ಪ್ಲಾಸ್ಟಿಕ್‌ ನಿಷೇಧ ಪರ ಹೈಕೋರ್ಟ್‌ನಲ್ಲಿ ಸರ್ಕಾರದ ಬ್ಯಾಟಿಂಗ್‌

ಬದಲಾಯಿಸಿ

ರಾಜ್ಯದಲ್ಲಿ ಪ್ಲಾಸ್ಟಿಕ್‌ ಉತ್ಪಾದನೆ, ಪೂರೈಕೆ ಮತ್ತು ಬಳಕೆ ನಿಷೇಧಿಸಿ ಹೊರಡಿಸಿರುವ ಆದೇಶವನ್ನು ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರ, ಪ್ಲಾಸ್ಟಿಕ್‌ ಬಳಕೆಯು ಪರಿಸರ, ಪ್ರಾಣಿ ಮತ್ತು ಮಾನವ ಜೀವಕ್ಕೆ ಅಪಾಯಕಾರಿ. ಪರಿಸರ ಸಂರಕ್ಷಣೆ ಮತ್ತು ಪರಿಸರದ ಅವನತಿ ತಡೆಯುವ ಉದ್ದೇಶದಿಂದ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಉತ್ಪಾದನೆ ಹಾಗೂ ಬಳಕೆ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಒಂದೊಮ್ಮೆ ನಿಷೇಧ ಹೇರದಿದ್ದರೆ ಮುಂದಿನ ದಿನಗಳಲ್ಲಿ "ಕರ್ನಾಟಕ ಪ್ಲಾಸ್ಟಿಕ್‌ ಡಂಪಿಂಗ್‌ ಯಾರ್ಡ್‌ ಹಾಗೂ ತ್ಯಾಜ್ಯ ನಗರಿ'ಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹೇಳಿದೆ.

ಪ್ಲಾಸ್ಟಿಕ್‌ ಉತ್ಪಾದನೆ, ಮಾರಾಟ ಹಾಗೂ ಬಳಕೆ ನಿಷೇಧಿಸಿ ಮಾರ್ಚ್‌ 11ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆನರಾ ಪ್ಲಾಸ್ಟಿಕ್‌ ಉತ್ಪಾದಕರು ಹಾಗೂ ವರ್ತಕರ ಸಂಘ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸೋಮವಾರ ಹೈಕೋರ್ಟ್‌ಗೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಈ ಸಮರ್ಥನೆ ನೀಡಲಾಗಿದೆ.

ತಜ್ಞರ ಸಮಿತಿಯ ವರದಿ ಪರಿಗಣಿಸಿ ಪ್ಲಾಸ್ಟಿಕ್‌ ಬಳಕೆಗೆ ನಿಷೇಧಿಸಲಾಗಿದೆ. 50 ಮೈಕ್ರಾನ್‌ಗಿಂತಲೂ ಹೆಚ್ಚಿನ ಗುಣಮಟ್ಟದ ಪ್ಲಾಸ್ಟಿಕ್‌ ಬಳಕೆಗೆ ಕೇಂದ್ರ ಸರ್ಕಾರವೇ ಅನುಮತಿ ನೀಡಿದೆ ಎನ್ನಲಾಗುತ್ತಿದೆಯಾದರೂ ಸಾರ್ವಜನಿಕರಿಗೆ ತಾವು ಬಳಸುತ್ತಿರುವ ಪ್ಲಾಸ್ಟಿಕ್‌ನ ನಿರ್ದಿಷ್ಟ ದಪ್ಪ ಪ್ರಮಾಣ ತಿಳಿಯುವವರೆಗೂ ಪ್ಲಾಸ್ಟಿಕ್‌ ತ್ಯಾಜ್ಯ (ನಿರ್ವಹಣೆ ಮತ್ತು ನಿಭಾಯಿಸುವಿಕೆ) ಅಧಿನಿಯಮ -2011ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗದು ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.

ಪ್ಲಾಸ್ಟಿಕ್‌ನಿಂದ ಪರಿಸರ, ಪ್ರಾಣಿ ಮತ್ತು ಮಾನವ ಜೀವಕ್ಕೆ ಅಪಾಯವಾಗುತ್ತಿರುವ ಬಗ್ಗೆ ಸಂಬಂಧಿಸಿದ ಎಲ್ಲಾ ಅಂಶ ಮತ್ತು ಪ್ರತಿದಿನ ಉತ್ಪಾದನೆಯಾಗುತ್ತಿರುವ ಪ್ಲಾಸ್ಟಿಕ್‌ ಪ್ರಮಾಣ ಪರಿಗಣಿಸಿ ಪ್ಲಾಸ್ಟಿಕ್‌ ನಿಷೇಧ ತೀರ್ಮಾನ ತೆಗೆದುಕೊಳ್ಳಲಾಗಿದೆ. ಜರ್ಮಿನಿ, ಸೌತ್‌ ಆಫ್ರಿಕಾ, ಆಸ್ಟ್ರೇಲಿಯಾ, ಅಮೆರಿಕದ ಕೆಲ ರಾಜ್ಯಗಳು ಹಾಗೂ ಚೀನಾ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಪ್ಲಾಸ್ಟಿಕ್‌ ನಿಷೇಧಿಸಿವೆ. ಭಾರತದ ಕೆಲ ರಾಜ್ಯಗಳು ಸಹ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿವೆ. ಮೇಲಾಗಿ ಕೇಂದ್ರ ಸರ್ಕಾರ ನೀಡಿದ ಅಧಿಕಾರದನ್ವಯವೇ ರಾಜ್ಯ ಸರ್ಕಾರ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಸಂಪೂರ್ಣ ನಿಷೇಧಿಸಿ ಆದೇಶಿಸಿದೆ ಎಂದು ಸರ್ಕಾರ ಹೈಕೋರ್ಟ್‌ ಗಮನಕ್ಕೆ ತಂದಿದೆ.

ರಾಜ್ಯ ಸರ್ಕಾರ ಪರಿಸರ ಸಂಕ್ಷಣೆ ಕಾಯ್ದೆ -1988ರ ಸೆಕ್ಷನ್‌ 5ರಡಿ ಅಧಿಕಾರ ಬಳಸಿ ಪ್ಪಾಸ್ಟಿಕ್‌ ಉತ್ಪನ್ನಗಳಾದ ಕ್ಯಾರಿಬ್ಯಾಗ್‌, ಭಿತ್ತಿಪತ್ರ, ತೋರಣ, ಫ್ಲೆಕ್ಸ್‌, ಬಾವುಟ, ಲೋಟ, ಮೈಕ್ರೋಬೀಡ್ಸ್‌, ಊಟದ ಮೇಜಿನ ಮೇಲೆ ಹರಡುವ ಹಾಳೆ, ಚಮಚ, ಥರ್ಮೋಕೋಲ್‌ ನಿಷೇಧಿಸಿದೆ. ಪರಿಸರ ಸಂರಕ್ಷಣೆ ಕಾಯ್ದೆಯಡಿ ಹೊರಡಿಸಿದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ದಲ್ಲಿ ಪ್ರಶ್ನಿಸಬೇಕು. ಹೀಗಾಗಿ ಅರ್ಜಿದಾರು ಸಲ್ಲಿಸಿರುವ ಈ ಅರ್ಜಿ ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ತಿಳಿಸಿರುವ ಸರ್ಕಾರ, ಅರ್ಜಿ ವಜಾಗೊಳಿಸುವಂತೆ ಕೋರಿದೆ.

ಒಮ್ಮೆಲೇ ನಿಷೇಧ ಏಕೆ: ಕೋರ್ಟ್‌ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಪ್ರತಿಕ್ರಿಯಿಸಿ, ಹಂತ ಹಂತವಾಗಿ ಪ್ಲಾಸ್ಟಿಕ್‌ ನಿಷೇಧಿಸಬಹುದಾಗಿತ್ತು. ಆದರೆ, ಒಂದೇ ಬಾರಿಗೆ ನಿಷೇಧಿಸುವ ತುರ್ತು ಏನಿತ್ತು? ಬಹುತೇಕ ಪ್ಲಾಸ್ಟಿಕ್‌ ಉತ್ಪಾದಕರು ಸಣ್ಣ ಕೈಗಾರಿಕೆ ಹೊಂದಿದ್ದು, ಅದರ ಸ್ಥಾಪನೆಗೆ ಮಾಡಿದ ಸಾಲ ತೀರಿಸಬೇಕಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಅಡ್ವೋಕೇಟ್‌ ಜನರಲ್‌ ಎಂ.ಆರ್‌.ನಾಯಕ್‌ ಉತ್ತರಿಸಿ, 2011ರಲ್ಲೇ ಪ್ಲಾಸ್ಟಿಕ್‌ ನಿಷೇಧಿಸಲು ತೀರ್ಮಾನಿಸಲಾಗಿತ್ತು. ಇದು ಅರ್ಜಿದಾರರಿಗೂ ಗೊತ್ತಿದೆ. ಹೀಗಾಗಿ ಪ್ಲಾಸ್ಟಿಕ್‌ ನಿಷೇಧ ಹೇರಿರುವುದು ಏಕಾಏಕಿ ಕೈಗೊಂಡ ತುರ್ತು ನಿರ್ಧಾರವಲ್ಲ ಎಂದು ತಿಳಿಸಿದರು. ಪೀಠ, ಮಂಗಳವಾರಕ್ಕೆ ವಿಚಾರಣೆ ಮುಂದೂಡಿತು.