ಸುಬ್ಬರಾಯ ಶಾಸ್ತ್ರಿ
ಮಹರ್ಷಿ ಪಂಡಿತ್ ಶ್ರೀ ಆನೇಕಲ್ ಸುಬ್ಬರಾಯ ಶಾಸ್ತ್ರಿಗಳು ಕ್ರಿ.೧೮೬೬ರಲ್ಲಿ ಜನಿಸಿದರು. ಇವರ ಜನ್ಮಸ್ಥಳ ಈಗಿನ ಹೊಸೂರು ತಾಲ್ಲೂಕಿನ ಬಳಿ ಇರುವ, ಸಣ್ಣ ಹಳ್ಳಿ ತೋಗೇರಿ ಅಗ್ರಹಾರ. ಇದು ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಗೆ (ಹಿಂದೆ ಧರ್ಮಪುರಿ ಜಿಲ್ಲೆ) ಸೇರಿದೆ. ಸುಬ್ಬರಾಯ ಶಾಸ್ತ್ರಿಗಳ ಪೂರ್ವಜರು ಇಲ್ಲಿ ನೆಲೆಸಿದ್ದರು.
ಸುಬ್ಬರಾಯ ಶಾಸ್ತ್ರಿ | |
---|---|
ಜನನ | ಆನೇಕಲ್ ಬೆಂಗಳೂರು. |
ರಾಷ್ಟ್ರೀಯತೆ | ಭಾರತೀಯ |
ವಿಷಯ | ಸುಬ್ಬರಾಯ ಶಾಸ್ತ್ರಿ |
ಬಾಲ್ಯ
ಬದಲಾಯಿಸಿಇವರ ತಂದೆ ಕೃಷ್ಣಶಾಸ್ತ್ರಿಗಳು, ತಾಯಿ ಲಕ್ಷ್ಮಮ್ಮ. ಈ ದೈವ ಭಕ್ತ ದಂಪತಿಗಳ ಹಿರಿಯ ಮಗ ಸುಬ್ಬರಾಯ ಶಾಸ್ತ್ರಿ. ಇವರಿಗೆ ಮೂವರು ಸಹೋದರರು ಹಾಗೂ ಇಬ್ಬರು ಸಹೋದರಿಯರು ಸಹ ಇದ್ದರು. ಸುಬ್ಬರಾಯ ಶಾಸ್ತ್ರಿಗಳ ಐದನೇ ವಯಸ್ಸಿಗೆ ಉಪನಯನ ಮಾಡಿಸಿದರು. ಅಲ್ಲದೆ, ಎಂಟನೇ ವಯಸ್ಸಿಗೆ ಐದು ವರ್ಷದ ನಂಜಮ್ಮನೊಂದಿಗೆ ಸಂಪ್ರದಾಯಿಕವಾಗಿ ಮದುವೆ ಮಾಡಿಸಿದರು. ಸುಬ್ಬರಾಯಶಾಸ್ತ್ರಿಗಳ ತಂದೆಯವರು ಮಾಡಿದ ಸಾಲಗಳನ್ನು ತೀರಿಸಲು ತಮಗಿದ್ದ ಎಲ್ಲಾ ಆಸ್ತಿಯನ್ನು ಮಾರಿ ಭೀಕ್ಷೆ ಬೇಡುವಂತಾಯಿತು. ಶಾಸ್ತ್ರಿಗಳು ತಮ್ಮ ಹದಿಮೂರನೇ ವಯಸ್ಸಿಗೆ, ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದರು. ಅಲ್ಲದೇ ತಮ್ಮ ಐದು ಜನ ಒಡಹುಟ್ಟಿದವರ ಪಾಲನೆ ಇವರ ಹೆಗಲೇರಿತು. ರೋಗ ರುಜಿನಗಳು ಹಾಗೂ ಹಸಿವಿನಿಂದ ಒಡಹುಟ್ಟಿದವರಲ್ಲಿ ಇಬ್ಬರು ಸಾವನಪ್ಪಿದರು. ಕಷ್ಟ ಕಾರ್ಪಣ್ಯಗಳು ಹೆಚ್ಚಾದವು. ಜೊತೆಗೆ ಶಾಸ್ತ್ರಿ ಅವರಿಗೆ ಕಜ್ಜಿ ಆವರಿಸಿ ವ್ರಣಗಳಾದವು. ಅವಮಾನಗೊಂಡು ಜೀವನದಿಂದ ಬೇಸತ್ತ ಶಾಸ್ತ್ರಿಗಳು ಉಳಿದ ಸಹೋದರರಿಂದ ದೂರವಾದರು.
ದಿವ್ಯ ಅನುಭವ
ಬದಲಾಯಿಸಿಕೋಲಾರ ಜಿಲ್ಲೆಯ ಆವನಿಬೆಟ್ಟ ತಲುಪಿ ಒಂಭತ್ತು ವರ್ಷಗಳ ಕಾಲ ಪ್ರಕೃತಿಯೊಂದಿಗೆ ಜೀವಿಸುತ್ತಾರೆ. ಪವಾಡವೆಂಬಂತೆ, ಒಬ್ಬ ತೇಜಸ್ವಿ ಮಹಾಪುರುಷರಿಂದ ಚಿಕಿತ್ಸೆಗೊಂಡು ಗುಣಮುಖರಾಗುತ್ತಾರೆ. ಆ ಋಷಿಗಳಿಂದ, ವಿಶೇಷವಾಗಿ ಭೌತಿಕ ಶಾಸ್ತ್ರದ ಬಗ್ಗೆ ಜ್ಞಾನ ಪಡೆಯುತ್ತಾರೆ. ಜ್ಞಾನ ಪ್ರಭೆಯ ದಿವ್ಯ ದರ್ಶನದಿಂದ ವೇದ ವಿಜ್ಞಾನದ ಬಗ್ಗೆ, ಅದರಲ್ಲೂ, ಭೌತ ವಿಜ್ಞಾನದ ತತ್ವಗಳಬಗ್ಗೆ, ಹಾಗು, ಪಂಚಭೂತಗಳ ಬಗ್ಗೆ ಅಪಾರ ಜ್ಞಾನ ಪಡೆಯುತ್ತಾರೆ. ಮುಂದೆ ನಗರವನ್ನು ಸೇರಿ, ನಾಡಿಗೆ ಜ್ಞಾನದ ಧಾರೆಯೆರೆಯುತ್ತಾರೆ. ವಿಶೇಷವೆಂದರೆ ತಮ್ಮ ಬಾಲ್ಯದಲ್ಲಿ ಯಾವುದೇ ಶಾಲೆಗೆ ಹೋಗದೆ ಅಕ್ಷರಾಭ್ಯಾಸವೂ ಇಲ್ಲದೆ ಅನಕ್ಷರಸ್ಥರಾದ ಸುಬ್ಬರಾಯಶಾಸ್ತ್ರಿಗಳು, ಗುರುಕಠಾಕ್ಷದಿಂದ, ವಿಶೇಷ ಜ್ಞಾನಿಯಾಗಿ ಪರಿವರ್ತನೆಹೊಂದಿ ವಿಮಾನ ನಿರ್ಮಾಣದ, ವೈಮಾನಿಕ ಶಾಸ್ತ್ರದ ಬಗ್ಗೆ ವಿವರಿಸುವುದು ವಿಸ್ಮಯವೇ ಸರಿ.
ಸುಬ್ಬರಾಯ ಶಾಸ್ತ್ರಿಗಳ ಅಸಾಧಾರಣ ಜ್ಞಾನ ಸಂಪತ್ತಿಗೆ ಬೆರಗಾದವರಲ್ಲಿ ಹಾಗೂ ಸಂಪರ್ಕಕ್ಕೆ ಬಂದವರಲ್ಲಿ ಕೆ. ಪಿ. ಪುಟ್ಟಣ್ಣ ಚೆಟ್ಟಿ, ಕೃಷ್ಣಮೂರ್ತಿ, ನಿಟ್ಟೂರು ಶ್ರೀನಿವಾಸಮೂರ್ತಿ, ಸರ್.ಎಂ.ವಿಶ್ವೇಶ್ವರಯ್ಯ ಮುಂತಾದವರಿದ್ದಾರೆ. ಶ್ರೀ.ಬಿ.ಸೂರ್ಯನಾರಾಯಣರಾವ್ ಅವರು ಭೌತಿಕ ಕಲಾನಿಧಿ ಎಂಬ ನಿಯತಕಾಲದಲ್ಲಿ ಶಾಸ್ತ್ರಿಗಳ ಬಗ್ಗೆ ಪರಿಚಯ ಲೇಖನವನ್ನು ೧೯೧೧ರಲ್ಲಿ ಪ್ರಕಟಿಸಿದ್ದಾರೆ.
