ಹಿಪ್ಪೋಲೈಟ್ ಅಡಾಲ್ಫ್ ಟೇನ್ (1828-1893). ಫ್ರೆಂಚ್ ವಿದ್ವಾಂಸ. ಸಾಹಿತ್ಯ, ಕಲೆಗಳ ವಿಮರ್ಶೆಯಲ್ಲಿ, ಇತಿಹಾಸ ಲೇಖನಗಳಲ್ಲಿ ವಾಸ್ತವ ದೃಷ್ಟಿಯ ಹೊಸ ವೈಚಾರಿಕ ವಿಧಾನವನ್ನು ಮೊದಲ ಬಾರಿಗೆ ಪ್ರತಿಪಾದಿಸಿ ಪ್ರಯೋಗಿಸಿದವ.

ಬದುಕು ಬದಲಾಯಿಸಿ

ಹುಟ್ಟಿದ್ದು ಅರ್ಡೆನಿಸ್‍ನ ವುಜಿಯರ್ಸ್‍ನಲ್ಲಿ, ಪ್ಯಾರಿಸ್‍ನಲ್ಲಿ ಓದಿ ಪದವೀಧರನಾದ. ಎಲ್ಲಿಯೂ ಕಾಯಂ ಕೆಲಸ ಸಿಕ್ಕದೆ ಹಲವಾರು ಊರುಗಳಲ್ಲಿ ತಾತ್ಕಾಲಿಕ ಅಧ್ಯಾಪಕನಾಗಿ ಕೆಲಸ ಮಾಡಿದ.

1868 ರಲ್ಲಿ ಈತನ ಮದುವೆಯಾಯಿತು. ಹೆಂಡತಿ ಮ್ಯಾಡಂ ಡಿ ಎನ್ಯುಯಲ್ ಸೌಧಶಿಲ್ಪತಜ್ಞನೊಬ್ಬನ ಮಗಳು.

ಸಾಹಿತ್ಯ, ಕಲೆ, ಇತಿಹಾಸ ಕ್ಷೇತ್ರಗಳಲ್ಲಿ ಬದಲಾಯಿಸಿ

ಎಸ್ಸೆ ಸುರ್ ಟಿಟೆ ಲಿವಿ (1856) ಎಂಬ ಕೃತಿಯಿಂದ ಸಾಹಿತ್ಯ ವಿಮರ್ಶ ಕ್ಷೇತ್ರಕ್ಕೆ ಕಾಲಿರಿಸಿ ಟೇನ್ ಹೆಸರು ಗಳಿಸಿದ. ಈ ಪುಸ್ತಕಕ್ಕೆ ಅಕಾಡೆಮಿ ಪ್ರಶಸ್ತಿ ಬಂತು. 1857 ರಲ್ಲಿ ಪ್ರಕಟವಾದ ಲೆ ಫಿಲಾಸಫೀ ಕ್ಲಾಸಿಕ್ ಡು ಘಿIಘಿ ಸಿ ಸಿಯಿಕಲ್ ಎನ್ ಫ್ರಾನ್ಸ್ (ಇಂಗ್ಲಿಷ್ ಭಾಷಾಂತರ ದಿ ಕ್ಲಾಸಿಕ್ ಫಿಲಾಸಫರ್ಸ್ ಆಫ್ ದಿ ನೈನ್‍ಟೀನ್ತ್ ಸೆಂಚುರಿ ಇನ್ ಫ್ರಾನ್ಸ್) ಎಂಬ ಗ್ರಂಥ ಅತ್ಯಂತ ಸತ್ತ್ವ ಪೂರ್ಣವಾದ ವಿದ್ವತ್ ಕೃತಿ. ಇದರಲ್ಲಿ ಟೇನ್ ಅನುಸರಿಸಿದ. ಅವನದೇ ಆದ ನೂತನ ವಿಮರ್ಶಾಸೂತ್ರಗಳು ವಿಮರ್ಶಕರನ್ನು ಆಕರ್ಷಿಸಿದವು. ತತ್ತ್ವಶಾಸ್ತ್ರದ ಮತ್ತು ಮನಶಾಸ್ತ್ರದ ಸಂಶೋಧನೆಗಳಲ್ಲೂ ವೈಜ್ಞಾನಿಕ ವಿಧಾನವನ್ನು ಬಳಸಬೇಕೆಂಬುದು ಈತನ ಅಭಿಮತ.

