ಸದಸ್ಯ:PAVITHRA SHETTY DERLAKKI/ನನ್ನ ಪ್ರಯೋಗಪುಟ

ಮೇಘಾಲಯ ಮಹಿಳೆಯರ ಸಾಂಪ್ರಾದಾಯಿಕ ಉಡುಗೆಗಳು ಬದಲಾಯಿಸಿ

ಈಶಾನ್ಯ ಭಾರತದ ಸುಂದರ ರಾಜ್ಯಗಳಲ್ಲಿ ಮೇಘಾಲಯವು ಒಂದು. ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಮೇಘಾಲಯ ಹೆಸರುವಾಸಿ. ಅತ್ಯಂತ ಶಾಂತಿಯುತ ಮತ್ತು ಪ್ರಶಾಂತ ವಾತಾವರಣವನ್ನು ಹೊಂದಿರುವ ಮೇಘಾಲಯದಲ್ಲಿ ಗಾರೊ, ಖಾಸಿ, ಜಯಂತಿಯಾಗಳಂತಹ ಹಲವಾರು ಬುಡಕಟ್ಟು ಜನಾಂಗದವರು ವಾಸಿಸುತ್ತಾರೆ. ಅಲ್ಲಿನ ಜನರು ಧರಿಸುವ ಉಡುಪುಗಳು ಆ ರಾಜ್ಯದ ಸಂಸ್ಕøತಿ, ಆಚರಣೆ, ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ. ಉಡುಪುಗಳ ಶೈಲಿಯಲ್ಲಿ ಸರಳತೆ ಇದ್ದರೂ ಹೆಚ್ಚು ಆಕರ್ಷಿಸುತ್ತದೆ.

ಮೇಘಾಲಯದ ಮಹಿಳೆಯರ ಸಾಂಪ್ರದಾಯಿಕ ಉಡುಗೆಗಳು ಬದಲಾಯಿಸಿ

ಮೇಘಾಲಯದ ಮಹಿಳೆಯರ ಸಾಂಪ್ರಾದಾಯಿಕ ಉಡುಗೆಯನ್ನು ಜೈನ್ಸೆನ್ ಎಂದು ಕರೆಯಲಾಗುತ್ತದೆ. ಈ ಉಡುಪನ್ನು ಮಲ್ಬೇರಿ ರೇಷ್ಮೆಗಳಿಂದ ತಯಾರಿಸಲಾಗುತ್ತದೆ. ಈ ಉಡುಪು ಹೊಲಿಗೆ ರಹಿತವಾಗಿದ್ದು, ದೇಹದ ಸುತ್ತಲೂ ಸುತ್ತಲಾಗುತ್ತದೆ. ಮಲ್ಬೇರಿ ರೇಷ್ಮೆಯನ್ನು ಮೇಘಾಲಯದ ಗ್ರಾಮಾಂತರ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಮೇಘಾಲಯ ಮಹಿಳೆಯರು ಬಳಸುವ ಮತ್ತೊಂದು ಪ್ರಮುಖ ಉಡುಪು ‘ಎಂಡಿ ಶಾಲ್’ ಈ ಮಲ್ಬೇರಿ ರೇಷ್ಮೇಗಳಿಂದ ತಯಾರಿಸಲ್ಪಡುತ್ತದೆ.

ಗಾರೋ ಟ್ರೈಬ್ ಬದಲಾಯಿಸಿ

ಗಾರೋ ಸಮುದಾಯದವರ ಉಡುಪುಗಳು ಅವರ ಸಾಂಪ್ರಾದಾಯಕತೆಯ ಸೂಚಕವಾಗಿರುತ್ತದೆ. ಗಾರೋ ಬುಡಕಟ್ಟು ಜನಾಂಗದವರು ಧರಿಸುವ ಬಟ್ಟೆಗಳು ಅವರ ವಾಸಸ್ಥಾನದ ಆಧಾರದ ಮೇಲೆ ಬದಲಾಗುತ್ತದೆ. ಗಾರೋ ಬೆಟ್ಟಗಳಿಂದ ದೂರದ ಗ್ರಾಮಗಳಲ್ಲಿ ವಾಸಿಸುವ ಗಾರೋ ಸ್ತ್ರೀಯರು ಸೊಂಟದ ಸುತ್ತಲೂ ಸಣ್ಣ ಬಟ್ಟೆಯನ್ನು ಧರಿಸುತ್ತಾರೆ. ದಟ್ಟವಾದ ಜನಸಂಖ್ಯೆ ಅಥವಾ ಕಿಕ್ಕಿರಿದ ಜನಸಂಖ್ಯೆ ಇರುವ ಸ್ಥಳಗಳಲ್ಲಿ ವಾಸಿಸುವ ಗಾರೋ ಮಹಿಳೆಯರು ಹತ್ತಿಯಿಂದ ತಯಾರಿಸಿದ ಉದ್ದದ ಉಡುಪನ್ನು ಧರಿಸುತ್ತಾರೆ.

ಗಾರೋ ಸಮುದಾಯಕ್ಕೆ ಒಳಪಟ್ಟ ಮಹಿಳೆಯರು ಕುಪ್ಪಸ ಮತ್ತು ಕೈಯಿಂದ ತಯಾರಿಸಿದ ಢಕ್ಮಾಂಡಾ ಹೆಸರಿನ ಲುಂಗಿಯನ್ನು ಧರಿಸುತ್ತಾರೆ. ಢಕ್ಮಾಂಡಾ 6 ರಿಂದ 10 ಇಂಚಿನಷ್ಟು ಅಗಲವಾದ ಬಾರ್ಡರನ್ನು ಹೊಂದಿದ್ದು, ಹೂವಿನ ಚಿತ್ರಗಳನ್ನು ಹೊಂದಿರುತ್ತವೆ. ಈ ಜನಾಂಗದವರು ತಮ್ಮ ಉಡುಪಿನ ಜೊತೆಗೆ ‘ಕಾಟಿಪ್’ ಎನ್ನುವ ಪೇಟವನ್ನು ಧರಿಸುತ್ತಾರೆ. ಅವರು ಧರಿಸುವ ಉಡುಪನ್ನು ಅವರೇ ನೇಯ್ಗೆ ಮಾಡುತ್ತಾರೆ. ಚಿಪ್ಪು ಮತ್ತು ಮಣಿಗಳಿಂದ ಅವುಗಳನ್ನು ಅಲಂಕರಿಸುತ್ತಾರೆ.

ಹಬ್ಬ-ಹರಿದಿನಗಳು, ಜಾತ್ರೆ-ಉತ್ಸವಗಳ ಸಂದರ್ಭಗಳಲ್ಲಿ ಮಹಿಳೆಯರು ಬಳೆಗಳು, ಆಭರಣಗಳು, ತಲೆ ಉಡುಪುಗಳನ್ನು ಧರಿಸುತ್ತಾರೆ. ತಲೆ ಬ್ಯಾಂಡ್ಗಳನ್ನು ಹಾರ್ನ್‍ಬಿಲ್ ಹಕ್ಕಿಯ ಗರಿಗಳು ಮತ್ತು ವಿವಿಧ ಬಣ್ಣಗಳ ಮಣಿಗಳಿಂದ ವಿನ್ಯಾಸಗೊಳಿಸಲಾಗುತ್ತದೆ. ಗಾರೋ ಮಹಿಳೆಯರು ಆಭರಣಗಳಿಗೂ ಹೆಚ್ಚು ಆಧ್ಯತೆ ನೀಡುತ್ತಾರೆ. ನಾಡೋಂಗ್ಬಿ ಎನ್‍ಆರ್ ಸೈಶಾ(ಕಿವಿಯೋಲೆ) , ಜಾಕ್ಸನ್ (ಕೈಬಳೆ), ರಿಪೊಕ್ (ನೆಕ್ಲಸ್) ಮುಂತಾದ ಆಭರಣಗಳನ್ನು ಧರಿಸುತ್ತಾರೆ.

ಖಾಸಿ ಟ್ರೈಬ್ ಬದಲಾಯಿಸಿ

ಖಾಸಿ ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆಯರು ಜಯ್ಸೀನ್ ಹಾಗೂ ಕುಪ್ಪಸವನ್ನು ಧರಿಸುತ್ತಾರೆ. ಈ ಜಯ್ಸೀನ್ ಸೊಂಟದಿಂದ ಪಾದದವರೆಗೂ ಆವರಿಸುತ್ತದೆ.  ಜಯ್ಸೀನ್ ಮತ್ತು ಕುಪ್ಪಸದ ಮೇಲೆ ಟ್ಯಾಪ್‍ಮೋಹ್ ಖ್ಲೈಹ್ ಎಂಬ ಹೆಸರಿನ ಶಾಲನ್ನು ಧರಿಸಲಾಗುತ್ತದೆ. ಇದು ಏಪ್ರಾನ್‍ನ್ನು ಪ್ರತಿನಿಧಿಸುತ್ತದೆ. ಖಾಸಿ ಮಹಿಳೆಯರು ‘ಕಾ ಜೈನ್ಸೇಮ್ ಧಾರ’ದಂತಹ ವಿಶೇಷ ಸಂದರ್ಭದಲ್ಲಿ ಅಸ್ಸಾಂ ಮುಗ ರೇಷ್ಮೆ ಬಟ್ಟೆಯನ್ನು ಧರಿಸುತ್ತಾರೆ. ಈ ಜನಾಂಗದ ಹಿರಿಯ ಮಹಿಳೆಯರು ಉಣ್ಣೆಯಿಂದ ತಯಾರಿಸಿದ  ‘ಜೈನ್‍ಕುಪ್’ನ್ನು ತೊಡುತ್ತಾರೆ. ಸ್ತ್ರೀಯರು ಬಳಸುವ ಸಾಂಪ್ರಾದಾಯಿಕ ‘ಧಾರಾ’ ಅಥವಾ ‘ಜೈನ್ಸೀಮ್’ ಉಡುಗೆಯು ಹಲವಾರು ಬಟ್ಟೆಯ ತುಣುಕುಗಳಿಂದ ವಿನ್ಯಾಸಗೊಳಿಸಲಾಗಿದ್ದು, ಇದನ್ನು ಉಟ್ಟಾಗ ದೇಹವು ಸಿಲಿಂಡರ್ ಆಕಾರವನ್ನು ಹೋಲುತ್ತದೆ. ಅಲ್ಲದೆ ತಮ್ಮ ಉಡುಪಿಗೆ ಹೋಲುವ, ಸೌಂದರ್ಯವನ್ನು ಹೆಚ್ಚಿಸುವಂತೆ ಚಿನ್ನದ ಅಥವಾ ಬೆಳ್ಳಿಯಿಂದ ತಯಾರಿಸಿದ ವಿವಿಧ ಬಗೆಯ ಆಭರಣಗಳನ್ನು ಕೂಡ ಧರಿಸುತ್ತಾರೆ.

ಖಾಸಿ ಜನಾಂಗದ ಪ್ರಮುಖ ಹಬ್ಬಗಳಲ್ಲಿ ಒಂದಾದ ‘ಕಾ ಶಾದ್ ಸುಕ್ ಮಿನ್ಸೆಮ್’ ಉತ್ಸವದ ಸಂದರ್ಭದಲ್ಲಿ ಖಾಸಿ ನೃತ್ಯಗಾರ್ತಿಯರು ಸೊಂಟದಿಂದ ಪಾದದವರೆಗಿನ ಉದ್ದದ ಬಟ್ಟೆಯನ್ನು ಹಾಗೂ ಬಗೆ ಬಗೆಯ ವಿನ್ಯಾಸಗಳಿರುವ ಉದ್ದ ತೋಳಿನ ಕುಪಸ್ಪವನ್ನು ತೊಡುತ್ತಾರೆ. ಇದರ ಮೇಲೆ ಆಯಾತಾಕಾರದ ಅಡ್ಡಾದಿಡ್ಡಿ ಚಿನ್ನದ ಅಥವಾ ಬೆಳ್ಳಿಯ ಎಳೆಗಳಿಂದ ಅಲಂಕರಿಸಲ್ಪಟ್ಟ ಶಾಲನ್ನು ಧರಿಸಲಾಗುತ್ತದೆ. ಜೊತೆಗೆ ಕೆಂಪು ಹವಳ ಮತ್ತು ಮಣಿಗಳಿಂದ ತಯಾರಿಸಲ್ಟಟ್ಟ ನೆಕ್ಲೆಸ್, ಚಿನ್ನದ ಕಿವಿಯೋಲೆಗಳು, ಬೆಳ್ಳಿಯ ಹಾರಗಳು, ಬೆಳ್ಳಿಯ ಕಿರೀಟವನ್ನು ಬಳಸುತ್ತಾರೆ.

ಜಯಂತಿಯಾ ಟ್ರೈಬ್ ಬದಲಾಯಿಸಿ

ಇತರ ಬುಡಕಟ್ಟು ಜನಾಂಗಗಳಿಗೆ ಹೋಲಿಸಿದರೆ ಜಯಂತಿಯಾ ಬುಡಕಟ್ಟು ಜನಾಂಗದ ಜನರು ಹೆಚ್ಚಾಗಿ ಸಾಂಪ್ರಾದಾಯಿಕ ಉಡುಪನ್ನು ಧರಿಸುತ್ತಾರೆ. ಸುಗ್ಗಿ ಋತುವಿನ ಸಮಯದಲ್ಲಿ ತಲೆಯನ್ನು ಮುಚ್ಚಿಕೊಳ್ಳಲು ‘ಕಿರ್ಷಾ’ ಎನ್ನುವ ಸಣ್ಣ ತುಂಡು ಬಟ್ಟೆಯನ್ನು ಬಳಸುತ್ತಾರೆ. ಅವರು ವೆಲ್ವೇಟ್ ಕುಪ್ಪಸ ಮತ್ತು ಥೋಹ್ ಖಿರ್ವಾಂಗ್ ಎನ್ನುವ ಪಾದದವರೆಗಿನ ಉದ್ದದ ಸಾರೋಂಗನ್ನು ತೊಡುತ್ತಾರೆ.

ಅಲ್ಲದೆ ಮಹಿಳೆಯರು ಅಸ್ಸಾಂ ಮುಗ ರೇಷ್ಮೆಯಿಂದ ತಯಾರಿಸಿದ ಮೇಲಂಗಿಯನ್ನು ಉಡುತ್ತಾರೆ. ಜಯಂತಿಯಾ ಬುಡಕಟ್ಟು ಜನಾಂಗದ ಮಹಿಳೆಯರು ಹಬ್ಬ, ಉತ್ಸವಗಳ ಸಂದರ್ಭಗಳಲ್ಲಿ ಆಡಂಭರದ ವೇಷಭೂಷಣಗಳನ್ನು ಧರಿಸುತ್ತಾರೆ. ಚಿನ್ನ, ಬೆಳ್ಳಿ, ಹವಳಗಳಿಂದ ತಯಾರಿಸಿದ ಆಭರಣಗಳನ್ನು ಬಳಸುತ್ತಾರೆ. ‘ಕಿನ್ಜ್‍ರಿ ಕ್ಸಿಯಾರ್’ ವಿಶೇಷ ರೀತಿಯ ಚಿನ್ನದ ಪೆಂಡೆಂಟ್ ಆಗಿದ್ದು, ಜಯಂತಿಯಾ ಮತ್ತು ಖಾಸಿ ಜನಾಂಗದ ಮಹಿಳೆಯರು ಬಳಸುತ್ತಾರೆ.

ಮದುವೆ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಮೇಘಾಲಯ ಮಹಿಳೆಯರ ಉಡುಗೆಗಳು

ಭಾರತದ ಇತರ ಸಮುದಾಯಗಳಂತೆ ಮೇಘಾಲಯದ ಬುಡಕಟ್ಟು ಜನಾಂಗದವರು ವಿವಾಹ ಸಮಾರಂಭವನ್ನು ಬಹಳ ಸಡಗರದಿಂದ, ವಿಜೃಂಭಣೆಯಿಂದ ಆಚರಿಸುತ್ತಾರೆ. ಮೇಘಾಲಯದಲ್ಲಿ ಮದುವೆ ಶಾಸ್ತ್ರಗಳಲ್ಲಿ ಬಳಸುವ ಪ್ರತಿ ಪದವು ಅವರ ಸಾಂಪ್ರದಾಯಕತೆಯ ಪ್ರತೀಕವಾಗಿರುತ್ತದೆ. ಅಲ್ಲಿನ ಜನರು ಹೆಚ್ಚಾಗಿ ಮಾತೃಪ್ರಧಾನ ಕುಟುಂಬ ಪದ್ಧತಿಯನ್ನು ಅನುಸರಿಸುತ್ತಿದ್ದು ಮಹಿಳೆಯ ಪಾತ್ರ ಪ್ರಮುಖವಾಗಿರುತ್ತದೆ.

ಮೇಘಾಲಯದ ಮದುವೆಗಳಲ್ಲಿ ಸಂಪ್ರದಾಯಗಳಂತೆ, ಉಡುಪಿಗೂ ವಿಶಿಷ್ಟ ಸ್ಥಾನವಿದೆ. ಮದುವೆಯ ದಿನದಂದು ವಧು, ಬಂಧುಮಿತ್ರರು ಸೇರಿದಂತೆ ಮಹಿಳೆಯರು ಸಾಂಪ್ರಾದಾಯಿಕ ಖಾಸಿ ಉಡುಪಾದ ‘ಧಾರ’ ಅಥವಾ ‘ಜೈನಮ್’ನ್ನು ಧರಿಸುತ್ತಾರೆ. ಹಲವು ಬಟ್ಟೆಗಳ ತುಂಡುಗಳಿಂದ ಈ ಉಡುಪನ್ನು ತಯಾರಿಸಲಾಗುತ್ತದೆ. ವಿಶೇಷ ವಿನ್ಯಾಸದಿಂದ ಕೂಡಿರುತ್ತದೆ. ಜೊತೆಗೆ ಚಿನ್ನ ಮತ್ತು ಬೆಳ್ಳಿಯಿಂದ ತಯಾರಿಸಿದ ನೆಕ್ಲೆಸ್, ಬೆಳ್ಳಿಯ ಕಿರೀಟ, ಚಿನ್ನದ ಕಿವಿಯೋಲೆಯನ್ನು ಧರಿಸುತ್ತಾರೆ. ‘ಕಿನ್ಜ್‍ರಿ ಕ್ಸಿಯಾರ್’ ಎನ್ನುವ ವಿಶೇಷ ರೀತಿಯ ಚಿನ್ನದ ಪೆಂಡೆಂಟ್‍ನ್ನು ಈ ಸಂದರ್ಭದಲ್ಲಿ ಬಳಸುತ್ತಾರೆ.

ಇನ್ನು ಹಬ್ಬ-ಹರಿದಿನ, ಜಾತ್ರೆ-ಉತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ಮೇಘಾಲಯ ಮಹಿಳೆಯರು ‘ಧಾರ’ ಎನ್ನುವ ಹೆಸರಿನ ವಿಶೇಷ ಉಡುಪನ್ನು ಧರಿಸುತ್ತಾರೆ. ಖಾಸಿ ಮಹಿಳೆಯರು ಧರಿಸುವ ಉಡುಪುಗಳು ದುಬಾರಿ ಮಲ್ಬೇರಿ ರೇಷ್ಮೆ ನೂಲುಗಳಿಂದ ತಯಾರಿಸಲಾಗಿದ್ದು, ವಿವಿಧ ಬಣ್ಣಗಳು ಹಾಗೂ ಬಾರ್ಡರ್‍ನ್ನು ಹೊಂದಿರುತ್ತವೆ.

‘ಬನಾರಸ್ ಧಾರಾ’ ಇಂದಿನ ಆಧುನಿಕ ದಿನಗಳಲ್ಲಿ ಪ್ರಚಲಿತದಲ್ಲಿರುವ ಉಡುಗೆಯಾಗಿದೆ. ಅವು ಮಾರುಕಟ್ಟೆಯಲ್ಲಿ ಸುಲಭ ಬೆಲೆಯಲ್ಲಿ ಲಭ್ಯವಿದೆ. ‘ಬನಾರಸ್ ಧಾರಾ’ ಬನಾರಸ್ ಸೀರೆಯಂತೆಯೇ ಹೆಚ್ಚು ಜನಪ್ರಿಯ. ವಿಶಿಷ್ಟವಾಗಿ ವಿನ್ಯಾಸಗೊಳಿಸಿದ, ನುಣ್ಣಗೆ ನೇಯ್ದ ರೇಷ್ಮೆಯ ನೂಲುಗಳಿಂದ ಈ ಉಡುಪನ್ನು ತಯಾರಿಸಲಾಗಿದೆ. ಬೇರೆ ಉಡುಪಿಗೆ ಹೋಲಿಸಿದರೆ ಬನಾರಸ್ ಧಾರಾವು ಉತ್ತಮ ರೇಷ್ಮೆ ನೂಲುಗಳು ಮತ್ತು ಶ್ರೀಮಂತ ಕಸೂತಿಯಿಂದ ಕೂಡಿರುತ್ತದೆ. ಬಹುತೇಕ ಮೇಘಾಲಯದ ಮಹಿಳೆಯರು ಈ ಉಡುಪನ್ನು ಬಳಸುತ್ತಾರೆ. ಆದ್ರೆ ಈ ಬನಾರಸ್ ಧಾರಾದ ಆಗಮನ ಮೇಘಾಲಯದ ಸಾಂಪ್ರಾದಾಯಿಕ ಉಡುಪುಗಳ ಮೇಲೆ ಪರಿಣಾಮ ಬೀರಿರುವುದನ್ನು ಅಲ್ಲಗಳಿಯುವಂತಿಲ್ಲ.

References:

https://www.holidify.com/pages/meghalaya-dresses-95.html

https://www.nelive.in/meghalaya/fashion/traditional-costumes-meghalaya-tribes

https://www.urbanindia.in/blogs/fashion-blogs/the-traditional-dress-of-meghalaya

https://www.utsavpedia.com/weddings-festivals/reflecting-matrilineal-dominance-meghalaya-wedding/

http://traditionalclothingindia.blogspot.in/2013/06/traditional-costumes-of-meghalaya-for.html