ಇದು ನಾನು ಬರೆಯುತ್ತಿರೋ ಮೊದಲ ಪ್ರೇಮ ಪತ್ರ. ಹೇಗೆ ಪ್ರಾರಂಭ ಮಾಡ್ಬೇಕು ಅಂತ ತಲೆಬುಡ ಗೊತ್ತಾಗ್ತಾ ಇಲ್ಲ. ಈ ಎರಡು ಸಾಲುಗಳ ಬರೆಯುವಷ್ಟರಲ್ಲಿ ನಾಲ್ಕು ಹಾಳೆಗಳನ್ನ ಹರಿದಿದ್ದೀನಿ, ಇನ್ನೆಷ್ಟೋ ಹರಿಯುತ್ತೀನೋ ಗೊತ್ತಿಲ್ಲ. ಏನ್ ಬರೆಯಬೇಕು ಅಂತ ಗೊತ್ತಾಗದೆ ತಲೆ ಕೆರೆದರೆ ಕೂದಲು ಕೈಯಲ್ಲಿ ಬಂದವೆ ಹೊರತು ಹೊಸ ವಿಚಾರ ತಲೆಯಲ್ಲಿ ಮೂಡ್ಲಿಲ್ಲ. ಈ ಪತ್ರ ಓದಿ ನೀನು ಹೇಗೆ ರಿಯಾಕ್ಟ್ ಮಾಡ್ತಿಯೋ ಅಂತ ನೆನೆದ್ರೆ ಸಾಕು ಹೃದಯ ಡಬಡಬ ಬಡ್ಕೊಳ್ಳುತ್ತೆ. ಅದರ ಶಬ್ಡಕ್ಕೆ ಪಕ್ಕದ ಅಂಗಡಿಯಲ್ಲಿ ಹಾಕಿರೋ generator ಶಬ್ಡ ಕಿವಿಗೆ ಹತ್ತಿರ ಅನ್ನಿಸೊಲ್ಲ! Hmm...ನೆನಪಿದ್ಯಾ? ಆವತ್ತು ನಿನ್ನ birthdayಗೆ wish ಮಾಡೋಕೆ ಅಂತ ನಾನೂ ಚೆಂದಾಗಿರೋ ಹೊಸ ಹೊಸ ಬಟ್ಟೆ ಹಾಕ್ಕೊಂಡು ಬೆಳಿಗ್ಗೆ ಓಡೋಡಿ ಬಂದೆ, ಅದೇ ಆ ೧೭ನೇ ಪ್ಲಾಟ್-ಫಾರಂಗೆ. ನೀನು ಪಿಂಕ್ ಕಲರ್ ಚೂಡಿ ಹಾಕಿದ್ದೆ. ಅದರಲ್ಲಿ ಮೈತುಂಬಾ ಚಂದ್ರನ ಬಿಂಬಗಳು ಆವರಿಸಿದ್ದವು,ಚಂದಿರ ನಿನಗೆ ಸಡ್ಡು ಹೊಡೆಯಲು ಹವಣಿಸಿದ್ದ.ಆದರೆ ಮೊಗದಲ್ಲಿ ಮೂಡಿದ್ದ ಆ ನಿಷ್ಕಲ್ಮಷ ನಗು ಮೈಯನ್ನು ಹೊದ್ದಿದ್ದ ಆ ಚಂದಿರನನ್ನ ಸೋಲಿಸಿತ್ತು. ಸತ್ತು ಸ್ವರ್ಗದಲ್ಲಿರೋ ಆ ರವಿವರ್ಮನಿಗೂ ಹೊಟ್ಟೆಕಿಚ್ಚಾಗಿರ್ಬೇಕು ನಿನ್ನನ್ನ ನೋಡಿ,"ಛೇ ನಾನು ಬದುಕಿರುವಾಗ ಇವಳು ಹುಟ್ಟಲಿಲ್ಲ ಅಂತ". ವಿಶ್ ಮಾಡೋಕೆ ಅಂತ ಬಂದವ ನಿನ್ನ ನೋಡಿ ಹುಶ್ ಎನ್ನುತ್ತಾ ಸುಮ್ಮನಾದೆ. ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ ಸೋತೇ ನಾನಾಗ... ನೀನು ಸುಂದರಿಯೇನೋ ದಿಟ, ಆದ್ರೆ ನಿನ್ನನ್ನ ಮತ್ತಷ್ಟು ಸುಂದರಿಯನ್ನಾಗಿ ಮಾಡಿರೋದು ಆ ನಿನ್ನ ವ್ಯಕ್ತಿತ್ವ. ಮೊದಲ ಬಾರಿಗೆ ನಿನ್ನನ್ನ ನೋಡಿದಾಗ ಇಂಥ ಸುಂದರಿಗೆ ಎಂಥಾ ಹೃದಯವಿದೆಯೋ ಅಂತ ಯೋಚನೆಗೀಡಾಗಿದ್ದೆ. ಆವಾಗೊಂದ್ಸಲ ನೀನು ಬಸ್-ಸ್ಟಾಪಿನಲ್ಲಿ ನಿಂತಿದ್ದಾಗ ಹಣ್ಣುಹಣ್ಣು ಮುದುಕಿ ಬಂದು "ಎರಡು ದಿನಾ ಆಯ್ತು ಏನೂ ತಿಂದಿಲ್ಲ. ಏನಾದ್ರು ಕೊಡಿ" ಅಂದಿದ್ದಕ್ಕೆ, ನಿಮ್ಮಮ್ಮ ಅಂದ್ರೆ, ನನ್ನ ಭಾವೀ ಅತ್ತೆ ಮಾಡಿದ ನಿನ್ನ ಫೇವರೀಟ್ ಬಿಸಿಬೇಳೆ ಪಾಯಸ,ಚಪಾತಿ,ಪಲ್ಯ ಎಲ್ಲಾನೂ ಅವಳಿಗೆ ಕೊಟ್ಟೆ. ಅದನ್ನ ತಿಂದ ಮುದುಕಿ,"ಬಂಗಾರದಂತಹ ಗಂಡ ಸಿಗಲಿ ಮಗಳೇ ನಿಂಗೆ" ಅಂತ ಹೃದಯತುಂಬಿ ಹರಸಿದಾಗ, ನೀನು ನಾಚಿಕೆಯ ವಶವಾಗಿದ್ದೆ. ಅಲ್ಲೇ...ಎರಡೇ ಎರಡು ಅಂಗುಲ ದೂರದಲ್ಲಿ ನನಗೆ ನನ್ನ ಬಸ್ ಬಂದು ಹೋಯ್ತು ಅಂತ ಸ್ನೇಹಿತ ಹೇಳೋವರೆಗೂ ಇಹದ ಪರಿವೇಯಿರಲಿಲ್ಲ. ತುಂಬಾ ಒಳ್ಳೆಯ ಕೆಲಸ ಮಾಡಿದ್ರಿ ನೀವು ಅಂತ ಹೇಳೋಕೆ ಹತ್ತಿರ ಬಂದೆ, ಬಾಯಿಯೆಲ್ಲಾ ಒಣಗಿ ಮಾತೇ ಬಾರದಂತಾದೆ. ಹೀಗೆ ಎಷ್ಟು ಸಲ ಆಗಿದ್ಯೋ ನಾ ಕಾಣೆ. ನಿನ್ನ ಹತ್ತಿರ ಮಾತಾಡ್ಬೇಕೆಂದು ರಾತ್ರಿಯೆಲ್ಲಾ ನಿದ್ದೆಗೆಟ್ಟು ಅಭ್ಯಾಸಮಾಡಿ ಬಂದಿದ್ದರೂ ನಿನ್ನ ಎದುರು ಬಂದಾಗ ಗಾಢ ಮೌನ ಆವರಿಸುತ್ತ್ತೆ, ಹೃದಯ ತಲ್ಲಣಿಸುತ್ತೆ, ತಲೆಯೆಲ್ಲಾ ನಿಚ್ಚಳವಾಗಿ ಏನೂ ಹೊಳೆಯೋದಿಲ್ಲ. ಗಾಡಿ ಸದ್ದು, ಅಲ್ಲಿ ಗಲಾಟೆ ಏನೂ ಕೇಳಿಸದು ನನ್ನ ಹೃದಯದ ಬಡಿತವಾಗಿರೋ ನಿನ್ನನ್ನ ಬಿಟ್ಟು. ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ ನಗುತ ನೀ ಕರೆದರೆ ಮನದೆ ಸಂತೋಷ ಹಾಡಾದಂತೆ ನಾನು ನಿನ್ನ ಹಿಂದೆ ಬಿದ್ದಿರೋದು ನಿಂಗೆ ಗೊತ್ತಾಯ್ತು ಅನ್ಸುತ್ತೆ. ಆವತ್ನಿಂದ ನಾ ಬಂದ್ರೆ ಸಾಕು, ಕಾಲ್ಬೆರಳು ನೆಲ ಕೆದಕುತ್ತೆ, ದುಪ್ಪಟ್ಟ ಹಿಂದಕ್ಕೆ-ಮುಂದಕ್ಕೆ ಸುಮ್-ಸುಮ್ನೆ ಹಾಕ್ತಿಯಾ. ಬೀಸೋ ಗಾಳಿ ನಿನ್ನ ಕೆನ್ನೆಗೆ ಮುತ್ತಿಕ್ಕಿದ ಮೇಲೆ, ಕೆನ್ನೆಗೆ ಮುತ್ತಿಕ್ಕಲು ಸ್ಪರ್ಧೆಯಿಂದ ಬಾಗಿ-ಬಾಗಿ ಬಂದ ಕೂದಲುಗಳನ್ನು ಹಿಂದಕ್ಕೆ ದೂಡಿದಂತೆ ಮಾಡಿ ವಾರೆಗಣ್ಣಿನಿಂದ ನನ್ನ ನೋಡುತ್ತಿದ್ದ ನಿನ್ನ ತುಂಟ ಕಂಗಳ ನೋಡಿ ನನ್ನಲ್ಲಿ ಖುಷಿಯ ಜಲಪಾತ ಧೋ ಎಂದು ಧುಮ್ಮಿಕ್ಕುತ್ತಿತ್ತು. ಚೆಲುವೆಯ ನೋಟ ಚೆನ್ನ ಒಲವಿನ ಮಾತು ಚೆನ್ನ ಮಲ್ಲಿಗೆ ಹೂವೇ ನಿನ್ನ ನಗುವು ಇನ್ನೂ ಚೆನ್ನ... ಪ್ರತಿದಿನ ಹೀಗೆ ಕಳೆಯುತ್ತಿದ್ದ ಐದೇ...ಐದು ನಿಮಿಷಗಳು, ನನ್ನ ಬದುಕಿಗೆ ನವೋಲ್ಲಾಸ ತಂದ್ವು. ಕಣ್ಣಿನ ನೋಟಗಳು ಕೋಲ್ಮಿಂಚಿನ ಬಾಣಗಳು ಕಣ್ಣಿನ ಮಾತುಗಳು ಬಿಡಿಸ್‍ಹೇಳದ ಒಗಟುಗಳು ನಿನ್ನ ಮನಸ್ಸಿನಲ್ಲಿ ಏನಿದೆ ಅಂತ ಇದುವರೆಗೂ ನನಗೆ ಗೊತ್ತಿಲ್ಲ...ನಿನಗೆ ಹೇಗೆ ಕೇಳ್ಬೇಕು-ಹೇಳ್ಬೇಕು ಅಂತ ತೋಚದಂತಾಗಿ ಪತ್ರದ ಮೊರೆಹೊಕ್ಕೆ...ಗಂಟಲಿನಲ್ಲಿ ಆಡದೆ ಸಿಕ್ಕಿ ಹಾಕೊಳ್ಳೋ ನೂರೆಂಟು ಮಾತುಗಳನ್ನ ಕೈಬೆರಳ ತುದಿಯಲ್ಲಾದರೂ ನಿನಗೆ ತಿಳಿಸಲೇ ಬೇಕೆಂದು ಬರೆಯಲು ಪ್ರಾರಂಭಮಾಡಿದೆ, ಆದರೆ ಬರೆದ ಪತ್ರ ಅರ್ಧ ಆಗಿತ್ತಷ್ಟೆ ಆಗ ನನ್ನ ಒಲವಿನ ಬದುಕಿಗೆ ಸಿಡಿಲು ಬಡಿತು. ಮೊನ್ನೆ ಆಫಿಸ್-ನಲ್ಲಿ ಯಾಕೋ ನೀನು ತುಂಬಾ ನೆನಪಾದೆ, ನಿನ್ನನ್ನ ನೋಡಬೇಕು ಅಂತ ತುಂಬಾ ಅನ್ನ್ಸಿಸಲಿಕ್ಕೆ ಪ್ರಾರಂಭವಾಯ್ತು...