ಗಣ್ಯರ ಬೇಟಿ
ಬದಲಾಯಿಸಿಸುಬ್ಬರಾಯ ಶಾಸ್ತ್ರಿಗಳ ಪಾಂಡಿತ್ಯ ಪ್ರತಿಭೆ ಮೈಸೂರು ಸಂಸ್ಥಾನದಿಂದ ಮುಂಬಯಿಗೂ ಹರಡುತ್ತದೆ. ಮುಂಬಯಿ ನಗರದ ಬಾಬುಭಾಯ್ ಈಶ್ವರದಾಸ್ ಇಚ್ಛಾರಾಮ್ ರವರು ನೆರವು ನೀಡಿ, ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಡುತ್ತಾರೆ. ಅದಾಗಲೇ ವಿಮಾನ ನಿರ್ಮಾಣದ ಪ್ರಯೋಗಗಳಲ್ಲಿ ಆಸಕ್ತಿ ಹೊಂದಿದ್ದ ತಾಲ್ಪಡೆ ದಂಪತಿಗಳೊಂದಿಗೆ ಸೇರಿ ಚರ್ಚಿಸಿ ಕ್ರಿ.ಶ.೧೮೯೫ರಲ್ಲಿ 'ಮಾರುತ ಸಖ' ಎಂಬ ಪ್ರಥಮ ಪ್ರಯೋಗ ವಿಮಾನದ ಹಾರಾಟವನ್ನು ಯಶಸ್ವಿಯಾಗಿ ಸಾಧಿಸಿದ್ದಾರೆ. ಮುಂಬಯಿನಲ್ಲಿ ನಡೆದ ಪತ್ರಿಕಾಗೋಷ್ಠಿಗಳ ವರದಿಗಳ ವಿವರ ಮೇಲುಕೋಟೆ ಸಂಸ್ಕೃತ ಅಕಾಡೆಮಿಯ ಶ್ರೀಲಕ್ಷ್ಮೀ ತಾತಾಚಾರ್ಯರ ಸಂಗ್ರಹದಲ್ಲಿದೆ. ಮಾರುತಸಖದ ಬಗ್ಗೆ ಲಿಖಿತ ದಾಖಲೆಗಳು ಲಭ್ಯವಿದೆ. ಲಂಡನ್ನಿನ ಸುದ್ದಿ ಪತ್ರಿಕೆಯೊಂದರಲ್ಲಿಯೂ ವಿವರ ದಾಖಲಾಯಿತು. ಆ ಲೇಖನದಲ್ಲಿ ಮೊದಲ ಸ್ವದೇಶಿ ವಿಮಾನವನ್ನು ಹಾರಿಸಿದ ಕೀರ್ತಿ ಭಾರತೀಯರದ್ದಾಗಿದೆ.[೧] ಹಾಗೆ, ಆ ಲೇಖನದಲ್ಲಿ, ವಿಜ್ಞಾನಿ ದಂಪತಿಗಳಾದ ತಾಲ್ಪಡೆಯವರ ಶ್ರಮವನ್ನು ಕೊಂಡಾಡಲಾಗಿದೆ. ೧೯೫೨ರಲ್ಲಿ 'ವಂದೇ ಮಾತರಂ ' ಮರಾಠಿ ದೈನಿಕದಲ್ಲಿ ಹಾಗೂ ಸೆಪ್ಟಂಬರ್ ೧೯೫೨ ಮರಾಠಿ ಸಾಪ್ತಹಿಕ 'ವಿವಿಧ ವೃತ್' ಎಂಬ ಪತ್ರಿಕೆಯಲ್ಲಿಯೂ ಸಹ ವಿವಿರವಾಗಿ ಬರೆಯಲಾಗಿದೆ. ಪಾಟ್ನದ ಪತ್ರಿಕೆ 'ಸರ್ಚ್ ಲೈಟ್' ಆವೃತ್ತಿಯಲ್ಲಿ ಮಾರುತ ಸಖದ ಸವಿಸ್ತಾರದ ಲೇಖನವಿದೆ. ಮಾರುತಸಖನ ಬಗ್ಗೆ ವಿವಿರವಾಗಿ ಬರೆದ ವೇಧ ವಿಜ್ಞಾನ ಮಹಾಪೀಠ ತನ್ನ ಕೃತಿಯಲ್ಲಿ ವಿವಿರ ದಾಖಲಿಸಿದೆ. ಕೇಸರಿ ದಿನಪತ್ರಿಕೆಯಲ್ಲಿ ಪೂನಾದ ಡಿ.ಬಿ.ಬಿ.ಗೋವಿಂದೆ ಎಂಬುವವರು ಮಾರುತಸಖನ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ ಆರ್ಗಾನೈಸರ್ ಎಂಬ ನಿಯತಕಾಲಿಕಾದಲ್ಲಿ ಅಕ್ಟೋಬರ್ ೬, ೧೯೫೨ರ ಸಂಚಿಕೆಯಲ್ಲಿ ಈ ಬಗ್ಗೆ ಉಲ್ಲೇಖವಿದೆ.
