ಗುಡ್ಡೆ ಬಸವಣ್ಣ ದೇವಸ್ಥಾನ ಬೈಕೆರೆ

ಸಕಲೇಶಪುರ: ಪಶ್ಚಿಮಕ್ಕೆ ಮುಖ ಮಾಡಿದರೆ ಮುಗಿಲಿಗೆ ಮುತ್ತಿಕ್ಕುವ ಹಸಿರು ತೋರಣ ತೋಟ– ಬೆಟ್ಟಗಳ ಸಾಲು, ಪೂರ್ವದಲ್ಲಿ ಹಸಿರು ಹರಡಿ ಕೊಂಡ ಕಾಫಿ ತೋಟಗಳ ನಿಸರ್ಗದ ಸೆರಗಿನಲ್ಲಿರುವ ಬೈಕೆರೆ ಗ್ರಾಮದ ಗುಡ್ಡೆ ಬಸವಣ್ಣ ದೇವಸ್ಥಾನ ಈಗ ಪ್ರವಾಸಿಗರನ್ನು ಕೈಬೀಸಿ ಕರೆಯಲು ಸಜ್ಜಾಗಿ ನಿಂತಿದೆ. ಪಟ್ಟಣದಿಂದ  ಕೇವಲ ನಾಲ್ಕು ಕಿ.ಮೀ. ದೂರದ ಬೈಕೆರೆ ಗುಡ್ಡದಲ್ಲಿ ಪುನರ್‌ ನಿರ್ಮಾಣಗೊಂಡಿರುವ ಗುಡ್ಡೆ ಬಸವಣ್ಣ ದೇವಸ್ಥಾನ ಆಕರ್ಷಣೀಯವಾಗಿದೆ.

ಇತಿಹಾಸ: ಈ ದೇವಸ್ಥಾನವನ್ನು ಗ್ರಾಮದ ಪೂರ್ವಜರು ಬೈಕೆರೆ ಹಾಗೂ ನಾಗರ ಗ್ರಾಮಗಳ ಮಧ್ಯದಲ್ಲಿರುವ ಗುಡ್ಡದ ಮೇಲೆ ಕಲ್ಲಿನಿಂದ ಬಹಳ ಚಿಕ್ಕದಾಗಿ 1750ರಲ್ಲಿ ನಿರ್ಮಾಣ  ಮಾಡಿದ್ದರು. ಸುತ್ತಲೂ ಗಿಡಗಂಟಿಗಳು ಬೆಳೆದು ಅಲ್ಲಿ ಒಂದು ಐತಿಹಾಸಿಕ ದೇವಸ್ಥಾನ ಇದೆ ಎಂಬುದೇ ಜನರಿಗೆ ಸರಿಯಾಗಿ ಗೊತ್ತಿರಲಿಲ್ಲ.

ಸುಗ್ಗಿ, ಹಬ್ಬದ ದಿನಗಳಲ್ಲಿ ಮನೆಯ ಹಿರಿಯರು ಬಸವಣ್ಣನಿಗೆ ಹಾಲಿನ ಅಭಿಷೇಕ ಮಾಡಿ ಹೋಗುತ್ತಿದ್ದರು. ಪಶ್ಚಿಮಘಟ್ಟದ ಮಲೆನಾಡಿನ ಸುಂದರ ಪರಿಸರದಲ್ಲಿ ಇರುವ ದೇವಸ್ಥಾನವನ್ನು 2004ರಲ್ಲಿ ಪುನರ್‌ ನಿರ್ಮಾಣ ಮಾಡಿ ಅದಕ್ಕೊಂದು ಸುಂದರ ರೂಪ ಕೊಡಲು ಮುಂದಾದವರು ಕಳೆದ 25 ವರ್ಷಗಳಿಂದ ಕೇಂದ್ರ ಸರ್ಕಾರದ ವಿವಿಧ ಮಂತ್ರಾಲಯಗಳಲ್ಲಿ ನಿರ್ದೇಶಕ ಶ್ರೇಣಿಯ ಅಧಿಕಾರಿಯಾಗಿ, ಇದೀಗ ಕೇಂದ್ರ ಸರ್ಕಾರದ ಸಲಹೆಗಾರರು ಹಾಗೂ ಸಮನ್ವಯಕಾರರಾಗಿ ದೆಹಲಿಯಲ್ಲಿರುವ ಇದೇ ಗ್ರಾಮದ ಬೈಕೆರೆ ನಾಗೇಶ್‌.