ಅದಕ್ಕೆ ಬೇಗ ಹೊರಟು ನೀನು ಮನೆಗೆ ಹೊರಡೋಕೆ ಮುಂಚೆ ಸರಿಯಾಗಿ 22ನೇ ಪ್ಲಾಟ್-ಫಾರಂ ಹತ್ತಿರ ಇರ್ಬೇಕು ಅಂತ ಅನ್ಕೋತಾ ಇರ್ಬೇಕಾದ್ರೆ ಮನೆಯಿಂದ ಫೋನ್-ಕಾಲ್ ಬಂತು "ಸಂಜೆ ಬೇಗ ಬಾ ಮನೆಗೆ,ಎಲ್ಲೋ ಹೊರಗಡೆ ಹೋಗ್ಬೇಕು" ಅಂತ ಅಂದ್ರು, ಎಲ್ಲಿಗೆ ಅಂತ ಹೇಳಲಿಲ್ಲ. ಹೇಗಿದ್ದರೂ ನಾನು ಬೇಗ ಹೊರಡಬೇಕು ಅಂದುಕೊಂಡಿದ್ದರಿಂದ, ನಿನ್ನನ್ನ ನೋಡಿ ಆಮೇಲೆ ಮನೆಗೆ ಹೋದರಾಯ್ತು ಅಂತ ಅನ್ಕೊಂಡೆ.ಆದರೆ ಮುಂದೆ ಎದುರಾಗಬಹುದಾದ ಯಾವುದರ ಕಲ್ಪನೆಯಿರದೆ ಅದೇ ಉಲ್ಲಾಸದಿಂದ ಆಫೀಸ್ ಕೆಲ್ಸ ಬೇಗ ಮುಗಿಸಿ ಹೊರಟೆ. ಎಂದಿನಂತೆ ಬೆಂಗಳೂರಿನ ಟ್ರಾಫಿಕ್ ಜಾಮ್-ನಲ್ಲಿ ಸಿಕ್ಕಿಹಾಕೊಂಡೆ, ಎಲ್ಲಿ ನಾನು ಬರೋದರೊಳಗೆ ನೀನು ಹೋಗ್ಬಿಡ್ತಿಯೋ ಅಂತ ಆತಂಕ ಒಂದೆಡೆಯಾದ್ರೆ, ಎಲ್ಲಿದ್ದಿಯಾ ಬೇಗ ಬಾ ಹೊತ್ತಾಗುತ್ತೆ ಅಂತ ಮನೆಯಿಂದ ಕರೆ ಮೇಲೆ ಕರೆ...ತಲೆಕೆಟ್ಟು ಮಸರ್ಗಡಗಿ ಆಗಿತ್ತು...ಮತ್ತೆ ಐದು ನಿಮಿಷ ಬಿಟ್ಟು ಫೋನ್ ಬಂದಾಗ,"ಟ್ರಾಫಿಕ್ ಜಾಮ್-ನಲ್ಲಿ ಸಿಕ್ಕಿಹಾಕೋಂಡೀನಿ ಇನ್ನಾ ಒಂದು ಘಂಟೆ ಆಗುತ್ತೆ" ಅಂದಿದ್ದಕ್ಕೆ...ಸರಿ ನಾವೇ ಕಾರ್ಪೋರೇಶನ್ ಹತ್ತಿರ ಬರ್ತೀವಿ ನೀನು ಅಲ್ಲೇ ಇಳ್ಕೋ ಅಂತ ಅಂದು, ನಿನ್ನ ನೋಡುವ ನನ್ನಾಸೆಗೆ ನೀರೆರೆಚಿದ್ರು...