ಹಾರ್ವೆ ವಿಲಿಯಮ್ಸ್ ಕಷಿಂಗ್
ಹಾರ್ವೆ ವಿಲಿಯಮ್ಸ್ ಕಷಿಂಗ್ (ಎಪ್ರಿಲ್ 8, 1869 – ಒಕ್ಟೋಬರ್ 7, 1939) ಅಮೆರಿಕದ ನರರೋಗ ತಜ್ಞ.ಮಿದುಳು, ನರಗಳ ಶಸ್ತ್ರವೈದ್ಯವನ್ನು ಇಂದಿನ ಮಟ್ಟಕ್ಕೇರಿಸಿ ಹೆಸರಾದವ. ಅಮೆರಿಕ ಸಂಯುಕ್ತ ಸಂಸ್ಥಾನಗಳ ಕ್ಲೀವ್ಲ್ಯಾಂಡಲ್ಲಿ ಹುಟ್ಟಿ ಯೇಲ್ ವಿಶ್ವವಿದ್ಯಾಲಯ (೧೮೯೧) ಮತ್ತು ಹಾರ್ವರ್ಡ್ ವೈದ್ಯ ಶಾಲೆ (೧೮೯೫) ಎರಡರಲ್ಲೂ ಪದವೀಧರನಾದ. ಜಾನ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ನಾಲ್ಕು ವರ್ಷಗಳಿದ್ದ. ಜರ್ಮನಿಯ ಬರ್ನ್ನಲ್ಲಿ ಕಾಕರ್ನೊಡನೆಯೂ ಇಂಗ್ಲೆಂಡಿನ ಲಿವರ್ಪುಲಿನಲ್ಲಿ ಷೆರಿಂಗ್ಟನ್ನೊಡನೆಯೂ ಅಭ್ಯಾಸ ಮಾಡಿದ. ಬಾಲ್ಟಿಮೋರಿನ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಶಸ್ತ್ರವೈದ್ಯದ ಹಲವಾರು ಶಾಖೆಗಳಲ್ಲಿ ಮುಖ್ಯವಾಗಿ ಮಿದುಳಿನ ಮೇಲೆ ಹೆಚ್ಚು ಕೆಲಸಮಾಡಿ ರೋಗಿಯ ಎಚ್ಚರ ತಪ್ಪಿಸದೆಯೇ ಕಪಾಲದಲ್ಲಿ ಮಾತ್ರ ಅರಿವಳಿಕೆಯನ್ನು ಅಳವಡಿಸಿ, ಮಿದುಳಿನ ಮೇಲೆ ಶಸ್ತ್ರಕ್ರಿಯೆ ನಡೆಸುವ ವಿಧಾನಗಳನ್ನು ಮೊತ್ತಮೊದಲು ಕ್ರಮಗೊಳಿಸಿ ಹಲವು ಏಕವಿಷಯಕಪ್ರಬಂಧಗಳನ್ನು (ಮಾನೊಗ್ರಾಫ್ಸ್) ಬರೆದು ಪ್ರಕಟಿಸಿದ. ತಲೆಯೊಳಗಡೆ ಮಿದುಳಿನ ತಳದಲ್ಲಿರುವ ಗ್ಯಾಸರನ ನರಗಂಟನ್ನು ಕೊಯ್ದು ತೆಗೆವ ಶಸ್ತ್ರಕ್ರಿಯೆ (೧೯೦೦) ವಿಧಾನಗಳನ್ನು ಕಂಡು ಹಿಡಿದ. ಹಸುಗೂಸಿನ ಕಪಾಲದೊಳಗೆ ರಕ್ತಸುರಿತವನ್ನು ನಿಲ್ಲಿಸುವ ಉಪಾಯವನ್ನೂ ರೂಢಿಸಿದ (೧೯೦೫). ಲಕ್ವ ಹೊಡೆದ ಮೊಗವನ್ನು ಸರಿಪಡಿಸುವ ನರ ನಾಟಿ ಹಾಕುವುದನ್ನು ಜಾರಿಗೆ ತಂದ. ತೆಮಡಿಕ (ಪಿಟ್ಯೂಟರಿ) ಗ್ರಂಥಿಯ ಮೇಲಿನ ತನ್ನ ಶೋಧನೆಯಿಂದ ಪ್ರಪಂಚಕ್ಕೇ ಹೆಸರಾದ (೧೯೧೨). ಈಗ ಎರಡು ಬಗೆಗಳ ಕಷಿಂಗ್ ರೋಗಗಳು ಹೆಸರಾಗಿವೆ: ತೆಮಡಿಕ ಗ್ರಂಥಿಯ ಗಂತಿಯದೊಂದು, ಅಡ್ರಿನಲ್ ಗ್ರಂಥಿಯ ಚುರುಕಿನದೊಂದು. ಮಿದುಳಿನ ಗಂತಿಗಳ ವಿಂಗಡಣೆ, ಶಸ್ತ್ರವೈದ್ಯದಲ್ಲಿ ರಕ್ತ ಒತ್ತಡಗಳನ್ನು ಸಹ ಚೆನ್ನಾಗಿ ಅಭ್ಯಸಿಸಿದ. ಕಪಾಲದೊಳಗೆ ಯಾವ ಕಾರಣದಿಂದಲಾದರೂ ಒತ್ತಡವೇರಿದರೆ, ಮಿದುಳಿಗೆ ಸಾಕಷ್ಟು ರಕ್ತ ಒಗಿಸಲು ಅದರೊಳಗಿನ ರಕ್ತ ಒತ್ತಡ ಇದಕ್ಕೂ ಮೀರಿ ಏರುವುದಕ್ಕೆ ಕಷಿಂಗನ ನಿಯಮವೆಂದು ಈಗಲೂ ಹೆಸರಾಗಿದೆ. ಹಾರ್ವರ್ಡ್ ವೈದ್ಯ ಶಾಲೆಯಲ್ಲಿ ಕಷಿಂಗ್ ೨೦ ವರ್ಷ ಪ್ರಾಧ್ಯಾಪಕನಾಗಿದ್ದ (೧೯೧೨-೧೯೩೨). ಒಂದನೆಯ ಮಹಾಯುದ್ಧದಲ್ಲಿ ಫ್ರಾನ್ಸ್‌ನಲ್ಲಿ ಕಾರ್ಯಾಚರಣೆಯಲ್ಲಿದ್ದು, ಅಮೆರಿಕದ ಸೇನೆಗೆ ಮಿದುಳಿನ ವಿಚಾರಗಳಲ್ಲಿ ಮುಖ್ಯ ಸಲಹೆಗಾರ ಆಗಿದ್ದ. ಅವನು ಬರೆದ ಸರ್ ವಿಲಿಯಂ ಆಸ್ಲರನ ವಿವರವಾದ ಜೀವನ ಚರಿತ್ರೆಗೆ ಪುಲಿಟ್ಜರ್ ಬಹುಮಾನ ದೊರಕಿತು (೧೯೨೫). ಅವನು ಬರೆದ ವೈದ್ಯಚರಿತ್ರೆಯ ಬರೆಹಗಳಲ್ಲಿ ಆಂಡ್ರಿಯಾಸ್ ವೆಸೇಲಿಯಸ್ನ ಮೇಲೂ ಒಂದಿತ್ತು. ಮುಗಿಯದೆ ಹಾಗೆ ಉಳಿದಿದ್ದ ಈ ಪುಸ್ತಕವನ್ನು ಅವನ ನಿಕಟ ಗೆಳೆಯ ಪುಲ್ಟನ್ ಎಂಬಾತ ಕಷಿಂಗ್ ಸತ್ತಮೇಲೆ ಪ್ರಕಟಿಸಿದ. ಯೇಲ್ ವಿಶ್ವವಿದ್ಯಾಲಯದ ನ್ಯೂಹೇವನ್ನಲ್ಲಿ ಕೊನೆಯತನಕ ನರಶಾಸ್ತ್ರದ ಸ್ಟರ್ಲಿಂಗ್ ಪ್ರಾಧ್ಯಾಪಕನಾಗಿದ್ದ. ಶೈಲಿಯಲ್ಲಿ ಸೊಗಸಾಗಿದ್ದ ಅವನ ಅನೇಕ ಬರೆಹಗಳು ಒಟ್ಟಾಗಿ ಪ್ರಕಟವಾಗಿವೆ (೧೯೨೮). ಆತ ವೈದ್ಯದಲ್ಲಿನ ಮಹತ್ತರ ಕೊಡುಗೆಗಳ ತನ್ನ ಸಂಗ್ರಹಗಳನ್ನು ಯೇಲ್ ವಿಶ್ವವಿದ್ಯಾಲಯಕ್ಕೆ ದಾನವಾಗಿತ್ತ.
ಹಾರ್ವೆ ವಿಲಿಯಮ್ಸ್ ಕಷಿಂಗ್ | |
---|---|
Born | |
Died | October 7, 1939 New Haven, Connecticut, US | (aged 70)
Education | Yale University Harvard Medical School Johns Hopkins Hospital |
Years active | 1895–1935 |
Known for | Pioneering brain surgery Cushing's syndrome |
Spouse |
Katharine Stone Crowell (ವಿವಾಹ:1902) |
Children | William Harvey Cushing Mary Benedict Cushing Betsey Maria Cushing Henry Kirke Cushing Barbara Cushing |
Parent(s) | Kirke Cushing Bessie Williams |
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Fulton, John F. Harvey Cushing: A Biography Archived 2012-12-15 at Archive.is, Charles C. Thomas (Springfield, Illinois), 1946.
- Guide to the Harvey Williams Cushing Papers, Manuscripts and Archives, Yale University Library
- Bliss, Michael. Harvey Cushing : a Life in Surgery, Oxford University Press, 2005.
- National Academy of Sciences Biographical Memoir
- Harvey Cushing Fonds Archived 2014-02-26 ವೇಬ್ಯಾಕ್ ಮೆಷಿನ್ ನಲ್ಲಿ.. Osler Library of the History of Medicine. McGill University.