ಹ್ಯಾಮ್ಲಿನ್ ಗಾರ್ಲೆಂಡ್
ಹ್ಯಾಮ್ಲಿನ್ ಗಾರ್ಲೆಂಡ್ (ಸೆಪ್ಟೆಂಬರ್ ೧೪, ೧೮೬೦ – ಮಾರ್ಚ್ ೪, ೧೯೪೦). ಅಮೆರಿಕದ ಕಾದಂಬರಿಕಾರ ಮತ್ತು ಪ್ರಬಂಧಕಾರ.
ಬದುಕು ಮತ್ತು ಬರಹ
ಬದಲಾಯಿಸಿಬಾಲ್ಯದಲ್ಲಿ ರೈತ ತಂದೆಯೊಡನೆ ಹೊಲದಲ್ಲಿ ಕೆಲಸಮಾಡಿದ. ಅನಂತರ ಉಪಾಧ್ಯಾಯನಾದ, ಲೇಖಕನಾದ. ಈತನ ಮೊದಲ ಗಮನಾರ್ಹ ಕೃತಿ ಮೇನ್-ಟ್ರಾವೆಲ್ಡ ರೋಡ್ಸ (೧೮೯೧) ಎಂಬ ಕತೆಗಳ ಸಂಗ್ರಹ. ಸ್ಥಳದಿಂದ ಸ್ಥಳಕ್ಕೆ ಮೊಟ್ಟಮೊದಲಿಗೆ ವಲಸೆ ಹೋಗಿ ನೆಲಸುವ ರೈತರ ಕಷ್ಟಗಳ ಅನುಭವ ಗಾರ್ಲೆಂಡ್ನ ಕುಟುಂಬಕ್ಕಿತ್ತು. ಈ ಜೀವನದ ಕಹಿ-ಸೋಲುಗಳನ್ನು ತನ್ನ ಗುರು ವಿಲಿಯಂ ಡೀನ್ ಹವೆಲ್ಸನಿಗಿಂತ ಉಗ್ರವಾಗಿ ಈತ ನಿರೂಪಿಸಿದ್ದಾನೆ. ರೈತರನ್ನು ಗುಲಾಮಗಿರಿಗಿಳಿಸಿ ಬಿಡುತ್ತಿದ್ದ ಲೇವಾದೇವಿಯವರನ್ನೂ ರೈತನ ಜೀವನದ ಬೆವರು, ಕಣ್ಣೀರುಗಳನ್ನು ಕಾಣದೆ ದೂರದಿಂದ ಆ ಜೀವನವನ್ನು ರಮ್ಯವಾಗಿ ಬಣ್ಣಿಸುತ್ತಿದ್ದ ಲೇಖಕರನ್ನೂ ಖಂಡಿಸಿ, ಮಧ್ಯ ಪಶ್ಚಿಮ ಪ್ರದೇಶದ ರೈತರ ಸಂಕಟವನ್ನು ಹೃದಯಸ್ಪರ್ಶಿಯಾಗಿ ಇವನು ಚಿತ್ರಿಸಿದ್ದಾನೆ.
ಇವನ ಮೊದಲನೆಯ ಕಾದಂಬರಿ ಎ ಸ್ಪಾಯಿಲ್ ಆಫ್ ಆಫೀಸ್ (೧೮೯೨) ವಾಸ್ತವಿಕತೆಯ ಪಂಥದ ನಾಯಕನೆಂದು ಇವನಿಗೆ ಹೆಸರು ತಂದಿತು. ಗಾರ್ಲೆಂಡ್ ತನ್ನ ವಾಸ್ತವಿಕತೆಯನ್ನು ವೆರಿಟಿಸಂ ಎಂದು ಕರೆದ; ವಾಸ್ತವಿಕತೆ ಮತ್ತು ವ್ಯಕ್ತಿ ಪ್ರಾಧಾನ್ಯಗಳು ಬೆರೆತ, ಪ್ರಜಾಪ್ರಭುತ್ವದ ಕಡೆ ವಾಲುವ ಮನೋಧರ್ಮ ಇದು. ಕ್ರಂಬ್ಲಿಂಗ್ ಐಡಲ್ಸ (೧೮೯೪) ಎಂಬ ವಿಮರ್ಶಾ ಪ್ರಬಂಧಗಳಲ್ಲಿಯೂ ಇವನು ಜನಸಾಮಾನ್ಯರ ಅಭಿಪ್ರಾಯಕ್ಕಿಂತ ಬಹುಮುಂದೆ ಸಾಗಿದ್ದನೆಂಬುದು ವ್ಯಕ್ತವಾಗುತ್ತದೆ.
ಅಮೆರಿಕದ ಪಶ್ಚಿಮಪ್ರದೇಶದ ಜೀವನ, ಅತೀಂದ್ರೀಯ ಮತ್ತು ಪ್ರಕೃತ್ಯತೀತ ಅನುಭವಗಳು - ಇವನ್ನು ವಸ್ತುಗಳನ್ನಾಗಿ ಆರಿಸಿಕೊಂಡು ಈತ ೧೮೯೫ ರಿಂದ ೧೯೧೬ ರವರೆಗಿನ ಅವಧಿಯಲ್ಲಿ ಹದಿನಾರು ಕಾದಂಬರಿಗಳನ್ನು ಬರೆದ. ೧೯೧೭ ರಿಂದ ಸೃಜನ ಸಾಹಿತ್ಯದ ಮತ್ತೊಂದು ಅವಧಿ ಪ್ರಾರಂಭವಾಯಿತು. ಎ ಸನ್ ಆಫ್ ದಿ ಮಿಡ್ಲ ಬಾರ್ಡರ್ (೧೯೧೭) ಬಹುಮಟ್ಟಿಗೆ ಆತ್ಮವೃತ್ತ; ಇದರಲ್ಲಿ ಪರಿಪಕ್ವ ಮನಃಸ್ಥಿತಿ ಅಭಿವ್ಯಕ್ತಿ ಪಡೆದಿತ್ತು, ಈ ಹೊತ್ತಿಗೆ ಸಹಜತಾವಾದಿಗಳು ಅತಿದೂರ ಹೋದರೆಂದು ಆ ಪಂಥದಿಂದ ಗಾರ್ಲೆಂಡ್ ವಿಮುಖನಾಗಿದ್ದ. ಈ ಕೃತಿಯ ಮುಂದಿನ ಭಾಗ ಎ ಡಾಟರ್ ಆಫ್ ದಿ ಮಿಡ್ಲ ಬಾರ್ಡರ್ (೧೯೨೧) ಪುಲಿಟ್ಜರ್ ಬಹುಮಾನವನ್ನು ಪಡೆಯಿತು. ಟ್ರೇಲ್ ಮೇಕರ್ಸ್ ಆಪ್ ದಿ ಮಿಡ್ಲ ಬಾರ್ಡರ್ನಲ್ಲಿ (೧೯೨೬) ವಿಷಾದ ಬೆರೆತ ಅಭಿಮಾನದಿಂದ ಅಮೆರಿಕ ಖಂಡಕ್ಕೆ ಮೊದಲು ಬಂದ ವಲಸೆಗಾರರ ಸಾಹಸವನ್ನು ಈತ ವರ್ಣಿಸಿದ್ದಾನೆ. ಬಹುಮಟ್ಟಿಗೆ ಗಾರ್ಲೆಂಡ್ನ ಹೆಸರು ಉಳಿದಿರುವುದು ಈ ಮೂರು ಕೃತಿಗಳಿಂದ.
ರೆಡ್ ಇಂಡಿಯನ್ನರ ಜೀವನವನ್ನು ಸಹಾನುಭೂತಿಯಿಂದ ಅಧ್ಯಯನಮಾಡಿ ನಿಷ್ಪಕ್ಷಪಾತವಾಗಿ ಅದನ್ನು ಚಿತ್ರಿಸಿದ ಪ್ರಾರಂಭದ ಕತೆಗಾರರಲ್ಲಿ ಗಾರ್ಲೆಂಡ್ ಒಬ್ಬ. ಇವನ ದಿ ಬುಕ್ ಆಫ್ ಅಮೆರಿಕನ್ ಇಂಡಿಯ (೧೯೨೩) ರೆಡ್ ಇಂಡಿಯನ್ನರ ಜೀವನವನ್ನು ಕುರಿತ ಕತೆಗಳ ಸಂಗ್ರಹ.
ಸಾಹಿತ್ಯ ಕ್ಷೇತ್ರದಲ್ಲಿ ತನಗಿದ್ದ ಸ್ನೇಹಸಂಬಂಧಗಳನ್ನು ಚಿತ್ರಿಸುವ ನಾಲ್ಕು ಪುಸ್ತಕಗಳನ್ನೀತ ತನ್ನ ಎಪ್ಪತ್ತನೆಯ ವಯಸ್ಸಿನಲ್ಲಿ ಬರೆದ. ಅವುಗಳಲ್ಲಿ ರೋಡ್ ಸೈಡ್ ಮೀಟಿಂಗ್ಸ (1930) ಗಮನಾರ್ಹವಾದುದು. [೧]
ಶ್ರಮವೆಂಬುದನ್ನೇ ಲಕ್ಷಿಸದ ಅಸಾಧಾರಣ ಚೈತನ್ಯದ ಬರೆಹಗಾರ ಮತ್ತು ಭಾಷಣಕಾರನಾದ ಗಾರ್ಲೆಂಡ್ ಹಲವಾರು ಸಾಹಿತ್ಯ ಸಂಸ್ಥೆಗಳನ್ನು ಸ್ಥಾಪಿಸಿದ. ತನ್ನ ಕಾಲದವರ ಮೇಲೆ ಹೆಚ್ಚಿನ ಪ್ರಭಾವ ಬೀರಿದ ಮಹಾಕಾದಂಬರಿಕಾರ ಎಂಬ ಕೀರ್ತಿಗೆ ಈತ ಭಾಜನನಾದ. ಆದರೆ ಈಚೆಗಿನ ಸಾಹಿತ್ಯ ವಿಮರ್ಶಕರಲ್ಲಿ ಇವನ ಪ್ರಭಾವವನ್ನು ಕುರಿತು ಒಮ್ಮತವಿಲ್ಲ. ಈತ 1940ರಲ್ಲಿ ನಿಧನನಾದ.
ಬಾಹ್ಯ ಕೊಂಡಿಗಳು
ಬದಲಾಯಿಸಿ- The Hamlin Garland Society Archived 2013-10-19 ವೇಬ್ಯಾಕ್ ಮೆಷಿನ್ ನಲ್ಲಿ.
- Higgins, John E. "A man from the middle border: Hamlin Garland's diaries" Archived 2012-11-05 ವೇಬ್ಯಾಕ್ ಮೆಷಿನ್ ನಲ್ಲಿ., Wisconsin Magazine of History, vol. 46 no. 4 (1962-1963).
- Main Traveled Roads Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ. from American Studies at the University of Virginia.
- Jamaica Plain Historical Society