ಹಾಯ್ಗಡ ಎಂದರೆ ಕಾಲ್ನಡಿಗೆಯಿಂದ, ಅಥವಾ ವಾಹನದೊಳಗೆ ಕುಳಿತು ಕೇವಲ ಅದರ ಚಕ್ರಗಳು ಒದ್ದೆಯಾಗುವಂತೆ, ನದಿ ಅಥವಾ ಹೊಳೆಯನ್ನು ದಾಟಬಹುದಾದ ಉತ್ತಮ ಕಾಲ್ನೆಲೆಯಿರುವ ಆಳವಿಲ್ಲದ ಸ್ಥಳ. ಹಾಯ್ಗಡವು ನೈಸರ್ಗಿಕವಾಗಿ ಉಂಟಾಗಬಹುದು ಅಥವಾ ಅದನ್ನು ನಿರ್ಮಿಸಿರಬಹುದು. ನೀರು ಏರಿದ ಸ್ಥಿತಿಗಳಲ್ಲಿ ಹಾಯ್ಗಡಗಳನ್ನು ದಾಟಲಾಗದಿರಬಹುದು. ಇಳಿ ನೀರು ಹಾಯಿಸ್ಥಳ ಎಂದರೆ ನೀರು ಇಳಿದಾಗ ದಾಟಲು ಅವಕಾಶ ನೀಡುವ ಆದರೆ ನದಿಯು ಏರಿದಾಗ ಆಳ ನೀರಿನಿಂದ ಆವೃತವಾಗಬಹುದಾದ ನದಿ ಅಥವಾ ಹೊಳೆ ಮೇಲಿನ ಕಡಿಮೆ ಎತ್ತರದ ಸೇತುವೆ.

ಹಾಯ್ಗಡ ಸೇತುವೆಗಿಂತ ನದಿಯನ್ನು ದಾಟುವ ಹೆಚ್ಚು ಅಗ್ಗದ ರೂಪ, ಆದರೆ ಭಾರೀ ಮಳೆಯ ನಂತರ ಅಥವಾ ಪ್ರವಾಹ ಪರಿಸ್ಥಿತಿಗಳಲ್ಲಿ ಅದನ್ನು ದಾಟಲಾಗದಿರಬಹುದು. ಹಾಗಾಗಿ ಸಾಮಾನ್ಯವಾಗಿ ಹಾಯ್ಗಡವು ಕೇವಲ ಬಹಳ ಸಣ್ಣ ರಸ್ತೆಗಳಿಗೆ (ಮತ್ತು ನಡೆಯುವವರು ಹಾಗೂ ಕುದುರೆ ಸವಾರರು ಇತ್ಯಾದಿಗಳಿಗೆ ಉದ್ದೇಶಿತವಾದ ದಾರಿಗಳಿಗೆ) ಸೂಕ್ತವಾಗಿದೆ. ಬಹುತೇಕ ಆಧುನಿಕ ಹಾಯ್ಗಡಗಳು ಸಾಮಾನ್ಯವಾಗಿ ಕಾರುಗಳು ಮತ್ತು ಇತರ ಚಕ್ರವುಳ್ಳ ಅಥವಾ ಜಾಡುಪಟ್ಟೆಯುಳ್ಳ ವಾಹನಗಳಿಗೆ ದಾಟಲು ಅವಕಾಶ ನೀಡುವಷ್ಟು ತೆಟ್ಟೆಯಾಗಿರುತ್ತವೆ.

ಆದರೆ, ನ್ಯೂ ಜ಼ೀಲಂಡ್‍ನಲ್ಲಿ, ಹಾಯ್ಗಡಗಳು ದಕ್ಷಿಣ ದ್ವೀಪದ ಪೂರ್ವ ಕರಾವಳಿಯಲ್ಲಿನ (೨೦೧೦ರ ವರೆಗೆ) ರಾಜ್ಯ ಹೆದ್ದಾರಿ ೧ನ್ನು ಸೇರಿದಂತೆ ದೊಡ್ಡ ರಸ್ತೆಗಳ ಸಾಮಾನ್ಯ ಭಾಗಗಳಾಗಿವೆ.[೧] ಬಹುತೇಕ ಅಂತರನಗರ ದೇಶೀಯ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸುವುದರಿಂದ ಮತ್ತು ಹೆಚ್ಚಿನ ಸರಕು ಸಮುದ್ರದ ಮೂಲಕ ಸಾಗಣೆಯಾಗುವುದರಿಂದ, ಹೆಚ್ಚು ದೂರದ ರಸ್ತೆ ಸಂಚಾರವು ಕಡಿಮೆಯಿರುತ್ತದೆ ಮತ್ತು ಹಾಗಾಗಿ ಋತುಕಾಲಿಕ ನದಿಗಳನ್ನು ದಾಟಲು ಹಾಯ್ಗಡಗಳು ವ್ಯಾವಹಾರಿಕ ಆವಶ್ಯಕತೆಯಾಗಿವೆ. ಒಣ ಹವಾಮಾನದಲ್ಲಿ, ರಸ್ತೆಯ ಮೇಲಿನ ಕೊಚ್ಚು ಮರಳುಜಲ್ಲಿಯನ್ನು ಸದ್ದು ಮಾಡುತ್ತ ದಾಟುವ ಮೂಲಕ ಚಾಲಕರು ಹಾಯ್ಗಡದ ಬಗ್ಗೆ ಅರಿತುಕೊಳ್ಳುತ್ತಾರೆ. ಏರಿದ ನೀರಿನ ಸಮಯದಲ್ಲಿ ತುರ್ತು ವಾಹನಗಳ ಸಾಗಣೆಗೆ ರಸ್ತೆಯ ಮುಖ್ಯ ಮಾರ್ಗಕ್ಕೆ ದೂರದಲ್ಲಿ ಬೇಯ್ಲಿ ಸೇತುವೆಯನ್ನು ನಿರ್ಮಿಸಬಹುದು.

ನೀರು ಸಾಕಷ್ಟು ತೆಟ್ಟೆಯಾಗಿರುವ, ಆದರೆ ನದೀ ಪಾತ್ರದ ಮೇಲಿನ ವಸ್ತುವು ಭಾರೀ ವಾಹನಗಳನ್ನು ಹೊರಲಾರದ ಸ್ಥಳಗಳಲ್ಲಿ, ಕೆಲವೊಮ್ಮೆ ಮುಳುಗಿದ ಕಾಂಕ್ರೀಟ್ ನೆಲಹಾಸನ್ನು ನಿರ್ಮಿಸುವ ಮೂಲಕ ಹಾಯ್ಗಡಗಳನ್ನು ಸುಧಾರಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಹಲವುವೇಳೆ ವಾಹನಗಳು ಜಾರುವುದನ್ನು ತಡೆಯಲು ನದಿಯ ದಿಕ್ಕಿನ ಪಾರ್ಶ್ವದಲ್ಲಿ ಕಲ್ಲಂಚನ್ನು ಇರಿಸಲಾಗುತ್ತದೆ, ಏಕೆಂದರೆ ಪಾಚಿಯ ಬೆಳವಣಿಗೆಯು ಹಲವುವೇಳೆ ಚಪ್ಪಡಿಯನ್ನು ಬಹಳ ಜಾರುವಂತೆ ಮಾಡುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "End of the road for last traffic fords left on State Highway 1". Media statement. NZTA, Christchurch Regional Office. 28 December 2015. Retrieved 29 September 2010.
"https://kn.wikipedia.org/w/index.php?title=ಹಾಯ್ಗಡ&oldid=887300" ಇಂದ ಪಡೆಯಲ್ಪಟ್ಟಿದೆ