ನಮ್ಮ ತಪ್ಪುಗಳು ಕ್ಷಮಿಸುವಂತಿರಲಿ....--Balyadalava ೧೦:೧೫, ೨೩ ಜನವರಿ ೨೦೧೧ (UTC)

  • ಲವಕುಮಾರ್, ಮೈಸೂರು

ನಾವು ಮನುಷ್ಯರು ಹಲವು ತಪ್ಪುಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಅರಿತೋ, ಅರಿಯದೆಯೋ ಮಾಡುತ್ತಿರುತ್ತೇವೆ. ಆದರೆ ನಾವು ಮಾಡಿದ್ದು ತಪ್ಪು ಎಂಬುವುದು ಅರಿವಾದ ತಕ್ಷಣ ಪಶ್ಚಾತ್ತಾಪ ಪಡುವುದು, ಜೊತೆಗೆ ಮುಂದಿನ ಸಾರಿ ಅಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುವುದನ್ನು ಪ್ರತಿಯೊಬ್ಬರು ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಹಾಗಾದಲ್ಲಿ ನೆಮ್ಮದಿಯ, ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.

ನಮ್ಮ ಮುಂದಿರುವ ಆದರ್ಶ ವ್ಯಕ್ತಿಗಳ ಬದುಕಿನ ಬಗ್ಗೆ ಕೆದಕಿ ನೋಡಿ ಅವರು ಕೂಡ ಹಲವು ತಪ್ಪುಗಳನ್ನು ಮಾಡಿರುತ್ತಾರೆ. ಆದರೆ, ಅಂತಹ ತಪ್ಪುಗಳನ್ನು ಅವರು ತಿದ್ದಿಕೊಂಡಿರುತ್ತಾರೆ. ಕೆಲವೊಮ್ಮೆ ಅವರು ಮಾಡಿದ ತಪ್ಪೇ ಅವರಿಗೊಂದು ಪಾಠ ಕಲಿಸಿರುತ್ತದೆ. ಅಷ್ಟೇ ಅಲ್ಲ ಆದರ್ಶ ಬದುಕಿಗೆ ಮುನ್ನುಡಿ ಬರೆದಿರುತ್ತದೆ. ನಮ್ಮಿಂದ ಕೆಲವೊಮ್ಮೆ ನಮಗರಿವಿಲ್ಲದೇ ತಪ್ಪುಗಳು ನಡೆದು ಹೋಗಬಹುದು, ಅಂತಹ ತಪ್ಪುಗಳಿಗೆ ಕ್ಷಮೆಯಿದೆ. ಆದರೆ ಗೊತ್ತಿದ್ದೂ ತಪ್ಪು ಮಾಡುತ್ತಾ ಅದನ್ನು ಸರಿಯೆಂದು ಸಮರ್ಥಿಸಿಕೊಳ್ಳುವುದಿದೆಯಲ್ಲಾ ಅದು ಮಾತ್ರ ಕ್ಷಮಿಸಲಾರದ್ದು. ಅಂತಹ ತಪ್ಪುಗಳಿಗೆ ತಕ್ಷಣಕ್ಕೆ ಅಲ್ಲದಿದ್ದರೂ ಕ್ರಮೇಣ ಬೆಲೆ ತೆರಬೇಕಾಗುತ್ತದೆ.

