ಹಲೀಮ್
ಹಲೀಮ್ ಮಧ್ಯಪ್ರಾಚ್ಯ, ಮಧ್ಯ ಏಷ್ಯಾ, ಮತ್ತು ಭಾರತೀಯ ಉಪಖಂಡದಲ್ಲಿ ಜನಪ್ರಿಯವಾದ ಒಂದು ಸ್ಟ್ಯೂ. ಈ ಖಾದ್ಯವು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದಾದರೂ, ಇದು ಯಾವಾಗಲೂ ಗೋಧಿ ಅಥವಾ ಬಾರ್ಲಿ, ಮಾಂಸ, ಮತ್ತು ಕೆಲವೊಮ್ಮೆ ಬೇಳೆಗಳನ್ನು ಒಳಗೊಂಡಿರುತ್ತದೆ.
ಹಲೀಮ್ ಅನ್ನು ಗೋಧಿ, ಬಾರ್ಲಿ, ಮಾಂಸ (ಸಾಮಾನ್ಯವಾಗಿ ಗೋಮಾಂಸ ಅಥವಾ ಆಡಿನ ಮಾಂಸ ಅಥವಾ ಕೋಳಿಮಾಂಸವನ್ನು ಕೊಚ್ಚಿ), ಬೇಳೆಗಳು ಮತ್ತು ಸಂಬಾರ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಕೆಲವೊಮ್ಮೆ ಅಕ್ಕಿಯನ್ನೂ ಬಳಸಲಾಗುತ್ತದೆ. ಈ ಭಕ್ಷ್ಯವನ್ನು ಏಳರಿಂದ ಎಂಟು ಗಂಟೆಗಳವರೆಗೆ ನಿಧಾನವಾಗಿ ಬೇಯಿಸಲಾಗುತ್ತದೆ, ಪರಿಣಾಮವಾಗಿ ಪೇಸ್ಟ್‌ನಂಥ ಸ್ನಿಗ್ಧತೆ ಬರುತ್ತದೆ ಮತ್ತು ಸಂಬಾರ ಪದಾರ್ಥಗಳು, ಮಾಂಸ, ಬಾರ್ಲಿ ಮತ್ತು ಗೋಧಿಯ ಪರಿಮಳಗಳು ಚೆನ್ನಾಗಿ ಒಂದುಗೂಡಿರುತ್ತವೆ.
ಹಲೀಮ್ ಅನ್ನು ವರ್ಷದಾದ್ಯಂತ ಲಘು ಆಹಾರವಾಗಿ ಮಾರುಕಟ್ಟೆಗಳಲ್ಲಿ ಮಾರಲಾಗುತ್ತದೆ. ಇದನ್ನು ಮುಸ್ಲಿಮ್ ಹಿಜ್ರಿ ಕ್ಯಾಲೆಂಡರ್‌ನ ರಂಜಾನ್ ಮತ್ತು ಮುಹರ್ರಮ್ ತಿಂಗಳುಗಳಲ್ಲಿ ವಿಶ್ವದಾದ್ಯಂತ ವಿಶೇಷ ಖಾದ್ಯವಾಗಿ ತಯಾರಿಸಲಾಗುತ್ತದೆ.[೧] ಭಾರತದಲ್ಲಿ, ಹೈದರಾಬಾದ್‍ನಲ್ಲಿ ಹಲೀಮ್ ಅನ್ನು ರಂಜಾನ್ ತಿಂಗಳಿನಲ್ಲಿ ತಯಾರಿಸಲಾಗುತ್ತದೆ, ಮತ್ತು ವಿಶೇಷ ಕುರಿಯರ್ ಸೇವೆ ಮೂಲಕ ವಿಶ್ವದಾದ್ಯಂತ ಸಾಗಿಸಲಾಗುತ್ತದೆ. ಹಲೀಮ್ ಅನ್ನು ಸಾಂಪ್ರದಾಯಿಕವಾಗಿ ದೊಡ್ಡ, ಕಟ್ಟಿಗೆಯಿಂದ ಉರಿಸಲಾದ ಕಡಾಯಿಗಳಲ್ಲಿ ತಯಾರಿಸಲಾಗುತ್ತದೆ.
ಸಾಂಪ್ರದಾಯಿಕವಾಗಿ, ಹಲೀಮ್ ಅನ್ನು ಮೊದಲು ರಾತ್ರಿಯಿಡಿ ಗೋಧಿ, ಬಾರ್ಲಿ ಮತ್ತು ಬೇಳೆಯನ್ನು ನೆನಸಿಟ್ಟು ತಯಾರಿಸಲಾಗುತ್ತದೆ. ಕೊರ್ಮಾ ಎಂದು ಕರೆಯಲ್ಪಡುವ ಒಂದು ಖಾರದ ಮಾಂಸದ ರಸವನ್ನು ಮಾಂಸವು ಮೃದುವಾಗುವವರೆಗೆ ತಯಾರಿಸಲಾಗುತ್ತದೆ. ಗೋಧಿ, ಬಾರ್ಲಿ ಮತ್ತು ಬೇಳೆಯನ್ನು ಉಪ್ಪಿನ ನೀರಿನಲ್ಲಿ ಮೃದುವಾಗುವವರೆಗೆ ಬೇಯಿಸಲಾಗುತ್ತದೆ. ಬೆಂದ ಗೋಧಿ, ಬಾರ್ಲಿ ಮತ್ತು ಬೇಳೆಯನ್ನು ಆಮೇಲೆ ಮಾಂಸದ ರಸದೊಂದಿಗೆ ಭಾರದ ಸೌಟಿನಿಂದ ಪೇಸ್ಟ್‌ನಂಥ ಸ್ನಿಗ್ಧತೆ ಬರುವವರೆಗೆ ಮಿಶ್ರಣಮಾಡಲಾಗುತ್ತದೆ. ಸಂಪೂರ್ಣ ಕ್ರಿಯೆಗೆ ಮುಗಿಯಲು ಸುಮಾರು ೬ ಗಂಟೆ ಹಿಡಿಯುತ್ತದೆ. ಆದರೆ, ಹಲೀಮ್‍ನ ತಯಾರಿ ವಿಭಿನ್ನ ಪ್ರದೇಶಗಳಲ್ಲಿ ಬದಲಾಗುತ್ತದೆ.
ಹಲೀಮ್ ಅನ್ನು ಕತ್ತರಿಸಿದ ಪುದೀನಾ, ನಿಂಬೆ ರಸ, ಕೊತ್ತಂಬರಿ, ಕರಿದ ಈರುಳ್ಳಿ, ಕತ್ತರಿಸಿದ ಶುಂಠಿ ಅಥವಾ ಹಸಿ ಮೆಣಸಿನಕಾಯಿಯಿಂದ ಅಲಂಕರಿಸಿ ಬಡಿಸಬಹುದು. ಪಾಕಿಸ್ತಾನದ ಕೆಲವು ಪ್ರದೇಶಗಳಲ್ಲಿ, ಹಲೀಮ್ ಅನ್ನು ನಾನ್‍ನೊಂದಿಗೆ ಅಥವಾ ಯಾವುದೇ ಬಗೆಯ ಬ್ರೆಡ್ ಅಥವಾ ಅನ್ನದೊಂದಿಗೆ ತಿನ್ನಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Srinivas, M. "City in for flavours of Haleem". The Hindu. Retrieved 14 July 2015.