ಸೂತಕ - ಮಾನವನ ಜನನ ಮರಣಾದಿ ಸಂದರ್ಭಗಳಲ್ಲಿ ಆಚರಿಸುವ ಸಂಪ್ರದಾಯ.

ವೈದಿಕರಲ್ಲಿಸಂಪಾದಿಸಿ

ಜಾತಿ ಸೂತಕ, ಜನನ ಸೂತಕ, ಪ್ರೇತಸೂತಕ, ಉಚ್ಛಿಷ್ಟ ಸೂತಕ, ಮರಣಸೂತಕ - ಇವು ಐದನ್ನು ವೈದಿಕರು ಅಂಗೀಕರಿಸುತ್ತಾರೆ. ಸೂತಕಾಚರಣೆ ಕಾಲದಲ್ಲಿ ಪೂಜಾದಿ ಪವಿತ್ರಕಾರ್ಯಗಳನ್ನು ವೈದಿಕರು ಮಾಡುವುದಿಲ್ಲ.

ವೀರಶೈವರಲ್ಲಿಸಂಪಾದಿಸಿ

ವೀರಶೈವ ದರ್ಶನಕಾರರು ಶಿವದೀಕ್ಷಾ ಯುಕ್ತರಾದ ಲಿಂಗವಂತರಿಗೆ ಈ ಸೂತಕಗಳಿಲ್ಲ ಎಂದು ಹೇಳಿದ್ದಾರೆ. ಏಕೆಂದರೆ ವೀರಶೈವನಿಗೆ ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಗಳ ಪೂಜಾನುಸಂಧಾನ ಪ್ರತಿನಿತ್ಯವೂ ಅಗತ್ಯ ಮತ್ತು ಅನಿವಾರ್ಯ ಎಂದು ವೀರಶೈವಾಗಮಗಳು ಹೇಳಿವೆ. ವೀರಶೈವರಿಗೆ ಶಿವಪೂಜಾವ್ರತ ಯಾವ ಕಾರಣದಿಂದಲೂ ಅನುಲ್ಲಂಘನೀಯವಾದುದರಿಂದ ಅವರಿಗೆ ಈ ಪಂಚಸೂತಕಗಳು ಪರಿಗ್ರಾಹ್ಯವಲ್ಲವೆಂದು ವಚನಕಾರರು ಹೇಳಿದ್ದಾರೆ. ಗಂಗೆಗೆ ಕಟ್ಟಿಲ್ಲ ಲಿಂಗಕ್ಕೆ ಮುಟ್ಟಿಲ್ಲ ಎಂಬ ಗಾದೆ ಮಾತನ್ನು ಗಮನಿಸಬಹುದು.

ಜನಪದದಲ್ಲಿಸಂಪಾದಿಸಿ

ಜನಪದದಲ್ಲಿರುವ ಸೂತಕದ ಕಲ್ಪನೆ ವಿಶಿಷ್ಟವಾದುದು. ಜನನ, ಮರಣ ಮತ್ತು ಹೆಣ್ಣು ಋತುಮತಿಯಾದ ಸಂದರ್ಭಗಳಲ್ಲಿ ಸೂತಕವನ್ನು ಆಚರಿಸಲಾಗುತ್ತದೆ. ಒಂದು ಕುಟುಂಬದಲ್ಲಿ ಈ ಯಾವುದೇ ಒಂದು ಘಟನೆ ಜರುಗಿದರೆ ಸೂತಕ ಸುತ್ತಿಕೊಳ್ಳುವುದೆಂದು ನಂಬಲಾಗುತ್ತದೆ. ಇದರ ನಿವಾರಣೆಯನ್ನು ಸೂತಕ ತೆಗೆಸಿಕೊಳ್ಳುವುದು ಎಂದು ಕರೆಯು ತ್ತಾರೆ. ಸೂತಕವಿರುವ ಅವಧಿಯಲ್ಲಿ ಯಾವುದೇ ಶುಭಕಾರ್ಯಗಳು ನಡೆಯುವಂತಿಲ್ಲ. ಮಾಂಸ ಭಕ್ಷಣೆ ನಿಷಿದ್ಧ. ಸಾಮಾನ್ಯವಾಗಿ ಸೂತಕ ತೆಗೆಸಿಕೊಳ್ಳುವ ದಿನ ಕುಟುಂಬದ ಎಲ್ಲರೂ ತಮ್ಮ ತಮ್ಮ ಮನೆಯನ್ನು ಗುಡಿಸಿ, ಸಾರಿಸಿ, ಪಾತ್ರೆಪಡಿಗ ಕಂಚುಮುಟ್ಟುಗಳನ್ನು ತೊಳಗಿ, ಬೆಳಗಿ, ಮಿಂದು ಮಡಿಯುಟ್ಟು ಸಿದ್ಧರಿರುತ್ತಾರೆ. ಒಕ್ಕಲು ಅಯ್ಯನೋರು ಅಥವಾ ದಾಸಯ್ಯ ಬಂದು ಮನೆದೇವರನ್ನು ಪೂಜಿಸಿ, ಮನೆಗೆ ಹಾಗೂ ಮನೆಮಂದಿಗೆ ತೀರ್ಥ ಪ್ರೋಕ್ಷಿಸಿ ಗೌರವಕಾಣಿಕೆ ಪಡೆದು ಹೋಗುತ್ತಾನೆ. ಅನಂತರ ಮನೆಯವರು ಸಿಹಿಬಾಯಿ (ಸಿಹಿಊಟ) ಅಡುಗೆ ಉಣ್ಣುವುದ ರೊಂದಿಗೆ ಸೂತಕ ಪರಿಹಾರವಾಯಿತೆಂದು ಭಾವಿಸುತ್ತಾರೆ. ಸಾವಿನ ಸೂತಕವನ್ನು ತಿಥಿಯ ಆಚರಣೆಯ ಮೂಲಕ ನಿವಾರಿಸಿಕೊಳ್ಳಲಾಗುತ್ತದೆ. ಜನನ ಸಂದರ್ಭದ ಸೂತಕವನ್ನು ಮಗುವಿಗೆ ನಾಮಕರಣ ಮಾಡುವ ಸಂದರ್ಭದಲ್ಲಿ ನಿವಾರಿಸಿಕೊಳ್ಳಲಾಗುತ್ತದೆ. ಋತುಮತಿಯಾದ ಹೆಣ್ಣಿನಿಂದ ಬರುವ ಸೂತಕವನ್ನು ಗುಡ್ಲುಕೂಡಿಸುವಶಾಸ್ತ್ರ ಮಾಡುವ ಮೂಲಕ ನಿವಾರಿಸಿಕೊಳ್ಳಲಾಗುತ್ತದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಸೂತಕ&oldid=798525" ಇಂದ ಪಡೆಯಲ್ಪಟ್ಟಿದೆ