ಅಂತರಿಕ್ಷ ಮತ್ತು ಅಂತರಿಕ್ಷ ದೇವತೆಗಳು

ಅಂತರಿಕ್ಷ ಮತ್ತು ಅಂತರಿಕ್ಷ ದೇವತೆಗಳು ಅಂತರಿಕ್ಷವೇ ಒಂದು ದೇವತೆ ಎಂಬ ಭಾವನೆ ಬಹಳ ಪ್ರಾಚೀನಕಾಲದ್ದು. ಪ್ರಾಚ್ಯ ಮತ್ತು ಪಾಶ್ಚಾತ್ಯ ದೇಶಗಳಲ್ಲಿ ವಿಕಾಸಗೊಂಡಿರುವ ಧರ್ಮಗಳ ಹಿನ್ನೆಲೆಯಲ್ಲಿ ಅಂತರಿಕ್ಷ ದೇವತೆಯ ಪ್ರಭಾವವನ್ನು ಕಾಣಬಹುದು. ಆದುದರಿಂದ ಅನಾದಿಕಾಲದ ಪ್ರಕೃತಿ ಧರ್ಮದಷ್ಟೇ ಇದೂ ಪ್ರಾಚೀನವಾದುದು. ಈ ಅಂತರಿಕ್ಷದೇವತೆಯ ಸ್ವರೂಪವನ್ನು ಬೇರೆ ಬೇರೆ ದೇಶದ ಬೇರೆ ಬೇರೆ ಜನಾಂಗದವರು ಬೇರೆ ಬೇರೆ ರೂಪದಲ್ಲಿ ಗುರುತಿಸಿದ್ದಾರೆ. ಅಮೆರಿಕದ ಮಾಯ ಜನಾಂಗ, ಇಂಕ ಜನಾಂಗ, ಟ್ರೆಸ್ಸಿಲ್ ಮತ್ತು ಆಂಡಿಸ್ ಪ್ರದೇಶದ ಜನ ಹಾಗೂ ಎಸ್ಕಿಮೋ ಜನರ ಪ್ರಾಚೀನ ಪುರಾಣಗಳಲ್ಲಿ ಈ ದೇವತೆಯನ್ನು ಹೆಸರಿಸಲಾಗುತ್ತದೆ. ಅಂಡಮಾನಿನ ಪುಲಗ ಹಾಗೂ ಪ್ರಾಚೀನ ಭಾರತವರುಣ ಅಂತರಿಕ್ಷ ದೇವತೆಯ ರೂಪವೆಂದು ತಿಳಿದುಬಂದಿದೆ. ಮಲೇಷ್ಯ ಪಾಲಿನೇಷ್ಯ, ಆಸ್ಟ್ರೇಲಿಯ ಮೊದಲಾದ ದೇಶಗಳಲ್ಲೂ ಈ ದೇವತೆಯ ಲಕ್ಷಣಗಳು ವಿವಿಧ ರೂಪಾಂತರಗಳಲ್ಲಿ ಕಂಡುಬರುತ್ತವೆ; ನೂರಾರು ಬೇರೆ ಬೇರೆ ಹೆಸರುಗಳಿಂದ ಈ ದೇವತೆಯನ್ನು ಕರೆದಿದ್ದಾರಾದರೂ ಈ ದೇವತೆಯ ಸ್ವರೂಪವನ್ನು ನಾವು ಎಲ್ಲ ಕಡೆಯೂ ಖಚಿತವಾಗಿ ಗುರುತಿಸಬಹುದು. ಒಂದೇ ಅಂತರಿಕ್ಷ ದೇವತೆಯ ಬೇರೆ ಬೇರೆ ಸ್ವರೂಪವನ್ನು ಆಫ್ರಿಕದ ಆದಿವಾಸಿಗಳು ವರ್ಣಿಸಿರುತ್ತಾರೆ.

