಯ ಪುನರ್ನಿರ್ಮಾಣಕಣಗಳನ್ನು ಸೃಷ್ಟಿಸಿ ಆ ಮೂಲಕ ತಮ್ಮ ಮೂಲಗಾತ್ರವನ್ನು ಕಾಯ್ಡಿಟ್ಟುಕೊಳ್ಳುತ್ತವೆ. ಲಿಂಗರೀತಿಯಲ್ಲಿ ಅಥವಾ ನಿರ್ಲಿಂಗ ರೀತಿಯಲ್ಲಿನ ಸಂತಾನೋತ್ಪತ್ತಿ ಕ್ರಿಯೆಯ ಮೂಲಕ ಈ ಆಕ್ಸೊಸ್ಪೋರುಗಳು ಉದ್ಬವಿಸುವುವು.

ಪೇರೋಫೈಸಿ (ಬೆಂಕಿ ಆಲ್ಗೆ)

ಬದಲಾಯಿಸಿ

ಹೆಚ್ಚಿನವು ಏಕಕಣಜೀವಿ ಸಸ್ಯಗಳು. ಎರಡು ಕಶಾಂಗಗಳಿವೆ. ಅವೆರಡರ ಉದ್ದ ಒಂದೇ ರೀತಿ ಇಲ್ಲ. ಇವುಗಳಲ್ಲಿ ಕೆಲವು ಏಕಕಣ ಸಸ್ಯಗಳು, ಸಂಘಜೀವಿ ಶೈವಲದಂಥ ಸ್ವರೂಪ ಇದೆ. ಇವುಗಳಲ್ಲಿ ಡಿನೋಸೆಂತೀನ್, ಡೈಯಡಿನೊ ಸೆಂತೀನ್ ಮತ್ತು ಪೆರಿಡಿನಿನ್ ಎಂಬ ವರ್ಣದ್ರವ್ಯಗಳಿರುವುದರಿಂದ ಇದರಲ್ಲಿರುವ ಕ್ರೊಮಾಟೋಫೋರುಗಳು ಹಳದಿ-ಹಸಿರು ಬಣ್ಣದಿಂದ ಕಂದು ಸುವರ್ಣಬಣ್ಣಕ್ಕೆ ತಿರುಗುವುವು. ಪಿಷ್ಟ ಅಥವಾ ಪಿಷ್ಟದಂಥ ಸಂಯುಕ್ತ ವಸ್ತುಗಳು ಅಥವಾ ತೈಲಪದಾರ್ಥಗಳು ಇವು ಸಂಗ್ರಹಿಸುವ ಪ್ರಮುಖ ಆಹಾರವಸ್ತುಗಳು. ಸಂತಾನೋತ್ಪತ್ತಿಕ್ರಿಯೆ ಕಣವಿಭಜನೆಯ ಮೂಲಕ ಸಾಮಾನ್ಯವಾಗಿದ್ದರೂ ಕೆಲವು ಪ್ರಭೇದಗಳಲ್ಲಿ ಲಿಂಗರೀತಿಯಲ್ಲಿಯೂ ನಡೆಯುತ್ತದೆ. ಇಂಥವಲ್ಲಿ ಚಲಬೀಜಾಣುಗಳು ಉದ್ಬವಿಸುವುದೂ ಕಂಡುಬಂದಿದೆ.

ಫಿಯೋಫೈಸಿ (ಕಂದು ಬಣ್ಣದ ಆಲ್ಗೆಗಳು)

ಬದಲಾಯಿಸಿ

ಕಣಗಳಲ್ಲಿ ನಿರ್ದಿಷ್ಟ ಕಣಬೀಜ, ಕಣದ್ರವ್ಯ ಮತ್ತು ಹರಿತಾಣುಗಳಿವೆ. ಹರಿತಾಣುಗಳಲ್ಲಿ ಸಾಮಾನ್ಯ ದ್ಯುತಿ ಸಂಶ್ಲೇಷಕ ವರ್ಣದ್ರವ್ಯಗಳಾಗಿರುವ ಪತ್ರಹರಿತ್ತು-ಎ, ಕೆರೊಟೀನ್ ಮತ್ತು ಸೆಂತೊಫಿಲ್‍ಗಳೆಂಬ ವರ್ಣದ್ರವ್ಯಗಳಿವೆ. ಅವು ಹಳದಿ ಸುವರ್ಣ ಬಣ್ಣದ ಫ್ಯೊಕೋ ಸೆಂತೀನ್ ಎಂಬ ವರ್ಣದ್ರವ್ಯದಿಂದ ಮಸುಕುಗೊಂಡಿರುತ್ತವೆ. ಸರಳ ರೂಪದ ಸಕ್ಕರೆಗಳು, ಆಲ್ಕೊಹಾಲ್ ಮನ್ನಿಟಾಲ್ ಮತ್ತು ಲ್ಯಾಮಿನಾರಿನ್‍ನಂಥ ಸಂಕೀರ್ಣ ಸಾಕ್ಕರಾಯಿಡ್‍ಗಳನ್ನು ಇವು ಸಂಗ್ರಹಿಸಿಡಬಹುದು; ಅಥವಾ ವಿವಿಧ ರೂಪದ ಮೇದಸ್ಸು ಪದಾರ್ಥಗಳನ್ನು ಶೇಖರಿಸಬಹುದು. ಪಿಯರ್ ಹಣ್ಣಿನಾಕಾರದ ಚಲನಸಾಮಥ್ರ್ಯವುಳ್ಳ ಸಂತಾನೋತ್ಪಾದಕ ಕಣಗಳು ಇವುಗಳಲ್ಲಿವೆ. ಇವುಗಳಲ್ಲಿ ಸಮಯುಗ್ಮ ಗ್ಯಾಮಿಟುಗಳ ಅಥವಾ ವಿಷಮಯುಗ್ಮ ಗ್ಯಾಮಿಟುಗಳ ಸಂಯೋಗದ ಮೂಲಕ ಸಂತಾನೋತ್ಪತ್ತಿಕ್ರಿಯೆ ನಡೆಯುವುದು.

ರೋಡೋಫೈಸಿ (ಕೆಂಪುಬಣ್ಣದ ಆಲ್ಗೆಗಳು)

ಬದಲಾಯಿಸಿ

ಕೇವಲ ಕೆಲವು ಬಹುಕಣ ಬೀಜಗಳಿರುವ ಕಣಗಳಿದ್ದರೂ ಅವುಗಳಲ್ಲಿ ಹೆಚ್ಚಿನ ಕಣಗಳಲ್ಲಿ ಕೇವಲ ಒಂದೇ ಕಣ ಬೀಜವಿರುವುದು. ರಚನೆ ಉಚ್ಚರೀತಿಯದು. ಅವುಗಳ ಕಣದ್ರವ್ಯದಲ್ಲಿ ಒಂದು ಅಥವಾ ಅನೇಕ ವರ್ಣಗ್ರಾಹಿಗಳು ತೇಲುತ್ತಿವೆ. ಅವುಗಳಲ್ಲಿ ಫೈಕೊ ಇರಿತ್ತೀನ್ ಎಂಬ ಕೆಂಪುವರ್ಣದ್ರವ್ಯದ ಜೊತೆಗೆ ಪತ್ರಹರಿತ್ತೂ ಇರುವುದು ಅಲ್ಲದೆ ಅದರಲ್ಲಿ ಫಾಯಿಕೊಸಯಾನಿನ್ ಎಂಬ ನೀಲಿ ವರ್ಣದ್ರವ್ಯವೂ ಇದೆ. ಇವುಗಳಲ್ಲಿ ಆಲ್ಕೊಹಾಲಿನ ಪದಾರ್ಥದ ರೂಪದಲ್ಲಿ ಆಹಾರವಸ್ತುಗಳು ಸಂಗ್ರಹಗೊಳ್ಳುತ್ತವೆ. ಆದರೆ ಮುಖ್ಯವಾಗಿ ಪಾಲಿಸಾಕ್ಕರಾಯಿಡ್‍ಗಳ ಸ್ವರೂಪದಲ್ಲಿ ಅವು ತಮ್ಮ ಆಹಾರ ವಸ್ತುಗಳನ್ನು ಸಂಗ್ರಹಿಸುತ್ತವೆ. ಈ ಆಹಾರಪದಾರ್ಥ ವರ್ಣಗ್ರಾಹಿಗಳಲ್ಲಿ ಇರದೆ ಚಿಕ್ಕಪುಟ್ಟ ಹರಳುಗಳ ರೂಪದಲ್ಲಿ ಕಣದ್ರವ್ಯದಲ್ಲಿ ಸ್ವತಂತ್ರವಾಗಿ ವ್ಯಾಪಿಸಿದೆ. ಅದಕ್ಕೆ ಪ್ಲಾರಿಡಿಯನ್ ಪಿಷ್ಟವೆಂದು ಹೆಸರು. ಈ ಸಸ್ಯಾಂಗ ತನ್ನ ತುದಿಭಾಗದಿಂದ ಬೆಳೆಯುತ್ತ ಹೋಗುವುದು. ಜೊತೆಯಲ್ಲೇ ಮಧ್ಯಭಾಗದಿಂದಲೂ ಬೆಳೆಯುವುದು. ಇವುಗಳ ಕಣ ಕಣಗಳಲ್ಲಿ ಕಣದ್ರವ್ಯದ ಜೋಡಣೆಯೇ ಕಣ್ಣಿಗೆ ಹೊಡೆಯುವಂತೆ ಎದ್ದು ಕಾಣುವ ಗುಣ. ಎರಡನೆಯದಾಗಿ ಯಾವುದೇ ವಿಧದ ಕಶಾಂಗೀ ಸಂತಾನೋತ್ಪಾದಕ ಕಣಗಳಿಲ್ಲದಿರುವುದು ಇದರಲ್ಲಿನ ಪ್ರಧಾನವಾಗಿ ಕಾಣುವ ಮತ್ತೊಂದು ಗುಣ. ವಿಷಮಯುಗ್ಮ ಗ್ಯಾಮಿಟುಗಳ ಮೂಲಕ ನಡೆಯುವ ಲಿಂಗರೀತಿಯ ಸಂತಾನೋತ್ಪಾದಕ ಕ್ರಿಯೆ ಈ ಕೆಂಪು ಶೈವಲಗಳಲ್ಲಿ ಬಲು ಸಾಮಾನ್ಯ.

ಇದು ಸಮುದ್ರ,ಕೆರೆ,ನದಿ ಹಾಗೂ ತೇವಾಂಶದಿಂದ ಕೂಡಿದ ಮಣ್ಣು ಇವುಗಳಲ್ಲಿ ಬೆಳೆಯುತ್ತದೆ.ಹೆಚ್ಚಿನ ಆಲ್ಗೆಗಳು ಏಕ ಜೀವಕೋಗಳನ್ನು ಹೊಂದಿದ್ದು ಸೂಕ್ಷ್ಮದರ್ಶಕದಲ್ಲಷ್ಟೇ ಕಾಣಬಹುದಾಗಿದೆ. ಕೆಲವು ಹಲವು ಜೀವಕೋಶಗಳನ್ನು ಹೊಂದಿದ್ದು ಗಾತ್ರದಲ್ಲಿ ದೊಡ್ಡದಾಗಿರುತ್ತವೆ.ಕೆಲವು ಆಲ್ಗೆಗಳು ನೀರಿನಲ್ಲಿ ತೇಲುವಂತೆ ಇದ್ದರೆ,ಕೆಲವು ಕಲ್ಲುಗಳಿಗೆ ಅಂಟಿಕೊಂಡಿರುತ್ತವೆ. ನೆಲದ ಮೇಲೆ ಹಾಗೂ ಮರಗಳ ಮೇಲೆ ಬೆಳೆಯುವ ಆಲ್ಗೆಗಳೂ ಇವೆ.ಆಲ್ಗೆಗಳು ಕ್ಲೋರೋಫಿಲ್ ಎಂಬ ವಸ್ತುವನ್ನು ಹೊಂದಿರುತ್ತವೆ. ಇವುಗಳು ನೀರು ಹಾಗೂ ಗಾಳಿಯನ್ನು ಶುದ್ಡೀಕರಿಸಲು ಸಹಕರಿಸುತ್ತವೆ. ನೀರಿನಲ್ಲಿರುವ ಮೀನು ಮತ್ತು ಇತರ ಜೀವಿಗಳಿಗೆ ಆಹಾರವಾಗಿ ಉಪಯೋಗವಾಗುತ್ತದೆ.[]

ಉಲ್ಲೇಖಗಳು

ಬದಲಾಯಿಸಿ
  1. Cheyne, Thomas Kelly (1902). "Encyclopædia Biblica: A Critical Dictionary of the Literary, Political and Religious History, the Archæology, Geography, and Natural History of the Bible".
  2. http://paleobiol.geoscienceworld.org/cgi/content/abstract/26/3/386
  3. https://www.livescience.com/54979-what-are-algae.html
  4. Figueroa‐Martinez, F.; Nedelcu, A. M.; Smith, D. R.; Reyes‐Prieto, A. (2015). "When the lights go out: The evolutionary fate of free‐living colorless green algae". The New Phytologist. 206 (3): 972–982. doi:10.1111/nph.13279. PMC 5024002. PMID 26042246.
  5. Parfrey, L. W.; Barbero, E.; Lasser, E.; Dunthorn, M.; Bhattacharya, D.; Patterson, D. J.; Katz, L. A. (2006). "Evaluating Support for the Current Classification of Eukaryotic Diversity". PLOS Genetics. 2 (12): e220. doi:10.1371/journal.pgen.0020220. PMC 1713255. PMID 17194223.{{cite journal}}: CS1 maint: unflagged free DOI (link)
  6. Omar, W. M. (2010). "Perspectives on the Use of Algae as Biological Indicators for Monitoring and Protecting Aquatic Environments, with Special Reference to Malaysian Freshwater Ecosystems". Tropical Life Sciences Research. 21 (2): 51–67. PMC 3819078. PMID 24575199.
"https://kn.wikipedia.org/w/index.php?title=ಶೈವಲ&oldid=1252805" ಇಂದ ಪಡೆಯಲ್ಪಟ್ಟಿದೆ