ಕಮ್ಯೂನಿಸಮ್

(ಸಾಮ್ಯವಾದ ಇಂದ ಪುನರ್ನಿರ್ದೇಶಿತ)

ಕಮ್ಯೂನಿಸಮ್ ಅಥವಾ ಕಮ್ಯನಿಸಂ ಅಥವಾ ಸಮತಾವಾದವು : ಎಲ್ಲ ಸ್ವತ್ತೂ ಸಮುದಾಯಕ್ಕೆ ಸೇರಿದುದೆಂದೂ ಪ್ರತಿಯೊಬ್ಬ ವ್ಯಕ್ತಿಯೂ ಶಕ್ತ್ಯನುಸಾರವಾಗಿ ದುಡಿದು ಆವಶ್ಯಕತೆಗೆ ಅನುಸಾರವಾಗಿ ಪ್ರತಿಫಲ ಪಡೆಯಬೇಕೆಂದೂ ಪ್ರತಿಪಾದಿಸುವ ತತ್ತ್ವ.ಮಾರ್ಕ್ಸ್ ಮತ್ತು ಎಂಗೆಲ್ಸ್‌ ರಿಂದ ಪ್ರಪ್ರಥಮವಾಗಿ ಶಾಸ್ತ್ರೀಯವಾಗಿ ಪ್ರತಿಪಾದಿತವಾದ ಈ ತತ್ತ್ವಕ್ಕೆ ವೈಜ್ಞಾನಿಕ ಸಮಾಜವಾದವೆಂದೂ ಹೆಸರಿದೆ.

ಆರಂಭಿಕ ಕಮ್ಯೂನಿಸಂ

ಬದಲಾಯಿಸಿ

19ನೆಯ ಶತಮಾನದ ಪುರ್ವಾರ್ಧದ ಹೊತ್ತಿಗೆ ಜನರಿಗೆ ಸಮಾಜವಾದವೆಂಬ ಹೆಸರೂ ಅದರ ಸ್ವರೂಪವೂ ಪರಿಚಯವಾಗಿದ್ದುವು. ಆದರೂಮಾರ್ಕ್ಸ್ ಮತ್ತು ಎಂಗೆಲ್ಸ್‌ರು ಸಮಾಜವಾದವನ್ನು ಸಮಾಜವಾದವೆಂದೇ ಕರೆಯದೆ ಕಮ್ಯೂನಿಸಂ ಎಂದು ಕರೆದುದಕ್ಕೆ ಕಾರಣವೂ ಇತ್ತು. 1848ರಲ್ಲಿ ಪ್ರಕಟಿಸಿದ ಕಮ್ಯೂನಿಸ್ಟ್‌ ಪ್ರಣಾಳಿಕೆಯ ಇಂಗ್ಲಿಷ್ ಆವೃತ್ತಿಗೆ 1888ರಲ್ಲಿ ಎಂಗೆಲ್ಸ್‌ ಬರೆದ ಮುನ್ನುಡಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾನೆ;ನಾವು ಇದನ್ನು ಸಮಾಜವಾದಿಗಳ ಪ್ರಣಾಳಿಕೆ ಎಂದು ಕರೆಯಲು ಸಾಧ್ಯವಿರಲಿಲ್ಲ. 1847ರ ಹೊತ್ತಿಗೆ ಒಂದು ಕಡೆ ಸಮಾಜವಾದಿಗಳೆಂದು ಹೇಳಿಕೊಳ್ಳುವ ಭಾವನಾವಾದಿಗಳ ಗುಂಪಿಗೆ ಸೇರಿದ ತಂಡಗಳಿದ್ದುವು-ಇಂಗ್ಲೆಂಡಿನ ಓವೆನ್ನ ಹಿಂಬಾಲಕರೂ ಫ್ರಾನ್ಸಿನ ಫೂರ್ಯೇನ ಹಿಂಬಾಲಕರೂ ಇಂಥವರು. ಈ ಎರಡು ತಂಡಗಳೂ ಆಗಲೇ ಕೇವಲ ಬೋಧಕ ಗುಂಪುಗಳಾಗಿ ಕ್ಷೀಣಿಸುತ್ತ ಕೊನೆಯುಸಿರು ಎಳೆಯುತ್ತ ಇದ್ದುವು. ಇನ್ನೊಂದು ಕಡೆ ಕಾರ್ಮಿಕ ವರ್ಗದೊಡನೆ ಯಾವ ಸಂಪರ್ಕವೂ ಇಲ್ಲದಿದ್ದ, ಬಂಡವಾಳಕ್ಕಾಗಲೀ ಲಾಭಕ್ಕಾಗಲೀ ಯಾವ ಚ್ಯುತಿಯೂ ಇಲ್ಲದ ರೀತಿಯಲ್ಲಿ ಸಮಾಜದ ಕುಂದುಕೊರತೆಗಳನ್ನು ವಿದ್ಯಾವಂತರ ಬೆಂಬಲದಿಂದ ಗುಣಪಡಿಸಬಲ್ಲೆವೆಂದು ಹೇಳುತ್ತಿದ್ದ ಹಲವು ಬಗೆಯ ಸಮಾಜ ಸುಧಾರಕರ ವೇಷಧಾರಿ ಗುಂಪುಗಳಿದ್ದವು. ಆದರೆ ಕೇವಲ ರಾಜಕೀಯ ಕ್ರಾಂತಿಯ ಮಿತಿಯನ್ನು ಅರಿತಿದ್ದ ಮತ್ತು ಸಂಪುರ್ಣವಾಗಿ ಸಮಾಜದ ಬದಲಾವಣೆಯ ಆವಶ್ಯಕತೆಯನ್ನು ಘೋಷಿಸಿದ್ದ ಕಾರ್ಮಿಕ ವರ್ಗದ ಕೆಲವರು ಮಾತ್ರ ಕಮ್ಯೂನಿಸ್ಟ್‌ ಎಂದು ಕರೆದುಕೊಂಡಿದ್ದರು. ನೋಡುವುದಕ್ಕೆ ಇದು ಒರಟಾದ, ಸೂಕ್ಷ್ಮವಲ್ಲದ, ಸುಲಭ ಸಹಜವೇದ್ಯವೆನಿಸುವಂಥ ಕಮ್ಯೂನಿಸ್ಟ್‌ ಪಂಥ. ಆದರೂ ಇದು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದ್ದಲ್ಲದೆ, ಕಾರ್ಮಿಕ ವರ್ಗದಲ್ಲಿ ಪ್ರವೇಶಿಸಿ, ಫ್ರಾನ್ಸಿನಲ್ಲಿ ಕ್ಯಾಬೇ, ಜರ್ಮನಿಯಲ್ಲಿ ವೈಟಿಲಿಂಗ್ ಮೊದಲಾದವರ ಭಾವನಾಸಮಾಜವಾದಕ್ಕೆ ದಾರಿಮಾಡಿತ್ತು. ಹೀಗಾಗಿ 1847ರ ಹೊತ್ತಿಗೆ ಸಮಾಜವಾದ ಮಧ್ಯಮವರ್ಗದ ಚಳವಳಿಯಾಯಿತು. ಕಮ್ಯೂನಿಸಂ ಕಾರ್ಮಿಕ ವರ್ಗದ ಚಳವಳಿ; ವಾಸ್ತವವಾಗಿ ಯುರೋಪ್ ಖಂಡದಲ್ಲಿ ಸಮಾಜವಾದ ಸ್ವಲ್ಪಮಟ್ಟಿಗಾದರೂ ಸಂಭಾವಿತ ಚಳವಳಿಯಾಗಿದ್ದರೆ, ಕಮ್ಯೂನಿಸಂ ಮಾತ್ರ ಇದಕ್ಕೆ ಪ್ರತಿಯಾಗಿತ್ತು. ಕಾರ್ಮಿಕ ವರ್ಗದ ವಿಮೋಚನೆ ಕಾರ್ಮಿಕ ವರ್ಗದವರಿಂದ ಮಾತ್ರವೇ ಸಾದ್ಯ ಎಂಬುದೇ ಮೊದಲಿನಿಂದಲೂ ನಮ್ಮ ನಂಬಿಕೆಯಾಗಿತ್ತು. ಆದ್ದರಿಂದ ಈ ಎರಡು ಹೆಸರುಗಳಲ್ಲಿ ಯಾವುದನ್ನು ನಾವು ಅಂಗೀಕರಿಸಬೇಕೆನ್ನುವುದರಲ್ಲಿ ಸಂದೇಹವೇ ಇರಲಿಲ್ಲ; ಅದೂ ಅಲ್ಲದೆ, ಇದನ್ನು ನಿರಾಕರಿಸುವುದಕ್ಕೂ ನಾವು ಇಚ್ಛಿಸಲಿಲ್ಲ.

 
Countries of the world now (red) or previously (orange) having nominally Marxist–Leninist governments

ಹೀಗೆ ಕಮ್ಯೂನಿಸಂ ಎಂಬ ನಾಮಾಂಕಿತದಿಂದ ಮಾರ್ಕ್ಸ್, ಎಂಗೆಲ್ಸರು ತಮ್ಮದೇ ಆದ ಹೊಸ ರೂಪದ ಸಮಾಜವಾದವನ್ನು ಕಮ್ಯೂನಿಸಂ ಎಂದು ಕರೆದರಲ್ಲದೆ ಅದೊಂದು ಮಾತ್ರ ವೈಜ್ಞಾನಿಕ ಸಮಾಜವಾದವೆಂದು ಹೇಳಿದರು. ಈ ಪ್ರಣಾಳಿಕೆಯ ಪ್ರಕಟಣೆ ವಿಶ್ವದ ಒಂದು ಮುಖ್ಯ ಘಟನೆ, ಸಮಾಜವಾದದ ತತ್ತ್ವ ಪರಂಪರೆಯಲ್ಲಿ ಇದಕ್ಕೊಂದು ವಿಶಿಷ್ಟಸ್ಥಾನವಿದೆ. ಈ ಪ್ರಣಾಳಿಕೆಯಲ್ಲಿ ಉಕ್ತವಾಗಿರುವ ಸೂತ್ರಗಳನ್ನೂ ಇವುಗಳ ವ್ಯಾಖ್ಯಾನರೂಪವಾಗಿ ಮಾಕ್ರ್ಸ್‌-ಎಂಗೆಲ್ಸ್‌ ಮತ್ತು ಅವರ ಅನುಯಾಯಿಗಳು ರಚಿಸಿರುವ ಇತರ ಗ್ರಂಥಗಳನ್ನೂ ಹೆರೆನಂಬಿ ಅವನ್ನು ಅನುಸರಿಸುವವರು ಕಮ್ಯೂನಿಸ್ಟರೆನಿಸಿಕೊಂಡಿದ್ದಾರೆ. ಅದರಲ್ಲಿ ಉದಾಹರಿಸಿರುವ ತತ್ತ್ವಗಳನ್ನು ವಿಶದಪಡಿಸುವ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮಾಕ್ರ್ಸ್‌-ಎಂಗೆಲ್ಸ್‌ ರ ತತ್ತ್ವಗಳನ್ನು ಅನುಷ್ಠಾನಕ್ಕೆ ತಂದಿರುವ ಸೋವಿಯತ್ ರಷ್ಯ, ಪೋಲೆಂಡ್, ಪುರ್ವಜರ್ಮನಿ, ಜೆಕೋಸ್ಲವಾಕಿಯ, ಯುಗೋಸ್ಲಾವಿಯ, ಹಂಗರಿ, ಬಲ್ಗೇರಿಯ, ರೊಮೇನಿಯ, ಆಲ್ಬೇನಿಯ, ಕ್ಯೂಬ, ಚೀನ, ಉತ್ತರಕೊರಿಯ, ಉತ್ತರ ವಿಯೆಟ್ನಾಮ್ ಇವನ್ನು ಕಮ್ಯೂನಿಸ್ಟ್‌ ದೇಶಗಳೆಂದು ಕರೆಯುವ ವಾಡಿಕೆಯಿದೆ. ಉಳಿದವು ಕಮ್ಯೂನಿಸ್ಟೇತರ ದೇಶಗಳು.

