ಸದಸ್ಯ:Shashank Baje/ನನ್ನ ಪ್ರಯೋಗಪುಟ1

ಶಿವರಾಮ ಕಾರಂತ ಒಂದು ಜೀವಿತ ಅವಧಿಯಲ್ಲಿ ಒಬ್ಬ ವ್ಯಕ್ತಿ ಇಷ್ಟೆಲ್ಲಾ ಸಾಧಿಸಲು ಸಾಧ್ಯವೆ ಎಂಬ ವಿಸ್ಮಯವನ್ನು ಹುಟ್ಟಿಸುವಷ್ಟು ಸಾಧನೆ ಮಾಡಿರುವ ಡಾ.ಕೆ ಶಿವರಾಮ ಕಾರಂತರು ಈ ಶತಮಾನದ ದೊಡ್ಡ ಕಲಾವಿದರು. ಕಾರಂತರ ಸಾಧನೆ ಎಷ್ಟು ದೊಡ್ಡದೆಂದರೆ, “ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಬರೆಯದ ವಿಷಯವಿಲ್ಲ”, “ಕಾರಂತರು ಒಬ್ಬ ವ್ಯಕ್ತಿಯಲ್ಲ, ಅವರೊಂದು ಸಂಸ್ಥೆ”, ‘ಶಿವರಾಮ ಕಾರಂತರೇ ಒಂದು ವಿಶ್ವವಿದ್ಯಾಲಯ’, “ ಕಾರಂತರು ಒಂದು ನಡೆದಾಡುವ ವಿಶ್ವಕೋಶ” ಮುಂತಾದ ಮಾತುಗಳು ಕಾರಂತರನ್ನು ಕುರಿತ ಬರವಣಿಗೆಯಲ್ಲಿ ಈಗಾಗಲೇ ಕ್ಲೀಶೆಗಳಾಗಿ ಹೋಗಿವೆ. ಕಾರಂತರ ವೈಶಿಷ್ಟ್ಯವೆಂದರೆ ತಮ್ಮ ಬಗ್ಗೆ ಆಗಿಂದಾಗ್ಗೆ ಬರುವ ಹೊಗಳಿಕೆ ತೆಗೆಳಿಕೆಗಳಿಗೆ ಮನಸ್ಸನ್ನು ಕೊಡದೆ ತಮ್ಮ ಕೆಲಸವನ್ನು ಶ್ರದ್ಧೆಯಿಂದ , ಏಕಾಗ್ರತೆಯಿಂದ ಮಾಡಿಕೊಂಡು ಹೋಗುವಂಥಾದ್ದು. ಕಾರಂತರು ಅಪ್ಪ ಹಾಕಿದ ಆಲದ ಮರಕ್ಕೆ ಎಂದೂ ಜೋತು ಬಿದ್ದವರಲ್ಲ. ಅವರ ಇಡೀ ಬದುಕು ಹಲವಾರು ಪ್ರಯೋಗಗಳಿಂದ ಕೂಡಿದೆ. ಅನುಭವ ಬೆಳೆದಂತೆಲ್ಲ ಅವರು ಹಲವು ಬಾರಿ ತಮ್ಮ ಹಿಂದಿನ ನಿಲುವುಗಳನ್ನು ಬದಲಾಯಿಸಿಕೊಂಡಿದ್ದಾರೆ. ಮನುಷ್ಯ ಎಷ್ಟು ಕಲಿತರೂ ಕಲಿಯಬೇಕಾದದ್ದೇ ಬಹಳ ಎಂದು ನಂಬಿರುವ ಕಾರಂತರಿಗೆ ಈ ಬದುಕೇ ಒಂದು ಪಾಠಶಾಲೆಯಾಗಿದೆ. ಚಿಕ್ಕಂದಿನಲ್ಲೇ ಶಾಲೆ ಬಿಟ್ಟು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಅವರು ಮುಂದೆ ಎಲ್ಲ ಜ್ಞಾನಶಾಖೆಗಳಲ್ಲೂ ಆಸಕ್ತಿ ಬೆಳೆಸಿಕೊಂಡದ್ದು, ಸ್ವಂತವಾಗಿ ಕಲಿತದ್ದು, ಕಲಿzತದ್ದನ್ನು ಸರಳವಾದ ಕನ್ನಡದಲ್ಲಿ ಮಾತನಾಡಿದ್ದು, ಬರೆದದ್ದು ಈಗ ದಾಖಲೆಯಾಗಿದೆ. ಸಹಜವಾಗಿಯೇ ಅವರಿಗೆ ಹಲವಾರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟುಗಳು, ಜ್ಞಾನಪೀಠ ಪ್ರಶಸ್ತಿಯೂ ಸೇರಿದಂತೆ ಹಲವು ಹತ್ತು ಪ್ರಶಸ್ತಿಗಳು ಲಭ್ಯವಾಗಿವೆ. ಅಸಂಖ್ಯ ಗೋಷ್ಠಿಗಳ , ಸಮ್ಮೇಳನಗಳ ಅಧ್ಯಕ್ಷ ಪಟ್ಟಗಳು, ಸನ್ಮಾನಗಳು ಕಾರಂತರನ್ನು ಹುಡುಕಿಕೊಂಡು ಬಂದೆವೆ. ತುರ್ತುಪರಿಸ್ಥಿತಿಯಲ್ಲಿ ಇಂದಿರಾ ಸರ್ವಾಧಿಕಾರವನ್ನು ಧಿಕ್ಕರಿಸಿ ಕಾರಂತರು ಪದ್ಮಭೂಷಣ ಪ್ರಶಸ್ತಿಯನ್ನು ಕೇಂದ್ರ ಸರಕಾರಕ್ಕೆ ವಾಪಸು ಮಾಡಿದ್ದು ಕೂಡ ಇತಿಹಾಸದಲ್ಲಿ ಸೇರಿಹೋಗಿದೆ. ಕಾರಂತರ ನಿಜವಾದ ಅರ್ಥದಲ್ಲಿ ಒಬ್ಬ ಬುದ್ಧಿಜೀವಿ . ಕಾರಂತರಿಗೂ ಇತರ ಲೇಖಕರಿಗೂ ಇರುವ ಒಂದು ಮುಖ್ಯ ವ್ಯತ್ಯಾಸವೆಂದರೆ ಪ್ರಾಯಶಃ ಕಾರಂತರೊಬ್ಬರೇ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಆಸಕ್ತಿ ಇಟ್ಟುಕೊಂಡಿರುವುದು ಮತ್ತು ಕ್ರಿಯಾಶೀಲರಾಗಿರುವುದು. ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕøತಿ ಹೀಗೆ ಪಟ್ಟಿ ಬೆಳೆಯುತ್ತದೆ. ಕಾರಂತರು ‘ ಬಾಲ ಪ್ರಪಂಚ’, ‘ವಿಜ್ಞಾನ ಪ್ರಪಂಚ’ಗಳನ್ನು ಬರೆದಿದ್ದಾರೆ. ಸಿರಿಗನ್ನಡ ಅರ್ಥಕೋಶವನ್ನು ತಯಾರಿಸಿದ್ದಾರೆ. ಯಕ್ಷಗಾನ ಕುರಿತ ಪುಸ್ತಕಗಲನ್ನು ಬರೆದಿದ್ದಾರೆ. ಸ್ವತಃ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ಶಿಲ್ಪಕಲೆ, ಚಿತ್ರಕಲೆ ಕುರಿತ ಪುಸ್ತಕಗಳನ್ನು ಬರೆದಿದ್ದಾರೆ, ಸ್ವತಃ ಚಿತ್ರಗಳನ್ನು ಬರೆದಿದ್ದಾರೆ. ಚಲನಚಿತ್ರ ನಿರ್ಮಿಸಿದ್ದಾರೆ. ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ.