ಅಗ್ರಹಾರ
ಅಗ್ರಹಾರ ಬ್ರಾಹ್ಮಣರಿಗೆ ದಾನವಾಗಿ ಕೊಡಲಾದ ಹಳ್ಳಿ ಅಥವಾ ಹಳ್ಳಿಯ ಭಾಗ. ಅದರ ಸಕಲಸ್ವಾಮ್ಯವೂ ಅಲ್ಲಿ ವಾಸಿಸುವ ಬ್ರಾಹ್ಮಣರಿಗೇ ಸೇರಿದುದು. ಅಗ್ರಹಾರಗಳಲ್ಲಿ ಬ್ರಾಹ್ಮಣರ ಜೊತೆಗೆ ಇತರ ಜಾತಿಯವರೂ ಇರುತ್ತಿದ್ದರೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಅಗ್ರಹಾರಗಳಲ್ಲಿ ವಾಸ ಮಾಡುವ ಜನಗಳಿಗೆ ಮಹಾಜನಗಳೆಂದು ಹೆಸರು. ಇವರೆಲ್ಲರೂ ಅಗ್ರಹಾರದ ಆಡಳಿತದ ವಿಷಯವನ್ನು ನೋಡಿಕೊಳ್ಳುತ್ತಿದ್ದರು. ಅಗ್ರಹಾರಗಳು ಸಾಮಾನ್ಯವಾಗಿ ಆಂಧ್ರ ಮತ್ತು ಕರ್ಣಾಟಕಗಳಲ್ಲಿ ವಿಶೇಷವಾಗಿದ್ದುವೆಂದು ಶಾಸನ[೧]ಗಳಿಂದ ತಿಳಿದುಬರುತ್ತದೆ. ಕರ್ನಾಟಕದಲ್ಲಿ ಅಗ್ರಹಾರಗಳು 5ನೆಯ ಶತಮಾನದಿಂದಲೇ ಕಂಡುಬಂದು ಹತ್ತೊಂಬತ್ತನೆಯ ಶತಮಾನದವರೆಗೂ ಕರ್ನಾಟಕ ಸಂಸ್ಕøತಿಯ ಬೆಳವಣಿಗೆಯಲ್ಲಿ ಸಹಾಯಕವಾಗಿದ್ದುವು. ಮುಖ್ಯವಾಗಿ ಇವು ವಿದ್ಯಾಭ್ಯಾಸದ ಬೆಳವಣಿಗೆಗೆ ಮಹತ್ತರವಾದ ಸಹಾಯ ಮಾಡಿವೆ. ಅಗ್ರಹಾರದ ಮಹಾಜನಗಳು ಯಮ, ನಿಯಮ, ಸ್ವಾಧ್ಯಾಯ, ಧ್ಯಾನ, ಧಾರಣ, ಮೌನ, ಅನುಷ್ಠಾನ, ಜಪ, ಸಮಾಧಿ ಮುಂತಾದುವುಗಳಲ್ಲಿ ನಿಷ್ಣಾತರಾಗಿ, ವಿದ್ಯಾರ್ಥಿಗಳಿಗೆ ಪಾಠಗಳನ್ನು ಬೋಧಿಸುತ್ತಿದ್ದರು. ತಿಳಿವಳ್ಳಿ ಅಗ್ರಹಾರದ ಮಹಾಜನಗಳು ನಾಲ್ಕು ವೇದಗಳು, ವೈಶೇಷಿಕೆ, ನ್ಯಾಯ, ಸಾಂಖ್ಯ, ಲೋಕಾಯತ, ಮೀಮಾಂಸ, ಬೌದ್ಧ, ಮತ್ತು ಜೈನಶಾಸ್ತ್ರಗಳನ್ನು ಬಲ್ಲವರಾಗಿಯೂ ತರ್ಕ, ವ್ಯಾಕರಣ, ಇತಿಹಾಸ, ಮಹಾಭಾರತ,[೨] ಕಾಮಶಾಸ್ತ್ರ, ನಾಟಕ, ಗಣಿತ, ಮುಂತಾದ ವಿಷಯಗಳಲ್ಲಿ ಪರಿಣತರಾಗಿಯೂ ಇದ್ದರೆಂದು ತಿಳಿಯುತ್ತದೆ. ಪ್ರಾಚೀನ ಕರ್ನಾಟಕದಲ್ಲಿ ಬಳ್ಳಿಗಾವೆ, ತಿಳಿವಳ್ಳಿ, ಸಾಲೋತ್ತಗಿ, ಕಲಶ ಮುಂತಾದ ನೂರಾರು ಅಗ್ರಹಾರಗಳು ವಿದ್ಯಾಕೇಂದ್ರಗಳಾಗಿ ವಿಶ್ವವಿದ್ಯಾನಿಲಯಗಳ ಸ್ಥಾನಗಳಾಗಿದ್ದುವು. ಅಗ್ರಹಾರಗಳ ಮಹಾಜನಗಳು ಧಾರ್ಮಿಕ ಮತ್ತು ಜನೋಪಯೋಗಿ ಕಾರ್ಯಗಳಲ್ಲಿಯೂ ಸಾಕಷ್ಟು ಆಸಕ್ತಿಯನ್ನು ವಹಿಸುತ್ತಿದ್ದರು. ದೇವಾಲಯಗಳ ಆಡಳಿತ, ಕೆರೆಕಟ್ಟೆಗಳ ನಿರ್ಮಾಣ, ವಿಶೇಷ ಸಂದರ್ಭಗಳಲ್ಲಿ ನ್ಯಾಯನಿರ್ಣಯ ಮುಂತಾದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಅಗ್ರಹಾರಗಳು ಪ್ರಾಚೀನ ಕರ್ನಾಟಕದಲ್ಲಿ ಬಹು ಉಪಯುಕ್ತವಾದ ಮತ್ತು ಮಹತ್ತರವಾದ ಪಾತ್ರವನ್ನು ವಹಿಸಿದ್ದವೆಂದು ಹೇಳಬಹುದು.
ಉಲ್ಲೇಖನಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2015-11-02. Retrieved 2016-10-21.
- ↑ http://www.nammakannadanaadu.com/purana/mahabharata.php