ಮುತ್ತು ಕೊಡೋಳು ಬಂದಾಗ...

ಮಗನೆಂಬ ಮಮಕಾರ...

ಆಡಿ ಬಾ ಎನ್ನ ಕಂದ ಅಂಗಾಲ ತೊಳೆದೇನ

ತೆಂಗಿನ ಕಾಯಿ ತಿಳಿನೀರ l ತಕ್ಕೊಂಡು

ಬಂಗಾರದ ಮೋರೆ ತೊಳೆದೇನll

ಎಂಬ ಬೆಟಗೇರಿ ಕೃಷ್ಣಶರ್ಮರ ಈ ಸುಂದರ ಸ್ವಾರಸ್ಯಕರ ಜನಪದ ಪಧ್ಯದ ಸಾಲುಗಳನ್ನು ತಾವು ತಮ್ಮ ಶ್ರವಣಗಳಿಂದ ಆಲಿಸಿಲ್ಲ ಎಂದರೆ ನಾನು ನಂಬಲು ಸಿದ್ಧನಿಲ್ಲ.ಏಕೆಂದರೆ "ಹೆತ್ತ ತಾಯಿಗೆ ಹೆಗ್ಗಣವಾದರೂ ಮುದ್ದು"ಎಂಬಂತೆ ತಾಯಿ ತನ್ನ ಮಗುವಿನ ಮೇಲೆ ತೋರಿಸುವ ಕಾಳಜಿ,ಪ್ರೀತಿ,ಮಮತೆ ಮತ್ತು ವಾತ್ಸಲ್ಯವನ್ನು ಅತಿ ವಿಡಂಬನೀಯವಾಗಿ ವರ್ಣಿಸುವ ಪಧ್ಯಗಳಲ್ಲಿ ಇದು ಅತ್ಯಂತ ಪ್ರಮುಕವಾದುದು."ತಾಯಿ ಇರದ ತವರಿಲ್ಲ,ತಂದೆ ಇರದ ತಾಯಿಲ್ಲ".ತಾಯಿ ಮಮತೆ ತೋರಿಸಿದರೆ,ತಂದೆ ಗದುರಿಕೆ ತೋರಿಸುವನು.ತಂದೆ ಪ್ರೀತಿ ತೋರಿಸಿದರೆ,ತಾಯಿ ಕೋಪ ತೋರಿಸುವಳು.ಹೀಗೆ ಇಬ್ಬರೂ ಮಕ್ಕಳನ್ನು ಶಿಶ್ತುಬದ್ದವಾಗಿ ಹದ್ದುಬಸ್ತಿನಲ್ಲಿ ತಾವು ನೋವುಂಡು ಮಕ್ಕಳಿಗೆ ನಲಿವು ನೀಡುತ್ತಾ ಹೂವಿನಂತೆ ಬೆಳೆಸುವರು.ಮಕ್ಕಳನ್ನು ಓದಿಸುವ,ಆಸೆಗಳನ್ನು ಈಡೇರಿಸುವ ಮತ್ತು ಬೇಡಿದ್ದನ್ನು ಕೊಡಿಸುವಷ್ಟರಲ್ಲಿ ತಂದೆಯ ತಲೆಗೂದಲು ಮಾಯವಾಗುತ್ತಾ ಹೊರಟರೆ,ಮಕ್ಕಳನ್ನು ಜವಾಬ್ದಾರಿಯಿಂದ ನೋಡಿಕೊಂಡು,ಊಟ,ಆಟ ಮತ್ತು ಪಾಠ ಅಂತ ಬೆಳೆಸುವಷ್ಟರಲ್ಲಿ ತಾಯಿಯ ನೆನಪಿನ ಶಕ್ತಿ ಕ್ಷೀಣಿಸುತ್ತ ಹೋಗುತ್ತದೆ.