ಎಸ್ಸೆ ಸುರ್ ಲಾ ಫಾಂಟೇನ್ ಎಟ್ ಸೆಸ್ ಫೇಬಲ್ಸ್ (1860) ಎಂಬ, ಲಾ ಫಾಂಟೇನನ ನೀತಿಕತೆಗಳನ್ನು ಕುರಿತಾದ ವಿದ್ವತ್ಪ್ರಬಂಧಕ್ಕೆ ಸೊರ್‍ಬೊನ್ ವಿಶ್ವ ವಿದ್ಯಾಲಯದ ಡಾಕ್ಟರೇಟ್ ಪ್ರಶಸ್ತಿ ದೊರೆತ ಮೇಲೆ ಈತನ ವಿದ್ವತ್ತಿಗೆ ಮನ್ನಣೆ ದೊರೆತು ಎಲ್ಲ ಕಡೆ ಈತನ ಕೀರ್ತಿ ಹರಡಿತು. 1864 ರಲ್ಲಿ ಪ್ಯಾರಿಸ್ಸಿನ ಪ್ರಸಿದ್ಧವಾದ ಇಕೋಲ್ ಡೆ ಬೊ ಆಟ್ರ್ಸ್ ಎಂಬ ಲಲಿತ ಕಲಾ ವಿದ್ಯಾಲಯದಲ್ಲಿ ಸೌಂದರ್ಯಶಾಸ್ತ್ರ ಮತ್ತು ಕಲೆಯ ಇತಿಹಾಸಗಳ ಪ್ರಾಧ್ಯಾಪಕನಾಗಿ ನೇಮಕಗೊಂಡ. ಇಟಲಿ, ಗ್ರೀಸ್ ಮತ್ತು ನೆದರ್‍ಲ್ಯಾಂಡ್ಸ್ ದೇಶಗಳ ಕಲಾಸಿದ್ಧಾಂತಗಳ ಆಳವಾದ ಅಧ್ಯಯನಕ್ಕೆ ಇಲ್ಲಿ ಅವಕಾಶ ದೊರೆಯಿತು. ಆಗ ಬರೆದ ಈತನ ಪುಸ್ತಕಗಳು ಗಹನವಾಗಿವೆ.

ಲೆ ಪಾಸಿಟಿವಿಸ್ಮ್ ಆಂಗ್ಲೆ ಎಂಬುದು ಜಾನ್ ಸ್ಟೂಯರ್ಟ ಮಿಲ್ ಎಂಬ ಆಂಗ್ಲ ತತ್ತ್ವಜ್ಞಾನಿಯನ್ನು ಕುರಿತ ಒಂದು ಅಧ್ಯಯನ. ಇದಲ್ಲದೆ ಆಂಗ್ಲ ಸಾಹಿತ್ಯವನ್ನು ಚೆನ್ನಾಗಿ ಅಭ್ಯಾಸ ಮಾಡಿ 1863-1872 ರ ಅವಧಿಯಲ್ಲಿ ಹಿಸ್ಟರಿ ಡಿ ಲ ಲಿಟರೇಚರ್ ಆಂಗ್ಲೆ ಎಂಬ ಬೃಹತ್ ಗ್ರಂಥವನ್ನು ಬರೆದ. ಇದು ವಿದ್ವನ್ ಮಂಡಲಿಯಲ್ಲಿ ದೊಡ್ಡ ಕೋಲಾಹಲವನ್ನೇ ಎಬ್ಬಿಸಿತು. ಟೇನ್ ತೀವ್ರವಾದ ಟೀಕೆಗಳಿಗೆ ಗುರಿಯಾಗಿ, ಅಕಾಡೆಮಿಯಿಂದ ಬರಬೇಕಾಗಿದ್ದ ನಾಲ್ಕು ಸಾವಿರ ಫ್ರಾಂಕುಗಳ ಬಹುಮಾನವನ್ನು ಕಳೆದುಕೊಂಡ. ವಿದೇಶಿಯನೊಬ್ಬ ಇಷ್ಟು ಕೂಲಂಕಷವಾಗಿ ಇಂಗ್ಲಿಷ್ ಸಾಹಿತ್ಯ ಚರಿತ್ರೆಯನ್ನು ಬರೆದಿದ್ದಾನಲ್ಲ ಎಂಬುದಕ್ಕಿಂತ ಹೆಚ್ಚಿನ ಮಹತ್ತ್ವವೇನೂ ಈ ಪುಸ್ತಕಕ್ಕಿಲ್ಲ. ಟೇನನ ವಿಶಿಷ್ಟವಾದ ಸೈದ್ಧಾಂತಕ ದೃಷ್ಟಿ ಇಲ್ಲಿಯೂ ವ್ಯಕ್ತವಾಗಿದೆ. 1861 ರಲ್ಲಿ ಬರೆದ ದಿ ನೋಟ್ಸ್ ಸುರ್ ಲ ಆಂಗ್ಲೇಟೆರ್ ತರ್ಕಬದ್ಧವಾದ ಬರೆಹವಾದರೂ ಈತನ ಸಿದ್ಧಾಂತಗಳಲ್ಲಿರುವ ದೋಷಗಳಿಗೆ ನಿದರ್ಶನವಾಗಬಹುದು.

ನೋವೋಜ್ ಎಸ್ಸೇ (1865), ಎಸ್ಸೇ ಡಿ ಕ್ರಿಟೀಕ್ ಎಟ್ ಡ ಹಿಸ್ಟರಿ (1857) ಈ ಎರಡೂ ಪ್ರಬುದ್ಧವಾದ ವಿಮರ್ಶಾಗ್ರಂಥಗಳೆಂದು ಮನ್ನಣೆ ಪಡೆದಿದೆ. 1878 ರಲ್ಲಿ ಟೇನ್ ಅಕಾಡೆಮಿಯ ಚುನಾಯಿತ ಸದಸ್ಯನಾದ. ತನ್ನ ಅಧ್ಯಯನ ಮತ್ತು ಬರೆವಣಿಗೆಗಳಿಗೆ ಸಾಕಷ್ಟು ಸಮಯ ಸಿಕ್ಕುತ್ತಿಲ್ಲವೆಂದು ಕೆಲಸಕ್ಕೆ ರಾಜೀನಾಮೆ ಕೊಟ್ಟು ಫ್ರಾನ್ಸಿನ ಇತಿಹಾಸ ಬರೆಯುವ ಬೃಹತ್ ಯೋಜನೆಯನ್ನು ಕಾರ್ಯಗತ ಮಾಡಲು ಟೇನ್ ಬಿಡುವು ಮಾಡಿಕೊಂಡ. ಆದರೂ ಈ ಕೃತಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಲೆ ಆರಿಜಿನ್ಸ್ ಡಿ ಫ್ರಾನ್ ಕಾಂಟೆಂಪೊರೇನ್ ಎಂಬುದು ಮೂರು ಮಹಾ ಸಂಪುಟಗಳ ಬೃಹತ್ ಕೃತಿ. ಮೊದಲ ಸಂಪುಟವಾದ ಲ ಏನ್ಸೆನ್ ರೆಜೀಮ್ 1875 ರಲ್ಲಿ ಹೊರಬಂದಿತು. ಪ್ರಾಚೀನ ಕಾಲದ ಇತಿಹಾಸವನ್ನಿದು ನಿರೂಪಿಸಿತು. ಎರಡನೆಯ ಸಂಪುಟದಲ್ಲಿ ಮಧ್ಯಕಾಲದ ಮತ್ತು ಫ್ರಾನ್ಸಿನ ಮಹಾಕ್ರಾಂತಿಯ ಇತಿಹಾಸವಿದೆ. ಇದನ್ನು ಬರೆಯಲು ಏಳು ವರ್ಷಗಳಾದವು. 1890 ರಲ್ಲಿ ರೆಜೀಮ್ ಮಾಡರ್ನ್ ಎಂಬ ಮೂರನೆಯ ಸಂಪುಟವನ್ನು ಬರೆಯಲಾರಂಭಿಸಿದ. ಆದರೆ ಅದು ಮುಗಿಯುವುದರಲ್ಲೆ ನಿಧನನಾದ

ಫ್ರಾನ್ಸಿನ ಮಹಾಕ್ರಾಂತಿಯ ಇತಿಹಾಸವನ್ನು ವಿಶ್ಲೇಷಣೆ ಮಾಡುತ್ತ ಕ್ರಾಂತಿಯನ್ನು ಸತಾರ್ಕಿಕವಾಗಿ ಟೇನ್ ಖಂಡಿಸಿದ್ದಾನೆ. ಅಪೂರ್ಣವಾಗಿ ಉಳಿದ ಮೂರನೆಯ ಸಂಪುಟವನ್ನು ಇವನ ಟಿಪ್ಪಣಿಗಳ ಸಹಾಯದಿಂದ ಪೂರ್ಣ ಮಾಡಿ 1894 ರಲ್ಲಿ ಪ್ರಕಟಿಸಲಾಯಿತು. ಹೀಗೆಯೇ ಡೆರ್ನಿಯರ್ಸ್ ಎಸ್ಸೇ (1895) ಮತ್ತು ಕಾರ್ನೆಟ್ಸ್ ಡಿ ವಾಯೇಜ್ (1897) ಎಂಬೆರಡು ಗ್ರಂಥಗಳು ಮರಣಾನಂತರದ ಪ್ರಕಟನೆಗಳು.

ವಾಯೇಜ್ ಆಜ್ ಯೂಜ್ ಡೆ ಪಿರೆನೀಸ್ (1855) ಮತ್ತು ವಾಯೇಜ್ ಎನ್ ಇಟಲಿ (1864)-ಇವು ಪ್ರವಾಸ ಸಾಹಿತ್ಯದಲ್ಲಿ ಶ್ರೇಷ್ಠ ಕೃತಿಗಳೆನಿಸಿವೆ.