ಒಲ್ಲದ ಮನಸ್ಸಿನಿಂದ ಹೂಂ ಎನ್ನಲೇಬೇಕಾಯ್ತು. ಮನಸ್ಸಿನಲ್ಲಿ ಬರೀ ನಿನ್ನದೇ ಯೋಚನೆ ಈಗ ನೀನು 22ನೇ ಪ್ಲಾಟ್-ಫಾರಂಗೆ ಬಂದಿರಬಹುದಾ? ಅಥವಾ ಆವಾಗ್ಲೆ ಬಂದು ಹೋಗ್ಬಿಟ್ಟಿರ ಬಹುದಾ? ನೀನೂ ನನಗೋಸ್ಕರ ಅಲ್ಲಿ-ಇಲ್ಲಿ ಹುಡುಕುತ್ತಿರಬಹುದಾ? ಹೀಗೆ ನೂರೆಂಟು ಆಲೋಚನೆಗಳು ನನ್ನ ಮನಸ್ಸಾಗರದಿಂದ ತೇಲಿ ಬಂದು ಅಪ್ಪಳಿಸುತ್ತಾ ಇದ್ದವು. ಏನ್ ಮಾಡ್ಬೇಕು ಅಂತತೋಚಲಿಲ್ಲ...ಆಮೇಲೆ ಸುಮಾರು ಹೊತ್ತಿನ ನಂತರ ಕಾರ್ಪೋರೇಶನ್ ಸ್ಟಾಪ್ ಬಂತು, ಹ್ಯಾಪ್ ಮೋರೆ ಹಾಕೊಂಡು ಇಳಿದೆ...ಮನೆಯವರೆಲ್ಲಾ ಕಾಯ್ತಾ ಇದ್ರು, ಬೇಗ ಕಾರು ಹತ್ತು ಅಂದ್ರು. ಎಲ್ಲಿಗೆ ಅಂದಿದ್ದಕ್ಕೆ... ಕೃತಿ,.. ನಿನ್ನ ಬದುಕ ಪುಟಗಳಲ್ಲಿ ಬೆರೆಯಲು ಹವಣಿಸುತ್ತಿದ್ದ ನನಗೆ...ಅವರು ಕೊಟ್ಟ ಉತ್ತರ ಕೇಳಿ...ಆಘಾತವಾಯ್ತು... "ನಿಂಗೆ ಹೆಣ್ಣು ನೋಡೋಕೆ ಹೋಗ್ತಾ ಇರೋದು, ಆ ಹುಡುಗಿ ನಾಳೆ ವಿದೇಶಕ್ಕೆ ಅವರ ಕಂಪೆನಿಯಿಂದ ಟ್ರೈನಿಂಗ್ ಅಂತ ಹೋಗ್ತಾ ಇದ್ದಾಳಂತೆ ಅದಕ್ಕೆ ಈ ಅವಸರ. ಅವಳು ವಾಪಾಸು ಬಂದಕೂಡಲೆ ನಿಮ್ಮ ಮದುವೆ" ಅಂತ ಒಂದೇ ಉಸಿರಿನಲ್ಲಿ ಅಮ್ಮ ಹೇಳಿದಾಗ ನನ್ನುಸಿರೇ ನಿಂತಂಗಾಯ್ತು. ನಂಗೆ ಒಂದು ಮಾತಾದ್ರು ಕೇಳ್ಬೇಕು ಅನ್ನಿಸ್ಲಿಲ್ವ ನಿಮಗೆ ಅಂದಿದ್ದಕ್ಕೆ, "ನಮಗೂ ಗೊತ್ತಿರಲಿಲ್ಲ ನಿಮ್ಮ ತಂದೆ ಮೊನ್ನೆ ಧಾರವಾಡದಿಂದ ವಾಪಾಸು ಬರುವಾಗ ರೈಲ್ನಲ್ಲಿ ಸಿಕ್ಕಿದ್ದರಂತೆ ಆ ಹುಡುಗಿ ತಂದೆ, ಅವರು ನಿಮ್ಮ ತಂದೆ ಹಳೆಯ ಸ್ನೇಹಿತರಂತೆ, ಅವರ ಮಗಳೂ ಜೊತೆಗಿದ್ದಳಂತೆ, ನೋಡಿದ್ದಾರೆ ಇಷ್ಟ ಆಗಿದೆ, ನಿನ್ನ ಮೇಲೆ ನಿಮ್ಮ ತಂದೆಗೆ ಎಷ್ಟೊಂದು ಪ್ರೀತಿ ಯಾವಾಗ್ಲೂ ನಿನ್ನ ಫೋಟೊ ಅವರ ಪರ್ಸ್-ನಲ್ಲಿರುತ್ತೆ,ಅದು ಆವತ್ತು ಉಪಯೋಗಕ್ಕೆ ಬಂದಿದೆ,ಅದನ್ನ ತೋರಿಸಿದ್ದಾರೆ,ಹುಡುಗಿ ಮತ್ತು ಹುಡುಗಿ ಅಪ್ಪ ಇಬ್ಬರೂ ಒಪ್ಪಿದ್ದಾರೆ, ಅಲ್ಲೇ ಮಾತುಕತೆ ಮುಗಿಸಿದ್ದಾರೆ. ನವೆಂಬರ್ ೧ನೇ ತಾರೀಖು ಮದುವೆ" ಅಂತ ಅಮ್ಮ ಅಂದ್ರು. ಅಷ್ಟರಲ್ಲಿ ಅಪ್ಪ "ಏನೋ ಅವಗಾದ್ರು ನಿಂಗೆ ಆಫೀಸ್ ನಲ್ಲಿ ರಜೆ ಸಿಗುತ್ತೋ ಇಲ್ಬೋ ಅಥವಾ ನಿನ್ನ ಆಫೀಸ್ ಟೈಮಿಗಿಂತ ಮುಂಚೇನೆ ಮುಹೂರ್ತ ಇಟ್ಕೋ ಬೇಕಾ?" ಅಂತ ತಮಾಷೆ ಮಾಡಿದ್ರು.ಒಲ್ಲದ ಮನಸ್ಸಿನಿಂದ ಸುಮ್ನೆ ನಕ್ಕೆ. ಈ ತರಹ ಅಪ್ಪ ತಮಾಷೆಮಾಡಿ ಎಷ್ಟೊಂದು ವರುಷಗಳಾಗಿದ್ದವು. ಈ ಸಂಬಂಧದಿಂದ ಅವರಿಗೆ ತುಂಬಾನೆ ಖುಷಿಯಾಗಿದೆ,ಮೊದಲೇ ಅವರು ಹಾರ್ಟ್,ಬಿ.ಪಿ,ಸುಗರ್ ಪೇಶಂಟ್ ಎಲ್ಲಿ ಏನಾದ್ರು ಆಗಿ ಬಿಡುತ್ತೋ ಅಂತ ಸುಮ್ಮನಿದ್ದೆ. ಏನ್ ಮಾಡ್ಬೇಕು ಅಂತ ತೋಚದಂತಾಗಿ ಕೈಕಾಲು ಕಟ್ಟಿಹಾಕಿದಹಾಗೆ ಆಗಿದೆ. ನಾನು ತಗೊಂಡಿದ್ದ ಒಲವಿನ ಟಿಕೆಟ್-ನ ರೈಲು ಬರೋದ್ಕಿಂತ ಮುಂಚೆ ಮನೆಯವರು ಟಿಕೆಟ್ ತಗೊಂಡ ರೈಲು ಬಂದಿದೆ ಹತ್ತಿ ಪಯಣಿಸಲೇ ಬೇಕಾದಂತಹ ಪರಿಸ್ಥಿತಿ, ಮುಂದೊಂದು ಜನ್ಮದ ನಿಲ್ದಾಣದಲ್ಲಿ ನಿನ್ನೊಲವ ರೈಲು ಕಂಡರೆ ಖಂಡಿತ ನಿನ್ನವನಾಗಬೇಕೆಂದು ಆಶಿಸುತ್ತಾ... ನಿನ್ನಲ್ಲಿ ಭಾವನೆಗಳ ಅಲೆಗಳೇಳಲು ನಾನು ಕಾರಣವಾಗಿದ್ರೆ ಈ ಜನ್ಮಕ್ಕೆ ಆಗುವಷ್ಟು ಕ್ಷಮೆಯಿರಲಿ... ಬಾಳೆಂಬ ಪಥದಲ್ಲಿ, ಒಲವೆಂಬ ರಥದಲ್ಲಿ ಕನಸೆಲ್ಲಾ ಕನಸಾಗಿ ಕ್ಷಣವೊಂದು ಯುಗವಾಗಿ...

"ಪ್ರೀತಿ" ಕಳೆದು ಕೊಂಡರೆ... ವಿರಸ ಪಡೆದುಕೊಂಡರೆ... ಸರಸ



                            ನನ್ನ  ಪ್ರೀತಿಯ  A