ಚಾಕಲೇಟ್ ತಿನ್ನದವರು ಬಹಳ ಅಪರೂಪ. ನಮ್ಮಲ್ಲಿ ಹೆಚ್ಚಿನವರೂ ಅದರ ರುಚಿ ಸವಿದಿದ್ದೇವೆ. ಆದರೆ ಈ ಚಾಕಲೇಟ್ ಎಲ್ಲಿಂದ ಬರುತ್ತದೆ? ಇದರ ಮೂಲ ಯಾವುದು? ಎಂಬುದು ಗೊತ್ತೇ? ಕಕಾವೋ ಎಂಬ ಗಿಡದಲ್ಲಾಗುವ ಕೊಕ್ಕೊ ಎಂಬ ಕಾಯಿಗಳ ಬೀಜಗಳಿಂದ ಚಾಕಲೇಟು ತಯಾರಿಸುತ್ತಾರೆ. ಇದನ್ನು ಶಾಸ್ತ್ರೀಯವಾಗಿ ಥಿಯೋಬ್ರೋಮಾ ಕಕಾವೋ ಎನ್ನುತ್ತಾರೆ. ಕೊಕ್ಕೊವನ್ನು ಮೊದಲು ಯುರೋಪಿಗೆ ಪರಿಚಯಿಸಿದ್ದು ಕ್ರಿಸ್ಟೋಫರ್ ಕೊಲಂಬಸ್. ಕೊಕ್ಕೊದ ರುಚಿಯನ್ನು ಕಂಡು ಹಿಡಿದು ನಾಗರಿಕ ಜಗತ್ತಿಗೆ ತಿಳಿಸಿದ್ದು ಸ್ಪೇನ್ ದೇಶದವರು ಅಮೆರಿಕವನ್ನು ಕಂಡು ಹಿಡಿಯುವುದಕ್ಕಿಂತಲೂ ನೂರಾರು ವರ್ಷಗಳ ಹಿಂದೆ ಅಂದರೆ ಕ್ರಿ.ಶ ೬೦೦ರಲ್ಲೇ ಮಾಯಾ ಜನರು ಕೊಕ್ಕೊ ಗಿಡಗಳನ್ನು ಬೆಳೆಸುತ್ತಿದ್ದುದಕ್ಕೆ ದಾಖಲೆಗಳಿವೆ. ಮುಂದೆ ಮಾಯನ್ನರಿಂದ ಅಝ್ ಟೆಕ್ ನಾಗರಿಕರಿಗೆ ಇದರ ಪರಿಚಯವಾಯಿತು. ಈ ಕಾಲಘಟ್ಟದಲ್ಲಿ ಕೊಕ್ಕೊ ಕಾಯಿಗಳನ್ನು ಕರೆನ್ಸಿಯಾಗಿ ಬಳಸುತ್ತಿದ್ದರಂತೆ! ಕ್ರಿಸ್ಟೋಫರ್ ಕೊಲಂಬಸ್ ತನ್ನ ಮೂರನೆಯ ಅಮೆರಿಕ ಯಾತ್ರೆಯಲ್ಲಿ ನಿಕರಾಗುವಾ ಸಮೀಪದಲ್ಲಿ ಬಂದಿಳಿದಾಗ ಅಲ್ಲಿ ಕೊಕ್ಕೊ ಕೊಂಡೊಯ್ಯುತ್ತಿದ್ದ ಒಬ್ಬ ಮಾಯಾ ವ್ಯಕ್ತಿಯನ್ನು ಬಂಧಿಸಿದ. ಕೊಕ್ಕೊದ ಬಗ್ಗೆ ಅವನಿಗೆ ಅಷ್ಟೇನೂ ಆಸಕ್ತಿಯಿರಲಿಲ್ಲ. ಆದರೆ ಹೆರ್ನಾನ್ ಕಾರ್ಟಿಸ್ ಗೆ ಈ ವಿಷಯದಲ್ಲಿ ಆಸಕ್ತಿ ಹುಟ್ಟಿತು. ಪ್ರಾರಂಭದಲ್ಲಿ ಅವನಿಗೆ ಚಾಕಲೇಟುಪೇಯದ ರುಚಿ ಹಿಡಿಸಲಿಲ್ಲ. ಆ ಸಮಯದಲ್ಲಿ ಕೊಕ್ಕೊ ಕಾಯಿಗಳನ್ನು ನೀರಿನೊಂದಿಗೆ ಅರೆದು ಚಾಕಲೇಟ್ ಪಾನೀಯವನ್ನು ತಯಾರಿಸುತ್ತಿದ್ದರು. ಕಾರ್ಟಿಸ್ ಚಾಕಲೇಟು ಪೇಯಕ್ಕೆ ಸಕ್ಕರೆ ಬ್ರಎರೆಸಿದರೆ ಅದು ಸಿಹಿಯಾಗುತ್ತದೆಂದೂ, ಅದನ್ನೊಂದು ವಾಣಿಜ್ಯ ಉತ್ಪನ್ನವಾಗಿ ಮಾರಬಹುದೆಂದೂ ಕಂಡುಹಿಡಿದ. ಚಾಕಲೇಟಿನ ಪೇಯ ಹಾಗೂ ಅದರ ಇತರ ಉತ್ಪನ್ನಗಳು ಶೀಘ್ರದಲ್ಲಿಯೇ ಪ್ಯಾರಿಸ್ ತಲುಪಿದವು. ಮುಂದೆ ಚಾಕಲೇಟ್ ಹಲವಾರು ರೂಪ ತಾಳಿತು. ಜನಪ್ರಿಯವೂ ಆಯಿತು. ನೆದರ್ಲೆಂಡಿನ ವಾನ್ಹೌಟನ್ ಕೊಕ್ಕೊ ಬೆಣ್ಣೆಯನ್ನು ತೆಗೆಯುವ ಒತ್ತು ಯಂತ್ರವನ್ನು ರೂಪಿಸಿದ. ಹೀಗೆ ತೆಗೆದ ಕೊಕ್ಕೊ ಬೆಣ್ಣೆಯನ್ನು ಚಾಕಲೇಟ್ ಗಟ್ಟಿಗಳ ತಯಾರಿಯಲ್ಲಿ ಬಳಸತೊಡಗಿದರು. ಇದರ ಪರಿಷ್ಕೃತ ರೂಪವೇ ನಾವು ಇಂದು ಬಳಸುತ್ತಿರುವ ಚಾಕಲೇಟ್. ೧೯ನೆಯ ಶತಮಾನದಲ್ಲಿ ಸ್ವಿಸ್ ಚಾಕಲೇಟ್ ತಯಾರಕನಾದ ಡ್ಯಾನಿಯೆಲ್ ಪೀಟರ್ ಎಂಬಾತ ಮೊದಲ ಬಾರಿಗೆ ಮಿಲ್ಕ್ ಚಾಕಲೇಟ್ ತಯಾರಿಸಿದ. ಮುಂದೆ ಕ್ಯಾಡ್ಬರಿ, ಫ್ರೈಸ್, ರೌನ್ ಟ್ರೀ, ಸುಕಾಡರ್ ಮುಂತಾದ ಕಂಪನಿಗಳೇ ಹುಟ್ಟಿಕೊಂಡವು. ಇದೀಗ ಚಾಕಲೇಟ್ ಬಹಳ ಜನಪ್ರಿಯ. ಕೊಕ್ಕೊ ಗಿಡಗಳು ಭಾರತಕ್ಕೆ ಬಂದದ್ದು ೧೯೬೦-೭೦ರ ದಶಕದಲ್ಲಿ. ಕೊಕ್ಕೊ ಬೆಳೆಗೆ ಇಲ್ಲಿನ ಹವಾಮಾನ ಚೆನ್ನಾಗಿ ಹಿಡಿಸುತ್ತದೆ. ಆದ್ದರಿಂದ ಭಾರತದಲ್ಲಿ ಇಂದು ಹಲವಾರು ಕಡೆ ಇದನ್ನು ಮಿಶ್ರಬೆಳೆಯಾಗಿ ಬೆಳೆಯುತ್ತಾರೆ. ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಕೊಕ್ಕೊ ಗಿಡಗಳನ್ನು ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ. ಕೇರಳದಲ್ಲಿ ಮೊದಲಿಗೆ ಇದನ್ನು ಬೆಳೆಸಿದಾದರೂ ಈಗ ಇದು ತಮಿಳುನಾಡು, ಕರ್ನಾಟಕಗಳಿಗೂ ಹಬ್ಬಿದೆ. ಭಾರತದಲ್ಲೂ ಚಕಲೇಟ್ ತಯಾರಿಸುವ ಕ್ಯಾಂಪ್ಕೊ, ಅಮುಲ್ ಮುಂತಾದ ಕಂಪನಿಗಳ ಚಾಕಲೇಟ್ ಗಳಿಂದಾಗಿ ಇಲ್ಲಿನ ಕೊಕ್ಕೊ ಇದೀಗ ವಿಶ್ವವ್ಯಾಪಿಯಾಗಿದೆ. ವಿದೇಶಿ ಚಾಕಲೇಟುಗಳ ಗುಣಮಟ್ಟಕ್ಕೆ ಈ ಚಾಕಲೇಟುಗಳು ಸರಿಸಾಟಿಯಾಗಿವೆ. ಕಾಕಾವೋ ಎಂಬ ಹೆಸರಿದ್ದರೂ ಈ ಗಿಡವನ್ನು ಕೊಕ್ಕೊ ಎಂದೇ ಕರೆಯುತ್ತಾರೆ. ಕೊಕ್ಕೊ ಗಿಡ ಒಂದು ಪೊದರು ಸಸ್ಯ. ಅಗಲವಾದ ಎಲೆಗಳನ್ನು ಹೊಂದಿರುವ ಈ ಗಿಡದ ಕಾಂಡದಲ್ಲಿಯೇ ಹೂ ಹಾಗೂ ಕಾಯಿಗಳಾಗುವುದು ವಿಶೇಷ. ಚೆನ್ನಾಗಿ ಬೆಳೆದ ಗಿಡವೊಂದು ವರ್ಷಕ್ಕೆ ೧೦೦ ರಿಂದ ೧೫೦ ಕಾಯಿಗಳ ಇಳುವರಿಯನ್ನು ನೀಡುತ್ತದೆ. ಕಾಯಿಯೊಂದರಲ್ಲಿ ಸುಮಾರು ೫೦ರಷ್ಟು ಬೀಜಗಳಿದ್ದು, ಅವುಗಳ ಹೊರಭಾಗದಲ್ಲಿ ಸಿಹಿಯಾದ ತಿರುಳು ಇರುತ್ತದೆ. ಚೆನ್ನಾಗಿ ಹಣ್ಣಾದ ಕೊಕ್ಕೊ ಕಾಯಿಗಳನ್ನು ಒಡೆದು ಸಿಕ್ಕಿದ ಬೀಜಗಳನ್ನು ಸಂಸ್ಕರಣಾ ಘಟಕಗಳಿಗೆ ಕಳಿಸುತ್ತಾರೆ. ಅಲ್ಲಿ ಈ ಬೀಜಗಳನ್ನು ತಿರುಳಿನೊಂದಿಗೆ ಸುಮಾರು ೫೦ ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಐದಾರು ದಿನಗಳ ಕಾಲ ಇರಿಸಿ ಹುಳಿ ಬರಿಸುತ್ತಾರೆ. ಹೀಗೆ ತಿರುಳು ಬೇರ್ಪಟ್ಟಂತಹ ಬೀಜಗಳನ್ನು ಜಾಗರೂಕತೆಯಿಂದ ಒಣಗಿಸಿ ಹುರಿಯುತ್ತಾರೆ. ಬೀಜಗಳ ಹೊರಸಿಪ್ಪೆಯನ್ನು ಒಡೆದು ಒಳಭಾಗದ ತಿರುಳನ್ನು ಅರೆಯುತ್ತಾರೆ. ಹೀಗೆ ಅರೆದು ಸಿಕ್ಕಿದ ದ್ರವರೂಪದ ಪೇಸ್ಟನ್ನು ಚಾಕಲೇಟ್ ಲಿಕ್ಕರ್ ಅಥವಾ ಮಾಸ್ ಎನ್ನುತ್ತಾರೆ. ಇದನ್ನು ಬೇಯಿಸಿ ಗಟ್ಟಿಗೊಳಿಸುವಾಗ ಸಕ್ಕರೆ ಹಾಗೂ ಕೊಕ್ಕೊ ಬೆಣ್ಣೆಯನ್ನು ಸೇರಿಸುತ್ತಾರೆ. ಮುಂದಿನ ಹಂತದಲ್ಲಿ ಈ ಮಿಶ್ರಣವನ್ನು ಪುಡಿಮಾಡಿ, ಅದರಿಂದ ತೇವಾಂಶ ಹಾಗೂ ಕೊಬ್ಬಿನಂಶವನ್ನು ತೆಗೆದು ಚಾಕಲೇಟ್ ಅನ್ನು ತಯಾರಿಸುತ್ತಾರೆ. ಚಾಕಲೇಟ್ ಒಂದು ಉತ್ತಮ ಖಾದ್ಯ. ಅಷ್ಟೇ ಅಲ್ಲ, ಅದರಲ್ಲಿ ಫ್ಲೇವೋನಾಯ್ಡ್ ಗಳಂತಹ ನಂಜು ನಿವಾರಕಗಳಿರುವ ಕಾರಣ ಅದನ್ನು ಹೃದಯ ರೋಗಗಳನ್ನು ತಡೆಗಟ್ಟಲು ಬಳಸಬಹುದೆಂದು ವೈದ್ಯರು ಹೇಳುತ್ತಾರೆ. ಚಾಕಲೇಟ್ ನಲ್ಲಿ ತಾಮ್ರ, ರಂಜಕ ಹಾಗೂ ಮೆಗ್ನೀಶಿಯಂ ಅಂಶಗಳಿದ್ದು, ಜೀವಕೋಶಗಳ ಬೆಳವಣಿಗೆ ಹಾಗೂ ಸರಾಗವಾದ ರಕ್ತ ಪರಿಚಲನೆಗೆ ಸಹಾಯಕ ಎನ್ನಲಾಗುತ್ತಿದೆ.