ಟೇನ್ 19 ನೆಯ ಶತಕದ ಫ್ರಾನ್ಸಿನ ಮಹಾಮೇಧಾವಿಗಳಲ್ಲಿ ಅಗ್ರಗಣ್ಯನಾದವ. ಕಲೆ, ಸಾಹಿತ್ಯ ಮತ್ತು ಇತಿಹಾಸಗಳಲ್ಲೂ ವಸ್ತುನಿಷ್ಟ ವೈಜ್ಞಾನಿಕ ವಿಧಾನವನ್ನು ಅನ್ವಯಿಸಿ ಸತ್ಯಶೋಧನೆ ಮಾಡಲೇಬೇಕೆಂಬುದು ಈತನ ಸಿದ್ಧಾಂತ ಇದರ ಪ್ರಕಾರ ಸಾಹಿತ್ಯಸೃಷ್ಟಿಕಾರ್ಯ ಪೂರ್ವಯೋಜಿತ ನಿಯತಿಗನುಗುಣವಾಗಿ. ಯಾಂತ್ರಿಕವಾಗಿ ನಡೆಯುವ ಬೌದ್ಧಿಕ ಕ್ರಿಯೆ. ಇಲ್ಲಿ ಶ್ರದ್ಧೆ ಮತ್ತು ಶ್ರಮ ಮುಖ್ಯ. ಸ್ಫೂರ್ತಿ, ದೈವದತ್ತ ಪ್ರತಿಭೆ ಎಂಬ ಮಾತುಗಳಲ್ಲೆ ಅರ್ಥವಿಲ್ಲದವು. ಈ ಸಿದ್ಧಾಂತದಲ್ಲಿ ವ್ಯಕ್ತಿವೈಶಿಷ್ಟ್ಯಕ್ಕಾಗಲಿ ಇಚ್ಚಾಸ್ವಾತಂತ್ರ್ಯಕ್ಕಾಗಲಿ ಮನ್ನಣೆಯೇ ಇಲ್ಲದಿರುವುದು ಒಂದು ದೊಡ್ಡ ದೋಷ. ಟೇನ್ ಬಹುಮಟ್ಟಿಗೆ ಹೆಗಲ್ ಎಂಬ ತತ್ತ್ವಜ್ಞಾನಿಯ, ಮತ್ತು ಸ್ವಲ್ಪ ಮಟ್ಟಿಗೆ ಸ್ಪಿನೋಜ ಎಂಬ ತತ್ತ್ವಜ್ಞಾನಿಯ ಅನುಯಾಯಿ.

ಈತನ ವಾಸ್ತವ ಪ್ರಾಪಂಚಿಕ ದೃಷ್ಟಿ ಮತ್ತು ನಿಯತವಾದ ಅನೇಕ ಸಮಕಾಲಿನ ಸಾಹಿತಿಗಳ ಮೇಲೆ ವಿಶೇಷವಾಗಿ ಜೋಲ ಮೊಪಾಸಾರ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು.

ಇವನಷ್ಟೆ ಪ್ರಬಲವಾಗಿ ವಸ್ತುನಿಷ್ಠ ವೈಚಾರಿಕ ಅವಲೋಕನವನ್ನು ಎತ್ತಿ ಹಿಡಿದರೂ ನಿಷ್ಠುರ ವಾಸ್ತವವಾದಿಯಾದರು ಈತ ಬರೆದ ಫ್ರಾನ್ಸ್ ಇತಿಹಾಸ ಮಾತ್ರ ಅಷ್ಟಕ್ಕೂ ಭಾವನಾಶೀಲವಾಗಿದೆ. ಇದೊಂದು ವೈಚಿತ್ರ! (ಕೆ.ಬಿ.ಪಿ.)

