ಸದಸ್ಯ:Dinesha M/ನನ್ನ ಪ್ರಯೋಗಪುಟ12

ನೇಮಿನಾಥ ಹಿರೇ ಬಸದಿ, ವರಂಗ

ಕ್ಷೇತ್ರ ವರ್ಣನೆ

ಬದಲಾಯಿಸಿ

ಈ ಬಸದಿಯಲ್ಲಿ ಶ್ರೀ ನೇಮಿನಾಥಸ್ವಾಮಿ ಪೂರ್ವ ದಿಕ್ಕಿಗೆ, ಶ್ರೀ ಚಂದ್ರನಾಥಸ್ವಾಮಿ ಉತ್ತರ ದಿಕ್ಕಿಗೆ, ಶ್ರೀ ಬ್ರಹ್ಮ ದೇವರು ಪೂರ್ವ ದಿಕ್ಕಿಗೆ ಮತ್ತು ಶ್ರೀ ಮಾತೆ ಪದ್ಮಾವತಿ ಅಮ್ಮನವರನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಪ್ರತಿಷ್ಟಾಪಿಸಲಾಗಿದೆ. ಬಸದಿಯ ಪೂರ್ವ ದಿಕ್ಕಿಗೆ ಧ್ವಜಸ್ತಂಭವಿದೆ. ಉತ್ತರ ದಿಕ್ಕಿಗೆ ಮಾನಸ್ತಂಭವಿದೆ. ಕೆರೆ ಬಸದಿಯಂತೆ ಇದನ್ನೂ ಕೂಡಾ ರಾಜರೇ ನಿರ್ಮಿಸಿರಬೇಕು. ಪಾರಿಜಾತ ಹೂವಿನ ಗಿಡ ಬಲಭಾಗದಲ್ಲಿದೆ. ಬಸದಿಗೆ ಗೋಪುರವಿದೆ. ಬಸದಿಯ ಪೂರ್ವ ಪ್ರವೇಶದ್ವಾರದಲ್ಲಿ ದ್ವಾರಪಾಲಕರ ಬಿಂಬಗಳಿವೆ. ಬಸದಿಯು ಶಿಲಾಮಯವಾಗಿದ್ದು, ಗೋಡೆಯ ಮೇಲೆ ಚಿತ್ರಗಳಿಲ್ಲ. ಪ್ರಾರ್ಥನಾ ಮಂಟಪದಲ್ಲಿ ಕಲ್ಲಿನ ಕಂಬಗಳಿವೆ. ಜಯಘಂಟೆ ಇದೆ. ಇಲ್ಲಿಯೂ ಪದ್ಮಾವತೀ ದೇವಿಯ ಸುಂದರವಾದ ಮೂರ್ತಿ ಇದ್ದು, ಪೂಜೆ ನಡೆಯುತ್ತದೆ ಮತ್ತು ವಿಶೇಷವಾಗಿ ಹರಕೆ ಪೂಜೆ ನಡೆಯುತ್ತದೆ. ಬಸದಿಯ ಮೂಲ ನಾಯಕ ಶ್ರೀ ನೇಮಿನಾಥ ಸ್ವಾಮಿಯ ಬಿಂಬವು ಕರಿಶಿಲೆಯಿಂದ ಮಾಡಲ್ಪಟ್ಟಿದ್ದು, ಸುಮಾರು ೫ ಅಡಿ ಎತ್ತರವಿದೆ. ಪದ್ಮಾಸನಸ್ಥರಾದ ಸ್ವಾಮಿಯ ಜಂಫೆಯ ಬಳಿಯಲ್ಲಿ ಯಕ್ಷ ಯಕ್ಷಿಯರನ್ನು ತೋರಿಸಿದ್ದಾರೆ. ಭುಜಗಳ ಬಳಿಯಲ್ಲಿ ಚಾಮಧಾರಿಗಳನ್ನು ತೋರಿಸಿದ್ದಾರೆ. ಅವರ ಹಿಂಬದಿಯಿಂದ ಮಕರ ತೋರಣವು ಪ್ರಾರಂಭವಾಗಿ ಶಿರದ ಮೇಲ್ಗಡೆಯ ಮುಕ್ಕೊಡೆಯವರೆಗೆ ಹರಡಿಕೊಂಡಿದೆ. ಮುಕ್ಕೊಡೆಯೂ ಬಹಳ ಅಲಂಕಾರದಿಂದ ಕೂಡಿದೆ.

ಇತಿಹಾಸ ಮತ್ತು ನಿರ್ಮಾಣ

ಬದಲಾಯಿಸಿ

ಇದು ಕಲ್ಯಾಣದ ಚಾಲುಕ್ಯ ಶೈಲಿಯಲ್ಲಿ ಇದೆ. ಆದುದರಿಂದ ಕ್ರಿ.ಶ ೧೧ನೇ ಶತಮಾನದಲ್ಲಿ ತಯಾರಿಸಿದ ಬಿಂಬವಿದು. ಸ್ವಾಮಿಯ ತುಂಬಿರುವ ಗಲ್ಲಗಳು ಮತ್ತು ದಷ್ಟಪುಷ್ಟವಾದ ಮೈ, ಕೈಕಾಲುಗಳು ತುಂಬಾ ಆಕರ್ಷಕ. ಸ್ವಾಮಿಗೆ ಮೂರೂ ಹೊತ್ತು ಪೂಜೆ ನಡೆಯುತ್ತದೆ. ಅಲ್ಲದೆ, ವಿಶೇಷ ಪೂಜೆ, ನೋಂಪು ಇತ್ಯಾದಿಗಳೂ ನಡೆಯುತ್ತವೆ. ಕ್ಷೇತ್ರಪಾಲ ಮತ್ತು ಪಕ್ಕದಲ್ಲೇ ಪ್ರತ್ಯೇಕ ಕಟ್ಟೆಯಲ್ಲಿ ಸಾನ್ನಿಧ್ಯ ಸ್ವರೂಪವಾಗಿ ಕರಿ ಗುಂಡು ಕಲ್ಲು ಇದೆ. ಇವೆಲ್ಲದಕ್ಕೂ ಪೂಜೆ ನಡೆಯುತ್ತದೆ. ಬಸದಿಯ ಸುತ್ತಲೂ ಕರಿಕಲ್ಲಿನಿಂದ ನಿರ್ಮಿಸಿದ ಪ್ರಾಕಾರ ಗೋಡೆ ಇದೆ.

ಶ್ರೀ ನೇಮಿನಾಥ ಸ್ವಾಮಿ ಬಸದಿಯ ಪೂರ್ವದಿಕ್ಕಿನ ದ್ವಾರದ ಎಡಬಸದಿಯಲ್ಲಿರುವ ಒಂದು ಶಿಲಾಶಾಸನ ಇದೆ. ಬಹು ಪ್ರಾಚೀನ ಕಾಲದಲ್ಲಿ ವರಾಂಗನೆAಬ ಮಹಾಪುರುಷನು ಇಲ್ಲಿ ಅನೇಕ ಧರ್ಮಕಾರ್ಯಗಳನ್ನು ಕೈಗೊಂಡಿದ್ದ. ಅನಂತರ ಹೊಂಬುಚ್ಚದಿAದ ಆಳಿದ ಶಾಂತರ ವಂಶದ ಅರಸರು ತಮ್ಮ ಅಧಿಕಾರವನ್ನು ಕಾರ್ಕಳಕ್ಕೆ ವಿಸ್ತರಿಸುತ್ತಿದ್ದಾಗ ಆ ವಂಶದ ರಾಣಿ ಜಾಕಲ ದೇವಿ (ಕ್ರಿ.ಶ.೧೧೬೦-೧೨೨೦) ಇಲ್ಲಿಯ ಕೆರೆಯನ್ನು ನಿರ್ಮಿಸಿದಳು. ಮುಂದೆ ಕುಂಡಣ ಎಂಬ ಅರಸ ಇಲ್ಲಿಯ ಎಲ್ಲಾ ಧರ್ಮ ಕಾರ್ಯಗಳು ಮುಂದುವರಿಸಿಕೊAಡು ಹೋಗುವ ವ್ಯವಸ್ಥೆಯನ್ನು ಮಾಡಿದ ಎಂದು ಹೇಳುತ್ತದೆ.

ಶಾಸನ ಕುರುಹು

ಬದಲಾಯಿಸಿ

ಬಸದಿಯ ದಕ್ಷಿಣದ ಕಡೆ ಇರುವ ಇನ್ನೊಂದು ಶಾಸನವು ಪಾಂಡ್ಯಧನಂಜಯ, ಅರಿರಾಯ ಬಸವಶಂಕರ ಎಂಬ ಬಿರುದುಗಳಿಲ್ಲ ರಾಜಾಧಿರಾಜ ಶ್ರೀ ಸೋಮೇಶ್ವರ ಎಂಬವನು ಶಕ ೧೨೫೪ನೇ ಅಂಗೀರಸ ಸಂವತ್ಸರದಲ್ಲಿ ಈ ಕ್ಷೇತ್ರಕ್ಕೆ ಕೈಗೊಂಡ ಸೇವೆಯನ್ನು ತಿಳಿಸುತ್ತದೆ. ಬಸದಿಯ ಪೂರ್ವ ದ್ವಾರದ ಬಲಬದಿಯಲ್ಲಿ ಇರುವ ಇನ್ನೊಂದು ಶಿಲಾಶಾಸನವು ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಇಮ್ಮಡಿ ಪ್ರತಾಪ ದೇವರಾಯನು ಇಲ್ಲಿಯ ಶ್ರೀ ನೇಮಿನಾಥ ಸ್ವಾಮಿಯ ಅಮೃತಪಡಿಗೆ ಹಾಗೂ ಶ್ರೀ ವರ್ಧಮಾನ ಭಟ್ಟಾರಕರ ಶಿಷ್ಯ ಸಮುದಾಯದ ಆಹಾರದಾನಕ್ಕಾಗಿ ಶಕ ೧೩೪೬ನೇಯ ಕ್ರೋಧಿ ಸಂವತ್ಸರ ಪುಷ್ಯ ಶುದ್ಧ ಷಷ್ಠಿ ಭುದವಾರದಂದು ಇನ್ನಷ್ಟು ಸಂಪನ್ಮೂಲವನ್ನು ಒದಗಿಸಿಕೊಟ್ಟಿದ್ದನ್ನು ಹೇಳುತ್ತದೆ. ಇನ್ನೊಂದು ಶಿಲಾಶಾಸನವು ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕರು ವಿಜಯನಗರದ ಸಾರ್ವಭೌಮ ಶ್ರೀ ಕೃಷ್ಣ ದೇವರಾಯನಿಗೆ ತಿಳಿಸಿದಂತೆ, ಆತನು ಮಂಗಳೂರಿನ ರಾಜ್ಯಪಾಲ ರತ್ನಪ್ಪ ಒಡೆಯನಿಗೆ ನಿರೂಪ ಕಳಿಸಿ, ಇಲ್ಲಿ ಬೆಳೆದಿದ್ದ ನಿರುಪಯುಕ್ತ ಕಾಡನ್ನು ಕಡಿಸಿ, ಅಲ್ಲಿ ಮಾವು, ಹಲಸು, ತೆಂಗು, ಅಡಿಕೆ,ಓಟೆ ಮುಂತಾದವುಗಳನ್ನು ನೆಡಿಸಿ ಶಾಶ್ವತವಾಗಿ ಹೆಚ್ಚು ಉತ್ಪತ್ತಿ ಬರುವ ಆ ಸಮಗ್ರ ಭೂಮಿಯನ್ನು ಶಕ ೧೪೩೭ನೇ ಭಾವನಾಮ ಸಂವತ್ಸರದ ಮಾಘ ಶುದ್ಧ ಪಂಚಮಿಯಂದು ಶ್ರೀ ಮಠಕ್ಕೆ ಒಪ್ಪಿಸಿದ್ದ ವಿವರಗಳನ್ನು ಕೊಡುತ್ತದೆ. ಬಸದಿಯ ಉತ್ತರ ದಿಕ್ಕಿನ ದ್ವಾರದ ಬಲಬದಿಗಿರುವ ಶಕ ೧೪೪೪ನೇ ಚಿತ್ರಭಾನು ಸಂವತ್ಸರದ ಚೈತ್ರ ಬಹುಳ ದ್ವಾದಶಿಯಂದು ಬರೆದ ಮತ್ತೊಂದು ಬೃಹತ್ ಶಿಲಾಶಾಸನವು ಹೊಂಬುಚ್ಚದಿAದ ಆಳಿದ ಜಿನದತ್ತ ರಾಯನ ವಂಶಾವಳಿಯನ್ನು ಹೇಳಿ, ಪ್ರಸ್ತುತ ಕೆರೆವಾಸೆಯಿಂದ ಆಳಿದ ಇಮ್ಮಡಿ ಭೈರವ ಅರಸನು ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕರಿಗೆ ಭೈರವಪುರ ಎಂಬ ನೂತನ ಗ್ರಾಮವನ್ನು ನಿರ್ಮಿಸಿ ಇಲ್ಲಿಯ ಶ್ರೀ ಆದಿನಾಥ ಸ್ವಾಮಿಯ ಪೂಜಾದಿಗಳಿಗಾಗಿ ಸಮರ್ಪಿಸಿದ ವಿಚಾರವನ್ನು ತಿಳಿಸುತ್ತದೆ. ಜಿನಾಲಯಗಳು, ಶ್ರೀ ಗುರುಪೀಠ, ಇತಿಹಾಸ, ಸಂಸ್ಕೃತಿಯ ದೃಷ್ಟಿಯಿಂದ ಬಹು ಅಮೂಲ್ಯವಾದ ಮಾಹಿತಿಗಳನ್ನು ಈ ಶಿಲಾಶಾಸನಗಳು ನೀಡುತ್ತವೆ. ಜತೆಯಲ್ಲೇ ಅನೇಕ ಜೈನಾಚಾರ್ಯರು, ಮಂಗಳೂರು-ಬಾರಕೂರಿನ ರಾಜ್ಯಪಾಲರು, ಮುದರಾಡಿಯ ಹೆಗಡೆ ಮನೆತನದವರು, ತೆಂಕನಾಡು, ಬಡಗನಾಡಿಯವರು ಮತ್ತು ಜೈನಶ್ರಾವಕರು ಈ ಕ್ಷೇತ್ರಕ್ಕೆ ಕೈಗೊಂಡ ಸೇವಾದಿಗಳ ಕುರಿತು ಈ ಶಿಲಾಶಾಸನಗಳು ಹೊಸ ಬೆಳಕನ್ನು ಚೆಲ್ಲುತ್ತವೆ.