ಬೇಬಿಸ್ ಡೇ ಔಟ್ ಬದಲಾಯಿಸಿ

ಬೇಬಿಸ್ ಡೇ ಔಟ್[೧] ಅಮೇರಿಕಾ[೨] ಕೌಟುಂಬಿಕ ಹಾಸ್ಯಮಯ ಚಲನಚಿತ್ರ. ಜಾನ್ ಹ್ಯೂಸ್ [೩] ಬರಹದಲ್ಲಿ, ರಿಚರ್ಡ್ ವೇನ್ ಮತ್ತು ಜಾನ್ ಹ್ಯೂಸ್ ನಿರ್ಮಾಣದಲ್ಲಿ, ಪ್ಯಾಟ್ರಿಕ್ ರೀಡ್ ಜಾನ್ಸನ್[೪] ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ೧೯೯೪ರಲ್ಲಿ ತೆರೆಕಂಡಿತು. ಬೇಬಿ ಬಿಂಕ್ ಪಾತ್ರದಲ್ಲಿ ಅವಳಿ ಮಕ್ಕಳಾದ ಆಡಮ್ ಮತ್ತು ಜೇಕಬ್ ವಾರ್ಟನ್ ನಟಿಸಿದ್ದಾರೆ. ಜೋ ಮ್ಯಾಂಟೆಗ್ನಾ[೫], ಜೋ ಪ್ಯಾಂಟೋಲಿಯಾನೋ[೬] ಮತ್ತು ಬ್ರಯನ್ ಹೇಲಿ[೭] ಚಿತ್ರದ ಪ್ರಮುಖ ಖಳನಾಯಕರ ಪಾತ್ರ ನಿರ್ವಹಿಸಿದ್ದಾರೆ. ಒಬ್ಬ ಶ್ರೀಮಂತ ಕುಟುಂಬದ ಮುಗುವೊಂದನ್ನು ಮೂರು ಖಳನಾಯಕರು ಅಪಹರಿಸಿ, ಆ ಮಗು ತಪ್ಪಿಸಿಕೊಂಡು ಊರೆಲ್ಲಾ ಓಡಾಡುವ, ಎಲ್ಲರೂ ಮಗುವನ್ನು ಹುಡುಕುವ ಕಥಾವಸ್ತುವನ್ನು ಹೊಂದಿರುವ ಚಿತ್ರ ಬೇಬಿಸ್ ಡೇ ಔಟ್. ಈ ಚಿತ್ರ ಜುಲೈ ೧, ೧೯೯೪ರಲ್ಲಿ ಬಿಡುಗಡೆಯಾಯಿತು.

ಕಥಾ ವಸ್ತು ಬದಲಾಯಿಸಿ

ಚೇಷ್ಟೆಕೋರ ಮಗು ಬೆನ್ನಿಂಗ್ಟನ್ ಆಸ್ಟಿನ್ "ಬಿಂಕ್" ಕಾಟ್ವೆಲ್ ೪ (ಆಡಮ್ ಮತ್ತು ಜೇಕಬ್ ವಾರ್ಟನ್) ಶ್ರೀಮಂತ ಬಂಗಲೆಯಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿರುತ್ತಾನೆ. ಪತ್ರಿಕೆಗಳ ಸಾಮಾಜಿಕ ಪುಟಗಳಲ್ಲಿ ಆತನ ಭಾವಚಿತ್ರ ಬರಬೇಕೆಂಬ ಆಸೆಯಿಂದ ಭಾವಚಿತ್ರ ತೆಗೆಯುವ ಸಂದಭ‍ದಲ್ಲಿ, ಎಡ್ಡಿ, ನಾರ್ಬಿ ಮತ್ತು ವೀಕೋ ಛಾಯಾಗ್ರಾಹಕರಂತೆ ನಟಿಸಿ, ಮಗುವನ್ನು ಅಪಹರಿಸಿ ತಂದೆ ತಾಯಿಯರ ಬಳಿ ಹಣದ ಬೇಡಿಕೆಯಿಡುತ್ತಾರೆ. ಆದರೆ, ಅಪಹರಿಸಿದ ನಂತರ ಆ ಮಗುವನ್ನು ನೋಡಿಕೊಳ್ಳಲು ಈ ಮೂವರಿಗೂ ಕಷ್ಟವಾಗುತ್ತದೆ. ಬಿಂಕ್ ಅನ್ನು ಮಲಗಿಸಲು ಪ್ರಯತ್ನಿಸುತ್ತಿರುವಾಗ, ಬಿಂಕನತ್ತ ಗಮನಹರಿಸದೆ ನಾರ್ಬಿ ಬಿಂಕನ "ಬೇಬಿಸ್ ಡೇ ಔಟ್" ಎಂಬ ಪುಸ್ತಕವನ್ನು ಓದುತ್ತಿರುತ್ತಾನೆ. ಅದನ್ನು ನೋಡುತ್ತ, ಪುಸ್ತಕದ ಪುಟವೊಂದರಲ್ಲಿರುವ ಪಕ್ಷಿಯನ್ನು ನೋಡುತ್ತಾನೆ. ಜೊತೆಗೆ ಹೊರಗಿರುವ ತೆರೆದ ಕಿಟಕಿಯ ಮೇಲೆ ಕುಳಿತಿರುವ ನೈಜ ಪಕ್ಷಿಯನ್ನು ನೋಡುತ್ತಾನೆ. ಆ ಪಕ್ಷಿಯನ್ನೇ ಹಿಂಬಾಲಿಸುತ್ತಾ ಹೋಗುವ ಬಿಂಕ್, ಅಪಹರಿಸಿದವರ ಕೈಯಿಂದ ಯಶಸ್ವಿಯಾಗಿ ತಪ್ಪಿಸಿಕೊಳ್ಳುತ್ತಾನೆ. ಮಹಡಿಯ ಮೇಲೆ ಮಗವನ್ನು ಅಟ್ಟಿ ಹೋಗುವ ಎಡ್ಡಿ ಕಟ್ಟಡದ ಮೇಲಿಂದ ಕೆಳಗಿರುವ ಕಸದ ಗಾಡಿಯೊಳಗೆ ಬೀಳುವ ಸನ್ನಿವೇಶದಿಂದ, ಇವರ ಹುಡುಕಾಟ ಪ್ರಾರಂಭವಾಗುತ್ತದೆ.

ಡೇಲ್ ಗ್ರಿಸಾಂ (ಫ್ರೆಡ್ ಥಾಮ್ಪ್ಸನ್) ನೇತೃತ್ವದ ಎಫ್.ಬಿ.ಐ ದಳ ಬಂಗಲೆಯ ಬಳಿ ಬಂದು, ಬಿಂಕನ ತಂದೆ ತಾಯಿ ಮತ್ತು ಮಗುವನ್ನು ನೋಡಿಕೊಳ್ಳುತ್ತಿದ್ದ ಗಿಲ್ಬರ್ಟೈನ್ (ಸಿಂತಿಯಾ ನಿಕ್ಸನ್) ಅವರುಗಳೊಡಗೂಡಿ, ಎಲ್ಲ ಸುಳಿವುಗಳನ್ನೂ ಒಗ್ಗೂಡಿಸುವ ಪ್ರಯತ್ನ ಮಾಡುತ್ತಾರೆ.

ಮುಂದುವರಿಯುವ ಬಿಂಕನ ಹುಡುಕಾಟ ಬದಲಾಯಿಸಿ

ಬಿಂಕ್ ತನ್ನ ಕಥೆ ಪುಸ್ತಕದ ಕಥೆಯನ್ನೇ ಅವಲಂಬಿಸಿ, ನಗರವನ್ನು ಅನ್ವೇಷಿಸಲು ಆರಂಭಿಸುತ್ತಾನೆ ಮತ್ತು ಆಯಾ ಸ್ಥಳಗಳನ್ನು ಆ ಕಥೆಯ ಕ್ರಮದಂತೆಯೇ ಸುತ್ತಲಾರಂಭಿಸುತ್ತಾನೆ. ಅಂಬೆಗಾಲಿಡುತ್ತಾ ಬಸ್ ಒಳಗೆ ಸೇರಿಕೊಳ್ಳುತ್ತಾನೆ, ಕಿರಾಣಿ ಅಂಗಡಿ ಒಳಗೆ ಹೋಗುತ್ತಾನೆ, ಟ್ಯಾಕ್ಸಿ ಒಂದನ್ನು ಪ್ರವೇಶಿಸಿ ಮೃಗಾಲಯಕ್ಕೆ ತೆರಳಿ, ರಕ್ಷಣಾತ್ಮಕ ಗೊರಿಲ್ಲಾ ಇರುವ ಬೋನಿನೊಳಗೆ ಸಿಲುಕುತ್ತಾನೆ ಹಾಗೂ ಒಂದು ನಿರ್ಮಾಣವಾಗುವ ಹಂತದಲ್ಲಿರುವ ಕಟ್ಟಡವೊಂದನ್ನು ತಲುಪುತ್ತಾನೆ. ಅಪಹರಿಸಿದ ಕಿರಾತಕರು ಸದಾ ಬಿಂಕನನ್ನು ಹುಡುಕುತ್ತಿದ್ದರೂ, ಆತನನ್ನು ಹಿಡಿಯುವಲ್ಲಿ ವಿಫಲರಾಗುತ್ತಿರುತ್ತಾರೆ. ಆ ದಿನಕ್ಕೆ ಸಾಕಾಗುವಷ್ಟು ಹುಡುಕಿ, ಕೊನೆಗೆ ಆ ನಿರ್ಮಾಣವಾಗುವ ಹಂತದಲ್ಲಿರುವ ಕಟ್ಟಡವನ್ನು ತಲುಪಿ, ಮರಳಿ ವಾಪಸ್ ಹೋಗಲು ನಿರ್ಧರಿಸುತ್ತಾರೆ. ಮುಂದೆ ಬಿಂಕ್ ಒಬ್ಬ ವೃದ್ಧ ಸೈನಿಕನ ಮನೆಗೆ ಹೋಗುತ್ತಾನೆ. ಅಲ್ಲಿ ಆ ಮನೆಯವರು ಇವನು ಅಪಹರಣವಾದ ಮಗು ಎಂದು ಗುರುತಿಸುತ್ತಾರೆ.

ನಗರದಲ್ಲಿ ದೊರೆತ ಬಿಂಕನ ಅನೇಕ ಸುಳಿವುಗಳನ್ನು ಎಫ್.ಬಿ.ಐ ದಳ ಬಿಂಕನ ತಂದೆ ತಾಯಿಗೆ ತಿಳಿಸುತ್ತಾರೆ. ತನ್ನ ಪ್ರಿಯವಾದ ಪುಸ್ತಕದ ಕಥೆಯನ್ನು ಬಿಂಕ್ ಅವಲಂಬಿಸುತ್ತಿದ್ದಾನೆ ಎಂದು ಸೂಚಿಸುವ ಗಿಲ್ಬರ್ಟೈನ್, ಮುಂದೆ ಆ ವೃದ್ಧ ಸೈನಿಕನ ಮನೆಯೆಡೆಗೆ ಹೋಗಬಹುದೆಂದು ತಿಳಿಸುತ್ತಾನೆ. ಆಕೆ ಹೇಳಿದಂತೆಯೇ ಬಿಂಕ್ ಆ ವೃದ್ಧ ಸೈನಿಕನ ಮನೆಯಲ್ಲಿಯೇ ಇರುತ್ತಾನೆ. ಬಿಂಕನೊಂದಿಗೆ ಮನೆಗೆ ಹಿಂದಿರುಗುವಾಗ, ಅಪಹರಣ ಮಾಡಿದವರಿಗೆ "ಬೂ ಬೂ" ಎಂದು ಕರೆದು ಅವಮಾನಿಸಲಾಗುತ್ತದೆ. ಈ ಅವಮಾನವನ್ನು ಸಹಿಸಲಾಗದಿರುವ ಸಂದರ್ಭದಲ್ಲೇ, ಎಫ್.ಬಿ.ಐ ದಳ ಈ ಮೂವರನ್ನೂ ಹೆದರಿಸುತ್ತಾರೆ. ಅವರ ಬಳಿ ಇದ್ದ ಆ ಕಥೆ ಪುಸ್ತಕವನ್ನು ಕೆಳಗೆ ಬಿಸಾಕುವಂತೆ ಗ್ರಿಸಾಂ ಆದೇಶಿಸಿ, ಆ ಮೂವರನ್ನೂ ಬಂಧಿಸುತ್ತಾರೆ.

ಮರಳಿ ಮನೆಗೆ ಬಂದ ಬಿಂಕನನ್ನು ಕುಟುಂಬದವರೆಲ್ಲಾ ಸಂತೋಷದಿಂದ ಸ್ವಾಗತಿಸಿ, ಅವನಿಗಾಗಿಯೇ ಇರುವ ಪ್ರತ್ಯೇಕ ಹಾಸಿಗೆಯ ಮೇಲೆ ಮಲಗಿಸುತ್ತಾರೆ. ಮರುದಿನ ಬೆಳಗ್ಗೆ ಒಬ್ಬ ಸಾಮಾನ್ಯ ಛಾಯಾಗ್ರಾಹಕನಿಂದಲೇ ಭಾವಚಿತ್ರ ಸೆರೆಹಿಡಿಸಿಕೊಳ್ಳಬೇಕೆಂದು ತೀರ್ಮಾನಿಸುತ್ತಾರೆ. ಬಿಂಕ್ ಬೆಳಗ್ಗೆ ಎದ್ದು ಮತ್ತೊಂದು ಕಥೆಯ ಪುಸ್ತಕವನ್ನು ಓದಲು ಹಿಡಿಯುತ್ತಾನೆ. ಅದರ ಹೆಸರು "ಬೇಬಿಸ್ ಟ್ರಿಪ್ ಟು ಚೈನಾ"!

ಋಣಾತ್ಮಕ ವಿಮರ್ಶೆ ಬದಲಾಯಿಸಿ

ಬೇಬಿಸ್ ಡೇ ಔಟ್ ಚಿತ್ರವನ್ನು ಕುರಿತು ಅನೇಕ ವಿಮರ್ಶಕರು ಟೀಕೆ ಮಾಡಿದ್ದಾರೆ. ರಾಟನ್ ಟೊಮೇಟೋಸ್ ವಿಮರ್ಶಾತ್ಮಕ ಅಂತರ್ಜಾಲ ತಾಣದಲ್ಲಿ ಶೇ.೨೧ರಷ್ಟು ರಾಟನ್ ಅಪ್ರೂವಲ್ ರೇಟಿಂಗ್ ಪಡೆದು, ಒಟ್ಟು ೧೪ ವಿಮರ್ಶೆಗಳಲ್ಲಿ ೩ ಗುಣಾತ್ಮಕ ವಿಮರ್ಶೆಗಳನ್ನು ಈ ಚಿತ್ರ ಪಡೆದಿದೆ. ಸಿಸ್ಕಲ್ ಮತ್ತು ಎಬರ್ಟ್ ಕಾರ್ಯಕ್ರಮದಲ್ಲಿ ಖ್ಯಾತ ವಿಮರ್ಶಕ ರಾಜರ್ ಎಬರ್ಟ್, "ಬೇಬಿಸ್ ಡೇ ಔಟ್ ಚಿತ್ರದಲ್ಲಿ ಕಂಡುಬರುವ ಅನೇಕ ದೃಶ್ಯಗಳು ಮತ್ತು ಸನ್ನಿವೇಶಗಳು ಬೇಬಿ ಹರ್ಮನ್ ಕಾರ್ಟೂನಿನಲ್ಲಿ ಕಾಣಬಹುದೇ ಹೊರತು, ನಿಜವಾದ ಮಗು, ಟ್ಯಾಕ್ಸಿ, ಬಸ್ಸು, ಬೀದಿಗಳಲ್ಲಿ ಇಂತಹ ಸಂಗತಿಗಳು ಖಂಡಿತ ಹಾಸ್ಯವಲ್ಲ. ವಾರ್ಟನ್ ಅವಳಿಗಳು ಬೇಬಿ ಬಿಂಕ್ ಪಾತ್ರದಲ್ಲಿ ಬಹಳ ಮುದ್ದಾಗಿ ನಟಿಸಿದ್ದಾರೆ; ಆದರೆ ಪ್ರೇಕ್ಷಕರು ಮೊದಲ ಬಾರಿಗೆ ಈ ಸಿನಿಮಾ ನೋಡಿದಾಗ "ಕೂ.." ಎಂದು ಶಬ್ದ ಮಾಡಿ ತಮ್ಮ ಪ್ರತಿರೋಧವನ್ನು ಪ್ರದರ್ಶಿಸಿದ್ದರು" ಎಂದು ಹೇಳಿದರು. ಅಲ್ಲದೆ, ಈ ಸಿನಿಮಾಗೆ ಒಂದೂವರೆ ನಕ್ಷತ್ರಗಳನ್ನು ಕೊಟ್ಟರು.