ಟೇನನ ವಿಮರ್ಶೆ ಬದಲಾಯಿಸಿ

ಟೇನನ ಹೆಸರನ್ನು ಕೇಳಿದ ಕೂಡಲೇ ಅವನಿಗೆ ಕೀರ್ತಿಯನ್ನೂ ಕುಕೀರ್ತಿಯನ್ನೂ ತಂದುಕೊಟ್ಟಿರುವ ಜನಾಂಗ, ಪರಿಸರ, ಘಳಿಗೆ ಎಂಬ ಮೂರು ಶಬ್ದದ ಅವನ ಹೇಳಿಕೆ ನೆನಪಿಗೆ ಬರುತ್ತದೆ. ಜನ ಸಾಮಾನ್ಯವಾಗಿ ಆ ಹೇಳಿಕೆಗೆ ಅಂಟಿಸಿರುವ ಅರ್ಥ ಇದು: ಒಬ್ಬ ಸಾಹಿತಿಯ ಒಂದು ಕೃತಿ ಉತ್ಪತ್ತಿಯಾಗುವುದಕ್ಕೆ ಕಾರಣವಾಗಬಲ್ಲ ಶಕ್ತಿಗಳು ಮೂರು ಸಾಹಿತಿಯ ಬಣ್ಣ ಅಥವಾ ಬುಡುಕಟ್ಟು, ಎಂದರೆ ಫ್ರೆಂಚ್ ಇಂಗ್ಲಿಷ್ ಇಟಾಲಿಯನ್ ಇತ್ಯಾದಿ; ಸಾಹಿತಿಯ ಸುತ್ತುಮುತ್ತಣ ಸಾಮಾಜಿಕ ಸನ್ನಿವೇಶ; ಸಾಹಿತಿಯ ಅವಧಿ; ಕಾಲ ಇವು ಮೂರರ ಗುಣಾವಗುಣವನ್ನು ತಿಳಿದುಕೊಂಡರೆ ಕೃತಿಯ ಸ್ವರೂಪ ಸ್ವಾರಸ್ಯ ನಮಗೆ ಸಿಕ್ಕಿದಂತೆ. ಹೀಗೆ ಒಂದು ಕಿರುಸೂತ್ರದ ಮೂಲಕ ಸಾಹಿತ್ಯ ನಿರ್ಮಾಣವನ್ನು ವಿವರಿಸಿ, ಟೇನ್ ಸಾಹಿತ್ಯವನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಅದು ಸಮಾಜಶಾಸ್ತ್ರದ ಒಂದು ಭಾಗವೆಂದು ಅಭಿಪ್ರಾಯಪಟ್ಟನೆಂದೂ ಅಂಥ ಅಭಿಪ್ರಾಯ ಅವನಿಂದಲೇ ಮೊಟ್ಟಮೊದಲು ಸೂಚಿತವಾಯಿತೆಂದು ಮಂದಿಯ ನಂಬಿಕೆ. ಟೇನನ ಪದಗುಚ್ಚವನ್ನು ಮೇಲೆ ಮೇಲೆ ಗ್ರಹಿಸಿದರೆ ಅವನ ತತ್ತ್ವಕ್ಕೆ ಎದುರುಬೀಳದೆ ಗತ್ಯಂತರವಿಲ್ಲ. ಕವಿಯ ವ್ಯಕ್ತಿತ್ವವೂ ಆತ್ಮತೇಜವೂ ಮುಖ್ಯ ವಿಚಾರವಲ್ಲವೇ ? ಕಾವ್ಯಸೃಷ್ಟಿಯಲ್ಲಿ ಅದಕ್ಕೆ ಪಾತ್ರವೆ ಇಲ್ಲವೆ? ಸನ್ನಿವೇಶವೆಂದು ಹೇಳಿದಮೇಲೆ ಸಮಯದ ಮಾತೇಕೆ? ಲಲಿತಕಲೆಯಾದ ಸಾಹಿತ್ಯ ವೈಜ್ಞಾನಿಕ ಪ್ರಯೋಗ ಪರೀಕ್ಷೆಗೆ ಎಂದಾದರೂ ವಶವಾಗುತ್ತದೆಯ? ಆದರೆ ಟೇನ್ ಆ ಪದಗಳ ಹಿಂದೆ ಗಾಢಾರ್ಥ ಇಟ್ಟಿರುವುದನ್ನು ಮರೆಯಬಾರದು. ಅವನ ಇಚ್ಛೆಯಂತೆ, ಜನಾಂಗವೆಂದರೆ ಒಂದು ದೇಶದ ಜನ ಇನ್ನೊಂದು ದೇಶದ ಜನರಿಂದ ಯಾವ ಗುಣಲಕ್ಷಣದಲ್ಲಿ ಭಿನ್ನರೊ ಆ ವಿಶಿಷ್ಟ ಗುಣಲಕ್ಷಣ. ಕೆಲವೊಮ್ಮೆ ಜನಾಂಗಕ್ಕೆ ಮಾನವಕುಲವೆಂಬ ಉದಾರರ್ಥವೂ ಉಂಟು, ಟೇನನ ಲೇಖನಗಳಲ್ಲಿ. ಘಳಿಗೆಯೆಂಬುದೂ ಟೇನನಲ್ಲಿ ತಾತ್ಪರ್ಯ ಬದಲಾವಣೆಗೆ ಪಕ್ಕಾಗಿದೆ. ಒಂದು ಕಡೆ ಅದು ಸ್ಥಿತಿಗತಿಯ ಓಟದ ವೇಗ; ಇನ್ನೊಂದು ಕಡೆ ಒಂದು ಅವಧಿಯ ಮುಖ್ಯ ಮನೋಭಾವ; ಬೇರೊಂದು ಕಡೆ ಒಂದು ಕಲಾಕೃತಿಯ ಬಗ್ಗೆ ಪರಂಪರಾಗತವಾದ ಅಭಿಮತ. ಸನ್ನಿವೇಶದ ವಿಚಾರದಲ್ಲೂ ಟೇನನ ನೋಟ ಈಗ ರಾಜಕೀಯ ಮತ್ತು ಸಾಮಾಜಿಕ ಘಟನಾವಳಿಗಳ ದಿಕ್ಕಿಗೆ, ಮತ್ತೊಮ್ಮೆ ಓದುಗರ ಮತ್ತು ಪ್ರೇಕ್ಷಕರ ಅಪೇಕ್ಷೆ ಅನಪೇಕ್ಷೆಯ ದಿಕ್ಕಿಗೆ ಹರಿಯುತ್ತದೆ ಇಂಥ ವಿವರಣಾ ಪಲ್ಲಟ ಟೇನನಿಗೆ ಒಗ್ಗಿಬಂದದ್ದರಿಂದ ಅವನಲ್ಲಿ ಪೂರ್ವಾಪರ ವಿರೋಧವು ಪರಸ್ಪರ ವೈಷಮ್ಯವೂ ಹೇರಳವಾಗಿದೆ. ಅವನ ಉಕ್ತಿಯನ್ನು ಅಕ್ಷರಶಃ ತೆಗೆದುಕೊಂಡರೆ ಉಪಯೋಗವಿಲ್ಲ ಒಟ್ಟಿನಲ್ಲಿ ಕವಿಯ ಮೇಲೆ ಸಮಯ ಸನ್ನೀವೇಶಗಳ ಪ್ರಭಾವ ಉಂಟೆಂಬ ಸಂಗತಿಯನ್ನು ನಮ್ಮ ಲಕ್ಷಕ್ಕೆ ತಂದುಕೊಟ್ಟುದೇ ಅವನಿಂದಾದ ಉಪಕಾರ.

