ಅಕ್ಕಿ ರೊಟ್ಟಿ
ಅಕ್ಕಿ ರೊಟ್ಟಿ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಉಪಹಾರಗಳಲ್ಲಿ ಒಂದು. ಅಕ್ಕಿಯ ಹಿಟ್ಟು, ತೆಂಗಿನ ತುರಿ, ತರಕಾರಿತುರಿ ಹಾಗೂ ಹಸಿಮೆಣಸಿನಕಾಯಿಯನ್ನು ಉಪಯೋಗಿಸಿ ಈ ತಿಂಡಿಯನ್ನು ತಯಾರಿಸುತ್ತಾರೆ.
ಬೇಕಾಗುವ ಸಾಮಾನುಗಳು
- ಅಕ್ಕಿ ಹಿಟ್ಟು – 1 ಬಟ್ಟಲು
- ತೆಂಗಿನಕಾಯಿ ತುರಿ – ½ ಬಟ್ಟಲು
- ಈರುಳ್ಳಿ – 1
- ಹಸಿಮೆಣಸಿನಕಾಯಿ – 2 ಅಥವಾ 3
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಜೀರಿಗೆ – ¼ ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಎಣ್ಣೆ – ಬೇಯಿಸಲು ಸಾಕಾಗುವಷ್ಟು
ಮಾಡುವ ವಿಧಾನ
ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ, ಹಸಿಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪನ್ನು ಹೆಚ್ಚಿಕೊಳ್ಳಿ. ಅಕ್ಕಿಹಿಟ್ಟಿಗೆ ತೆಂಗಿನತುರಿ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಹಾಗೂ ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
ಈಗ ತವೆಗೆ ಎಣ್ಣೆ ಸವರಿ, ಕಲಸಿದ ಹಿಟ್ಟನ್ನು ತೆಳ್ಳಗೆ ತಟ್ಟಿ. ಮೇಲೆ ಎರಡು ಚಮಚ ಎಣ್ಣೆ ಹಾಕಿ ಒಲೆಯ ಮೇಲೆ ಇಟ್ಟು ಮುಚ್ಚಿ ಬೇಯಿಸಿ. ರೊಟ್ಟಿ ಬೆಂದ ನಂತರ ಉರಿ ಕಡಿಮೆ ಮಾಡಿ ಗರಿಗರಿಯಾಗಲು ಬಿಡಿ.
ಈರುಳ್ಳಿಯ ಜೊತೆಗೆ ತರಕಾರಿ ಅಥವಾ ಈರುಳ್ಳಿಯನ್ನು ಬಿಟ್ಟು ಕೇವಲ ತರಕಾರಿಯನ್ನು ಉಪಯೋಗಿಸಿ ಸಹ ರೊಟ್ಟಿ ಮಾಡಬಹುದು. ತರಕಾರಿಯನ್ನು ಹೆಚ್ಚಾಗಿ ಬಳಸಿದರೆ ಆರೋಗ್ಯಕ್ಕೂ ಒಳ್ಳೆಯದು ಮತ್ತು ರೊಟ್ಟಿ ಮೆತ್ತಗೆ ಸಹ ಆಗುತ್ತದೆ. ಅವರೆಕಾಳು ರೊಟ್ಟಿ ವಿಶೇಷವಾದದ್ದಾಗಿದೆ. ಅವರೆಕಾಳನ್ನು ಬೇಯಿಸಿ ನಂತರ ಹಿಟ್ಟಿಗೆ ಸೇರಿಸಬೇಕು.
ಅಕ್ಕಿ ರೊಟ್ಟಿಯನ್ನು ತೆಂಗಿನಕಾಯಿ ಚಟ್ನಿ ಹಾಗೂ ಬೆಣ್ಣೆ/ ತುಪ್ಪ ದೊಂದಿಗೆ ಸವಿಯಬಹುದು [೧]
ಉಲ್ಲೇಖಗಳು
ಬದಲಾಯಿಸಿ