ಪೂರ್ವ ಸ್ಥಿತಿ

ಬದಲಾಯಿಸಿ

ಮಾರ್ಕ್ಸ್-ಎಂಗೆಲ್ಸ್‌ರು ತಮ್ಮ ವೈಜ್ಞಾನಿಕ ಸಮಾಜವಾದವನ್ನು ಪ್ರತಿಪಾದಿಸುವ ಮುನ್ನವೂ ಪ್ರಚಾರದಲ್ಲಿದ್ದ ಹಲವು ಸಮಾಜವಾದಿ ತತ್ತ್ವಗಳನ್ನು ಇಲ್ಲಿ ಪ್ರಸ್ತಾಪಿಸಬಹುದಾಗಿದೆ. ನೊಂದ ಜೀವಿಗಳ ಪರವಾಗಿ ವಾದಿಸುತ್ತಿದ್ದವರೂ ಸಮಾಜದಲ್ಲಿಯ ಶೋಷಣೆ-ಅಸಮತೆಗಳನ್ನು ಪ್ರತಿಭಟಿಸುತ್ತಿದ್ದವರೂ ಸಮಾಜ ಸುಧಾರಣಾಪ್ರಿಯರೂ ಸಮಾಜವಾದದಿಂದ ಆಕರ್ಷಿತರಾಗಿದ್ದರು. ಥಾಮಸ್ ಮೋರ್, ಕೆಂಪನೆಲ್ಲ ಮತ್ತು ಇತರರು ಆದರ್ಶ ಸಮಾಜವನ್ನು ಚಿತ್ರಿಸಿದ್ದಾರೆ. ಇಂಗ್ಲೆಂಡಿನ ಜರಾಲ್ಡ್‌ವಿನ್ ಸ್ಟಾನ್ಲೇ, ರಾಬರ್ಟ್ ಓವೆನ್, ಫ್ರಾನ್ಸಿನ ಫೂರ್ಯೇ, ಸೇಂಟ್ ಸೈಮನ್, ಜರ್ಮನಿಯ ವೈಟ್ಲಿಂಗ್ ಮೊದಲಾದವರೂ ಅವರ ಅನುಯಾಯಿಗಳೂ ಸಾಮಾಜಿಕ ಅಸಮಾನತೆ, ವರ್ಗವಿರಸ, ಶೋಷಣೆ, ದಬ್ಬಾಳಿಕೆ, ತಾರತಮ್ಯ ಮುಂತಾದವನ್ನು ತೊಡೆದುಹಾಕಿ, ಸುಧಾರಿತ ಸಮಾಜ ನಿರ್ಮಾಣವಾಗಬೇಕೆಂದು ತಮ್ಮ ಬರೆಹಗಳ ಮೂಲಕ ಪ್ರಚಾರ ನಡೆಸಿದ್ದರು. ಇಂಥ ಸುಧಾರಣಾಕಾಂಕ್ಷಿಗಳನ್ನೆಲ್ಲ ಒಂದಲ್ಲ ಒಂದು ಬಗೆಯ ಸಮಾಜವಾದಿಗಳೆಂದು ಕರೆಯುವುದು ರೂಢಿಯಾಗಿತ್ತು. ಇಂಥವರು ಸಮಾಜವಾದಿ ಸಮಾಜದ ಸ್ಥಾಪನೆಗೆ ಆರಿಸಿಕೊಂಡ ಕ್ರಮಗಳೂ ಗಮನಾರ್ಹ. ಆಸ್ತಿಕರೆಲ್ಲರೂ ದೇವರಲ್ಲಿ ಮೊರೆ ಹೊಕ್ಕಿದ್ದರು. ಅನನ್ಯ ದೈವಭಕ್ತಿ. ಇಹಪ್ರಪಂಚದ ಬಂಧನಗಳಾದ ಹೆಣ್ಣು ಹೊನ್ನು ಮಣ್ಣುಗಳ ತ್ಯಾಗ. ವಿರಕ್ತ ಜೀವನ, ತಪಸ್ಸು, ಪುಜೆ, ದಾನ ಇವುಗಳ ಪ್ರತಿಪಾದಕರಿವರು. ವ್ಯಕ್ತಿಗಳು ಸೇರಿ ಸಮಾಜವಾಗಿರುವುದರಿಂದ ವ್ಯಕ್ತ ಪರಿಪಕ್ವತೆಯಿಂದ ಸಮಾಜದ ಪರಿಪಕ್ವತೆಯಾಗುವುದೆಂದೂ ಆಗ ಸಮಾಜವನ್ನು ಕಾಡುತ್ತಿರುವ ಲಾಲಸೆ, ಈರ್ಷ್ಯೆ, ಅಸಮಾನತೆ, ಮೋಹಗಳಿಂದ ಬಿಡುಗಡೆಯಾಗುವುದೆಂದೂ ಸುಧಾರಿತ ಸಮಾಜದ ಜನನವಾಗುವುದೆಂದೂ ಇವರ ಭಾವನೆಯಾಗಿತ್ತು. ಇದಕ್ಕಾಗಿ ಹಲವು ನೀತಿಸೂತ್ರಗಳೂ ಪುಜಾವಿಧಿಗಳೂ ಧ್ಯಾನವಿಧಿಗಳೂ ರಚಿತವಾದುವು. ಇನ್ನು ಕೆಲವರು ಸಮಾಜದಲ್ಲಿ ಕಂಡುಬರುವ ಅನಿಷ್ಟವೆಲ್ಲವೂ ದೈವಲೀಲೆ ಎಂದು ಬಗೆದು, ಮನುಷ್ಯನ ಪರೀಕ್ಷೆಗಾಗಿಯೆ ಎಲ್ಲವೂ ಉಂಟಾಗಿವೆಯೆಂದು ತಿಳಿಸಿ, ವಿರಕ್ತ ಜೀವನಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟರು. ಪರಲೋಕಸೃಷ್ಟಿ, ಪಾಪವಿಮೋಚನೆ, ದೇವರ ಪುನರಾಗಮನ, ದೇವದೂತರ ಸಂದೇಶ-ಇವಕ್ಕೆ ಅವರಿಂದ ಹೆಚ್ಚಿನ ಪುರಸ್ಕಾರ ಲಭ್ಯವಾಯಿತು. ಮತ್ತೆ ಕೆಲವರು ಪಾರಮಾರ್ಥಿಕ-ಲೌಕಿಕ ಸಮನ್ವಯಸಾಧನೆಗಾಗಿ ಯತ್ನಿಸಿ, ದೇವದೂತರಿಂದಲೂ ಋಷಿಗಳಿಂದಲೂ ಪ್ರೋಕ್ತವಾದ ಬೋಧನೆಗಳ ಪಾಲನೆ, ದಾನ, ಪುಜೆ, ಧ್ಯಾನ-ಇವು ಮೋಕ್ಷಸಮಾಜಕ್ಕೆ ಹೆದ್ದಾರಿ ಎಂದರು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಗಳಿಕೆಯನ್ನೂ ಸಂಪತ್ತನ್ನೂ ತನ್ನದೆಂದು ಬಗೆಯದೆ, ತಾನು ಅದರ ಧರ್ಮದರ್ಶಿಯೆಂದು ತಿಳಿದು ಅವನ್ನು ಅನುಭವಿಸುವುದಾದರೆ ಮತ್ತು ನಿರ್ವಹಿಸುವುದಾದರೆ ಆಗ ಬಡವ-ಶ್ರೀಮಂತರೆಂಬ ಭೇದಗಳಿಗೂ ಒಡೆತನದಿಂದ ಬರುವ ಆರ್ಥಿಕ ಸೌಲಭ್ಯಗಳಿಗೂ ಅಧಿಕಾರ ಶೇಖರಣೆಗಳಿಗೂ ವಿಲಾಸಗಳಿಗೂ ಬಡಜನರಲ್ಲಿ ಮೂಡಿಸುವ ದಾಸ್ಯ ಯಾಚನೆಗಳಿಗೂ ಇರಬಹುದಾದ ವರ್ಗವಿರಸಕ್ಕೂ ಅವಕಾಶವೇ ಉಂಟಾಗುವುದಿಲ್ಲವೆಂಬುದು ಇನ್ನು ಕೆಲವರ ವಾದ. ಕೆಲವರು ಇಷ್ಟಕ್ಕೆ ತೃಪ್ತರಾಗಲಿಲ್ಲ. ಎಲ್ಲರೂ ದೇವರ ಮಕ್ಕಳು. ಆದ್ದರಿಂದ ಸಮಾನತೆ, ಭ್ರಾತೃತ್ವ, ಸಹಜೀವನ ಇವು ಮನುಷ್ಯನ ಆಜನ್ಮಸಿದ್ಧ ಹಕ್ಕುಗಳು. ಆದ್ದರಿಂದ ಸಮಾಜದಲ್ಲಿ ಕಂಡುಬರುವ ಎಲ್ಲ ವಿಧದ ಅಸಮಾನತೆ, ಶೋಷಣೆ, ಸ್ವಾಮ್ಯ, ಒಡೆತನ ಎಲ್ಲವನ್ನೂ ದೇವರ ಹೆಸರಿನಲ್ಲೇ ಇವರು ಪ್ರಶ್ನಿಸಿದರು. ವಿರೋಧಿಸಿದರು. ಆಸ್ತಿಯ ವೈಯಕ್ತಿಕ ಸ್ವಾಮ್ಯಕ್ಕೂ ಒಡೆತನಕ್ಕೂ ಆಸ್ಪದವಿಲ್ಲದಂಥ ಸಮಾಜ ವ್ಯವಸ್ಥೆಗೆ ಇವರು ಕರೆಕೊಟ್ಟರು. ಇವರದು ಧಾರ್ಮಿಕ ಸಮಾಜವಾದ. ಈ ಹಲವು ಬಗೆಯ ವಾದಗಳನ್ನು ಭಾರತದಲ್ಲೂ ಕಾಣಬಹುದು. ರಾಜಕೀಯವಾಗಿ, ಇಂಗ್ಲೆಂಡಿನಲ್ಲಿ 1688ರಲ್ಲಿ ನಡೆದ ಕ್ರಾಂತಿಯ ಸಂದರ್ಭದಲ್ಲಿ ಲೆವೆಲರ್ಸ್‌ ಮತ್ತು ಡಿಗ್ಗರ್ ಎಂಬ ಉಗ್ರವಾದಿಗಳು ಜಿರಾಲ್ಡ್‌ ವಿನ್ ಸ್ಟಾನ್ಲೆಯ ನೇತೃತ್ವದಲ್ಲಿ ಕ್ರಿಶ್ಚಿಯನ್ ಧರ್ಮಬೋಧಕರ ಮೂಲತತ್ತ್ವಗಳನ್ನು ಪುನಃ ಉದ್ಧರಿಸಿ ಸಮಾನ ಸಮಾಜ ಸ್ಥಾಪನೆಯೇ ಧರ್ಮದ ಪುನರುತ್ಥಾನವೆಂದು ವಾದಿಸಿದರು.

ಈ ಬಗೆಯ ಸಮಾಜವಾದಿಗಳಿಗೆ ಸಮಾಜವ್ಯವಸ್ಥೆಯ ವಿಮರ್ಶೆ ಅಷ್ಟು ಕಠಿಣವಾದ ಸಮಸ್ಯೆಯಾಗಲಿಲ್ಲ. ಎಲ್ಲವೂ ದೈವದತ್ತವಾಗಿ ಉದ್ಭವವಾಗಿರುವುದರಿಂದ ಸಮಾಜದ ಆರ್ಥಿಕ ಮತ್ತು ರಾಜಕೀಯ ಸಂದರ್ಭಗಳ ವಿನ್ಯಾಸವನ್ನಾಗಲೀ ಅಂತರಾಳವನ್ನಾಗಲೀ ಪ್ರಶ್ನಿಸಲು ಯತ್ನಿಸಲಿಲ್ಲ. ಇದ್ದ ಮತ್ತು ಇರುವ ಸಂಕಷ್ಟಗಳೆಲ್ಲವೂ ಅಧರ್ಮದಿಂದ ಉಂಟಾಗಿರುವುದರಿಂದ ಸನ್ಮಾರ್ಗದಲ್ಲಿ ಪ್ರವರ್ತಿಸಲು ಸದ್ಭುದ್ಧಿ ಕೊಡುವಂತೆ ದೇವರಲ್ಲಿ ಮೊರೆಹೋಗುವುದೇ ಮಾರ್ಗವೆಂಬುದು ಇವರ ಭಾವನೆ. ಮನುಷ್ಯ ಇಷ್ಟು ಮಾಡುವುದಾದರೆ ಧರ್ಮ ಕ್ಷೀಣಿಸದೆ ಸಮಾಜದ ಉತ್ಕರ್ಷ ತಾನಾಗಿ ಉಂಟಾಗುವುದೆಂದು ಇವರು ನಂಬಿದ್ದರು.

ಕೇವಲ ಬುದ್ಧಿಶಕ್ತಿಯ ಸಹಾಯದಿಂದ ಸಮಾಜವಾದಿ ವ್ಯವಸ್ಥೆಯ ಸ್ಥಾಪನೆ ಸುಲಭವೆಂದು ಸಾರುವ ಅನೇಕ ಪಂಥಗಳು 18ನೆಯ ಶತಮಾನದ ಅನಂತರ ಜನಿಸಿದುವು. ಇವು ಬುದ್ಧಿಯನ್ನು ದೇವರಸ್ಥಾನದಲ್ಲಿ ಕುಳ್ಳಿರಿಸಿದುವು. ಸಮಾಜದ ಸಕಲ ನಡೆವಳಿಕೆಗಳ ಸೂಕ್ತತೆ, ಗ್ರಾಹ್ಯಗುಣ, ವರ್ಜನೆ ಎಲ್ಲವನ್ನೂ ಬುದ್ಧಿಯ ತೀರ್ಪಿಗೆ ಒಳಪಡಿಸಿದುವು. ಬುದ್ಧಿಶಕ್ತಿ ಮಾನವನಿಗೆ ಮೀಸಲಾದದ್ದು. ಇದರಿಂದ ಸಾಧಿಸಲಸಾಧ್ಯವಾದ ಅಂಶವೇ ಇಲ್ಲ. ಇದುವರೆವಿಗೂ ನಿಗೂಢವಾಗಿದ್ದ ವಸ್ತು ಚಲನೆಗಳನ್ನೂ ವಿನ್ಯಾಸಗಳನ್ನೂ ವಿಜ್ಞಾನದ ಮೂಲಕ ಬಹಿರಂಗಗೊಳಿಸಲಾಗಿದೆ. ಈ ಜ್ಞಾನಕ್ಕೆಲ್ಲ ಬುದ್ಧಿಶಕ್ತಿಯೇ ಮೂಲ. ಹೀಗಿರುವಾಗ ಸಮಾಜದ ನಡೆವಳಿಕೆಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಯಾವುದು ಮಾನವನಿಗೆ ಅನುಕೂಲ, ಯಾವುದು ಪ್ರತಿಕೂಲ-ಇತ್ಯಾದಿಗಳನ್ನು ತೀರ್ಮಾನಿಸಲು ಸಾಧ್ಯ. 18ನೆಯ ಶತಮಾನದಲ್ಲಿ ಜನಿಸಿದ ಇಂಥ ಯೋಚನೆಯ ಕಾಲವನ್ನು ವಿಮರ್ಶನಕಾರರು ವಿಮರ್ಶನ ಯುಗ ಎಂದು ಕರೆದಿದ್ದಾರೆ. ಇದರಲ್ಲಿ ನಾನಾ ಮುಖಗಳಿವೆ. ಸಮಾಜದರ್ಶನವನ್ನು ಪ್ರಕೃತಿದರ್ಶನದ ರೀತಿಯಲ್ಲಿ ವ್ಯವಸ್ಥೆಗೊಳಿಸುವುದು ಇವುಗಳಲ್ಲಿ ಅತಿ ಮುಖ್ಯವಾದದ್ದು.

ಬುದ್ಧಿಯ ಆರಾಧಕರು ಸಮಾಜದಲ್ಲಿ ಅನ್ಯಾಯವೆಂದು ಬಗೆದದ್ದನ್ನು ಹೊರಹಾಕಲು ತಮ್ಮ ಬುದ್ಧಿಯನ್ನು ಬಳಸಿಕೊಂಡರು. ಸಮಾಜದಲ್ಲಿ ಕಂಡುಬಂದ ಅಸಮಾನತೆ, ಪ್ರತ್ಯೇಕ ಹಕ್ಕುಬಾಧ್ಯತೆ, ಅಂತರ ಶೋಷಣೆ ಎಲ್ಲವೂ ಅಸಮರ್ಥನೀಯ. ಆದ್ದರಿಂದ ಅವನ್ನು ನಾವು ಒಪ್ಪಬೇಕಾದ್ದಿಲ್ಲ; ಅವು ಅಸಂಬದ್ಧ-ಎಂಬುದು ಅವರ ತರ್ಕ. ಆದ್ದರಿಂದ ಇವರಲ್ಲೊಬ್ಬೊಬ್ಬರೂ ತಮಗೆ ನ್ಯಾಯವೆಂದು ಕಂಡುಬಂದ ರೀತಿಯಲ್ಲಿಸಮಾಜದ ಪುನರ್ರಚನೆಯಲ್ಲಿ ತೊಡಗಿದರು. ಬಗೆಬಗೆಯ ಮಾದರಿಗಳನ್ನು ಕಡೆದಿಟ್ಟರು. ಬುದ್ಧಿವಂತರು ಇದನ್ನು ಅಂಗೀಕರಿಸಬೇಕೆಂದು ಕರೆಕೊಟ್ಟರು. ಇನ್ನು ಕೆಲವರು ತಾವು ರಚಿಸಿದ ಕರಡುಯೋಜನೆಗಳನ್ನು ಸಹೃದಯ ರಾಜಮಹಾರಾಜರಿಗೆ ಅರ್ಪಿಸಿ ಅವರ ಬೆಂಬಲದಿಂದ ಅವನ್ನು ಕಾರ್ಯಗತಗೊಳಿಸಲು ಉದ್ಯುಕ್ತರಾದರು. ಆದರೆ ಯಾವುದರಿಂದಲೂ ಏನೂ ಲಾಭವಾಗಲಿಲ್ಲ. ಅವನ್ನು ಕಾರ್ಯಗತ ಮಾಡಲು ಯಾರೂ ಮುಂದೆ ಬರಲಿಲ್ಲ. ಆಗ ಇವರಿಗೆ ಹತಾಶೆ ಕಾದಿತ್ತು. ಇವರಲ್ಲಿ ಉಗ್ರಗಾಮಿಗಳಾದವರನ್ನು ಸಮಾಜಕಂಟಕರೆಂದು ದಮನ ಮಾಡಲಾಯಿತು. ಇನ್ನು ಕೆಲವರು ಪ್ರಯೋಗಾರ್ಥವಾಗಿ ರಚಿಸಿದ್ದ ಆಶ್ರಮ, ನಿಕೇತನ ಸಹಜೀವನ ಕೇಂದ್ರ, ಕುಟೀರಗಳು ಮುರಿದುಬಿದ್ದವು. ಮಿಗಿಲಾಗಿ ಯಾವುದು ಅಂಗೀಕಾರಯೋಗ್ಯವಾದದ್ದು, ಯಾವುದನ್ನು ತ್ಯಜಿಸುವುದರಿಂದ ಸಮಾಜಕ್ಕೆ ಕ್ಷೇಮ ಉಂಟಾಗುತ್ತದೆ ಎಂಬ ಬಗ್ಗೆ ಈ ವಿನ್ಯಾಸಕಾರರಲ್ಲೇ ಒಮ್ಮತವಿರಲಿಲ್ಲ. ಒಬ್ಬನಿಗೆ ನ್ಯಾಯವಾಗಿ ಕಂಡುಬಂದದ್ದು ಇನ್ನೊಬ್ಬನಿಗೆ ವಿಪರೀತವಾಗಿ ಕಂಡುಬಂದಿತ್ತು. ಬುದ್ಧಿಯ ಕುಂಚದಿಂದ ನಿರ್ಮಿತವಾದ ಈ ಅನೇಕ ಕ್ಷೇಮಸಮಾಜಗಳು ಆಕರ್ಷಣೀಯವಾಗಿ ಕಂಡರೂ ಸರ್ವಸಮ್ಮತವಾದ ಒರೆಗಲ್ಲು ಅಥವಾ ಅಳತೆಕೋಲಿನಿಂದ ಅವುಗಳಲ್ಲಿ ಯಾವುದಾದ ರೊಂದನ್ನೂ ಅಂಗೀಕಾರಯೋಗ್ಯವೆಂದು ತೀರ್ಮಾನಿಸುವುದು ಕಷ್ಟದ ಕೆಲಸವಾಗಿತ್ತು.

ಆಧುನಿಕ ಕಮ್ಯೂನಿಸಂ

ಬದಲಾಯಿಸಿ

ಆದರೆ ಈ ಕಾಲಾವಧಿಯಲ್ಲಿ ಈ ಪಂಗಡಕ್ಕೆ ಸೇರಿದ ಬರೆಹಗಾರರಿಂದ ಹಲವು ಅಮೂಲ್ಯ ಸಂಶೋಧನೆಗಳು ಹೊರಬಿದ್ದವು. ಹಲವೆಡೆ ಅಸ್ಪಷ್ಟವಾಗಿ ಕೆಲವು ಕಡೆ ಸ್ಪಷ್ಟವಾಗಿ ಇನ್ನು ಕೆಲವು ಕಡೆ ಸೂಚ್ಯವಾಗಿ. ಇತಿಹಾಸ ಯಾವುದೋ ಒಂದು ಕ್ರಮಕ್ಕೆ ಒಳಪಟ್ಟು ವಿಕಾಸ ಹೊಂದಿರುವ ಚಿತ್ರವನ್ನು ಅವರು ಮುಂದಿಟ್ಟರು. ಸಮಾಜವೂ ಈ ವಿಕಾಸದ ನಿಯಮದಲ್ಲಿ ಸೇರಿ ಒಂದೊಂದು ಕಾಲದಲ್ಲಿ ಒಂದೊಂದು ವಿಧವಾಗಿ ವಿಶಿಷ್ಟ ಚರ್ಯೆಗಳನ್ನು ಪ್ರದರ್ಶಿಸಿರುವುದಾಗಿ ತಿಳಿಸಿದರು. ಒಂದೊಂದು ಘಟ್ಟವೂ ವಿಶಿಷ್ಟವಾದದ್ದೆಂಬುದನ್ನು ಇವರು ಕಂಡಿದ್ದರು. ಅತ್ಯಂತ ಅನಾಗರಿಕತೆಯಿಂದ ಆರಂಭವಾದ ಸಮಾಜ ಕ್ರಮವಾಗಿ ಪ್ರಾಚೀನ ಮತ್ತು ಊಳಿಗಮಾನ್ಯ ಘಟ್ಟಗಳನ್ನು ದಾಟಿ ಪ್ರಜಾಸಮಾಜದ (ಸಿವಿಲ್ ಸೊಸೈಟಿ) ಹಂತ ಮುಟ್ಟಿದೆ. ಈ ಘಟ್ಟಗಳ ಪರಿವರ್ತನೆ ಏತಕ್ಕೆ ಉಂಟಾಯಿತೆಂದು ಅನೇಕರು ಕಾರಣಗಳನ್ನು ಹುಡುಕುತ್ತಿದ್ದಾಗ, ಜರ್ಮನಿತತ್ತ್ವಜ್ಞಾನಿಯಾದ ಹೆಗೆಲ್ ಹೊಸ ಸಿದ್ಧಾಂತವೊಂದರ ಮೂಲಕ ಇತಿಹಾಸದ ಸಮಾಜದ ಚಲನೆ ಮತ್ತು ವಿಕಾಸಗಳನ್ನು ಸಮರ್ಥಿಸಿ ಅವೆಲ್ಲವೂ ಭಾವನೆಗಳ (ಐಡಿಯ) ಚಲನೆಯ ಪ್ರತಿರೂಪವೆಂದು ಹೇಳಿದ. ಒಂದೊಂದು ಕಾಲದಲ್ಲಿ ಒಂದೊಂದು ರೂಪದಲ್ಲಿ ಭಾವನೆಗಳು ವ್ಯಕ್ತಗೊಂಡಿವೆ. ಈಗ ಅವು ತಮ್ಮ ಗುರಿ ಮುಟ್ಟಿವೆ. ಇಂದಿನ ಪ್ರಜಾಸಮಾಜದ ರೂಪ ತಾಳಿವೆ-ಎಂದು ಆತ ತಿಳಿಸಿದ. ಇನ್ನು ಕೆಲವರು ಈ ಭಾವನಾತ್ಮಕ ವಿಕಾಸವಾದವನ್ನು ವಿರೋಧಿಸಿದರು. ಸಮಾಜದಲ್ಲಿ ಕಂಡುಬರಬಹುದಾದ ಚಲನೆ, ವಿಕಾಸ ಮತ್ತು ವಿವಿಧ ಘಟ್ಟಗಳು ವಿಕಾಸ ಹೊಂದುತ್ತಿರುವ ಭಾವನೆಯ ಪ್ರತಿರೂಪವಲ್ಲವೆಂಬುದು ಅವರ ವಾದ. ಸಮಾಜದಲ್ಲಿ ಕಂಡುಬರುವ ಬದಲಾವಣೆ, ಪರಿವರ್ತನೆ, ಹಳೆಯ, ಹೊಸ ಭಾವನೆಗಳು-ಎಲ್ಲವೂ ಸಮಾಜದಲ್ಲೇ ಹುದುಗಿರುವ ಸ್ವಯಂಚಲನೆಗೆ ಒಳಪಟ್ಟಿವೆಯೆಂದೂ ಸಮಾಜವಿಕಾಸದಲ್ಲಿ ದೈವಿಕ ಅಥವಾ ಭಾವನೆಯ ಕೈವಾಡವಿಲ್ಲವೆಂದೂ, ವಿಕಾಸವೆಂಬುದು ಭಾವನೆಯ ಬೆಳೆವಣಿಗೆಯ ಪ್ರತಿರೂಪವಾಗಿರದೆ, ಭಾವನೆಯೇ ವಿಕಾಸಹೊಂದುತ್ತಿರುವ ಸ್ಥಿತಿಗತಿಗಳ ಪ್ರತಿರೂಪವಾಗಿ ವ್ಯಕ್ತಗೊಂಡಿದೆಯೆಂದೂ ತಿಳಿಸಿದರು. ಎರಡನೆಯದಾಗಿ, ಸಮಾಜದಲ್ಲಿ ಉಂಟಾಗಿರುವ ಕ್ಷೋಭೆಗೂ ವಿರಸಕ್ಕೂ ಬಡಜನರ ಚೀತ್ಕಾರಕ್ಕೂ ಮುಖ್ಯವಾಗಿ ಅದರ ಆರ್ಥಿಕ ವ್ಯವಸ್ಥೆಯೆ ಮುಖ್ಯ ಕಾರಣವೆಂಬುದು ಇವರ ವಾದ. ಪ್ರಾಚೀನ ಕಾಲದ ಸ್ವಾಮ್ಯರಹಿತ ಅಥವಾ ಒಡೆತನರಹಿತ ವ್ಯವಸ್ಥೆಗಳ ಮಾದರಿಗಳನ್ನು ಇವರು ಮುಂದಿಟ್ಟರು. ಉತ್ಪಾದನ ವಸ್ತುಗಳ ಖಾಸಗಿ ಸ್ವಾಮ್ಯ ಮತ್ತು ಒಡೆತನಪದ್ಧತಿಯಿಂದಾಗಿ ಕೆಲವರು ಅಧಿಪತಿಗಳಾಗುತ್ತಾರೆ. ಬಹುತೇಕ ಜನ ಕೇವಲ ದುಡಿಮೆಗಾರರಾಗಿ ಪರಿವರ್ತನೆ ಹೊಂದುತ್ತಾರೆ. ಉತ್ಪಾದನ ವಸ್ತುಗಳ ಖಾಸಗಿ ಸ್ವಾಮ್ಯಪದ್ಧತಿ ಆರ್ಥಿಕವಾಗಿ ಸಮಾಜದಲ್ಲಿ ವರ್ಗಗಳ ಉದಯಕ್ಕೂ ವರ್ಗ ಘರ್ಷಣೆಗೂ ಎಡೆಕೊಟ್ಟಿವೆ. ಉತ್ಪಾದನ ವಸ್ತುಗಳ ಮೇಲೆ ಕೇವಲ ಸ್ವಲ್ಪ ಜನ ಹೊಂದಿರುವ ಸ್ವಾಮ್ಯ ಅಥವಾ ಒಡೆತನ ಹಣವಂತರನ್ನು ಇನ್ನೂ ಹಣವಂತರನ್ನಾಗಿಯೂ ಬಡಜನರನ್ನು ಇನ್ನೂ ಬಡವರನ್ನಾಗಿಯೂ ಮಾಡುತ್ತಿದೆ. ಆರ್ಥಿಕ ಸಮಾನತೆಯೇ ಮಿಕ್ಕೆಲ್ಲ ಸಮಾನತೆಗಳಿಗೂ ತಳಹದಿ. ಹೀಗೆ ಸಮಾಜದ ಆರ್ಥಿಕ ವ್ಯವಸ್ಥೆಯ ಹಲವು ಸೂಕ್ಷ್ಮ ವಿಷಯಗಳನ್ನು ಈ ಬರೆಹಗಾರರು ಬಯಲುಪಡಿಸಿದರು. ಶೋಷಣೆಯನ್ನು ಖಂಡಿಸಿದರು. ಉತ್ಪಾದನ ವಸ್ತುಗಳು ಖಾಸಗಿ ಸ್ವಾಮ್ಯಕ್ಕೆ ಒಳಪಟ್ಟಿರಬಾರದೆಂದರೆ ಖಾಸಗೀ ಸ್ವಾಮ್ಯ ಹೋದ ಹೊರತು ಶೋಷಣೆ ಅಳಿಯುವುದಿಲ್ಲವೆಂಬುದು ಇವರ ವಾದ. ಆರ್ಥಿಕ ಅಸಮಾನತೆಗೆ ಶೋಷಣೆಯೇ ಮೂಲ. ಅದರ ನಿರ್ಮೂಲನಕ್ಕಾಗಿ ಉತ್ಪಾದನವಸ್ತುಗಳ ಸಾಮಾಜೀಕರಣ ಆವಶ್ಯಕ. ಆದರೆ ಶೋಷಣೆ ಯಾವ ರೀತಿಯಲ್ಲಿ ಆಗುತ್ತಿದೆ, ಆರ್ಥಿಕ ವ್ಯವಸ್ಥೆಯಲ್ಲಿ ಶೋಷಣೆ ಯಾವ ರೂಪದಲ್ಲಿ ಮನೆಮಾಡಿಕೊಂಡಿದೆ. ವರ್ಗಗಳಿಗೂ ವರ್ಗಗಳ ಉತ್ಪತ್ತಿಗೂ ಆರ್ಥಿಕ ವ್ಯವಸ್ಥೆಗೂ ಇರುವ ಸಂಬಂಧವೇನು, ಶೋಷಣೆಗೂ ವರ್ಗಗಳ ಜನನಕ್ಕೂ ಏನು ಸಂಬಂಧ, ಶೋಷಣೆಯನ್ನು ನಿರ್ಮೂಲ ಮಾಡುವವರು ಯಾರು? ಯಾವ ರೀತಿಯಲ್ಲಿ-ಎಂಬುದನ್ನು ಇವರು ವಿಶದಪಡಿಸಲಾರದೆ ಹೋದರು.

ಮಾರ್ಕ್ಸ್-ಎಂಗೆಲ್ಸ್‌ ದೃಷ್ಟಿ

ಬದಲಾಯಿಸಿ

ಇಂಥ ಸಂದರ್ಭದಲ್ಲಿ ಹೊಸದಾಗಿ ಉದ್ಭವವಾಗಿರುವ ಬಂಡವಾಳ ಅರ್ಥವ್ಯವಸ್ಥೆ ಶೋಷಿತ ಕಾರ್ಮಿಕ ವರ್ಗವೊಂದಕ್ಕೆ ಜನ್ಮಕೊಟ್ಟಿದೆ. ಈಗ ಸಮಾಜವಾದಿ ವ್ಯವಸ್ಥೆಯ ಉದಯ ಅನಿವಾರ್ಯವಾಗಿದೆ. ಈ ಬಂಡವಾಳ ವ್ಯವಸ್ಥೆಯ ದಮನವನ್ನು ಕಾರ್ಮಿಕವರ್ಗ ಮಾಡುತ್ತದೆ. ಕಾರ್ಮಿಕವರ್ಗದ ವಿಮೋಚನೆ ಕಾರ್ಮಿಕ ವರ್ಗದವರಿಂದಲೇ ಸಾಧ್ಯ. ಬಂಡವಾಳ ಅರ್ಥವ್ಯವಸ್ಥೆಯ ಮೂಲೋಚ್ಚಾಟನಕ್ಕಾಗಿ ಕಾರ್ಮಿಕವರ್ಗ ಸಂಘಟಿತರಾಗಿ ಕ್ರಾಂತಿ ನಡೆಸಬೇಕು. ಕಾರ್ಮಿಕರ ಇಂಥ ಪ್ರಜ್ಞಾಪೂರಿತ ಹೋರಾಟವೇ ಸಮಾಜವಾದಿ ಹೋರಾಟ. ಮಿಕ್ಕೆಲ್ಲ ವರ್ಗಗಳ ಹೋರಾಟವೂ ಕಟ್ಟಕಡೆಯದಾಗಿ ಬಂಡವಾಳ ಅರ್ಥವ್ಯವಸ್ಥೆಯ ಪುನರಾವರ್ತನೆಗೆ ದಾರಿ ಮಾಡಿಕೊಡುತ್ತದೆ-ಹೀಗೆಂದು ಮಾಕ್ರ್ಸ್‌ ಮತ್ತು ಎಂಗೆಲ್ಸ್‌ ಕರೆಕೊಟ್ಟರು. ಆ ವೇಳೆಗಾಗಲೆ ಹಲಕೆಲವು ಕಾರ್ಮಿಕವರ್ಗದ ಜನ ಪ್ರತಿಭಟನಾ ಚಳವಳಿ ಕೈಗೊಂಡಿದ್ದರು. ತಮ್ಮ ಗುರಿಸಾಧನೆಗಾಗಿ ಸಣ್ಣಪುಟ್ಟ ಗುಂಪುಗಳನ್ನು ರಚಿಸಿಕೊಂಡು ಕಮ್ಯೂನಿಸ್ಟರೆಂದು ಹೋರಾಟ ನಡೆಸುತ್ತಿದ್ದರು. ಪ್ರತಿಭಟನೆ ಇತ್ತೇ ವಿನಾ ಯಾವ ತತ್ತ್ವಾಧಾರವಾಗಲಿ ಸಮಾಜವಾದದ ಆವಶ್ಯಕತೆ ಮತ್ತು ವಿನ್ಯಾಸಗಳ ಬಗ್ಗೆ ಯಾವ ತಿಳಿವಳಿಕೆಯಾಗಲೀ ಈ ಗುಂಪುಗಳಿಗೆ ಇರಲಿಲ್ಲ. ಮಾಕ್ರ್ಸ್‌ಮತ್ತು ಎಂಗೆಲ್ಸ್‌ ಈ ತ್ರೀವ್ರ ಅಥವಾ ಕ್ರಾಂತಿಕಾರಿ ಗುಂಪುಗಳಿಗೆ ಒಂದು ತತ್ತ್ವಾಧಾರವನ್ನು ಒದಗಿಸಿಕೊಟ್ಟರು. ಮಾಕ್ರ್ಸ್‌ಮತ್ತು ಎಂಗೆಲ್ಸ್‌ ತಮ್ಮದು ಮಾತ್ರ ವೈಜ್ಞಾನಿಕ ಸಮಾಜವಾದವೆಂದೂ ಉಳಿದವೆಲ್ಲ ಕಲ್ಪನಾ ಸಮಾಜವಾದಗಳೆಂದೂ (ಯುಟೋಪಿಯನ್)ವಾದಿಸಿದರು. ವೈಜ್ಞಾನಿಕ ಸಮಾಜವಾದಕ್ಕೂ ಕಲ್ಪನಾಸಮಾಜವಾದಕ್ಕೂ ಇರುವ ಮೂಲ ವ್ಯತ್ಯಾಸವನ್ನು ಎಂಗೆಲ್ಸ್‌ ಹೀಗೆ ಹೇಳಿದ್ದಾನೆ; ಇದು ಇತ್ತೀಚೆಗೆ ಬಲು ಬುದ್ಧಿವಂತನೆನಿಸಿಕೊಂಡವನಿಂದ ಆಕಸ್ಮಾತ್ತಾಗಿ ಹೊರಬಿದ್ದ ಶೋಧನೆಯಲ್ಲ; ಇದು ಐತಿಹಾಸಿಕ ಬೆಳೆವಣಿಗೆ, ಸ್ವಾಮ್ಯವರ್ಗ ಮತ್ತು ಕಾರ್ಮಿಕವರ್ಗಗಳ ನಡುವಣ ಘರ್ಷಣೆಯಿಂದ ಅನಿವಾರ್ಯವಾಗಿ ಜನಿಸಿದ್ದು. ಆದಷ್ಟು ಮಟ್ಟಿಗೆ, ಸಾಕಷ್ಟು ಪರಿಪುರ್ಣವಾದ ಸಮಾಜ ರಚಿಸುವುದೇ ಇದರ ಗುರಿಯಲ್ಲ. ಐತಿಹಾಸಿಕ ಮತ್ತು ಆರ್ಥಿಕ ಘಟನಾಪರಿವರ್ತನೆಗಳನ್ನೂ ಜನ್ಮತಳೆದಿರುವ ವರ್ಗಗಳನ್ನೂ ಅವುಗಳ ಘರ್ಷಣೆಗಳನ್ನೂ ಸಂಶೋಧಿಸುವುದು ಕೂಡ ಇದರ ಉದ್ದೇಶ. ಹೀಗೆ ಉದ್ಭಿವಿಸಿರುವ ಆರ್ಥಿಕ ಪರಿಸ್ಥಿತಿಯಿಂದ ತಲೆದೋರಿರುವ ಘರ್ಷಣೆಗಳ ಪರಿಹಾರದ ಮಾರ್ಗಾನ್ವೇಷಣೆಯೂ ಇದರ ಗುರಿ. ತಮ್ಮ ಸಮಾಜವಾದವೊಂದೇ ವೈಜ್ಞಾನಿಕವೆನಿಸಿರುವುದಕ್ಕೆ ಮಾಕರ್ಸ್‌ನ ಎರಡು ಮುಖ್ಯ ಪ್ರತಿಪಾದನೆಗಳು ಕಾರಣವೆಂಬುದು ಎಂಗೆಲ್ಸನ ಮತ. ಇವುಗಳಲ್ಲಿ ಮೊದಲನೆಯದು ಐತಿಹಾಸಿಕ ಭೌತವಾದ (ಹಿಸ್ಟಾರಿಕಲ್ ಮೆಟೀರಿಯಲಿಸಂ). ಇನ್ನೊಂದು, ಬಂಡವಾಳವಾದಿ ಉತ್ಪಾದನಕ್ರಮದಲ್ಲಿ ಅಡಗಿರುವ ಅತಿರಿಕ್ತಮೌಲ್ಯದ (ಸಪರ್ಲ್‌ಸ್ ವ್ಯಾಲ್ಯೂ) ರಹಸ್ಯ.

ಸಮಾಜವಾದದ ಬಗ್ಗೆ ಮಾಕ್ರ್ಸ್‌ಮತ್ತು ಎಂಗೆಲ್ಸರು ಕೊಟ್ಟಿರುವ ವಿವರಣೆಯನ್ನೂ ವೈಜ್ಞಾನಿಕ ಸಮಾಜವಾದಕ್ಕೂ ಕಲ್ಪನಾಸಮಾಜವಾದಕ್ಕೂ ಇರುವ ಮೂಲ ವ್ಯತ್ಯಾಸಗಳನ್ನೂ ಹೀಗೆ ವಿವರಿಸಬಹುದು; ವಾಸ್ತವ ಪರಿಸ್ಥಿತಿಯಲ್ಲಿ ಏನಾದರೂ ಇರಲಿ, ತಾವು ಆಸೆಪಟ್ಟ ರೀತಿಯಲ್ಲಿ ಸಮಾಜದ ಪುನರ್ನಿಮಾಣ ಆಂತರ್ಯ ಕಾರ್ಯಕ್ಕೆ ತೊಡಗುವುದಾದರೆ ಅದು ಕಲ್ಪನೆಯಾಗುತ್ತದೆಯೇ ಹೊರತು ವಾಸ್ತವ ಪರಿಸ್ಥಿತಿಯಿಂದ ಅನಿವಾರ್ಯವಾಗಿ ಮೂಡುವ ವ್ಯವಸ್ಥೆಯಾಗುವುದಿಲ್ಲ. ವೈಜ್ಞಾನಿಕ ಸಮಾಜವಾದ ಈ ತಪ್ಪು ಮಾಡುವುದಿಲ್ಲ. ಅದು ವಾಸ್ತವ ಪರಿಸ್ಥಿತಿಯನ್ನವಲೋಕಿಸುತ್ತದೆ. ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಆಗುವ ಅನಿವಾರ್ಯವಾದ ವ್ಯತ್ಯಾಸದ ಹಿಂದಿನ ಕ್ರಮ ಅಥವಾ ನಿಯಮವನ್ನು ಅನುಷ್ಠಾನಿಸುತ್ತದೆ. ಬಂಡವಾಳ ಸಮಾಜದ ಹಲವೆಂಟು ಚಟುವಟಿಕೆಗಳೇ ಹೇಗೆ ಅದನ್ನು ಸಮಾಜವಾದದ ಕಡೆಗೆ ತಳ್ಳುತ್ತಿದೆಯೆಂಬುದನ್ನೂ ಇದು ಹೇಗೆ ನಿಯಮಬದ್ಧವೆಂಬುದನ್ನೂ ತಿಳಿಸುವುದರಿಂದ ಇದು ವೈಜ್ಞಾನಿಕ ಸಮಾಜವಾದ. ಈ ವಿಶ್ಲೇಷಣೆಯಲ್ಲಿ ವೈಯಕ್ತಿಕ ಇಚ್ಛಾನಿಚ್ಛೆಗಳ ಪ್ರಶ್ನೆಯೇ ಇಲ್ಲ. ಪ್ರಕೃತಿ ಮತ್ತು ದುಡಿಮೆಗಳ ಸಂಯೋಗಫಲವೇ ಉತ್ಪಾದನೆ. ಇದರಿಂದ ಬಂದ ಫಲ ಹೋಗಬೇಕಾದ್ದು ದುಡಿಮೆ ಮಾಡಿದ ಕಾರ್ಮಿಕನಿಗೆ. ಆದರೆ ಆತನ ದುಡಿಮೆಗೆ ಪ್ರತಿಯಾಗಿ ಕೂಲಿ ಕೊಟ್ಟು, ಕೂಲಿಗೂ ನಿಜವಾದ ಪ್ರತಿಫಲಕ್ಕೂ ಇರುವ ಅಂತರವನ್ನು ಉದ್ಯಮಿಯಾದವನು ಉಳಿಸಿಕೊಳ್ಳುತ್ತಾನೆ. ಇದು ಉತ್ಪತ್ತಿಯಾದ ಪದಾರ್ಥದ ಅತಿರಿಕ್ತಮೌಲ್ಯ. ಇದು ನ್ಯಾಯವಾಗಿ ಸಲ್ಲಬೇಕಾದ್ದು ಕಾರ್ಮಿಕನಿಗೆ; ಇದು ಅವನದೇ, ಅನ್ಯರದಲ್ಲ. ಹೀಗೆ ಅವನಿಗೆ ತಲುಪಿಸದೆ ಉಳಿಸಿಕೊಂಡ ಮೌಲ್ಯಗಳು ಶೇಖರವಾಗಿ ಬಂಡವಾಳವಾಗಿ ಪರಿಣಮಿಸಿವೆ. ಇದರಿಂದಾಗಿ ಉದ್ಯಮಗಳು ಬೆಳೆದಿವೆ. ವಾಸ್ತವವಾಗಿ ಇವೆಲ್ಲವೂ ಕಾರ್ಮಿಕನವೇ. ಉತ್ಪಾದನೆಯ ಗಾತ್ರ ದೊಡ್ಡದಾಗಿದೆ. ಬಂಡವಾಳದ ಉದ್ಯಮ ಬೆಳೆಯುವ ಮುನ್ನ ಸ್ವತಂತ್ರ್ಯರಾಗಿದ್ದ ಕಾರ್ಮಿಕರು ಈಗ ಬಹುಸಂಖ್ಯೆಯಲ್ಲಿ ಉದ್ಯೋಗಿಗಳಾಗಿ ಉದ್ಯಮಪತಿಗಳ ಒಡೆತನಕ್ಕೊಳಪಟ್ಟ ಬೃಹತ್ ಕಾರ್ಖಾನೆಗಳಲ್ಲಿ ಒಟ್ಟಿಗೆ ಸೇರಿ-ಒಂದೇ ಕಡೆಯಲ್ಲಿ-ಒಂದೇ ಸೂರಿನ ಅಡಿಯಲ್ಲಿ- ಕೆಲಸ ಮಾಡುತ್ತಾರೆ. ಆದರೆ ಉದ್ಯಮಗಳ ನಡುವಣ ಸ್ಪರ್ಧೆ ಕ್ರಮೇಣ ತೀವ್ರವಾಗುತ್ತ ಮುಂದುವರಿದು, ಒಂದು ಉದ್ಯಮ ಇನ್ನೊಂದನ್ನು ನುಂಗುವ, ನುಚ್ಚುನುರಿ ಮಾಡುವ ಪ್ರವೃತ್ತಿ ಬೆಳೆದು, ಕೊನೆಗೆ ಇಡೀ ಸಮಾಜದ ಸಂಪತ್ತು ಕೆಲವೇ ಮಂದಿಯ ಕೈಯಲ್ಲಿ ಸೇರಿರುತ್ತದೆ. ಉಳಿದವರೆಲ್ಲ ಉದ್ಯೋಗಿಗಳಾಗಿ ಪರಿವರ್ತನೆ ಗೊಳ್ಳುತ್ತಾರೆ. ಈ ಜನರೇ ಸರ್ಕಾರವನ್ನೂ ತಮ್ಮ ಹತೋಟಿಗೆ ಒಳಪಡಿಸಿಕೊಂಡಿರುತ್ತಾರೆ. ಆದರೆ ಇಂಥ ವ್ಯವಸ್ಥೆಯ ಬೆಳೆವಣಿಗೆಗೆ ಕಾರಣವಾದ ಸ್ಪರ್ಧೆಗಳೇ- ಆಂತರಿಕ ಘರ್ಷಣೆಗಳೇ-ವಿರೋಧಾಭಾಸಗಳೇ-ಅದರ ಪತನಕ್ಕೂ ಕಾರಣವಾಗುತ್ತವೆ. ಒಂದೇ ಎಡೆಯಲ್ಲಿ ಸೇರಿದ ಕಾರ್ಮಿಕರು ಸಂಘಟಿತರಾಗಿ ಶಕ್ತಿಗಳಿಸಿ ಕೊನೆಗೆ ಈ ಅಸಮವ್ಯವಸ್ಥೆಯನ್ನು ಕೊನೆಗೊಳಿಸುತ್ತಾರೆ. ಆರ್ಥಿಕ ರಾಜಕೀಯ ಶಕ್ತಿಗಳನ್ನೆಲ್ಲ ತಾವು ವಶಪಡಿಸಿಕೊಳ್ಳುತ್ತಾರೆ. ಬಂಡವಾಳ ವ್ಯವಸ್ಥೆ ನಾಶಗೊಳ್ಳುತ್ತದೆ ಎಂದರೆ ಇದು ಖಾಸಗಿ ಸ್ವಾಮ್ಯದ ಅಂತ್ಯ; ಸಮಾಜವಾದೀ ವ್ಯವಸ್ಥೆಯ-ಸಾಮೂಹಿಕ ಒಡೆತನದ-ಉಗಮ. ವೈಜ್ಞಾನಿಕ ತಾಂತ್ರಿಕ ಮುನ್ನೆಡೆಯ ಫಲವಾದ ಆಧುನಿಕ ಉತ್ಪಾದನ ಶಕ್ತಿಗಳು ನಾಶಗೊಳ್ಳದೆ ಉಳಿದುಕೊಳ್ಳಬೇಕಾದರೆ ಎಲ್ಲ ಉತ್ಪಾದನ ಸಾಧನಗಳ ಸಾಮೂಹಿಕ ಒಡೆತನವೇ ಸಮಾಜೀಕರಣವೇ ಏಕೈಕಮಾರ್ಗ. ಇದು ಯಾರೊಬ್ಬರ ಬುದ್ಧಿಯ ಫಲವಲ್ಲ. ಹಾಗಿದ್ದರೆ ಎಂದೋ ಇದನ್ನು ನಿರ್ಮಿಸಬಹುದಾಗಿತ್ತು. ಇದುವರೆಗಿನ ಸಂಕಟವನ್ನೆಲ್ಲ ತಡೆಗಟ್ಟಬಹುದಾಗಿತ್ತು. ಆದರೆ ಸಮಾಜವ್ಯವಸ್ಥೆ ತನ್ನಂತೆ ತಾನೇ ಬೆಳೆದು, ಕೊನೆಗೆ ಅನಿವಾರ್ಯವಾಗಿ ಈ ಕೊನೆಯ ಹಂತ ಮುಟ್ಟುವುದೆಂಬುದು ಮಾಕ್ರ್ಸ್‌ಮತ್ತು ಎಂಗೆಲ್ಸ್‌ರ ವೈಜ್ಞಾನಿಕ ದೃಷ್ಟಿ. ಕಮ್ಯೂನಿಸಮಿನ ತಿರುಳನ್ನರಿಯುವ ಮುನ್ನ ಇದನ್ನರಿತುಕೊಳ್ಳಬೇಕಾದುದು ಅವಶ್ಯ.

ಸಮಾಜದಲ್ಲಿ ಸಂಭವಿಸಿದ್ದ ಪರಿಸ್ಥಿತಿಯ ನೈಜಚಿತ್ರವನ್ನು ಅರಿಯಲು ಮಾಕ್ರ್ಸ್‌-ಎಂಗೆಲ್ಸ್‌ರಿಗೆ ಆಗ ಐತಿಹಾಸಿಕ ಭೌತವಾದ ಬಹಳಮಟ್ಟಿಗೆ ಸಹಾಯಕ್ಕೆ ಬಂದಿತ್ತು. ಇದರ ಸ್ವರೂಪವನ್ನು ಮಾಕ್ರ್ಸ್‌-ಎಂಗೆಲ್ಸ್‌ ಹೀಗೆ ವಿವರಿಸಿದ್ದಾರೆ: ಪ್ರತಿಯೊಂದು ಸಮಾಜವ್ಯವಸ್ಥೆ ಕೈಗೊಂಡಿರುವ ಉತ್ಪಾದನೆಯ ವಿಧಾನವೂ ಉತ್ಪಾದನೆಯೊಡನೆ ಸಂಭವಿಸುವ ಉತ್ಪಾದಿತ ವಸ್ತುಗಳ ವಿನಿಮಯವೂ ಆ ಸಮಾಜ ವ್ಯವಸ್ಥೆಯ ಅಡಿಗಲ್ಲೆಂದು ಭೌತಾತ್ಮಕ ಭಾವನೆಗಳು ಇತಿಹಾಸ ತನ್ನ ಆರಂಭ ಸೂತ್ರವನ್ನಾಗಿ ಇಟ್ಟುಕೊಂಡಿದೆ; ಮತ್ತು ಈ ವರೆಗೆ ಇತಿಹಾಸದಲ್ಲಿ ಅವತರಿಸಿರುವ ಸಮಾಜಗಳಲ್ಲಿನ ಉತ್ಪಾದನೆಯ ವಿಧಾನಗಳೇ ಉತ್ಪಾದನೆಯಾದ ವಸ್ತುಗಳ ವಿನಿಮಯದ ರೀತಿ. ಉತ್ಪಾದಿತ ಸಂಪತ್ತಿನ ವಿತರಣೆಯ ವಿಧಾನ, ಅದರಿಂದಾಗಿ ಸಂಭವಿಸಿರುವ ಸಮಾಜ ವಿಭಜನೆ, ವರ್ಗವಿಭೇದ-ಇತ್ಯಾದಿಗಳನ್ನು ನಿರ್ಧರಿಸಿದೆ. ಸಾಮಾಜಿಕ ಬದಲಾವಣೆಗಳಿಗೆ ರಾಜಕೀಯ ಕ್ರಾಂತಿಗಳಿಗೆ ಅಂತಿಮವಾಗಿ ಕಾರಣವಾಗುವುದು ಉತ್ಪಾದನ ವಿಧಾನ ಮತ್ತು ವಿನಿಮಯ ವ್ಯವಸ್ಥೆ. ಪರಿವರ್ತನೆಗೆ ಕಾರಣವನ್ನು ಧರ್ಮ ಅಥವಾ ಶಾಶ್ವತ ಸತ್ಯದ ಚಿಂತನೆಯಲ್ಲಿ ಹುಡುಕಬಾರದು; ಆಯಾ ಕಾಲದ ಅರ್ಥವ್ಯವಸ್ಥೆಯಲ್ಲಿ ಹುಡುಕಬೇಕು. ಸಮಾಜವ್ಯವಸ್ಥೆಯಲ್ಲಿಯ ನ್ಯೂನತೆಗಳಿಗೆ ಅವಕಾಶ ಕೊಟ್ಟ ಪರಿಸ್ಥಿತಿಯಲ್ಲೆ ಅವನ್ನು ನಿವಾರಿಸುವ ಪರಿಸ್ಥಿತಿಗಳೂ ಅಡಗಿರಲೇಬೇಕು. ಅಂದರೆ ಬದಲಾವಣೆಗೊಂಡಿರುವ ಉತ್ಪಾದನ ಕ್ರಮದಲ್ಲಿ ಈ ಪರಿಹಾರಗಳನ್ನು ಮನುಷ್ಯ ತನ್ನ ಬುದ್ಧಿಬಲದಿಂದ ನಿರ್ಮಿಸುವಂತಿಲ್ಲ; ಇವನ್ನು ಬುದ್ಧಿಯ ಸಹಾಯದಿಂದ ಸಂಶೋಧಿಸಬೇಕು, ವಾಸ್ತವವಾದ ಉತ್ಪಾದನಾಂಗಗಳಿಂದ ಪತ್ತೆ ಹಚ್ಚಬೇಕು.

ಮಾಕ್ರ್ಸ್‌, ಎಂಗೆಲ್ಸ್‌ರು ಈ ನಿಯಮದ ಅನ್ವಯದಿಂದ ಆಧುನಿಕ ಸಮಾಜದ ಅಥವಾ ಬಂಡವಾಳಶಾಹೀ ಅರ್ಥವ್ಯವಸ್ಥೆಯ ಚಲನೆಯ ನಿಯಮಗಳನ್ನು ಬಹಿರಂಗಪಡಿಸಿದರು. 16ನೆಯ ಶತಮಾನದಿಂದೀಚೆಗೆ ಬೆಳೆದುಬಂದಿರುವ ಬಂಡವಾಳ ಉತ್ಪಾದನ ವಿಧಾನವನ್ನು ವಿವರಿಸಿ ಇದು ಸಹ ಹಿಂದೆ ಗತಿಸಿಹೋದ ಪ್ರಾಚೀನ ಮತ್ತು ಊಳಿಗಮಾನ್ಯ ವ್ಯವಸ್ಥೆಗಳಂತೆ ಅಂತ್ಯಗೊಳ್ಳುವುದೆಂದೂ ಹಿಂದಿನ ವ್ಯವಸ್ಥೆಗಳು ಅಂತ್ಯಗೊಳ್ಳಲು ಅವೇ ಜನ್ಮಕೊಟ್ಟ ವರ್ಗ ಮತ್ತು ವರ್ಗವಿರಸಗಳೇ ಕಾರಣವಾದಂತೆ ಆಧುನಿಕ ಬಂಡವಾಳ ವ್ಯವಸ್ಥೆ ಜನ್ಮಕೊಟ್ಟಿರುವ ಹೊಸ ಕಾರ್ಮಿಕವರ್ಗವೇ ಈ ವ್ಯವಸ್ಥೆಯ ಅಂತ್ಯಕ್ಕೂ ಕಾರಣವಾಗುವುದೆಂದೂ ಹಿಂದಿನ ಅರ್ಥವ್ಯವಸ್ಥೆಗಳ ಪತನಕ್ಕೆ ಅವುಗಳ ಉತ್ಪಾದನ ಕ್ರಮದಲ್ಲಿ ಆದ ಬದಲಾವಣೆಯೂ ಹೊಸ ಉತ್ಪಾದನಶಕ್ತಿಗಳೂ ಕಾರಣವಾದಂತೆ ಬಂಡವಾಳ ಅರ್ಥವ್ಯವಸ್ಥೆಯು ಪತನಕ್ಕೂ ಅದರ ಹೊಸ ಉತ್ಪಾದನಕ್ರಮ ಮತ್ತು ಆಧುನಿಕ ಉತ್ಪಾದನಶಕ್ತಿಗಳೂ ಕಾರಣವಾಗುವುದೆಂದೂ ತಿಳಿಸಿದರು. ಆರ್ಥಿಕ ಬದಲಾವಣೆ ಮತ್ತು ಹೊಸ ಸಮಾಜವಾದಿ ಸಮಾಜದ ಉದಯ-ಇವು ಭಾವನೆಯ ವಿಕಾಸದಿಂದ ಉಂಟಾಗದೆ ಭೌತಿಕವಾಗಿ ಒಂದು ಚಲನೆಯ ನಿಯಮಕ್ಕೆ ಒಳಪಟ್ಟಂತೆ ಸಂಭವಿಸುತ್ತವೆ. ಬಂಡವಾಳ ವ್ಯವಸ್ಥೆಯಲ್ಲಿರುವ ದ್ವಂದ್ವವಿರೋಧಗಳೇ ಚಲನೆಯನ್ನು ತಂದು ಹೊಸಮಟ್ಟದಲ್ಲಿ ಸಮನ್ವಯಗೊಳ್ಳಲು ಮುನ್ನುಗ್ಗುವುವೆಂಬುದು ಇವರ ವಾದ. ಎಂಗೆಲ್ಸ್‌ ನುಡಿದಿರುವಂತೆ ಆಧುನಿಕ ಸಮಾಜವಾದದ ವಿಶ್ಲೇಷಣೆಯೆಂದರೆ ಒಂದು ಅರ್ಥದಲ್ಲಿ ಅದು ಉಳ್ಳವರಿಗೂ ಇಲ್ಲದವರಿಗೂ ಕೂಲಿಗಾರರಿಗೂ ಬಂಡವಾಳಿಗರಿಗೂ ನಡುವಣ-ಎಂದರೆ ಆಧುನಿಕ ಸಮಾಜದಲ್ಲಿಯ ವರ್ಗಗಳ ನಡುವಣ-ಘರ್ಷಣೆಯ ಅವಲೋಕನವೇ ಆಗಿದೆ. ಇನ್ನೊಂದು ಅರ್ಥದಲ್ಲಿ ಇದು ಉತ್ಪಾದನವ್ಯವಸ್ಥೆಯಲ್ಲಿ ನೆಲೆಸಿರುವ ಅವ್ಯವಸ್ಥೆಯ (ಅನಾರ್ಕಿ) ಅಧ್ಯಯನವಾಗಿದೆ.

ಬಂಡವಾಳ ಅರ್ಥವ್ಯವಸ್ಥೆಯ ಲಕ್ಷಣಗಳು ಹಿಂದೆ ಇದ್ದು ಅಳಿದುಹೋಗಿರುವ ಯಾವ ವ್ಯವಸ್ಥೆಯಲ್ಲೂ ಇರಲಿಲ್ಲ. ಹಿಂದೆ ಉತ್ಪಾದನೆ ನಡೆಯುತ್ತಿದ್ದುದು ಲಾಭ ಗಳಿಕೆಗಾಗಿಯಲ್ಲ; ಬಯಕೆಗಳ ಪೂರೈಕೆಗಾಗಿ. ಈ ಉದ್ದೇಶ ನೆರವೇರಿದ ಮೇಲೆ ಉಳಿದ (ಹೆಚ್ಚಿಗೆ) ಪದಾರ್ಥಗಳು ಮಾರುಕಟ್ಟೆಗೆ ಬರುತ್ತಿದ್ದುವು. ವಿನಿಮಯಗೊಳ್ಳುತ್ತಿದ್ದುವು; ಆಗಿನ ಅರ್ಥವ್ಯವಸ್ಥೆ ಸ್ವಯಂಪುರ್ಣವಾದದ್ದು. ಉತ್ಪಾದಕರು ಒಂದೆಡೆ ಸೇರಿ ಮಾರುಕಟ್ಟೆಯ ದೃಷ್ಟಿಯಿಂದ ಉತ್ಪಾದಿಸುತ್ತಿರಲಿಲ್ಲ; ಉತ್ಪಾದಿತವಾದ ಪದಾರ್ಥಗಳು ಉತ್ಪಾದಕನಿಗೆ ಸೇರಿದ್ದುವು ಮಾತ್ರವಲ್ಲದೆ ಉತ್ಪಾದನೆಗೆ ಸಹಾಯಕವಾದ ವಸ್ತುಗಳೂ ಉತ್ಪಾದಕನಿಗೇ ಸೇರಿದ್ದುವು. ಬಂಡವಾಳ ವ್ಯವಸ್ಥೆಯಲ್ಲಿ ಇವೆಲ್ಲವೂ ಬದಲಾವಣೆಯಾಗಿದೆ. ಲಾಭವನ್ನು ಗಳಿಸುವ ದೃಷ್ಟಿಯಿಂದ ಕೂಲಿಗಾರರನ್ನು ಬಂಡವಾಳಿಗ ಒಂದೆಡೆ ಸೇರಿಸುತ್ತಾನೆ. ಇವರು ಕೂಲಿಗಾಗಿ ಇಲ್ಲಿ ದುಡಿಮೆ ಮಾಡುತ್ತಾರೆ ಮತ್ತು ಉತ್ಪಾದನೆಗೆ ಆವಶ್ಯಕವಾದ ಸಾಮಗ್ರಿ, ಯಂತ್ರೋಪಕರಣ ಮುಂತಾದ ಎಲ್ಲವನ್ನೂ ಮಾಲೀಕ ಒದಗಿಸುತ್ತಾನೆ. ದಿನ ತುಂಬಿದರೆ ದುಡಿಮೆಗಾರನಿಗೆ ಕೂಲಿ ಮೀಸಲೇ ಹೊರತು, ಉತ್ಪಾದನೆಯಾದ ವಸ್ತುಗಳ ಮೇಲೆ ಆತನ ಒಡೆತನವಿಲ್ಲ; ಅವು ಮಾಲೀಕನಿಗೆ ಸೇರಿದವು. ಹೀಗೆ ನಾನಾ ಭಾಗಗಳಲ್ಲಿ ಉತ್ಪಾದನೆ ನಡೆಯುತ್ತಿದೆ. ಎಲ್ಲರೂ ಮಾರುಕಟ್ಟೆಗಾಗಿ ಉತ್ಪಾದನೆ ಕೈಗೊಂಡಿರುತ್ತಾರೆ. ಮಾರುಕಟ್ಟೆಯ ಆವಶ್ಯಕತೆಯಾಗಲೀ ಯಾರು ಎಷ್ಟು ಪ್ರಮಾಣದಲ್ಲಿ ಉತ್ಪಾದಿಸಬೇಕೆಂಬುದಾಗಲೀ ಯಾರಿಗೂ ತಿಳಿಯದ ವಿಷಯ. ಅನೇಕ ವೇಳೆ ಹೆಚ್ಚು ಉತ್ಪಾದನೆಯಾಗಿ ಅದಕ್ಕೆ ಮಾರಾಟವಿಲ್ಲದೆ ಹೋಗಬಹುದು; ಅಥವಾ ಪದಾರ್ಥದ ಆವಶ್ಯಕತೆ ಇದ್ದರೂ ಅದರ ಉತ್ಪಾದನೆ ಆಗದಿರಬಹುದು. ಇದಕ್ಕೆ ಗೊತ್ತುಗುರಿಯಿಲ್ಲದ ಯೋಜನೆಗೊಳಪಡದ ಉತ್ಪಾದನೆಯೇ ಒಂದು ಕಾರಣ. ಲಾಭ ಗಳಿಕೆಯಿಂದ ಉತ್ಪಾದನೆ ನಡೆಸುತ್ತಿರುವುದೇ ಇನ್ನೊಂದು ಕಾರಣ. ಲಾಭಸಿಗುವ ದೃಷ್ಟಿಯಿಂದ ಲಾಭಗಳಿಸಿ ಕೊಡಬಲ್ಲ ಪದಾರ್ಥಗಳ ಉತ್ಪಾದನೆಗೆ ಮಾಲೀಕ ಸದಾ ಯತ್ನಿಸುತ್ತಾನೆ. ಆದರೆ ಈ ಲಾಭದ ಆಸೆಯಿಂದ ಬಂಡವಾಳ ಅರ್ಥವ್ಯವಸ್ಥೆಯನ್ನೇ ಆಕ್ರಮಿಸಿಕೊಳ್ಳಲು, ದೃಷ್ಟಿಹರಿಸುತ್ತಾನೆ. ಹೆಚ್ಚು ಹೆಚ್ಚು ಲಾಭವನ್ನು ಗಳಿಸುವ ದೃಷ್ಟಿಯಿಂದ ಯಂತ್ರೋಪಕರಣಗಳ ವೃದ್ಧಿಗೆ ಗಮನಕೊಡುತ್ತಾನೆ. ಒಂದು ಕಡೆ ವಸಾಹತುಗಳ ಹಗಲು ದರೋಡೆ ನಡೆದರೆ, ಇನ್ನೊಂದು ಕಡೆ ವಿಪರೀತ ಬಂಡವಾಳ ಶೇಖರಣೆಯಾಗುತ್ತ ಬಂದು ಹಾಕಿರುವ ಬಂಡವಾಳದ ಮೇಲೆ ಲಾಭಗಳಿಕೆ ಕ್ಷೀಣಿಸುತ್ತದೆ. ಹೀಗಾಗಿ ಬಂಡವಾಳ ಅರ್ಥವ್ಯವಸ್ಥೆ ಒಂದು ತೆರನಾದ ಪೀಕಲಾಟಕ್ಕೆ ಸಿಕ್ಕುತ್ತದೆ; ಬಂಡವಾಳ ಹೂಡಬೇಕು, ಹೆಚ್ಚು ಹೆಚ್ಚು ಬಂಡವಾಳ ಹೂಡಬೇಕು. ಲಾಭ ದೊರೆಯುತ್ತಿರಬೇಕು. ಆದರೆ ಉತ್ಪಾದನೆ ಕೈಗೊಂಡರೆ ಲಾಭ ದೊರಕುವುದಿಲ್ಲ. ದೊರೆಯುವುದಾದರೂ ಕ್ಷೀಣಿಸುತ್ತ ಬರುತ್ತಿರುತ್ತದೆ. ಬಂಡವಾಳ ವ್ಯವಸ್ಥೆಗೆ ಅಂಟಿರುವ ಈ ಜಾಡ್ಯದ ಜೊತೆಗೆ ಈ ಉತ್ಪಾದನ ವ್ಯವಸ್ಥೆಗೆ ಅಂಟಿರುವ ಇನ್ನೊಂದು ಜಾಡ್ಯವೂ ಸದಾ ಇದನ್ನು ಪೀಡಿಸುತ್ತಲೇ ಇರುತ್ತದೆ. ಅವ್ಯವಸ್ಥಿತ ಉತ್ಪಾದನ ಪರಿಸ್ಥಿತಿ ಆಗಾಗ್ಗೆ ಆರ್ಥಿಕ ಮುಗ್ಗಟ್ಟನ್ನು ತಂದು ಚಾಚುತ್ತಿರುತ್ತದೆ. ಈ ಮುಗ್ಗಟ್ಟುಗಳು ಸಮಾಜದ ಮೇಲೆ ವರ್ಣಿಸಲಾರದ ದುಸ್ಥಿತಿಯನ್ನು ತರುತ್ತವೆ. ಈ ಕಾಲದಲ್ಲಿ ನುಚ್ಚುನುರಿಯಾದವರೆಷ್ಟೋ, ದಿವಾಳಿಯಾದವರೆಷ್ಟೋ, ಆತ್ಮಹತ್ಯೆ ಮಾಡಿಕೊಂಡವರೆಷ್ಟೋ, ಪ್ರವಾಹಕ್ಕೆ ಸಿಕ್ಕಿದ ಉತ್ತ ಭೂಮಿಯಂತೆ ಉತ್ಪಾದನ ವ್ಯವಸ್ಥೆಯೇ ಕೊಚ್ಚಿಹೋಗುತ್ತದೆ. ಅಪಾರ ಉತ್ಪಾದನಶಕ್ತಿಗಳು ಕಂಗಾಲಾಗಿ ಬೀಳುತ್ತವೆ. ಬೆಲೆ ಇಳಿಯದಂತೆ ತಡೆಗಟ್ಟಲು ಉತ್ಪಾದಿತವಾದ ಪದಾರ್ಥಗಳನ್ನು ನಾಶಪಡಿಸಲಾಗುತ್ತದೆ. ಇಷ್ಟುಮಾತ್ರವಲ್ಲ. ಈ ವಿಷಮ ಪರಿಸ್ಥಿತಿಯಿಂದ ಪಾರಾಗಲು ಬಂಡವಾಳ ಅರ್ಥವ್ಯವಸ್ಥೆ ಸದಾ ಪರಿಹಾರ ಮಾರ್ಗಗಳನ್ನು ಹುಡುಕುತ್ತಲೇ ಇರಬೇಕು. ಇವು ಬಂಡವಾಳ ವ್ಯವಸ್ಥೆ ಉಸಿರೆಳೆಯುವುದಕ್ಕೆ ತಾತ್ಕಾಲಿಕವಾಗಿ ಅವಕಾಶ ಮಾಡಿಕೊಟ್ಟರೂ ವಿಪತ್ತುಗಳಿಂದ ಅದಕ್ಕೆ ಪಾರೇ ಇಲ್ಲ. ಬಂಡವಾಳ ಶೇಖರಣೆ, ಬಂಡವಾಳದ ರಫ್ತು, ಉತ್ಪಾದನೆ, ವ್ಯಾಪಾರದಲ್ಲಿ ಏಕಸ್ವಾಮ್ಯ, ಮಾರುಕಟ್ಟೆಗಳ ಸಂಪಾದನೆ, ವಸಾಹತು ಯುದ್ಧ, ಪರಸ್ಪರ ಆಕ್ರಮಣಕಾರೀ ಯುದ್ಧ ಮುಂತಾದವು ಇದರ ಫಲ.

ಬಂಡವಾಳ ಅರ್ಥವ್ಯವಸ್ಥೆ ಇಂಥ ಬಿಕ್ಕಟ್ಟಿಗೆ ಸಿಕ್ಕಲು ಮತ್ತು ಕಾರ್ಮಿಕವರ್ಗದ ಕೊಳ್ಳುವ ಶಕ್ತಿಯನ್ನು ಕುಗ್ಗಿಸಲು ಅದು ನಡೆಸುತ್ತಿರುವ ಕಾರ್ಮಿಕವರ್ಗದ ಶೋಷಣೆಯೇ ಮುಖ್ಯಕಾರಣ. ಈ ಶೋಷಣೆ ಹೇಗೆ ನಡೆಯುತ್ತಿದೆ?-ಎಂಬುದೂ ಪರಿಶೀಲನಾರ್ಹ. ಲಾಭದ ಇನ್ನೊಂದು ಅರ್ಥವೇ ಶೋಷಣೆ. ನಿರೀಕ್ಷಿಸಿದಂತೆ ಬಂಡವಾಳಗಾರನಿಗೂ ದುಡಿಯುವವನಿಗೂ ವಿನಿಮಯ ವ್ಯಾಪಾರ ನಡೆಯುತ್ತದೆ. ಬಂಡವಾಳಗಾರ ದುಡಿಮೆಗಾಗಿ ಕೂಲಿ ಕೊಡುತ್ತಾನೆ. ಕೂಲಿಗಾರ ಕೂಲಿಗೆ ಪ್ರತಿಯಾಗಿ ದುಡಿಮೆ ಮಾಡುತ್ತಾನೆ. ಮೇಲು ನೋಟಕ್ಕೆ ಮೌಲ್ಯಕ್ಕೆ ಮೌಲ್ಯದ ವಿನಿಮಯವಾದಂತೆ ಕಾಣುತ್ತದೆ. ಆದರೆ ಶೋಷಣೆಯ ಅಥವಾ ಲಾಭಗಳಿಕೆಯ ರಹಸ್ಯ ಅಡಗಿರುವುದೇ ಇಲ್ಲಿ. ಬಂಡವಾಳಗಾರ ತಾನು ಪಡೆದ ದುಡಿಮೆಗೆ ಅನುಗುಣವಾದ ಕೂಲಿಯನ್ನು ಕೊಟ್ಟಂತೆ ಕಂಡರೂ ಕೂಲಿಗಾರ ತನ್ನ ದುಡಿಮೆಯಲ್ಲಿ ತಾನು ಪಡೆದಿರಬಹುದಾದ ಮೌಲ್ಯಕ್ಕಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚಾಗಿ ಉತ್ಪಾದಿಸುತ್ತಾನೆ. ಆದರೆ ಒಪ್ಪಂದದ ಪ್ರಕಾರ ನಿಗದಿಯಾದ ಘಂಟೆಗಳ ದುಡಿಮೆಗೆ, ನಿಗದಿಯಾದ ಪರಿಮಾಣದ ಉತ್ಪನ್ನಕ್ಕೆ ನಿಗದಿಯಾದ ಕೂಲಿ, ಆದರೆ ವಾಸ್ತವವಾಗಿ ಕೂಲಿಗಿಂತ ಹೆಚ್ಚಿನ ಮೌಲ್ಯವೇ ಉತ್ಪತ್ತಿಯಾಗುತ್ತದೆ. ಆದರೆ ಈ ಅಧಿಕ ಮೌಲ್ಯ-ಅತಿರಿಕ್ತಮೌಲ್ಯ-ಕೂಲಿಗಾರನಿಗೆ ಲಭಿಸುವುದಿಲ್ಲ. ಮಾಲೀಕನಿಗೆ ಸಲ್ಲುತ್ತದೆ; ಇದು ಮಾಲೀಕನ ಲಾಭ.ಈ ಹೆಚ್ಚಿನ ಲಾಭ ಗಳಿಕೆಯ ರೂಪದಲ್ಲಿ ಬಂಡವಾಳವಾಗುತ್ತದೆ. ಇದೇ ರೀತಿಯಲ್ಲಿ ಹೆಚ್ಚಿಗೆ ಲಾಭಗಳಿಸಲು ಬಂಡವಾಳಗಾರ ಗಳಿಸಿರುವ ಬಂಡವಾಳವನ್ನು ಹೂಡುತ್ತಾನೆ. ಆದರೆ ಈ ಶೋಷಣೆಯನ್ನು ಕಾರ್ಮಿಕವರ್ಗ ವಿರೋಧಿಸುತ್ತದೆ. ಇದಕ್ಕೆ ತಾವಿಲ್ಲದಂತೆ ನಿರುದ್ಯೋಗ ನೋಡಿಕೊಳ್ಳುತ್ತದೆ. ಬಂಡವಾಳ ವ್ಯವಸ್ಥೆ ಸದಾ ಲಾಭ ಗಳಿಸುತ್ತಿರಬೇಕಾದರೆ ಅದಕ್ಕೆ ಆಸರೆಯಾಗಿ ಸದಾ ನಿರುದ್ಯೋಗ ಸಮೂಹ ಇರಲೇಬೇಕು. ಬಂಡವಾಳಗಾರ ತನ್ನ ಲಾಭಕ್ಕೆ ಧಕ್ಕೆ ಬರದಂತೆ ಇನ್ನೂ ಕಡಿಮೆ ದರದಲ್ಲಿ ದುಡಿಮೆಯನ್ನು ಕೊಂಡುಕೊಳ್ಳಲು ನಿರುದ್ಯೋಗಿಗಳಲ್ಲಿರುವ ಪೈಪೋಟಿ ಸಹಾಯಕ್ಕೆ ಬರುತ್ತದೆ. ಇದೇ ಬಂಡವಾಳ ಅರ್ಥವ್ಯವಸ್ಥೆಯಲ್ಲಿ ನಡೆಯುತ್ತಿರುವ ಶೋಷಣೆಯ ಅಥವಾ ಲಾಭಗಳಿಕೆಯ ಒಳಗುಟ್ಟು ಎನ್ನುತ್ತಾರೆ. ಮಾಕ್ರ್ಸ್‌ ಮತ್ತು ಎಂಗೆಲ್ಸ್‌. ಈ ವಿರಸಗಳಿಗೆ ಬಂಡವಾಳ ಉತ್ಪಾದನ ಕ್ರಮದಲ್ಲಿ ತಲೆದೋರಿರುವ ದ್ವಂದ್ವ ಮತ್ತು ಪರಸ್ಪರ ವಿರೋಧಿ ಪ್ರವೃತ್ತಿಗಳೇ ಕಾರಣವೆಂದು ಮಾಕ್ರ್ಸ್‌ ಮತ್ತು ಎಂಗೆಲ್ಸ್‌ ಮತ. ಈ ವ್ಯವಸ್ಥೆಯಲ್ಲಿ ಉತ್ಪಾದನಕಾರ್ಯವೊಂದು ಸಾಮಾಜಿಕ ಪ್ರಕ್ರಿಯೆ; ಆದರೆ ಅದರ ಫಲವನ್ನು ಅಪಹರಿಸುವವರು ಬಂಡವಾಳಿಗರು. ಈ ಪರಿಸ್ಥಿತಿಯಿಂದಾಗಿಯೇ ಎಲ್ಲ ತಳಮಳ. ಬಂಡವಾಳ ಅರ್ಥವ್ಯವಸ್ಥೆ ತಂದುಕೊಟ್ಟಿರುವ ಅಪಾರ ಉತ್ಪಾದನಶಕ್ತಿಗಳಿಗೆ ಖಾಸಗೀ ಆಪೋಷಣೆಯೇ ಶೃಂಖಲೆಯಾಗಿ ಪರಿಣಮಿಸಿದೆ. ಈ ಶೃಂಖಲೆಯಿಂದ ಆಧುನಿಕ ಉತ್ಪಾದನ ಶಕ್ತಿಗಳನ್ನು ವಿಮೋಚನೆಗೊಳಿಸುವುದಕ್ಕೂ ಗೊತ್ತುಗುರಿಯಿಲ್ಲದೆ ಲಾಭಗಳಿಕೆಗಾಗಿ ಸ್ವೇಚ್ಛೆಯಿಂದ ವರ್ತಿಸುತ್ತಿರುವ ವ್ಯವಸ್ಥೆಯನ್ನು ಸಮಾಜದ ಆವಶ್ಯಕತೆಗಳ ಪುರೈಕೆಗಾಗಿ ನಡೆಯುವ ವ್ಯವಸ್ಥೆಯನ್ನಾಗಿ ಮಾಡುವುದಕ್ಕೂ ಶೋಷಣೆಯಿಂದ ಪಾರಾಗುವುದಕ್ಕೂ ಯೋಜನಾಬದ್ಧ ಉತ್ಪಾದನೆ ಮತ್ತು ಬೆಳೆವಣಿಗೆಗಳ ಮೂಲಕ ನಿರುದ್ಯೋಗ, ಆರ್ಥಿಕ ಮುಗ್ಗಟ್ಟು ಮುಂತಾದವುಗಳನ್ನು ನಿವಾರಿಸುವುದಕ್ಕೂ ಬಂಡವಾಳ ಉತ್ಪಾದನಕ್ರಮದಲ್ಲಿರುವ ಖಾಸಗಿ ಒಡೆತನ ಮತ್ತು ಅಪಹರಣಗಳ ದಮನಕ್ಕೂ ಕಾರ್ಮಿಕವರ್ಗ ಚಳವಳಿ ಮಾಡುತ್ತದೆ. ಇದೇ ಸಮಾಜವಾದಿ ಚಳವಳಿ, ಮಾನವಕೋಟಿ, ಅನಿವಾರ್ಯತೆಯ ಸೆರೆಯಿಂದ ಸ್ವಾತಂತ್ರ್ಯದ ಸೀಮೆಗೆ ನೆಗೆಯಲು ಆಧುನಿಕ ಅರ್ಥವ್ಯವಸ್ಥೆ ಎಲ್ಲ ಸೌಲಭ್ಯಗಳನ್ನೂ ಒದಗಿಸಿಕೊಟ್ಟಿದೆ. ಅಡ್ಡ ಬಂದಿರುವುದು ಉತ್ಪಾದನಕ್ರಮದಲ್ಲಿ ಹುದುಗಿರುವ ಖಾಸಗಿ ಸ್ವಾಮ್ಯಪದ್ಧತಿ ಮಾತ್ರ, ಇದನ್ನು ತೊಡೆದು ಹಾಕುವುದೇ ಸಮಾಜೀಕರಣ. ಈ ಕಾರ್ಯವೇ ವ್ಯವಸ್ಥಿತ ಹೋರಾಟದ ಸಮಾಜವಾದೀ ಪ್ರಜ್ಞೆ. ಕಾರ್ಮಿಕವರ್ಗ ನಡೆಸುವ ಸಮಾಜವಾದಿ ಆಂದೋಲನ ಮತ್ತು ಇದರಿಂದ ಸ್ಥಾಪಿತವಾಗುವ ಸಮಾಜವಾದಿ ವ್ಯವಸ್ಥೆ, ಆಡಳಿತ ಮುನ್ನಡೆ-ಇವುಗಳ ಬಗ್ಗೆ ಇನ್ನೂ ಕೆಲವು ಅಂಶಗಳನ್ನು ಗಮನಿಸಬೇಕು. ಪ್ರಪ್ರಥಮವಾದ ಮತ್ತು ಅತ್ಯಂತ ಪ್ರಧಾನವಾದ ಅಂಶವೆಂದರೆ ಕಾರ್ಮಿಕವರ್ಗದ ಸರ್ವಾಧಿಕಾರ (ಡಿಕ್ಟೇಟರ್ಷಿಪ್ ಆಫ್ ದಿ ಪ್ರೋಲಿಟೇರೆಯೆಟ್) ಕೇವಲ ಬಂಡಾಯ ನಡೆಸುವುದಕ್ಕೆ ಈ ಚಳವಳಿಯನ್ನು ಸೀಮಿತಗೊಳಿಸುವುದರ ಅಪಾಯದ ಬಗ್ಗೆ ಮಾಕ್ರ್ಸ್‌ ಮತ್ತು ಎಂಗೆಲ್ಸ್‌ ಎಚ್ಚರಿಕೆ ನೀಡಿದ್ದಾರೆ. ಸಮಾಜವಾದಿ ಕ್ರಾಂತಿ ಮಿಕ್ಕೆಲ್ಲ ಕ್ರಾಂತಿಗಳಂತಲ್ಲ. ಅರ್ಥವ್ಯವಸ್ಥೆಯಲ್ಲಿ ಬೇರೂರಿರುವ ಖಾಸಗಿ ಸ್ವಾಮ್ಯಪದ್ಧತಿ ಮತ್ತು ಅದರ ಶ್ರೇಷ್ಠತೆಯ ಬಗ್ಗೆ ಇರುವ ಭಾವನೆಯ ವಿರುದ್ಧ ಈ ಕ್ರಾಂತಿ ನಡೆದಿರುವುದರಿಂದ ಉಳಿದಿರುವ ಎಲ್ಲ ಸ್ವಾಮ್ಯ ವರ್ಗದ ಹಿತಾಸಕ್ತಿಗಳೂ ಈ ಆಂದೋಲನವನ್ನು ವಿರೋಧಿಸುವುದಲ್ಲದೆ, ನಾನಾ ಮಾರ್ಗಗಳಿಂದ ಇದನ್ನು ಹತ್ತಿಕ್ಕಲೂ ಯತ್ನಿಸುತ್ತವೆ. ಆದ್ದರಿಂದ ಈ ಹಿತಾಸಕ್ತಿಗಳ ದಮನಮಾಡುವುದೂ ಇವುಗಳ ಕೈಗೊಂಬೆಯಾದ ರಾಜ್ಯಶಕ್ತಿಯನ್ನು ವಶಪಡಿಸಿಕೊಳ್ಳೂವುದೂ ಕಾರ್ಮಿಕವರ್ಗ ಕೈಗೊಳ್ಳಬೇಕಾದ ಪ್ರಥಮ ಕರ್ತವ್ಯ. ಇದು ಕಾರ್ಮಿಕ ವರ್ಗದ ಸರ್ವಾಧಿಕಾರದಿಂದ ಮಾತ್ರ ಸಾರ್ಧಯ. ಇದಕ್ಕಾಗಿ ಕಾರ್ಮಿಕವರ್ಗ ರಾಜ್ಯ ಶಕ್ತಿಯನ್ನು ಈ ಹಿತಾಸಕ್ತಿಗಳ ದಮನಕ್ಕಾಗಿ ಕ್ರೋಢೀಕರಿಸಬೇಕು. ಇಲ್ಲವಾದರೆ, ಪ್ರತಿಕ್ರಾಂತಿ ನಡೆದು ಆಂದೋಲನ ಅಲ್ಪಾಯುವಾದೀತು. ಈ ಕಾರ್ಮಿಕ ಸರ್ವಾಧಿಕಾರ ನಿರಂಕುಶ ಪ್ರಭುತ್ವವಲ್ಲ; ವರ್ಗಗಳ ದಮನಕ್ಕಾಗಿ ಜನಿಸಿರುವ ಈ ಪ್ರಭುತ್ವ ಸಾಮ್ಯವಾದಿಗಳ ಬಗ್ಗೆ ಸರ್ವಾಧಿಕಾರವಾಗಿ ಕಂಡುಬಂದರೆ ಅದು ವಿಧಿಯಿಲ್ಲದೆ ಕೈಗೊಳ್ಳಬೇಕಾದ ಕ್ರಮ; ಸಮಾಜವಾದಿ ಸಮಾಜದ ರಕ್ಷಣೆ ಅನವಶ್ಯವೆನಿಸುವಂಥ ಸ್ಥಿತಿ ಇರುವವರೆಗೂ ಇದು ನಡೆಯಲೇಬೇಕಾಗುತ್ತದೆ. ಈ ತೆರನಾದ ಪ್ರಭುತ್ವವನ್ನು ಸಾಮ್ಯ ವಾದಿಗಳು ಪ್ರಜಾಪ್ರಭುತ್ವದ ನಾಶವೆಂದೂ ನಿರಂಕುಶ ಪ್ರಭುತ್ವವೆಂದೂ ಕೂಗಿದರೆ ಅದು ಸ್ವಾರ್ಥ ಹಿತರಕ್ಷಣೆಯ ಸಾಧನಗಳನ್ನು ಕಳೆದುಕೊಂಡವರು ಎಬ್ಬಿಸುವ ಕೂಗು ಮಾತ್ರ; ನೈಜ ಪ್ರಜಾಪ್ರಭುತ್ವಕ್ಕೆ ಇದರಿಂದ ಯಾವ ಹಾನಿಯೂ ಇಲ್ಲ.

ಕಾರ್ಮಿಕವರ್ಗದ ಸರ್ವಾಧಿಕಾರ ಒಂದು ಸಾಧನ ಮಾತ್ರ. ವರ್ಗಗಳು, ವರ್ಗ ಮನೋಭಾವ, ವರ್ಗೋತ್ಪತ್ತಿಕಾರಕವಾದ ಬಂಡವಾಳ-ಅರ್ಥವ್ಯವಸ್ಥೆಯ ಅವಶೇಷಗಳು-ಇವು ಸಂಪುರ್ಣವಾಗಿ ನಿರ್ಮೂಲವಾದ ಕಾಲಕ್ಕೆ ಕಾರ್ಮಿಕರ ಸರ್ವಾಧಿಕಾರ ಪ್ರಭುತ್ವವೂ ರಾಜ್ಯದ ದಮನಶಕ್ತಿಯ ಆವಶ್ಯಕತೆಯೂ ಇಲ್ಲದಂತಾಗುತ್ತದೆ. ಆಗ ಆಡಳಿತ ವ್ಯವಸ್ಥೆ ಮಾತ್ರ ಉಳಿಯುತ್ತದೆ. ಎರಡನೆಯದಾಗಿ, ಸಮಾಜವಾದಿ ಕ್ರಾಂತಿಯಾದ ಕೂಡಲೆ ಸಮಾಜವಾದಿ ವ್ಯವಸ್ಥೆಯ ಲಕ್ಷಣಗಳೆಲ್ಲವೂ ಸಿದ್ಧಪಡಿಸಿದ ರೀತಿಯಲ್ಲಿ ಲಭಿಸುವುದಿಲ್ಲ. ಈ ವ್ಯವಸ್ಥೆಯ ರಚನೆಗಾಗಿ ಸತತವಾಗಿ ದಿಟ್ಟ ಮತ್ತು ಯೋಜಿತ ಕಾರ್ಯಕ್ರಮಗಳಿಂದ ಶ್ರಮಿಸಬೇಕು. ಮೊದಮೊದಲು ಬಂಡವಾಳ ಅರ್ಥವ್ಯವಸ್ಥೆಯ ಅನೇಕ ಲಕ್ಷಣಗಳು ಇರುತ್ತವೆ. ಪ್ರತಿಯೊಬ್ಬನಿಂದಲೂ ಆತನ ಶಕ್ತ್ಯನುಸಾರದ ದುಡಿಮೆ ಪಡೆದು ಆತನ ದುಡಿಮೆಗೆ ತಕ್ಕ ಪ್ರತಿಫಲಕೊಡುವಷ್ಟು ಮಾತ್ರ ವ್ಯವಸ್ಥೆ ಮಾಡುವುದು ಸಾಧ್ಯ. ಈ ಕಾಲದಲ್ಲಿ ಪುರ್ಣ ಸಮಾಜವಾದಿ ವ್ಯವಸ್ಥೆಯ ನಿರ್ಮಾಣಕ್ಕೆ ಆಧಾರಸ್ತಂಭಗಳನ್ನು ಮಾತ್ರ ಏರ್ಪಡಿಸಿಕೊಳ್ಳಬಹುದು. ನಿರ್ದೇಶನ ದೃಷ್ಟಿಯಿಂದ ಈ ಘಟ್ಟವನ್ನು ಮೊದಲನೆಯ ಅಥವಾ ಸಾಮಾನ್ಯ ಸಮಾಜವಾದಿ ಘಟ್ಟವೆಂದು ಹೇಳಬಹುದು. ಕ್ರಮೇಣ ಸಾಮೂಹಿಕ ಉತ್ಪಾದನಶಕ್ತಿ ವೃದ್ಧಿಗೊಂಡು, ವಿಪುಲ ಉತ್ಪಾದನೆ ಗಳಿಸಿದ ಅನಂತರ, ಮುಂದಿನ ಪೀಳಿಗೆಗಳಲ್ಲಿ ಸಮಾಜವಾದೀ ಜಾಗೃತಿ ವೃದ್ಧಿಗೊಂಡಂತೆ. ಸಮತಾ ಸಮಾಜದ ಘಟ್ಟ (ಕಮ್ಯೂನಿಸ್ಟ್‌ ಸೊಸೈಟಿ) ಬರುತ್ತದೆ. ಈ ಘಟ್ಟದಲ್ಲಿ ಪ್ರತಿಯೊಬ್ಬನೂ ತನ್ನ ಶಕ್ತ್ಯನುಸಾರ ದುಡಿಯಲಿಕ್ಕೂ ಆವಶ್ಯಕತೆಗಳಿಗೆ ಅನುಗುಣವಾಗಿ ಪ್ರತಿಫಲ ಗಳಿಸಿಕೊಳ್ಳಲಿಕ್ಕೂ ಸಾಧ್ಯವಾಗುತ್ತದೆ.