ಇಷ್ಟೇ ಅಲ್ಲ, ಅವನ ಸಾಹಿತ್ಯ ಚಿಂತನೆ. ದಾರ್ಶಿನಿಕ ಹೆಗಲ್ ಅವನ ಮೇಲೆ ಬೀರಿದ ಪ್ರಭಾವ ದೊಡ್ಡ ಪ್ರಮಾಣದ್ದು. ಹೆಗಲ್ ನಂತೆ ಟೇನನೂ ಚರಿತ್ರ ಚಲನಾತ್ಮಕವೆಂದೂ ಕಾಲಕಾಲಕ್ಕೆ ಅದರಲ್ಲಾಗುವ ಮಾರ್ಪಾಟಿಗೆ ಮನುಷ್ಯರ ಮನಸ್ಸು ಕಾರಣವೆಂದೂ ಆತ್ಮವೇ ಕ್ರಿಯಾಶಕ್ತಿಯೆಂದೂ ಅಭಿಪ್ರಾಯಪಟ್ಟ. ಸಾಹಿತ್ಯ ಕಲೆ ತತ್ತ್ವಶಾಸ್ತ್ರಗಳು ಜನಜೀವನದಲ್ಲಿ ಅನಿವಾರ್ಯವಾಗಿ ನೆರವೇರುವಾಗ ಉಂಟಾಗುವ ಸ್ಥಿತಿ ವ್ಯತ್ಯಾಸವನ್ನು ಮಹಾಪುರಷರು ಅಭಿವ್ಯಕ್ತಗೊಳಿಸುತ್ತಾರೆ. ಹೆಗಲನ ಅಭಿಮತದಂತೆ ಜಗತ್ತು ಪ್ರಗತಿ ಮಾರ್ಗದಲ್ಲೇ ಮುಂದುವರೆಯುತ್ತ ಉತ್ಕರ್ಷ ಹಾಗೂ ಅವನತಿಗಳ ಚಕ್ರವನ್ನು ಅವಲಂಬಿಸುತ್ತದೆಯಾದರೂ ಒಟ್ಟಿನಲ್ಲಿ ಅದು ಆಶಾದಾಯಕ. ಟೇನನ ದೃಷ್ಟಿಗೆ ಅದು ಅಷ್ಟೇನೂ ತೃಪ್ತಿಕರವಲ್ಲ. ಅದೆಂತಾದರೂ ಇರಲಿ. ಸಾಹಿತಿಯೂ ಕಲೆಗಾರನೂ ತಮ್ಮ ತಮ್ಮ ಕಾಲಮಾನದ ಪ್ರತಿನಿಧಿಗಳಾಗುತ್ತಾರೆ. ಸಾಧಾರಣರೂ ಮಧ್ಯಮ ವರ್ಗದವರೂ ಅದವರು ಸಮಾಜದ ಮೇಲುಮೇಲಣ ಪದರಗಳ ಒಳಕ್ಕೆ ಇಳಿಯಲು ಮಾತ್ರ ಶಕ್ತರು; ಪ್ರತಿಭಾಶಾಲಿಗಳಾದರೊ ಬಹಳ ಆಳಕ್ಕೆ ಇಳಿಯಬಲ್ಲವರಾಗಿ ನೈಜ ಸತ್ತ್ವ ಸ್ವರೂಪಕ್ಕೆ ಮೂರ್ತತ್ವ ಕೊಡುತ್ತಾರೆ ಅತ್ಯಂತ ಕೆಳಗಿನ ಹಂತದ ಸಾಹಿತಿ ತನ್ನ ಪರಿಸರದ ಹೊರ ಆಚಾರ ವ್ಯವಹಾರಕ್ಕೆ ಕನ್ನಡಿ ಹಿಡಿಯುತ್ತಾನೆ; ಮಧ್ಯಮ ಮಟ್ಟದವ ಒಂದು ಸಾಹಿತ್ಯ ಪ್ರಭೇದವನ್ನು ಅಥವಾ ಒಂದು ಚಾರಿತ್ರಿಕ ಅವಧಿಯನ್ನು ನಿರೂಪಿಸುತ್ತಾನೆ. ಮೇಲ್ಮಟ್ಟದ ಸಾಹಿತಿ ಜನಾಂಗದ ಶಾಶ್ವತ ಆಕೃತಿಯನ್ನು ಪ್ರಕಟಗೊಳಿಸುತ್ತಾನೆ. ಅವನ ಮೇಲ್ಮೆ ಎಷ್ಟೊ ಅಷ್ಟೂ ಅಷ್ಟು ಸಮರ್ಪಕವಾಗಿ ಅವನು ಜನಾಂಗದ ಪ್ರತಿನಿಧಿ. ಮಾನವ ವರ್ಗದ ಪ್ರತಿನಿಧಿ.