ಗಂಡು ಮಕ್ಕಳಿಗೆ ಅವ್ವನನ್ನು ಕಂಡರೆ ಇಷ್ಟ,ಹೆಣ್ಣು ಮಕ್ಕಳಿಗೆ ಅಪ್ಪನನ್ನು ಕಂಡರೆ ತುಂಬಾ ಇಷ್ಟ ಮತ್ತು ತಮ್ಮ-ತಮ್ಮ ರಹಸ್ಯಗಳನ್ನು ಬಿಚ್ಚಿಡೋದು ಕೂಡ ಅವರವರಿಗೆ ಇಷ್ಟವಾದವರ ಮುಂದೆನೇ.ಆದರೆ ದಾರಿ ತಪ್ಪಿದಾಗ ಮಾತ್ರ ಗಂಡು ಮಕ್ಕಳು ಅಪ್ಪನಿಗೆ ಹೆದರಿದರೆ,ಹೆಣ್ಣು ಮಕ್ಕಳು ಅವ್ವನಿಗೇ ಹೆದರೋದು.ಹೀಗೆ ಪ್ರತಿಯೊಬ್ಬ ತಂದೆ-ತಾಯಿನೂ ತಮ್ಮ ಮಕ್ಕಳನ್ನು ತಮಗೆ ಕಷ್ಟವಿದ್ದರೂ ಇಷ್ಟಪಟ್ಟು ಬೆಳೆಸುವರು.ತಮ್ಮ ಮಗ ಅಥವಾ ಮಗಳು ನಾಳಿನ ಪ್ರಪಂಚಕ್ಕೆ ಶ್ರೇಷ್ಟ ವ್ಯಕ್ತಿಗಳಾಗಲಿ,ನಾಡಿಗೆ ಕೊಡುಗೆಯಾಗಲಿ,ತಮ್ಮ ಮನೆತನದ ಕೀರ್ತಿ ಹೆಚ್ಚಿಸಲೆಂದು ಆಶಿಸುವರು.ತಾವು ಪಟ್ಟಿರುವ ಕಷ್ಟವನ್ನು ತಮ್ಮ ಮಕ್ಕಳು ಪಡದಿರಲಿ ಅಂತ ದೇವರಲ್ಲಿ ಪ್ರಾರ್ಥಿಸುವರು.ಯಾಕೋ ಗೊತ್ತಿಲ್ಲ ಕೀರ್ತಿಗಾಗಿಯೇ ಹುಟ್ಟಿರುವ ಕೆಲವು ಗಂಡು ಮಕ್ಕಳು ಮದುವೆಯ ಮುಂಚೆ ಮನುಷ್ಯರಾಗಿದ್ದವರು,ಮದುವೆಯ ನಂತರ ಮೃಗಗಳಂತೆ ವರ್ತಿಸೋಕೆ ಆರಂಭ ಮಾಡ್ತಾರೆ.ಪ್ರೀತಿಯಿಂದ ಕಾಣುತಿದ್ದ ಹೆತ್ತವರನ್ನು ತಾತ್ಸಾರ ಮನೋಭಾವದಿಂದ ಕಾಣುತ್ತಾರೆ.ತಾವು ಉಪವಾಸವಿದ್ದು ಮಕ್ಕಳಿಗೆ ಉಣ್ಣಿಸುತಿದ್ದ ಹೆತ್ತವರಿಗೆ ಮಗ ನೀಡುವುದು ತಾನು ಮತ್ತು ತನ್ನ ಕುಟುಂಬ ತಿಂದು ಉಳಿದಿದ್ದನ್ನು.ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ ಮರಿತಾರೆ.

ಈ ವಿಷಯಕ್ಕೆ ಪೂರಕ ಎಂಬಂತೆ ಇತ್ತಿಚಿಗೆ ವಾಟ್ಸಫ್ ನಲ್ಲಿ ಎರಡು ಸಂದೇಶಗಳು ಹರಿದಾಡುತ್ತಿದ್ದವು.ಗ್ರಾಮಗಳಿಗೂ ಮತ್ತು ಪಟ್ಟಣಗಳಿಗೂ ಇರುವ ವ್ಯತ್ಯಾಸವೇನೆಂದರೆ ಗ್ರಾಮಗಳಲ್ಲಿ ಮಕ್ಕಳು ತಂದೆ-ತಾಯಿಯನ್ನು ಮನೆಯೊಳಗೆ ಇಟ್ಟುಕೊಂಡು ನಾಯಿಯನ್ನು ಮನೆ ಹೊರಗೆ ಇಟ್ಟಿರುತ್ತಾರೆ.ಆದರೆ ಪಟ್ಟಣಗಳಲ್ಲಿ ನಾಯಿಯನ್ನು ಮನೆಯೊಳಗೆ ಬಿಟ್ಟುಕೊಂಡು ತಂದೆ-ತಾಯಿಯನ್ನು ಮನೆಯಿಂದ ಹೊರಗೆ ಬಿಟ್ಟಿರುತ್ತಾರೆ.ಅಂದರೆ ವೃದ್ಧಾಶೃಮಗಳಲ್ಲಿ ಇಟ್ಟಿರುವುದು ಒಂದು.ಎರಡನೇಯದು ಒಬ್ಬಳು ಹೆಣ್ಣು ಮಗಳು ತವರನ್ನು ಬಿಟ್ಟು ಗಂಡನ ಮನೆಗೆ ಹೋಗಬೇಕಾದರೆ ದುಃಖಿತಳಾಗಿ ತನ್ನ ತಂದೆಯ ಹಣೆಗೆ ಮುತ್ತಿಡುವ ದೃಶ್ಯವದು.ಹೆಣ್ಣು ಮಕ್ಕಳಿಗೆ ತನ್ನ ಹೆತ್ತವರನ್ನು ತನ್ನ ಜೋತೆಗೆ ಇಟ್ಟುಕೊಳ್ಳುವ ಹಕ್ಕು ಇದ್ದಿದ್ದರೆ ಈ ದೇಶದಲ್ಲಿ ವೃದ್ಧಾಶೃಮಗಳೇ ಇರುತ್ತಿರಲಿಲ್ಲ ಎಂಬ ಮಾತು.

