ಪಾರಿವಾಳಗಳು ಮತ್ತು ಕಪೋತಗಳು ಚಿಕ್ಕ ತಲೆ,ಗಿಡ್ದ ಕತ್ತಿನ ಆಹಾರಕ್ಕಾಗಿ ನೆಲ ಮತ್ತು ಮರಗಳನ್ನು ಆಶ್ರಯಿಸಿರುವ ಮಧ್ಯಮ ಗಾತ್ರದ ಹಕ್ಕಿಗಳು. ಒತ್ತಾದ ಮತ್ತು ಮೃದುವಾದ ಪುಕ್ಕಗಳು ಅವುಗಳಿಗಿವೆ. ಕಾಳುಗಳು, ಬೀಜಗಳು ಹಾಗೂ ಹಣ್ಣುಗಳು ಅವುಗಳ ಪ್ರಧಾನ ಆಹಾರ. ಇದೇ ಗುಂಪಿಗೆ ಸೇರಿದ ಹಕ್ಕಿ ಇಲ್ಲಿದೆ. ಉಜ್ವಲ ಹೊಳೆಯುವ ಹಸಿರು ಬಣ್ಣದ ಈ ಕಪೋತಕ್ಕೆ ಆಂಗ್ಲ ಭಾಷೆಯಲ್ಲಿ ಎಮರಾಲ್ಡ್ ಡೌ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಹರಳ ಚೋರೆ ಹಕ್ಕಿ, ಪಚ್ಚೆ ಕಪೋತ ಎಂಬ ಹೆಸರುಗಳಿವೆ. ಈ ಹಕ್ಕಿಯ ಗಾಢ ಪಚ್ಚೆ ಬಣ್ಣದಿಂದಾಗಿ ಅದರ ಇರುವನ್ನು ಪತ್ತೆ ಹಚ್ಚುವುದೇ ಕಷ್ಟ. ತುಂಬ ನಾಚಿಕೆ ಸ್ವಭಾವದ ಹಕ್ಕಿ ಮನುಷ್ಯರ ಸುಳಿವು ಸಿಕ್ಕರೆ ಸಾಕು ಮರಗಳ ಎಲೆಗಳ ನಡುವೆ ಕುಳಿತರಂತೂ ನಮ್ಮ ಕಣ್ಣಿಗೆ ಗೋಚರಿಸುವುದೇ ಕಷ್ಟ. ಹಾಗಾಗಿ ಈ ಹಕ್ಕಿಯ ಛಾಯಾಚಿತ್ರ ಸೆರೆ ಹಿಡಿಯುವುದೇ ಕಷ್ಟ ಎನ್ನುವುದು ನಿಸರ್ಗ ಛಾಯಾಗ್ರಾಹಕರ ಅಳಲು| ಮೈನಾಕ್ಕಿಂತ ಕೊಂಚ ದೊಡ್ದ ಗಾತ್ರದ ಹಕ್ಕಿ ಎನ್ನಬಹುದು. ಹಾರುವಾಗ ರೆಕ್ಕೆಗಳ ಭುಜದ ಮೇಲಿನ ಬಿಳಿ ಪಟ್ಟೆ ಹಾಗೂ ನಸು ಕಂದು ಬಣ್ಣದ ಅಡಿಭಾಗ ಪ್ರಧಾನವಾಗಿ ಕಾಣುತ್ತದೆ. ಬಿಳಿ ಹಣೆ, ಹುಬ್ಬು, ಬೂದು ನೆತ್ತಿ, ಬಿಳಿ ಪೃಷ್ಠ , ಕೆಂಪು ಕೊಕ್ಕು, ಕಾಲುಗಳು ಇರುವ ಇದು ಒಂಟಿಯಾಗಿ ಇಲ್ಲವೆ ಜೋಡಿಯಾಗಿ ನಿತ್ಯಹರಿದ್ವರ್ಣ, ಅರೆನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಬಿದಿರು ಮಳೆಗಳಲ್ಲಿ ಕಾಣಿಸಿಕೊಳ್ಳುವುದು. ಕಾಡಿನ ನಡುವಿನ ರಸ್ತೆಗಳಲ್ಲಿ ಪುಟುಪುಟು ಎಂದು ನಡೆದಾಡುತ್ತ ನೆಲದಲ್ಲಿ ಬಿದ್ದಿರುವ ಹುಲ್ಲಿನ ಬೀಜ, ಇತರ ಕಾಳುಗಳನ್ನು ಹೆಕ್ಕಿ ತಿನ್ನುವುದು. ನೇರವಾಗಿ ರಭಸವಾಗಿ ಹಾರುತ್ತ ಸಾಗುವುದು ಅದರ ಕ್ರಮ. ಪಶ್ಚಿಮ ಘಟ್ಟ, ನೀಲಗಿರಿ, ಪೂರ್ವ ಘಟ್ಟ, ಅಂಡಮಾನ್ ನಿಕೋಬಾರ್, ಬಾಂಗ್ಲಾದೇಶ, ಶ್ರೀಲಂಕಾ, ಮಯನ್ಮಾರ್ ನಲ್ಲೂ ಇವು ಕಾಣಲು ಸಿಗುತ್ತವೆ. ಕರಾವಳಿ ಜಿಲ್ಲೆಗಳ ಪಶ್ಚಿಮ ಘಟ್ಟ ಹಾಗೂ ತಪ್ಪಲಿನಲ್ಲಿ ಈ ಹಕ್ಕಿ ಸಾಮಾನ್ಯವಾಗಿ ಕಾಣಲು ಸಿಗುವುದು. ಕಾರ್ಕಳದ ದುರ್ಗಾ ಅರಣ್ಯ ಕಾನಂಗಿ, ಸೋಮೇಶ್ವರ, ಬಜಗೋಳಿ, ಮಂಗಳೂರು ಸಮೀಪದ ಮಂಜಲ್ಪಾದೆಯಲ್ಲಿ ಕಾಣಲು ಸಿಕ್ಕಿದೆ. ಬೇರೆ ಕಡೆಯೂ ಇರಬಹುದು ಆದರೆ ಬಹಲ ನಾಚಿಕೆ ಸ್ವಭಾವದ ಹಕ್ಕಿಯಾಗಿರುವುದರಿಂದ ಗುರುತಿಸಿದವರು ಕಡಿಮೆ. ಸಾಮಾನ್ಯವಾಗಿ ಮುಂಜಾವು ಮತ್ತು ಸಂಜೆಯ ಹೊತ್ತು ಹೊರಬಂದು ಘಟ್ಟ, ಕಾಡಿನ ನಡುವಿನ ರಸ್ತೆ ಬದಿಯಲ್ಲಿ ಓಡಾಡುತ್ತ ಆಹಾರ ಹುಡುಕುತ್ತದೆ.