ಸಾಹಿತ್ಯದ ಮಿಕ್ಕೆಲ್ಲ ಅಂಗಗಳಿಗಿಂತ ಹೆಚ್ಚಾಗಿ ಅದು ಚಿತ್ರಿಸುವ ಪಾತ್ರಗಡಣ, ಅದರಲ್ಲೂ ಪ್ರಧಾನವಾಗಿ ನಾಯಕಪಾತ್ರ ಟೇನನಿತೆ ತುಂಬ ಚಿತ್ತಾಕರ್ಷಕವೆನಿಸಿತು. ಏತಕ್ಕೆಂದರೆ ಪಾತ್ರವೇ ಮಾನವತ್ವದ ಆಕಾರ, ಮಾದರಿ, ಆದರ್ಶ, ಬಲಿಷ್ಠ ಪಾತ್ರಗಳನ್ನು ಕಂಡು ಅವನಿಗೆ ಆಶ್ಚರ್ಯ ಮತ್ತು ಮೆಚ್ಚಿಕೆ. ಅವನ ಹೇಳಿಕೆ: ಬಯಲಿನಲ್ಲಿ ನಾನು ಸಿಂಹಕ್ಕಿಂತ ಕುರಿಯನ್ನು ಸಂಧಿಸಲು ಬಯಸುತ್ತೇನೆ; ಆದರೆ ಕಬ್ಬಿಣದ ಸಲಾಕಿಗಳ ಹಿಂದೆ ಕುರಿಯನ್ನಲ್ಲ, ಸಿಂಹವನು ನಾನು ಅವಲೋಕಿಸಬೇಕು. ಕಲೆ ಅಂಥ ಸಲಾಕಿ. ಉದ್ರಿಕ್ತ ರಾಗಾವೇಶವನ್ನು ನಾವು ವೀಕ್ಷಿಸಬಹುದು; ವೀಕ್ಷಿಸಿ ನಮ್ಮ ಮಿತಿ ಲೋಪಗಳನ್ನು ಮರೆತು ಉಬ್ಬಿ ಬೆಳೆಯುತ್ತೇವೆ. ಕಲೆಯಲ್ಲಿ ಇದು ಸಮ; ವಾಸ್ತವ ಬಾಳಿನಲ್ಲಾದರೊ ಲೋಕಕಂಟಕರು ಹೊಲ್ಲ. ಲೋಕೋಪಕಾರಿಗಳು ಆವಶ್ಯಕ.

ಕಲೆ ಸೌಂದರ್ಯದ ಸೇವಕ, ನೀತಿಶಾಸ್ತ್ರದ ಆಳಲ್ಲ ಎಂದು ಟೇನ್ ಎಷ್ಟೋ ವೇಳೆ ಒತ್ತಿ ಸಾರಿದ. ಲಾವಣ್ಯ ಸೃಷ್ಟಿಯೊಂದೇ ಕಲೆಗಾರನ ಉದ್ದೇಶ. ವಿಕ್ಟರ್ ಕಸನ್ ಹೊಗಳಿದ ನೈತಿಕ ಸೌಂದರ್ಯವೆಂಬುದು ಅವನ ಅಪಹಾಸ್ಯಕ್ಕೆ ಈಡಾಯಿತು. ಆದರೆ ಅವನಿಗೆ ಸ್ತಿಮಿತಚಿತ್ತ ಇದ್ದಂತೆ ತೋರುವುದಿಲ್ಲ. ಕೆಲವು ವೇಳೆ ನೈತಿಕ ಪ್ರಮಾಣ ಕಲೆಗೆ ಅಳತೆಗೋಲು ಎಂದೂ ಅವನು ಹೇಳಿರುವುದುಂಟು.

ಪ್ರತಿಯೊಬ್ಬ ಸಾಹಿತಿಗೂ ಅವನವನ ಮಟ್ಟದ ಪ್ರಧಾನಶಕ್ತಿ ದತ್ತವಾಗಿದೆ. ಸಿಂಹಕ್ಕೆ ಸಿಂಹತ್ತ್ವವೂ ತೋಳಕ್ಕೆ ತೋಳತನವೂ ಇರುವಂತೆ ಷೇಕ್ಸ್‍ಪಿಯರನ ಮಹಾಸತ್ತ್ವ ಒಂದು ಬಗೆ. ಡಿಕ್ಕನ್ಸನ ಬಲ ಇನ್ನೊಂದು ಬಗೆ, ಕಾವ್ಯವೆನ್ನುವುದು ಕವಿಯ ತುಂಬಿತುಳುಕುವ ಅಂತರ್ಯದ ಬಹಿರಂಗವಲ್ಲದ ಪ್ರಕಟನೆ, ಉದ್ರಿಕ್ತ ಸಂವೇದನೆಯ ಅಯತ್ನಿತ ಧ್ವನಿ. ಕಾವ್ಯದ ಪ್ರತಿಷ್ಠೆ ಕವಿಯ ಪ್ರಮಾಣಿಕ ಭಾವಭಾವನೆಯನ್ನು ಆಶ್ರಯಿಸುತ್ತದೆ. ಟೇನನಿಗೆ ವರ್ಡ್ಸ್ ವರ್ತನ ಕವಿತೆಯಿಂದ ಬೇಸರ ಆದರೂ ತಾನು ನುಡಿದದ್ದನ್ನು ಋಜುತ್ವದಿಂದ ತನ್ನದೇ ಎಂದು ನಂಬಿದ್ದನಾಗಿ ವಡ್ರ್ಸ್‍ವರ್ತ್ ಕ್ಷಮಾರ್ಹ. ಮುಚ್ಚುಮರೆ ಕಾಣದ ಆಲೋಚನೆ, ನೈಜ ರಾಗಾವೇಶ ಎಲ್ಲಿದೆಯೊ ಅಲ್ಲಿ ಶುದ್ದ ಸಾಹಿತ್ಯದ ಹುಟ್ಟು. ಬರಿ ಅಲಂಕಾರ ಆಡಂಬರ ಎಲ್ಲಿದೆಯೋ ಅಲ್ಲಿ ಕೃತಕ ನಾಜುಕಿನ ಬರವಣಿಗೆ: ಟೇನನ ತೀರ್ಮಾನದಂತೆ ಇಂಗ್ಲೆಂಡಿನ ಮತ್ತು ಫ್ರಾನ್ಸಿನ ಸಾಹಿತ್ಯಕ್ಕೆ ಅದೇ ಭಾರಿ ವ್ಯತ್ಯಾಸ.

ಕಾವ್ಯದ ಆಕಾರ, ವಸ್ತು ಸಂವಿಧಾನ, ಅಂಗ ನಿಯಂತ್ರಣ ಮೊದಲಾದ ವಿಷಯಗಳಿಗೆ ಟೇನ್ ಗಮನವನ್ನೇ ಕೊಡಲಿಲ್ಲ. ಕವಿಭಾಷೆ ಮಾತ್ರ ಅವನಿಗೆ ಪರಿಶೀಲಿಸುವ ಅಂಶವಾಯಿತು. ಕಾವ್ಯಗುಣಕ್ಕೆ ಶೈಲಿಯೇ ಒರೆಗಲ್ಲು ಎಂದು ಅವನ ಅಭಿಪ್ರಾಯ.

ಬುದ್ಧಿಶಕ್ತಿಗೆ ಸರಿಯಾದ ಮಾನ್ಯತೆ ಕೊಡದೇ ಹೋದದ್ದು ಟೇನನ ದೊಡ್ಡ ದೋಷ. ಒಟ್ಟಿನಲ್ಲಿ ಘನ ಸಮಸ್ಯೆಗಳನ್ನು ವಿಚಾರಿಸುವಂತೆ ಯೋಚನಾಪರರಿಗೆ ಕರೆಯಿತ್ತುದು ನಿಜಕ್ಕೂ ಅವನು ಮಾಡಿದ ದೊಡ್ಡ ಕೆಲಸ.