ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಹುಡುಕಲು ಸರ್ಚ್ ಎಂಜಿನ್ ಅಥವಾ ಶೋಧನ ಚಾಲಕ ತಂತ್ರಾಂಶಗಳು ಸಹಾಯಮಾಡುತ್ತವೆ. ಗೂಗಲ್, ಬಿಂಗ್ ಇವೆಲ್ಲ ಸರ್ಚ್ ಎಂಜಿನ್‌ಗಳಿಗೆ ಉದಾಹರಣೆಗಳು[].

ಯಾವುದೇ ವಿಷಯದ ಕುರಿತು ವಿಶ್ವವ್ಯಾಪಿ ಜಾಲದಲ್ಲಿ ಇರಬಹುದಾದ ಮಾಹಿತಿಯನ್ನು ಅತ್ಯಂತ ಸುಲಭವಾಗಿ ಹುಡುಕಿಕೊಡುವ ಈ ತಂತ್ರಾಂಶಗಳು ವಿಶ್ವದಾದ್ಯಂತ ಇರುವ ಅಂತರಜಾಲ ಬಳಕೆದಾರರಲ್ಲಿ ಅತ್ಯಂತ ಜನಪ್ರಿಯವಾಗಿವೆ. ವಿವಿಧ ವಿಷಯಗಳಿಗೆ ಸಂಬಂಧಪಟ್ಟ ಪಠ್ಯರೂಪದ ಮಾಹಿತಿಯಷ್ಟೇ ಅಲ್ಲದೆ ಚಿತ್ರಗಳು, ಸುದ್ದಿಗಳು, ಇ-ಪುಸ್ತಕಗಳು, ಭೂಪಟಗಳು ಮುಂತಾದ ಅನೇಕ ರೂಪಗಳಲ್ಲಿರುವ ಮಾಹಿತಿಯನ್ನು ಸರ್ಚ್ ಎಂಜಿನ್‌ಗಳು ಹುಡುಕಿಕೊಡುತ್ತವೆ.

ಕೆಲಸಮಾಡುವ ವಿಧಾನ

ಬದಲಾಯಿಸಿ

ನಿಮ್ಮ ಇಚ್ಛೆಯ ವಿಷಯಗಳಿಗಾಗಿ ವಿಶ್ವವ್ಯಾಪಿ ಜಾಲದ ಪುಟಗಳ ನಡುವೆ ಹುಡುಕಾಟ ನಡೆಸುವುದು ಸರ್ಚ್ ಎಂಜಿನ್‌ಗಳ ಕೆಲಸ. ನಾವು ಹುಡುಕುತ್ತಿರುವ ವಿಷಯಕ್ಕೆ ಸಂಬಂಧಿಸಿದ ಮುಖ್ಯ ಪದಗಳನ್ನು (ಕೀ ವರ್ಡ್ಸ್) ನಿರ್ದಿಷ್ಟರೂಪದಲ್ಲಿ ಬೆರಳಚ್ಚಿಸಿ, ಹುಡುಕುವ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿದರೆ, ಸರ್ಚ್ ಎಂಜಿನ್‌ಗಳು ನಮಗೆ ಬೇಕಾದ ಮಾಹಿತಿ ವಿಶ್ವವ್ಯಾಪಿ ಜಾಲದಲ್ಲಿ ಎಲ್ಲೆಲ್ಲಿ ಲಭ್ಯವಿದೆ ಎಂಬುದನ್ನು ಹುಡುಕಿಕೊಡುತ್ತವೆ; ಕಡತಗಳು, ಚಿತ್ರಗಳು, ಸುದ್ದಿಗಳು, ವಿಡಿಯೋಗಳು - ಹೀಗೆ ನಮಗೆ ಬೇಕಾದ ವಿಷಯಕ್ಕೆ ಸಂಬಂಧಪಟ್ಟ, ಯಾವುದೇ ರೂಪದಲ್ಲಿರುವ ಮಾಹಿತಿಯನ್ನು ಪತ್ತೆಮಾಡುತ್ತವೆ. ಹೀಗೆ ಹುಡುಕಿದ ಮಾಹಿತಿಯನ್ನು ಅದರ ಪ್ರಾಮುಖ್ಯತೆಗೆ ಅನುಗುಣವಾಗಿ ಜೋಡಿಸಿ ಅವು ನಿಮ್ಮ ಮುಂದೆ ಪ್ರದರ್ಶಿಸುತ್ತವೆ. ಇಂತಹ ಪ್ರತಿಯೊಂದು ಮಾಹಿತಿಯೂ ಒಂದೊಂದು ತಂತು ಅಥವಾ 'ಲಿಂಕ್'ನ ರೂಪದಲ್ಲಿರುವುದರಿಂದ ಅವುಗಳ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಮಾಹಿತಿ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ.

ವೆಬ್ ಸ್ಪೈಡರ್‌

ಬದಲಾಯಿಸಿ

ಈ ಮಾಹಿತಿ ಹುಡುಕಾಟ ನಡೆಸಲು ಸರ್ಚ್ ಎಂಜಿನ್‌ಗಳು ವೆಬ್ ಸ್ಪೈಡರ್‌ಗಳೆಂಬ ತಂತ್ರಾಂಶಗಳನ್ನು ಬಳಸುತ್ತವೆ. ವಿಶ್ವವ್ಯಾಪಿ ಜಾಲದಲ್ಲಿರುವ ಲಕ್ಷಾಂತರ ಜಾಲತಾಣಗಳನ್ನು (ವೆಬ್‌ಸೈಟ್) ಹಾಗೂ ಅವುಗಳಲ್ಲಿರುವ ಪುಟಗಳನ್ನು ಅವುಗಳ ಜನಪ್ರಿಯತೆಗೆ ಅನುಗುಣವಾಗಿ ವರ್ಗೀಕರಿಸಿ, ಆ ಪುಟಗಳಲ್ಲಿರುವ ಮಾಹಿತಿ ಯಾವ ವಿಷಯಗಳಿಗೆ ಸಂಬಂಧಿಸಿದ್ದು ಎಂಬ ಅಂಶವನ್ನು ದಾಖಲಿಸಿಕೊಳ್ಳುವುದು ಇವುಗಳ ಕೆಲಸ. ಜಾಲತಾಣಗಳನ್ನು ರೂಪಿಸುವವರು ಇಂತಹ ಸ್ಪೈಡರ್‌ಗಳಿಗೆ ಸಹಾಯವಾಗಲೆಂದೇ ತಮ್ಮ ತಾಣದ ಪುಟಗಳ ಬಗ್ಗೆ ಪ್ರಮುಖ ಮಾಹಿತಿಗಳನ್ನು 'ಮೆಟಾ ಟ್ಯಾಗ್'ಗಳ ರೂಪದಲ್ಲಿ ಸಂಕ್ಷಿಪ್ತವಾಗಿ ಶೇಖರಿಸಿಟ್ಟಿರುತ್ತಾರೆ. ಸ್ಪೈಡರ್‌ಗಳ ಹುಡುಕಾಟ ಇದೇ ಮೆಟಾ ಟ್ಯಾಗ್‌ಗಳನ್ನು ಆಧರಿಸಿರುತ್ತದೆ.

ಸ್ಪೈಡರ್‌ಗಳು ಸಾಮಾನ್ಯವಾಗಿ ತಮ್ಮ ಹುಡುಕಾಟವನ್ನು ಅತ್ಯಂತ ಪ್ರಸಿದ್ಧ ಜಾಲತಾಣಗಳು ಹಾಗೂ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಸರ್ವರ್‌ಗಳಿಂದ ಪ್ರಾರಂಭಿಸುತ್ತವೆ. ಅಲ್ಲಿಂದ ಮುಂದಕ್ಕೆ ಆ ಜಾಲತಾಣ ಹಾಗೂ ಆ ಜಾಲತಾಣವನ್ನು ಹೊಂದಿರುವ ಸರ್ವರ್‌ನಲ್ಲಿರುವ ಎಲ್ಲ ಪುಟಗಳ ಮೇಲೂ ಒಮ್ಮೆ ಕಣ್ಣಾಡಿಸಿ ಅವುಗಳಲ್ಲಿರುವ ಮಾಹಿತಿಯನ್ನು ವರ್ಗೀಕರಿಸಿಟ್ಟುಕೊಳ್ಳುವ ಕೆಲಸ ಪ್ರಾರಂಭವಾಗುತ್ತದೆ. ಒಂದು ಜಾಲತಾಣದಲ್ಲಿರುವ ಎಲ್ಲ ತಂತುಗಳನ್ನೂ ಈ ಜೇಡಗಳು ಹಿಂಬಾಲಿಸುವುದರಿಂದ ಅವುಗಳ ನಿಲುಕಿಗೆ ಸಿಗುವ ಪುಟಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಸ್ಪೈಡರ್‌ಗಳು ಸಂಗ್ರಹಿಸುವ ಮಾಹಿತಿಯ ಅಧಾರದ ಮೇಲೆ ಒಂದು ಅಕಾರಾದಿಯನ್ನು (ಇಂಡೆಕ್ಸ್) ತಯಾರಿಸಿಕೊಳ್ಳುವ ಸರ್ಚ್ ಎಂಜಿನ್‌ಗಳು ನಮಗೆ ಬೇಕಾದ ಮಾಹಿತಿಯನ್ನು ಅತ್ಯಂತ ವೇಗವಾಗಿ ಹುಡುಕಿಕೊಳ್ಳಲು ಸಹಾಯ ಮಾಡುತ್ತವೆ.

ವೈವಿಧ್ಯ

ಬದಲಾಯಿಸಿ

ಸರ್ಚ್ ತಂತ್ರಜ್ಞಾನ ಬೆಳೆದಂತೆ ಎಲ್ಲಬಗೆಯ ಮಾಹಿತಿಯನ್ನೂ ಹುಡುಕುಕೊಡುವ ಗೂಗಲ್‌ನಂತಹ ಸರ್ಚ್‌ಎಂಜಿನ್‌ಗಳ ಜೊತೆಗೆ ನಿರ್ದಿಷ್ಟ ವಿಷಯಗಳಿಗೆ (ಉದ್ಯೋಗಾವಕಾಶಗಳು, ವೈಜ್ಞಾನಿಕ ಮಾಹಿತಿ, ಪ್ರವಾಸ ಇತ್ಯಾದಿ) ಮಾತ್ರವೇ ಸೀಮಿತವಾದ ವರ್ಟಿಕಲ್ ಸರ್ಚ್ ಎಂಜಿನ್‌ಗಳೂ ಹುಟ್ಟಿಕೊಂಡಿವೆ. ಹೆಚ್ಚು ಪ್ರಚಲಿತದಲ್ಲಿರುವ ಪಠ್ಯಾಧಾರಿತ ಸರ್ಚ್ ಎಂಜಿನ್‌ಗಳ ಜೊತೆಗೆ ಚಿತ್ರ ಹಾಗೂ ಧ್ವನಿಯ ನೆರವಿನಿಂದ ಹುಡುಕಾಟವನ್ನು ಸಾಧ್ಯವಾಗಿಸುವ ಸರ್ಚ್ ಎಂಜಿನ್‌ಗಳೂ ಇವೆ.

ಬಾಹ್ಯ ಸಂಪರ್ಕ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