ಸದಸ್ಯ:Dinesha M/ನನ್ನ ಪ್ರಯೋಗಪುಟ1
ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ, ಗೇರುಸೊಪ್ಪೆ
ಸ್ಥಳ
ಬದಲಾಯಿಸಿಗೇರುಸೊಪ್ಪೆಯ ಬಸದಿಗಳ ಸಂಕೀರ್ಣಕ್ಕೆ ಪ್ರವೇಶಿಸುವಾಗ ಮೊದಲು ಸಿಗುವ ಬಸದಿಯೇ ಇದು. ನಮ್ಮ ಬಲಬಾಗಕ್ಕೆ ಇದೆ. ಇದರ ನಿವೇಶನದ ಈಶಾನ್ಯ ಮೂಲೆಯಲ್ಲಿ ತುಂಬಾ ಹೂಳು, ಕಸ ಕಡ್ಡಿಗಳು ತುಂಬಿರುವ ಇದರ ತೀರ್ಥಬಾವಿ ಇದೆ. ಆದರೆ ಇದನ್ನು ಉಪಯೋಗಿಸುತ್ತಿಲ್ಲ. ಈ ಚಿಕ್ಕ ಬಸದಿಯ ಗರ್ಭಗೃಹಕ್ಕೆ ಹಂಚಿನ ಮಾಡು ಇದೆ. ಇದು ಇಲ್ಲಿಯ ಶ್ರೀ ವರ್ಧಮಾನ ಸ್ವಾಮಿಯ ಬಸದಿಯನ್ನು ಹೋಲುತ್ತದೆ. ಇದಕ್ಕಿದ್ದ ಬೇರೆ ಮಂಟಪಗಳು ಈಗ ಅಸ್ತಿತ್ವದಲ್ಲಿಲ್ಲ. ಈ ಮೂಲಕ ಈ ಬಸದಿಯನ್ನು ಸುಲಭವಾಗಿ ಗುರುತಿಸಿಕೊಳ್ಳಬಹುದು.
ಪೂಜಾ ಕಾರ್ಯ
ಬದಲಾಯಿಸಿಇದರಲ್ಲಿ ನಿತ್ಯ ಪೂಜೆ ಇಲ್ಲ. ವಿಶೇಷ ಸಂದರ್ಭದಲ್ಲಿ ಅಭಿಷೇಕ ಹಾಗು ಸರಳವಾದ ಪೂಜೆಯನ್ನು ಮಾಡುತ್ತಾರಂತೆ. ಈ ಬಸದಿ ಮತ್ತು ಶ್ರೀ ವರ್ಧಮಾನ ಸ್ವಾಮಿ ಬಸದಿಯ ಮಧ್ಯದಲ್ಲಿ ಇವುಗಳಿಗೆ ಸಮಾನಾಂತರವಾಗಿ ಇನ್ನೆರಡು ಬಸದಿಗಳಿದ್ದಂತಹ ಕುರುಹುಗಳಿವೆ. ಅವುಗಳ ಅಸ್ತಿವಾರಗಳು ಮತ್ತು ಮೇಲೆ ಜರಿದು ಬಿದ್ದಿರುವ ಮಣ್ಣು ಕಲ್ಲುಗಳ ರಾಶಿ ಮಾತ್ರ ಇದೆ. ಪ್ರಸ್ತುತ ಈ ಬಸದಿಗೆ ಎದುರು ಇದ್ದ ಮಂಟಪಗಳ ಅಸ್ತಿವಾರವನ್ನು ಈಗ ಗುರುತಿಸಿಕೊಳ್ಳಬಹುದು, ಅಷ್ಟೇ!
ಶಿಲ್ಪಕಲೆ
ಬದಲಾಯಿಸಿಗರ್ಭಗೃಹದಲ್ಲಿ ಕಡು ನೀಲಿ ಬಣ್ಣದ ಶಿಲೆಯ ಸ್ವಾಮಿಯ ಮೂರ್ತಿಯು ನಯವಾದ ಅಂಗಾಂಗಗಳನ್ನು ಹೊಂದಿ ಬಹಳ ಸುಂದರವಾಗಿದೆ. ಸುಮಾರು ಮೂರು ಅಡಿ ಎತ್ತರವಿದೆ. ಕಾಲುಗಳು ಇಕ್ಕೆಲಗಳಲ್ಲಿ ಶ್ರೀ ಪದ್ಮಾವತಿ ದೇವಿ ಮತ್ತು ಧರಣೀಂದ್ರ ಯಕ್ಷರ ನಿಂತುಕೊಂಡಿರುವ ಉಬ್ಬು ಶಿಲ್ಪಗಳಿವೆ.[೧]
ರಚನೆ
ಬದಲಾಯಿಸಿಈ ಶಿಲ್ಪಗಳ ಮೇಲ್ಗಡೆಯಲ್ಲಿ ಕಂಬದಂತಹ ರಚನೆಗಳಿದ್ದು, ಅದಕ್ಕಿಂತ ಮೇಲ್ಗಡೆ ಮಕರ ಮೃಗ ಹಾಗು ಅವುಗಳ ಬಾಯಿಂದ ಹೊರಟ ಮಕರ ತೋರಣ ಮತ್ತು ಅದರ ಜತೆಯಲ್ಲಿ ಇನ್ನೂ ಕೆಲವು ಕೆತ್ತನೆಗಳಿವೆ. ಇಲ್ಲಿ ಚಾಮರಗಳನ್ನು ತೋರಿಸಿದೆಯಾದರು, ಚಾಮರಧಾರಿಗಳು ಇಲ್ಲ. ಬದಲಾಗಿ ಮಕರಗಳ ಮೇಲೆ ಯಾರೋ ಕುಳಿತುಕೊಂಡಿರುವಂತೆ ತೋರಿಸಲಾಗಿದೆ. ಏಳು ಬಾಯಿಗಳಿರುವ ನಾಗಫಣವು ಸ್ವಾಮಿಯ ಶಿರೋಭಾಗದಲ್ಲಿ ರಕ್ಷಣೆ ಮಾಡುತ್ತಿವೆ ಮತ್ತು ಹಿಂಬದಿ ಸುಳಿಯಾಕಾರದಲ್ಲಿ ಹರಡಿಕೊಂಡು ಪಾದದವರೆಗೂ ತಲುಪಿದೆ.
ವಿಶೇಷತೆ
ಬದಲಾಯಿಸಿಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸ್ವಾಮಿಯ ಶಿರದ ಮೇಲಿನ ಮುಕ್ಕೊಡೆಯಲ್ಲಿ ಮೂರು ಅಂಕಣಗಳಿಲ್ಲ. ದೊಡ್ಡದಾಗಿ ಅಲಂಕಾರಗೊಂಡಿರುವ ಒಂದೇ ಅಂಕಣವಿದೆ. ಅದರ ಮೇಲ್ಗಡೆಯಲ್ಲಿ ಚಿಕ್ಕದಾಗಿರುವ ಒಂದು ಶಿಖರ(ಮುಗುಳಿ)ದಂತಹ ರಚನೆ ಇದೆ. ಎಲ್ಲಕ್ಕಿಂತ ಮೇಲ್ಗಡೆ ಮಧ್ಯದಲ್ಲಿ ಕೀರ್ತಿಮುಖವಿದೆ. ಅಚ್ಚುಕಟ್ಟಾದ ಸಿಂಹಪೀಠದ ಮೇಲಿರುವ ಪದ್ಮಪೀಠದ ಮೇಲೆ ಪ್ರಶಾಂತತೆಯ ನಿಲುವಿನಿಂದ ಶ್ರೀ ಸ್ವಾಮಿ ವಿರಾಜಮಾನರಾಗಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ- ↑ ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂ ಶ್ರೀ ಪ್ರಿಂಟರ್ಸ್. pp. ೩೯೧.