ದತ್ತಾತ್ರೇಯ ರಾಮಚಂದ್ರ ಬೇಂದ್ರೆರವರ "ಅರಳು ಮರಳು" ಕೃತಿಯ ಒಂದು ವಿಮರ್ಶೆ

ಕವಿ ಪರಿಚಯ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ೧೮೯೬ ಜನವರಿ ೩೧ ರಂದು ಧಾರವಾಡದಲ್ಲಿ ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕಾ. ಬೇಂದ್ರೆಯವರು ಕನ್ನಡದ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರರು. ಇವರು ಕರ್ನಾಟಕದಲ್ಲಿ ವರಕವಿ ಎಂದು ಪ್ರಸಿದ್ಧರಾಗಿದ್ದಾರೆ. ಇವರ ಕಾವ್ಯನಾಮ ಅಂಬಿಕಾತನಯದತ್ತ. ಕನ್ನಡ ನಾಡು ನುಡಿಗಳ ಮೇಲ್ಮೆಗಾಗಿ ಹೋರಾಟ ಮಾಡಿದವರು. ಅಗಾಧವಾದ ಪ್ರತಿಭೆ, ಪಾಂಡಿತ್ಯ ಮತ್ತು ವ್ಯಾಪಕವಾದ ಜೀವನುಭವದಿಂದ ಕಥೆ, ಕವನ, ವಿಮರ್ಶೆ, ಅನುವಾದ ಮುಂತಾದ ನಾನಾ ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ 'ಅರಳು ಮರಳು' ಎಂಬ ಕೃತಿಗೆ ೧೯೫೮ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ದೊರಕಿದೆ. ಇವರ ಕವನ ಸಂಕಲನಗಳಾದ ಕೃಷ್ಣಕುಮಾರಿ, ಉಯ್ಯಾಲೆ, ನಾದಲೀಲೆ, ಮರ್ಯಾದೆ, ಉತ್ತರಾಯಣ, ಮುಕ್ತಕಂಠ ಹೃದಯ ಸಮುದ್ರ, ನಾಕುತಂತಿ ಮುಂತಾದವು. ಇವರ ವಿಮರ್ಶ ಕೃತಿಗಳು ಸಾಹಿತ್ಯಸಂಶೋಧನೇ, ವಿಚಾರಮಂಜರಿ, ಕಾವ್ಯೋದ್ಯೋಗ ಮುಂತಾದವು. ಇವರಿಗೆ ಪದ್ಮಶ್ರೀ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಹೀಗೆ ಹಲವಾರು ಪ್ರಶಸ್ತಿಗಳು ಇವರದ್ದಾಗಿದೆ.

ಅರಳು ಮರಳು ಕೃತಿಯ ಸಾರಾಂಶ ದ.ರಾ. ಬೇಂದ್ರೆಯವರ 'ಅರಳು ಮರಳು' ಕೃತಿಯು ೧೯೫೮ ರಲ್ಲಿ ಬಿಡುಗಡೆಯಾಗಿ, ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ದೊರಕಿದೆ. ಈ 'ಅರಳು ಮರಳು' ಕೃತಿಯು ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಬಹಳ ಪ್ರಾಮುಖ್ಯತೆಯನ್ನು ಕಂಡಂತಹ ಕೃತಿಯಾಗಿದೆ. ಈ ಕೃತಿಯು ಬೇಂದ್ರೆಯವರ ಕಾವ್ಯ ಜೀವನದಲ್ಲಿ ಒಂದು ಹೊಸ ತಿರುವು ಎಂದು ಪರಿಗಣಿಸಲಾಗಿದೆ. 'ಅರಳು ಮರಳು ' ಎಂಬ ಪದಗುಚ್ಛವು ಕೇವಲ ಒಂದು ಅಲಂಕಾರಿಕ ಪದವಲ್ಲ ಅದು ಬೇಂದ್ರೆಯವರ ಆಂತರಿಕ ಸಾಧನೆಯ ದೀರ್ಘ ಮತ್ತು ಜಟಿಲವಾದ ಪ್ರಕ್ರಿಯೆಯನ್ನು ಸೂಚಿಸುತ್ತದೆ. 'ಮರಳು ' ಎಂಬ ಪದವು ಸಾಮಾನ್ಯವಾಗಿ ಮೂರ್ಖತನವನ್ನು ಸೂಚಿಸುತ್ತದೆ. ಆದರೆ ಬೇಂದ್ರೆಯವರ ಸಂದರ್ಭದಲ್ಲಿ ಇದು ಆಳವಾದ ಆಧ್ಯಾತ್ಮಿಕ ಅನುಭವದ ಸ್ಥಿತಿಯನ್ನು ಸೂಚಿಸುತ್ತದೆ. 'ಅರಳು' ಎಂಬ ಪದವು ಅರಳುವಿಕೆ, ಬೆಳವಣಿಗೆ ಮತ್ತು ಸಂಪೂರ್ಣತೆಯನ್ನು ಸೂಚಿಸಪಡುತ್ತದೆ.