2016 ನವ್ಹಂಬರ್ 29 ರಂದು ದೇಹಲಿಯ ಹೈಕೋರ್ಟ್ ಇದೇ ವಿಷಯಕ್ಕೆ ಸಂಬಂಧಿಸಿದಂತೆ "ಹೆತ್ತವರು ಗಳಿಸಿದ ಮನೆಯಲ್ಲಿ ಮಗನಿಗೆ (ಮದುವೆಯಾಗಿದ್ದರೂ ಅಥವಾ ಆಗದಿದ್ದರೂ)ಇರುವ ಹಕ್ಕಿಲ್ಲ,ಅವರೆನಾದರೂ ದಯೆತೋರಿದರೆ ಅವರು ಇಟ್ಟುಕೊಳ್ಳುವ ವರೆಗೆ ಇರಬಹುದು ಮತ್ತು ಜೋತೆಗೆ ಇರಿಸಿಕೊಳ್ಳುವರೆಂಬ ಕಾರಣಕ್ಕೆ ಮಗನ ಇಡಿ ಜೀವನದ ಖರ್ಚನ್ನು ಹೆತ್ತವರೇ ಭರಿಸಿಬೇಕೆಂದಿಲ್ಲ".ಎಂಬ ಆದೇಶ ಒಂದನ್ನು ಹೊರಡಿಸಿತ್ತು.ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರಳು-ಮರಳು ಎಂಬಂತೆ 60ವಯಸ್ಸು ಮೀರಿರುವವ ಸಂಖ್ಯೆ 1991ರಲ್ಲಿ ಶೇಕಡ 6.8,2016ರಲ್ಲಿ ಶೇಕಡ 8.9 ಎಂದು ತಿಳಿದಿದ್ದು,ಯುಎನ್ ಸಮಿಕ್ಷೆಯ ಪ್ರಕಾರ 2050 ರ ವೇಳೆಗೆ ಈ ಸಂಖ್ಯೆ ಶೇಕಡ 22ನ್ನು ದಾಟಲಿದೆಯಂತೆ.ಕೇರಳದಲ್ಲಿ ಹೆಚ್ಚುತ್ತಿರುವ ಹಿರಿಯ ನಾಗರೀಕರ ಸಂಖ್ಯೆಯು ಬೇರೆ ರಾಜ್ಯಗಳಿಗಿಂತಲೂ ತುಂಬಾ ವೇಗವಾಗಿದ್ದು, 2021 ಮತ್ತು 2026 ರ ವೇಳೆಗೆ ಕ್ರಮವಾಗಿ ಶೇಕಡ 16 ಮತ್ತು 20 ನ್ನು ತಲುಪಲಿದೆಯಂತೆ.ಈ ಹುಟ್ಟು ಸೂರ್ಯೋದಯ,ಸಾವೇ ಸೂರ್ಯಾಸ್ತ ಮತ್ತು ನಡುವೆ ಬರುವ ಯೌವನವು ಮದ್ಯಾಹ್ನ,ಸಂಜೆ ಎಂಬುವುದೇ ಮುಪ್ಪು.ಇದು ಸಹಜ ಮತ್ತು ಸ್ವಾಭಾವಿಕ ಪ್ರಕ್ರಿಯೆಯಾಗಿದ್ದು ಎಂತಹವರಿಗೂ ಬಾರದೇ ಇರದು.ಹೀಗೆ ಎಡೆ-ಬಿಡದೇ ಏರುತ್ತಿರುವ ವಯಸ್ಕರ ಸಂಖ್ಯೆ ಒಂದೆಡೆಯಾದರೆ,ಇವರನ್ನು ನೋಡಿಕೊಳ್ಳದೇ ವೃದ್ಧಾಶೃಮಗಳಿಗೆ ಹೋಗಿ ಬಿಟ್ಟು ಬರುವ ಮಕ್ಕಳಿಂದ ವೃದ್ಧಾಶೃಮಗಳ ಸಂಖ್ಯೆಯೂ ಏರುತ್ತಾ ಇದೆ.ಆದರೆ ಇವುಗಳಿಗೆ ಧಾನ ನೀಡುವವರ ಸಂಖ್ಯೆ ಮಾತ್ರ ಕ್ಷೀಣಿಸುತ್ತಲೇ ಹೊರಟಿದೆ.

ಕೈಯಿಗೆ ಗಾಯವಾಗಿದೆ ಎಂದು ಕೈಯನ್ನೇ ಕತ್ತರಿಸುತ್ತೇವೆಯೇ?.ಮತ್ಯಾಕೆ ವಯಸ್ಸಾಗಿದೆಯೆಂಬ ಮಾತ್ರಕ್ಕೆ ಹೆತ್ತವರನ್ನು ವೃದ್ಧಾಶೃಮಗಳಲ್ಲಿ ಬಿಡುವುದು?.ಹೆತ್ತ ತಂದೆ-ತಾಯಿಗೆ ನೀಡಲು ಒಂದು ಅನ್ನದ ತುತ್ತಿಗೂ ಗತಿಯಿಲ್ಲವೇ?.ತಂದೆ-ತಾಯಿಯನ್ನು ಮಕ್ಕಳು ವೃದ್ಧಾಶೃಮಗಳಲ್ಲಿ ಬಿಡಲು ಮೂರು ಕಾರಣಗಳಿವೆ.ಒಂದು ತಮ್ಮ ಕುಟುಂಬವನ್ನೇ ನೋಡಿಕೊಳ್ಳುವುದು ಬಾರವಾಗಿರುವಾಗ ಇವರನ್ನೇಗೆ ನೋಡಿಕೊಳ್ಳುವುದು ಎಂಬ ಭಾವನೆ.ಎರಡು ಆಗಾಗ ಅತ್ತೆ-ಸೊಸೆಯ ಮಧ್ಯ ಆಗುವ ಸಣ್ಣ-ಪುಟ್ಟ ಜಗಳಗಳು.ಮೂರನೆಯದು ಮೊಮ್ಮಕ್ಕಳ ಪ್ರವೃತ್ತಿಯು ಹಿರಿಯರಿಗೆ ಹಿಡಿಸದೆ ಅವರ ವ್ಯಯಕ್ತಿಕ ಜೀವನದಲ್ಲಿ ಭಾಗವಹಿಸುವುದು.ಈ ಬಗ್ಗೆ ಯಾವಾಗೋ ಯಾರೋ ಕಳುಹಿಸಿದ ಸಣ್ಣ ಸಂದೇಶ ನೆನಪಿಗೆ ಬರುತ್ತಿದೆ.ಯಾವುದೋ ವಿಷಯಕ್ಕೆ ಸಂಬಂಧಿಸಿ ಮಗ ತನ್ನ ತಾಯಿಯನ್ನು ವೃದ್ಧಾಶೃಮಕ್ಕೆ ಹೋಗಿ ಬಿಟ್ಟು ಬರುತ್ತಿದ್ದ ಸನ್ನಿವೇಶವದು.ಮಗ ತಾಯಿಯನ್ನು ಅಲ್ಲಿ ಬಿಟ್ಟ ತಕ್ಷಣ ಅವಳು ಮೊದಲು ಹೇಳಿದ್ದು "ನೋಡು ಮಗ ಆ ಕಿಟಕಿ,ಫ್ಯಾನು ರಿಪೇರಿ ಮಾಡಿಸು ಮತ್ತು ಮೇಲೆಹಾಕಿರುವ ಹಂಚುಗಳು ಎಲ್ಲ ಸಿಳಿವೆ ಮಳೆಗಾಲದಲ್ಲಿ ಸೋರಬಹುದು ಅವನ್ನು ಸ್ವಲ್ಪ ನೋಡು".ಅದಕ್ಕೆ ಅವನು "ನಿನಗೇಕಮ್ಮ ಆ ಚಿಂತೆ ಅವರು ಮಾಡಿಸ್ತಾರೆ ನೀನು ಆರಾಮಾಗಿರು".ಹೀಗೆ ಹೇಳಿ ಬಿಟ್ಟು ಹೋದವನು ತುಂಬಾ ದಿನಗಳ ತಾಯಿಗೆ ಹುಷಾರಿಲ್ಲದ ವಿಷಯ ಕೇಳಿ ಹಾಸ್ಪಿಟಲ್ ಗೆ ಬರ್ತಾನೆ.ಅಲ್ಲಿ ತಾಯಿ ಮತ್ತೆ ಅದೇ ಕೋರಿಕೆ ಇಡುತ್ತಾಳೆ.ಮಗ "ಅಮ್ಮ ನೀನು ಇಂದೋ ನಾಳೆಯೋ ಸಾಯೋಳು ಅದನ್ನು ಯಾರಿಗೋಸ್ಕರ ಮಾಡಿಸೋದು".ಅಂದತಕ್ಷಣ ತಾಯಿ "ಮಗ ನನಗೆ ಗೊತ್ತು ನಾಳೆ ನೀನೂ ಇಲ್ಲೇ ಬರ್ತಿಯಾ,ನಿನ್ನ ಮಕ್ಕಳು ನಿನ್ನೂ ಇಲ್ಲೇ ಕಳುಹಿಸುತ್ತಾರೆ ಅಂತ.ಅದಕ್ಕೆ ಈಗಲೇ ಎಲ್ಲ ಸಿದ್ದತೆಗಳನ್ನು ಮಾಡಿಕೋ ಏಕೆಂದರೆ ನನಗಾದ ನೋವು,ಕಷ್ಟ ನೀನು ಅನುಭವಿಸುವುದು ಬೇಡ".ಎಂದು ಸಾಯುವ ಸಮಯದಲ್ಲೂ ಹೆತ್ತ ಕರುಳು ರೋದಿಸುತ್ತಾ ಹೀಗೆ ಹೇಳುತ್ತದೆಯೆಂದರೆ ತಾಯಿ-ತಂದೆಯ ಪ್ರೀತಿಗಿಂತ ಇನ್ನೇನುಬೇಕು?.ಬುದ್ಧಿಶಾಲಿಗಳಾದ ಮನುಷ್ಯರೇ ಹೀಗಾದರೆ ಪ್ರಾಣಿ-ಪಕ್ಷಿ,ಕ್ರಿಮಿ-ಕೀಟ ಮತ್ತು ಚರಾಚರಗಳ ಗತಿಯೇನು?.

--ಭೀರೇಶ ಕೋಟಿ

--8892570977

--bk9901195844@gmail.com