ಹನುಮಂತಾಚಾರ್ಯ ರಾಘವೇಂದ್ರಾಚಾರ್ಯ ಪುರೋಹಿತರು ೧೯೦೦ ಎಪ್ರಿಲ್ ೧೪ರಂದು ತಾಯಿಯ ತವರೂರಾದ ಕೊಲ್ಹಾರದಲ್ಲಿ ಜನಿಸಿದರು. ೧೯೨೮ರಲ್ಲಿ ಕರ್ಮವೀರ ವಾರಪತ್ರಿಕೆಯಲ್ಲಿ ಸಹಸಂಪಾದಕರಾಗಿ ಸೇರಿದ ಬಳಿಕ ೧೯೩೦ರಲ್ಲಿ ಎಮ್.ಏ. ಪದವಿ ಪಡೆದರು. ಬ್ರಿಟಿಶ್ ವಿರೋಧಿ ಧೋರಣೆಯಿಂದಾಗಿ, ೧೯೩೦ ಜುಲೈ ೨೪ರಂದು ಪತ್ರಿಕೆಯ ಪ್ರಕಟಣೆ ನಿಂತಿತು. ಪುರೋಹಿತರು ಅಂಕೋಲೆಗೆ ತೆರಳಿ ಉಪ್ಪಿನ ಸತ್ಯಾಗ್ರಹದಲ್ಲಿ ಧುಮುಕಿದರು. ಪರಿಣಾಮವಾಗಿ ಏಳು ತಿಂಗಳ ಜೈಲುವಾಸವನ್ನು ಅನುಭವಿಸಿದರು. ಜೈಲಿನಿಂದ ಹೊರ ಬಂದ ಮೇಲೆ ಪುರೋಹಿತರು ಸಂಯುಕ್ತ ಕರ್ನಾಟಕದಲ್ಲಿ ಸೇವೆಯನ್ನು ಅರಂಭಿಸಿದರು. ಕರ್ಮವೀರದ ಪುನರಾರಂಭದ ಬಳಿಕ ಮತ್ತೆ ಅದರ ಹೊಣೆಯನ್ನೂ ಹೊತ್ತರು. ಪುರೋಹಿತರು ೧೯೬೪ರಲ್ಲಿ ಸೇವೆಯಿಂದ ನಿವೃತ್ತರಾದರು.


ಹ.ರಾ.ಪುರೋಹಿತರು ನಿಷ್ಠಾವಂತ ಗಾಂಧೀವಾದಿಗಳು. ಬ್ರಹ್ಮಚಾರಿಯಾಗಿಯೇ ಉಳಿದ ಇವರು ಜೀವನದುದ್ದಕ್ಕೂ ಖಾದಿಧಾರಿಗಳಾಗಿದ್ದರು. ಅಷ್ಟೇ ಧಾರ್ಮಿಕರೂ ಆದ ಪುರೋಹಿತರು ಹುಬ್ಬಳ್ಳಿಯಲ್ಲಿ ಪುರಂದರ-ಕನಕದಾಸ ಉತ್ಸವ ಸಮಿತಿಯ ಸ್ಥಾಪಕರಾಗಿದ್ದರು. ಅಲ್ಲದೆ, ಮಂತ್ರಾಲಯ ಯಾತ್ರಿಕರ ಸಂಘದ ಅಧ್ಯಕ್ಷರಾಗಿ “ಓಂ ಶ್ರೀ ರಾಘವೇಂದ್ರಾಯ ನಮಃ ಓಂ” ಜಪದ ಕೋಟಿ ಜಪಯಜ್ಞ ಹಾಗು ಲಕ್ಷ ಹೋಮಗಳನ್ನು ನೆರವೇರಿಸಿದರು.


ಹ.ರಾ.ಪುರೋಹಿತರು ೧೯೮೦ ಜೂನ್ ೧೮ರಂದು ನಿಧನರಾದರು.