ಸರ್ವಾಂತರ್ಯಾಮಿ ಬದಲಾಯಿಸಿ

ಅಂತರಿಕ್ಷದೇವತೆ ಆಳದ ಜಾಗವಿಲ್ಲ. ಇದರ ರಾಜ್ಯ ವಿಶ್ವದಷ್ಟು ವಿಸ್ತಾರ. ಆದಿಮಾನವ ಸೃಷ್ಟಿಯ ವಿಷಯವಾಗಿ ಹೆಚ್ಚು ಕಡಿಮೆ ಒಂದೇ ಭಾವನೆಯನ್ನು ಹೊಂದಿದ್ದುದರಿಂದ ಈ ದೇವತೆಯ ವಿಷಯದಲ್ಲಿ ಏಕರೂಪತೆಯನ್ನು ಕಾಣುತ್ತೇವೆ ಇದು ದ್ರವರೂಪವಾಗಿಯೂ ಪಾರದರ್ಶಕವಾಗಿಯೂ ಇವೆಯೆಂದೂ ಇದರ ಕೆಳಗೆ ನಮ್ಮ ಭೂಮಿ ಇರುವುದೆಂದೂ ಅವರು ಭಾವಿಸಿದ್ದರು. ಆಕಾಶದ ಜಲಗಳಿಗೂ ಭೂಮಿಯ ಸಮುದ್ರಗಳಿಗೂ ಇರುವ ಸಂಬಂಧ. ದೊಡ್ಡ ನದಿಗಳು ಆಕಾಶದ ಮೂಲವನ್ನೆ ಹೊಂದಿವೆ ಎಂಬ ಕಥಾನಕಗಳು, ಮೇಘಗಳಿಂದ ವರ್ಷಿಸುವ ಜಲರಾಶಿಗಳು-ಮೊದಲಾದುವನ್ನು ಗಮನಿಸಿದರೆ ಆಕಾಶ ದೇವತೆಯ ಹಾಗೂ ಮಳೆ ದೇವತೆಯ ಕೆಲಸ ಸ್ಪಷ್ಟವಾಗುತ್ತದೆ. ಪ್ರಕೃತಿಯ ಮಹತ್ಕಾರ್ಯಗಳನ್ನೆಲ್ಲ ಆಕಾಶ ದೇವತೆಗೆ ಹೇಳಿರುವುದರ ಅರ್ಥ ಸ್ಪಷ್ಟವಾಗುವುದು. ಅಂತರಿಕ್ಷಕ್ಕೂ ಅಂತರಿಕ್ಷ ದೇವತೆಗೂ ನಿಕಟ ಸಂಬಂಧವಿದೆ. ಆಕಾಶದ್ರವ್ಯ, ಮಳೆ ಮೋಡ, ಗುಡುಗು, ಮಿಂಚು, ಬಿರುಗಾಳಿ, ಮೊದಲಾದುವುಗಳಿಗೂ ಆಕಾಶದೇವತೆಗೂ ಸಂಬಂಧವಿರುವುದು ಸ್ಪಷ್ಟವಾಗುವುದು.

ವಿವಿಧ ಸಂಸ್ಕೃತಿಗಳಲ್ಲಿ ಸಾಮ್ಯತೆ ಬದಲಾಯಿಸಿ

ಹಿಂದೂಗಳ, ಗ್ರೀಕರ, ರೋಮನ್ನರ ಮತ್ತು ಟ್ಯೂಟನ್ ಜನರ ಪುರಾತನರು ಆಕಾಶದೇವತೆಗೆ ಕೊಟ್ಟಿರುವ ದ್ಯೌಃ, ಜ್ಯೂಸ್, ಜೋವಿಸ್, ಟಿಯು ಎಂಬ ಹೆಸರುಗಳಲ್ಲಿ ಸಾಮ್ಯವಿದೆ. ಒಂದು ಕಾಲದಲ್ಲಿ ಈ ದೇವತೆ ವರುಣನಾಗಿ ತುಂಬ ಉದಾತ್ತನಾಗಿ ಕಾಣಿಸುತ್ತಾನೆ. ಇವನು ಸರ್ವವ್ಯಾಪಿ. ಇವನ ಪ್ರಭುತ್ವಕ್ಕೆ ಎಲ್ಲವೂ ಒಳಪಟ್ಟಿವೆ. ಇವನು ಸರ್ವದೃಕ್, ಇವನ ಕಣ್ಣಿಂದ ಯಾವುದೂ ತಪ್ಪಿಸಿಕೊಳ್ಳುವಂತಿಲ್ಲ. ಈ ಮೂರು ಸ್ಥಾನಗಳಲ್ಲಿಯೂ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಂಡು ಬೇರೆ ಬೇರೆ ವ್ಯಾಪಾರಗಳನ್ನು ಸರ್ವಾತ್ಮಕನಾದ ಒಬ್ಬನೇ ದೇವರು ನಡೆಸುವನೆಂದು ವೇದಗಳಲ್ಲಿ ಹೇಳಿರುವುದು ಅತ್ಯಾಶ್ಚರ್ಯಕರವಾಗಿದೆ. ಪೃಥ್ವೀಸ್ಥಾನದಲ್ಲಿ ಅಗ್ನಿಯ ರೂಪದಲ್ಲಿ ಇದ್ದು, ಅಂತರಿಕ್ಷದಲ್ಲಿ ವಿದ್ಯುದ್ರೂಪದಿಂದಲೂ ದ್ಯುಲೋಕದಲ್ಲಿ ಸೂರ್ಯನಾಗಿಯೂ ಶೋಭಿಸುವನೆಂದು ಹೇಳಿದ್ದಾರೆ. ಈ ಬೇರೆ ಬೇರೆ ಸ್ಥಾನಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಒಬ್ಬನೇ ಆದ ವಿಶ್ವಾತ್ಮನು ಹೇಗೆ ಅಭಿವ್ಯಕ್ತನಾಗಿರುವನೆಂಬುದನ್ನು ವಿಶ್ವದಲ್ಲೇ ಅತಿ ಪ್ರಾಚೀನವಾದ ವೇದಗಳು ಉದ್ದಕ್ಕೂ ಘೋಷಿಸುತ್ತವೆ. ಯಾಸ್ಕರು ಏಕ ಆತ್ಮಾ ಬಹುಧಾ ಸ್ತೂಯತೇ ಎಂದು ಈ ಅಂಶವನ್ನು ಪ್ರತಿಪಾದಿಸಿದ್ದಾರೆ. ಹೀಗೆ ದೇವತಾ ವೈವಿಧ್ಯ ಉಪಪನ್ನವಾಗುತ್ತದೆ. ಪೃಥ್ವೀ ಸ್ಥಾನದಲ್ಲಿ ಅಗ್ನಿ, ಪೃಥ್ವೀ, ಸೋಮ, ನದೀ, ಬೃಹಸ್ಪತೀ ದೇವರುಗಳಿರುವಂತೆ, ದ್ಯುಸ್ಥಾನದಲ್ಲಿ ವರುಣ, ಮಿತ್ರ, ಸೂರ್ಯ, ಸವಿತೃ, ಪುಷನ್, ಅಶ್ವಿನ್, ವಿóಣು ಮೊದಲಾದ ದೇವತೆಗಳಿರುವಂತೆ ಅಂತರಿಕ್ಷ ಸ್ಥಾನದಲ್ಲಿ ಇಂದ್ರ, ವಾಯು, ಅಪಾಂನಪಾತ್, ರುದ್ರ, ಮರುತ್, ವಾತ, ಪರ್ಜನ್ಯ ಮತ್ತು ಅಬ್ದೇವತೆಗಳು ಇದ್ದಾರೆ.

ವೈದಿಕ ಧರ್ಮದಲ್ಲಿ ಬದಲಾಯಿಸಿ

ಇತರ ದೇಶಗಳಲ್ಲಿ ಹೇಗೋ ಹಾಗೆ ಅಂತರಿಕ್ಷದೇವತೆಗೂ ಮಳೆ, ಗುಡುಗು, ಸಿಡಿಲು ಮೊದಲಾದುವುಗಳಿಗೂ ಇಲ್ಲಿಯೂ ಸಂಬಂಧವಿದೆ. ಈ ದೇವತೆಗಳಲ್ಲಿ ಇಂದ್ರ ಮತ್ತು ವಾಯುವಿಗೆ ಮುಖ್ಯವಾದ ಸ್ಥಾನವಿದೆ. ಬೇರೆ ಬೇರೆ ಪ್ರಕೃತಿಯ ವ್ಯಾಪಾರಗಳನ್ನು ಈ ದೇವತೆಗಳು ಪ್ರತಿಬಿಂಬಿಸಿದರೂ ಆ ಪ್ರಕೃತಿಯ ಸ್ವರೂಪಕ್ಕಿಂತ ಮೀರಿದ ಹಾಗೂ ಸರ್ವವ್ಯಾಪಕವಾದ ಲಕ್ಷಣಗಳನ್ನು ಈ ದೇವತೆಗಳಿಗೆ ಹೇಳಿರುವುದು ಗಮನಾರ್ಹವಾದ ಅಂಶವಾಗಿದೆ. ಈ ದೇವತೆಗಳಿಗೆ ಸರ್ವಶಕ್ತಿತ್ವವನ್ನೂ ಹೇಳಿದ್ದಾರೆ. ಸರ್ವಜ್ಞತ್ವವನ್ನೂ ಹೇಳಿದ್ದಾರೆ. ಜಗತ್ಕಾರಣವಾದ ಪರತತ್ತ್ವವೇ ಹೀಗೆ ಬೇರೆ ಬೇರೆ ರೂಪಗಳಲ್ಲಿ ನಮ್ಮನ್ನು ಕೈಹಿಡಿದು ನಡೆಸುತ್ತದೆ ಎಂದು ವರ್ಣಿಸಿದ್ದಾರೆ. ಈ ದೃಷ್ಟಿಯಿಂದ ನೋಡಿದರೆ ನಮ್ಮ ದೇಶದವರ ದೇವತಾ ಕಲ್ಪನೆ ಇತರ ದೇಶದವರ ಕಲ್ಪನೆಗಿಂತ ಬೇರೆಯಾಗಿ ಕಂಡುಬರುತ್ತದೆ. ಅಂತರಿಕ್ಷದೇವತೆಗಳಲ್ಲೆಲ್ಲ ಓಜಸ್ಸುಳ್ಳವನೂ ಬಲಿಷ್ಠನೂ ಆದವನು ಇಂದ್ರ. ಇವನು ಹಿರಣ್ಯವರ್ಣ, ಹಿರಣ್ಯಬಾಹು, ಹಿರಣ್ಯಪಾಣಿ. ಇವನ ಆಯುಧ ಬಲಿಷ್ಠವಾದ ವಜ್ರ. ಈ ವಜ್ರಾಯುಧ ಸಹಸ್ರಧಾರೆಯಿಂದ ಕೂಡಿದುದು. ಇದನ್ನು ಇವನು ಧರಿಸುವುದರಿಂದಲೇ ಇವನಿಗೆ ವಜ್ರಭೃತ್, ವಜ್ರಿವತ್, ವಜ್ರದಕ್ಷಿಣ, ವಜ್ರಬಾಹು ಎಂಬ ಹೆಸರುಗಳು ಬಂದಿವೆ. ಪುರುಷಾಕಾರವನ್ನು ಈತ ಹೊಂದಿದ್ದಾನೆ. ಸ್ವರ್ಣಮಯವಾದ ರಥದಲ್ಲಿ ಇವನು ಮನೋವೇಗವನ್ನು