ಹಾರ್ಮೋನಿಯಂ ಶೇಷಗಿರಿರಾವ್
'ಶೇಷಗಿರಿರಾವ್ (ಆಗಸ್ಟ್ ೫, ೧೮೯೨ - ಅಕ್ಟೋಬರ್ ೭, ೧೯೯೦)' ಹಾರ್ಮೋನಿಯಂ ವಾದನದಲ್ಲಿ ಅಪ್ರತಿಮತೆ ಸಾಧಿಸಿದ್ದವರು. ಅಂದಿನ ರಂಗಭೂಮಿ, ಹರಿಕಥೆ, ಸಂಗೀತ ಮುಂತಾದ ಪ್ರದರ್ಶಕ ಕಲೆಗಳಲ್ಲಿ ಹಾರ್ಮೋನಿಯಂಗೆ ವಿಶೇಷ ಸ್ಥಾನವಿತ್ತು. ಈ ಹಾರ್ಮೋನಿಯಂ ವಾದನದಲ್ಲಿ ಅಪೂರ್ವ ಪರಿಣತೆ ಸಾಧಿಸಿದ್ದುದರ ಜೊತೆಗೆ ಹಾರ್ಮೋನಿಯಂನ್ನು ಸುಲಭೋಪಯೋಗಿಯಾಗಿ ರೂಪಿಸಿದ ಕೀರ್ತಿ ಕೂಡಾ ಶೇಷಗಿರಿರಾವ್ ಅವರಿಗೆ ಸಲ್ಲುತ್ತದೆ. ಹೀಗಾಗಿ ಅವರು ಹಾರ್ಮೋನಿಯಂ ಶೇಷಗಿರಿರಾವ್ ಎಂದೇ ಪ್ರಸಿದ್ಧರಾಗಿದ್ದಾರೆ. ರಂಗಭೂಮಿಗೆ ಪ್ರಥಮವಾಗಿ ಹಾರ್ಮೋನಿಯಂ ತಂದ ಕೀರ್ತಿ ಹಾಗೂ ಕನ್ನಡ ಚಲನಚಿತ್ರಗಳಿಗೆ ಮೊದಲು ಹಿನ್ನೆಲೆ ಸಂಗೀತ ನೀಡಿದ ಕೀರ್ತಿ ಹಾರ್ಮೋನಿಯಂ ಶೇಷಗಿರಿರಾವ್ ಅವರದ್ದು.
ಹಾರ್ಮೋನಿಯಂ ಶೇಷಗಿರಿರಾವ್ | |
---|---|
ಜನನ | ಶೇಷಗಿರಿರಾವ್ ಆಗಸ್ಟ್ ೫, ೧೮೯೨ ಹಂಪಾಪುರ |
ಮರಣ | ಅಕ್ಟೋಬರ್ ೭, ೧೯೯೦ |
ವೃತ್ತಿ(ಗಳು) | ಹಾರ್ಮೋನಿಯಂ ವಾದಕರು, ರಂಗ ನಟರು, ರಂಗ ಸಂಗೀತ ನಿರ್ದೇಶಕರು, ಚಲನಚಿತ್ರ ಸಂಗೀತ ನಿರ್ದೇಶಕರು |
ಜೀವನ
ಬದಲಾಯಿಸಿಶೇಷಗಿರಿರಾವ್ ಅವರು ಆಗಸ್ಟ್ ೫, ೧೮೯೨ರಲ್ಲಿ ಹಂಪಾಪುರದಲ್ಲಿ ಜನಿಸಿದರು. ತಂದೆ ಪಾಪಚ್ಚಿ ಕೃಷ್ಣಾಚಾರ್ಯರು ಮತ್ತು ತಾಯಿ ಕನಕಲಕ್ಷ್ಮಮ್ಮನವರು. ಇನ್ನೂ ವಯಸ್ಸು ಎಂಟಿರುವಾಗಲೇ ಶೇಷಗಿರಿರಾಯರು ಎ.ವಿ. ವರದಾಚಾರ್ಯರ ರತ್ನಾವಳಿ ಥಿಯಟ್ರಿಕಲ್ ಕಂಪೆನಿಗೆ ಸೇರಿ ಲೋಹಿತಾಶ್ವ, ಧ್ರುವ, ಪ್ರಹ್ಲಾದ ಮುಂತಾದ ಬಾಲ ಪಾತ್ರಗಳನ್ನು ನಿರ್ವಹಿಸತೊಡಗಿದ್ದರು. ಮುಂದೆ ಅವರು ಮಂದಾರವಲ್ಲಿ, ಮೋಹನ ಮುಂತಾದ ಹೆಣ್ಣು ಪಾತ್ರಗಳನ್ನೂ ನಿರ್ವಹಿಸಿ ಜನಪ್ರಿಯತೆ ಪಡೆದಿದ್ದರು. ಬರ ಬರುತ್ತಾ ಅವರಿಗೆ ಹಾರ್ಮೋನಿಯಂ ವಾದನದಲ್ಲಿ ಆಸ್ಥೆ ಬೆಳೆಯಿತು. ವರದಾಚಾರ್ಯರ ಅಪೇಕ್ಷೆಯಂತೆ ಮುಂಬಯಿಯ ಚಮನ್‌ಲಾಲ್ ಬಳಿ ಹಾರ್ಮೋನಿಯಂ ಕಲಿಕೆ ಮಾಡಿದ್ದುದರ ಜೊತೆಗೆ, ಉಸ್ತಾದ್ ಕರೀಂಖಾನರಿಂದ ಹಿಂದುಸ್ತಾನಿ ಸಂಗೀತ ಮತ್ತು ಮೈಸೂರು ವಾಸುದೇವಾಚಾರ್ಯರ ಬಳಿ ಕರ್ನಾಟಕ ಸಂಗೀತಾಭ್ಯಾಸ ಮಾಡಿದರು.
ಹಾರ್ಮೋನಿಯಂ ಪ್ರಸಿದ್ಧಿ
ಬದಲಾಯಿಸಿರಂಗಭೂಮಿಯ ಮೇಲೆ ಹಾರ್ಮೋನಿಯಂ ವಾದನವನ್ನು ತಂದ ಕೀರ್ತಿ ಶೇಷಗಿರಿರಾವ್ ಅವರದ್ದು. ಅವರು ಹಾಡುಗಳಿಗೆ ಕರ್ನಾಟಕ ಸಂಗೀತದ ಜೊತೆಗೆ ಹಿಂದೂಸ್ತಾನಿ ರಾಗಗಳ ಅಳವಡಿಕೆಯನ್ನೂ ಮಾಡಲಾರಂಭಿಸಿದರು. ಪ್ರಹ್ಲಾದ, ಧ್ರುವ ಚರಿತ್ರೆ, ವಿಷ್ಣುಲೀಲೆ ಮುಂತಾದ ನಾಟಕಗಳಿಗೆ ನೀಡಿದ ಹಾರ್ಮೋನಿಯಂ ವಾದ್ಯ ಸಂಗೀತ ಅವರಿಗೆ ಅಪಾರ ಜನಪ್ರಿಯತೆಯನ್ನು ಗಳಿಸಿಕೊಟ್ಟಿತು.
ದೇವರನಾಮಗಳ ರಚನೆ
ಬದಲಾಯಿಸಿಶೇಷಗಿರಿರಾಯರು ಶ್ರೀ ರಘುರಾಮ ವಿಠಲರು ಎಂಬ ಅಂಕಿತದಲ್ಲಿ ಹಲವಾರು ದೇವರ ನಾಮಗಳನ್ನೂ ರಚಿಸಿದ್ದರು.
ಪ್ರಥಮ ಚಲನಚಿತ್ರ ಸಂಗೀತ ನಿರ್ದೇಶಕ
ಬದಲಾಯಿಸಿಕನ್ನಡ ಚಲನಚಿತ್ರರಂಗದಲ್ಲೂ ಮೊದಲ ಸಂಗೀತ ನಿರ್ದೇಶಕರೆಂದು ಪಡೆದ ಖ್ಯಾತಿ ಹಾರ್ಮೋನಿಯಂ ಶೇಷಗಿರಿರಾವ್ ಅವರದ್ದು. ಕನ್ನಡದ ಎರಡನೇ ವಾಕ್ಚಿತ್ರವಾದ ಭಕ್ತಧ್ರುವ, ಚಿರಂಜೀವಿ, ಭಕ್ತ ಮಾರ್ಕಂಡೇಯ, ಜೀವನ ನಾಟಕ, ವಾಣಿ ಮುಂತಾದ ಚಿತ್ರಗಳಿಗೆ ಅವರು ಸಂಗೀತ ನೀಡಿದರು. ಕೊಲಂಬಿಯ ಗ್ರಾಮಾಫೋನ್ ಕಂಪನಿಯಿಂದ ಇವರ ಸೋಲೋ ಹಾರ್ಮೋನಿಯಂ ವಾದನದ ಹಲವಾರು ಧ್ವನಿಮುದ್ರಿಕೆಗಳು ಬಿಡುಗಡೆಗೊಂಡು ಜನಪ್ರಿಯತೆ ಪಡೆದಿದ್ದವು.
ಗೌರವ
ಬದಲಾಯಿಸಿಹಾರ್ಮೋನಿಯಂ ಶೇಷಗಿರಿರಾಯರಿಗೆ ೧೯೭೭ರಲ್ಲಿ ನಡೆದ ಕರ್ನಾಟಕ ಗಾನಕಲಾ ಪರಿಷತ್ತಿನ ವಿದ್ವಾಂಸರ ೭ನೇ ಸಮ್ಮೇಳನದಲ್ಲಿ ಸನ್ಮಾನ ಸಲ್ಲಿಸಲಾಗಿತ್ತು.
ವಿದಾಯ
ಬದಲಾಯಿಸಿಈ ಮಹನೀಯರು ಅಕ್ಟೋಬರ್ 7, 1990ರ ವರ್ಷದಲ್ಲಿ ತಮ್ಮ 99ನೇ ವಯಸ್ಸಿನಲ್ಲಿ ನಿಧನರಾದರು. ಈ ಮಹಾನ್ ಕಲಾ ಚೇತನಕ್ಕೆ ನಮ್ಮ ನಮನಗಳು.