ಹಿಂತಿರುಗಿ ನೋಡಿ ಒಮ್ಮೆ: ರಾತ್ರಿ ಮಲಗುವಾಗ ಮನಸ್ಸನ್ನು ನಿರಾಳವಾಗಿಸಿ ಒಂದು ಕ್ಷಣ ಮುಂಜಾನೆಯಿಂದ ರಾತ್ರಿಯವರೆಗೆ ನಾವು ಏನೇನು ಮಾಡಿದ್ದೆವೆಯೋ ಅದನ್ನೆಲ್ಲಾ ನೆನಪಿಸಿಕೊಳ್ಳಿ. ಆಗ ನಮಗೆ ಎಲ್ಲಿ ಎಡವಿದ್ದೇವೆ ಎಂಬುವುದು ಅರಿವಾಗುತ್ತದೆ. ಬೆಳಗ್ಗಿನಿಂದ ರಾತ್ರಿಯವರೆಗೆ ನಾವು ಏನೇನೋ ಕಾರ್ಯಗಳನ್ನು ಮಾಡಿರುತ್ತೇವೆ. ಅದರಲ್ಲಿ ಎಷ್ಟು ಒಳ್ಳೆಯದು, ಕೆಟ್ಟದೆಷ್ಟು ಎಂಬುವುದು ಖಂಡಿತಾ ನಮ್ಮ ಅರಿವಿಗೆ ಬಂದಿರುತ್ತದೆ. ನಾವು ಮಾಡಿದ ತಪ್ಪು ಯಾವುದಾದರು ಇದ್ದರೆ, ಅದು ನಮ್ಮ ಅರಿವಿಗೆ ಬಂದದ್ದೇ ಆದರೆ ಛೆ! ಎಂತಹ ತಪ್ಪು ಮಾಡಿಬಿಟ್ಟೆ? ಹಾಗೆಂದು ಪಶ್ಚಾತ್ತಾಪ ಪಟ್ಟದ್ದೇ ಆದರೆ, ಮುಂದೆ ಅಂತಹ ತಪ್ಪುಗಳಾಗದಂತೆ, ತಡೆಯುವ ಸಾಮರ್ಥ್ಯ ನಮ್ಮಲ್ಲಿ ಗಟ್ಟಿಗೊಳ್ಳುತ್ತದೆ.

ನಮ್ಮ ತಪ್ಪುಗಳಿಂದ ನಮಗೆ ತೊಂದರೆ ಆಗಿದ್ದರೆ ಪರ್ವಾಗಿಲ್ಲ ಅದನ್ನು ಶಿಕ್ಷೆ ಅಂದುಕೊಳ್ಳೋಣ. ಆದರೆ ಆ ತಪ್ಪಿನಿಂದ ಬೇರೆಯವರಿಗೆ, ಅಮಾಯಕರಿಗೆ ಹಾನಿಯಾಗಿದ್ದರೆ ಅದರಿಂದಾಗುವ ಅನಾಹುತಕ್ಕೆ ಒಂದಲ್ಲಾ ಒಂದು ದಿನ ಕಂದಾಯ ಕಟ್ಟಲೇ ಬೇಕಾಗುತ್ತದೆ. ಆ ದಿನ ನಾನು ಎಂತಹ ತಪ್ಪು ಮಾಡಿಬಿಟ್ಟೆನಲ್ಲಾ ಎಂದು ಕೊರಗಬೇಕಾಗುತ್ತದೆ.

ನಾವು ಮಾಡಿದ ಒಳ್ಳೆ ಕಾರ್ಯದಿಂದ ಒಂದಷ್ಟು ಮಂದಿಗೆ ಒಳ್ಳೆಯದಾಗಿದ್ದರೆ ಮನಸ್ಸಿಗೆ ಅದೇನೋ ನೆಮ್ಮದಿ ದೊರೆಯುತ್ತದೆ. ನಾವ್ಯಾರಿಗೋ ಕೆಟ್ಟದ್ದು ಬಯಸಿದ್ದರೆ ಅಥವಾ ಮಾಡಿದ್ದರೆ ಎಲ್ಲೋ ಒಂದು ಕಡೆ ಚೇಳು ಕುಟುಕಿದ ಅನುಭವವಾಗುತ್ತಲೇ ಇರುತ್ತದೆ. ನೆಮ್ಮದಿ ಯಾವತ್ತೋ ನಮ್ಮಿಂದ ದೂರ ಸರಿದು ಹೋಗಿರುತ್ತದೆ. ಆದುದರಿಂದ ಇದ್ದಷ್ಟು ದಿನ ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದಿದೆಯಲ್ಲಾ ಅದು ನಾವು ಕೊಡಬಹುದಾದ ಕೊಡುಗೆ ಎಂದರೆ ತಪ್ಪಾಗಲಾರದು. ನಮ್ಮದು ಕೆಟ್ಟ ಮನೋಸ್ಥಿತಿಯಾಗಿದ್ದರೆ ನಾವು ಯಾವತ್ತೂ ಕೆಟ್ಟದಾಗಿಯೇ ಯೋಚಿಸುತ್ತಿರುತ್ತೇವೆ. ಕೆಟ್ಟದನ್ನೇ ಮಾಡುತ್ತಿರುತ್ತೇವೆ.

ಅಷ್ಟೇ ಅಲ್ಲ ಅದನ್ನು ಸರಿ ಅಂತ ಸಮರ್ಥಿಸಿಕೊಳ್ಳುತ್ತಿರುತ್ತೇವೆ. ಆದರೆ ಅದು ನಮ್ಮ ಮಟ್ಟಿಗೆ ಒಳ್ಳೆಯದೇ ಎಂಬಂತೆ ಭಾಸವಾಗುತ್ತದೆಯಾದರೂ ಮುಂದೆ ಅದಕ್ಕೆ ಭಾರೀ ಬೆಲೆ ತೆರಬೇಕಾಗುವ ಪ್ರಸಂಗ ಬಂದೇ ಬರುತ್ತದೆ. ಆ ದಿನ ನಾವು ಮಾಡಿದ ತಪ್ಪಿನ ಅರಿವಾಗುತ್ತದೆ. ಆದರೆ ಆ ವೇಳೆಗೆ ನಾನು ಮಾಡಿದ್ದು ತಪ್ಪು, ನನ್ನನ್ನು ಕ್ಷಮಿಸಿ ಬಿಡು ಎಂದರೂ ಕ್ಷಮಿಸಲು ಅಲ್ಲಿ ಯಾರೂ ಇರುವುದಿಲ್ಲ.

ಬಾಲ್ಯದಲ್ಲಿ ಮಾಡಿದ ತಪ್ಪಿಗೆ ಯೌವನದಲ್ಲಿಯೂ, ಯೌವನದಲ್ಲಿ ಮಾಡಿದ ತಪ್ಪಿಗೆ ಮುಪ್ಪಿನಲ್ಲಿಯೂ ಪಶ್ಚಾತ್ತಾಪ ಪಡಬೇಕಾಗುತ್ತದೆ. ನಾವು ಮಾಡಿದ ತಪ್ಪನ್ನು ಕಂಡು ಹಿಡಿದು ಇದು ತಪ್ಪು, ಹಾಗೆ ಮಾಡಬೇಡ ಎನ್ನುವವರು ಸಿಕ್ಕೇ ಸಿಗುತ್ತಾರೆ. ಆ ಸಂದರ್ಭ ತಪ್ಪನ್ನು ಸರಿಪಡಿಸಿಕೊಳ್ಳುವ ಬದಲು ನಮ್ಮ ತಪ್ಪನ್ನು ಕೈ ತೋರಿಸಿ ಹೇಳುವಾತನ ಮೇಲೆಯೇ ಎರಗಿ ಬೀಳುವುದಿದೆಯಲ್ಲ ಅದು ನಮಗೆ ನಾವೇ ತೋಡಿಕೊಳ್ಳುವ ಕಂದಕ ಎಂದರೆ ತಪ್ಪಾಗಲಾರದು.

ನಮ್ಮ ತಪ್ಪನ್ನು ಯಾರು ಹುಡುಕಿ ಹೇಳುತ್ತಾರೆಯೋ ಅವರನ್ನು ಪ್ರೀತಿಸಿ, ಆ ಕ್ಷಣದ ಮಟ್ಟಿಗೆ ಅವರು ನಿಮ್ಮ ಗುರು ಎಂದುಕೊಳ್ಳಿ. ನಿಮಗೆ ತಿಳಿಯದ ತಪ್ಪನ್ನು ಅವನು ಹುಡುಕಿದ್ದಾನೆ ಎಂದ ಮೇಲೆ ಅವನು ಭಿಕಾರಿಯಾದರೂ ಗುರುವೆಂದೇ ಒಪ್ಪಿಕೊಳ್ಳುವುದು ನಮ್ಮ ದೊಡ್ಡತನವಾಗಬೇಕು. ಏಕೆಂದರೆ ಆತ ಮುಂದೆ ನಮ್ಮ ಬದುಕಿನಲ್ಲಿ ನಾವೇ ತಂದುಕೊಳ್ಳಬಹುದಾದ ದೊಡ್ಡ ದುರಂತವನ್ನೇ ತಪ್ಪಿಸಿರುತ್ತಾನೆ.