Roshani Evanna Pinto
ಶ್ರೀ ಚನ್ನ ಕೇಶವ ಸ್ವಾಮಿ
ಹಾಸನ ಜಿಲ್ಲೆಯ ಶಿಲ್ಪಕಲೆಯ ತವರೂರು ಬೇಲೂರು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ತಮ್ಮದೆಯಾದ ವಿಶಿಷ್ಟತೆಯನ್ನು ಮೆರೆದಿದೆ ತಾಲ್ಲೂಕಿನ ಅರ್ಧಭಾಗವು ಮಲೆನಾಡಿನಿಂದಲೂ, ಉಳಿದ ಅರ್ಧಭಾಗವು ಅರೆ ಮಲೆನಾಡಿನಿಂದಲೂ ಕೂಡಿದ್ದು ಕರ್ನಾಟಕದ ಅಥವಾ ಭಾರತದ ಕೀರ್ತಿಶಿಖರವನ್ನು ವಿಶ್ವ ಮಟ್ಟಕ್ಕೆ ಏರಿಸುವ ನಿಟ್ಟನಲ್ಲಿ ಇಲ್ಲಿನ ಜಗತ್ಪ್ರಸಿದ್ಧ ಅದ್ಭುತ ಶಿಲ್ಪಕಲಾ ಕೆತ್ತನೆಯಲ್ಲಿ ನಿರ್ಮಿಸಲ್ಪಟ್ಟಿರುವ, ಹೊಯ್ಸಳ ವಿಷ್ಣುವರ್ಧನನ ಕಾಲದ “ಶ್ರೀ. ಚನ್ನಕೇಶವ ಸ್ವಾಮಿ” ದೇವಾಲಯ, ಕೇವಲ ರಾಜಕೀಯವಾಗಿಯಷ್ಟೇ ಅಲ್ಲದೇ ಸಾಂಸ್ಕೃತಿಕವಾಗಿಯೂ ಕರ್ನಾಟಕ ಇತಿಹಾಸದಲ್ಲಿ ಪ್ರಭಾವ ಬೀರಿದ ಹೊಯ್ಸಳರು ಕರ್ನಾಟಕದ ಅನೇಕ ಕಡೆ ದೇವಾಲಯಗಳನ್ನು ನಿರ್ಮಿಸಿದ್ದಾರೆ. (ಅವುಗಳಲ್ಲಿ ಪ್ರಮುಖವಾದವುಗಳೆಂದರೆ - ಗದುಗಿನ”ವೀರನಾರಾಯಣ” ಮೇಲುಕೋಟೆಯ - “ಚಲುವನಾರಾಯಣ” ದೊಡ್ಡಗದ್ದವಳ್ಳಿಯ- ಪಂಚಲಿಂಗೇಶ್ವರ”, ಹಳೇಬೀಡಿನ - “ಹೊಯ್ಸಳೇಶ್ವರ” ದೇವಾಲಯಗಳು ಪ್ರಮುಖವಾದವುಗಳಾಗಿವೆ.) ಈ ಅರ್ಥದಲ್ಲಿ ಇವರ ಪ್ರಭಾವದಿಂದ ಬೇಲೂರು ಕೂಡ ಸಾಂಸ್ಕೃತಿಕವಾಗಿ ತನ್ನದೆ ಛಾಪನ್ನು ಮೈಗೂಡಿಸಿಕೊಂಡಿದೆ. ಹೀಗೆ ಸಾಂಸ್ಕೃತಿಕವಾಗಿ ತನ್ನದೇ ಮಹತ್ವದ ಸ್ಥಾನವನ್ನು ಹೊಂದಿರುವ ಬೇಲೂರು ಪಟ್ಟಣದಲ್ಲಿ ಬಹುಧರ್ಮಿಯ, ಬಹುಜನಾಂಗದವರು ವಾಸಿಸುತ್ತಿದ್ದು ಅವರುಗಳು ತನ್ನದೇಯಾದ ಜೀವನ ಕ್ರಮವನ್ನು