ಶಾಸನದ ಭಾವಾರ್ಥ

1. ಜಯತಿ ಶ್ರೀ ಪರಿಷ್ಟಙ್ಗಶ್ಯಾಜ್ರ [ವ್ಯಾ] ನತಿರಚ್ಯುತಃ ದಾನವಾಕ್ಲೋರ್ಯುಗಾನ್ತಗ್ನಿಃ [ಶಿಷ್ಟಾನಾನ್ತು ಸುದರ್ಶನ: || 2. ನಮ: ಶ್ರೀಮತ್ಕದಂಬಪನ್ಯಾಗಸಂಪನ್ನನ್ನಲಭೋರ[ನಾ] ಅರಿಕ 3. ಕುಸ್ಥಭಟ್ಟೋರನಾಳೆ ನರಿದಾವಿ[ಳೆ] ನಾಡುಳ್ ಮೃಗೇಶನಾ 4. ಗೇನ್ದ್ರಾಭೀಳಟಹರಪ್ಪೋರ್ ಶ್ರೀ ಮೃಗೇಶನಾಗಾಹ್ವಯ 5. ರಿವ್ರರಾ ಬಟರಿಕುಲಾಮಲವೋಮತಾರಾಧಿನಾಥನ್ನಳಪ 6. ಗಣಪಶುಪತಿಯಾ ದಕ್ಷಿಣಾಪಥ ಬಹುಶತಹವನಾ 7. ಹವದು[ಳ್] ಪಶುಪ್ರದಾನ ಶೌಯ್ಯೋದ್ಯಮಭರಿತೋ [ನ್ದಾನ]ಪ 8. ಶುಪತಿಯೆನ್ನು ಪೊಗಳೆಪೊಟ್ಟಣ 9. ಪಶುಪತಿನಾಮಧೇಯನಾಸರಕ್ಕೆಲ್ಲಭಟರಿಯಾ ಪ್ರೇಮಾಲಯ 10. ಸುತನೈ ಸೇನ್ದ್ರ ಕಬಣೋಭಯದೇಶದಾ ವೀರಾಪುರುಷ ಸಮಕ್ಷ 11. ದೆ ಕೇಕಯ ಪಲ್ಲವರಂ ಕಾದೆರಿದು ಪೆತ್ತಜಯನಾ ವಿಜ ಅರಸನೆ 12. ಬಾಳು ಪಲ್ಮಡಿಉಂ ಮೂಳಿವಳ್ಳಿಉಂ ಕೊ ಟ್ಯಾರ್ 13. ಬಟಾರಿಕುಲದೊನಳುಕದಮ್ಯಳೋನ್ ಮಹಾಪಾತಕನ ಇರುಂ ಸಙ್ಗದ 14. ವಿಜಾರಸರುಂ ಪಲ್ಮಡಿಗೆ ಕುರು ಮಿಡಿವಿಟ್ಟಾರ್ ಅದಾನಳಿವೊನೆ 15. ಮಹಾಪಾತಕಮ್ ಸ್ವಸ್ತಿ 16. ಭಟ್ಟಗ್ರೀಗಳೆ ಒಡ್ಡಲಿ ಆ ಪತ್ತೊನ್ದಿ ವಿಟ್ಟಾರಕರ

ಶಾಸನದ ಮುಖ್ಯ ಅರ್ಥ

ಲಕ್ಷ್ಮಿಯಿಂದ ಕೂಡಿದ ಅಚ್ಯುತನು ಶ್ಯಾರ್ಙ್ಗವೆಂಬ ಬಿಲ್ಲನ್ನು ಬಗ್ಗಿಸಿ ಹಿಡಿದಿದ್ದಾನೆ. ದಾನವರ(ರಾಕ್ಷಸರ) ಕಣ್ಣಿಗೆ ಪ್ರಳಯ ಕಾಲದ ಅಗ್ನಿಯಂತೆ ಕಾಣುತ್ತಾನೆ. ಸಜ್ಜನರಿಗೆ ಸುದರ್ಶನ ಚಕ್ರದಂತಿರುತ್ತಾನೆ." ನಮನ. ಕದಂಬರಾಜ, ತ್ಯಾಗಸಂಪನ್ನ, ಕಲಭೋರನ ಶತ್ರು ಎಂದೆನಿಸಿರುವ ಕಕುಸ್ಥ ಭಟ್ಟೋರನು ಆಳುತ್ತಿದ್ದ ಕಾಲ, ಅವನ ಅಧೀನದಲ್ಲಿ ಆಗ ನರಿದಾವಿಳೆ ನಾಡಿನಲ್ಲಿ ಮೃಗೇಶ ಮತ್ತು ನಾಗ ಎಂಬ ಅಧಿಕಾರಿಗಳಿದ್ದರು ಮೃಗರಾಜ ಸರ್ಪರಾಜರೆಂಬಂತೆ ವೈರಿ ಭಯಂಕರರೆನಿಸಿದ್ದರು. ಪಶುಪತಿ ಎಂಬ ಹೆಸರಿನವನಿದ್ದ. ಅವನು ಕೀರ್ತಿಗೊಂಡ ಬಟರಿ ವಂಶವೆಂಬ ನಿರ್ಮಲ ಆಕಾಶಕ್ಕೆ ಚಂದ್ರನಂತಿದ್ದ ಆಳಪ ವಂಶ ಸಮೂಹಕ್ಕೆ ಪಶುಪತಿ (ಶಿವ) ಎನಿಸಿದ್ದ. ಪ್ರಸಿದ್ಧವಾದ ದಕ್ಷಿಣಾಪಥದಲ್ಲಿ ನೂರಾರು ಯುದ್ಧಗಳೆಂಬ ಯಜ್ಞ ಮಾಡಿ ಬಲಿಗೊಟ್ಟು ಶೌರ್ಯ ತೋರಿದ್ದ, ದಾನ ಪಶುಪತಿ ಎಂದು ಹೊಗಳಲ್ಪಟ್ಟಿದ್ದ. ಅವನು ಸೇನ್ದ್ರಕರು ಮತ್ತು ಬಾಣರ ಸೈನ್ಯವನ್ನು ಸೇರಿಸಿಕೊಂಡು (ಕದಂಬರ ಪರವಾಗಿ) ಕೇಕಯ ಪಲ್ಲ ವರೆದುರು ಯುದ್ದ ಮಾಡಿದ ಆ ಯುದ್ಧದ ಸಂದರ್ಭದಲ್ಲಿ ಸರಕ್ಕೆಲ್ಲ ಭಟರಿಯ ಪ್ರೀತಿಯ ಮಗನೆನಿಸಿದ್ದ ವಿಜಅರಸನು ಕೇಕಯ ಪಲ್ಲವರೆದುರು ಕದಂಬರ ಪರವಾಗಿ ಹೋರಾಡಿ ಎರಗಿ ಜಯ ತಂದು ಕೊಟ್ಟ. ಅದಕ್ಕಾಗಿ ಸೇನ್ದ್ರಕ ಮತ್ತು ಬಾಣದೇಶದ ವೀರರ ಸಮ್ಮುಖದಲ್ಲಿ ಪಲ್ಮಡಿಯನ್ನೂ (ಹಲ್ಮಿಡಿ) ಮೂಳಿವಳ್ಳಿಯನ್ನೂ (ಮುಗುಳುವಳ್ಳಿ) ಕೊಡಲಾಯಿತು ಅಂದರೆ ವೀರನ ಕತ್ತಿ ತೊಳೆದು ವೀರ ದಾನ ಕೊಡುವ ಸಮಾರಂಭ ಬಾಳ್ಳಟ್ಟುವಾಗಿ ನಾಡ ಅಧಿಕಾರಿಗಳಾದ ಶ್ರೀಮೃಗೇಶ ಮತ್ತು ನಾಗ ಅವರುಗಳು ವಿಜಅರಸನಿಗೆ ಆ ಗ್ರಾಮಗಳನ್ನು ನೀಡಿದರು. ಈ ದಾನವನ್ನು ಕದ್ದವನಿಗೆ ಮಹಾಪಾಪ ಬರುತ್ತದೆ. ಸೈನ್ಯ ತೆರಿಗೆ ಅಧಿಕಾರಿಗಳಾಗಿದ್ದ ಮೃಗೇಶ ಮತ್ತು ನಾಗರು ಸಬ್ಬಿಂಗದವರು ವಿಜಅರಸರು ಪಲ್ಮಡಿಗೆ, ಕುರುಬರಿಗೆ ಸಣ್ಣ ತೆರಿಗೆ ವಿನಾಯಿತಿಯಾದ ಕುರುಂಬಿಡಿ (ಕುಮಿಮ್ಮಿಡಿ) ಯನ್ನು ಬಿಟ್ಟರು. ಇದನ್ನು (ವಿನಾಯಿತಿಯನ್ನು) ಕೆಡಿಸಿದವನಿಗೆ ಮಹಾಪಾತಕವು ಉಂಟಾಗುತ್ತದೆ.

ಎಡ ಪಕ್ಕದಲ್ಲಿರುವ ಸಾಲು ಇಲ್ಲಿನ ಗದ್ದೆಯ ಉತ್ಪನ್ನದಲ್ಲಿ ಭಟ್ಟರಿಗೆ (ಬ್ರಾಹ್ಮಣರಿಗೆ) ಹತ್ತನೆಯ ಒಂದು ಭಾಗದಷ್ಟು ತೆರಿಗೆ ವಿನಾಯಿತಿಯನ್ನು ಕೊಟ್ಟರು