Savan tikare
ಇವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಸದಸ್ಯರಾಗಿದ್ದಾರೆ |
ಕೊಡಗು ಒಂದು ಪುಟ್ಟ ಜಿಲ್ಲೆ, ಪ್ರಕೃತಿ ಸೌಂದರ್ಯದ ಬೀಡು ಈ ನಾಡು. ವೀರರ ನಾಡು ಕೊಡಗು. ರಾಷ್ಟ್ರ ರಕ್ಷಣೆಗಾಗಿ ತಮ್ಮ ಜೀವನವನ್ನು ಬಲಿದಾನ ಮಾಡಿದ ವೀರರು ಕೊಡವರು. ಇತ್ತೀಚಿನ ದಿನಗಳಲ್ಲಿ ಸಹ ಹಲವಾರು ಕೊಡಗಿನ ಯುವಕರು ಸೈನ್ಯವನ್ನು ಸೇರಿದ್ದಾರೆ. ಇದು ಕೊಡಗಿನ ರಾಷ್ಟ್ರಪ್ರೇಮವನ್ನು ಎತ್ತಿ ತೋರಿಸುತ್ತದೆ. ಈ ಜಿಲ್ಲೆಯ ಆಚಾರ, ವಿಚಾರ, ಸಂಪ್ರದಾಯ, ಸಂಸ್ಕೃತಿ ಎಲ್ಲವೂ ವಿಭಿನ್ನವಾಗಿವೆ. ಕೊಡಗಿನ ಜನರು ಅಥಿತಿ ಸತ್ಕಾರದಲ್ಲಿ ಬಹಳ ಹೆಸರುವಾಸಿಯಾಗಿದ್ದಾರೆ. ಇವರ ಉಡುಗೆ ತೊಡುಗೆ ಆಭರಣಗಳು ಸಹ ವಿಭಿನ್ನವಾಗಿವೆ. ಇವರು ತೊಡುವ ಸಾಂಪ್ರದಾಯಿಕ ಆಭರಣಗಳು ಹೀಗಿವೆ ಪತಾಕ್, ಕೊಕ್ಕತಾತಿ, ಜೋವೇಲೆ, ಪಾಂಚ, ಕಡಗ, ಪರಿಬಳೆ, ಪಿಂಬಳೆ ಈ ಆಭರಣಗಳನ್ನು ಮಹಿಳೆಯರು ಧರಿಸಿದರೆ, ಪುರುಷರು ಪವ್ವಮೇಲೆ ಅಂದರ, ಹವಳದ ಸರ ಹಾಗೂ ಸೊಂಟಕ್ಕೆ ಬೆಳ್ಳೈ ಹಾಗೂ ಚಿನ್ನ ಮಿಶ್ರಣವಿರುವ ಪೀಚಕತ್ತಿಯನ್ನು ಧರಿಸುತ್ತಾರೆ. ಎಲ್ಲದಕ್ಕಿಂತ ವಿಷೇಶವೆಂದರೆ ಎಲ್ಲಾ ಜಾತಿಯಲ್ಲಿ ವರನು ವಧುವಿಗೆ ತಾಳಿಕಟ್ಟುವ ಸಂಪ್ರದಾಯವಿದ್ದರೆ ಕೊಡವ ಜನಾಂಗದಲ್ಲಿ ತಾಯಿ ಮಗಳಿಗೆ ತಾಳಿ ಕಟ್ಟುವ ಸಂಪ್ರದಾಯವಿದೆ ಹಾಗೂ ವರನ ಶಕ್ತಿ ಸಾಮರ್ಥ್ಯವನ್ನು ಪರೀಕ್ಷಿಸಲು ಮದುವೆಯ ದಿನ ಸಾಲಾಗಿ ೬ ರಿಂದ ೮ ಬಾಳೆ ಕಂಬಗಳನ್ನು ನೆಟ್ಟಿರುತ್ತಾರೆ. ಅದನ್ನು ವರನು ಒಂದೇ ಏಟಿನಿಂದ ಕಡಿದು ವಧುವನ್ನು ವರಿಸುವ ಪದ್ಧತಿ ಇದೆ. ಇವರ ಮುಖ್ಯ ಹಬ್ಬಗಳು ಹುತ್ತರಿ ಹಾಗೂ ಕೈಲ್ ಪೊಳ್ದ, ಹುತ್ತರಿ ಹಬ್ಬದಂದು ಸಂಜೆ ಪ್ರತಿ ಮನೆಯವರು ಅವರ ಗದ್ದೆಗಳಿಗೆ ಹೋಗಿ ಭತ್ತದ ಕದಿರನ್ನು ತೆಗೆದು ಕೊಡವ ವಾಲಗದ ಜೊತೆ ಹೆಂಗಸರು ಕಳಸವನ್ನು ಹೊತ್ತು ಮನೆಯೊಳಗೆ ಪ್ರವೇಶಿಸುತ್ತಾರೆ. ಆ ಭತ್ತದ ಕದರಿಗೆ ಪೂಜೆಯನ್ನು ಸಲ್ಲಿಸಿ ಅದನ್ನು ಪ್ರತಿಯೊಬ್ಬರ ಮನೆಯ ಬಾಗಿಲಿಗೆ ಕಟ್ಟುತ್ತಾರೆ ನಂತರ ಎಲ್ಲರೊಡಗೂಡಿ ಭೋಜನ ಸ್ವೀಕರಿಸುತ್ತಾರೆ. ಕೈಲ್ ಪೊಳ್ದ ಹಬ್ಬದ ದಿನ ತಾವು ಗದ್ದೆ, ತೋಟಗಳಲ್ಲಿ ಉಪಯೋಗಿಸುವ ಎಲ್ಲಾ ಆಯುಧಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ. ಹುತ್ತರಿ ಹಬ್ಬದ ನಂತರ ಪ್ರತಿಯೊಂದು ಗ್ರಾಮದಲ್ಲಿ ದೇವರ ಮಂದ ಎಂಬ ಕಟ್ಟೆ ಇರುತ್ತದೆ ಅಲ್ಲಿ ಆ ಮನೆತನದವರೆಲ್ಲ ಕೂಡಿ ಪರೆಯ ಕಳಿನೃತ್ಯ, ಉವ್ವತ್ತಾಟ, ದಾಡಿಪಾಟ್, ಬೊಳಕ್ಕಾಟ್, ಶಕ್ತಿ ಕೋಲಾಟ, ಫಿಲಿಯೊಟ್ ಎಂಬ ಹಲವಾರು ರೀತಿಯ ನೃತ್ಯವನ್ನು ಮಾಡಿ ಸಂತೋಷಪಡುತ್ತಾರೆ. ಕೊಡಗಿನ ಜನಾಂಗದವರು ಪ್ರತಿಯೊಂದು ಮನೆಗಳಲ್ಲೂ ತೇಕುಬೊಳಕ್ಕ ಎಂಬ ದೀಪ ಬೆಳಗಿಸುತ್ತಾರೆ. ಅಂದರೆ ತೂಗುದೀಪ ಎಂದರ್ಥ. ಕೊಡವ ಜನಾಂಗದ ಪ್ರತಿಯೊಬ್ಬ ಕಿರಿಯರು ಹಿರಿಯರ ಕಾಲಿಗೆ ನಮಸ್ಕರಿಸುವುದು ವಾಡಿಕೆ. ಇಲ್ಲಿನ ಮುಖ್ಯ ಬೆಳೆ ಕಾಫಿ, ಏಲಕ್ಕಿ, ಭತ್ತ, ಕರಿಮೆಣಸು, ಶುಂಠಿ, ಕಿತ್ತಳೆ. ಕೊಡವ ಜನರು ಶ್ರಮಜೀವಿಗಳು ಹಾಗೂ ಶಿಸ್ತಿನ ಸಿಪಾಯಿಗಳು,ದೇಶಕ್ಕಾಗಿ ಹೋರಾಡಿದ ಜನರಲ್ ತಿಮ್ಮಯ್ಯ ಹಾಗೂ ಜನರಲ್ ಕಾರ್ಯಪ್ಪನವರು ಮೂಲತಃ ಕೊಡವ ಜನಾಂಗದವರು ಮಿಲಿಟರಿ ಸೇನೆಗೆ ಕೊಡಗಿನ ಜನರ ಕೊಡುಗೆ ಅಪಾರ. ಕೊಡಗಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಗಳಲ್ಲಿ ಜನರು ಆಗಮಿಸುತ್ತಾರೆ, ಪ್ರವಾಸಿಗರ ಮನತಣಿಸುವ ಮುಖ್ಯತಾಣಗಳು ಹೀಗಿವೆ: ಇಗ್ಗುತಪ್ಪ ದೇವಾಲಯ, ಇರುಪ್ಪ ದೇವಾಲಯ,ಅಬ್ಬೆ ಜಲಪಾತ, ಹಾರಂಗಿ ಡ್ಯಾಮ್, ನಿಸರ್ಗಧಾಮ, ನಾಲ್ಕು ನಾಡು ಅರಮನೆ, ಗೋಲ್ಡನ್ ಟೆಂಪಲ್, ಕಾವೇರಿಯ ಉಗಮಸ್ಥಾನ ತಲಕಾವೇರಿ, ಇತಿಹಾಸ ಪ್ರಸಿದ್ಧ ಓಂಕಾರೇಶ್ವರ ದೇವಾಲಯ ಪ್ರಸಿದ್ಧವಾಗಿವೆ. ಕೊಡವ ಜನಾಂಗದಲ್ಲಿ ಗಂಡು ಮಗು ಜನಿಸಿದರೆ ಗುಂಡು ಹೊಡೆಯುವ ಮೂಲಕ ಸುದ್ದಿ ಮುಟ್ಟಿಸುತ್ತ್ತಾರೆ. ಹೆಣ್ಣು ಮಗು ಜನಿಸಿದರೆ ತಟ್ಟಿಗೆ ಹೊಡೆಯುವ ಮೂಲಕ ಸುದ್ದಿ ಮುಟ್ಟಿಸುತ್ತ್ತಾರೆ. ಯಾರಾದರು ಮರಣ ಹೊಂದಿದರೂ ಸಹ ಗುಂಡು ಹೊಡೆಯುವ ಮೂಲಕ ಸುದ್ದಿ ಮುಟ್ಟಿಸುತ್ತ್ತಾರೆ. ಕೊಡವ ಜನಾಂಗದ ಪ್ರತಿಯೊಬ್ಬರು ಕೋವೆ ಹಾಗೂ ಬಂದೂಕುಗಳನ್ನು ಹೊಂದಿರುತ್ತಾರೆ. ಕೊಡವ ಮನೆತನದಲ್ಲಿ ಏನಾದರೂ ಭಿನ್ನಾಭಿಪ್ರಾಯಗಳು ಬಂದಲ್ಲಿ ಅದನ್ನು ಕೊಡವರ ನ್ಯಾಯಕಟ್ಟೆಯಲ್ಲಿ ಊರ ಹಿರಿಯರು ತೀರ್ಮಾನಿಸುತ್ತಾರೆ. ಇವರ ಮುಖ್ಯ ಆಹಾರ ಕಡಂಬುಟ್ಟು, ನೊಲುಪುಟ್ಟು, ಪಾಪಟ್ಟು, ರೊಟ್ಟಿ, ಪಂದಿಕರಿ. ಕೊಡಗು ಬೆಟ್ಟ ಗುಡ್ಡಗಳಿಂದ ಕೂಡಿದ ನಾಡಾಗಿರುವುದರಿಂದ ವರ್ಷದ ೪ ತಿಂಗಳು ಧಾರಕಾರವಾಗಿ ಮಳೆ ಸುರಿಯುತ್ತಿರುತ್ತದೆ. ಹಿಂದೂ ಧರ್ಮದ ಮಹಿಳೆಯರು ಸೀರೆಯ ನೆರಿಗೆಯನ್ನು ಮುಂದಕ್ಕೆ ಹಾಕಿ ಕೊಂಡರೆ ಕೊಡವ ಜನಾಂಗದ ಮಹಿಳೆಯರು ಸೀರೆಯ ನೆರಿಗೆಯನ್ನು ಹಿಂದಕ್ಕೆ ಹಾಕಿ ಉಡುವುದು ವಿಶಿಷ್ಟವಾಗಿದೆ. ಇವರ ಪ್ರತಿಯೊಂದು ಮನೆತನದವರಿಗೂ ಒಂದೊಂದು ಹೆಸರಿದೆ. ಈ ಹೆಸರಿನ ಮೂಲಕವೇ ಇವರು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ.