SHARANAPPA KURI
ರಾಜಧಾನಿಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅಪಸವ್ಯಗಳು ಮೇರೆಮೀರಿವೆ.
ಬದಲಾಯಿಸಿನಂದಿಬೆಟ್ಟದ ಆಸುಪಾಸಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಹೇಗೆ ಆ ಬೆಟ್ಟಕ್ಕೆ ಅಪಾಯ ಒದಗಲಿದೆ ಎಂಬುದರ ಕುರಿತು ಸಮಾನಮನಸ್ಕರು ಮತ್ತು ಪರಿಸರದ ಬಗ್ಗೆ ಕಾಳಜಿಯುಳ್ಳ ವ್ಯಕ್ತಿಗಳ ಸಭೆಯೊಂದು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯಿತು. ನಂದಿಬೆಟ್ಟವೂ ಸೇರಿದಂತೆ ಪರಿಸರವನ್ನು ಉಳಿಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ದಾಟಿಸುವ ದಿಸೆಯಲ್ಲಿ ನಾವೇನು ಮಾಡಬೇಕು, ಈಗ ಆಗುತ್ತಿರುವ ವಿಧ್ವಂಸಕ ಕೃತ್ಯಗಳಿಗೆ ಕಡಿವಾಣ ಹಾಕಬೇಕಾಗಿರುವುದು ಎಷ್ಟು ಅನಿವಾರ್ಯ, ಅದಕ್ಕಿರುವ ಮಾರ್ಗೋಪಾಯಗಳೇನು ಎಂಬುದರ ಬಗ್ಗೆ ಈ ಸಂದರ್ಭದಲ್ಲಿ ವಿಸ್ತೃತ ಹಾಗೂ ಆರೋಗ್ಯಪೂರ್ಣ ಚರ್ಚೆ ನಡೆಯಿತು. ನಂದಿಬೆಟ್ಟವನ್ನು ಭೌಗೋಳಿಕ, ಜೈವಿಕ ಮತ್ತು ಜಲಸಂಪತ್ತಿನ ಮೂಲತಾಣವೆಂದು ಪರಿಗಣಿಸಿ, ಅಲ್ಲಿ ಯಾವುದೇ ಪರಿಸರ ವಿರೋಧಿ ಕೃತ್ಯಗಳಿಗೆ ಅವಕಾಶ ಕೊಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಈ ಸಂದರ್ಭದಲ್ಲಿ ತೆಗೆದುಕೊಳ್ಳಲಾಯಿತು.
ಬೆಂಗಳೂರಿನಲ್ಲಿ ಗಗನಚುಂಬಿ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯವಾದ ಮರಳು ಇಂದು ಎಲ್ಲೂ ಸಿಗುತ್ತಿಲ್ಲ. ಹೀಗಾಗಿ, ನಂದಿಬೆಟ್ಟದ ತಪ್ಪಲಿನಲ್ಲಿರುವ ಬಂಡೆಗಳನ್ನು ಪುಡಿಗಟ್ಟಿ, ಎಂ.ಸ್ಯಾಂಡ್ ತಯಾರಿಸಿ, ಅದನ್ನು ಬೆಂಗಳೂರಿಗೆ ಸಾಗಿಸಿ, ಅಲ್ಲಿನ ನಿರ್ಮಿತಿಗಳಿಗೆ ಬಳಸುವ ದೊಡ್ಡ ದಂಧೆ ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಲೇ ಬಂದಿದೆ. ಸ್ಥಾಪಿತ ಹಿತಾಸಕ್ತಿಗಳು, ಲಾಭಬಡುಕರು ಇದರ ಹಿಂದೆ ಇದ್ದಾರೆ. ಪಾರಂಪರಿಕ ಇತಿಹಾಸವುಳ್ಳ ಬೆಟ್ಟದ ಆಸುಪಾಸಿನಲ್ಲಿ ಈ ರೀತಿ ಡೈನಮೈಟ್ ಇಟ್ಟು ಧ್ವಂಸ ಮಾಡಿ, ಅಲ್ಲಿನ ಸಂಪನ್ಮೂಲವನ್ನು ಬಳಸಿಕೊಂಡು ಬೆಂಗಳೂರನ್ನು ‘ಬ್ರ್ಯಾಂಡ್ ಬೆಂಗಳೂರು’, ‘ಸ್ಮಾರ್ಟ್ ಸಿಟಿ’ ಮಾಡುವುದೆಂದರೆ ಅದು ಖಂಡಿತವಾಗಿ ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ. ಆಗ ಅದು ಬೆಂಗಳೂರಿಗರ ಪಾಲಿಗೆ ಶಾಪವಾಗುತ್ತದೆಯೇ ವಿನಾ ವರದಾನ ಆಗುವುದಿಲ್ಲ.
ನಂದಿಬೆಟ್ಟ ಒಂದು ಗಿರಿಧಾಮ. ಅಲ್ಲಿ ಅರ್ಕಾವತಿ, ಕುಮುದ್ವತಿ, ಪಾಪಾಗ್ನಿ, ಪಾಲಾರ್, ಪೆನ್ನಾರ್ ನದಿಗಳ ಉಗಮವಾಗಿ, ಒಂದು ಕಾಲದಲ್ಲಿ ಅವೆಲ್ಲವೂ ಸಮೃದ್ಧವಾಗಿ ಹರಿದು, ಹಲವು ಉಪನದಿಗಳನ್ನು ಕೂಡಿಕೊಂಡು ಬಂಗಾಳಕೊಲ್ಲಿಯನ್ನು ಸೇರುತ್ತಿದ್ದವು ಎಂದರೆ ಇಂದಿನ ಪೀಳಿಗೆಯವರು ನಂಬಲಾರರು. ನಂದಿಬೆಟ್ಟ ಸೇರಿದಂತೆ ಪರಿಸರದ ಸಮಸ್ತ ಪಳೆಯುಳಿಕೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗ. ಅವುಗಳನ್ನು ತುಂಡರಿಸುವ ಮೂಲಕ ನಾವೇ ವಿಪತ್ತನ್ನು ಆಹ್ವಾನಿಸುತ್ತಿದ್ದೇವೆ. ನಂದಿಬೆಟ್ಟದ ತಪ್ಪಲಿನಲ್ಲಿ ಅದೆಷ್ಟೋ ರೆಸಾರ್ಟುಗಳು, ಹೋಮ್‌ಸ್ಟೇಗಳು ನಿರ್ಮಾಣವಾಗಿವೆ, ರಸ್ತೆ, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಭಂಜನೆ ದಿನನಿತ್ಯ ಆಗುತ್ತಲೇ ಇದೆ. ಇದು ಹೀಗೇ ಮುಂದುವರಿದಲ್ಲಿ, ವಯನಾಡಿನಲ್ಲಿ ಆದಂತಹ ದುರಂತ ಇಲ್ಲೂ ಸಂಭವಿಸಬಹುದು.
ದಶಕಗಳ ಹಿಂದೆ ಕೊಡಗಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಟಿಂಬರ್ ಮಾಫಿಯಾವನ್ನು ಹತ್ತಿಕ್ಕಲು ನನ್ನ ನೇತೃತ್ವದ ಆಯೋಗವೊಂದನ್ನು ಸರ್ಕಾರ ನೇಮಿಸಿತ್ತು. ನಾನು ನನ್ನ ಸಹೋದ್ಯೋಗಿಗಳ ಜೊತೆ ಅಲ್ಲೆಲ್ಲ ಓಡಾಡಿ, ಆಗುತ್ತಿರುವ ಅನಾಹುತ, ಸರ್ಕಾರಕ್ಕೆ ಆಗುತ್ತಿರುವ ಮೋಸ ಎಲ್ಲವನ್ನೂ ಪತ್ತೆ ಹಚ್ಚಿ ಸಲ್ಲಿಸಿದ ವರದಿ ವಿಧಾನಸೌಧದ ಕಡತಗಳಲ್ಲಿ ಕಳೆದುಹೋಯಿತು. ಟಿಂಬರ್ ಮಾಫಿಯಾದ ಸ್ಥಾಪಿತ ಹಿತಾಸಕ್ತಿಗಳು ವರದಿಯಲ್ಲಿನ ಶಿಫಾರಸುಗಳನ್ನು ಜಾರಿ ಮಾಡದಂತೆ ಸಂಬಂಧಪಟ್ಟವರಿಗೆ ₹ 50 ಕೋಟಿಯ ರುಷುವತ್ತು ಕೊಟ್ಟು, ₹ 5,000 ಕೋಟಿ ಮೌಲ್ಯದ ಅರಣ್ಯ ನಾಶವನ್ನು ಬರೀ 45 ದಿನಗಳಲ್ಲಿ ಮಾಡಿದವು ಎಂಬುದನ್ನು ವಿಷಾದದಿಂದಲೇ ಹೇಳಬೇಕಾಗಿದೆ. ನಿವೃತ್ತ ಅರಣ್ಯಾಧಿಕಾರಿ ಬಿ.ಕೆ.ಸಿಂಗ್ ತಮ್ಮ ಪುಸ್ತಕದಲ್ಲಿ ಇದನ್ನು ದಾಖಲಿಸಿದ್ದಾರೆ.
ಬೆಂಗಳೂರಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅಪಸವ್ಯಗಳು ಮೇರೆಮೀರಿವೆ. ಭೂಮಿಯ ಬೆಲೆ ಗಗನಕ್ಕೇರಿದೆ. ಸಣ್ಣ ದುಡಿಮೆಯ ಕುಟುಂಬ ಸ್ವಂತದ ಸೂರನ್ನು ಕಟ್ಟಿಕೊಳ್ಳಲಾಗದ ಪರಿಸ್ಥಿತಿ ಇದೆ. ನೂರಾರು ಸ್ಟಾರ್ ಹೋಟೆಲ್‌ಗಳು ಬೆಂಗಳೂರಿನ ಸರಹದ್ದುಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿವೆ. ಅಲ್ಲಿನ ದರಗಳನ್ನು ಕಂಡು ಮಧ್ಯಮವರ್ಗದ ಮಂದಿ ಕೂಡ ಹುಬ್ಬೇರಿಸುವಂತಹ ಸ್ಥಿತಿ ಇದೆ. ಅಂದರೆ ಬೆಂಗಳೂರಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವುದೆಲ್ಲವೂ ಸಿರಿವಂತರಿಗೆ ಎಂಬುದು ಗಮನಿಸಬೇಕಾದ ಸಂಗತಿ.
ಕುದುರೆಮುಖ ಮತ್ತು ಗಂಗಡಿಕಲ್ಲು ಪರ್ವತಶ್ರೇಣಿಯು ವಿಶೇಷ ಭೂಪ್ರದೇಶ. ಇಲ್ಲಿ ಸಿಗುವಷ್ಟು ಉತ್ಕೃಷ್ಟ ಕಬ್ಬಿಣದ ಅದಿರು ವಿಶ್ವದಲ್ಲಿ ಬೇರೆಲ್ಲೂ ಸಿಗುವುದಿಲ್ಲ. ಇಂತಹ ಬೆಟ್ಟಸಾಲುಗಳನ್ನು ಕೆಐಒಸಿಎಲ್ ಕಂಪನಿಗೆ ದಶಕಗಳ ಅವಧಿಗೆ ಗುತ್ತಿಗೆಗೆ ಕೊಟ್ಟು, ಗಣಿಗಾರಿಕೆಯಿಂದ ಆಗಿರುವ ಅಪಾರ ಪರಿಸರ ನಾಶಕ್ಕೆ ಯಾರು ಹೊಣೆ? ಇದೀಗ ಅದರ ಬೆನ್ನಲ್ಲೇ ಅದೇ ಕಂಪನಿಗೆ ಬಳ್ಳಾರಿಯ ಗುಡ್ಡಗಳನ್ನೂ ಅದಿರು ಬಗೆಯುವುದಕ್ಕೆ ಗುತ್ತಿಗೆ ಮೇರೆಗೆ ವಹಿಸಿಕೊಡಲು ಮುಂದಾಗಿರುವುದರ ಕುರಿತು ಚರ್ಚೆ ನಡೆಯುತ್ತಿದೆ. ಇದು ಸಮೃದ್ಧ ಪ್ರದೇಶವನ್ನು ಮರುಭೂಮಿಯಾಗಿಸುವ ಸಂಗತಿ. ಕೆಐಒಸಿಎಲ್‌ಗೆ ತಿಂಗಳಿಗೆ ₹ 27 ಕೋಟಿ ನಷ್ಟವಾಗುತ್ತಿರುವ, ಅಲ್ಲಿನ 300 ಕಾರ್ಮಿಕರು ವಜಾಗೊಳ್ಳಲಿರುವ ಸುದ್ದಿ ಇತ್ತೀಚೆಗೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಎಲ್ಲರೂ ಕಂಪನಿಯ ಹಿತಾಸಕ್ತಿ ಮತ್ತು ನಷ್ಟದ ಬಗ್ಗೆಯೇ ಕಾಳಜಿ ವಹಿಸುವವರಾಗಿದ್ದಾರೆ ವಿನಾ ಆ ಕಂಪನಿಯಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಯಾರಿಗೂ ಕಳವಳವೇ ಇಲ್ಲವಾಗಿದೆ. ಪರಿಸರ ನಾಶ ನರಹತ್ಯೆಗೆ ಸಮನಾದ ಅಪರಾಧ. ಪರಿಸರಸಂಬಂಧಿತ ಅನಾಹುತಗಳಿಗೆ ಕಡಿವಾಣ ಹಾಕದೇ ಇದ್ದಲ್ಲಿ, ನಮ್ಮ ಮತ್ತು ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಕರಾಳವಾಗಲಿದೆ.