ಮಾಕ್ರ್ಸ್‌-ಎಂಗೆಲ್ಸ್‌ ಅನಂತರದ ಕಾಲ

ಬದಲಾಯಿಸಿ
ಚಿತ್ರ:Soviet Union, Lenin (55).jpg
Vladimir Lenin after his return to Petrograd
 
Vladimir Lenin giving a speech

ಮಾರ್ಕ್ಸ್ 1883ರಲ್ಲೂ ಎಂಗೆಲ್ಸ್‌ 1895ರಲ್ಲೂ ಮರಣಹೊಂದಿದರು. 1871ರಲ್ಲಿ ಶೋಷಿತ ಜನರ ನೇತೃತ್ವದಲ್ಲಿ ಫ್ರಾನ್ಸ್‌ ದೇಶದಲ್ಲಿ ಸ್ವಲ್ಪ ಕಾಲದವರೆಗೆ ಯಶಸ್ವಿಯಾಗಿ ವಿರಾಜಿಸಿದ ಪ್ಯಾರಿಸ್ ಕಮ್ಯೂನ್ ಎಂಬ ಕ್ರಾಂತಿಕಾರಿ ಮತ್ತು ಸಮಾಜವಾದಿ ಆಂದೋಲನವನ್ನು ಬಿಟ್ಟರೆ, ಒಂದನೆಯ ಮಹಾಯುದ್ಧ (1914-18) ಮುಗಿಯುವವರೆಗೂ ಯಾವ ಸಮಾಜವಾದಿ ಕ್ರಾಂತಿಯೂ ಯುರೋಪ್ ಖಂಡದಲ್ಲಾಗಲೀ ಪ್ರಪಂಚದ ಇತರ ಭಾಗಗಳಲ್ಲಾಗಲೀ ನಡೆಯಲಿಲ್ಲ. ಈ ಕಾರಣದಿಂದ ಅನೇಕ ಸಮಾಜವಾದಿ ಮುಖಂಡರು ಮಾಕ್ರ್ಸ್‌ ಮತ್ತು ಎಂಗೆಲ್ಸ್‌ರ ಸಿದ್ಧಾಂತವನ್ನು ತೀಕ್ಷ್ಣವಾದ ವಿಮರ್ಶೆಗೆ ಒಳಪಡಿಸಿದರು. ಸುಧಾರಣಾ ಸಮಾಜವಾದಿ ತತ್ತ್ವಕ್ಕೆ (ರಿಫಾರ್ಮಿಸ್ಟ್‌ ಸೋಷಿಯಲಿಸಂ) ಬೆಂಬಲ ಕೊಟ್ಟರು. ಇಷ್ಟಲ್ಲದೆ, ಬಂಡವಾಳ ವ್ಯವಸ್ಥೆಯ ಆರ್ಥಿಕ ಚಲನವಲನದ ಬಗ್ಗೆ ಅದು ವ್ಯಕ್ತಪಡಿಸುವ ಘರ್ಷಣೆಗಳ ಬಗ್ಗೆ, ಕಾರ್ಮಿಕವರ್ಗದ ಪಾತ್ರದ ಬಗ್ಗೆ-ಮಾಕ್ರ್ಸ್‌-ಎಂಗೆಲ್ಸ್‌ ರೂಪಿಸಿರುವ ಸಿದ್ಧಾಂತದಲ್ಲಿ ಅಪನಂಬಿಕೆ ವ್ಯಕ್ತಪಡಿಸಿದರು. ಮಾಕ್ರ್ಸ್‌-ಎಂಗೆಲ್ಸ್‌ ಸಿದ್ಧಾಂತ ತಪ್ಪು ಸೂಚನೆಗಳನ್ನು ಕೊಟ್ಟಿದೆಯೆಂದೂ ಬಂಡವಾಳ ಅರ್ಥವ್ಯವಸ್ಥೆ-ಯಾವ ವಿಪ್ಲವಕ್ಕೂ ಸಿಗದೆ ಸುಗಮವಾಗಿ ಬೆಳೆಯಬಲ್ಲುದೆಂದೂ ಬಂಡವಾಳ ಅರ್ಥವ್ಯವಸ್ಥೆಯ ಸುಗಮ ಬೆಳೆವಣಿಗೆಯಿಂದ ಕ್ರಾಂತಿಯ ಚಿಹ್ನೆಗಳು ಹತ್ತಿಕ್ಕಲು ಸಾಧ್ಯವಾಗಿರುವುದಲ್ಲದೆ ಅದರ ಸಾಧ್ಯತೆಯೂ ಸುಳ್ಳಾಗಿದೆಯೆಂದೂ ಸಾರಿದರು. ಇಂಥ ಪರಿಸ್ಥಿತಿಯಲ್ಲಿ ಮಾಕ್ರ್ಸ್‌ ಮತ್ತು ಎಂಗೆಲ್ಸ್‌ರ ವಿಮರ್ಶನ ದಿಕ್ಸೂಚಿ ನಿಷ್ಪ್ರಯೋಜಕವಾಗಿ ಕಂಡುಬಂತು. ಇದನ್ನು ನಂಬಬೇಕೆ ಅಥವಾ ತ್ಯಜಿಸಬೇಕೆ ಎಂಬುದನ್ನು ಹೇಳುವುದು ಕಷ್ಟವೆಂಬಷ್ಟು ಮಟ್ಟಿಗೆ ಒಂದನೆಯ ಮಹಾಯುದ್ಧ ಮುಕ್ತಾಯಕ್ಕೆ ಬರುತ್ತಿದ್ದಂತೆ ಇತಿಹಾಸವೇ ಹುಚ್ಚೆದ್ದು ಕುಣಿಯುವಂತೆ ಯುರೋಪ್ ಖಂಡದ ನಾನಾ ಮೂಲೆಗಳಲ್ಲಿ ಸಮಾಜವಾದೀ ಕ್ರಾಂತಿಯ ಆಸ್ಫೋಟನೆಗಳು ನಡೆದವೆಂಬುದನ್ನು ಗಮನಿಸಬೇಕು. ಇವುಗಳಲ್ಲಿ ಅತ್ಯಂತ ಪ್ರಾಮುಖ್ಯವಾದದ್ದು ರಷ್ಯದಲ್ಲಿ ಲೆನಿನನ ಮುಖಂಡತ್ವದಲ್ಲಿ ನಡೆದ ಸಮಾಜವಾದಿ ಕ್ರಾಂತಿ (1917). ಪ್ರಪಂಚದಲ್ಲಿ ಮೊಟ್ಟಮೊದಲನೆಯ ಬಾರಿಗೆ ಕಾರ್ಮಿಕರ ಪ್ರಭುತ್ವದ ಆಶ್ರಯದಲ್ಲಿ ಸಮಾಜವಾದಿ ಸಮಾಜದ ಘೋಷಣೆ ಆಯಿತು; ಕಮ್ಯೂನಿಸ್ಟ್‌ ರಾಜ್ಯವೊಂದರ ಉದಯವಾಯಿತು. ಆಕಸ್ಮಿಕವಾಗಿ ಸಮಾಜದ ಕ್ರಾಂತಿಯೊಂದು ನಡೆದಿದೆಯೆಂದೂ ಇದರಿಂದ ಸಮಾಜವಾದದ ವಿರೋಧಿಗಳು ಯಾವ ಬಗೆಯಲ್ಲೂ ಹೆದರಬೇಕಿಲ್ಲವೆಂದು ಅನೇಕರು ಸಾರುತ್ತಿದ್ದಂತೆಯೇ ಎರಡನೆಯ ಮಹಾಯುದ್ಧದ ಅನಂತರ ಪುನಃ ಪ್ರಪಂಚದಾದ್ಯಂತ ಅನೇಕ ರಾಷ್ಟ್ರಗಳು ಇಂಥ ಕ್ರಾಂತಿಯ ಸೆಳೆತಕ್ಕೆ ಸಿಕ್ಕಿದುವು. ಅನೇಕ ಸ್ವತಂತ್ರ ರಾಷ್ಟ್ರಗಳಲ್ಲಿ ಸಮಾಜವಾದಿ ಚಳವಳಿ ಯಶಸ್ವಿಯಾದರೆ, ವಸಾಹತುಗಳಲ್ಲಿ ರಾಷ್ಟ್ರೀಯ ವಿಮೋಚನ ಚಳವಳಿಗಳು ನಡೆದವು. ಈ ಚಳವಳಿಗಳು ತಳೆದ ರೂಪ ಯಾವುದೇ ಇರಲಿ, ಬಂಡವಾಳ ಅರ್ಥವ್ಯವಸ್ಥೆಯ ಸುಗಮ ನಿರ್ವಹಣೆಯ ತತ್ತ್ವಕ್ಕೆ ಇವುಗಳಿಂದ ತಿಲಾಂಜಲಿ ನೀಡಿದಂತಾಗಿದೆ. ಕಮ್ಯೂನಿಸ್ಟ್‌ ತತ್ತ್ವದ ಪ್ರಭಾವಕ್ಕೆ ಒಳಗಾಗಿವೆಯೋ ಎಂಬಂತೆ ಸಮಾಜವಾದಿ ವ್ಯವಸ್ಥೆಯ ಅನೇಕ ಮೂಲ ತತ್ತ್ವಗಳು-ಯೋಜನೆ, ಯೋಜಿತ ಉತ್ಪಾದನೆ ಮತ್ತು ಆರ್ಥಿಕ ಬೆಳೆವಣಿಗೆ, ಖಾಸಗಿ ಉತ್ಪಾದನೆಯ ಮೇಲೆ ಹತೋಟಿ, ಸರ್ಕಾರದ ವತಿಯಿಂದ ಕೈಗಾರಿಕೆಗಳ ಸ್ಥಾಪನೆ, ರಾಷ್ಟ್ರೀಕರಣ, ಭೂ ಸುಧಾರಣೆ ಮುಂತಾದವನ್ನು ಆಚರಣೆಗೆ ತರಲಾಗಿದೆ. ಬಂಡವಾಳ ವ್ಯವಸ್ಥೆಗೆ ಹೊಂದಿಕೊಂಡಿದ್ದ ಮತ್ತು ಶಾಶ್ವತವು ಸ್ವತಂತ್ರ ಸಮಾಜದ ಹೆಗ್ಗರುತುಗಳು ಎಂದೆನ್ನಲಾದ ಅನೇಕ ಹಕ್ಕು ಮತ್ತು ಹಿತಗಳ ಮೇಲೆ ದಾಳಿ ನಡೆದಿದೆ. ಮಾಕ್ರ್ಸ್‌-ಎಂಗೆಲ್ಸರು ಆಧುನಿಕ ಸಮಾಜವಾದವನ್ನು ಬೋಧಿಸುವುದಕ್ಕೂ ಮುಂಚೆಯೇ ತಮ್ಮಲ್ಲಿ ಸಮಾಜವಾದದ ಪರಂಪರೆ ಬೆಳೆದು ಬಂದಿತ್ತೆಂದು ಸಮಾಜವಾದಿ ವ್ಯವಸ್ಥೆಯ ಕಟ್ಟಾ ವಿರೋಧಿಗಳು ಹೇಳಲಾರಂಭಿಸಿದ್ದಾರೆ. ಮಾಕ್ರ್ಸ್‌-ಎಂಗೆಲ್ಸರ ಸಿದ್ಧಾಂತದಲ್ಲಿ ಅಡಗಿರುವ ನಿಜಾಂಶಕ್ಕೆ ವೈಜ್ಞಾನಿಕ ಸಮಾಜವಾದಿ ತತ್ತ್ವದ ಇಷ್ಟೊಂದು ಯಶಸ್ವಿ ಮುನ್ನೋಟಕ್ಕೆ ಮತ್ತು ಅದು ಬೀರಿರುವ ಪ್ರಭಾವಕ್ಕೆ ಬೇರೊಂದು ಸಾಕ್ಷ್ಯ ಚಿತ್ರವನ್ನು ಕೊಡುವುದು ಅನವಶ್ಯಕವೆಂಬುದು ಸಮಾಜವಾದಿಗಳು ಇದಕ್ಕೆ ನೀಡುವ ಉತ್ತರ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  • Marxists.org (Marxists Internet Archive) An archive of over 53,000 documents from 592 authors in 45 languages, mostly Marxist works
  • Libcom.org Extensive library of almost 20,000 articles, books, pamphlets and journals on libertarian communism
  •   "Communism" . Encyclopædia Britannica (11th ed.). 1911. {{cite encyclopedia}}: Cite has empty unknown parameters: |separator= and |HIDE_PARAMETER= (help)
  • Samuel McCune Lindsay (1905). "Communism" . New International Encyclopedia.
  • The Radical Pamphlet Collection at the Library of Congress contains materials on the topic of communism.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: