ಕೆಮ್ಮಣ್ಣುಗುಂಡಿ

ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಒಂದು ಗಿರಿಧಾಮ. ಸಮುದ್ರ ಮಟ್ಟದಿಂದ ೧೪೩೪ ಮೀ ಎತ್ತರದಲ್ಲಿರುವ ಈ ಊರು, ಬೆಂಗಳೂರಿನಿಂದ ಸುಮಾರು ೨೫೦ ಕಿ.ಮೀ ದೂರದಲ್ಲಿ ಹಾಗು ಚಿಕ್ಕಮಗಳೂರಿನಿಂದ ೫೫ ಕಿಲೋ ಮೀಟರ್ ದೂರದಲ್ಲಿದೆ.. ಇದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬೇಸಿಗೆ ತಾಣವಾಗಿದ್ದರಿಂದ ಇದನ್ನು "ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ" ಎಂದೂ ಕರೆಯುತ್ತಾರೆ. ಇಲ್ಲಿನ ಸುಂದರ ಉದ್ಯಾನಗಳು, ಹಸಿರು ಪ್ರಕೃತಿ, ನೀರಿನ ಅಬ್ಬಿಗಳು ಮತ್ತು ಪಶ್ಚಿಮ ಘಟ್ಟಗಳ ಮನೋಹರವಾದ ಪರ್ವತಗಳು ಈ ಸ್ಥಳವನ್ನು ಆಕರ್ಷಣೀಯವಾಗಿ ಮಾಡಿವೆ. ಪರ್ವತಾರೋಹಣ ಮೊದಲಾದ ಚಟುವಟಿಕೆಗಳಿಗೆ ಕೆಮ್ಮಣ್ಣುಗುಂಡಿಯ ಸುತ್ತಮುತ್ತಲಿನ ಗಿರಿಬೆಟ್ಟಗಳಲ್ಲಿ ಅವಕಾಶವಿದೆ.

ಕನ್ನಡದ ಹಲವಾರು ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಕೆಲವು ಪ್ರಮುಖ ಚಿತ್ರಗಳೆಂದರೆ - ಪ್ರೇಮದ ಕಾಣಿಕೆ, ಆನಂದ್, ಪ್ರೀತಿ ಮಾಡು ತಮಾಷೆ ನೋಡು.

ಕೆಮ್ಮಣ್ಣುಗುಂಡಿಯಲ್ಲಿ ಯಥೇಚ್ಚವಾಗಿ ಕಬ್ಬಿಣದ ಅದಿರು ದೊರಕುತ್ತದೆ. ಭದ್ರಾವತಿಯ ಸರ್.ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ

ಕೆಮ್ಮಣ್ಣುಗುಂಡಿಯಿಂದ ಅದಿರು ಸರಬರಾಜಾಗುತಿತ್ತು.

  • ಪ್ರೇಕ್ಷಣೀಯ ಸ್ಥಳಗಳು ರಾಜ ಭವನ

ರಾಜ ಭವನ ಕೆಮ್ಮಣ್ಣುಗುಂಡಿಯಲ್ಲಿರುವ ಒಂದು ಅತಿಥಿ ಗೃಹ. ಸುತ್ತಲ ಪರ್ವತಗಳ ಮತ್ತು ಸೂರ್ಯಾಸ್ತದ ದೃಶ್ಯಗಳು ಇಲ್ಲಿಂದ ಬಹಳ ಚೆನ್ನಾಗಿ ಕಾಣುತ್ತವೆ. ಇಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ಬೆಳೆಸಿದ ಹೂವಿನ ಉದ್ಯಾನಗಳೂ ಇವೆ.

  • ಜೆಡ್ ಪಾಯಿಂಟ್

ಜೆಡ್ ಪಾಯಿಂಟ್ ದಾರಿಯಲ್ಲಿರುವ ಶಾಂತಿ ಜಲಪಾತ

ಕೆಮ್ಮಣ್ಣುಗುಂಡಿಯಿಂದ ಬೆಟ್ಟದ ದಾರಿಯಲ್ಲಿ ಸುಮಾರು ೩೦ ನಿಮಿಷಗಳ ನಡಿಗೆಯ ದೂರದಲ್ಲಿರುವ ಸ್ಥಳ. ಇದೂ ಸಹ ಇಲ್ಲಿಂದ ಕಾಣುವ ಸೂರ್ಯಾಸ್ತದ ದೃಶ್ಯಕ್ಕೆ ಪ್ರಸಿದ್ಧ.

  • ಹೆಬ್ಬೆ ಜಲಪಾತ

ರಾಜ ಭವನದಿಂದ ಸುಮಾರು ೮ ಕಿಮೀ ದೂರದಲ್ಲಿರುವ ಜಲಪಾತ. ಇಲ್ಲಿ ನೀರು ೧೬೮ ಮೀ ಎತ್ತರದಿಂದ ಎರಡು ಹಂತಗಳಲ್ಲಿ (ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ) ಬೀಳುತ್ತದೆ.