ಒಟ್ಟಾರೆಯಾಗಿ 'ಅರಳು ಮರಳು' ಎಂಬ ಪದಗುಚ್ಛವು ಸಾಧಕನು ತನ್ನ ಆಂತರಿಕ ಪ್ರಪಂಚವನ್ನು ಅನ್ವೇಷಿಸುವಾಗ ಅನುಭವಿಸುವ ಏರಿಳಿತಗಳನ್ನು ವರ್ಣಿಸುತ್ತದೆ. ಈ ಕೃತಿಯು ಕವಿಯ ಆಳವಾದ ಭಾವನೆಗಳನ್ನು, ಜೀವನದ ಬಗೆಗಿನ ಅವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಈ 'ಅರಳು ಮರಳು' ಎಂಬ ಕೃತಿಯಲ್ಲಿ ಬೇಂದ್ರೆಯವರು ಜೀವನದ ವಿವಿಧ ಆಯಾಮಗಳನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಚಿತ್ರಿಸಿದ್ದಾರೆ. ಬೇಂದ್ರೆಯವರ ಕಾವ್ಯವು ಕೇವಲ ಧಾರ್ಮಿಕ ಅಥವಾ ಆಧ್ಯಾತ್ಮಿಕ ಅನುಭವಗಳಿಗೆ ಸೀಮಿತವಾಗಿಲ್ಲ ಅದು ಜೀವನದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ನಾವು ಹಲವಾರು ಅಂಶಗಳನ್ನು ಗಮನಿಸಬಹುದಾಗಿದೆ. ಜೀವನದ ಚಕ್ರ, ಅಸ್ತಿತ್ವದ ಪ್ರಶ್ನೆ, ಪ್ರಕೃತಿಯೊಂದಿಗೆ ಸಂಬಂಧ, ಸಾಮಾಜಿಕ ವಿಷಯಗಳು ಹಾಗೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಅನುಭವಗಳು. ಈ ಕೃತಿಯಲ್ಲಿ ಕಂಡುಬರುವಂತಹ ವಿಶೇಷತೆಗಳು ಭಾವನಾತ್ಮಕ ಆಳ, ಭಾಷೆಯ ಸೊಬಗು, ವಿಚಾರಗಳ ವೈವಿಧ್ಯತೆ. ಹೀಗೆ ಹಲವಾರು ಅಂಶಗಳನ್ನು ಒಳಗೊಂಡಿರುವಂತಹ ಕೃತಿಯಾಗಿದೆ.

ಅರಳು ಮರಳಿನಲ್ಲಿ ಜೀವನದ ಚಕ್ರ: ಜನನ, ಬದುಕು ಮತ್ತು ಮರಣ ದ. ರಾ. ಬೇಂದ್ರೆಯವರು ಜನನ, ಬದುಕು ಮತ್ತು ಮರಣ ಈ ಮೂರು ಹಂತಗಳನ್ನು ತಮ್ಮ ಕವನಗಳಲ್ಲಿ ಆಳವಾಗಿ ಅನ್ವೇಶಿಸಿದ್ದಾರೆ. ಜನನ ಎಂಬ ಮೊದಲನೆಯ ಅಂಶವನ್ನು ಕವಿಯು ಬಹಳ ಸುಂದರವಾಗಿ ಚಿತ್ರಿಸಿದ್ದಾರೆ. ಜನನವನ್ನು ಕವಿ ಕೇವಲ ಜೈವಿಕ ಪ್ರಕ್ರಿಯೆ ಎಂದು ನೋಡದೆ, ಅದು ಜೀವನದ ಒಂದು ಹೊಸ ಆರಂಭ , ಹೊಸ ಆಸೆಗಳ ಹುಟ್ಟು ಮತ್ತು ವಿವಿಧ ಸಾಧ್ಯತೆಗಳ ಹೊಸ ಆರಂಭದ ಘಟನೆ ಎಂದು ವಿವರಿಸುತ್ತಾರೆ.ಜೀವನದ ಹೊಸ ಆರಂಭದಲ್ಲಿನ ಆಶಾವಾದಿ, ಕುತೂಹಲ ಮತ್ತು ಭಯಗಳನ್ನು ದ. ರಾ. ಬೇಂದ್ರೆಯವರು ಚಿತ್ರಿಸುತ್ತಾರೆ. ಕವಿ ಜನನವನ್ನು ಒಂದು ಹೊಸ ಹೂವಿನ ಅರಳಿಕೆಗೆ ಹೋಲಿಸಿದ್ದಾರೆ.

ಒಂದು ಹೂವಿನ ಮೊಗ್ಗು ಹೇಗೆ ಅರಳಿ ಪ್ರಕೃತಿಯ ಸೌಂದರ್ಯಕ್ಕೆ ಪಾತ್ರವಾಗುತ್ತದೆ. ಅದೇ ರೀತಿ ಒಂದು ಜನನವು ಸಹ ಸೌಂದರ್ಯತೆಗೆ, ಜೀವನದ ಆಧ್ಯತೆಗೆ ಪಾತ್ರವಾಗುತ್ತದೆ. ಇದು ಜೀವನದಲ್ಲಿನ ಬದಲಾವಣೆ, ಬೆಳವಣಿಗೆಗೆ ಮತ್ತು ಸೃಜನಶೀಲತೆಯನ್ನು ಸೂಚಿಸಲ್ಪಡುತ್ತದೆ. ಅಷ್ಟೇ ಅಲ್ಲದೆ ಜನನವನ್ನು ಒಂದು ಹೊಸ ಬೆಳಕಿನ ಆಗಮನಕ್ಕೆ ಹೋಲಿಸುತ್ತಾ ಅದು ಕತ್ತಲಿನ ವಾತಾವರಣದಲ್ಲಿ ಒಂದು ಹೊಸ ಬೆಳಕಿನ ಆಗಮನವನ್ನು ಸೂಚಿಸುತ್ತದೆ. ಬದುಕಿನಲ್ಲಿ ಒಂದು ಹೊಸ ಆಶಯವನ್ನು ಹುಟ್ಟು ಹಾಕುತ್ತದೆ ಎಂದು ದ.ರಾ. ಬೇಂದ್ರೆಯವರು ಚಿತ್ರಿಸಿದ್ದಾರೆ. ಜನನದ ಸಮಯದಲ್ಲಿ ಮಗುವಿನ ಮನಸ್ಸು ಶುದ್ದ ಮತ್ತು ನಿಷ್ಕಳಂಕ ವಾಗಿರುತ್ತದೆ. ಮತ್ತು ಅದರ ಸುತ್ತಮುತ್ತ ಪ್ರಪಂಚವನ್ನು ತಿಳಿದುಕೊಳ್ಳಬೇಕೆಂಬ ಹಂಬಲವಿರುತ್ತದೆ. ಆದರೆ ಆ ಸಮಯದಲ್ಲಿ ಮಗುವಿಗೆ ಏನಾಗುತ್ತದೆ ಎಂಬ ಭಯವೂ ಸಹ ಕಾಡುತ್ತಿರುತ್ತದೆ. ಕವಿಯಾದ ಬೇಂದ್ರೆಯವರು ಈ ರೀತಿ ಎದುರಿಸಬೇಕಾಗಿರುವಂತಹ ಸವಾಲುಗಳ ಬಗ್ಗೆ ತಿಳಿಸಿದ್ದಾರೆ.

ಬದುಕಿನ ಚಿತ್ರಣ ಅರಳು ಮರಳು ಕೃತಿಯಲ್ಲಿ ಜೀವನದ ಮಧ್ಯದ ಹಂತವನ್ನು ಬಹಳ ವಿಸ್ತಾರವಾಗಿ ರೂಪಿಸಿದ್ದಾರೆ. ಹುಟ್ಟುವುದು ಮತ್ತು ಸಾಯುವುದರ ಮಧ್ಯದ ಈ ಅವಧಿಯಲ್ಲಿ ಮಾನವನು ಅನೇಕ ವಿಧದ ಅನುಭವಗಳನ್ನು ಪಡೆಯುತ್ತಾನೆ ಎಂದು ಬೇಂದ್ರೆಯವರು ತಿಳಿಸುತ್ತಾರೆ. ಬದುಕು ಎಂಬುದು ಕೇವಲ ಸುಖದಿಂದ ಮಾತ್ರ ಇರದೇ ನೋವು ಕಷ್ಟಗಳ ಮಿಶ್ರಿತವಾಗಿರುತ್ತದೆ. ಆರೋಗ್ಯದ ಸಮಸ್ಯೆ, ಹಣದ ಸಮಸ್ಯೆ ಮುಂತಾದವು ಜೀವನದ ಒಂದು ಭಾಗ. ಆದರೆ ಇದರೊಂದಿಗೆ ಸಂತೋಷವೂ ಇರುತ್ತದೆ. ಪ್ರೀತಿ, ಸ್ನೇಹವೆಂಬುದು ಜೀವನಕ್ಕೆ ಸಂತೋಷವನ್ನು ತರುತ್ತದೆ. ಸಿಹಿ ಜೊತೆಗೆ ಕಹಿ ಇರುವ ಹಾಗೆ ದುಃಖವು ಸಹ ಒಳಗೊಂಡಿರುತ್ತದೆ. ಯಾವುದೇ ಸಮಯದಲ್ಲಿ ಸೋಲಿನ ಸಂದರ್ಭ ಎದುರಾದರೆ ಅವು ದುಃಖವನ್ನು ನೀಡುತ್ತದೆ. ಬೇಂದ್ರೆಯವರು ಬದುಕನ್ನು ಒಂದು ಸಾಗರಕ್ಕೆ ಹೋಲಿಸಿದ್ದಾರೆ. ಸಾಗರದಲ್ಲಿ ಹಲವಾರು ಏರಿಳಿತಗಳು ಇರುವಂತೆ. ಬದುಕಿನಲ್ಲಿ ಹಲವಾರು ಸುಖ ದುಃಖಗಳು ಪರಸ್ಪರ ಬೆರೆತುಕೊಂಡಿರುತ್ತದೆ. ಬೇಂದ್ರೆಯವರು ಬದುಕು ಎಂದರೆ ಸುಖ ಮತ್ತು ದುಃಖಗಳ ಸಮಾಗಮ ಎಂದು ತಿಳಿಸುತ್ತಾರೆ.

