ಭೂಮಿ ಮತ್ತು ಚಂದ್ರನ ನಡುವೆ ಸರಾಸರಿ ದೂರವು ೩೮೪,೩೯೯ ಕಿ.ಮೀ.ಗಳು. ಈ ದೂರದಲ್ಲಿ, ಚಂದ್ರನಿಂದ ಪ್ರತಿಫಲಿತವಾದ ಬೆಳಕು ಭೂಮಿಯನ್ನು ತಲುಪಲು ಸುಮಾರು ೧.೩ ಕ್ಷಣಗಳು ಹಿಡಿಯುತ್ತದೆ.

ಚಂದ್ರನ ವ್ಯಾಸವು ೩,೪೭೪ ಕಿ.ಮೀ.ಗಳಿದ್ದು (೨,೧೫೯ ಮೈಲಿಗಳು),[೧] (ಭೂಮಿಗಿಂತ ೩.೭ ಪಟ್ಟು ಕಡಿಮೆ), ಇದು ಸೌರಮಂಡಲದ ೫ನೇ ಅತಿ ದೊಡ್ಡ ಮತ್ತು ೫ನೇ ಅತಿ ಭಾರಿಯಾದ ಉಪಗ್ರಹವಾಗಿದೆ. ಗ್ಯಾನಿಮಿಡ್, ಟೈಟನ್, ಕ್ಯಾಲಿಸ್ಟೊ, ಮತ್ತು ಐಓಗಳು ಚಂದ್ರನಿಗಿಂತ ದೊಡ್ಡದಾಗಿವೆ. ಭೂಮಿಯ ಮೇಲಿನ ಉಬ್ಬರವಿಳಿತಗಳಿಗೆ ಚಂದ್ರನ ಗುರುತ್ವಾಕರ್ಷಣೆಯೇ ಕಾರಣ. ಚಂದ್ರವು ಭೂಮಿಯ ಸುತ್ತ ೨೭.೩ ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ. ಭೂಮಿ-ಚಂದ್ರ-ಸೂರ್ಯ ವ್ಯವಸ್ಥೆಯಲ್ಲಿ ಆವರ್ತಿಸುವ ಬದಲಾವಣೆಗಳ ಕಾರಣದಿಂದ ಚಂದ್ರನ ಕಲೆಗಳು ಉಂಟಾಗುತ್ತವೆ. ಈ ಪಕ್ಷಗಳು ೨೯.೫ ದಿನಗಳಿಗೊಮ್ಮೆ ಆವರ್ತಿಸುತ್ತವೆ.

ಭೂಮಿಯನ್ನುಳಿದು ಮಾನವರು ನಡೆದಾಡಿರುವ ಏಕೈಕ ಆಕಾಶಕಾಯವೆಂದರೆ ಚಂದ್ರ. ಚಂದ್ರನನ್ನು ತಲುಪಿದ ಮೊದಲ ಮಾನವರಹಿತ ಗಗನನೌಕೆಯೆಂದರೆ ರಷ್ಯಾದ ಲೂನ ಕಾರ್ಯಕ್ರಮದ ನೌಕೆ. ಲೂನಾ ೧ ಭೂಮಿಯ ಗುರುತ್ವದಿಂದ ಮುಕ್ತಿ ಪಡೆದು ಚಂದ್ರನ ಬಳಿ ಹಾರಿಹೋದ ಮೊಟ್ಟಮೊದಲ ಮಾನವ ನಿರ್ಮಿತ ವಸ್ತು. ಲೂನಾ ೨ ಚಂದ್ರನ ಮೇಲ್ಮೈ ತಲುಪಿದ ಮೊಟ್ಟಮೊದಲ ಮಾನವ ನಿರ್ಮಿತ ವಸ್ತು. ಸಾಮಾನ್ಯವಾಗಿ ಮರೆಯಾಗಿರುವ ಚಂದ್ರನ ಹಿಮ್ಮುಖವನ್ನು ಲೂನಾ ೩ ಚಿತ್ರೀಕರಿಸಿತು. ಈ ೩ ಘಟನೆಗಳೂ ೧೯೫೯ರಲ್ಲಿ ಆದವು. ಚಂದ್ರನ ಮೇಲೆ ನಿಧಾನವಾಗಿ ಇಳಿದ ಪ್ರಪ್ರಥಮ ನೌಕೆ ಲೂನಾ ೯ ಮತ್ತು ಚಂದ್ರನನ್ನು ಪರಿಭ್ರಮಿಸಿದ ಪ್ರಪ್ರಥಮ ಮಾನವರಹಿತ ನೌಕೆ ಲೂನಾ ೧೦. ಇವೆರಡೂ ೧೯೬೬ರಲ್ಲಿ ನಡೆದವು.[೧] ಅಮೇರಿಕಾ ಸಂಯುಕ್ತ ಸಂಸ್ಥಾನದ ಅಪೋಲೋ ಕಾರ್ಯಕ್ರಮದ ಭಾಗವಾಗಿ, ಚಂದ್ರನತ್ತ ಮೊದಲಬಾರಿಗೆ ಮತ್ತು ಏಕಮಾತ್ರ ಮಾನವ ಸಹಿತ ಯಾನವು ಯಶಸ್ವಿಯಾಗಿ ಪೂರ್ಣಗೊಂಡಿತು. ಚಂದ್ರವನ್ನು ಪರಿಭ್ರಮಿಸಿದ ಮೊದಲ ಮಾನವ ಸಹಿತ ಯಾನವಾದ ಅಪೋಲೋ ೧೯೬೮ರಲ್ಲಿ ಮತ್ತು ಚಂದ್ರನ ಮೇಲೆ ಮಾನವರನ್ನು ತಲುಪಿಸಿದ ಅಪೋಲೋ ೧೧ ೧೯೬೯ರಲ್ಲಿ ಪೂರ್ಣಗೊಂಡವು.[೧]

ಅಪೋಲೋ ಕಾರ್ಯಕ್ರಮದ ಸಮಾಪ್ತಿಯೊಂದಿಗೆ ಮಾನವಸಹಿತ ಚಂದ್ರಾನ್ವೇಷಣೆಯು ಕೊನೆಗೊಂಡರೂ, ಭವಿಷ್ಯದಲ್ಲಿ ಚಂದ್ರನತ್ತ ಮಾನವ ರಹಿತ/ಸಹಿತ ಗಗನನೌಕೆಗಳನ್ನು ಕಳುಹಿಸುವ ಯೋಜನೆಗಳನ್ನು ಹಲವು ದೇಶಗಳು ಹೊಂದಿವೆ. ಮಂಗಳ ಗ್ರಹದ ಯಾತ್ರೆಯ ತಯಾರಿಕೆಗಾಗಿ ಚಂದ್ರನ ಮೇಲೆ ಒಂದು ಶಾಶ್ವತ ನೆಲೆಯನ್ನು ಸ್ಥಾಪಿಸುವ ಉದ್ದೇಶವನ್ನು ಡಿಸೆಂಬರ್ ೪, ೨೦೦೬ರಂದು ನಾಸಾ ಸೂಚಿಸಿತು. ಈ ನೆಲೆಯ ನಿರ್ಮಾಣ ಕಾರ್ಯಕ್ಕೆ ಸುಮಾರು ೫ ವರ್ಷಗಳು ತಗಲುವ ನಿರೀಕ್ಷೆಯಿದೆ. ಇದರ ನಂತರ ೨೦೨೦ರಲ್ಲಿ ಮೊದಲ ಯಾನಗಳು ಆರಂಭವಾಗುವ ನಿರೀಕ್ಷೆಯಿದೆ