ಮೀರಿ ಸಂಚರಿಸುತ್ತಾನೆ. ಆಕಾಶದಲ್ಲಿ ದ್ಯುಲೋಕವನ್ನು ಇವನು ಸ್ಥಾಪಿಸಿದ. ಮಹತ್ತರವಾದ ಅಂತರಿಕ್ಷವನ್ನೂ ದ್ಯಾವಾಪೃಥುವಿಗಳನ್ನೂ ತನ್ನ ತೇಜಸ್ಸಿನಿಂದ ತುಂಬಿದ್ದಾನೆ. ವಿಸ್ತಾರವಾದ ಭೂಮಿಯನ್ನು ಪೋಷಿಸುತ್ತಿದ್ದಾನೆ. ಸೋಮಪಾನದಿಂದಾದ ಹರ್ಷದಿಂದ ಈತ ಇದೆಲ್ಲವನ್ನೂ ಮಾಡಿದನು. ಇವನ ವೀರ್ಯವನ್ನು ಅತ್ಯಧಿಕವಾಗಿ ಕೊಂಡಾಡಿದ್ದಾರೆ. ಅಸಾಮಾನ್ಯ ವೀರನಾದ ಇವನು ಅನೇಕಾನೇಕ ಅಸುರರನ್ನು ಧ್ವಂಸಮಾಡಿದ್ದಾನೆ. ವೃತ್ರನೊಡನೆ ಹೋರಾಡಿ ಅವನನ್ನು ವಧಿಸಿದ್ದಾನೆ. ಇವನ ಅನೇಕ ಸಾಹಸಕರ್ಮಗಳಲ್ಲಿ ವೃತ್ರವಧೆ ಮುಖ್ಯವಾದುದು. ಇಂದ್ರನಂತೆ ಅಂತರಿಕ್ಷಸ್ಥಾನಕ್ಕೆ ಸೇರಿದವರಲ್ಲಿ ವಾಯುವೂ ಮುಖ್ಯ. ವಾಯು ನಿತ್ಯವೂ ಕಾಣಿಸಿಕೊಳ್ಳುತ್ತಾನೆ. ಮಾನವನ ಜೀವನ ವಾಯುವಿನ ಕೃಪೆಯಿಲ್ಲದೆ ಸಾಧ್ಯವಿಲ್ಲ. ನಮಗೆ ಕಾಣುವ ವಾಯುವನ್ನು ಅಧಿಷ್ಠಾನವಾಗಿ ಉಳ್ಳ ಈ ದೇವತೆಯನ್ನು ವೇದಗಳಲ್ಲಿ ಸ್ತುತಿಸಿದ್ದಾರೆ. ವಾಯುವಿನ ರೂಪ ಮನೋಹರವಾದುದು, ಉನ್ನತವಾದುದು. ಮನೋವೇಗ ಇವನದು. ಇವನು ಇಂದ್ರನಂತೆ ನೂರಾರು ಕುದುರೆಗಳು ಹೂಡಿದ ರಥದಲ್ಲಿ ಸಂಚರಿಸುವವನು. ವಾಯುವಿನ ರಥ ಗುಡುಗಿನಂತೆ ಶಬ್ದ ಮಾಡುವುದು. ಈ ರಥದ ವೇಗಕ್ಕೆ ಸಿಕ್ಕ ಸ್ಥಾವರ ಜಂಗಮಾದಿಗಳು ನುಚ್ಚುನೂರಾಗುವುವು. ಪರ್ವತಗಳು ವಾಯುವಿಗನುಗುಣವಾಗಿ ಕಂಪಿಸುವುವು. ವಿಶ್ವದಲ್ಲಿರುವು ದೆಲ್ಲವೂ ಇವನ ಆಳ್ವಿಕೆಗೊಳಪಟ್ಟಿವೆ. ಇವನು ಒಂದು ಕ್ಷಣವೂ ಒಂದೆಡೆಯಲ್ಲಿ ನಿಲ್ಲುವುದಿಲ್ಲ. ಎಲ್ಲ ಪ್ರಾಣಿಗಳಿಗಿಂತ ಮೊದಲು ಹುಟ್ಟಿದವನಿವನು. ಇವನ ಉತ್ಪತ್ತಿಯನ್ನಾಗಲೀ ವ್ಯಾಪ್ತಿಯನ್ನಾಗಲೀ ಯಾರೂ ತಿಳಿಯಲಾರರು. ದೇವತೆಗಳಿಗೂ ಇವನು ಆತ್ಮನಾಗಿದ್ದಾನೆ. ಎಲ್ಲ ಪ್ರಾಣಿಗಳಿಗೂ ಇವನು ಜೀವನಾಧಾರ. ಇವನ ರೂಪ ಕಾಣಿಸದು. ಶಬ್ದದಿಂದ ಇವನ ಬರವನ್ನು ಊಹಿಸಬಹುದು. ಇಂಥ ವಾಯುದೇವ ರೋಗನಿವಾರಕ, ಆಯುರ್ವರ್ಧಕನಾಗಿದ್ದಾನೆ. ಮಳೆಗೆ ನೇರವಾಗಿ ಸಂಬಂಧಿಸಿದವನು ಪರ್ಜನ್ಯ. ಇವನೂ ಅಂತರಿಕ್ಷದೇವತೆ. ಗರ್ಜನೆ ಮಾಡುತ್ತ ಸಸ್ಯಗಳಲ್ಲಿ ಅಂಕುರಗಳನ್ನು ಇವನು ಸ್ಥಾಪಿಸುತ್ತಾನೆ. ಲೋಕ ಇವನಿಂದಲೇ ಬದುಕಿದೆ. ಜಲರಥದಲ್ಲಿ ಕುಳಿತು ಇವನು ಮೇಘದ ಸುತ್ತಲೂ ಸುತ್ತುತ್ತ ಮೇಘಕೋಶವನ್ನು ಸಡಿಲಿಸಿ ಕೆಳಮೊಗನಾಗಿ ಬಗ್ಗಿಸಿ ಮಳೆ ಸುರಿಸುತ್ತಾನೆ. ಹೀಗೆ ಮಳೆಯಾದಾಗ ಹಳ್ಳ ತಗ್ಗುಗಳೆಲ್ಲ ನೀರಿನಿಂದ ತುಂಬಿಹೋಗಿ ಒಂದೇ ಸಮನಾಗಿ ಕಾಣುತ್ತವೆ. ಪರ್ಜನ್ಯನಿಗೆ ಅನೇಕ ದೂತರಿದ್ದಾರೆ. ಇವರು ಮಳೆಯನ್ನು ಸುರಿಸುತ್ತಾರೆ. ಸಾರಥಿ ಕುದುರೆಗಳನ್ನು ಚಾವಟಿಯಿಂದ ಹೊಡೆವಂತೆ ತನ್ನ ದೂತರಾದ ಮೋಡಗಳನ್ನು ಹೊಡೆಯುತ್ತಾನೆ. ಮಳೆ ಸುರಿಸುವಾಗ ದೂರದ ಸಿಂಹಗಳ ಗರ್ಜನೆ ಕೇಳಿಸುವುದು. ಪರ್ಜನ್ಯ ಲೋಕದ ಚರಾಚರಗಳಿಗೆ ಸುಖಕರ. ಜಲದೇವತೆಗಳೂ ಅಂತರಿಕ್ಷಸ್ಥಾನಕ್ಕೆ ಸೇರಿದವರು. ಅಂತರಿಕ್ಷದಿಂದ ಮಳೆಯ ರೂಪದಲ್ಲಿ ಭೂಮಿಗೆ ಜಲ ಸುರಿಯುವುದು. ಈ ಜಲವನ್ನು ಅಧಿಷ್ಠಾನವಾಗಿ ಹೊಂದಿರುವ ದೇವತೆ ಜಲದೇವತೆ, ಸೂರ್ಯ ತನ್ನ ಕಿರಣಗಳಿಂದ ಜಲವನ್ನು ಹೀರಿ ಅಬ್ದೇವತೆಯನ್ನು ಬೆಳೆಸುತ್ತಾನೆ. ಇಂದ್ರ ವಜ್ರಾಯುಧದಿಂದ ಮೇಘಗಳನ್ನು ಬಡಿದು ಒಳಗೆ ಸೆರೆಯಾಗಿದ್ದ ಜಲ ಹರಿಯುವಂತೆ ಮಾಡುತ್ತಾನೆ. ಭೂಮಿಯ ಮೇಲೆ ಅನೇಕ ರೂಪದಲ್ಲಿ ಜಲ ಇರುವುದಾದರೂ ಆಕಾಶದಿಂದ ಜಲದ ವರ್ಷವಾಗುವ ಕಾರಣ ಅಬ್ದೇವತೆಯನ್ನು ಅಂತರಿಕ್ಷಸ್ಥಾನದಲ್ಲಿ ಸೇರಿಸಿರುವಂತೆ ಕಾಣುತ್ತದೆ. ಅಪಾಂನಪಾತ್ ಎಂಬ ದೇವತೆ ಅಗ್ನಿಯ ಒಂದು ರೂಪ. ಈ ದೇವತೆ ಜಲದೊಳಗೆ ಇರುತ್ತ ತೇಜಸ್ವಿಯಾಗಿದೆ. ಇದನ್ನೂ ಅಂತರಿಕ್ಷಸ್ಥಾನದಲ್ಲಿ ಸೇರಿಸಿದ್ದಾರೆ. ಸರ್ಪ ಲೋಕವನ್ನು ಇದು ಸೃಜಿಸಿತೆಂದು ಹೇಳಿದೆ. ಮೇಘದ ಮಧ್ಯದಲ್ಲಿ ಉದಕಗಳ ನಡುವೆ ಇರುವ ಈ ತೇಜೋರೂಪಿ ವೃಷ್ಟಿಗೆ ಕಾರಣವಾಗಿ ತನ್ಮೂಲಕ ಎಲ್ಲ ಲೋಕಗಳ ಜನ್ಮಕ್ಕೂ ಕಾರಣವಾಗಿದೆ. ಇದು ಮಳೆ ಸುರಿಸುತ್ತದೆ. ಮಳೆಯೊಡನೆ ಭೂಮಿಯನ್ನು ಸೇರುತ್ತದೆ. ಸರ್ವತ್ರ ದೀಪ್ತವಾಗಿ ವ್ಯಾಪಿಸಿರುತ್ತದೆ. ಅಂತರಿಕ್ಷದೇವತೆಗಳಲ್ಲಿ ರುದ್ರನೂ ಸೇರಿದ್ದಾನೆ. ಇಂದ್ರ ಮಳೆಯನ್ನು ಸುರಿಸಿದರೆ ಇವನು ಇಷ್ಟಾರ್ಥಗಳನ್ನು ವರ್ಷಿಸುವ ವೃಷಭನಾಗಿದ್ದಾನೆ. ರೋಗ ಪರಿಹಾರಕವಾದ ಔಷಧಗಳನ್ನು ಇವನು ಕೊಡುವನೆಂದು ಹೇಳಿದೆ. ಈ ಔಷಧಗಳು ಪ್ರಾಯಶಃ ಮಳೆಯೇ ಇರಬೇಕೆಂದು ವಿಮರ್ಶಕರು ಹೇಳುತ್ತಾರೆ. ಶತ್ರುನಾಶಕನೂ ಅರಿಭಯಂಕರನೂ ಆದವನಿವನು. ಪ್ರಕೃತಿಯ ರೌದ್ರ ಸ್ವರೂಪವನ್ನು ಇವನು ಪ್ರತಿನಿಧಿಸುತ್ತಾನೆ. ಈ ಮೇಲೆ ಹೇಳಿದ ದೇವತೆಗಳಂತೆ ಅಂತರಿಕ್ಷಸ್ಥಾನಕ್ಕೆ ಮರುದ್ದೇವತೆಗಳೂ ಸೇರಿದ್ದಾರೆ. ಇವರು ವೀರರು, ಸ್ವರ್ಣವರ್ಣದವರು. ಇವರಿಗೂ ವಿದ್ಯತ್ತುಗಳಿಗೂ ನಿಕಟಸಂಬಂಧವಿದೆ. ಇವರು ಮಳೆಯನ್ನು ಸುರಿಸುವರೆಂದು ಹೇಳಿದೆ. ಈ ಮರುತ್ತುಗಳು ವರ್ಷಿಸುವಾಗ ವಿದ್ಯುತ್ತುಗಳು ಶಬ್ದ ಮಾಡುತ್ತವೆ. ಇವರು ಸರ್ವಾಭರಣಗಳಿಂದಲೂ ಉದಕಗಳಿಂದಲು ಕೂಡಿದ್ದಾರೆ. ಇವರಿಗೆ ಮನುಷ್ಯರಂತೆ ರೂಪವಿದೆ. ಹೆಗಲುಗಳ ಮೇಲೆ ಆಯುಧಗಳೂ ಪಾದಗಳಲ್ಲಿ ಕಾಲ್ಬಳೆಗಳೂ ವಕ್ಷಃಸ್ಥಳದಲ್ಲಿ ಚಿನ್ನದ ಹಾರಗಳೂ ಕೈಗಳಲ್ಲಿ ಜ್ವಲಿಸುವ ಮಿಂಚುಗಳೂ ಶಿರಸ್ಸುಗಳಲ್ಲಿ ಸ್ವರ್ಣಕಿರೀಟಗಳೂ ಇವೆ. ಇವರ ರಥದಲ್ಲಿ ಮಧುರವಾದ ಉದಕ ಪ್ರಕಾಶಿಸುತ್ತದೆ. ಮರುದ್ದೇವತೆಗಳಿಗೆ ಭಯಂಕರ ರೂಪವಿರುವಂತೆ ಸೌಮ್ಯ ರೂಪವೂ ಇದೆ. ನೀರಿನಿಂದ ತುಂಬಿದ ಮೇಘದಿಂದ ಸೂರ್ಯನ ಪ್ರಕಾಶವನ್ನು ಮುಚ್ಚಿ ಹಗಲಿನಲ್ಲಿಯೂ ಕತ್ತಲೆಯನ್ನುಂಟು ಮಾಡುತ್ತಾರೆ. ಇವರು ಲೋಕಹಿತಕಾರಕರು. ತಮ್ಮನ್ನು ಸೇವಿಸುವವರಿಗೆ ಬಹು ವಿಧವಾದ ಅನುಗ್ರಹವನ್ನು ಮಾಡುತ್ತಾರೆ. ಅಂತರಿಕ್ಷಸ್ಥಾನದ ದೇವತೆಗೆ ಪ್ರಧಾನವಾದ ಕರ್ಮ ವರ್ಷಕರ್ಮ. ಈ ಕೆಲಸ ಇಂದ್ರ, ಪರ್ಜನ್ಯ ಮೊದಲಾದವರುಗಳಿಂದ ಆಗುತ್ತದೆ. ಇತರ ದೇಶಗಳಲ್ಲಿ ಹೇಗೋ ಹಾಗೆ ನಮ್ಮಲ್ಲಿಯೂ ಅಂತರಿಕ್ಷಸ್ಥಾನದ ದೇವತೆಗೆ ವಿಶಿಷ್ಟ ಸ್ಥಾನವಿದೆ. ಈ ಒಂದೊಂದು ದೇವತೆಯೂ ಪರತತ್ತ್ವ ಸ್ವರೂಪವೆಂದು ಪ್ರತಿಪಾದಿಸಿರುವುದು ವೈದಿಕ ಧರ್ಮದ ವೈಶಿಷ್ಟ್ಯ.