ಕಾರ್ಯಕ್ರಮದ ಸಹ ವಿಮರ್ಶಕರಾದ ಜೀನ್ ಸಿಸ್ಕಲ್ ಅವರಿಗೆ ಚಿತ್ರ ಬಹಳ ಹಿಡಿಸಿತು. ಚಿತ್ರದಲ್ಲಿನ ಹಾಸ್ಯಮಯ ಸನ್ನಿವೇಶಗಳು ಮಕ್ಕಳಿಗೆ ಬಹಳ ತಮಾಷೆಯಾಗಿ ಖುಷಿ ಕೊಡುತ್ತವೆ ಎಂದು ಅಭಿಪ್ರಾಯಪಟ್ಟರು. ಚಿತ್ರದ ಬಗ್ಗೆ ವಾಶಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಬರೆದ ಹಾಲ್ ಹಿನ್ಸನ್, "ಚಿತ್ರ ವೇಗದಿಂದ ಮೋಜಿನಿಂದ ಸಾಗಿದರೂ, ಎಲ್ಲೂ ಅಸ್ತವ್ಯಸ್ತವೆನಿಸುವುದಿಲ್ಲ. ಆ ಖಳನಾಯಕರು, ಮಗುವನ್ನು ಅಪಹರಿಸಿ, ನಂತರ ಶರಣಾಗತರಾಗುವ ಸನ್ನಿವೇಶಗಳನ್ನೂ ಸೇರಿದಂತೆ ಎಲ್ಲವನ್ನೂ ಸಮಂಜಸವಾಗಿ ಚಿತ್ರಿಸಲಾಗಿದೆ. ಎಲ್ಲದಕ್ಕೂ ಮಿಗಿಲಾಗಿ ಬಿಂಕನ ಪಾತ್ರವೇ ಪ್ರಮುಖವಾಗಿ ಗಮನ ಸೆಳೆಯುತ್ತದೆ. ಆತನ ಕಿರುಮೊಗದಲ್ಲೇ ಅನೇಕ ಭಾವನೆಗಳನ್ನು ವ್ಯಕ್ತಪಡಿಸಿರುವುದು ಬಹಳ ಚೆನ್ನಾಗಿ ಮೂಡಿಬಂದಿದೆ. ಜೊತೆಗೆ ಆತನ ನಗು "ಕಾನ್ಕರಿಂಗ್ ವಿತ್ ಅ ಸ್ಮೈಲ್" ಎಂಬ ಮಾತಿಗೆ ಹೊಸ ಅರ್ಥ ತರುವಂತಿದೆ" ಎಂದು ಬರೆದಿದ್ದಾರೆ.

ಉಲ್ಲೇಖನೆಗಳು ಬದಲಾಯಿಸಿ