ಹಝರತ್ ತವಕ್ಕಲ್ ಮಸ್ತಾನ್ ದರ್ಗಾ

ಧಾರ್ಮಿಕ ಸ್ಥಳ

ಹಝರತ್ ತವಕ್ಕಲ್ ಮಸ್ತಾನ್ ದರ್ಗಾ, ಬೆಂಗಳೂರು ನಗರದ ಕಾಟನ್ ಪೇಟೆಯಲ್ಲಿರುವ ಸುಮಾರು ೨೦೦ ವರ್ಷಗಳ ಇತಿಹಾಸ ಹೊಂದಿರುವ ಇಸ್ಲಾಂನ ಸೂಫಿ ಪಂಥದ ಆರಾಧನಾ ಸ್ಥಳ. ಈ ದರ್ಗಾವನ್ನು ಬೆಂಗಳೂರು ನಗರದ ಅತ್ಯಂತ ಹಳೇಯ ಹಾಗೂ ದೊಡ್ಡದಾದ ದರ್ಗಾ ಎಂದು ಪರಿಗಣಿಸಲಾಗುತ್ತದೆ.

ಹಝರತ್ ತವಕ್ಕಲ್ ಮಸ್ತಾನ್ ದರ್ಗಾ
Hazrath Tawakkal Mosque.jpg
Basic information
Locationಕಾಟನ್ ಪೇಟೆ, ಬೆಂಗಳೂರು
Stateಕರ್ನಾಟಕ
Founderಹೈದರಾಲಿ
Funded byಹೈದರಾಲಿ
Completedಕ್ರಿ.ಶ. 1783

ಇತಿಹಾಸಸಂಪಾದಿಸಿ

ಕ್ರಿಸ್ತಶಕ ೧೮ನೇ ಶತಮಾನದ ಮಧ್ಯದಲ್ಲಿ ಬೆಂಗಳೂರು ಹೈದರಾಲಿಯ ಆಡಳಿತದಲ್ಲಿತ್ತು . ಕ್ರಿಸ್ತಶಕ ೧೫೩೭ರಲ್ಲಿ ಕೆಂಪೇಗೌಡರಿಂದ ಕಟ್ಟಲ್ಪಟ್ಟ ಮಣ್ಣಿನ ಕೋಟೆಯನ್ನು ಕಲ್ಲಿನಿಂದ ಮರು ನಿರ್ಮಿಸುವ ನಿರ್ಧಾರ ಹೈದರಾಲಿಯು ಕ್ರಿಸ್ತಶಕ೧೭೬೧ರಲ್ಲಿ ಕೈಗೊಂಡನು. ಈ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡವರಲ್ಲಿ ಮೂವರು ತಮ್ಮ ಸಂಬಳವನ್ನು ನಿರಾಕರಿಸಿದರು ಎಂಬ ವಿಷಯ ಹೈದರಾಲಿಗೆ ತಿಳಿಯಿತು. ಆಗ ಹೈದರಾಲಿಯ ಕಿಲ್ಲೆದಾರ ಇಬ್ರಾಹಿಂ ಖಾನನಲ್ಲಿ ಅವರ ಬಗ್ಗೆ ಮಾಹಿತಿಯನ್ನು ತಿಳಿದು ಹೇಳುವಂತೆ ಆದೇಶಿಸುವನು. ಇಬ್ರಾಹಿಂ ಖಾನನು ಅವರ ಬಗ್ಗೆ ವಿವಚಾರಿಸುವಾಗ ಕುಂಬಾರ ಪೇಟೆ ಮಸಿದಿಯ ಬಳಿ ಇರುವ ಸೂಫಿ ಸಂತರಾದ, ಹಝರತ್ ತವಕ್ಕಲ್ ಬಾಬಾ, ಹಝರತ್ ಟಿಪ್ಪೂ ಮಸ್ತಾನ್ ಹಾಗೂ ಮಾಣಿಕ್ ಮಸ್ತಾನ್ ಎಂದು ತಿಳಿದು ಬರುತ್ತದೆ. ಹೈದರಾಲಿಯು ಅವರಲ್ಲಿ ಸಂಬಳವನ್ನು ಪಡೆಯುವಂತೆ ವಿನಂತಿಸಿದಾಗ, ಆ ಮೂವರು ಉಪ್ಪಾರ ಪೇಟೆಯ ಬಳಿಯಲ್ಲಿ ಮಸೀದಿ ಕಟ್ಟಿಕೊಡುವಂತೆ ಕೇಳಿಕೊಳ್ಳುತ್ತಾರೆ. ಅದರ ಮೇರೆಗೆ ಹೈದರಾಲಿಯು ಮಸೀದಿ ಕಟ್ಟಿಕೊಡಲು ಒಪ್ಪುತ್ತಾನೆ. ಅದರಂತೆ ಕ್ರಿಸ್ತಶಕ ೧೭೭೭ ರಲ್ಲಿ ಹೈದರಾಲಿ ಆರಂಭಿಸಿದ ಈ ಮಸಿದಿಯ ನಿರ್ಮಾಣವನ್ನು ಕ್ರಿಸ್ತಶಕ ೧೭೮೩ರಲ್ಲಿ ಆತನ ಮಗ ಟಿಪ್ಪು ಸುಲ್ತಾನನು ಪೂರ್ಣಗೊಳಿಸಿದನು. ಕ್ರಿಸ್ತಶಕ ೧೭೭೭ರಲ್ಲಿ ತವಕ್ಕಲ್ ಬಾಬಾ ಇಲ್ಲಿ ನಿಧನ ಹೊಂದಿದರು ಎಂದು ಕಟ್ಟಡದ ಒಳಗೆ ಇರುವ ಸಮಾಧಿಯ ಮೇಲಿರುವ ಬರಹದಿಂದ ತಿಳಿದು ಬರುತ್ತದೆ[೧].

ವಿಶೇಷತೆಸಂಪಾದಿಸಿ

ಇಲ್ಲಿಯ ಒಂದು ವಿಶೇಷವೆಂದರೆ ಭಾವೈಕ್ಯದ ಸಂಕೇತವೆಂಬಂತೆ ಬೆಂಗಳೂರಿನಲ್ಲಿ ಪ್ರತಿವರ್ಷ ನಡೆಯುವ ಕರಗದ ಸಂದರ್ಭದಲ್ಲಿ ಕರಗದಾರಿಗಳು ಮೊದಲು ಈ ದರ್ಗಾಕ್ಕೆ ಬಂದು, ಅಲ್ಲಿ ಧೂಪಾರತಿ ಸ್ವೀಕರಿಸಿ ನಂತರ ನಗರದ ಪ್ರದಕ್ಷಿಣೆ ಹೊರಡುತ್ತಾರೆ. ಕರಗಧಾರಿಯಾಗುವ ವೀರ ಕುಮಾರನು ಕರಗೋತ್ಸವದ ಮೂರು ದಿನದ ಮುಂಚೆ ಇಲ್ಲಿನ ಮುಝವೀರ್ ಅಂದರೆ ಪೂಜಾರಿಗಳೊಂದಿದೆ ಲಿಂಬೆ ಹಣ್ಣನ್ನು ಪೂಜಿಸಿ ಪರಸ್ಪರ ಬದಲಾಯಿಸಿಕೊಳ್ಳುವುದು ವಾಡಿಕೆ[೨].

ಹರಕೆಗಳುಸಂಪಾದಿಸಿ

ಈ ದರ್ಗಾಕ್ಕೆ ಇಸ್ಲಾಂ ಧರ್ಮದವರಷ್ಟೇ ಅಲ್ಲದೇ ಇತರ ಧರ್ಮದವರೂ ಭೇಟಿ ನೀಡುತ್ತಾರೆ. ತಮ್ಮ ಕಷ್ಟಗಳು ದೂರಾಗಲು ಇಲ್ಲಿನ ಕಿಟಕಿಯ ಸರಳುಗಳಿಗೆ ಬೀಗ ಹಾಕಿ ಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆ. ಶುಕ್ರವಾರದಂದು ಕವ್ವಾಲಿ ಹಾಡಿ ದೇವರನ್ನು ಆರಾಧಿಸುವುದು ಇಲ್ಲಿನ ಸಂಪ್ರದಾಯ.

ಉಲ್ಲೇಖಗಳುಸಂಪಾದಿಸಿ

  1. ಎಕಾನಾಮಿಕ್ಸ್ ಟೈಮ್ಸ್ ಲೇಖನ
  2. ಡೆಕ್ಕನ್ ಹೆರಾಲ್ಡ್ ಲೇಖನ