ಭೌತಿಕ ಶಾಸ್ತ್ರ
ಬದಲಾಯಿಸಿಮುಂಬಯಿ ನಗರದಲ್ಲಿ ಇದ್ದಾಗ ಸುಬ್ಬರಾಯಶಾಸ್ತ್ರಿಗಳನ್ನು ಭೇಟಿಯಾದ ಅನೇಕ ಪ್ರಮುಖರಲ್ಲಿ ಖ್ಯಾತ ವಿಜ್ಞಾನಿ ಸರ್.ಜಗದೀಶ್ ಚಂದ್ರಬೋಸ್ ಒಬ್ಬರು. ಇಂತಹ ಪ್ರಖ್ಯಾತ ವಿಜ್ಞಾನಿ ಸುಬ್ಬರಾಯಶಾಸ್ತ್ರಿಗಳನ್ನು ಭೇಟಿ ಮಾಡಿ ಭೌತ ಶಾಸ್ತ್ರದಲ್ಲಿ ತಾವು ಗಳಿಸಿದ ಅಪಾರ ಜ್ಞಾನವನ್ನು ಶಾಸ್ತ್ರಿಗಳೊಂದಿಗೆ ಚರ್ಚಿಸಿ ಕುತೂಹಲ ತಣಿಸಿಕೊಂಡು ಹಾಗೂ ತಮ್ಮ ಮುಂದಿನ ಸಂಶೋಧನೆಗಳು, ಭೌತಿಕ ಶಾಸ್ತ್ರದ ಬಗ್ಗೆ ರಚನಾತ್ಮಕ ಸಲಹೆ ಸೂಚನೆಗಳನ್ನು ಪಡೆಯುತ್ತಾರೆ. ಸುಬ್ಬರಾಯಶಾಸ್ತ್ರಿಗಳ ಸಂಪರ್ಕದಿಂದ ಸಹಜವಾಗಿ ಜಗದೀಶ್ ಚಂದ್ರ ಬೋಸರಲ್ಲಿ ಕುತೂಹಲ ಉಂಟಾಗಿದೆ. ಶಾಸ್ತ್ರಿಗಳ ಜೀವನ ಕಥೆಯನ್ನು ನೀಡುವಂತೆ ಮನವಿ ಮಾಡಿದರು. ಸುಬ್ಬರಾಯ ಶಾಸ್ತ್ರಿಗಳು ಪ್ರಚಾರ ಪ್ರಿಯತೆಯಿಂದ ದೂರ ಉಳಿದವರು. ಆದರೆ ಪ್ರಖ್ಯಾತ ವಿಜ್ಞಾನಿಗಳಾದ ಜಗದೀಶ ಚಂದ್ರಬೋಸರ ಮನವಿಗೆ ಮನಸೋತು ಬೆಂಗಳೂರಿಗೆ ಹಿಂತಿರುಗಿದ ಬಳಿಕ ತಮ್ಮ ಆತ್ಮಕಥನವನ್ನು ಲಿಖಿತ ರೂಪದಲ್ಲಿ ದಾಖಲಿಸಿ ಆಂಗ್ಲ ಭಾಷೆಗೆ ಜಿ.ವೆಂಕಟಾಚಲಶರ್ಮಾ ಅವರ ನೆರವಿನಿಂದ ಭಾಷಾಂತರಿಸಿದರು. ಮುಂಬಯಿಯಲ್ಲಿದ್ದ ತಮ್ಮ ಮಿತ್ರರಾದ ಬಾಬುಭಾಯ್ ಈಶ್ವರದಾಸ್ ಇಚ್ಛಾರಾಮ್ ಮೂಲಕ ಕೋಲ್ಕತ್ತಗೆ ಕಳುಹಿಸಿಕೊಟ್ಟರು. ಜಗದೀಶ್ ಚಂದ್ರಬೋಸ್ ಅವರು ಶಾಸ್ತ್ರಿ ಅವರ ಜ್ಞಾನ ಸಂಪತ್ತು, ಸ್ವಭಾವ, ಸೌಜನ್ಯಗಳಿಗೆ ಮಾರುಹೋಗಿರುತ್ತಾರೆ.[೨] ಸುಬ್ಬರಾಯ ಶಾಸ್ತ್ರಿಗಳು ಬೆಂಗಳೂರು ಜಿಲ್ಲೆಯ ಆನೇಕಲ್ ನಲ್ಲಿ ಸುಮಾರು ಇಪ್ಪತೈದು ವರ್ಷಗಳ ಕಾಲ (೧೮೯೦ ರಿಂದ ೧೯೧೫) ಜೀವಿಸಿದ್ದರು. ಇವರ ಜ್ಞಾನಕ್ಕೆ, ಕಾರ್ಯಕ್ಕೆ ಸಲ್ಲಬೇಕಾದ ಮನ್ನಣೆ, ಗೌರವ ದೊರೆಯದಿರುವುದು ವಿಷಾಧನೀಯ. ವೈಮಾನಿಕ ಶಾಸ್ತ್ರಕ್ಕೆ ಸುಬ್ಬರಾಯ ಶಾಸ್ತ್ರಿಗಳ ಕೊಡುಗೆ ಅಪಾರ. ಅವರ ನೆನಪಿಗೆ, ಸ್ಮಾರಕ ನಿರ್ಮಾಣ, ಹಸ್ತಪ್ರತಿಗಳ ಸಂಗ್ರಹ, ಪ್ರಕಟಣೆ ಇನ್ನಿತರ ಕಾರ್ಯಗಳ ಮೂಲಕ ಗೌರವ ಸಲ್ಲಿಸೋಣ.
ಆಧಾರ
ಬದಲಾಯಿಸಿ- ದ ಆಟೋಬಯೋಗ್ರಫಿ ಆಫ್ ಮಹರ್ಷಿ ಪಂಡಿತ್ ಟಿ.ಸುಬ್ಬರಾಯಶಾಸ್ತ್ರಿ
- ಮಾರುತ ಸಖ - ಜಗನ್ನಾಥ್ ರಾವ್ ಬಹುಳೆ, ಆನೇಕಲ್
ಹೊರಗಿನ ಸ೦ಪರ್ಕ
ಬದಲಾಯಿಸಿ- http://cgpl.iisc.ernet.in/site/Portals/0/Publications/ReferedJournal/ACriticalStudyOfTheWorkVaimanikaShastra.pdf
- https://books.google.co.in/books?id=vZmSAwAAQBAJ&pg=PT538&lpg=PT538&dq=anekal+subbaraya+shastri+in+kannada&source=bl&ots=Ru1nfU5_sm&sig=p6zqB8Ut-ZHSDbJ-xls9m_yQCmU&hl=en&sa=X&ved=0CDwQ6AEwBWoVChMIhMrw1YnqxwIVxm2OCh2eOAL-#v=onepage&q=anekal%20subbaraya%20shastri%20in%20kannada&f=false
- http://vaimanika.com/VymanikaShastraRediscovered/VSR.html
ಉಲ್ಲೇಖಗಳು
ಬದಲಾಯಿಸಿ- ↑ ಸುಬ್ಬರಾಯ ಶಾತ್ರಿಯವರ ವೈಮಾನಿಕ ಶಾಸ್ತ್ರದ ಮರುಆವಿಷ್ಕಾರ http://vaimanika.com/VymanikaShastraRediscovered/VSR.html
- ↑ ಭೌತಶಾಸ್ತ್ರಕ್ಕೆ, ಸುಬ್ಬರಾಯ ಶಾಸ್ತ್ರಿಗಳ ಕೊಡುಗೆ http://cgpl.iisc.ernet.in/site/Portals/0/Publications/ReferedJournal/ACriticalStudyOfTheWorkVaimanikaShastra.pdf