ಮರಣ ಕೃತಿಯಲ್ಲಿ ಮರಣವನ್ನು ಕವಿ ಬಹಳ ಶಾಂತ ರೀತಿಯಿಂದ ಸ್ವೀಕರಿಸಿದ್ದಾರೆ. ಮರಣವು ಒಂದು ಜೀವನದ ಅಂತ್ಯಭಾಗ ಎಂದು ಕಾಣದೆ, ಅದೂ ಸಹ ಮನುಷ್ಯನ ಒಂದು ಸಹಜ ಪ್ರಕ್ರಿಯೆಯ ದೀರ್ಘಕಾಲದ ನಿದ್ರೆಯ ಸಮಯವೆಂದು ಕವಿ ಬಹಳ ವಿಭಿನ್ನವಾಗಿ ಚಿತ್ರಿಸಿದ್ದಾರೆ. ಅತ್ಯಂತ ಶಾಂತವಾದ ಒಂದು ವಿರಾಮವೆಂದು ನಿದ್ರೆಗೆ ಜಾರುವ ಪ್ರಕ್ರಿಯೆಯನ್ನು ಕವಿ ತಿಳಿಸುತ್ತಾರೆ. ಕವಿಯ ಪ್ರಕಾರ ಮರಣವೂ ಸಹ ಬದುಕಿನ ಒಂದು ಅವಿಭಾಜ್ಯ ಅಂಗವಾಗಿದೆ. ಹುಟ್ಟು ಹೇಗೆ ನಿಶ್ಚಿತವೋ ಸಾವು ಹಾಗೆ ಖಚಿತವೆಂದು ತಿಳಿಸ ಬಯಸುತ್ತಾರೆ. ಯಾವುದು ಸಹ ಒಂದನ್ನು ಬಿಟ್ಟು ಇನ್ನೊಂದು ಪ್ರಕ್ರಿಯೆ ನಡೆಯುವುದಿಲ್ಲ. ಮನುಷ್ಯರು ಅದನ್ನು ಸಮಾಗಮವಾಗಿ ಸ್ವೀಕರಿಸಬೇಕೆಂಬುದನ್ನು ಕವಿ ನಿಲುವು ಹೊಂದಿದ್ದಾರೆ. ಎರಡನ್ನೂ ಸಹ ಜೀವನದಲ್ಲಿ ಸಮಾನವಾಗಿ ಸ್ವೀಕರಿಸಬೇಕೆಂಬುದೇ ಕವಿಯ ಆಸೆಯಾಗಿದೆ. ಮರಣದ ಮೂಲಕ ಆತ್ಮವೂ ಒಂದು ಹೊಸ ಜೀವನಕ್ಕೆ ಪರಿವರ್ತನೆಯಾಗುತ್ತದೆ ಎಂಬ ಆಧ್ಯಾತ್ಮಿಕ ದೃಷ್ಟಿಕೋನವನ್ನು ಕವಿ ಹೊಂದಿದ್ದಾರೆ. ಈ ರೀತಿಯಾಗಿ ಬೇಂದ್ರೆಯವರು ಈ ಮೂರು ಅಂಶಗಳನ್ನು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ.

ಅರಳು ಮರಳಿನಲ್ಲಿ ಅಸ್ತಿತ್ವದ ಪ್ರಶ್ನೆ ದ.ರಾ. ಬೇಂದ್ರೆಯವರು ತಮ್ಮ ಅರಳು ಮರಳು ಕೃತಿಯಲ್ಲಿ ಅಸ್ತಿತ್ವದ ಪ್ರಶ್ನೆಯನ್ನು ವಿವಿಧ ಆಯಾಮಗಳಲ್ಲಿ ನೋಡಿದ್ದಾರೆ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನವನ್ನು ಮಂಡಿಸಿದ್ದಾರೆ. ದ. ರಾ. ಬೇಂದ್ರೆಯವರು ಅಸ್ತಿತ್ವವನ್ನು ಒಂದು ನಿರಂತರವಾದ ಹರಿವಿನಂತೆ ಕಾಣುತ್ತಾರೆ. ಜೀವನ ಮತ್ತು ಮರಣ ಎರಡು ಈ ಹರಿವಿನ ಅವಿಭಾಜ್ಯ ಅಂಗಗಳಾಗಿವೆ. ಅವರ ಕೃತಿಗಳಲ್ಲಿ ಜೀವನದ ಸೌಂದರ್ಯದ ಜೊತೆಗೆ ಮರಣದ ಅನಿವಾರ್ಯವನ್ನು ಚಿತ್ರಿಸಲಾಗಿದೆ. ಕವಿಯು ಅಸ್ತಿತ್ವವನ್ನು ಒಂದು ರಹಸ್ಯವೆಂದು ಪರಿಗಣಿಸುತ್ತಾರೆ. ಆ ರಹಸ್ಯವನ್ನು ಭೇದಿಸಲು ಮನುಷ್ಯನು ಹಲವಾರು ತೊಂದರೆಗಳನ್ನು ಹಿಮ್ಮೆಟ್ಟಿ ನಡೆಯುವುದಾಗಿ ಸ್ಪೂರ್ತಿಯನ್ನು ತಿಳಿಸುತ್ತಾರೆ. ತೊಂದರೆಗಳನ್ನು ಎದುರಿಸಿದಾಗ ಮಾತ್ರ ಆ ರಹಸ್ಯದ ಉತ್ತರಗಳನ್ನು ಮಾನವನು ತಿಳಿದುಕೊಳ್ಳಬಹುದು ಎಂಬ ನಿಲುವು ಕವಿಯದ್ದಾಗಿದೆ. ಆಗ ಮಾನವನ ಅಸ್ತಿತ್ವಕ್ಕೆ ಒಂದು ಉತ್ತರ ಸಿಕ್ಕಿದಂತೆ.

ಮಾನವನು ಸೋಲನ್ನು ಸ್ವೀಕರಿಸಿ ಅದನ್ನು ಹಿಮ್ಮೆಟ್ಟಿ ಮುಂದುವರೆಯುವುದು ಮಾನವನ ಅಸ್ತಿತ್ವಕ್ಕೆ ಬಹಳ ಮುಖ್ಯವೆಂದು ತಿಳಿಸುತ್ತಾರೆ. ಮಾನವನು ನಿರಂತರವಾಗಿ ಗಟ್ಟಿಯಾಗಿ ನಿಂತು ಬರುವ ತೊಂದರೆಗಳನ್ನು ಎದುರಿಸಲೇಬೇಕು, ಕಷ್ಟಗಳು ಬಂದಾಗ ಹಿಂಜರಿಕೆಯನ್ನು ತೋರಬಾರದು. ಬರುವಂತಹ ತೊಂದರೆಗಳನ್ನು ಎದುರಿಸಿದಾಗಲೇ ನಮ್ಮ ಅಸ್ತಿತ್ವಕ್ಕೆ ಒಂದು ಅರ್ಥ ಸಿಗುವುದಾಗಿ ಕವಿ ದ.ರಾ. ಬೇಂದ್ರೆಯವರು ನಿಲುವನ್ನು ವ್ಯಕ್ತಪಡಿಸಿದ್ದಾರೆ. ಪ್ರಕೃತಿಯ ಸೌಂದರ್ಯವೂ ಮಾನವನನ್ನು ಆಕರ್ಷಿಸುತ್ತದೆ ಮತ್ತು ಅದೇ ಸಮಯದಲ್ಲಿ ಮಾನವನ ಅಸ್ತಿತ್ವದ ಮೂಲವಾಗಿದೆ ಎಂಬುದು ಕವಿಯ ನಂಬಿಕೆ. ಕವಿಯು ಪ್ರಕೃತಿಯಲ್ಲಿ ಮಾನವನ ಅಸ್ತಿತ್ವದ ಅರ್ಥವನ್ನು ಹುಡುಕುತ್ತಾರೆ.

ಪ್ರಕೃತಿಯೊಂದಿಗಿನ ಸಂಬಂಧ ಬೇಂದ್ರೆಯವರು ಪ್ರಕೃತಿಯನ್ನು ಕೇವಲ ಒಂದು ವಸ್ತುವಾಗಿ ಕಂಡವರಲ್ಲ. ಅವರಿಗೆ ಪ್ರಕೃತಿ ಎಂಬುದು ಒಂದು ಬಹಳ ಮುಖ್ಯವಾದ ಅಂಶ. ಪ್ರಕೃತಿಯನ್ನು ಬಹಳ ಪ್ರೀತಿಸುವವರಾಗಿದ್ದರು, ಪ್ರಕೃತಿಯೊಂದಿಗೆ ತಮ್ಮ ಜೀವನವನ್ನು ಕಳೆಯಬೇಕೆಂಬುದು ಅವರ ಆಸೆಯಾಗಿತ್ತು. ಪ್ರಕೃತಿಯನ್ನು ತಾಯಿಗೆ ಹೋಲಿಸಿದರು. ಆ ಪ್ರಕೃತಿಯ ಸೌಂದರ್ಯ, ವಿಸ್ಮಯ, ಶಕ್ತಿಗಳು ಅವರ ಕವನಗಳಲ್ಲಿ, ಕೃತಿಗಳಲ್ಲಿ ಸದಾ ಪ್ರತಿಬಿಂಬವಾಗುತ್ತದೆ. ಪ್ರಕೃತಿಯಲ್ಲಿ ಸಂಭವಿಸುವಂತಹ ಹಲವಾರು ಏರಿಳಿತಗಳನ್ನು ಅದರ ವ್ಯತ್ಯಾಸಗಳನ್ನು ಗಮನಿಸುವಂತವರಾಗಿದ್ದರು. ಪ್ರಕೃತಿಯಲ್ಲಿರುವಂತಹ ಹೂವಿನ ಪುಷ್ಪದ ಮನರಂಜನೆಯಿಂದ ಹಿಡಿದು ಮಳೆಗಾಲದ ಮೋಡಗಳ ನಾಟ್ಯದವರೆಗೆ ಎಲ್ಲವನ್ನೂ ಸಹ ತಮ್ಮ ಕೃತಿಗಳಲ್ಲಿ ಸುಂದರವಾಗಿ ಚಿತ್ರಿಸಲ್ಪಟ್ಟಿದ್ದಾರೆ.

ಬೇಂದ್ರೆಯವರ ಪ್ರಕೃತಿ ವರ್ಣನೆಗಳು ಕೇವಲ ವರ್ಣನಾತ್ಮಕವಾಗಿರುವುದಿಲ್ಲ, ಬದಲಾಗಿ ಅವು ಬಹಳ ಆಳವಾದ ಭಾವನಾತ್ಮಕ ಅನುಭವಗಳನ್ನು ಹೊಂದಿರುತ್ತವೆ. ಪ್ರಕೃತಿಯಲ್ಲಿ ಅವರು ತಮ್ಮ ಜೀವನದ ಸಂತೋಷ ದುಃಖ ಆಶಯಗಳನ್ನು ಕಾಣುತ್ತಾರೆ. ಅವರ ಕವಿತೆಗಳಲ್ಲಿ ಪ್ರಕೃತಿಯು ಒಂದು ಸಾಕ್ಷಿಯಂತೆ ಇರುತ್ತದೆ. 'ಅರಳು ಮರಳು' ಕೃತಿಯಲ್ಲಿ ಬೇಂದ್ರೆಯವರು ಪ್ರಕೃತಿಯನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದಲೂ ಸಹ ನೋಡುತ್ತಾರೆ ಅವರಿಗೆ ಪ್ರಕೃತಿಯಲ್ಲಿ ಒಂದು ದೈವಿಕ ಶಕ್ತಿ ಇದೆ ಎಂದು ಬಹಳ ನಂಬಿಕೆಯನ್ನು ಹೊಂದಿರುತ್ತಾರೆ. ಪ್ರಕೃತಿಯನ್ನು ಪೂಜಿಸುವಂತಹ ಮನೋಭಾವನೆ ಕವಿಯದ್ದಾಗಿದೆ ಎಂಬುದನ್ನು ನಾವು ಇಲ್ಲಿ ಕಾಣಬಹುದಾಗಿದೆ. ಪ್ರಕೃತಿಗೆ ಬಹಳ ಆಧ್ಯತೆಯನ್ನು ನೀಡಿರುವ ಅಂಶವನ್ನು ನಾವಿಲ್ಲಿ ಗಮನಿಸಬಹುದಾಗಿದೆ.

ಸಾಮಾಜಿಕ ವಿಷಯಗಳು ಬೇಂದ್ರೆಯವರು ಸಾಮಾಜಿಕ ವಿಷಯಗಳನ್ನು ಬಹಳ ಸೂಕ್ಷ್ಮವಾಗಿ ಈ ಕೃತಿಯಲ್ಲಿ ಬಿಂಬಿಸಿದ್ದಾರೆ. ಅವರ ಕೃತಿಯಲ್ಲಿ ವ್ಯಕ್ತಿಯೊಬ್ಬನ ಆಂತರಿಕ ಸಂಘರ್ಷ ಸಮಾಜದ ವಿವಿಧ ಸಮಸ್ಯೆಗಳು ಮಾನವ ಸಂಬಂಧಗಳು ಹೀಗೆ ಹಲವಾರು ವಿಷಯಗಳ ಬಗ್ಗೆ ಪ್ರಮುಖವಾಗಿ ಚರ್ಚಿಸುತ್ತಾರೆ. ಬೇಂದ್ರೆಯವರು ಜಾತಿ, ಮತ, ಭೇದ, ಲಿಂಗ, ವರ್ಣವ್ಯವಸ್ಥೆ, ವರ್ಗವ್ಯವಸ್ಥೆ ಹೀಗೆ ಹಲವಾರು ಸಾಮಾಜಿಕ ಪಿಡುಗುಗಳನ್ನು ಖಂಡಿಸಿದ್ದವರು. ಇದರ ವಿರುದ್ಧವಾಗಿ ಹಲವಾರು ಹೋರಾಟಗಳನ್ನು ನಡೆಸಿದ್ದವರು. ಅವರು ಹಲವಾರು ಕ್ಷೇತ್ರಗಳಲ್ಲಿ ಪ್ರತಿಭಟನೆಗಳನ್ನು ಸಹ ಮಾಡಿರುವವರು. ಬೇಂದ್ರೆಯವರು ತಮ್ಮ ಕೃತಿಯಲ್ಲಿ ಸಮಾಜದಲ್ಲಿರುವಂತಹ ಅನ್ಯಾಯಗಳನ್ನು, ಅಸಮಾನತೆಗಳನ್ನು, ಹಿಂದುಳಿದ ವರ್ಗಗಳ ಸಮಸ್ಯೆಗಳತ್ತ ಬೆಳಕನ್ನು ಚೆಲ್ಲಿದ್ದಾರೆ.

ಸಮಾಜದಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ತಮ್ಮ ಕೃತಿಯ ಮೂಲಕ ವ್ಯಕ್ತಪಡಿಸಿದ್ದಾರೆ. ಅವರು ಸದಾ ಮಾನವನ ಮೌಲ್ಯಗಳನ್ನು ಎತ್ತಿ ಹಿಡಿದು ಸಾರಬೇಕೆಂಬುದೇ ಅವರ ಆಸೆಯಾಗಿತ್ತು. ಬೇಂದ್ರೆಯವರು ಪ್ರೀತಿ, ಕರುಣೆ ಸಹಾನುಭೂತಿ ಹೀಗೆ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳುವಂತೆ ಓದುಗರನ್ನು ಪ್ರೇರೇಪಿಸುತ್ತಾರೆ. ಸಮಾಜದಲ್ಲಿ ಸಿಗುವಂತಹ ಸೌಲಭ್ಯಗಳನ್ನು ಎಲ್ಲರಿಗೂ ಸಮಾನವಾಗಿ ಸಿಗಬೇಕೆಂಬುದೇ ಅವರು ನಿಲುವನ್ನು ಹೊಂದಿದ್ದರು. ಬೇಂದ್ರೆಯವರ ಕಾವ್ಯವು ಕೇವಲ ಒಂದು ಕಾಲಘಟ್ಟಕ್ಕೆ ಮಾತ್ರ ಸೀಮಿತವಾಗದೆ ಆಧುನಿಕ ಸಮಾಜದಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವಂತಹ ಮನೋಭಾವನೆಯನ್ನು ಮಾನವರು ಬೆಳೆಸಿಕೊಳ್ಳಬೇಕು ಎಂಬ ಆಸೆಯೂ ಸಹ ಅವರದಾಗಿತ್ತು. ಅವರ ಕೃತಿಗಳು ಓದುಗರಲ್ಲಿ ಆಲೋಚನೆಗೆ ಹುಟ್ಟು ಹಾಕುತ್ತದೆ ಮತ್ತು ಸಮಾಜದ ಬಗ್ಗೆ ವಿಮರ್ಶಾತ್ಮಕ ದೃಷ್ಟಿಕೋನವನ್ನು ಬೆಳೆಸುತ್ತದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಅನುಭವಗಳು ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳನ್ನು ಬೇಂದ್ರೆಯವರು ಬಹಳ ವಿಶಿಷ್ಟವಾಗಿ ಈ ಕೃತಿಯಲ್ಲಿ ಚಿತ್ರಿಸಿದ್ದಾರೆ. ಬೇಂದ್ರೆಯವರು ಧರ್ಮವನ್ನು ಕೇವಲ ಒಂದು ಸಂಸ್ಥೆಯಾಗಿ ಅಥವಾ ಆಚರಣೆಯಾಗಿ ನೋಡುವುದಿಲ್ಲ, ಬದಲಾಗಿ ಅವರು ಧರ್ಮವನ್ನು ಜೀವನದ ಅವಿಭಾಜ್ಯ ಅಂಗವೆಂದು ತಿಳಿಸುತ್ತಾರೆ. ಅವರು ಧರ್ಮವನ್ನು ಜೀವನದ ಅನುಭವವಾಗಿ, ಪ್ರೀತಿಯಾಗಿ ಮತ್ತು ಸತ್ಯದ ಹುಡುಕಾಟವಾಗಿ ಕಾಣುತ್ತಾರೆ. ಅರಳು ಮರಳು ಕೃತಿಯಲ್ಲಿ ಬೇಂದ್ರೆಯವರು ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಇವರ ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನ ಕೇವಲ ಒಂದು ಸಂಪ್ರದಾಯಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ ಎಂಬ ಆಶಯ ಇವರದ್ದಾಗಿದೆ. ಬದಲಾಗಿ ಅವರು ಎಲ್ಲಾ ಧರ್ಮಗಳಲ್ಲಿನ ಸತ್ಯವನ್ನು ಗೌರವಿಸುತ್ತಾರೆ. ಎಲ್ಲಾ ಧರ್ಮಗಳಲ್ಲಿ ಇರುವಂತಹ ಪ್ರಾಮುಖ್ಯತೆಯನ್ನು ಅವರು ಗೌರವಿಸುತ್ತಾರೆ. ಬೇಂದ್ರೆಯವರು ತಮ್ಮ ಕವಿತೆಗಳಲ್ಲಿ ಎಲ್ಲಾ ಧರ್ಮಗಳ ಸಂಕೇತಗಳನ್ನು ಬಹಳ ಸುಂದರವಾಗಿ ರೂಪಿಸಿದ್ದಾರೆ.

ಜೊತೆಗೆ ಅದರ ಪ್ರಾಮುಖ್ಯತೆಯನ್ನು ಸಹ ಓದುಗರಲ್ಲಿ ತಿಳಿಸುವ ಮನೋಭಾವನೆಯವೂ ಸಹ ಅವರದ್ದಾಗಿದೆ. ಕವಿಯು ಧರ್ಮವನ್ನು ಕೇವಲ ಸಾಮಾಜಿಕ ಬದ್ಧತೆಗೆ ಮಾತ್ರ ಸೀಮಿತವಾಗಿಲ್ಲ ಎಂಬ ನಿಲುವು ಅವರದು, ಬದಲಾಗಿ ಅದು ವ್ಯಕ್ತಿಯ ಆಂತರಿಕ ಬೆಳವಣಿಗೆಗೆ ಸಹಾಯ ಮಾಡುವ ಮಾರ್ಗವೆಂದು ಅವರು ತಿಳಿಸುತ್ತಾರೆ. ಒಟ್ಟಾರೆಯಾಗಿ ದ.ರಾ. ಬೇಂದ್ರೆಯವರ 'ಅರಳು ಮರಳು' ಕೃತಿಯಲ್ಲಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳು ಆಧುನಿಕ ಓದುಗರಿಗೆ ಪ್ರಸ್ತುತವಾಗಿವೆ. ಅವರ ಕೃತಿಗಳು ಮಾನವನ ಜೀವನದ ಅರ್ಥವನ್ನು ತಿಳಿಯಲು ಬಹಳ ಸೂಕ್ತವಾಗುತ್ತದೆ.

ಕೃತಿಯ ವಿಶೇಷತೆಯಾದ ಭಾವನಾತ್ಮಕ ಆಳ, ಭಾಷೆಯ ಸೊಬಗು ವಿಚಾರಗಳ ವೈವಿಧ್ಯತೆ ಈ ಕೃತಿಯಲ್ಲಿ ಕವಿ ತನ್ನ ಹೃದಯದ ಆಳದಿಂದ ಹೊರ ಹೊಮ್ಮುವ ಭಾವನೆಗಳನ್ನು ಇಲ್ಲಿ ರೂಪಿಸಿದ್ದಾರೆ. ಪ್ರೀತಿ, ಸಂತೋಷ, ದುಃಖ, ಕೋಪ ಹೀಗೆ ಮುಂತಾದ ಭಾವನೆಗಳು ಕವಿತೆಗಳಲ್ಲಿ ಸಾಕಾರಗೊಂಡಿದ್ದು, ಓದುಗರು ತಮ್ಮ ಜೀವನದಲ್ಲಿ ಅನುಭವಿಸುವ ಭಾವನೆಗಳಿಗೆ ಸಂಬಂಧಿಸಿಕೊಳ್ಳಲು ಸಾಧ್ಯವಾಗುತ್ತದೆ. ಸುಲಭವಾಗಿ ತಮ್ಮ ಜೀವನದ ಭಾವನೆಗಳನ್ನು ಅರ್ಥೈಸಿಕೊಳ್ಳಬಹುದಾಗಿದೆ. ಕವಿ ತಿಳಿಸಿರುವ ಹಾಗೆ ಹಲವಾರು ಭಾವನೆಗಳು ಈ ಕೃತಿಯಲ್ಲಿ ಬಿಂಬಿತವಾಗಿವೆ. ಕವಿಯು ಅವರ ಭಾವನೆಗಳನ್ನು ಜೀವನ, ಸಾವು ಅಸ್ತಿತ್ವದಂತಹ ಆಳವಾದ ತಾತ್ವಿಕ ವಿಷಯಗಳ ಬಗ್ಗೆ ಕವಿ ತನ್ನದೇ ಆದ ವಿಶಿಷ್ಟ ದೃಷ್ಟಿಕೋನವನ್ನು ಮಂಡಿಸಿದ್ದಾರೆ. ಇದರ ಜೊತೆಗೆ ಸಮಾಜದಲ್ಲಿರುವಂತಹ ಅನ್ಯಾಯಗಳನ್ನು , ಅಸಮಾನತೆಗಳನ್ನು ಹೀಗೆ ಹಲವಾರು ಸಮಸ್ಯೆಗಳನ್ನು ತನ್ನ ಕವಿತೆಗಳ ಮೂಲಕ ಪ್ರತಿಭಟಿಸಿ ಸಮಾಜದಲ್ಲಿ ಜಾಗೃತ ಮನೋಭಾವನೆಯನ್ನು ಮೂಡಿಸಲು ಕವಿಯು ಪ್ರಯತ್ನಿಸಿದ್ದಾರೆ.

ಕವಿಯು ಬಹಳ ಸರಳವಾದ ಭಾಷೆಯನ್ನು ಬಳಸಿ ಬರೆದಿರುವುದರಿಂದ ಓದುಗರಿಗೆ ಅದನ್ನು ಅರ್ಥೈಸಿಕೊಳ್ಳಲು ಬಹಳ ಸುಲಭವೆಂದು ತಿಳಿಯಬಹುದು. ಸರಳ ಪದ ಬಳಕೆಯಿಂದ ಓದುಗರಿಗೆ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುವಂತಹ ಕೃತಿಯಾಗಿದೆ. ಕವಿಯು ವಿಚಾರಗಳ ವೈವಿಧ್ಯತೆಯನ್ನು ತಿಳಿಸಿರುವುದು ಬಹಳ ಸೊಗಸಾಗಿ ಬಿಂಬಿತವಾಗಿದೆ. ಜೀವನದ ವೈವಿಧ್ಯತೆಯನ್ನು ಮಂಡಿಸಿರುವುದು ಬಹಳ ಸೂಕ್ಷ್ಮವಾಗಿ ಚಿತ್ರಿತಗೊಂಡಿದೆ. ಸಮಾಜದಲ್ಲಿ ಎದುರಾಗುವಂತಹ ಹಲವಾರು ಸಮಸ್ಯೆಗಳನ್ನು ಎದುರಿಸುವಂತಹ ರೀತಿಯನ್ನು ತಿಳಿಸಿರುವುದು ಬಹಳ ಆಕರ್ಷಕವೆನಿಸುತ್ತದೆ. ಜೀವನದಲ್ಲಿ ಎದುರಾಗುವಂತಹ ನೋವು, ಕಷ್ಟ, ಸಂಕಟಗಳನ್ನು ಮೆಟ್ಟಿ ನಡೆದರೆ ಜೀವನಕ್ಕೆ ಒಂದು ಅರ್ಥ ಸಿಗುವುದಾಗಿ ಕವಿಯು ತಿಳಿಸ ಬಯಸುತ್ತಾರೆ. ಸಮಾಜದಲ್ಲಿ ಎದುರಾಗುವಂತಹ ಏರಿಳಿತಗಳನ್ನು ಅನುಭವಿಸಲೇಬೇಕು ಆಗಲೇ ಮನುಷ್ಯನು ಸಾರ್ಥಕತೆಯನ್ನು ಹೊಂದುವುದು ಎಂದು ಕವಿ ತಿಳಿಸುತ್ತಾರೆ.

ಉಪಸಂಹಾರ ಒಟ್ಟಾರೆಯಾಗಿ ದ.ರಾ. ಬೇಂದ್ರೆಯವರು 'ಅರಳು ಮರಳು' ಕೃತಿಯಲ್ಲಿ ಹಲವಾರು ವಿಷಯಗಳನ್ನು ಮಂಡಿಸಿದ್ದಾರೆ. ಈ ಕೃತಿಯು ಕವಿಯ ಆಳವಾದ ಭಾವನೆಗಳನ್ನು ಹಲವಾರು ಬಗೆಗಿನ ದೃಷ್ಟಿಕೋನವನ್ನು ಚಿತ್ರಿಸುತ್ತದೆ. ಬೇಂದ್ರೆಯವರು ಹಲವಾರು ವಿಚಾರಗಳನ್ನು ಮಂಡಿಸಿ ಅದನ್ನು ವ್ಯಕ್ತಪಡಿಸಿರುವಂತಹ ರೀತಿ ಬಹಳ ವಿಶಿಷ್ಟವಾದುದ್ದು. ಪ್ರಸ್ತಾಪಿಸಿರುವಂತಹ ಜೀವನದ ಚಕ್ರ, ಅಸ್ತಿತ್ವದ ಪ್ರಶ್ನೆ, ಪ್ರಕೃತಿಯೊಂದಿಗೆ ಸಂಬಂಧ ಹೀಗೆ ಹಲವಾರು ವಿಚಾರಗಳು ಓದುಗರಿಗೆ ಒಂದು ಸ್ಪೂರ್ತಿದಾಯಕವಾಗುತ್ತದೆ. ಈ ಕೃತಿಯ ಮುಖ್ಯ ಥೀಮ್ ಜೀವನದ ರಸಾನುಭವಗಳಲ್ಲಿ ಸೇರಿಕೊಂಡಿದೆ. ಆಧುನಿಕ ಕಾಲಘಟ್ಟಕ್ಕೆ ಈ ಕೃತಿಯು ಓದುಗರಿಗೆ ಬಹಳ ವಿಶೇಷವಾಗಿ ಕಂಡು ಬರುತ್ತದೆ. ಹಲವಾರು ವಿಷಯಗಳನ್ನು ಬೇಂದ್ರೆಯವರು ಮಂಡಿಸಿರುವಂತಹ ರೀತಿ ಓದುಗರಿಗೆ ಆಕರ್ಷಿಕವಾಗಿರುವಂಥದ್ದು, ಹಾಗೆಯೇ ಜೀವನಕ್ಕೆ ಅಳವಡಿಸಿಕೊಳ್ಳ ಬೇಕಾಗಿರುವಂತಹ ಅಂಶಗಳು ಸಹ ಇದರಲ್ಲಿ ಬಿಂಬಿತವಾಗಿದೆ.