ಅಳವಡಿಸಿಕೊಂಡಿದ್ದು ತಮ್ಮ ಆರಾಧ್ಯ ದೈವದ ಭಕ್ತಿಗಾಗಿ ಜಾತ್ರೆ, ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ ಈ ಜನಸಾಮಾನ್ಯರ ಜಾತ್ರೆಗಳನ್ನು ಒಂದೆಡೆ ಸಂಗ್ರಹಿಸಬೇಕೆಂದು ಆಸಕ್ತಿಯ ಜೊತೆಗೆ, ಜನಪದ ಜೀವನಾಡಿಯಂತಿರುವ ಜನರ ಈ ರೀತಿಯ ಆಚರಣೆಗಳನ್ನು ಸಂಗ್ರಹಿಸುವುದು ಆಧುನಿಕತೆಯ ಸಂದರ್ಭದಲ್ಲಿ ಅವಶ್ಯಕವಾಗಿದೆ. ಆ ಕಾರಣಕ್ಕಾಗಿ ಬೇಲೂರಿನ ಪಟ್ಟಣಕಷ್ಟೇ ಸೀಮಿತವಾಗಿರುವ ಇಲ್ಲಿನ ಜಾತ್ರೆಗಳನ್ನು ಬರಹದ ರೂಪದಲ್ಲಿ ಸಂಗ್ರಹಿಸಿ ಹಿಡಿದಿರುವ ಪ್ರಯತ್ನ ಮಾಡಿದ್ದೇನೆ.
ಶ್ರೀ ಚನ್ನ ಕೇಶವ ಸ್ವಾಮಿ ಜಾತ್ರೆ:- ಬೇಲೂರಿನ ಚನ್ನಕೇಶವ ಜಾತ್ರೆ ಪ್ರತಿ ಏಪ್ರಿಲ್ ತಿಂಗಳಿನಲ್ಲಿ ಹದಿನಾಲ್ಕು ದಿನಗಳ ಕಾಲ ವಿವಿಧ ರೀತಿಯ ಉತ್ಸವಗಳು ಹಾಗೂ ಎರಡು ದಿನ ರಥೋತ್ಸವ ನಡೆಯುತ್ತದೆ. ಹೊಯ್ಸಳ ಅರಸು ವಿಷ್ಣು ವರ್ಧನನ ಕಾಲದಲ್ಲಿ ನಿರ್ಮಿಸಲ್ಪಟ್ಟಿರುವ ಶ್ರೀ. ಚನ್ನಕೇಶವ ಸ್ವಾಮಿ ದೇವಸ್ಥಾನ ೪೪೦ ಅಡಿ ಉದ್ದ ೩೯೬ ಅಡಿ ಅಗಲ ವಿದ್ದು, ಸುತ್ತಲೂ ವಿವಿಧ ಚಿಕ್ಕ ದೇವಸ್ಥಾನಗಳಿವೆ, ದೇವಸ್ಥಾನ ಪೂರ್ವಭಿಮುಖವಾಗಿದೆ. ಮಹಾದ್ವಾರದ ಮೇಲೆ ದ್ರಾವಿಡ ರೀತಿಯಲ್ಲಿ ಕಟ್ಟಿದ ಎತ್ತರವಾದ ಗೋಪುರವಿದೆ. ದೇವಸ್ಥಾನ ಸುಮಾರು ೩ ಅಡಿ ಎತ್ತರವಾಗಿ ದೇವಾಲಯದಂತೆ ನಕ್ಷತ್ರಾಕಾರವಾಗಿರುವ ಜಗಲಿಯ ಮೇಲೆ ನಿರ್ಮಿತವಾಗಿದೆ. ದೇವಾಲಯದ ಒಳಭಾಗ ಮೂರು ಮುಖ್ಯವಾದ ಅಂಗಗಳಿಂದ ಕೂಡಿದೆ. ಗರ್ಭಗುಡಿ ಸುಕನಾಸಿ ಮತ್ತು ನವರಂಗದಿಂದ ಕೂಡಿದೆ. ಒಂದು