ಅಂತಃಕರಣ -ಸಾಂಖ್ಯದರ್ಶನದ ಒಂದು ಮುಖ್ಯ ಪಾರಿಭಾಷಿಕ ಪದ. ಆಧುನಿಕ ಮನಶ್ಯಾಸ್ತ್ರಜ್ಞರು ಮಿದುಳು ನಮ್ಮ ಒಳ ಅನುಭವಗಳಿಗೆ ಕಾರಣವಾದ ಒಳ ಅಂಗವೆಂದೂ ಹೊರಗಿನ ವಸ್ತುಗಳ ಅನುಭವಕ್ಕೆ ಕಾರಣವಾದ ಕಣ್ಣು, ಕಿವಿ ಮೂಗು, ನಾಲಗೆ ಮತ್ತು ಸ್ಪರ್ಶೇಂದ್ರಿಯಗಳು ಹೊರ ಅಂಗಸಂಸ್ಥೆಗಳೆಂದೂ ಭಾವಿಸುತ್ತಾರೆ. ಸಾಂಖ್ಯರ ಅಂತಃಕರಣ ಒಳ ಅಂಗವಾದ ಮಿದುಳಿಗೆ ಸಮಾನಾಂತರವಾದ ಪದ. ಸಾಂಖ್ಯದರ್ಶನದ ಪ್ರಕಾರ ಅಂತಃಕರಣ ಮನಸ್ಸು, ಅಹಂಕಾರ ಮತ್ತು ಬುದ್ಧಿ_ ಈ ಮೂರರಿಂದ ಕೂಡಿದ ಒಳ ಇಂದ್ರಿಯ ಸ್ಥಾನ, ಇವುಗಳ ಮೂಲಕ ಜ್ಞಾನೋತ್ಪತ್ತಿಯ ಕ್ರಮ ಈ ರೀತಿ ಇದೆ: ಹೊರ ವಸ್ತುಗಳ ರೂಪ, ಶಬ್ದ, ರಸ, ಗಂಧ, ಮುಂತಾದ ಗುಣಗಳನ್ನು ಕಣ್ಣು, ಕಿವಿ, ನಾಲಗೆ, ಮೂಗು ಮುಂತಾದ ಹೊರ ಇಂದ್ರಿಯಗಳು ಮನಸ್ಸಿಗೆ ಮುಟ್ಟಿಸುತ್ತವೆ. ಮನಸ್ಸು ಇಂದ್ರಿಯಾನುಭವಗಳನ್ನು ವರ್ಗೀಕರಿಸುತ್ತದೆ. ಈ ವರ್ಗೀಕರಿಸುವ ವೃತ್ತಿಗೆ ಸಂಕಲ್ಪವೆಂದು ಪಾರಿಭಾಷಿಕ ಹೆಸರು. ಸಂಕಲ್ಪಿಸಿದ ವಿಷಯ ಜೀವನಿಗೆ ಉಪಯುಕ್ತವೋ ನಿರುಪಯುಕ್ತವೋ ಅದನ್ನು ಆದರಿಸಬೇಕೋ ಬಿಡಬೇಕೋ ಎಂಬುದನ್ನು ಅಹಂಕಾರ ತಿಳಿಸುತ್ತದೆ. ಅಹಂಕಾರ ನಮ್ಮ ಅಭಿಮಾನ, ದುರಭಿಮಾನಗಳಿಗೆ ಕಾರಣ. ಹೀಗೆ ಅಭಿಮಾನದಿಂದ ದುರಭಿಮಾನದಿಂದ ಹುಟ್ಟಿದ ಅನುಭವ ಬುದ್ಧಿಯನ್ನು ಸುಖಕರವಾಗಿರಿಸಬಹುದು ಅಥವಾ ದುಃಖಕರವಾಗಿರಿಸಬಹುದು. ಈ ಮೂರು ವಿಧವಾದ ಅನುಭವಗಳಿಗೆ ಕಾರಣವಾದ ಒಳ ಅಂಗಗಳ ಸ್ಥಾನ ಅಂತಃಕರಣ.

ವೇದಾಂತಿಗಳು ಅಂತಃಕರಣ ಚತುಷ್ಟಯ ಎಂಬ ಪದ ಪ್ರಯೋಗ ಮಾಡುತ್ತಾರೆ. ಚಿತ್ತ ನಾಲ್ಕನೆಯದು. ವೇದಾಂತದ ಪ್ರಕಾರ ಅಹಂಕಾರವು ಅಂತಃಕರಣದ ಕಾರ್ಯದಲ್ಲಿ ಅಭಿಮಾನಪುರ್ವಕವಾಗಿ ಕಾರ್ಯನಿರ್ವಹಿಸಿ, ಎಲ್ಲ ಅನುಭವಗಳನ್ನೂ ಜೀವಿಗೆ ಆರೋಪಿಸುವ ಮೂಲಕ ಸುಖ - ದುಃಖಗಳ ಅನುಭವಕ್ಕೆ ಕಾರಣೀಭೂತವಾಗುತ್ತದೆ. ಆದ್ದರಿಂದ ಅಹಂಕಾರವನ್ನು ಕಡಿಮೆ ಮಾಡಿಕೊಳ್ಳುವುದು ಮನುಷ್ಯನ ಆರೋಗ್ಯಕ್ಕೆ ಮತ್ತು ಉನ್ನತಿಗೆ ಮುಖ್ಯ ಎಂದು ವೇದಾಂತಿಗಳು ಅಭಿಪ್ರಾಯ ಪಡುತ್ತಾರೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅಂತಃಕರಣ&oldid=801140" ಇಂದ ಪಡೆಯಲ್ಪಟ್ಟಿದೆ