ಸದಸ್ಯ:Varshini Chandrashekar/ನನ್ನ ಪ್ರಯೋಗಪುಟ
ಏಕಾಣುಜೀವಿಶಾಸ್ತ್ರ
ಅತ್ಯಂತ ಕೆಳದರ್ಜೆಯ ಮತ್ತು ಒಂದೇ ಕೋಶವಿರುವ ಜೀವಿಗಳಾದ ಏಕಾಣುಜೀವಿಗಳ (ಬ್ಯಾಕ್ಟೀರಿಯಾ) ಶಾಸ್ತ್ರೀಯ ಅಭ್ಯಾಸ (ಬ್ಯಾಕ್ಟೀರಿಯಾಲಜಿ).[೧] ಈ ಶಾಸ್ತ್ರದ ಶಾಖೆಗಳು ಅನೇಕ ವಿಜ್ಞಾನ ಕ್ಷೇತ್ರಗಳಲ್ಲಿ ವ್ಯಾಪಿಸಿವೆ. ಉದಾಹರಣೆಗೆ ವೈದ್ಯವಿಜ್ಞಾನದ ಸೂಕ್ಷ್ಮಜೀವಿಶಾಸ್ತ್ರ (ಮೈಕ್ರೊಬಯಾಲಜಿ), ಕೃಷಿ ವಿಜ್ಞಾನದ ಭೂ ಏಕಾಣುಜೀವಿಶಾಸ್ತ್ರ (ಸಾಯಿಲ್ ಬ್ಯಾಕ್ಟೀರಿಯಾಲಜಿ), ಕೈಗಾರಿಕಾ ಕ್ಷೇತ್ರದ ಏಕಾಣುಜೀವಿಶಾಸ್ತ್ರ (ಇಂಡಸ್ಟ್ರೀಯಲ್ ಬ್ಯಾಕ್ಟೀರಿಯಾಲಜಿ)-ಇತ್ಯಾದಿ. ಒಂದೇ ಕೋಶವುಳ್ಳ ಈ ಜೀವಿಗಳು ಅತಿಸೂಕ್ಷ್ಮ. ಇವು ಕಣ್ಣುಗಳಿಗೆ ಅಗೋಚರ. ಸೂಕ್ಷ್ಮದರ್ಶಕಗಳ ಮೂಲಕ ಮಾತ್ರ ಇವನ್ನು ನೋಡಬಹುದು. ಇವುಗಳಲ್ಲಿ ಅನೇಕ ವಿಧಗಳಿವೆ. ಕೆಲವು ಮಾನವವರ್ಗಕ್ಕೆ ಉಪಕಾರಿಗಳು ಮತ್ತೆ ಕೆಲವು ಅಪಕಾರಿಗಳು ಏಕಾಣುಜೀವಿಗಳು ಪ್ರಾಣಿವರ್ಗಕ್ಕೆ ಸೇರಿದವುಗಳೇ ಅಥವಾ ಸಸ್ಯವರ್ಗಕ್ಕೆ ಸೇರಿದವೆ? ಸಸ್ಯವರ್ಗಕ್ಕೆ ಸೇರಿದ ಶೈವಲ ಮತ್ತು ಶಿಲೀಂಧ್ರಗಳಿಗಿಂತಲೂ ಪ್ರಾಣಿವರ್ಗಕ್ಕೆ ಸೇರಿದ ಮೂಲಜೀವಿಗಳಿಗಿಂತಲೂ (ಪ್ರೋಟೊeóÉೂೀವಾ) ಇವು ಮೂಲಜೀವಿಗಳೆಂದು ಪರಿಗಣಿಸಲಾಗಿದೆ. ಹೋಲಿಕೆಯಲ್ಲಿ ಶೈವಲ ಶಿಲೀಂಧ್ರಗಳಿಗೇ ಸಮೀಪ ಸಂಬಂಧ. ಆದ್ದರಿಂದ ಏಕಾಣುಜೀವಿಗಳನ್ನು ಸ್ಕೀeóÉೂೀಮೈಸೀಟ ಎಂಬ ದಂಡಾಣುಜೀವಿಗಳ ಗುಂಪಿನಲ್ಲಿ ಶೈವಲ ಶಿಲೀಂಧ್ರಗಳ ನಡುವೆ ತೋರಿಸಲಾಗಿದೆ.[೨]
ಇತಿಹಾಸ
ಬದಲಾಯಿಸಿಈ ಶಾಸ್ತ್ರ ಇತ್ತೀಚಿನದೆಂದೇ ಹೇಳಬಹುದು. ಸೂಕ್ಷ್ಮದರ್ಶಕವನ್ನು ಕಂಡುಹಿಡಿದ ಅನಂತರವೇ ಏಕಾಣುಜೀವಿಗಳ ಅರಿವು ನಮಗೆ ಉಂಟಾದುದು. 1592ರಲ್ಲಿ ಎಚ್. ಜಾನ್‍ಸನ್ ಸಂಯುಕ್ತ ಸೂಕ್ಷ್ಮದರ್ಶಕವನ್ನು (ಕಾಂಪೌಂಡ್ ಮೈಕ್ರೊಸ್ಕೋಪ್) ಕಂಡುಹಿಡಿದನಾದರೂ ಅದರಲ್ಲಿ ಏಕಾಣುಜೀವಿಗಳಷ್ಟು ಸೂಕ್ಷ್ಮಜೀವಿಗಳನ್ನು ಕಾಣಲು ಸಾಧ್ಯವಾಗಲಿಲ್ಲ. 1659ರಲ್ಲಿ ಎ. ಕರ್ಶರ್ ಎಂಬ ವಿಜ್ಞಾನಿ ಹುಳಿಯಾದ ಹಾಲಿನಲ್ಲಿ ಹಾಗೂ ಕೊಳೆಯುತ್ತಿರುವ ಮಾಂಸದಲ್ಲಿ ಅತಿಪುಟ್ಟ ಸೂಕ್ಷ್ಮಜೀವಿಗಳನ್ನು ಕಂಡುದಾಗಿ ತಿಳಿಸಿದ. ಆದರೆ ಇವು ಏಕಾಣುಜೀವಿಗಳೆಂದು ಹೇಳಲು ಸಾಕಷ್ಟು ಆಧಾರವಿರಲಿಲ್ಲ. ಇವನ್ನು ಮೊತ್ತಮೊದಲು ನೋಡಿದವ ಪ್ರಾಯಶಃ ಎ. ಫಾನ್ ಲ್ಯುವೆನ್ ಹಾಕ್ (ಡಚ್) ಎಂದು ಊಹಿಸಬಹುದು. ಈತ ನೀರು ಜೊಲ್ಲು ಇತ್ಯಾದಿಯಲ್ಲಿ ತಾನು ಕಂಡ ಕೆಲವು ಸಜೀವ ಸೂಕ್ಷ್ಮ ಪ್ರಾಣಿಗಳ ವರ್ಣನೆಯನ್ನು ಮಾಡಿ ಇದನ್ನು ಒಳಗೊಂಡ ಲೇಖನವನ್ನು ಲಂಡನ್ನಿನ ರಾಯಲ್ ಸೊಸೈಟಿಯ ಅವಗಾಹನೆಗೆ ಒಪ್ಪಿಸಿದ. ಏಕಾಣುಜೀವಿಗಳಲ್ಲಿ ಕೆಲವು ದೊಡ್ಡವು ಕೆಲವು ಚಿಕ್ಕವು. ಲ್ಯೂವೆನ್ ಹಾಕ್ ಕಂಡ ಜೀವಿಗಳು ದೊಡ್ಡವಿರಬೇಕು.
ಪ್ರತಿಯೊಂದು ರೋಗಕ್ಕೂ ಕಾರಣವಾದ ಒಂದು ನಿರ್ದಿಷ್ಟ ಸೂಕ್ಷ್ಮಜೀವಿ ಇದ್ದೇ ಇರುತ್ತದೆಂಬ ಸಿದ್ಧಾಂತವನ್ನು 1762ರಲ್ಲಿ ಎಂ.ಎ.ಪ್ಲೆನ್‍ಸಿಜ್ ಪ್ರತಿಪಾದಿಸಿದ. ಅಷ್ಟೇ ಅಲ್ಲದೆ ಈ ಜೀವಿಗಳು ದೇಹದಿಂದ ಹೊರಗಡೆಯೂ ಬದುಕಿ ಬೆಳೆಯಬಲ್ಲವು ಹಾಗೂ ಇವು ಗಾಳಿಯಲ್ಲಿ ಒಂದು ಕಡೆಯಿಂದ ಮತ್ತೊಂದೆಡೆಗೆ ಹಾಯುವುವು ಎಂದೂ ಹೇಳಿದ. ಆದರೆ ಏಕಾಣುಜೀವಿಗಳ ವಿಚಾರದಲ್ಲಿ ಈ ಸಮಯದಲ್ಲಿ ನಮ್ಮ ಜ್ಞಾನ ಅಷ್ಟು ಮುಂದುವರಿಯಲಿಲ್ಲ. ಆದ್ದರಿಂದ ಈ ಸಿದ್ಧಾಂತ ವಿಜ್ಞಾನಿಯ ದೂರ ದರ್ಶಿತ್ವವನ್ನು ಎತ್ತಿಹಿಡಿಯುತ್ತದೆಂದು ಹೇಳಬಹುದು. ಮೊತ್ತಮೊದಲು ಸಂಯುಕ್ತ ಸೂಕ್ಷ್ಮದರ್ಶಕದಲ್ಲಿ ವಸ್ತುವನ್ನು 1000 ದಷ್ಟು ದೊಡ್ಡದನ್ನಾಗಿ ಕಾಣುವಂತೆ ಅಳವಡಿಸಿದ ಖ್ಯಾತಿ ಜಿ.ಡೋಲೆಂಡ್ ಎಂಬುವನಿಗೆ ಸಲ್ಲತಕ್ಕದ್ದು (1844). ದೊಡ್ಡದೇನೋ ಆಯಿತು ಆದರೆ ವಿವರ ಸ್ಫುಟವಾಗಲಿಲ್ಲ. 1870ರಲ್ಲಿ ಜಿ. ಎಬ್ಬೆ ಎಂಬ ವಿಜ್ಞಾನಿ ಸಂಯುಕ್ತ ಸೂಕ್ಷ್ಮದರ್ಶಕವನ್ನು ಎಲ್ಲ ವಿಧಗಳಿಂದಲೂ ಸಮರ್ಪಕವಾಗಿರುವಂತೆಯೂ ವಸ್ತುಗಳು ಸ್ಫುಟವಾಗುವಂತೆಯೂ ಅನೇಕ ಮಾರ್ಪಾಡುಗಳನ್ನು ಮಾಡಿ ಪರಿಷ್ಕರಿಸಿದ. ಈ ವೇಳೆಗೆ ತಕ್ಕಮಟ್ಟಿಗೆ ಏಕಾಣುಜೀವಿಗಳ ಪರಿಚಯವಾಗಿತ್ತೆಂದು ಹೇಳಬಹುದು. ಜೀವರಾಶಿಯಲ್ಲಿ ಇವುಗಳ ಸ್ಥಾನ ನಿಷ್ಕರ್ಷೆಯಾಗಿತ್ತು ಹಾಗೂ ಏಕಾಣುಜೀವಿಗಳಲ್ಲೇ ವಿವಿಧ ಜಾತಿಯ ವಿಂಗಡಣೆಗೂ ಗಮನ ಕೊಡಲಾಗಿತ್ತು. ಪ್ರತಿಜಾತಿಯ ಏಕಾಣುಜೀವಿಗಳಲ್ಲಿಯೂ ಆಯಾ ಜಾತಿಯ ಪೂರ್ಣಲಕ್ಷಣಗಳು ಇದ್ದುದು ವಿಂಗಡಣೆಗೆ ಸಹಾಯವಾಯಿತು. ಅವುಗಳ ಲಕ್ಷಣಗಳಲ್ಲೇ ವೈವಿಧ್ಯ ಕಂಡು ಬಂದಿದ್ದರೆ ಈ ವಿಂಗಡಣೆ ಕಷ್ಟ ಸಾಧ್ಯವಾಗುತ್ತಿತ್ತು. ಕೆಲವು ಏಕಾಣುಜೀವಿಗಳ ಸಂತಾನೋತ್ಪತ್ತಿ ಬೀಜಕೋಶಗಳಿಂದ (ಸ್ಟೋರ್ ಫಾರ್ಮೇಶನ್) ಎಂಬುದನ್ನು 1857ರಲ್ಲಿ ಕಾನ್ ಕಂಡುಹಿಡಿದ. ಅದೇ ವರ್ಷದಲ್ಲಿ ಏಕಾಣುಜೀವಿಗಳ ಅಧ್ಯಯನ, ಸಂಶೋಧನೆಗಳಿಗೆ ಹೆಸರಾಂತ ಲೂಯಿ ಪಾಶ್ಚರ್ ಹಾಲು ಹುಳಿಯಾಗುವುದು ಒಂದು ವಿಧದ ಏಕಾಣುಜೀವಿಗಳಿಂದ ಎಂದು ಆಧಾರಗಳ ಸಮೇತ ಮಂಡಿಸಿದ. ಯೂರಿಯ ಲವಣ ಹುದುಗಿನಿಂದ ಅಮೋನಿಯ ಉತ್ಪಾದನೆಯಾಗುವುದೂ ಒಂದು ರೀತಿಯ ಏಕಾಣುಜೀವಿಗಳ ಚಟುವಟಿಕೆಯಿಂದಾಗಿ ಎಂದು ಶ್ರುತಪಡಿಸಿದ (1802). ವಸ್ತುಗಳು ಕೊಳೆತು ನಾರುವುದೂ ಏಕಾಣುಜೀವಿಗಳ ಕ್ರಿಯೆಯಿಂದಲೇ ಎಂಬುದೂ ತಿಳಿಯಿತು. ಏಕಾಣುಜೀವಿಗಳ ವಿಚಾರದಲ್ಲಿ ನಮ್ಮ ಜ್ಞಾನ ಬೆಳೆಯುವ ಮುನ್ನ ಎರಡು ವಿಚಾರಗಳನ್ನು ಪ್ರತಿಪಾದಿಸಲಾಗಿತ್ತಾದರೂ ಅವು ಸಂಶೋಧನೆಗಳ ಆಧಾರವಿಲ್ಲದೆ ಸಮಸ್ಯೆಗಳಾಗಿಯೇ ಉಳಿದಿದ್ದುವು. ಇದ್ದಕ್ಕಿದ್ದಂತೆ ಪುನರ್ಜನ್ಮ ತಾಳುವ ಸಿದ್ಧಾಂತ (ಥಿಯೊರಿ ಆಫ್ ಸ್ಟಾಂಟೇನಿಯಸ್ ರೀಜನರೇಶನ್) ಒಂದು; ಹುದುಗುವಿಕೆಗೂ ಮಾನವನ ಕೆಲವು ರೋಗಗಳಿಗೂ ಇರುವ ಸಂಬಂಧ ಎರಡು. ಪುನರ್ಜನ್ಮದ ಸಿದ್ಧಾಂತಕ್ಕೆ ಬುಡವಿಲ್ಲವೆಂಬುದರ ಅರಿವಾಯಿತು. ಹುದುಗುವಿಕೆ ಏಕಾಣುಜೀವಿಗಳಿಲ್ಲದೆ ಸಾಧ್ಯವಿಲ್ಲವೆಂಬುದೂ ಪಾಶ್ಚರ್ ನಡೆಸಿದ ಸಂಶೋಧನೆ ಪ್ರಯೋಗಗಳಿಂದ ತಿಳಿದುಬಂತು.
ಏಕಾಣುಜೀವಿಗಳಿಗೆ ಕೆಲವು ವರ್ಣದ್ರವ್ಯಗಳೊಂದಿಗೆ ಸಂಪರ್ಕ ಕಲ್ಪಿಸಿ ಕೆಲವು ವಿಶಿಷ್ಟ ರೀತಿಯ ಕ್ರಮಗಳನ್ನನುಸರಿಸಿ ಅವು ಬಣ್ಣ ಹೀರುವಂತೆ ಮಾಡಿ ಬಣ್ಣ ಕಟ್ಟುವ ಮರ್ಮವನ್ನು ವೈಗರ್ಟ್ ಎಂಬಾತ ಕಂಡುಹಿಡಿದ. ವಿವಿಧ ವರ್ಣದ್ರವ್ಯಗಳನ್ನು ಹೀರುವ ಲಕ್ಷಣಗಳಿಂದ ಆಯಾ ಏಕಾಣುಜೀವಿಗಳನ್ನು ಸುಲಭವಾಗಿ ಗೊತ್ತುಹಚ್ಚುವುದಕ್ಕೆ ಸಾಧ್ಯವಾಯಿತೊಂದೇ ಅಲ್ಲದೆ ವಿವಿಧ ಏಕಾಣುಜೀವಿಗಳ ವಿಂಗಡಣೆಗೂ ಸಹಾಯವಾಯಿತು. ಪ್ರಖ್ಯಾತ ವಿಜ್ಞಾನಿ ರಾಬರ್ಟ್ ಕಾಕ್, ವಿವಿಧ ಏಕಾಣುಜೀವಿಗಳನ್ನು ಸಂಶೋಧನಾಲಯದಲ್ಲಿ ಬೆಳೆಸಿ, ಬೇಕಾದುದನ್ನು ಪ್ರತ್ಯೇಕವಾಗಿ ವಿಂಗಡಿಸಿ ಬೆರಕೆಯಿಲ್ಲದೆ ಒಂದೇ ವಿಧದ ಏಕಾಣುಜೀವಿಗಳನ್ನು ಪಡೆಯುವ ವಿಧಾನ ಕಂಡುಹಿಡಿದ. ಅಗಾರ್ ಅಗಾರ್ ಎಂಬ ಹುಲ್ಲನ್ನು ಉಪಯೋಗಿಸಿಕೊಂಡು ಅದಕ್ಕೆ ಏಕಾಣುಜೀವಿ ಬೆಳೆಯಲು ಹಿತಕರವಾದ ಆಹಾರ ಸತ್ತ್ವಗಳನ್ನು ಸೇರಿಸಿ ಅವು ಬೆಳೆಯುವಂತೆ ಅಳವಡಿಸಿಕೊಂಡ. ಇದೇ ಸಮಯದಲ್ಲಿ ಪಾಶ್ಚರ್ ತನ್ನ ಸಂಶೋಧನೆಗಳಿಂದ ಕೋಳಿಗಳ ಕಾಲರಾ ರೋಗ ಹಾಗೂ ಪ್ರಾಣಿಗಳ ಆಂಥ್ರಾಕ್ಸ್ ರೋಗಗಳಿಂದ ಪ್ರತಿಬಂಧಕ ಚುಚ್ಚುಮದ್ದುಗಳನ್ನು ಕಂಡುಹಿಡಿಯುವುದರಲ್ಲಿ ಯಶಸ್ವಿಯಾದ. ರೋಗಗಳನ್ನು ಉಂಟುಮಾಡುವ ಏಕಾಣುಜೀವಿಗಳನ್ನು ಸಂಶೋಧನಾಲಯದಲ್ಲಿ ಬೆಳೆಸಿ ಮೊದಲ ಪೀಳಿಗೆಯ ಜೀವಿಗಳಿಂದ ಎರಡನೆಯದು, ಎರಡನೆಯ ಪೀಳಿಗೆಯಿಂದ ಮೂರನೆಯದು ಹೀಗೆ ಕ್ರಮವಾಗಿ ಪೀಳಿಗೆಯಿಂದ ಪೀಳಿಗೆಯನ್ನು ಬೆಳೆಸುತ್ತ ಬಂದಾಗ ಕಡೆಕಡೆಯ ಪೀಳಿಗೆಯ ಏಕಾಣುಜೀವಿಗಳಿಂದ ಆಯಾ ಪ್ರಾಣಿಗಳ ದೇಹಕ್ಕೆ ಸೋಂಕು ಅಂಟಿಸಿದಾಗ ಅವು ರೋಗಪ್ರಚೋದಕ ಶಕ್ತಿಯನ್ನು ಕಳೆದುಕೊಂಡದ್ದು ಕಂಡುಬಂತು. ಅಷ್ಟೇ ಅಲ್ಲದೆ ಇನ್ನೂ ಮಹತ್ತರವಾದ ಪ್ರಭಾವ ಬೀರುವ ಪರಿಣಾಮವೆಂದರೆ ಈ ನಿಶ್ಚೇತನ ಏಕಾಣುಜೀವಿಗಳನ್ನು ದೇಹಕ್ಕೆ ಅಂಟಿಸಿದ ಕೆಲವು ದಿವಸಗಳ ತರುವಾಯ ರೋಗ ಪ್ರಚೋದಕ ಏಕಾಣುಜೀವಿಗಳಿಂದ ಸೋಂಕು ಅಂಟಿಸಿದಾಗ ಪ್ರಾಣಿಗಳಿಗೆ ರೋಗ ತಗುಲಲಿಲ್ಲ. ಅವು ಆಗ ರೋಗನಿರೋಧಕ ಶಕ್ತಿಯನ್ನು ಪಡೆದಿದ್ದವು. ಇದರಿಂದ ಮುಂದೆ ಮಾನವ ಕುಲವನ್ನೇ ಪೀಡಿಸುತ್ತಿದ್ದ ಅನೇಕ ಭೀಕರ ಸೋಂಕು ಜಾಡ್ಯಗಳಿಗೆ ನಿರೋಧಶಕ್ತಿಯನ್ನು ಪ್ರಚೋದಿಸುವ ನಿರೋಧಕಗಳನ್ನು ಕಂಡುಹಿಡಿಯಲು ಮಾರ್ಗವಾಯಿತೆಂದು ಹೇಳಬಹುದು.
ಇಲ್ಲಿಂದ ಮುಂದೆ ಏಕಾಣುಜೀವಿಗಳ ವಿಚಾರವಾಗಿ ನಮ್ಮ ಜ್ಞಾನ ಅದ್ಭುತವಾಗಿ ಬೆಳೆಯುತ್ತ ಬಂದಿದೆ. ಮಾನವಕುಲದಲ್ಲಿ, ಪ್ರಾಣಿಗಳಲ್ಲಿ ಹಾಗೂ ಸಸ್ಯಗಳಲ್ಲಿ ಕಂಡುಬರುವ ಅನೇಕ ರೋಗಗಳಿಗೆ ವಿವಿಧ ರೀತಿಯ ಏಕಾಣುಜೀವಿಗಳೇ ಕಾರಣವೆಂಬುದೂ ತಿಳಿಯಿತು. ಅನೇಕ ಮೂಢನಂಬಿಕೆಗಳೂ ಮಾಯವಾದವು. ಉದಾಹರಣೆಗೆ ಏಕಾಣುಜೀವಿಗಳೆಲ್ಲ ಒಂದಲ್ಲ ಒಂದು ರೋಗಕ್ಕೆ ಕಾರಣವೆಂಬ ನಂಬಿಕೆಗೆ ಬುಡವಿಲ್ಲವೆಂಬುದು ತಿಳಿದುಬಂತು. ಮಾನವಕೋಟಿಗೆ ಮಹತ್ತರವಾದ ಉಪಕಾರ ಮಾಡುವ ಹಾಗೂ ಕೃಷಿಕೈಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿಯೂ ಉಪಯೋಗಕರವಾದ ಏಕಾಣುಜೀವಿಗಳು ಹೇರಳವಾಗಿವೆ ಎಂಬುದೂ ಅರಿವಾಯಿತು. ಇಪ್ಪತ್ತನೆಯ ಶತಮಾನದಲ್ಲಿ ಇಂದಿನವರೆಗೆ ಅನೇಕ ಹೊಸ ವಿಷಯಗಳು ಸಂಶೋಧನಾಲಯಗಳಲ್ಲಿನ ಪ್ರಯೋಗಗಳಿಂದ ಹೊರಬಿದ್ದಿವೆ ಮತ್ತು ಹೊರ ಬೀಳುತ್ತಲೂ ಇವೆ. ಏಕಾಣುಜೀವಿಗಳ ವಿಚಾರದಲ್ಲಿ ನಮ್ಮ ಜ್ಞಾನ ಅತ್ಯಂತ ಉನ್ನತಮಟ್ಟದಲ್ಲಿದೆ ಎಂದು ಹೇಳಬಹುದಾದರೂ ಇನ್ನೂ ಹೆಚ್ಚು ವಿಷಯಗಳನ್ನು ತಿಳಿಯುವ ದಾಹವಿದ್ದೇ ಇರುವುದರಿಂದ ಸತತವಾಗಿ ಪ್ರಯೋಗ ಮತ್ತು ಸಂಶೋಧನೆಗಳು ನಡೆಯುತ್ತಲೇ ಇವೆ.
ಏಕಾಣುಜೀವಿಗಳ ಇತಿಹಾಸದ ಹಿನ್ನೆಲೆಯಲ್ಲಿ ಅವುಗಳ ರೂಪ, ರಚನೆ, ಶೋಷಕ್ರಿಯೆ ಇತ್ಯಾದಿಗಳನ್ನು ತಿಳಿಯೋಣ. ಸಜೀವ ವಸ್ತುಗಳಲ್ಲಿ ಏಕಾಣುಜೀವಿಗಳೇ ಅತ್ಯಂತ ಪುಟ್ಟವು. ಇದರಿಂದ, ಏಕಾಣುಜೀವಿಗಳನ್ನು ಅಣುಜೀವಿಗಳು, ಜೀವಾಣುಗಳು ಎಂಬ ಇತರ ಹೆಸರುಗಳಿಂದಲೂ ಕರೆಯುವುದುಂಟು. ಇವುಗಳಲ್ಲಿ ಕೆಲವು ದುಂಡಾಗಿರುತ್ತವೆ (ಕಾಕೈ), ಕೆಲವು ಉದ್ದುದ್ದ (ಬ್ಯಾಸಿಲೈ) ಮತ್ತೆ ಕೆಲವು ಸುರುಳಿಗಳು (ಸ್ಪೈರಿಲಂ) ಇನ್ನು ಕೆಲವು ತಿರುಪುಗಳು. ಇವನ್ನು ಕೇವಲ ಬರಿಗಣ್ಣಿನಿಂದಾಗಲೀ ಅಥವಾ ಸಾಧಾರಣವಾದ ಸೂಕ್ಷ್ಮದರ್ಶಕದಲ್ಲಾಗಲೀ ಕಾಣಲು ಸಾಧ್ಯವಿಲ್ಲ. ಉದ್ದದಲ್ಲಿ 0.001 ಮಿ.ಮೀ. (=1 ಮೈಕ್ರಾನ್, ಸಂಕೇತ ). ಅಥವಾ 1ನಿಂದ 2ಗಳಷ್ಟೂ ಗಾತ್ರದಲ್ಲಿ 0.5ನಷ್ಟಿರುವುದು ಸಾಮಾನ್ಯ 2,50,000 ಜೀವಿಗಳು ಒಂದು ಸೂಜಿಯ ತುದಿಯಲ್ಲಿರಬಹುದು. ಸೂಕ್ಷ್ಮದರ್ಶಕ ಕಡೇ ಪಕ್ಷ ಇವನ್ನು 1000ದಷ್ಟು ದೊಡ್ಡದಾಗಿ ಕಾಣುವಂತೆ ಮಾಡಿದರೆ ಮಾತ್ರ ಇವನ್ನು ನೋಡಬಹುದು. ಏಕಾಣುಜೀವಿ ಜೀವದ್ರವ್ಯ ತುಂಬಿದ ಒಂದು ಕೋಶ. ಕೋಶಕ್ಕೆ ಹೊರ ಆವರಣ ಇದೆ. ಅದರ ಒಳಸುತ್ತ ಒಂದು ಪೊರೆ. ಹೊರಗಡೆ ಸುತ್ತಲೂ ಲೋಳೆವಸ್ತು ಆವರಿಸಿಕೊಂಡಿದೆ. ಇದು ಪಾಲಿಸ್ಯಾಕ್ರೈಡ್ ಎಂಬ ರಾಸಾಯನಿಕದ ಗುಂಪಿಗೆ ಸೇರಿದ್ದು. ಕೆಲವು ಏಕಾಣುಜೀವಿಗಳಿಗೆ ಸುತ್ತಲೂ ಲೋಳೆವಸ್ತು ಇರುವುದಿಲ್ಲ, ಆದರೆ ಅನೇಕ ಏಕಾಣುಜೀವಿಗಳ ಒಂದು ಗುಂಪಿಗೆ ಲೋಳೆವಸ್ತು ಆವರಿಸಿಕೊಂಡಿರಬಹುದು (ಜೂಗ್ಲಿಯಾ). ಕೆಲವಕ್ಕೆ ಚಾವಟಿಯನ್ನು ಹೋಲುವ ಕಶಾಂಗ (ಫ್ಲಾಗೆಲಂ) ಇರುತ್ತದೆ. ಇದರ ಸಹಾಯದಿಂದ ಅವು ಚಲಿಸಲು ಸಾಧ್ಯ. ಈ ಕಶಾಂಗ ಒಂದೇ ಇರಬಹುದು ಅಥವಾ ಬಹುಸಂಖ್ಯೆಯಲ್ಲಿರಬಹುದು. ಕೆಲವಕ್ಕೆ ಕುಚ್ಚಿದಂತೆ ಇರುತ್ತವೆ. ಕಶಾಂಗಗಳು ವಿವಿಧ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಪ್ರತಿ ಏಕಾಣುಜೀವಿಯ ಕೋಶದ್ರವ್ಯದೊಳಗೆ ಕೇಂದ್ರ (ನ್ಯೂಕ್ಲಿಯಸ್) ಉಂಟು. ಕೇಂದ್ರದಲ್ಲೂ ಇತರ ಜೀವಿಗಳ ಕೇಂದ್ರದಲ್ಲಿರುವ ಡೆಸಾಕ್ಸಿರಿಯಿಬೋ ನ್ಯೂಕ್ಲಿಯಕ್ ಆಮ್ಲ ಇರುತ್ತದೆ. ಜೀವಕಣಗಳ ವಿಭಜನೆಯ ಸಮಯದಲ್ಲಿ ಕಾಣುವ ಸೂಕ್ಷ್ಮ ತಂತುಗಳನ್ನ (ಮಿಟೋಟಿಕ್ ಫಿಗರ್ಸ್) ಇದರಲ್ಲೂ ಗಮನಿಸಲಾಗಿದೆ. ಕೋಶ ದ್ರವ್ಯದಲ್ಲಿ ಮರಳಿನಂತಿರುವ ಸೂಕ್ಷ್ಮ ಬಿಂದುಗಳನ್ನು ಕಾಣಬಹುದು. ಈ ಸೇರ್ಪಡೆಗಳಲ್ಲಿ (ಇನ್ ಕ್ಲೂಶನ್ಸ್) ಮೇದಸ್ಸು ಇದೆ. ಕೋಶದಲ್ಲಿ ದುಂಡಗೆ ಅಥವಾ ಅಂಡಾಕಾರದಲ್ಲಿ ಪಾರದರ್ಶಕ ಜಾಗಗಳನ್ನು ನೋಡಬಹುದು. ಇವು ಸೂಕ್ಷ್ಮ ಕುಹರಗಳು (ವ್ಯಾಕ್ಯೂಲ್ಸ್). ಏಕಾಣುಜೀವಿಗಳ ಮತ್ತೊಂದು ವೈಶಿಷ್ಟ್ಯವೆಂದರೆ ಇವುಗಳ ಕೋಶದಲ್ಲಿ ಸಸ್ಯಗಳಲ್ಲಿರುವ ಪತ್ರಹರಿತ್ತು ಇರುವುದಿಲ್ಲ. ಆದ್ದರಿಂದ ಈ ವರ್ಗದ ಏಕಾಣುಜೀವಿಗಳಲ್ಲಿ ದ್ಯುತಿಸಂಶ್ಲೇಷಣ ಕ್ರಿಯೆಗೆ ಅವಕಾಶವಿಲ್ಲ.
ಇತರ ಮೂಲ ಜೀವಿಗಳೊಂದಿಗೆ ಏಕಾಣುಜೀವಿಗಳ ಸ್ಥಾನ: ಏಕಾಣುಜೀವಿಗಳು ಮೂಲಸಸ್ಯಗಳನ್ನು ಹೋಲುತ್ತವೆ. ಉದಾಹರಣೆಗೆ ನೀಲಪಚ್ಚೆ ಪಾಚಿ ಮತ್ತು ಶಿಲೀಂಧ್ರಗಳಿಗೂ ಇವಕ್ಕೂ ಅನೇಕ ಹೋಲಿಕೆಗಳಿವೆ. ಆದ್ದರಿಂದಲೇ ಏಕಾಣುಜೀವಿಗಳನ್ನು ಸಸ್ಯವರ್ಗದಲ್ಲಿ ಸೇರಿಸಲಾಗಿದೆ. ಮೂಲ ಪ್ರಾಣಿವರ್ಗದಲ್ಲಿ ಸೇರಿರುವ ಒಂದೇ ಜೀವಕೋಶವುಳ್ಳ ಅಮೀಬ, ಪ್ಯಾರಾಮೀಶಿಯಂ, ಪ್ಲಾಸ್ಮೋಡಿಯಂಗಳು (ಮಲೇರಿಯಾಕಾರಕ) ಈ ಏಕಾಣುಜೀವಿಗಳನ್ನು ಹೋಲುವುದಿಲ್ಲ.
ಏಕಾಣುಜೀವಿಗಳ ವರ್ಗೀಕರಣ ಅಷ್ಟು ಸುಲಭವಲ್ಲ. ಆದರೂ ಕೆಲವು ವಿಶಿಷ್ಟ ಲಕ್ಷಣಗಳನ್ನು ಉಪಯೋಗಿಸಿಕೊಂಡು ಇದನ್ನು ಮಾಡಲಾಗಿದೆ. ಅವು ಹೀಗಿವೆ: 1. ಆಕೃತಿ ರಚನೆ (ಮಾರ್ಫಾಲಜಿ), 2. ಜೀವವಸ್ತುಕರಣ (ಮೆಟಬಾಲಿಸಂ), 3. ಹುದುಗು ಮತ್ತು ಅದರ ಅಂತಿಮ ಉತ್ಪನ್ನ, 4. ಸಸಾರಜನಕ ಪರಿವರ್ತನೆ, 5. ಸಂತಾನವೃದ್ಧಿಗೆ ಅವಶ್ಯಕವಾಗಿ ಒದಗಿಸಬೇಕಾದ ಕೃತಕ ಆಹಾರಸತ್ತ್ವಾಂಶಗಳು, 6. ಸೋಂಕು ಪ್ರಾಣಿಗಳಿಗೆ ಅಂಟಿಸಿದಲ್ಲಿ ಅವುಗಳ ಮೇಲಾಗುವ ಪರಿಣಾಮ ಮತ್ತು ನಿರೋಧಶಕ್ತಿ.
ಏಕಾಣುಜೀವಿಗಳ ಗುಂಪಿಗೆ ಸೇರದ ಇನ್ನೂ ಕೆಲವು ಸೂಕ್ಷ್ಮ ಜೀವಿಗಳೂ ಇವೆ. ಇವು ರಿಕೆಟ್ಸಿಯೆ ಮತ್ತು ವೈರಸ್. ಇವು ಗಾತ್ರದಲ್ಲಿ ಏಕಾಣುಜೀವಿಗಳಿಗಿಂತ ಸಣ್ಣವೂ ಸೂಕ್ಷ್ಮವೂ ಆಗಿವೆ. ಅತಿ ಸೂಕ್ಷ್ಮಶೋಧಕಗಳ ಮೂಲಕವೂ ವೈರಸ್ಸುಗಳು ಹಾಯಬಲ್ಲವು. ಎಚ್.ಟಿ. ರಿಕೆಟ್ಸ್ ಎಂಬ ವಿಜ್ಞಾನಿಯ ಯಶಸ್ವಿ ಸಂಶೋಧನೆಯಿಂದ ಪತ್ತೆಯಾದ ಸೂಕ್ಷ್ಮ ಜೀವಿಗಳಿಗೆ ರಿಕೆಟ್ಸಿಯೆ ಎಂಬ ಹೆಸರನ್ನೇ ಆತನ ಸ್ಮಾರಕವಾಗಿ ಇಡಲಾಯಿತು. ಇವು ಜೀವಂತ ಊತಕಗಳಲ್ಲಿ (ಟಿಶ್ಯೂಸ್) ಮಾತ್ರ ಬೆಳೆಯಲಾರವು. ಬೆಕೆಟ್ಸಿಯೆಗಳನ್ನು ಪುಟ್ಟ ಏಕಾಣುಜೀವಿಗಳೆನ್ನಬಹುದು (0.3-0.4). ರಿಕೆಟ್ಸಿಯೆ ಮತ್ತು ವೈರಸುಗಳು ಪೂರ್ಣ ಪರಾವಲಂಬಿಗಳು. ಇವುಗಳಲ್ಲಿ ಕೆಲವು ಮಾನವನಿಗೆ ರೋಗಕಾರಕಗಳೂ ಹೌದು. ಉದಾಹರಣೆಗೆ ಕಲ್ದಡಾರ (ಟೈಫಸ್) ರಿಕೆಟ್ಸಿಯೆ ಸೂಕ್ಷ್ಮಜೀವಿಗಳಿಂದುಟಾಗುವ ರೋಗ. ನೆಗಡಿ, ಇನ್‍ಫ್ಲೂಯೆಂಜ್ ಕಾಮಾಲೆ ಇವು ಒಂದೊಂದು ವಿಧದ ವೈರಸುಗಳು ಸೋಂಕಿನಿಂದ ಬರುವ ರೋಗಗಳು. ಇವನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ಮಾತ್ರ ನೋಡಲು ಸಾಧ್ಯ. ತಮ್ಮ ತಮ್ಮ ನಿತ್ಯಕರ್ಮಗಳನ್ನೆಸಗಲು ಜೀವಿಗಳಿಗೆ ಶಕ್ತಿ ಅವಶ್ಯಕ. ಏಕಾಣುಜೀವಿಗಳು ಈ ಶಕ್ತಿಯನ್ನು ಅನೇಕ ವಿಧಗಳಲ್ಲಿ ಒದಗಿಸಿಕೊಳ್ಳುತ್ತವೆ. ಇವುಗಳಿಗೂ ಕೆಲವು ಕಿಣ್ವಗಳಿಗೂ (ಎಂಜೈಮುಗಳು) ನಿಕಟ ಸಂಬಂಧವಿರುವುದು ತಿಳಿದಿದೆ. ಇವನ್ನು ಉಪಯೋಗಿಸಿಕೊಂಡು ಬೇಕಾದ ಸಸಾರಜನಕ, ಪಿಷ್ಟ ಮತ್ತಿತರ ಜೈವಿಕ ವಸ್ತುಗಳ (ಆಗ್ರ್ಯಾನಿಕ್ ಮ್ಯಾಟರ್) ವಿಭಜನೆಯಿಂದ ಅವುಗಳನ್ನು ಮೂಲ ಅಂಶಗಳಿಗೆ ಪರಿವರ್ತಿಸಿಕೊಂಡು ತಮ್ಮ ಶಕ್ತಿ ಸಂಪಾದನೆ ಮಾಡಿಕೊಳ್ಳುತ್ತವೆ. ಕೆಲವು ಏಕಾಣುಜೀವಿಗಳಿಗೆ ಈ ರೀತಿ ಶಕ್ತಿಯನ್ನು ಪಡೆಯುವುದು ಅಸಾಧ್ಯ. ಅಂಥವು ಸರಳವಾದ ಆಹಾರವಸ್ತುಗಳು ಎಂದರೆ ಸಕ್ಕರೆ, ಜೈವಿಕಾಮ್ಲ (ಆಗ್ರ್ಯಾನಿಕ್ ಆಸಿಡ್). ಆಮೈನೋ ಆಮ್ಲ ಮತ್ತು ಆಲ್ಕೊಹಾಲ್ ಇತ್ಯಾದಿ ಅಂಶಗಳು ತಮ್ಮ ಕೋಶಪೊರೆಯನ್ನು ಒಳಹೊಕ್ಕು ಬಂದಾಗ ಅವನ್ನು ಪರಿವರ್ತಿಸಿಕೊಂಡು ಅವಶ್ಯಕವಾದ ಆಹಾರಾಂಶಗಳಿಂದ ಶಕ್ತಿಯನ್ನು ಪಡೆಯುತ್ತವೆ. ಮತ್ತೆ ಕೆಲವು ಏಕಾಣುಜೀವಿಗಳು ಕೇವಲ ಅಜೈವಿಕ (ಇನಾಗ್ರ್ಯಾನಿಕ್) ವಸ್ತುಗಳಿಂದ ಶಕ್ತಿ ಪಡೆಯುತ್ತವೆ. ಅಮೋನಿಯ, ಗಂಧಕ, ಹೈಡ್ರೊಜನ್ ಸಲ್ಫೈಡ್ ಇತ್ಯಾದಿ ಲವಣಗಳನ್ನು ಉತ್ಕರ್ಷಣ ಕ್ರಿಯೆಯಿಂದಲೂ ತಮ್ಮ ಸಂತಾನೋತ್ಪತ್ತಿಗೆ ಬೇಕಾಗುವ (ಹೊಸ ಕೋಶವನ್ನು ರೂಪಿಸಿಕೊಳ್ಳಲು) ಸಸಾರಜನಕ ಅಂಶಗಳನ್ನು ಅಮೋನಿಯ ಮತ್ತು ಇಂಗಾಲಾಮ್ಲಗಳಿಂದಲೂ ಪಡೆಯುತ್ತವೆ. ಅಂದರೆ ಕೆಲವು ಏಕಾಣುಜೀವಿಗಳು ಜೈವಿಕ ವಸ್ತುಗಳ ಪರಿವರ್ತನೆಯಿಂದ ಮತ್ತೆ ಕೆಲವು ಅಜೈವಿಕ ವಸ್ತುಗಳ ಪರಿವರ್ತನೆಯಿಂದ ತಮ್ಮ ಜೀವಪೋಷಣೆಗೆ ಅತ್ಯಾವಶ್ಯಕವಾದ ಆಹಾರ ಶಕ್ತಿಯನ್ನು ಒದಗಿಸಿಕೊಳ್ಳುತ್ತವೆ. ಜೈವಿಕ ವಸ್ತುಗಳ ಉಪಯೋಗದಿಂದಲೇ ಜೀವಿಸುವ ಏಕಾಣುಜೀವಿಗಳಿಗೆ ಸ್ವಪೋಷಿತಗಳೆಂದೂ (ಅಟೊಟ್ರೊಫಿಕ್) ಅಜೈವಿಕ ವಸ್ತುಗಳ ಪರಿವರ್ತನೆಯಿಂದ ಜೀವಿಸುವ ಏಕಾಣುಜೀವಿಗಳಿಗೆ ಅನ್ಯಪೋಷಿತಗಳೆಂದೂ (ಹೆಟೆರೊಟ್ರ್ರೊಫಿಕ್) ಹೆಸರು. ಆದರೆ ಈ ವಿಂಗಡಣೆ ಅಷ್ಟು ಕಟ್ಟುನಿಟ್ಟಲ್ಲ. ಸ್ವಪೋಷಿತ ಜೀವಿಗಳು ಕೆಲವು ಸಂದರ್ಭಗಳಲ್ಲಿ ಅನ್ಯಪೋಷಿತಗಳಾಗಿಯೂ ಅನ್ಯಪೋಷಿತಗಳು ಸ್ವಪೋಷಿತಗಳಾಗಿಯೂ ಮಾರ್ಪಾಡಾಗಬಹುದು.
ಅವಶ್ಯಕ ಶಕ್ತಿ ಪಡೆಯಲು ಮೇಲೆ ಹೇಳಿದ ಎರಡು ರೀತಿಯಲ್ಲಿ ಅಲ್ಲದೇ ಕೆಲವು ಏಕಾಣುಜೀವಿಗಳು ಮತ್ತೊಂದು ವಿಧದಲ್ಲೂ ಆಹಾರಾಂಶಗಳನ್ನು ಪಡೆದು ಶಕ್ತಿ ಉತ್ಪಾದನೆ ಮಾಡಿಕೊಳ್ಳುತ್ತವೆ. ಸಸ್ಯಗಳು ತಮ್ಮ ಕೋಶಗಳಲ್ಲಿರುವ ಪತ್ರಹರಿತ್ತುವಿನಿಂದ ಸೂರ್ಯರಶ್ಮಿಯನ್ನು ಉಪಯೋಗಿಸಿಕೊಂಡು ದ್ಯುತಿಸಂಶ್ಲೇಷಣ (ಫೋಟೋ ಸಿಂಥೆಸಿಸ್) ಕ್ರಿಯೆಯಿಂದ ಆಹಾರಾಂಶ ಪಡೆಯುವಂತೆ ಕೆಲವು ಏಕಾಣುಜೀವಿಗಳು ತಮ್ಮ ಕೋಶದಲ್ಲಿರುವ ಪತ್ರಹರಿತ್ತುವಿನಿಂದ ಆಹಾರ ಶಕ್ತಿ ರೂಪಿಸಿಕೊಳ್ಳುತ್ತವೆ.
ಏಕಾಣುಜೀವಿಗಳ ಸಂತಾನವೃದ್ಧಿ
ಬದಲಾಯಿಸಿಸಂತಾನವೃದ್ಧಿ ಸಾಮಾನ್ಯವಾಗಿ ವಿಭಜನೆಯಿಂದ ಇಲ್ಲದಿದ್ದರೆ ಮೊಗ್ಗೊಡೆಯ (ಕಾನಿಡಿಯ ಫಾರ್ಮೇಶನ್) ಮತ್ತು ಬೀಜಕೋಶಗಳ ಉತ್ಪತ್ತಿಯಿಂದ. ಇತ್ತೀಚೆಗೆ ಕೆಲವು ಜೀನುಗಳ ಅಧ್ಯಯನ ಸಮಯದಲ್ಲಿ ನಡೆಸಿದ ಸಂಶೋಧನೆಗಳಿಂದ ಏಕಾಣುಜೀವಿಗಳೂ ಲೈಂಗಿಕ ಪ್ರವೃತ್ತಿಯಿಂದ ತಮ್ಮ ಸಂತಾನನ್ನು ಬೆಳೆಸುತ್ತವೆಂಬುದಕ್ಕೆ ಆಧಾರಗಳು ದೊರಕಿವೆ.[೩]
ವಿಭಜನೆ
ಬದಲಾಯಿಸಿತಾಯಿಕೋಶ ವಿಭಜನೆಯಾಗುವ ಮುನ್ನ, ಕೋಶದ್ರವ್ಯ ವಿಸ್ತರಿಸಿ ಗಾತ್ರ ದೊಡ್ಡದಾಗುತ್ತದೆ. ಮೊದಲಿನ ಅಗತ್ಯಕ್ಕಿಂತ ಸುಮಾರು ಎರಡರಷ್ಟಾದಾಗ ಕೋಶದ ನಡುಮಧ್ಯದಲ್ಲಿ ಸಂಕುಚಿತವಾಗಿ ಎರಡು ಭಾಗವಾಗಲು ಪ್ರಾರಂಭಿಸಿ ಬರು ಬರುತ್ತ ಮಧ್ಯೆ ಗೋಡೆ ಅಡ್ಡಲಾಗಿ ಹಾಯ್ದು ಬಂದು ಇಬ್ಭಾಗವಾಗಿ ಒಂದಿದ್ದದ್ದು ಎರಡಾಗುತ್ತದೆ. ಇವುಗಳಿಗೆ ತಕ್ಕ ವಾತಾವರಣವಿದ್ದಲ್ಲಿ ಸಂತಾನವೃದ್ಧಿ ಅತ್ಯಂತ ಭರದಿಂದ ಸಾಗುತ್ತದೆ. ಒಂದು ಎರಡಾಗಲು ಕೇವಲ 20-30 ಮಿನಿಟುಗಳು ಸಾಕು. ಇದು ಎಷ್ಟು ದೊಡ್ಡ ಪ್ರಮಾಣದ್ದೆಂದು ಊಹಿಸುವುದೂ ಕಷ್ಟ. ಬೆಳೆಯುವ ದರವನ್ನು ಕೆಳಗೆ ತೋರಿಸಿದೆ: 1 ಏಕಾಣುಜೀವಿ 2 ಗಂಟೆಗಳ ಕೊನೆಯಲ್ಲಿ 1(22 =4 ಏಕಾಣುಜೀವಿಗಳಾಗಿ ವೃದ್ಧಿಗೊಂಡಿರುತ್ತದೆ; ಮುಂದಿನ 2 ಗಂಟೆಗಳ ಕೊನೆಯಲ್ಲಿ ಈ 4 ಜೀವಿಗಳು 4 ( 22 =16 ಜೀವಿಗಳಾಗಿರುತ್ತವೆ; ಹೀಗೆಯೇ ಮುಂದುವರಿಸಿದರೆ ಪ್ರಾರಂಭದಲಿದ್ದ 1 ಏಕಾಣುಜೀವಿ 64 ಗಂಟೆಗಳ ಕೊನೆಯಲ್ಲಿ 432 ಏಕಾಣುಜೀವಿಗಳಾಗಿ ವೃದ್ಧಿಗೊಂಡಿರುತ್ತದೆ. (432 =18,500,000,000,000,000,000 ಸುಮಾರಾಗಿ). ಇವು 18,500,000,000 ಘನ ಮಿಲಿಮೀಟರ್ ಸ್ಥಳವನ್ನು ತುಂಬಲು ಸಾಕು; ಈ ಸಮೂಹವನ್ನು ಬರಿಗಣ್ಣಿಂದ ನೋಡಬಹುದು. ಕಣ್ಣಿಗೆ ಗೋಚರವಾಗುವಷ್ಟು ದೊಡ್ಡ ಸಮೂಹಕ್ಕೆ ಏಕಾಣುಜೀವಿಗಳ ವಸಾಹತು ಎಂದು ಹೆಸರು. ಬೆಳೆಸಿದರೆ ಒಂದೇ ರಾತ್ರಿಯಲ್ಲಿ ಈ ಭಯಂಕರ ಉತ್ಪಾದನೆ ಕಾಣುವುದೇನೂ ಅತಿಶಯವಲ್ಲ. ಆದರೆ ಅದೃಷ್ಟವಶಾತ್ ಪ್ರಕೃತಿಯಲ್ಲಿ ಈ ರೀತಿಯ ಅನಿಯಮಿತ ಉತ್ಪತ್ತಿಗೆ ಅನೇಕ ಅಡಚಣೆಗಳುಂಟು. ಸಂಶೋಧನಾಲಯಗಳಲ್ಲಿ ಅವುಗಳ ಬೆಳೆವಣಿಗೆಗೆ ತಕ್ಕ ವಾತಾವರಣವನ್ನು ಕಲ್ಪಿಸಿ ಬೇಕಾದ ಆಹಾರ ಸತ್ತ್ವಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸಿದರೆ ಮಾತ್ರ ಈ ರೀತಿ ಭಾರಿ ಪ್ರಮಾಣದ ಉತ್ಪಾದನೆ ಸಾಧ್ಯ. ಉತ್ಪಾದನೆಯ ಸಮಯದಲ್ಲಿ ಉದ್ಭವಿಸುವ ಅನೇಕ ಸ್ಥಿತಿಗತಿಗಳು ಮತ್ತು ಆಮ್ಲಗಳು ಉತ್ಪತ್ತಿನಿರೋಧಕಗಳಾಗಿ ಪರಿಣಮಿಸಿ ಜೀವಿಗಳ ಬೆಳೆವಣಿಗೆಯನ್ನು ಕುಂಠಿತಗೊಳಿಸುತ್ತವೆ. ಮೊಗ್ಗೊಡೆದು ಸಂತಾನೋತ್ಪತ್ತಿ (ಫಾರ್ಮೇಶನ್ ಆಫ್ ಕಾನಿಡಿಯ) : ಏಕಾಣುಜೀವಿ ಇದ್ದಕ್ಕಿದ್ದಂತೆ ಒಂದು ಕಡೆಯಲ್ಲಿ ಒಂದು ಮೊಗ್ಗನ್ನು ಸೃಷ್ಟಿಸುತ್ತದೆ. ಇದರಿಂದ ಒಂದಾದಮೇಲೊಂದು ಬಂದು, ಒಂದೊಂದಾಗಿ ಕಾಯಿಯಿಂದ ಬೇರೆಯಾಗಿ ತಾನೇ ಸ್ವತಂತ್ರ ಜೀವಿಯಾಗುತ್ತದೆ.
ಬೀಜಕೋಶ ಉತ್ಪತ್ತಿ (ಸ್ಟೋರ್ ಫಾರ್ಮೇಶನ್)
ಬದಲಾಯಿಸಿಕೆಲವು ದಂಡಾಣುಜೀವಿಗಳು (ಬ್ಯಾಸಿಲೈ) ಬೀಜಕೋಶ ಅಥವಾ ಬೀಜಕಣಗಳನ್ನು ಉತ್ಪತ್ತಿಮಾಡಿ ವೃದ್ಧಿಗೊಳ್ಳುತ್ತವೆ. ಬೀಜಕಣ ತಾಯಿಕೋಶದಲ್ಲೇ ರೂಪುಗೊಳ್ಳುತ್ತದೆ. ಆದ್ದರಿಂದ ಇದನ್ನು ಅಂತರ್ಬೀಜಕಣ (ಎಂಡೊಸ್ಟೋರ್) ಎಂದು ಕರೆಯುವುದು ವಾಡಿಕೆ. ಎಂದಿನಂತೆ ವಿಭಜನೆಯಾಗಿ ವೃದ್ಧಿಹೊಂದಲು ಅಡಚಣೆಗಳಿದ್ದರೆ ಆ ಸಂದರ್ಭಗಳಲ್ಲಿ ಮಾತ್ರ ತಾಯಿ ಏಕಾಣುಜೀವಿ ಬೀಜಕಣವಾಗಿ ಮಾರ್ಪಾಡಾಗಿ ಪುನಃ ಸ್ಥಿತಿಗತಿಗಳು ಉತ್ತಮಗೊಂಡಾಗ ಬೀಜಕಣ ಏಕಾಣುಜೀವಿಯಾಗಿ ರೂಪುಗೊಳ್ಳುತ್ತದೆ. ಅಂದರೆ ಕಷ್ಟ ಪರಿಸ್ಥಿತಿಯನ್ನು ಎದುರಿಸಬೇಕಾದಾಗಲೆಲ್ಲ ಏಕಾಣುಜೀವಿ ಬೀಜಕಣವಾಗುತ್ತದೆ. ಬೀಜಕಣ ರೂಪುಗೊಳ್ಳುವುದನ್ನು ಸೂಕ್ಷ್ಮದರ್ಶಕದಲ್ಲಿ ಗಮನಿಸಬಹುದು. ಮೊತ್ತಮೊದಲು ಕೋಶದ್ರವ್ಯದಲ್ಲಿ ಒಂದು ಬೆಳಕಿನ ಬಿಂದು ಕಾಣಿಸಿಕೊಳ್ಳುತ್ತದೆ. ಇದು ಬರಬರುತ್ತ ದೊಡ್ಡದಾಗಿ ದುಂಡಗೆ ಅಥವಾ ಅಂಡಾಕಾರವಾಗಿ ಕಾಣಿಸಿ ದಪ್ಪ ಆವರಣವನ್ನು ಕಲ್ಪಿಸಿಕೊಳ್ಳುತ್ತದೆ. ಇದೇ ಬೀಜಕಣ. ಈ ಬದಲಾವಣೆಗೆ ಅನೇಕ ಗಂಟೆಗಳು ಹಿಡಿಯಬಹುದು. ಒಂದು ಏಕಾಣುಜೀವಿಯಿಂದ ಒಂದೇ ಬೀಜಕಣವಾಗಬಲ್ಲದು. ಪುನಃ ಬೀಜಕಣ ಮೊಳಕೆಯಾದಾಗ ಅದರಿಂದ ಒಂದೇ ಏಕಾಣುಜೀವಿಯಾಗಲು ಮಾತ್ರ ಸಾಧ್ಯ. ಆಗಲೇ ಹೇಳಿದಂತೆ ಬೀಜಕಣವಾಗಿ ಪರಿವರ್ತನೆ ಹೊಂದುವುದು ಏಕಾಣುಜೀವಿಗಳ ಸಹಜ ವರ್ತನೆಯಲ್ಲ. ಉಷ್ಣತೆ ಅಧಿಕವಾದರೆ, ನೀರು ಹಿಂಗಿದರೆ, ಸೂರ್ಯನ ಬೆಳಕು ತೀವ್ರವಾದರೆ ಅಥವಾ ಸಾಧಾರಣ ಕ್ರಿಮಿನಾಶಕಗಳನ್ನು ಬಳಸಿದರೆ ಬೀಜಕಣಗಳು ನಾಶವಾಗುವುದಿಲ್ಲ. ಹದಗೆಟ್ಟ ಪರಿಸ್ಥಿತಿಗಳಲ್ಲಿ ಕೆಲವು ವೇಳೆ ಬೀಜಕಣ ಹತ್ತು ವರ್ಷಗಳವರೆಗೆ ಜೀವಂತವಾಗಿದ್ದು ಅನಂತರ ಮೊಳಕೆಯಾಗಿ ಮೊದಲಿನಂತೆ ಏಕಾಣುಜೀವಿಯಾಗಬಲ್ಲುದು ಹಾಗೂ ಅಲ್ಲಿಂದಾಚೆಗೆ ಎಂದಿನಂತೆ ವಿಭಜನೆಯಿಂದಲೇ ಸಂತಾನವೃದ್ಧಿಮಾಡಿಕೊಳ್ಳಬಲ್ಲದು. ರೋಗಕಾರಕ ಏಕಾಣುಜೀವಿಗಳಲ್ಲಿ ಕೆಲವೇ ಬೀಜಕಣವಾಗಬಲ್ಲವು. ಇದು ನಮ್ಮ ಅದೃಷ್ಟ. ಏಕೆಂದರೆ ಬೀಜಕಣವಾಗಿ ಪರಿವರ್ತನೆ ಹೊಂದಬಲ್ಲ ಏಕಾಣುಜೀವಿಗಳು ಕಷ್ಟಪರಿಸ್ಥಿತಿಗಳನ್ನೆದುರಿಸಿ ಅನೇಕ ಕಾಲ ಜೀವದಿಂದುಳಿದು ರೋಗ ತರಬಲ್ಲವು. ಅವನ್ನು ನಾಶಪಡಿಸುವುದೂ ಸುಲಭವಲ್ಲ. ಏಕಾಣುಜೀವಿಗಳಿರುವ ಪರಿಸರ ಬದಲಾಗದೆ ಒಂದೇ ಸಮಸ್ಥಿತಿಯಲ್ಲಿದ್ದರೆ ಅವುಗಳ ಲಕ್ಷಣರೂಪ ರಚನೆಗಳೂ ಬದಲಾಗುವುದಿಲ್ಲ. ಈ ಸ್ಥಿರತೆ ಜೀನುಗಳಲ್ಲಿದ್ದು ತಾಯಿಕೋಶದ ವಿಭಜನೆಯ ಸಮಯದಲ್ಲಿ ಎರಡಾಗಿ ಮಕ್ಕಳಲ್ಲಿ ಪುನರಾವರ್ತನೆಯಾಗುತ್ತದೆ. ಅಂದರೆ ತದ್ವತ್ ಜೀನುಗಳೇ ಪೀಳಿಗೆಯಿಂದ ಪೀಳಿಗೆಗೆ ಹಾಯುತ್ತವೆ. ಏಕಾಣುಜೀವಿಗಳಿರುವ ಪರಿಸರ ಬದಲಾದಲ್ಲಿ ಈ ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲು ಅವುಗಳಿಗೆ ತಮ್ಮ ರೂಪ, ರಚನೆ ಹಾಗೂ ಲಕ್ಷಣಗಳನ್ನು ಮಾರ್ಪಾಡು ಮಾಡಿಕೊಳ್ಳುವ ಸಾಮಥ್ರ್ಯವಿದೆ. ಬದಲಾವಣೆ ಹೊಂದಬಲ್ಲ ಶಕ್ತಿಗೆ ಪರಿವರ್ತನೆ (ವೇರಿಯೇಷನ್) ಎಂದು ಹೆಸರು. ಹೀಗೆ ಹೊಸ ವಂಶವೇ ಉತ್ಪನ್ನವಾಗುವ ಪರಿಣಾಮವುಳ್ಳ ಈ ವ್ಯತ್ಯಯ (ಮ್ಯುಟೇಶನ್) ಏಕಾಣುಜೀವಿಗಳ ಒಂದು ಮುಖ್ಯ ಲಕ್ಷಣ.
ಅಳಿವು-ಉಳಿವು
ಬದಲಾಯಿಸಿಆಹಾರ, ಉಷ್ಣತೆ, ತೇವ, ಬೆಳಕು, ಆಮ್ಲಜನಕ, ಕ್ರಿಮಿನಾಶಕ ಮತ್ತು ನಂಜುರೋಧಕಗಳು (ಆಂಟಿಸೆಪ್ಟಿಕ್) ಏಕಾಣುಜೀವಿಗಳ ಮೇಲೆ ಪ್ರಭಾವ ಬೀರುವ ಕೆಲವು ಮುಖ್ಯ ಅಂಶಗಳು. ಆಹಾರ : ಸೂಕ್ತವಾದ ಆಹಾರ ದೊರಕದಿದ್ದಲ್ಲಿ ಯಾವ ಜೀವಿಯೂ ಬದುಕದು, ಬೆಳೆಯದು. ಹಾಲು ಮಕ್ಕಳಿಗೆಷ್ಟು ಉತ್ತಮ ಮತ್ತು ಪೂರ್ಣ ಆಹಾರವೋ ಏಕಾಣುಜೀವಿಗಳಿಗೂ ಅಷ್ಟೆ. ಹಾಲಿನಲ್ಲಿ ಇವೂ ಸಹ ಚೆನ್ನಾಗಿ ಬದುಕಿ ವೃದ್ಧಿಯಾಗಬಲ್ಲವು. ಅಗತ್ಯವಾದ ಸಸಾರಜನಕ, ಸಕ್ಕರೆ, ಪಿಷ್ಟಗಳು, ಮೇದಸ್ಸು, ಜೀವಾತುಗಳು, ಲವಣಗಳು ಮತ್ತು ನೀರು ಹಾಲಿನಲ್ಲಿ ಸಾಕಷ್ಟು ಇವೆ. ಏಕಾಣುಜೀವಿಗಳ ಕೋಶದಲ್ಲಿ ಪತ್ರಹರಿತ್ತು ಇಲ್ಲದಿರುವುದರಿಂದ ಇವು (ಸಸ್ಯಗಳಂತೆ) ಗಾಳಿಯಲ್ಲಿರುವ ಇಂಗಾಲಾಮ್ಲ ಮತ್ತು ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು ಆಹಾರವನ್ನು ತಯಾರಿಸಿಕೊಳ್ಳಲಾರವು. ಬದಲು, ಇವು ಇತರ ಮೂಲ ವಸ್ತುಗಳಿಂದ ತಮಗೆ ಬೇಕಾದ ಆಹಾರವನ್ನು ತಯಾರಿಸಿಕೊಳ್ಳುತ್ತವೆ.
ಕೆಲವು ಏಕಾಣುಜೀವಿಗಳು ತಮಗೆ ಬೇಕಾದ ಆಹಾರಸತ್ತ್ವಗಳನ್ನು ತಾವೇ ಸಿದ್ಧಪಡಿಸಿಕೊಳ್ಳಬಲ್ಲವು. ಇನ್ನು ಕೆಲವಕ್ಕೆ ಇದು ಸಾಧ್ಯವಿಲ್ಲ. ಆಹಾರ ಅತ್ಯಗತ್ಯವಾದುದರಿಂದ ಸುತ್ತಮುತ್ತಲಿರುವ ಆಹಾರಾಂಶಗಳನ್ನೇ ಅಳವಡಿಸಿಕೊಂಡು ತಮಗೆ ಸೂಕ್ತವಾದ ಆಹಾರವನ್ನು ಪಡೆಯುತ್ತವೆ. ಕೆಲವು ಸಸಾರಜನಕೋತ್ಪಾದಕ (ನೈಟ್ರಿಫೈಯಿಂಗ್) ಮತ್ತು ಗಂಧಕೋತ್ಪಾದಕ ಏಕಾಣುಜೀವಿಗಳು ತಮ್ಮ ಸ್ವಂತ ಶಕ್ತಿಯಿಂದ ಉತ್ಪಾದನೆಮಾಡಿಕೊಂಡ ಅಮೋನಿಯ ಮತ್ತು ಗಂಧಕದ ಆಕ್ಸೈಡುಗಳ ಉಪಯೋಗದಿಂದ ಬೇಕಾದ ಇಂಗಾಲವನ್ನು ಇತರ ಮೂಲವಸ್ತುಗಳಿಂದ ಪಡೆಯುತ್ತವೆ.
ಅನೇಕ ಏಕಾಣುಜೀವಿಗಳಿಗೆ ಜೈವಿಕ ವಸ್ತುಗಳಲ್ಲಿ ಅಡಕವಾಗಿರುವ ಸಸಾರಜನಕವೇ ಅವಶ್ಯಕ. ಹಾಲು, ದನದ ಮಾಂಸದ ಭಟ್ಟಿಗಳಲ್ಲಿ ಇದು ದೊರಕುತ್ತದೆ. ಸಂಶೋಧನಾಲಯಗಳಲ್ಲಿ ಕೃತಕವಾಗಿ ಇವನ್ನು ಬೆಳೆಸುವಾಗ ಅವುಗಳಿಗೆ ಈ ಆಹಾರಾಂಶಗಳೊಂದಿಗೆ ಸುಲಭವಾಗಿ ಉಪಯೋಗಮಾಡಲು ಸಾಧ್ಯವಾಗುವಂಥ ಇತರ ವಸ್ತುಗಳನ್ನೂ ಸತ್ತ್ವಗಳನ್ನೂ ಸೇರಿಸುತ್ತಾರೆ. ಉದಾಹರಣೆಗೆ ಪೆಪ್ಟೋನ್ ಎಂಬ ಸಸಾರಜನಕಾಂಶ ಜೀವಾತುಗಳನ್ನೂ ಸೂಕ್ತಪ್ರಮಾಣಗಳಲ್ಲಿ ಲವಣ ಇತ್ಯಾದಿಗಳನ್ನೂ ಬೆರೆಸುವುದು ವಾಡಿಕೆ. ಜೀವಾತುಗಳಲ್ಲಿ ಮುಖ್ಯವಾದವುಗಳೆಂದರೆ ಥ್ಯೆಯಮಿನ್ (ಜೀವಾತು), ರಿಬೋಫ್ಲೆವಿನ್ (ಜೀವಾತು), ನಯಸಿನ್, ಬಯೋಟಿನ್, ಪ್ಯಾಂಟೋಥೆನಿಕ್ ಆಮ್ಲ, ಫೋಲಿಕ್ ಆಮ್ಲ.
ಉಷ್ಣತೆ
ಬದಲಾಯಿಸಿಸಾಮಾನ್ಯವಾಗಿ ಹೇಳುವುದಾದರೆ ಏಕಾಣುಜೀವಿಗಳ ಉಳಿವಿಗೆ ಸೂಕ್ತವಾದ ಉಷ್ಣತೆ ಸುಮಾರು 250-300 ಸೆ. ಮನುಷ್ಯ ಮತ್ತು ಪ್ರಾಣಿಗಳಲ್ಲಿ ವೃದ್ಧಿಗೊಳ್ಳುವ ಏಕಾಣುಜೀವಿಗಳಿಗೆ 370 ಸೆ. ಉಷ್ಣತೆ ಅತ್ಯಂತ ಹಿತಕರ. ಇವು ನಾಶವಾಗದೆ ತಡೆಯಬಲ್ಲ ಅತಿ ಶೀತಲಾವಸ್ಥೆ ಎಂದರೆ 50-60 ಸೆ. ಹಾಗೂ ಅತ್ಯಂತ ಅಧಿಕ ಉಷ್ಣತೆ ಸುಮಾರು 380-480 ಸೆ, ಎಂದು ಹೇಳಬಹುದು. ಅಧಿಕ ಉಷ್ಣತೆಗಿಂತ ಶೀತಲಾವಸ್ಥೆಯನ್ನು ಅವು ಹೆಚ್ಚು ಕಾಲ ಎದುರಿಸಿ ಜೀವಂತವಾಗಿರಬಲ್ಲವು. ಒಂದು ತೊಟ್ಟಿಯಲ್ಲಿರುವ ಎಲ್ಲ ಏಕಾಣುಜೀವಿಗಳನ್ನು ಹತ್ತು ಮಿನಿಟುಗಳಲ್ಲಿ ನಾಶಮಾಡಬಲ್ಲ ಕನಿಷ್ಠ ಉಷúತೆಯನ್ನು ತಜ್ಞರು ನಿಗದಿ ಮಾಡಿದ್ದಾರೆ. ಸ್ವಲ್ಪ ಹೆಚ್ಚಿನ ಉಷ್ಣತೆಯಿದ್ದಲ್ಲಿ ಏಕಾಣುಜೀವಿಗಳು ಸ್ಥಗಿತಗೊಳ್ಳುತ್ತವೆ. ಇವು ನಾಶ ಹೊಂದುವ ಅತ್ಯಂತ ಅಧಿಕ ಉಷ್ಣತೆ ಇಷ್ಟೇ ಎಂದು ನಿಗದಿಮಾಡಲು ಸಾಧ್ಯವಿಲ್ಲ. ಅನೇಕ ರೋಗಕಾರಕ ಏಕಾಣುಜೀವಿಗಳು-ಉದಾಹರಣೆಗೆ ವಿಷಮಶೀತಜ್ವರ, ಆಮಶಂಕೆ, ಭೇದಿ ಇತ್ಯಾದಿ ಏಕಾಣುಜೀವಿಗಳು ಮಂಜುಗಡ್ಡೆಗಳಲ್ಲಿ ಅಥವಾ ಐಸ್ ಕ್ರೀಂನಲ್ಲಿ ಬದುಕಿದ್ದು ಅನಂತರ ಚೇತನಗೊಳ್ಳುತ್ತವೆ. -2520 ಸೆ. ಉಷ್ಣತೆಯ ದ್ರವಗಾಳಿ ಅಥವಾ ದ್ರವಜಲಜನಕಗಳಲ್ಲಿ ಘನೀಭವಿಸಿದ ಏಕಾಣುಜೀವಿಗಳಲ್ಲಿ ಕೆಲವು, ಉಷ್ಣತೆ ಹಿತಕರವಾದಾಗ ಪುನಶ್ಚೇತನಗೊಂಡಿರುವ ನಿದರ್ಶನಗಳಿವೆ. ಏಕಾಣುಜೀವಿಗಳಲ್ಲೇ ಕೆಲವು ಉಷ್ಣಪ್ರೇಮಿಗಳು (ಥರ್ಮೋಫಿಲಿಕ್) ಇವೆ. ಇವು 500-600 ಸೆ. ಉಷ್ಣತೆಗಳಲ್ಲೂ ಬದುಕಿರಬಲ್ಲವು ಮತ್ತು ಎಂದಿನಂತೆ ತಮ್ಮ ಜೀವನವ್ಯಾಪಾರಗಳನ್ನು ನಡೆಸಬಲ್ಲವು. ಆದರೆ ಈ ಶಕ್ತಿ ಇವುಗಳಿಗೆ ಹೇಗೆ ಪ್ರಾಪ್ತವಾಗಿದೆ ಎಂಬ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಜೀವಾಣುನಾಶನ (ಸ್ಟರಿಲೈಸೇಷನ್) : ಆಗಲೇ ತಿಳಿಸಿದಂತೆ ಸಾಮಾನ್ಯವಾಗಿ ಈ ಜೀವಿಗಳು ಅಧಿಕ ಉಷ್ಣತೆಯಲ್ಲಿ ಜೀವಿಸಿರಲಾರವು. 500 -600 ಸೆಂ. ಉಷ್ಣತೆಯ ಪ್ರಭಾವದಿಂದ ಇವನ್ನು ನಾಶಪಡಿಸಬಹುದು. ಕುದಿಯುವ ನೀರು, ಆವಿ ಅಥವಾ ಪಾಶ್ಚುರೀಕರಣಗಳ ಪ್ರಭಾವದಿಂದಲೂ ಈ ಜೀವಿಗಳು ನಿರ್ನಾಮವಾಗುತ್ತವೆ. ಆದರೆ ಬೀಜಕಣಗಳು ಈ ಮಟ್ಟದ ಉಷ್ಣತೆಯಲ್ಲಿ ಸುಲಭವಾಗಿ ನಾಶವಾಗವು; ಆಗಲೂ ಬಹಳ ಕಾಲ ಬೇಕು. 1200 ಸೆಂ. ಉಷ್ಣತೆಯ ಆವಿಯನ್ನು ಹೆಚ್ಚು ಒತ್ತಡಕ್ಕೆ ಒಳಪಡಿಸಿದಲ್ಲಿ ಬೀಜಕಣಗಳು ಅಲ್ಪಕಾಲಾವಧಿಯಲ್ಲೇ ನಾಶಗೊಳ್ಳುತ್ತವೆ. ಒಣಬೀಜಕಣಗಳನ್ನು (ಡ್ರೈಸ್ಟೋರ್ಸ್) ಇನ್ನೂ ಹೆಚ್ಚು ಒತ್ತಡ ಮತ್ತು ಅಧಿಕ ಉಷ್ಣತೆಗಳಿಂದ ನಾಶಪಡಿಸಬಹುದು. 1700 ಸೆಂ. ಉಷ್ಣತೆಯಲ್ಲಿ ಒಂದು ಗಂಟೆ ಕಾಲವಿಟ್ಟರೆ ಅವು ನಾಶವಾಗುತ್ತವೆ.
ತೇವ
ಬದಲಾಯಿಸಿಭೂಮಿಯಲ್ಲಿ 2%-3%ರಷ್ಟಾದರೂ ತೇವವಿಲ್ಲದಿದ್ದಲ್ಲಿ ಏಕಾಣುಜೀವಿ ಉತ್ಪತ್ತಿಯಾಗದೆಂಬುದು ಸಂಶೋಧನೆಯಿಂದ ತಿಳಿದ ವಿಷಯ. 5%-10% ತೇವವಿದ್ದರೆ ಇವು ಚೇತನಗೊಳ್ಳುತ್ತವೆ ಹಾಗೂ 25%-40%ರಷ್ಟು ತೇವವಿದ್ದಲ್ಲಿ ಇವುಗಳ ಬೆಳೆವಣಿಗೆಗೆ ಸಮರ್ಪಕವಾದ ಸ್ಥಿತಿಯಿದೆಯೆಂದು ಹೇಳಬಹುದು. ಏಕಾಣುಜೀವಿಗಳಿಗೆ ಆಹಾರ ಸೇವಿಸಲು ಬಾಯಿ ಇಲ್ಲ. ಯಾವ ಆಹಾರವಾದರೂ ದ್ರವರೂಪದಲ್ಲೇ ಕೋಶಾವರಣದ ಮೂಲಕ ಸೋಸಿ ಹೋಗಬೇಕು. ಆದ್ದರಿಂದ ತೇವದ ಪ್ರಾಮುಖ್ಯ ಎಷ್ಟೆಂದು ತಿಳಿಯುತ್ತದೆ. ತೇವವಿಲ್ಲದ ಸ್ಥಿತಿಯನ್ನು ವಿರೋಧಿಸುವುದರಲ್ಲಿ ಈ ಜೀವಿಗಳಲ್ಲಿ ವೈವಿಧ್ಯವನ್ನು ಕಾಣಬಹುದು. ತೇವವಿಲ್ಲದ ಪರಿಸ್ಥಿತಿಗಳಲ್ಲಿ ಸುಲಭವಾಗಿ ನಾಶಗೊಳ್ಳುವ ಕೆಲವು ಏಕಾಣುಜೀವಿಗಳಿವೆ. ಈ ಲಕ್ಷಣವನ್ನು ಆಹಾರಸಾಮಗ್ರಿಗಳ ರಕ್ಷಣೆಗೆ ಬಳಸಿಕೊಳ್ಳಲಾಗುತ್ತದೆ. ಆಹಾರಗಳಿಂದ ತೇವವನ್ನು ಸಂಪೂರ್ಣ ತೆಗೆದಲ್ಲಿ ಏಕಾಣುಜೀವಿ ಚಟುವಟಿಕೆ ಸ್ಥಗಿತಗೊಂಡು ಆಹಾರ ಬಹಳ ದಿನಗಳು ಕೆಡದೆ ಉತ್ತಮ ಸ್ಥಿತಿಯಲ್ಲಿರುತ್ತದೆ. ತೇವರಹಿತ ಸ್ಥಿತಿಯಲ್ಲಿ ಎಲ್ಲ ಏಕಾಣುಜೀವಿಗಳು ಸಾಯದಿರಬಹುದು ಹಾಗೂ ತಕ್ಕಷ್ಟು ತೇವ ಒದಗಿದಲ್ಲಿ ಅವು ಪುನಃ ಚೇತನಗೊಂಡು ಆಹಾರವನ್ನು ಕೆಡಿಸಲೂಬಹುದು. ಶಿಲೀಂಧ್ರಗಳು ಕಡಿಮೆ ತೇವವಿದ್ದಾಗ್ಯೂ ಬೆಳೆಯಬಲ್ಲವು.
ಆಕ್ಸಿಜನ್
ಬದಲಾಯಿಸಿಏಕಾಣುಜೀವಿಗಳು ಗಾಳಿಯಲ್ಲಿರುವ ಆಕ್ಸಿಜನ್ನಿನ ಬಳಕೆಯಲ್ಲಿ ವಿಧ ವಿಧವಾಗಿ ನಡೆದುಕೊಳ್ಳುತ್ತವೆ. ಕೆಲವಕ್ಕೆ ಉಸಿರಾಡಲು ಆಕ್ಸಿಜನ್ನಿನ ಅವಶ್ಯಕತೆಯಿರುವುದರಿಂದ ಅದಿಲ್ಲದಿದ್ದರೆ ಬೆಳೆಯಲಾರವು-ಇಂಥವು ವಾಯುಜೀವಿಗಳು (ಏರೋಬ್ಸ್). ಮತ್ತೆ ಕೆಲವು ಆಕ್ಸಿಜನ್ ಇಲ್ಲದೆಯೂ ಬೆಳೆಯುತ್ತವೆ. ಇದ್ದರೂ ಅದನ್ನವು ಉಪಯೋಗಿಸಿಕೊಳ್ಳಲಾರದವಾಗಿವೆ. ಇಂಥವು ಅವಾಯುಜೀವಿಗಳು (ಅನಿರೋಬ್ಸ್). ಮತ್ತೆ ಕೆಲವು ಎರಡು ಸ್ಥಿತಿಗಳಲ್ಲೂ ಊರ್ಜಿತವಾಗಬಲ್ಲವು. ಇವನ್ನು ಐಚ್ಛಿಕ (ಫ್ಯಾಕಲ್ ಟೆಟಿವ್) ಜೀವಿಗಳೆನ್ನಬಹುದು. ಅವಾಯುಜೀವಿಗಳನ್ನು ಕೊಳೆಯುವ ಮತ್ತು ಕೊಳೆಯುತ್ತಿರುವ ವಸ್ತುಗಳಲ್ಲಿ, ಭೂಮಿ ಹಾಗೂ ಕೊಳ ಕೆರೆಗಳ ತಳದಲ್ಲಿರುವ ಮಣ್ಣಿನಲ್ಲಿ ಕಾಣಬಹುದು. ಅಪಕರ್ಷಣಕಾರಿಗಳು (ರೆಡ್ಯೂಸಿಂಗ್ ಏಜೆಂಟ್ಸ್) ಸಾಕಷ್ಟಿದ್ದರೆ (ಜೀವಾತು, ಸಿಸ್ಟೈನ್ ಇತ್ಯಾದಿ) ಅವಾಯುಜೀವಿಗಳನ್ನು ಸಹ ಗಾಳಿಯಲ್ಲಿ ಬೆಳೆಸಬಹುದು. ಆಹಾರವಸ್ತುಗಳನ್ನು ಡಬ್ಬಗಳಲ್ಲಿ ಹಾಕಿ ರಕ್ಷಿಸುವ (ಟಿನ್ನಿಂಗ್) ಉದ್ಯಮದಲ್ಲಿ ಬೀಜಕೋಶ ಉತ್ಪತ್ತಿಯಾಗುವ ಏಕಾಣುಜೀವಿಗಳನ್ನು ಹೊರಗಿಡುವುದು ಪ್ರಯಾಸವೇ ಸರಿ. ಕಾರ್ಯಗತಿಯ ಭರದಲ್ಲಿ ಸಾಕಷ್ಟು ಉಷ್ಣತೆಗೆ ಒಳಪಡಿಸಿ ಬೀಜಕೋಶಗಳನ್ನು ನಾಶಪಡಿಸದಿದ್ದಲ್ಲಿ ಅವನ್ನು ಡಬ್ಬದಲ್ಲಿಟ್ಟು ಮುಚ್ಚಿದ ಅನಂತರ ಈ ಆಕ್ಸಿಜನ್ ರಹಿತ ಮುಚ್ಚಿದ ಡಬ್ಬಗಳಲ್ಲಿ ಬೀಜಕೋಶಗಳು ಮೊಳಕೆಯಾಗಿ ವೃದ್ಧಿಗೊಳ್ಳುತ್ತವೆ. ಒಂದು ವೇಳೆ ಈ ಜೀವಿಗಳು ವಿಷವನ್ನು (ಟಾಕ್ಸಿನ್) ತಯಾರಿಸುವವೂ ಆಗಿದ್ದಲ್ಲಿ (ಕ್ಳಾಸ್ಟ್ರಿಡಿಯಂ ಬಾಟ್ಯುಲೈನಂ ಏಕಾಣುಜೀವಿ) ಈ ವಿಷವುಳ್ಳ ಆಹಾರವನ್ನು ಸೇವಿಸಿದವರು ಕೂಡಲೇ ವಿಷದ ಪರಿಣಾಮಕ್ಕೊಳಗಾಗಿ ನರಳುವುದುಂಟು. ಅತಿ ಅಲ್ಪ ಪರಿಮಾಣದಲ್ಲೂ ಈ ವಿಷ ಅಪಾಯಕಾರಿ.
ಬೆಳಕು
ಬದಲಾಯಿಸಿಕತ್ತಲಿದ್ದಲ್ಲಿ ಏಕಾಣುಜೀವಿಯ ವೃದ್ಧಿ ಭರದಿಂದ ಆಗುತ್ತದೆ. ಬೆಳಕಿಗೆ ಬಂದರೆ ಇವುಗಳ ಚಲನವಲನ ಸ್ಥಗಿತಗೊಳ್ಳುತ್ತದೆ. ಸೂರ್ಯನ ಬೆಳಕಿನಲ್ಲಿ ಅವು ಹೆಚ್ಚೆಂದರೆ 10-15 ಮಿನಿಟುಗಳ ಕಾಲ ಉಳಿಯಬಹುದು; ಮತ್ತೆ ನಾಶವಾಗಿ ಹೋಗುತ್ತವೆ. ಆ ಬೆಳಕಿನಲ್ಲಿರುವ ಅತಿನೇರಿಳೆ ಕಿರಣಗಳು ಇವುಗಳಿಗೆ ಅಪಾಯಕಾರಿ. ಬೀಜಕೋಶರಹಿತ ಏಕಾಣುಜೀವಿಗಳಿಗೆ 1-2 ದೂರದಿಂದ ಈ ಕಿರಣಗಳನ್ನು ಹಾಯಿಸಿದಲ್ಲಿ ಅವು ಕೆಲವೇ ಮಿನಿಟುಗಳಲ್ಲಿ ನಾಶಹೊಂದುತ್ತವೆ. ಪೂರ್ಣ ಉಪಯೋಗ ಪಡೆಯಲು ಈ ಕಿರಣಗಳನ್ನು ಸೂಕ್ತರೀತಿಯಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ.
ಬೆಳೆಸಲು ಉಪಯೋಗಿಸುವ ಕೃತಕ ಮಾಧ್ಯಮ (ಮೀಡಿಯಂ) : ಮಾಧ್ಯಮದ ಆಮ್ಲತೆ ಅಥವಾ ಕ್ಷಾರಸ್ವಭಾವ ಏಕಾಣುಜೀವಿಗಳ ಬೆಳೆವಣಿಗೆಯ ದೃಷ್ಟಿಯಿಂದ ಅತಿ ಮುಖ್ಯ. ಆಮ್ಲೀಯವೂ ಅಲ್ಲದ ಕ್ಷಾರೀಯವೂ ಅಲ್ಲದ ಮಾಧ್ಯಮ ಬಲುಮಟ್ಟಿಗೆ ಎಲ್ಲ ಏಕಾಣುಜೀವಿಗಳ ಬೆಳೆವಣಿಗೆಗೂ ಹಿತಕರವೆನ್ನಬಹುದು. ಆದರೆ ಸ್ವಲ್ಪಮಟ್ಟಿಗೆ ಆಮ್ಲೀಯತೆ ಅಥವಾ ಕ್ಷಾರೀಯತೆಯನ್ನು ಬಯಸುವ ಅನೇಕ ಏಕಾಣುಜೀವಿಗಳೂ ಇವೆ.
ನಂಜುರೋಧಕ ಹಾಗೂ ಕ್ರಿಮಿನಾಶಕಗಳ ಪರಿಣಾಮ : ಇದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಕೆಲವು ನಾಶಕಗಳೂ ಏಕಾಣುಜೀವಿಗಳನ್ನು ನಾಶಪಡಿಸುತ್ತವೆ. ಮತ್ತೆ ಕೆಲವು ಅವುಗಳ ಚಟುವಟಿಕೆಯನ್ನು ಸ್ಥಗಿತಗೊಳಿಸುತ್ತವೆ. ಅಧಿಕ ಸಾರದ ನಾಶಕಗಳನ್ನು ಉಪಯೋಗಿಸಿದಾಗ ನಾಶವಾಗುವ ಜೀವಿಗಳು ಸಾರಗುಂದಿಸಿದ ಅವೇ ನಾಶಕಗಳನ್ನು ಉಪಯೋಗಿಸಿದಾಗ ನಿಶ್ಚೇತನ ಮಾತ್ರ ಆಗುತ್ತವೆ. ಆದರೆ ಈ ನಾಶಕಗಳಿಂದ ಸಾಮಾನ್ಯವಾಗಿ ಎಲ್ಲ ಏಕಾಣುಜೀವಿಗಳ ಜೀವಕ್ರಿಯೆಗಳೂ ಕುಂದುವುದೊಂದೇ ಅಲ್ಲದೆ ಸಂತಾನವೃದ್ಧಿಗೂ ಪೂರ್ಣವಿರಾಮವಾಗುತ್ತದೆ. ಕಾರ್ಬಾಲಿಕ್ ಆಮ್ಲ, ಆಲ್ಕೊಹಾಲ್ ಇತ್ಯಾದಿ ನಾಶಕಗಳು, ಗಂಧಕೀಯಗಳು, ಪ್ರತಿಜೀವಕಗಳು (ಆಂಟಿಬಯೊಟಿಕ್ಸ್) ಜೀವಕ್ರಿಯೆಗಳನ್ನು ಕುಂದಿಸಿ ಸಂತಾನೋತ್ಪತ್ತಿಯನ್ನು ನಿಲ್ಲಿಸುವ ಔಷಧಗಳು. ಏಕಾಣುಜೀವಿಗಳ ಸೋಂಕಿನಿಂದ ಆಹಾರಗಳನ್ನು ಸುರಕ್ಷಿತವಾಗಿಡಲು ನಂಜುರೋಧಕಗಳನ್ನು ಮುಖ್ಯವಾಗಿ ಉಪಯೋಗಮಾಡಲಾಗುತ್ತಿದೆ. ಕ್ರಿಮಿನಾಶಕಗಳನ್ನು ಗಾಯಗಳ ಶುದ್ಧೀಕರಣ, ನೀರಿನಲ್ಲಿರುವ ರೋಗಕಾರಕ ಏಕಾಣುಜೀವಿಗಳ ನಾಶ ಮುಂತಾದವುಗಳಲ್ಲಿ ಉಪಯೋಗಮಾಡಲಾಗುತ್ತಿದೆ. ಕ್ರಿಮಿನಾಶಕಗಳ ಶಕ್ತಿಯನ್ನು ಅನೇಕ ವಿದ್ಯಮಾನಗಳು ಕುಂದಿಸುತ್ತವೆ. ಇವುಗಳಲ್ಲಿ ಮುಖ್ಯವಾದವು-1 ದ್ರವವೃದ್ಧಿ (ಡೈಲ್ಯೂಷನ್), 2 ಏಕಾಣುಜೀವಿಗಳೊಂದಿಗೆ ಹೊಂದಿರುವ ಸಂಪರ್ಕಸಮಯ, 3 ಏಕಾಣುಜೀವಿಗಳ ಸಂಖ್ಯೆ ಮತ್ತು ಅವುಗಳ ಗುಂಪು, 4 ಉಷ್ಣತೆ, 5 ಮೇಲ್ಮೈ ಎಳೆತ (ಸರ್ಫೇಸ್ ಟೆನ್‍ಷನ್), 6 ಪರಿಸರದ ಸ್ಥಿತಿಗಳು. ಬೀಜಕಣಗಳು ಪ್ರತಿಕೂಲ ಸ್ಥಿತಿಗಳನ್ನು ಏಕಾಣುಜೀವಿಗಳಿಗಿಂತ ಹೆಚ್ಚು ಕಾಲ ನಿರೋಧಿಸಿ ಜೀವಂತವಾಗಿರಬಲ್ಲವು. ಒಂದು ಕ್ರಿಮಿನಾಶದ ಪರಿಣಾಮ ಎಲ್ಲ ಏಕಾಣುಜೀವಿಗಳ ಮೇಲೂ ಒಂದೇ ರೀತಿ ಎಂದು ಹೇಳಲಾಗುವುದಿಲ್ಲ. ಕೀವಿನಲ್ಲಿರುವ ಸ್ಟೆಫ್ಯೆಲೊಕಾಕ್ಕೆ ಏಕಾಣುಜೀವಿಗಳು ಸ್ವಲ್ಪಮಟ್ಟಿಗೆ ಕ್ರಿಮಿನಾಶಕಗಳ ಪ್ರಭಾವವನ್ನೆದುರಿಸಬಲ್ಲವು. ವಿಷಮಶೀತಜ್ವರ ತರುವ ಏಕಾಣುಜೀವಿಗಳು ಸೂಕ್ಷ್ಮ ಕ್ರಿಮಿನಾಶಕಗಳಿಂದ ಸುಲಭವಾಗಿ ನಾಶಹೊಂದುತ್ತವೆ. ಕ್ರಿಮಿನಾಶಕಗಳ ಶಕ್ತಿಯನ್ನು ನಿರ್ಧರಿಸುವಾಗ ಏಕಾಣುಜೀವಿಗಳನ್ನು ನಾಶಮಾಡುವ ಶಕ್ತಿಯೊಂದೇ ಮುಖ್ಯವೆಂದು ಹೇಳಲಾಗುವುದಿಲ್ಲ. ಇವು ಊತಕಗಳ ಮೇಲೆ ಇತರ ಕೆಟ್ಟ ಪರಿಣಾಮಗಳನ್ನು ಮಾಡಕೂಡದು.
ಗಾಳಿಯ ಮತ್ತು ನೀರಿನ ಏಕಾಣುಜೀವಿಗಳು
ಬದಲಾಯಿಸಿಏಕಾಣುಜೀವಿಗಳಿಲ್ಲದ ಜಾಗಗಳು ಇಲ್ಲವೇ ಇಲ್ಲವೆಂದು ಹೇಳಬಹುದು. ಕೆರೆ, ಕುಂಟೆ, ಚರಂಡಿ, ಗೊಬ್ಬರದ ಗುಂಡಿ, ನದಿ, ನೆಲ ಇತ್ಯಾದಿ ಎಲ್ಲ ಕಡೆಗಳಲ್ಲೂ ಇವು ಇದ್ದೇ ಇವೆ. ಇವುಗಳ ಆಹಾರ ಜೈವಿಕವಸ್ತುಗಳು. ಆದ್ದರಿಂದ ಜೈವಿಕವಸ್ತುಗಳಿರುವಲ್ಲೆಲ್ಲ ಈ ಜೀವಿಗಳು ಹೇರಳವಾಗಿರುತ್ತವೆ. ದ್ರವಗಳಲ್ಲಿ ಅಂದರೆ ಹಾಲು, ಹೆಂಡ, ರಕ್ತ, ಮೂತ್ರ ಇತ್ಯಾದಿಗಳಲ್ಲಿಯೂ ಘನಸ್ಥಿತಿಯ ಆಹಾರಗಳಲ್ಲಿ ಅಂದರೆ ತರಕಾರಿ, ಹಣ್ಣು, ಧಾನ್ಯ, ಮಾಂಸ ಇತ್ಯಾದಿ ಪದಾರ್ಥಗಳಲ್ಲಿಯೂ ಇವುಗಳಿವೆ. ತೇವ, ಉಷ್ಣತೆ ಹಿತಕರವಾಗಿದ್ದಲ್ಲೆಲ್ಲ ಬೆಳೆದು ವೃದ್ಧಿಯಾಗುತ್ತವೆ. ಇಂಥ ಬೆಳೆವಣಿಗೆಗೆ ಮಿತಿ ಎಂಬುದೇ ಇಲ್ಲ. ಆದರೆ ಇಂಥ ವೃದ್ಧಿಯ ಜೊತೆಯಲ್ಲೇ ನಾಶವಾಗಲು ಬೇಕಾದ ಸ್ಥಿತಿಗಳೂ ಅಲ್ಲಿ ಹುಟ್ಟಿಕೊಳ್ಳುತ್ತವೆ. ತೇವವಿಲ್ಲದ ಸ್ಥಿತಿ, ಅಧಿಕ ಆಮ್ಲತೆ, ಸೂರ್ಯಕಿರಣಗಳು ಮುಂತಾದವುಗಳ ಪರಿಣಾಮದಿಂದ ಇವುಗಳ ಈ ವೃದ್ಧಿಗೆ ತಡೆಯುಂಟಾಗುವುದು. ನಾವು ಕೆಮ್ಮುವಾಗ, ಸೀನುವಾಗ ಹಾಗೂ ಮಾತನಾಡುವಾಗ ನಮ್ಮ ಬಾಯಿ, ಗಂಟಲುಗಳಲ್ಲಿರುವ ಏಕಾಣುಜೀವಿಗಳು ಹೊರಬಿದ್ದು ಗಾಳಿಯಲ್ಲಿ ಸೇರುತ್ತವೆ. ಈ ಗಾಳಿಯನ್ನು ಮತ್ತೊಬ್ಬ ಉಸಿರಾಡುವಾಗ ತೆಗೆದುಕೊಂಡಲ್ಲಿ ಅವನ ಗಂಟಲು ಶ್ವಾಸಕೋಶಗಳಿಗೆ ಇವು ಹಾಯ್ದು ನೆಲೆಸಿ ವೃದ್ಧಿಯಾಗಿ ಸೋಂಕನ್ನುಂಟುಮಾಡುತ್ತವೆ. ಈ ರೀತಿ ಅನೇಕ ರೋಗಗಳ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಉದಾಹರಣೆಗೆ, ಎಲ್ಲ ಶ್ವಾಸಕೋಶದ ರೋಗಗಳು-ಕ್ಷಯ, ಇನ್‍ಫ್ಲೂಯೆಂಜ, ನ್ಯೂಮೋನಿಯಾ, ಗಂಟಲುಮಾರಿ, ನಾಯಿಕೆಮ್ಮು ಇತ್ಯಾದಿ.
ಹರಿಯುವ ನೀರಿಗೆ ಅಸಂಖ್ಯಾತ ಏಕಾಣುಜೀವಿಗಳು ಬಂದು ಸೇರಿಕೊಳ್ಳುತ್ತವೆ. ಭೂಮಿಯ ಮೇಲ್ಪದರಗಳಲ್ಲಿರುವ ಏಕಾಣುಜೀವಿಗಳೂ ಇದರಲ್ಲಿ ಸೇರುತ್ತವೆ. ಈ ರೀತಿ ಸೇರಿದವು ನೀರಿನಲ್ಲಿ ಬಹಳ ಕಾಲ ಜೀವಿಸಿರಲಾರವು. ಅವು ಕ್ರಮೇಣ ನಾಶವಾಗುತ್ತವೆ. ಕೆಲವು ವೇಳೆ ನೀರು ಬಹಳ ಕಲ್ಮಷಯುಕ್ತವಾಗಿದ್ದು ಅದರಲ್ಲಿ ಜೈವಿಕ ವಸ್ತುಗಳು ಸಾಕಷ್ಟು ಇದ್ದರೆ ಏಕಾಣುಜೀವಿಗಳ ವೃದ್ಧಿಗೆ ಧಾರಾಳ ಅವಕಾಶ ಒದಗುತ್ತದೆ.
ಏಕಾಣುಜೀವಿಗಳೆಲ್ಲವೂ ವ್ಯಾಧಿಕಾರಕಗಳೆಂದೇನೂ ತಿಳಿಯಬೇಕಾಗಿಲ್ಲ. ಹಲವಾರು ಜೀವಿಗಳು ಮಾನವಕುಲಕ್ಕೆ ಉಪಕಾರಿಗಳು. ಹಾಲು ಮತ್ತು ಅದಕ್ಕೆ ಸಂಬಂಧಪಟ್ಟ ಪದಾರ್ಥಗಳ ತಯಾರಿಕೆಯಲ್ಲಿ ಸಹಾಯಮಾಡುವ ಮತ್ತು ಹೊಲಸು ತುಂಬಿದ ಭೂಮಿಯನ್ನು ಫಲವತ್ತಾಗಿ ಮಾಡುವ ಹಾಗೂ ಗ್ರಾಮಸಾರವನ್ನು ಸೃಷ್ಟಿಮಾಡುವ ಏಕಾಣುಜೀವಿಗಳು ಇವುಗಳಲ್ಲಿ ಅತಿಮುಖ್ಯವಾದವು. ಹಸುವಿನ ಕೆಚ್ಚಲಿನಿಂದ ಬರುವ ಹಾಲಲ್ಲೇ ಕೆಲವು ವಿಧದ ಏಕಾಣುಜೀವಿಗಳಿರುತ್ತವೆ. ಆದರೆ ಇವು ಕೆಡಕುಂಟುಮಾಡುವವಲ್ಲ. ಹಾಲಿನಲ್ಲಿ ಏಕಾಣುಜೀವಿಗಳು ವೃದ್ಧಿಯಾಗಲು ಬೇಕಾದ ಸೌಲಭ್ಯಗಳೆಲ್ಲ ಇವೆ. ಇವುಗಳಲ್ಲಿ ಕೆಲವು ಮುಖ್ಯವಾಗಿ ಸಸಾರಜನಕಾಂಶವನ್ನು ಆಕ್ರಮಣಮಾಡಿ ಅದನ್ನು ಒಡೆಯುತ್ತವೆ. ಆ ಸಂದರ್ಭದಲ್ಲಿ ಹಾಲಿಗೆ ಕೆಟ್ಟ ವಾಸನೆ ಬರುತ್ತದೆ. ಮತ್ತೆ ಕೆಲವು ಹಾಲಿನಲ್ಲಿರುವ ಶರ್ಕರಪಿಷ್ಟ ಅಂಶಗಳನ್ನು ಆಕ್ರಮಿಸಿ ಹಾಲನ್ನು ಹೆಪ್ಪುಗಟ್ಟಿಸುತ್ತವೆ. ಬಿಸಿಮಾಡದ ಹಾಲಿನಲ್ಲಿ ಲ್ಯಾಕ್ಟೋ ಬ್ಯಾಸಿಲೈ ಎಂಬ ಏಕಾಣುಜೀವಿ ವೃದ್ಧಿಹೊಂದಿ ಹಾಲನ್ನು ಕೆಡಿಸದೆ ಹುಳಿ ಮಾಡಬಹುದು. ಹುಳಿ ಮಾಡುವ ಏಕಾಣುಜೀವಿಗಳನ್ನು ನೇರವಾಗಿ ಹಾಲಿಗೆ ಬೆರೆಸಿ ಕೃತಕವಾಗಿ ಹುಳಿ ತರಿಸಲೂಬಹುದು. ಹಾಲಿನಲ್ಲಿ ರೋಗಕಾರಕ ಏಕಾಣುಜೀವಿಗಳು ಸೇರಬಹುದು. ಇವು ಮುಖ್ಯವಾಗಿ ಕಲಬೆರಕೆ ಮಾಡುವ ನೀರಿನಿಂದ, ಹಾಲು ಕರೆಯುವವನಿಂದ, ಪಾತ್ರೆಯಿಂದ ಅಥವಾ ಹಾಲನ್ನು ಉಪಯೋಗಿಸುವಾಗ ಸೇರುತ್ತವೆ. ಹಾಲಿನಲ್ಲಿ ಈ ರೋಗಕಾರಕಗಳು ಸೇರಿ ವೃದ್ಧಿಯಾಗದಂತೆ ಅದನ್ನು ಅತಿ ಶೀತಲಾವಸ್ಥೆಯಲ್ಲಿ ರಕ್ಷಿಸಬಹುದು. ರೋಗಕಾರಕಗಳನ್ನು ನಾಶಪಡಿಸಲು ಪಾಶ್ಚುರೀಕರಣ ಮಾಡಬಹುದು. (ನೋಡಿ- ಪಾಶ್ಚುರೀಕರಣ) ಹಾಲಿನಿಂದ ಉತ್ಪಾದಿಸುವ ಬೆಣ್ಣೆ, ಗಿಣ್ಣು, ಮೊಸರು ಇತ್ಯಾದಿಗಳಲ್ಲಿ ಏಕಾಣುಜೀವಿಗಳು ಬಹಳ ಪ್ರಮುಖಪಾತ್ರ ವಹಿಸುತ್ತವೆ. ಇವುಗಳಿಲ್ಲದೆ ಬೆಣ್ಣೆ, ಗಿಣ್ಣು ಮೊಸರು ಮಾಡಲಾಗುವುದಿಲ್ಲ.
ತಳಿಯೆಬ್ಬಿಸಿ ಬಣ್ಣ ಹಾಕಿದ ಕಾಲರಾ ಬಳುಕುಜೀವಿ. ಬಲಗಡೆಯದರಲ್ಲಿ ಅವುಗಳ ಕೊರಡಂಗಗಳೂ ಕಾಣುತ್ತಿವೆ. ಪ್ಲೇಗು ಗಡ್ಡೆಯಿಂದ ತೆಗೆದು ಬಣ್ಣಹಾಕಿದ ಪ್ಲೇಗು ದಂಡಾಣುಜೀವಿಗಳು ರಕ್ತಕಣಗಳ ನಡುವೆ ಇವೆ. 3 ದಿನಗಳು ತಳಿಯೆಬ್ಬಿಸಿ ಬಣ್ಣ ಹಾಕಿದ ಸೆಟಬೇನೆ ಬೀಜಕಣಗಳು ಎಡಕ್ಕಿವೆ. ಬಲಕ್ಕಿರುವವು 12 ತಾಸು ತಳಿಯೆಬ್ಬಿಸಿ ಬಣ್ಣ ಹಾಕಿದಾಗ ಕೊರಡಂಗಗಳನ್ನು ತೋರುತ್ತಿವೆ. ಅನಿಲದ ಅಳಿಕೊಳಪಿನ ಗಾಯದಿಂದ ತೆಗೆದು ಬಣ್ಣಹಾಕಿದ ವೆಲ್ಚನ ದಂಡಾಣುಜೀವಿಗಳು. ಕೆಳಗಿರುವವಲ್ಲಿ, ಅವುಗಳ ಕವಚಗಳು ಚೆನ್ನಾಗಿ ತೋರುತ್ತಿವೆ. ಕಿರಣಣಬೆಬೇನೆಯ ಕೀವುಕುರು ಎದ್ದಿರುವ ಈಲಿಯ ಅಡ್ಡಕೊಯ್ತ. ಮೇಲಿನ ಭಾಗ ಕೀವು, ಕೆಳಗಿನ ಭಾಗ ಕಿರಣಣಬೆ ಜೀವಿಗಳದು. ದನದ ಅರಟನಾಲಗೆಯಲ್ಲಿ ಕಂಡುಬರುವ ಹುಣ್ಣು. ಸರಗೂದಲಿ ಕಿರಣಣಬೆಜೀವಿ ನಡುವೆ ಇದೆ. ಉಪದಂಶ ಮೇಹರೋಗದ ಹುಣ್ಣಿಂದ ತೆಗೆದು ಕತ್ತಲ ಹಿನ್ನೆಲೆ ಬೆಳಗಿಸಿದಾಗ ಕಾಣುವ ನೋಟ ಮೇಲಿನದು. ಅದಕ್ಕೆ ಬಣ್ಣ ಹಾಕಿದ್ದು ಕೆಳಗಿನದು.
ಹುಳುಕಡ್ಡಿ ಹತ್ತಿದ ತಲೆಯ ಕೂದಲಿಗೆ ಬಣ್ಣ ಹಾಕಿದಾಗ ಒಳಗೆ ಕಾಣುವ ಮಿಣಿಬೀಜಕಣಜೀವಿಗಳು ಎಡಪಕ್ಕದಲ್ಲಿವೆ. ಬಲಪಕ್ಕದಲ್ಲಿರುವವು ಅದರ ಇನ್ನೊಂದು ಬಗೆ. ಕೂಸಿನಲ್ಲೇಳುವ ಹುಗುಳಿನ ಹುಣ್ಣಿಂದ ತೆಗೆದು ತಳಿಯೆಬ್ಬಿಸಿ ಬಣ್ಣಹಾಕಿದ ಬಿಳಿಚಿಕ ಅಂಡಣಬೆ ಜೀವಾಣುಗಳು. ಮಲದಿಂದ ತೆಗೆದು ಬಣ್ಣಹಾಕಿದ ಕರುಳುಚಲಕಣಗಳು. ಎಡಗಡೆಯಲ್ಲಿ ಹೆಗ್ಗುರುಳಿನವೂ ಬಲಗಡೆಯಲ್ಲಿ ಊತಕಲಯಕದವೂ ಇವೆ. ಕಾಳಜ್ವರದ ರೋಗಿಯ ತೊರಳೆಯಿಂದ ರಕ್ತ ತೆಗೆದು ಬಣ್ಣ ಹಾಕಿದ ಲೀಷ್ಮನ್ ಕಾಯಗಳು ರಕ್ತಕಣಗಳಲ್ಲೂ ಹೊರಗೂ ಕಾಣುತ್ತಿವೆ.
ಸತ್ತ ಹುಚ್ಚುನಾಯಿಯ ಮಿದುಳಿನ ನೀಲಿಯ ನರಕಣಗಳಲ್ಲಿ ನೆಗ್ರಿಕಾಯಗಳು ದಪ್ಪ ಕೆಂಪು ಬಟ್ಟುಗಳಂತೆ ಇವೆ. ಭೂಮಿಯ ಮೇಲ್ಪದರಗಳಲ್ಲಿ ಕೋಟ್ಯನುಕೋಟಿ ಏಕಾಣುಜೀವಿಗಳಿವೆ. ಇವುಗಳ ಸಂಖ್ಯೆ ಭೂಸಾರ ಹಾಗೂ ಆಳಗಳನ್ನು ಅವಲಂಬಿಸಿದೆ. ಸಾಗುವಳಿ ಮಾಡದ ಭೂಮಿಯಲ್ಲಿ ಒಂದು ಗ್ರಾಂ ಮಣ್ಣಿನಲ್ಲಿ 100,000 ಏಕಾಣುಜೀವಿಗಳಿವೆ. ತೋಟ ಮಾಡುವ ಭೂಮಿಯಲ್ಲಿ 1,500,000 ಏಕಾಣುಜೀವಿಗಳಿವೆ ಎಂದು ಅಂದಾಜುಮಾಡಲಾಗಿದೆ. ಇವು ಸಂಶೋಧನಾಲಯಗಳಲ್ಲಿ ಬೆಳೆಯಬಹುದಾದವು ಮಾತ್ರ. ಏಕಾಣುಜೀವಿಗಳ ಸಂಖ್ಯೆ ಭೂಮಿಯ ಮೇಲ್ಪದರದಿಂದ ಆಳ ಹೋದಷ್ಟೂ ಕಡಿಮೆಯಾಗುತ್ತದೆ. ಸುಮಾರು 4`-6` ಕೆಳಗೆ ಇವು ಬಹು ಕಡಿಮೆ; ಇಲ್ಲವೆಂದೇ ಹೇಳಬಹುದು. 10`-12` ಆಳದಲ್ಲಿ ಇವುಗಳ ಸುಳಿವೇ ಇಲ್ಲ. ಭೂಮಿಯಲ್ಲಿರುವ ಏಕಾಣುಜೀವಿಗಳು ವಿಧವಿಧವಾದವು. ಅವುಗಳ ಕಾರ್ಯಾಚರಣೆಗಳಲ್ಲೂ ಬಹುಮಟ್ಟಿಗೆ ವೈವಿಧ್ಯಗಳಿವೆ. ಒಂದು ವಿಧದ ಏಕಾಣುಜೀವಿ ಮತ್ತೊಂದು ವಿಧದ ಏಕಾಣುಜೀವಿಯ ಮೇಲೆ ಪ್ರಭಾವ ಬೀರುತ್ತದೆ. ಕೆಲವು ಮತ್ತೆ ಕೆಲವಕ್ಕೆ ಉತ್ತೇಜಕಾರಕ. ಇನ್ನೂ ಕೆಲವು ಇತರ ಏಕಾಣುಜೀವಿಗಳೂ ವೃದ್ಧಿಯಾಗಲು ಅಡ್ಡಿ ತಂದೊಡ್ಡುತ್ತವೆ. ಇವುಗಳ ವೃದ್ಧಿ ಹಿತಕರವಾದ ಉಷ್ಣತೆ, ತೇವ ಇತ್ಯಾದಿಯನ್ನವಲಂಬಿಸಿದೆ. ಪ್ರಾಣಿಗಳು, ಸಸ್ಯಗಳು ಹಾಗೂ ಮನುಷ್ಯ ಭೂಮಿಯ ಮೇಲೆ ಜೀವಿಸಲು ಸಾಧ್ಯವಾಗಿರುವುದು ಈ ಏಕಾಣುಜೀವಿಗಳ ಚಟುವಟಿಕೆಗಳಿಂದಲೇ ಎಂದು ಹೇಳಿದರೆ ಉತ್ಪ್ರೇಕ್ಷೆಯೇನಲ್ಲ.
ಜೀವರಾಶಿಯ ಉಳಿವಿಗೆ ಏಕಾಣುಜೀವಿಗಳ ಚಟುವಟಿಕೆಯಿಂದಾಗುವ ಸಸಾರಜನಕ ಸ್ಥಿರೀಕರಣ (ನೈಟ್ರೊಜನ್ ಫಿಕ್ಸೇಶನ್) ಮೂಲಾಧಾರ. ವಾಯುಮಂಡಲದಲ್ಲಿ 80% ಸಾರಜನಕವಿದೆ. ಈ ಅಂಶ ಗಾಳಿಯಿಂದ ಇತರ ವಸ್ತುಗಳೊಡನೆ ಬೆರೆತು ಪ್ರೊಟೀನಾಗಿ ಪರಿವರ್ತನೆಗೊಂಡು, ಜೀವರಾಶಿಗೇ ಅತ್ಯಾವಶ್ಯಕ ಆಹಾರವಾಗುತ್ತದೆ. ಸಸಾರಜನಕ ಪ್ರತಿಕ್ರಿಯೆ ಇಲ್ಲದ ಒಂದು ಜಡಾನಿಲವಾದ್ದರಿಂದ ಜೀವಕೋಶಗಳಿಂದ ಈ ಪರಿವರ್ತನೆ ಸಾಧ್ಯವಾಗದು. ಇಲ್ಲಿ ಏಕಾಣುಜೀವಿಗಳ ಪಾತ್ರ ಬಲು ಮಹತ್ವ್ತದ್ದು. ಈ ರೀತಿಯಲ್ಲಿ ಸಾರಜನಕ ಸ್ಥಿರೀಕರಣ ಮಾಡುವ ಏಕಾಣುಜೀವಿಗಳು ರೈಜೋಬಿಯಂ, ಕ್ಲಾಸ್‍ಟ್ರಿಡಿಯಂ, ಎeóÉೂೀಟೊಬ್ಯಾಕ್ಟರ್ ಎಂಬ ಮೂರು ಗುಂಪಿಗೆ ಸೇರಿದವು. ಭೂಮಿಯಲ್ಲಿ ಸ್ಥಿರೀಕರಣ ಅದ್ಭುತ ಒಂದು ಕಡೆಯಾದರೆ ಮತ್ತೊಂದು ಕಡೆ ನಿರ್ಜೀವಿ ಜೈವಿಕ ವಸ್ತುಗಳು ಕೊಳೆತು ಅದರಿಂದ ಯಾವ ರೀತಿಯ ಬಾಧಕ ಹಾಗೂ ಅಸಹ್ಯವಾಗಲೀ ಇಲ್ಲದ ರಾಸಾಯನಿಕ ಲವಣಗಳ ಪರಿವರ್ತನೆ ಮತ್ತೊಂದು ಅದ್ಭುತ. ಸಸ್ಯ ಮತ್ತು ಪ್ರಾಣಿಗಳ ಸಾವಿನಿಂದ ಸಸಾರಜನಕ ಮತ್ತು ಇಂಗಾಲಾಣುಗಳು ಭೂಮಿಯನ್ನು ಸೇರುತ್ತವೆ. ಭೂಮಿಯಲ್ಲಿರುವ ಅಸಂಖ್ಯಾತ ಏಕಾಣುಜೀವಿಗಳು ಈ ಅಣುಗಳನ್ನು ಕಿಣ್ವಗಳ ಪ್ರತಿಕ್ರಿಯೆಯಿಂದ ಸರಳ ವಸ್ತುಗಳಿಗೆ ವಿಭಜಿಸುತ್ತವೆ. ಸಸಾರಜನಕ ವಿಭಜನೆಯಿಂದ ಉತ್ಪತ್ತಿಯಾಗುವ ರಾಸಾಯನಿಕಗಳಲ್ಲಿ ಅಮೋನಿಯ ಒಂದು. ಇದು ಉತ್ಪತ್ತಿಯಾಗುವ ರೀತಿಗೆ ಅಮೋನಿಫಿಕೇಶನ್ ಎಂದು ಹೆಸರು. ಅಮೋನಿಯ ಸರಳ ರೀತಿಯ ರಾಸಾಯನಿಕ ಮತ್ತು ಅದು ಸುಲಭವಾಗಿ ಪರಿವರ್ತನೆಹೊಂದಿ ನೈಟ್ರೇಟ್ ಆಗಬಲ್ಲುದು. ಅಂದರೆ ಅಮೋನಿಯ ಆಮ್ಲಜನಕದೊಂದಿಗೆ ಸಂಯೋಜಿಸಿ ಆಗಿ ಅನಂತರ ನೈಟ್ರೇಟ್ ಲವಣವಾಗುತ್ತದೆ. ಈ ರೀತಿಯ ಪರಿವರ್ತನೆಗೆ ನೈಟ್ರಿಫಿಕೇಶನ್ ಎಂದು ಹೆಸರು. ಕೇವಲ ಕೆಲವೇ ಏಕಾಣುಜೀವಿಗಳು ಈ ಕಷ್ಟಸಾಧ್ಯವಾದ ಪರಿವರ್ತನೆ ಮಾಡಬಲ್ಲವು. ನೈಟ್ರೋಸೋಕಾಕಸ್-ಇವೆರಡೂ ಅಮೋನಿಯವನ್ನು ನೈಟ್ರೇಟ್ ಆಗಿ ಪರಿವರ್ತಿಸುವುವು. ನೈಟ್ರೋಬ್ಯಾಕ್ಟರ್ ಏಕಾಣುಜೀವಿಗಳು ನೈಟ್ರೇಟನ್ನು ನೈಟ್ರೈಟ್ ಆಗಿ ಪರಿವರ್ತಿಸುತ್ತವೆ. ಈ ನೈಟ್ರೇಟ್ ಲವಣಗಳು ಸಸ್ಯಗಳ ಪ್ರಮುಖ ಆಹಾರ.
ಸಾರಜನಕವಿಲ್ಲದ ರಾಸಾಯನಿಕಗಳನ್ನೂ ಇದೇ ರೀತಿ ಭೂಮಿಯ ಏಕಾಣುಜೀವಿಗಳು ಪರಿವರ್ತನೆ ಮಾಡಬಲ್ಲವು. ಇಂಗಾಲ, ಜಲಜನಕ, ಆಮ್ಲಜನಕಗಳನ್ನೊಳಗೊಂಡ ದೊಡ್ಡ ದೊಡ್ಡ ಅಣುಗಳನ್ನು ವಿಭಜಿಸಿ ಸರಳ ರೀತಿಯ ಸೆಲ್ಯುಲೋಸ್ ಮತ್ತು ಪಿಷ್ಟ ಪರಿವರ್ತನೆ ಏಕಾಣುಜೀವಿಗಳಿಂದಲೇ ನಡೆಯುತ್ತದೆ. ಸೆಲ್ಯುಲೋಸ್, ಪಿಷ್ಟಗಳು ಸಹ ಇನ್ನೂ ಸರಳ ರೀತಿಯ ರಾಸಾಯನಿಕಗಳಾಗಿ ಪಚನಹೊಂದಿ ಅವಶ್ಯಕ ಶಕ್ತಿಯನ್ನು ಒದಗಿಸುತ್ತವೆ. ಗಂಧಕ, ರಂಜಕ, ಕಬ್ಬಿಣ ಮತ್ತಿತರ ಅಜೈವಿಕ ವಸ್ತುಗಳ ಪರಿವರ್ತನೆಯೂ ಭೂಮಿಯಲ್ಲಿರುವ ಏಕಾಣುಜೀವಿಗಳಿಂದಾಗುತ್ತದೆ. ಜೀವವಿಲ್ಲದ ಪ್ರಾಣಿಗಳು, ಸಸ್ಯ ಹಾಗೂ ಕೆಲವು ಸೂಕ್ಷ್ಮಜೀವಿಗಳ ಕೋಶಗಳ ಸಸಾರಜನಕಾಂಶಗಳಲ್ಲಿ ಗಂಧಕಾಂಶವಿರುತ್ತದೆ. ಪ್ರಕೃತಿಯಲ್ಲೂ ಗಂಧಕ, ಸಲ್ಫೇಟ್ ಉಪ್ಪು ಹಾಗೂ ಹೈಡ್ರೊಜನ್ ಸಲ್ಫೈಡುಗಳಲ್ಲೂ ಗಂಧಕವಿದೆ. ಇವುಗಳ ಪರಿವರ್ತನೆಯಲ್ಲಿ ಅನೇಕ ಏಕಾಣುಜೀವಿಗಳು ಭಾಗವಹಿಸುತ್ತವೆ. ಗ್ರಾಮಸಾರದ ಶುದ್ಧೀಕರಣ : ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಊರುಗಳಲ್ಲಿ ಗ್ರಾಮಸಾರ ಮತ್ತು ಅದನ್ನು ಕೊಂಡೊಯ್ಯುವ ನೀರಿನ ಶುದ್ಧೀಕರಣ ಮುಖ್ಯವಾಗಿ ಏಕಾಣುಜೀವಿಗಳಿಂದ ಆಗುತ್ತದೆ. ಈ ನೀರಿನಲ್ಲಿ ಅಸಂಖ್ಯಾತ ಏಕಾಣುಜೀವಿಗಳಿರುತ್ತವೆ. ಇವುಗಳಲ್ಲಿ ಕೆಲವು ಮನುಷ್ಯನ ಕರುಳಿನಿಂದ ಮಲದೊಂದಿಗೆ ಹೊರಹಾಯ್ದವು, ಕೆಲವು ಗಾಳಿಯ ಏಕಾಣುಜೀವಿಗಳು, ಕೆಲವು ಭೂಮಿಯ ಏಕಾಣುಜೀವಿಗಳು. ಇವುಗಳಲ್ಲನೇಕವು ಜೈವಿಕ ವಸ್ತುಗಳನ್ನು ಪರಿವರ್ತಿಸಿ ಅವುಗಳಿಂದ ಯಾವ ಕೆಡಕೂ ಉಂಟಾಗದಂತೆ ಜಡಸ್ಥಿತಿಗೆ ಇಳಿಸುತ್ತವೆ. ರೋಗಕಾರಕ ಏಕಾಣುಜೀವಿಗಳಿಗೂ ಈ ಪರಿವರ್ತನೆಗಳಿಂದ ಉಳಿಗಾಲವಿಲ್ಲ. ಮುಖ್ಯ ಪರಿವರ್ತನೆಯೆಂದರೆ ಜೈವಿಕವಸ್ತುಗಳ ಕೊಳೆತದ ಫಲವಾಗಿ ಮೀಥೇನ್, ಇಂಗಾಲಾಮ್ಲ, ಸಾರಜನಕ ಮತ್ತು ಅಮೋನಿಯ-ಇವು ಉತ್ಪತ್ತಿಯಾಗುತ್ತವೆ. ಮೊದಲೇ ತಿಳಿಸಿದಂತೆ ಅಮೋನಿಯ ಆಮ್ಲಜನಕ ಸಂಯೋಗದಿಂದ ನೈಟ್ರೈಟ್ ಆಗಿ ಅನಂತರ ನೈಟ್ರೇಟ್ ಆಗುತ್ತದೆ. ಅಂದರೆ ಮೊದಲು ಕೊಳೆತು ನಾರುತ್ತಿದ್ದ ಮಲ ಈ ಏಕಾಣುಜೀವಿಗಳ ಸತತ ಕ್ರಿಯೆಯಿಂದ ವಾಸನೆಯಿಲ್ಲದ, ಯಾರಿಗೂ ಅಪಾಯವಿಲ್ಲದ ಲವಣವಾಗಿ ಪರಿವರ್ತನೆ ಹೊಂದುತ್ತದೆ. ಈ ಕ್ರಿಯೆಗಳು ಅತ್ಯಲ್ಪಕಾಲದಲ್ಲಿ ಹೆಚ್ಚಿಗೆ ವಿನಿಯೋಗವಾಗದಂತೆ ಕೃತಕವಾಗಿ ವ್ಯವಸ್ಥೆ ಮಾಡಲು ಅನೇಕ ಸಾಧನಸಲಕರಣೆಗಳನ್ನು ಅಳವಡಿಸಲಾಗಿದೆ.
ಕೈಗಾರಿಕೋದ್ಯಮದಲ್ಲಿ ಏಕಾಣುಜೀವಿಗಳ ಪಾತ್ರ
ಬದಲಾಯಿಸಿಇವುಗಳಲ್ಲಿ ಮುಖ್ಯವಾಗಿ ಪರಿಶೀಲಿಸಬೇಕಾದವು 1. ಬ್ರೆಡ್ ಮಾಡಲು ಉಪಯೋಗಿಸುವ ಯೀಸ್ಟ್; 2. ನಾರಿನ ಉತ್ಪಾದನೆ; 3. ಸಕ್ಕರೆ, ಪಿಷ್ಟಗಳನ್ನು ಉಪಯೋಗಿಸಿ ಬೀರ್ ದ್ರಾಕ್ಷಾರಸಗಳ ತಯಾರಿಕೆ; 4. ಕಿಣ್ವಗಳ ತಯಾರಿಕೆ; 5. ಜೀವಾತುಗಳ ಉತ್ಪಾದನೆ, 6. ಪ್ರತಿ ಜೀವಕಗಳು.
1 ಬ್ರೆಡ್ ಉಬ್ಬಿಕೊಂಡು ಮೆತ್ತಗೂ ರುಚಿಯಾಗಿಯೂ ಇರುವಂತೆ ಮಾಡಲು ಸೂಕ್ತರೀತಿಯ ಯೀಸ್ಟನ್ನೂ (ಹುದುಗು) ಉಪಯೋಗಿಸುತ್ತಾರೆ. ಇದರಿಂದ ಬ್ರೆಡ್ ಬೇಗ ತಯಾರಾಗುವುದಲ್ಲದೆ ಬೇರೆ ಯಾವ ರೀತಿಯ ಏಕಾಣುಜೀವಿಗಳೂ ಅದರಲ್ಲಿ ಸೇರಲು ಅವಕಾಶವಿಲ್ಲದಂತಾಗುತ್ತದೆ.
2 ಕೆಲವು ವಿಶಿಷ್ಟ ಸಸ್ಯಗಳಿಂದ ನಾರು ತಯಾರುಮಾಡುತ್ತಾರೆ. ಅಂಥ ಸಸ್ಯದಲ್ಲಿ ಪೆಕ್ಟಿನ್ ಲವಣ ಇರುವ ಅಂಗಾಂಶವನ್ನು ಕೊಳೆಸಿ ನಾರುಮಾಡುತ್ತಾರೆ. ಈ ಅಂಗಾಂಶ ಮೆತುವಾಗುವಂತೆ ಮಾಡುವ ಕಿಣ್ವಗಳಿರುವ ಏಕಾಣುಜೀವಿಗಳು ಕೆಲವು ಮಾತ್ರ. ಇವುಗಳಲ್ಲಿ ಮುಖ್ಯವಾದವು ಕ್ಳಾಸ್ಟ್ರಿಡಿಯಂ ಫೆಲ್ಸಿನಿಯಂ ಮತ್ತು ಕ್ಳಾಸ್ಟ್ರಿಡಿಯಂ ಬ್ಯೂಟೈರಿಕಂ. ಇವುಗಳ ಕ್ರಿಯೆಗೆ ಒಳಪಡಿಸದೆ ಕೃತಕವಾಗಿ ಪೆಕ್ಟಿನ್ ಮೆತುಮಾಡಲು ಪ್ರಯತ್ನಗಳು ನಡೆದಿವೆಯಾದರೂ ಅವು ಇದುವರೆಗೂ ಸಫಲವಾಗಿಲ್ಲ.
3 ಪ್ರಾಚೀನ ಕಾಲದಿಂದಲೂ ಮಾದಕಗಳು ಎಂದರೆ ಸುರೆ, ಸೋಮ, ದ್ರಾಕ್ಷಾರಸಗಳನ್ನು ಈ ಏಕಾಣುಜೀವಿಗಳ ಬಳಕೆಯಿಂದ ಉತ್ಪಾದನೆ ಮಾಡಲಾಗುತ್ತಿದೆ. ಇಷ್ಟೇ ಅಲ್ಲದೆ ಎಥೆನಾಲ್ ಅಥವಾ ಈಥೈಲ್ ಆಲ್ಕೊಹಾಲ್, ಗ್ಲಿಸೆರಾಲ್, ಬ್ಯೂಟೆನಾಲ್, ಅಸಿಟೋನ್, ಅಸಿಟಿಕ್ ಆಮ್ಲ, ಸಿಟ್ರಿಕ್ ಆಮ್ಲ ಮುಂತಾದವುಗಳ ತಯಾರಿಕೆಯೂ ವಿಧವಿಧವಾದ ಏಕಾಣುಜೀವಿಗಳಿಂದಲೇ ನಡೆಯುತ್ತದೆ.
4 ಸಸಾರಜನಕ ಮತ್ತು ಪಿಷ್ಟಗಳನ್ನು ವಿಭಜಿಸಲು ಬೇಕಾದ ಕಿಣ್ವಗಳನ್ನು ಕೆಲವು ಶಿಲೀಂಧ್ರಗಳನ್ನು ಉಪಯೋಗಿಸಿ ಅಥವಾ ಏಕಾಣುಜೀವಿಗಳ ಕ್ರಿಯೆಗಳಿಂದ ಉತ್ಪಾದನೆ ಮಾಡಲಾಗುತ್ತಿದೆ.
5. ಏಕಾಣುಜೀವಿಗಳಲ್ಲಿ ಅನೇಕವು ಮನುಷ್ಯವರ್ಗಕ್ಕೂ ಪ್ರಾಣಿವರ್ಗಕ್ಕೂ ಅವಶ್ಯಕವಾದ ಬಿ ಜೀವಾತುಗಳನ್ನು ತಾವೇ ತಯಾರಿಸಬಲ್ಲವು. ಏಕಾಣುಜೀವಿಗಳೇ ಕೆಲವು ಜೀವಾತುಗಳ ಮೂಲವೆಂದು ಹೇಳಬಹುದು. ಅನೇಕ ರೀತಿಯ ಯೀಸ್ಟುಗಳಲ್ಲಿ ಬಿ ಅಥವಾ ಥಯಮಿನ್ ಜೀವಾತು ತುಂಬಿದೆ. ಬಿ ಅಥವಾ ರಿಬೊಫ್ಲೆವಿನ್ ಸಹ ಯೀಸ್ಟ್ ಬಳಸಿ ಉತ್ಪಾದಿಸಲಾಗುತ್ತಿದೆ. ಸ್ರ್ಟೆಪ್ಟೋಮೈಸಿನ್ ಎಂಬ ಪ್ರತಿ ಜೀವಿಯನ್ನು ತಯಾರಿಸುವಾಗ ಉಪಯೋಗಿಸುವ ಸ್ಟ್ರೆಪ್ಟೋಮೈಸಿನ್ ಗ್ರೈಸಿಯೂಸ್ ಸಾಕಷ್ಟು ಬಿ ಜೀವಾತನ್ನು ಸಹ ಕೊಡುತ್ತದೆ. ಎರ್ಗೊಸ್ಟಿರಾಲ್ (ಅಂದರೆ ಡಿ ಜೀವಾತು ಕೊಡುವ) ಯೀಸ್ಟಿನಲ್ಲಿದೆ. ಇವೇ ಅಲ್ಲದೇ ಇನ್ನೂ ಅನೇಕ ಏಕಾಣುಜೀವಿಗಳ ಉಪಯೋಗದಿಂದ ಜೀವಾತುಗಳನ್ನು ತಯಾರಿಸಬಹುದು.
6 ಸೂಕ್ಷ್ಮಜೀವಿಗಳು ಉತ್ಪತ್ತಿಮಾಡುವ ರಾಸಾಯನಿಕ ವಸ್ತುವೇ ಪ್ರತಿಜೀವಕಗಳು. ಇವನ್ನು ದ್ರವೀಕರಿಸಿ ಏಕಾಣುಜೀವಿಗಳೊಂದಿಗೆ ಸಂಪರ್ಕ ಕಲ್ಪಿಸಿದರೆ ಅವುಗಳ ಸಂತಾನೋತ್ಪತ್ತಿ ಮತ್ತು ಚಟುವಟಿಕೆಗಳು ನಿಲ್ಲುತ್ತವೆ ಅಥವಾ ಅವನ್ನು ನಾಶಮಾಡಲೂಬಹುದು. ಈ ರೀತಿಯ ಒಂದು ಶಕ್ತಿ ಕೆಲವು ತಂತುಶಿಲೀಂಧ್ರಗಳ (ಫಿಲಮೆಂಟಸ್ ಫಂಗಸ್) ಗುಂಪಿಗೆ ಸೇರಿದ ಜೀವಿಗಳಿಗಿವೆ ಎಂಬುದು ಬಹಳ ಹಿಂದಿನಿಂದಲೂ ನಮಗೆ ತಿಳಿದಿತ್ತು. ನಮಗೆ ತಿಳಿದಿದ್ದರೂ ಈ ಶಕ್ತಿಯನ್ನು ಮಾನವನಲ್ಲಿ ರೋಗಕಾರಕ ಏಕಾಣುಜೀವಿಗಳ ಮೇಲೆ ಪ್ರಯೋಗಿಸಿ ಅದರಿಂದ ಫಲ ಪಡೆದಿರಲಿಲ್ಲ. ಉದಾಹರಣೆಗೆ, ಪೆನಿಸಿಲಿಯ ಮತ್ತು ಆಸ್ಪರ್‍ಗಿಲ್ಲಿ ಶಿಲೀಂಧ್ರಗಳಿಗೆ ಈ ಶಕ್ತಿ ಇದೆ. ಅಲೆಕ್ಸಾಂಡರ್ ಫ್ಲೆಮಿಂಗ್ ಪೆನಿಸಿಲಿಯಂನಿಂದ ಉತ್ಪತ್ತಿಯಾದ ಪೆನಿಸಿಲಿನ್ ಕಡೆ ಗಮನ ಸೆಳೆದು (1920) ಇಡೀ ಮಾನವಕೋಟಿಗೇ ಮಹತ್ತ್ವದ ಸೇವೆ ಸಲ್ಲಿಸಿದನೆಂದು ಹೇಳಬಹುದು. ಸಾವಿರಾರು ಪ್ರತಿಜೀವಕಗಳ ಪ್ರಭಾವವನ್ನು ರೋಗಕಾರಕ ಏಕಾಣುಜೀವಿಗಳ ಮೇಲೆ ಪ್ರಯೋಗಿಸಿ ಪರಿಶೀಲಿಸಲಾಯಿತು. ಇವುಗಳಲ್ಲಿ ಕೆಲವು ಅತ್ಯಂತ ಯಶಸ್ವಿಯಾದವು. ಅನೇಕ ರೋಗಗಳಿಗೆ ರಾಮಬಾಣದಂತೆ ಪರಿಣಾಮಕಾರಿಗಳಾಗಿದ್ದುದು ಕಂಡುಬಂತು. ಈ ರೀತಿ ಸಂಶೋಧನೆ ನಡೆಸಿ ಜಯಗಳಿಸಿದ ಪ್ರಖ್ಯಾತ ವಿಜ್ಞಾನಿ ಅಮೆರಿಕ ಸಂಯುಕ್ತಸಂಸ್ಥಾನಗಳ ಸೆಲ್ ಮನ್ ಎ. ವಾಕ್ಸ್ ಮನ್. ಈ ಪ್ರತಿಜೀವಕಗಳನ್ನು ಈಗ ಭಾರಿ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಅನೇಕ ಪ್ರತಿಜೀವಕಗಳ ರಾಸಾಯನಿಕ ಅಂಶಗಳನ್ನು ಕಂಡು ಹಿಡಿದು ಕೃತಕವಾಗಿ ಪ್ರತಿಜೀವಕಗಳನ್ನು ತಯಾರುಮಾಡಲು ಸಾಧ್ಯವಾಗಿದೆ. ಎಲ್ಲವನ್ನೂ ಕೃತಕವಾಗಿ ತಯಾರಿಸಲು ಸಾಧ್ಯವಾಗಿಲ್ಲ. ಏಕಾಣುಜೀವಿಗಳಿಂದ ಉಪಯೋಗವೇನೋ ಇದೆ. ಆದರೆ ಅವುಗಳ ಅನಿಯಂತ್ರಿತ ವೃದ್ಧಿ ಮತ್ತು ಚಟುವಟಿಕೆಯಿಂದಾಗಿ ಅನೇಕ ಕಷ್ಟನಷ್ಟಗಳೂ ಸಂಭವಿಸುತ್ತವೆ. ಈ ವೃದ್ಧಿಗೆ ಮಟ್ಟಹಾಕಿ ಅವುಗಳ ಮೇಲೆ ಹತೋಟಿ ಇಟ್ಟುಕೊಳ್ಳಬೇಕಾದ ಸಂದರ್ಭಗಳೂ ಅನೇಕವಿವೆ. ಉದಾಹರಣೆಗೆ, ಹತ್ತಿಬಟ್ಟೆ ಉದ್ಯಮದಲ್ಲಿ ನೂಲು ಮತ್ತು ನೇಯ್ದ ವಸ್ತುಗಳಿಗೆ ಇವು ಬಹಳ ನಷ್ಟಮಾಡುತ್ತವೆ. ಮಾಂಸಾಹಾರ ತಯಾರಾಗುವ ಕಡೆಯೂ ಇವುಗಳ ಸೋಂಕಿನಿಂದ ಬಹಳ ನಷ್ಟವುಂಟಾಗುತ್ತದೆ.
ಏಕಾಣುಜೀವಿಗಳಲ್ಲಿ ಕೆಲವು ರೋಗಕಾರಕಗಳು, ಇವುಗಳಲ್ಲಿ ಮುಖ್ಯವಾದವು ಸ್ಟ್ರಪ್ಟೊಕಾಕಸ್, ಸ್ಟೆಫೈಲೋಕಾಕಸ್, ನ್ಯೂಮೋಕಾಕಸ್, ನೈಸೀರಿಯ, ಕೋರಿನಿ ಬ್ಯಾಕ್ಟೀರಿಯಂ, ಸಾಲ್ಮನೆಲ್ಲ, ಶಿಗೆಲ್ಲ, ವಿಬ್ರ್ರಿಯೋ, ಪ್ಯಾಸ್ಚುರೆಲ್ಲ, ಬ್ರೂಸೆಲ್ಲ, ಮೈಕೋಬ್ಯಾಕ್ಟೀರಿಯಂ ಮತ್ತು ಸ್ಪೈರೋಕೀಟ ಇತ್ಯಾದಿ. ಇವುಗಳ ಸೋಂಕಿನಿಂದ ಮನುಷ್ಯರು ಅನುಭವಿಸಬೇಕಾದ ರೋಗಗಳೆಂದರೆ ಸಂಧಿವಾತ, ಹೃದಯದ ಒಳಪೊರೆಯ ಉರಿಯೂತ, ಕೀವು ಹುಣ್ಣುಗಳು, ಶ್ವಾಸಕೋಶಗಳ ಉರಿಯೂತ, ಮೇಹ, ಗಂಟಲುಮಾರಿ, ಶೀತಜ್ವರ, ಪ್ಲೇಗು, ಕಾಲರಾ ಇತ್ಯಾದಿ. ಮಾನವಕೋಟಿಗೇ ಇವು ಶತ್ರುಗಳು. ಭಯಂಕರ ಅಂಟುಜಾಡ್ಯಗಳನ್ನು ಸೋಂಕಿನ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುವು. ಈ ಗುಂಪುಗಳ ಏಕಾಣುಜೀವಿಗಳಲ್ಲಿ ಅನೇಕವನ್ನು ನಾವು ಜಯಿಸಿದ್ದೇವೆ. ಅವುಗಳಿಂದ ಉಂಟಾಗುವ ರೋಗಗಳಿಗೆ ಪ್ರತಿಬಂಧಕಗಳನ್ನಾಗಲೀ ಅಥವಾ ಬಂದ ಅನಂತರ ಅವುಗಳನ್ನು ಹತೋಟಿಗೆ ತರಲು ದಿವ್ಯ ಔಷಧಗಳನ್ನಾಗಲೀ ಆಗಲೇ ಕಂಡುಹಿಡಿದಿದ್ದೇವೆ. ಆದರೂ ಅವುಗಳಿಂದ ಕಾಟ ತಪ್ಪಿಲ್ಲ. ಇವನ್ನು ಜಯಿಸಲು ನಿರಂತರ ಹೋರಾಟ ನಡೆದಿದೆ.