ಆಳಿಗಿಂತಲೂ ಎತ್ತರವಾಗಿರುವ ಚನ್ನಕೇಶವನ ವಿಗ್ರಹ ಹಿಂದಿನ ಎರಡು ಕೈಯಲ್ಲಿ ಶಂಖ,ಚಕ್ರ, ಮುಂದಿನ ಕೈಗಳಲ್ಲಿ ಗದಾ ಪದ್ಮಗಳನ್ನು ಧರಿಸಿ ನಿಂತಿದೆ. ಇದರ ಹಿಂಭಾಗದಲ್ಲಿ ದಶಾವತಾರಗಳನ್ನು ಕೆತ್ತಿದ ಪ್ರಭಾವಳಿಯಿದೆ. ಮೂಲತ: ಬೇಲೂರಿನ ಈ ದೇವಾಲಯ ಮೂರು ದೇವಾಲಯಗಳ ಸಮುಚ್ಚಯವಾಗಿತ್ತು, ‘ವಿಜಯನಾರಾಯಣ’ ‘ಚನ್ನಕೇಶವ’ ‘ಲಕ್ಷ್ಮೀನಾರಾಯಣ’ ಎಂಬ ದೇವಾಲಯಗಳಿದ್ದವು ಲಕ್ಷ್ಮೀನಾರಾಯಣ ದೇಗುಲ ಇಂದು ಉಳಿದಿಲ್ಲ. ವಿಜಯ ನಾರಾಯಣ ದೇವಲಯವೆ ಇಂದಿನ ಪ್ರಖ್ಯಾತ ಚನ್ನಕೇಶವ ದೇವಾಲಯ. ದೇವಾಲಯದ ಬಲಭಾಗಕ್ಕೆ ‘ಸೌಮ್ಯನಾಯಕಿ’ ಮತ್ತು ಎಡಭಾಗಕ್ಕೆ ‘ರಂಗನಾಯಕಿ’ಯರ ದೇವಸ್ಥಾನಗಳಿವೆ. ಇವರಿಬ್ಬರು ಚನ್ನಕೇಶವನ ಹೆಂಡತಿಯರು ಎಂದು ಹೇಳಲಾಗುತ್ತದೆ. ಈ ದೇವಾಲಯಗಳ ತುಂಬ ಸುಂದರವಾದ ನಾನಾ ಭಂಗಿಯ ವಿಗ್ರಹಗಳು ಕಂಗಳಿಸುತ್ತಿವೆ.
ಚನ್ನಕೇಶವನ ಜಾತ್ರಾ ಮಹೋತ್ಸವಗಳು ಹದಿನಾಲ್ಕು ದಿವಸ ನಡೆಯುವ ಜಾತ್ರೆಯಲ್ಲಿ ರಥೋತ್ಸವಕ್ಕು ಮೊದಲು ಹಾಗೂ ರಥೋತ್ಸವದ ನಂತರ ವಿವಿಧ ಉತ್ಸವಗಳು ಶಿಷ್ಟ-ಧಾರ್‍ಮಿಕಾಚರಣೆಯ ಅನುಸಾರವಾಗಿ ನಡೆಸಲಾಗುತ್ತದೆ.
ಮೊದಲನೆ ದಿನದ ಜಾತ್ರಾಕಾರ್ಯಕ್ರಮ ಚನ್ನಕೇಶವ ಸ್ವಾಮಿಯ ಜಾತ್ರೆಯ ಅಂಗವಾಗಿ ನಡೆವ ಮೊದಲ ದಿನದ ಕಾರ್ಯಕ್ರಮದಲ್ಲಿ ನೆರವಾಗುವ ಸಮಸ್ತರಿಗೂ ಗೌರವವನ್ನು ಅರ್ಪಿಸುತ್ತಾರೆ. ನಂತರ ಅಂಕುರಾರ್ಪಣ ಪೂಜೆ ನಡೆಯುತ್ತದೆ. ಆನಂತರ ರಕ್ಷಾಬಂಧನ ನಡೆಸಿ ಅದೇ ದಿನ ರಾತ್ರಿ ಚನ್ನಕೇಶವನಿಗೆ ಶಾರದ ದೇವಿಯಂತೆ ಅಲಂಕಾರ ಮಾಡಲಾಗುತ್ತದೆ.
ಎರಡನೇ ದಿನದ ಉತ್ಸವ ಈ ದಿನ ಚನ್ನಕೇಶವ ಹಾಗೂ ಸೌಮ್ಯನಾಯಕಿ ಮತ್ತು ರಂಗ ನಾಯಕಿಯರನ್ನು ಪ್ರತ್ಯೇಕ ಆಸನದಲ್ಲಿಟ್ಟು ಮಾಂಗಲ್ಯ ಧಾರಣೆ ಮಾಡಿಸಲಾಗುತ್ತದೆ. ಮೂರನೆ ದಿನದ ಉತ್ಸವ ಕೇಶವನ ಉತ್ಸವಗಳು ನಡೆಯುತ್ತಿವೆ ಎಂಬುದರ ದ್ಯೂತಕವಾಗಿ ಭಕ್ತ ಮುದ್ರೆಯ ಗರುಡನ ಚಿತ್ರದ ಧ್ವಜವನ್ನು ಬರೆದು ಅದಕ್ಕೆ ಪ್ರಾಣ ಪ್ರತಿಷ್ಠೆ ಪೂಜಾದಿಗಳ ಮೂಲಕ ಮೆರವಣಿಗೆ ಮಾಡಿ ಗೌರವ ಪೂರ್ವಕವಾಗಿ ಗರುಡ ಪಟವನ್ನು ಧ್ವಜ ಸ್ತಂಭಕ್ಕೆ ಏರಿಸುತ್ತಾರೆ. ನಂತರ ‘ಚಂದ್ರ ಮಂಡಲಾರೋಹಣೋತ್ಸವ’ ಬೇರಿತಾಡನ ಪ್ರಕ್ರಿಯೆಯ ನಂತರ ಉತ್ಸವ ಮೂರ್ತಿಗಳನ್ನು ‘ಚಂದ್ರಮಂಡಲ’ ವಾಹನಕ್ಕೇರಿಸಿ ದೇವಸ್ಥಾನದ ಸಮೀಪದ ಎಂಟು ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ನಾಲ್ಕನೇ ದಿನದ ಜಾತ್ರೆ ಈದಿನ ಸೂರ್‍ಯ ಮಂಡಲಾರೋಹಣೋತ್ಸವ, ಅನಂತ ಪೀಠಾರೋಹಣೋತ್ಸವ, ಹಂಸ ವಾಹನೋತ್ಸವ ಮತ್ತು ಬೆಳ್ಳಿ ಮಂಟಪೋತ್ಸವವನ್ನು ಚನ್ನಕೇಶವ, ಸೌಮ್ಯನಾಯಕಿ ಮತ್ತು ರಂಗನಾಯಕಿಯರ ಉತ್ಸವ ಮೂರ್ತಿಗಳನಿಟ್ಟು ಕಾರ್ಯಕ್ರಮ ನಡೆಸುತ್ತಾರೆ. ಐದನೇ ದಿವಸದ ಉತ್ಸವ ಈ ದಿನ ಧಾರ್ಮಿಕಾಚರಣೆಗೆ ಅನುಗುಣವಾಗಿ ‘ಶೇಷವಾಹನೋತ್ಸವ’ ಉರುಟಣೆ (ಮೂರು ಉತ್ಸವ ಮೂರ್ತಿಗಳನ್ನು ಕೂರಿಸಿ ಹೂವಿನ ಚಂಡಾಟ, ತೆಂಗಿನ ಕಾಯಿ ಉರುಳು ಬಿಡುವುದು) ಹಂಸವಾಹನೋತ್ಸವ, ನಾಗೋಲಿ (ಉತ್ಸವ ಮೂರ್ತಿಗಳಿಗೆ ಹೋಮ, ಉಪಚಾರಾಧಿಗಳನ್ನು ಸಲ್ಲಿಸುವುದು) ದಿವ್ಯ ಬೆಳ್ಳಿ ಮಂಟಪೋತ್ಸವಗಳನ್ನು ನಡೆಸಲಾಗುತ್ತದೆ. ಆರನೇ ದಿನದ ಉತ್ಸವ ಈದಿನ ಚನ್ನಕೇಶವನ ದೇವಸ್ಥಾನದ ಬಲಭಾಗಕ್ಕೆ ಇರುವ ಶ್ರೀ. ರಾಮದೇವರ ಗುಡಿಯ ಮೂರ್ತಿಗೆ ಅಭಿಷೇಕವನ್ನು ಮಾಡಲಾಗುತ್ತದೆ. ಏಳನೆ ದಿನದ ಉತ್ಸವ ಏಳನೇ ದಿನದ ಕಾರ್ಯಕ್ರಮದಲ್ಲಿ ಹನುಮಂತೋತ್ಸವ ಮತ್ತು ಸಣ್ಣಗರುಡೋತ್ಸವಗಳು ವಿಶೇಷವಾಗಿ ನಡೆಯುತ್ತವೆ. ಎಂಟನೇ ದಿನದ ಉತ್ಸವ ಎಂಟನೆ ದಿನದ ಉತ್ಸವಗಳಲ್ಲಿ ವಿಶೇಷವಾಗಿ ಪ್ರಹ್ಲಾದ ಪರಿಪಲನೋತ್ಸವ ಮತ್ತು ಗರುಡೋತ್ಸವಗಳನ್ನು ನಡೆಸಲಾಗುತ್ತದೆ. ದೊಡ್ಡಗರುಡೋತ್ಸವ ಗರುಡನ ದೊಡ್ಡ ವಿನ್ಯಾಸವನ್ನು ಹೊಂದಿರುವ ದೊಡ್ಡ ಮೂರ್ತಿಯ ಮೇಲೆ ದೇವರ ಉತ್ಸವ ಮೂರ್ತಿಗಳನ್ನಿರಿಸಿ ಎಂಟು ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಇದನ್ನು ಸಂಜೆಗರುಡೋತ್ಸವ ಎಂದೂ ಕರೆಯುತ್ತಾರೆ.
ಚನ್ನಕೇಶವ ಸ್ವಾಮಿ ರಥೋತ್ಸವ ಶ್ರೀ ಚನ್ನಕೇಶವ ಸ್ವಾಮಿ ಜಾತ್ರೆಯೆಂದಾಕ್ಷಣ ತಕ್ಷಣ ನೆನಪಿಗೆ ಬರುವಂತದ್ದು ರತೋತ್ಸವ. ಸಾಮಾನ್ಯವಾಗಿ ಯಾವುದೇ ದೇವರ ಜಾತ್ರೆಯ ಸಂದರ್ಭದಲ್ಲಿ ರಥೋತ್ಸವ ನಡೆಯುವುದಾದರೆ ಒಂದೇ ದಿವಸ ಮಾತ್ರ ಆದರೆ ಚನ್ನಕೇಶವ ರಥೋತ್ಸವ ಎರಡು ದಿವಸ ನಡೆಯುವಂತಹುದು ವಿಶಿಷ್ಟವಾಗಿದೆ.
ರಥದ ವಿನ್ಯಾಸ ವಿಜಯನಗರ ಕಾಲದ ರಥವು ನಾಶಹೊಂದಿದ ಕಾರಣ ಮೈಸೂರಿನ ಅರಸು ಜಯಚಾಮರಾಜ ಒಡೆಯರು ಇಂದು ಇರುವ ರಥವನ್ನು ಉದ್ಘಾಟಿಸಿದರೆಂದು ತಿಳಿದು ಬರುತ್ತದೆ. ಈ ರಥವು ಚೌಕಾಕಾರದಿಂದ ಕೂಡಿದ ಕಾಷ್ಟ ರಥವಾಗಿದ್ದು ನಾನಾ ವಿಧಾನದ ನಕ್ಷೆಗಳಿಂದಅಲಂಕೃತವಾಗಿದ್ದು, ಚಿತ್ರಗಳಲ್ಲಿ ವಿಷ್ಣುವಿನ ವಿವಿಧ ರೂಪಗಳು ಇತರ ಕೆಲವು ದೇವತೆಗಳ ಚಿತ್ರಗಳಿಂದ ಕೂಡಿದ್ದು ಸುಮಾರು ೧೫ ಅಡಿ ಎತ್ತರವಿದ್ದು ಅದರ ಮೇಲೆ ಉತ್ಸವ ಮೂರ್ತಿ ಹಾಗೂ ಆಗಮಿಕರು (ಅರ್ಚಕರು) ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ.