ಸದಾಶಿವೇಶ್ವರ ದೇವಸ್ಥಾನ, ಪಜಿರಡ್ಕ
ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಪಜಿರಡ್ಕ ಎಂಬ ಹಳ್ಳಿಯಲ್ಲಿರುವ ಒಂದು ದೇವಾಲಯ. ಸಂಗಮ ಸದಾಶಿವ ಎಂದೂ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಈ ಮಂದಿರ ನೇತ್ರಾವತಿ ನದಿಯ ತಟದಲ್ಲಿ ಇದ್ದು, ನೇತ್ರಾವತಿ ಮತ್ತು ಮೃತ್ಯುಂಜಯ ಎಂಬ ಎರಡು ನದಿಗಳು ದೇವಸ್ಥಾನದ ಎದುರುಗಡೆ ಸಂಗಮಿಸಿ ನೇತ್ರಾವತಿಯಾಗಿ ಮುಂದೆ ಹರಿಯುವ ಕಾರಣದಿಂದ ಸಂಗಮ ಸದಾಶಿವ ಎಂಬ ಹೆಸರು ಬಂದಿದೆ[೧].
ಇತಿಹಾಸ
ಬದಲಾಯಿಸಿಸುಮಾರು ೮೦೦ ವರ್ಷಗಳ ಹಿಂದೆ ದೇವರಗುಡ್ಡೆ ಎಂದು ಕರೆಯಲ್ಪಡುವ “ಆದಿಪಜಿರಡ್ಕ’ದಲ್ಲಿ ಹುಲ್ಲು ಹೆರೆದು ತರುವುದೇ ಉದ್ಯೋಗವಾಗಿದ್ದ ಹೊಲತಿಯೊಬ್ಬಳು ತನ್ನ ಕಾಯಕವಾಗಿ ಹರಿತ ಕತ್ತಿಯನ್ನು ಹಿಡಿದು ಹಸಿರು ಹುಲ್ಲನ್ನು ಕಡಿಯುತ್ತಾ ಮುಂದುವರಿಯುತ್ತಿರುವಾಗ ಕತ್ತಿ ಕಪ್ಪಗಿನ ಕಲ್ಲೊಂದಕ್ಕೆ ತಾಗಿ ಆ ಕಲ್ಲಿನಿಂದ ರಕ್ತ ಹರಿದು ಬಂತು. ಹೆದರಿದ ಹೆಣ್ಣು ಊರೆಲ್ಲಾ ಬೊಬ್ಬಿಟ್ಟಳು. ಜನರೆಲ್ಲಾ ಓಡಿ ಬಂದು ಸ್ಥಳಪರಿಶೀಲನೆ ನಡೆಸಿದಾಗ ಕಂಡುಬಂದ ವಿಚಾರವೆಂದರೆ, ರಕ್ತ ಚಿಮ್ಮಿದ ಕಲ್ಲು ಸಾಮಾನ್ಯ ಕಲ್ಲಾಗಿರದೆ ಹಳೆಯ ಕಾಲದ ಶಿವಲಿಂಗವೆಂದು ಮನದಟ್ಟಾಯಿತು. ಪರಿಶೀಲನೆಯಿಂದ ಸಾವಿರಾರು ವರ್ಷಗಳ ಹಿಂದಿನ ಶಿವಾಲಯದ ಕುರುಹುಗಳು ಆ ಜಾಗದಲ್ಲಿ ಕಂಡುಬಂದವು. ಆ ಜಾಗದಲ್ಲಿ ಮತ್ತೆ ಆಲಯ ನಿರ್ಮಿಸಬೇಕೆಂದುಕೊಂಡರು. ಆದರೆ ಶಿವಗೃಹ ನಿರ್ಮಾಣಕ್ಕೆ ಉತ್ತಮ ನದಿ ಮೊದಲಾದ ಅವಶ್ಯಕತೆ, ಪತ್ರ ಪುಷ್ಪ ಫಲಗಳುಳ್ಳ ಧಾತ್ರಿ, ಧನ, ಗೋದಾನ್ಯವಸೆವ ಧರಿತ್ರಿ ಇವೆಲ್ಲ ಬೇಕು. ನದಿಯಲ್ಲದಿದ್ದರೂ ಹಿಂದೊಮ್ಮೆ ಉಳಿದೆಲ್ಲ ವೈಭವವಿದ್ದಿರಬಹುದಾದರೂ ಅಲ್ಲಿ ಆ ಕಾಲಕ್ಕೆ ಅದು ಪಾಳುಬಿದ್ದ ಗುಡ್ಡವಾಗಿತ್ತು. ಜನವಸತಿಗಳಿಂದ ಬಲು ದೂರವಾಗಿತ್ತು. ಹಾಗೆಂದು ಊರ ಮುಂದಾಳುಗಳಿಗೆ ಹಗಲು-ರಾತ್ರಿ ಚಿಂತೆಯುಂಟಾಯಿತು. ಊರ ಹಿರಿಯರಿಗೆ ಕನಸಿನಲ್ಲಿ ಸದಾಶಿವನ ದರ್ಶನವಾಯಿತು. ಮೃತ್ಯುಂಜಯ ಹಾಗೂ ನೇತ್ರಾವತಿ ಸಂಧಿಸಿ ಲೀನವಾಗುವಲ್ಲಿ ಗುಡಿ ಕಟ್ಟುವಂತೆ ಪರಶಿವನ ಆಜ್ಞೆಯಾಯಿತು. ಇಂದು ಚಕ್ರತೀರ್ಥವೆಂದು ಪ್ರಸಿದ್ಧವಾದ ಸಂಗಮ ತೀರ್ಥದ ದಡದಲ್ಲೇ ಗುಡಿ ಕಟ್ಟಿ ಲಿಂಗ ಸ್ಥಾಪನೆಯಾಗಿ ಶಿವಾಲಯ ತಲೆಯೆತ್ತಿ ನಿಂತಿತು. ಪಜಿರಡ್ಕದ ಸದಾಶಿವ ಇಲ್ಲಿ ನೆಲೆಯಾದನು. ಅಂದಿನಿಂದ ಈ ಸ್ಥಳ ಪಜಿರಡ್ಕ ಎಂದೇ ಪ್ರಸಿದ್ಧವಾಯಿತು. ಪಜಿರಡ್ಕ ಎಂದರೆ ತುಳು ಭಾಷೆಯಾಗುತ್ತದೆ. ಹೇಗೆಂದರೆ ಪಜಿರ್ ಎಂದರೆ ತುಳು ಭಾಷೆಯಲ್ಲಿ ಹಸಿರು ಹುಲ್ಲು ಎಂದರ್ಥ, ಹಾಗೇಯೇ ಅಡ್ಕ ಎಂದರೆ ಸ್ಥಳ ಎಂದರ್ಥ ಇವೆರಡೂ ಕೂಡಿ ಪಜಿರಡ್ಕ ಎಂದಾಯಿತು.
ಹಿಂದೆ ಲಿಂಗೋದ್ಭವವಾದ ಅಂದಿನ ಪಜಿರಡ್ಕ-ದೇವರಗುಡ್ಡೆ ಇಂದಿನ ಪಜಿರಡ್ಕ ದೇವಾಲಯದ ಒಂದು ಕಿ.ಮೀ ದೂರದಲ್ಲಿದೆ. ಆದಿಪಜಿರಡ್ಕ ಎಂದು ಕರೆಯಲ್ಪಡುವ ಇಲ್ಲಿ ಭಗ್ನ ಲಿಂಗ ಹಾಗೂ ಹಳೆಯ ಮಂದಿರದ ಭಗ್ನಾವಶೇಷಗಳನ್ನು ಈಗಲೂ ಕಾಣಬಹುದು. ಸ್ಥಳೀಯರು ಹೇಳುವಂತೆ ಈ ಈಶ್ವರ ದೇವಲಯ, ಧರ್ಮಸ್ಥಳ ಮಂಜುನಾಥೇಶ್ವರ ಮಂದಿರಕ್ಕೂ ಹಳೆಯದಾದ ಮಂದಿರ ![೨].
ಈ ಶಿವ ದೇವಾಲಯವನ್ನು ಎರಡು ಬಾರಿ ಅಂದರೆ ೧೯೮೦ ಮತ್ತು ೨೦೦೮ರಲ್ಲಿ ನವೀಕರಿಸಲಾಯಿತು[೩].. ಎರಡನೇ ಬಾರಿ ನವೀಕರಿಸಿದ ನಂತರ, ೨೦೦೯ನೇ ಇಸವಿಯ ಎಪ್ರಿಲ್ ೪ರಿಂದ ೧೨ರವರೆಗೆ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮವೂ ನಡೆಯಿತು. ಸುತ್ತಲಿನ ಹತ್ತು ಗಾಮಗಳನ್ನೊಳಗೊಂಡ ಪಜಿರಡ್ಕ ಮಾಗಣೆ ಬೈಲಂಗಡಿಯ ಮಾಲೇರ ಸೀಮೆಗೆ ಸೇರಿದ್ದು. ಬೈಲಂಗಡಿಯರಸರ ಕಾಲದಲ್ಲಿ ಪಜಿರಡ್ಕ ಮಾಗಣೆಗೆಲ್ಲಾ ಏಕಮೇವಾದ್ವಿತೀಯವಾಗಿ ವಿಜೃಂಭಿಸಿದ ದೇವ ಮಂದಿರ.
ದೇವಸ್ಥಾನ ತಲುಪುವ ದಾರಿ
ಬದಲಾಯಿಸಿಪಜಿರಡ್ಕ ಧರ್ಮಸ್ಥಳದಿಂದ ಸುಮಾರು 9 ಕಿಲೋಮೀಟರ್ ಉಜಿರೆ ಕಡೆ ಬರುವಾಗ ನೀರಚಿಲುಮೆ ಎಂಬ ಜಾಗ ಸಿಗುತ್ತದೆ. ಅಲ್ಲಿಂದ ೩೦೫ ಕೀ.ಮೀ ಸಾಗಿದರೆ ಪಜಿರಡ್ಕ ದೇವಸ್ಥಾನ ಸಿಗುವುದು. ಈ ಮಾರ್ಗವಲ್ಲದೇ ಇನ್ನೊಂದು ಮಾರ್ಗವಿದೆ. ಉಜಿರೆಯಿಂದ ಚಾರ್ಮಾಡಿ ಕಡೆಗೆ ಸಾಗುವಾಗ ಮಾರ್ಗ ಮಧ್ಯೆ ಸಿಗುವ ನಿಡಿಗಲ್ ಎಂಬಲ್ಲಿಂದ ೩೦೫ ಕೀ ಮೀ ಒಳಗೆ ಸಾಗಿದರೆ ಈ ದೇವಸ್ಥಾನ ತಲುಪಬಹುದು.
ಉಲ್ಲೇಖಗಳು
ಬದಲಾಯಿಸಿ- ↑ "Amidst Devine surroundings". deccanherald.com. printersmysore. Retrieved 27 May 2021.
- ↑ "Amidst Devine surroundings". deccanherald.com. printersmysore. Retrieved 27 May 2021.
- ↑ "Amidst Devine surroundings". deccanherald.com. printersmysore. Retrieved 27 May 2021.