"ಕನ್ನಡ ಕುಲ ತಿಲಕ"

"ಕರ್ಣಾಟಕ ರತ್ನ ಸಿಂಹಾಸನಾಧೀಶ್ವರ"

"ವೀರ ಕಂಪಿಲರಾಯ" ಚರಿತೆ :-(1300-1327).

* ಕನ್ನಡದ ದೊರೆ "ಮುಮ್ಮಡಿ ಸಿಂಗೇಯ ನಾಯಕ"ನು ತನ್ನ ಸ್ವಂತ ಬಲದಿಂದ ಒಂದು ಸ್ವತಂತ್ರ ರಾಜ್ಯವನ್ನು ಕಟ್ಟಿಕೊಂಡು ದಕ್ಷಿಣ ಭಾರತದ ಪ್ರಮುಖ ರಾಜರ ಮೇಲೆ ವಿಜಯ ಸಾಧಿಸಿ ತನ್ನದೇ ಆದ ಛಾಪು ಮೂಡಿಸಿ ದೈವಾಧೀನರಾದಾಗ ಅವನ ಮಗ ಕಂಪಿಲರಾಯನಿಗೆ ಆಗಿನ್ನು ಎಳೆಯ ಹದಿನೆಂಟು ವರ್ಷ.

*"ಮುಮ್ಮಡಿ ಸಿಂಗೇಯನಾಯಕ" ಮತ್ತು "ಮಾದನಾಗತಿಗೆ" ಹುಟ್ಟಿದ ಮಗನೇ

"ಶ್ರೀಮನ್ಮಹಾನಾಯಕಚಾರ್ಯ"

"ವೀರ ಕಂಪಿಲರಾಯ".

*ಸಿಂಗೇಯನಾಯಕನ ಕುಲದೈವವಾದ

ಕಂಪ್ಲಿಯ(ಬಳ್ಳಾರಿ ಜಿ ) ಶ್ರೀ ಸೋಮೇಶ್ವರನ ವರಪ್ರಸಾದದಿಂದ ಹುಟ್ಟಿದ ಮಗನಿಗೆ ಸೋಮೇಶ್ವರ ಎಂಬ ಹೆಸರನ್ನು ಬಿಟ್ಟು 'ಕಂಪಲಿದೇವ' ಎಂದು ನಾಮಕರಣ ಮಾಡಿದನು. ಇದರ ಅರ್ಥ ಕಂಪ್ಲಿ  ಪಟ್ಟಣದ ಅಧಿದೇವತೆ ಸೋಮೇಶ್ವರ ಹಾಗಾಗಿ ಕಂಪಲಿದೇವ ಎಂದು ನಾಮಕರಣ ಮಾಡಿರಬಹುದು ಎನ್ನಿಸುತ್ತದೆ. 'ಕಂಪಿಲರಾಯನ' ಇನ್ನೊಂದು ಹೆಸರು 'ಖಂಡೇರಾಯ' ಇದಕ್ಕೆ ಕಾರಣ ಕಂಪ್ಲಿ ಪಟ್ಟಣದ ಸೋಮೇಶ್ವರನು ಖತ್ತಿಯನ್ನು ಹಿಡಿದು ರೌದ್ರಭಾವವನ್ನು ವ್ಯಕ್ತಪಡಿಸುವ ರೀತಿಯಲ್ಲಿ ಕಾಣಿಸುತ್ತಾನೆ ಆದುದರಿಂದ ಖಂಡೇರಾಯ ಎಂದಿರಬಹುದು.

*ಕಂಪಿಲದೇವನನ್ನು ಶಾಸನಗಳಲ್ಲಿ "ವೀರಕಂಪಿಲರಾಯ" ಎಂದು ಕರೆದರೆ ಸಾಂಗತ್ಯಗಳಲ್ಲಿ "ಕಂಪಲಿರಾಯ" ಎಂದು ಕರೆಯಲಾಗಿದೆ. ಮೊದಮೊದಲು ಕಂಪಲಿಯೇ ಕಂಪಿಲರಾಯನ ರಾಜಧಾನಿಯಾಗಿರಬಹುದೆಂದು ಊಹಿಸಲಾಗಿತ್ತು ಆದರೆ ಕಂಪಲಿಯು ಒಂದು ಪ್ರಮುಖ ಪಟ್ಟಣವಾಗಿತ್ತು ಆದರೇ ಅದು ಕಂಪಲಿರಾಯನ ರಾಜಧಾನಿಯಾಗಿರಲಿಲ್ಲ.

*ಸ್ಥಳೀಯ ಜನಪದರ ಪ್ರಕಾರ  ಕಂಪಿಲರಾಜನು

ಕೆಂಪುಹುಲಿಯ ಜೊತೆ ಹೋರಾಟ ಮಾಡಿ ಆ

ಕೆಂಪುಹುಲಿಯನ್ನು ಕೊಂದಿದ್ದಕ್ಕಾಗಿ "ಕೆಂಪುಲಿರಾಯ" ಮುಂದೆ ಕಂಪಲಿರಾಯ ಎಂದಾಯಿತು ಎನ್ನುತ್ತಾರೆ. ಇದೇ ಹೆಸರು ಕಾಲ ಕ್ರಮೇಣ ಕಂಪಿಲರಾಯ ಆಗಿರಬಹುದು.

*ಕಂಪ್ಲಿ ಪಟ್ಟಣದ ಹೆಸರಿನ ಉಲ್ಲೇಖವನ್ನು ಮೊಟ್ಟ ಮೊದಲಿಗೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದುಗ್ಗಸಂದ್ರ ಹೋಬಳಿಯ "ಬಿಸ್ಸನಹಳ್ಳಿ" ವೀರಗಲ್ಲೊಂದರಲ್ಲಿ ಕಾಣುತ್ತೇವೆ. ಇದರ ಕಾಲಮಾನವನ್ನು ಬಿ.ಎಲ್.ರೈಸ್ ಅವರು ಕ್ರಿ.ಶ.750 ಎಂದು ಗುರಿತಿಸಿದ್ದಾರೆ. ಈ ಶಾಸನದಲ್ಲಿ ಗಂಗರಾಜ "ಶ್ರೀಪುರುಷನು" ತನ್ನ ಮಗನಾದ "ದುಗ್ಗದೊರೆ" ಎರೆಪ್ಪನನ್ನು ಕುವಲಲಿ ನಾಡಿಗೆ ಅಧೀಕಾರಿಯನ್ನಾಗಿ ನೇಮಿಸಿದನು. ಗಂಗಾವಡಿಯ ಸೈನ್ಯವು "ಕಂಪಲಿಯ(ಕಂಪ್ಲಿ) ಕಡೆಗೆ ಬಂದು ಯುದ್ಧದಲ್ಲಿ ತೊಡಗಿದಾಗ ರಣರಂಗದಲ್ಲಿ ಕೋಮಲನ ಮಗ ಪಾಂಡಪ್ಪ ಮರಣವನ್ನಪ್ಪಿದ ಎಂಬ ಸಂಗತಿ ಈ ವೀರಗಲ್ಲಿನ ಹೇಳಿಕೆಯಿಂದ ತಿಳಿಯುತ್ತದೆ.

*ಕಲ್ಯಾಣ ಚಾಲುಕ್ಯರ ಅರಸರಾದ "ಜಗದೇಕಮಲ್ಲ ಜಯಸಿಂಹನ" ಸಾಮಂತನಾದ "ನೊಳಂಬ ಪಲ್ಲವರಾಜನು" ತುಂಗಭದ್ರ ತೀರದ ಕಂಪಲಿ(ಕಂಪ್ಲಿ) ರಾಜ್ಯವನ್ನು ಆಳುತ್ತಿದ್ದನು ಎಂದು ಕ್ರಿ.ಶ. ೧೦೧೪ರ ಗೋಣಹಾಳಿನ ಶಾಸನದಿಂದ ತಿಳಿಯುತ್ತದೆ. ಇದೆ ಸಮಯದಲ್ಲಿ ಚೋಳರ ರಾಜಾಧೀರನು ನೊಳಂಬವಾಡಿಯ ಮೇಲೆ ದಾಳಿ ಮಾಡಿ ಕಂಪಲಿ(ಕಂಪ್ಲಿ) ಅರಮನೆಯನ್ನು ಹಾಳು ಮಾಡಿದ್ದನು ಎಂದು ತಿಳಿದುಬರುತ್ತದೆ.

*ಈ ಎಲ್ಲಾ ಹಿನ್ನೆಲೆಯಲ್ಲಿ ಕ್ರಿ.ಶ. 8ನೇ ಶತಮಾನದಿಂದಲೇ ಅನೇಕರಿಗೆ ರಾಜಧಾನಿ ಪಟ್ಟಣವಾಗಿದ್ದ ಕಂಪಲಿಯು ಕಂಪಿಲನ ಕಾಲದಲ್ಲಿ ಸ್ವತಂತ್ರ ರಾಜ್ಯವಾಗಿದ್ದು ೧೩೨೭-೨೮ರಲ್ಲಿ ವಿನಾಶ ಹೊಂದಿರಬೇಕೆಂದು ಅನ್ನಿಸುತ್ತದೆ.

*ಕುಮಾರರಾಮನ ಸಾಂಗತ್ಯಗಳಲ್ಲಿ ಮಾತ್ರ "ಕುಮ್ಮಟದುರ್ಗ" ಮತ್ತು "ಹೊಸಮಲೆದುರ್ಗ"ಗಳೆರಡು ವೀರ ಕಂಪಿಲರಾಯನ ರಾಜಧಾನಿಗಳಾಗಿದ್ದವೆಂದು ತಿಳಿಸುತ್ತವೆ. ಕುಮ್ಮಟದುರ್ಗದಲ್ಲಿ ದೊರೆತ ಎರಡು ವೀರಗಲ್ಲು ಶಾಸನಗಳು ಕಂಪಿಲರಾಯನು ಕುಮ್ಮಟದುರ್ಗದಿಂದಲೇ ರಾಜ್ಯಭಾರ ಮಾಡುತ್ತಿದ್ದನು ಎಂದು ತಿಳಿಸುತ್ತವೆ ಹಾಗು ಹೊಸಮಲೆದುರ್ಗ ಎಂಬುದು ಕಂಪಲಿರಾಯನ ಎರಡನೇ ರಾಜಧಾನಿಯಾಗಿತ್ತು. ಹೊಸಮಲೆದುರ್ಗವನ್ನು ಕಂಪಿಲರಾಯನೇ ಕಟ್ಟಿಸಿದ್ದು, ಕೊನೆಯಲ್ಲಿ ಆತನು ಆತನ ಪರಿವಾರದವರೆಲ್ಲರೂ ಹೊಸಮಲೆದುರ್ಗದಲ್ಲೆ ಆಶ್ರಯಪಡೆದಿದ್ದರು ಎಂದು ಸಾಂಗತ್ಯದಿಂದ ವ್ಯಕ್ತವಾಗುತ್ತದೆ.

*ನಂಜುಂಡ ಕವಿಯು ಹೊಸಮಲೆದುರ್ಗವು ಹಂಪೆಯ ದಕ್ಷಿಣ ದಿಕ್ಕಿನಲ್ಲಿ ಇತ್ತು ಎಂದು ತನ್ನ ಸಾಂಗತ್ಯದಲ್ಲಿ ವರ್ಣಿಸಿದ್ದಾನೆ.

"ಶ್ರೀ ಹುಲ್ಲೂರು ಶ್ರೀನಿವಾಸ ಜೋಯಿಸ"ರು ಹೊಸಮಲೆದುರ್ಗವು ಸಂಡೂರಿನ ಸುತ್ತಮುತ್ತಲು ಇರಬಹುದೆಂದು ಅನುಮಾನಿಸಿ ಅಲ್ಲಿನ ತಮ್ಮ ಪರಿಚಯಸ್ಥರ ಮುಖಾಂತರ ವಿವರಗಳನ್ನು ಪಡೆದು ಈ ಹೊಸಮಲೆದುರ್ಗಕ್ಕೆ ಕೈಫಿಯತ್ತುಗಳಲ್ಲಿ "ರಾಮದುರ್ಗ" ಎಂದು ಕರೆಯುತ್ತಾರೆ ಸಧ್ಯ ಇದಕ್ಕೆ "ರಾಮಘಢ" ಎಂದು ಕರೆಯುತ್ತಾರೆ.

*ಕಂಪಿಲನು ಹೊಸಮಲೆದುರ್ಗ ನಿರ್ಮಾಣ ಮಾಡಲು ಕಾರಣವೇನೆಂದರೆ, ಕಂಪಿಲನ ತಂದೆಯಾದ ಮುಮ್ಮಡಿಸಿಂಗೇಯನಾಯಕನು ಮರಣಾನಂತರದಲ್ಲಿ ರಾಜ್ಯದಲ್ಲಿ ಬರಗಾಲ ಉಂಟಾಗುತ್ತದೆ, ಇದರಿಂದ ಕಂಪಿಲರಾಯನಿಗೆ ಗಾಯದ ಮೇಲೆ ಬರೆ ಎಳೆದ ಹಾಗೆ ಆಗುತ್ತದೆ  ಜೀವನ ನೆಡೆಸಲು ಅಸಾಧ್ಯವಾಗುತ್ತದೆ. ಹಾಗಾಗಿ ಕಂಪಿಲರಾಯನ ತಾಯಿ ಮಾದನಾಯಕತಿ ಬುದ್ಧಿವಂತನಾದ ಮಂತ್ರಿ "ಬೈಚಪ್ಪನ" ಸಹಾಯದಿಂದ ಪರಿವಾರ ಸಮೇತವಾಗಿ (ಕಂಪಳ) ಹೊರಟು ನೀರು,ನೆರಳು,ಹಚ್ಚು ಹಸುರುಗಳಿಂದ ಕಂಗೊಳಿಸುತ್ತಿದ್ದ ಜಟ್ಟಂಗಿ ( ಮೊಳಕಾಲ್ಮುರು ತಾಲ್ಲೂಕು ) ಬೆಟ್ಟದ ಅರಣ್ಯ ಪ್ರದೇಶದಲ್ಲಿ ವಾಸಮಾಡತೊಡಗಿದರು. ಕೆಲವು ಕಿರಾತರು(ಬೇಡರು) ಕೂಡ ಕಂಪಿಲರಾಜನಿಗೆ ನೆರವಾಗಿ ನಿಂತರು.  ಈ ಸಮಯದಲ್ಲೇ ಜಟ್ಟಂಗಿ ಬೆಟ್ಟದಲ್ಲಿ ವಾಸವಿರುವ ರಾಮೇಶ್ವರನು ಕಂಪಿಲದೇವನ ಮನೆದೇವರಾದನು.

*ಕಾಲಕ್ರಮೇಣ ಕಂಪಿಲರಾಯನು ಜಟ್ಟಂಗಿ ಬೆಟ್ಟ ಗುಡ್ಡಗಾಡುಗಳಲ್ಲಿ ಪ್ರಗತಿಯನ್ನು ಕಂಡುಕೊಂಡು, ದೊಡ್ಡದಾದ ತನ್ನ ವಂಶದವರಿಗೆ ಸರಿಸಮನಾದ ಸ್ಥಳವನ್ನು ಹುಡುಕುತ್ತಾ ಮುಂದೆ ವಲಸೆ ಹೊರಟು ಮಾರ್ಗಮಧ್ಯದಲ್ಲಿ ಲೋಹಗಿರಿಯ( ಸಂಡೂರು ಪ್ರದೇಶ) ಕುಮಾರಸ್ವಾಮಿಯನ್ನು ಪೂಜಿಸಿ ಬೇಟೆಯಾಡುತ್ತಾ ಮುಂದೆ ಹೋದಾಗ ದಟ್ಟವಾದ ಅರಣ್ಯ ಅವರಿಗೆ ಕಂಡಿತು. ಅರಣ್ಯದ ತುಂಬೆಲ್ಲಾ ಒಡಾಡಿ ಒಳ್ಳೆಯ ಆಯಕಟ್ಟಿನ  ಪ್ರದೇಶವೊಂದನ್ನು ಕಂಡುಕೊಂಡು ಆ ಸ್ಥಳವು ವೈರಿಗಳಿಂದಲು ಸುರಕ್ಷಿತವೆಂದು ಅಲ್ಲಿಯೇ ಹೊಸದಾಗಿ ಕೋಟೆ ಅರಮನೆ ಗಿರಿದುರ್ಗವನ್ನು ನಿರ್ಮಿಸಿದನು. ಅದನ್ನು ಹೊಸಮಲೆದುರ್ಗ ಎಂದು ನಾಮಕರಣ‌ ಮಾಡಿದ. ಹಾಗು ಅದನ್ನು ಕಂಪಲಿರಾಯ ತನ್ನ ರಾಜಧಾನಿ ಎಂದು ಘೋಷಣೆ ಮಾಡಿಕೊಂಡ.

*ಕಂಪಿಲದೇವನು ದೇವಗಿರಿಯ ಯಾದವ ದೊರೆ ಸೇವುಣರ ರಾಮಚಂದ್ರ ದೇವರಾಯ ಮತ್ತು ಹೊಯ್ಸಳರ ಮೂರನೆ ಬಲ್ಲಾಳನ ಸಮಕಾಲೀನದವನಾಗಿದ್ದ. ಯಾದವರ ಸಾಮಂತನಾಗಿ ಹೊಯ್ಸಳರ ವಿರುದ್ಧ ಬಹಳ ಯುದ್ಧಗಳನ್ನು ಮಾಡಿದ್ದಾನೆ.

*ಕ್ರಿ.ಶ ೧೩೦೩ರಲ್ಲಿ "ಯಾದವರ ರಣನಾಯಕ"ನಾದ "ಕಂಪಿಲರಾಯನಿಗು ಹೊಯ್ಸಳರ ಮುಮ್ಮಡಿ ಬಲ್ಲಾಳನ" ಮೈದುನನೂ ಚಿತ್ರದುರ್ಗದ ಮಾಂಡಲಿಕನೂ ಆದ "ಸೋಮೆಯ ದಂಡನಾಯಕ"ನಿಗು ಹೊಳಲ್ಕೆರೆಯ ಬಳಿ ಯುದ್ಧ ನಡೆದುದಾಗಿ  ಶಾಸನದಿಂದ ತಿಳಿಯುತ್ತದೆ. ಈ ಯುದ್ಧವನ್ನು  "ಚಿಟ್ಟನಹಳ್ಳಿ" ಶಾಸನವು ಕೂಡ ಉಲ್ಲೇಖಿಸುತ್ತದೆ ಹಾಗೂ ಕ್ರಿ.ಶ ೧೩೦೩ರ "ಜೇನುಕಲ್ಲಿನ" ಶಾಸನವು ಸಹ ಈ ಯುದ್ಧವನ್ನು ಹೇಳುತ್ತದೆ. ಕಂಪಿಲರಾಯನ ಹೆಚ್ಚು ಶಾಸನಗಳು ಈ ಕಾಳಗದ ಬಗ್ಗೆ ಹೇಳುತ್ತವೆ ಈ ಯುದ್ಧವು ದೊಡ್ಡ ಯುದ್ಧವೆ ಆಗಿರಬಹುದೆಂದು ಊಹಿಸಬಹುದಾಗಿದೆ.

*ಕ್ರಿ.ಶ ೧೩ನೇ ಶತಮಾನದ ಅಂತ್ಯದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯು ಇದ್ದಕ್ಕಿದ್ದ ಹಾಗೇ ಕ್ರಿ.ಶ. ೧೨೯೪ರಲ್ಲಿ ದೇವಗಿರಿಯ ಮೇಲೆ ದಂಡೆತ್ತಿ ಬಂದಾಗ ಅಸಮರ್ಥನಾದ ರಾಮಚಂದ್ರನು ಶಾಂತಿ ಒಪ್ಪಂದ ಮಾಡಿಕೊಂಡು ಕಪ್ಪಕಾಣಿಕೆಗಳನ್ನು ಅರ್ಪಿಸುತ್ತಾನೆ. ಇದೆ ಸಂದರ್ಭದಲ್ಲಿ ಅಲ್ಲಾವುದ್ದೀನ್ ಖಿಲ್ಜಿಗೆ ದಕ್ಷಿಣ ಭಾರತದಲ್ಲಿರುವ ಅಪಾರವಾದ ಸಂಪತ್ತಿನ ಬಗ್ಗೆ ಮಾಹಿತಿ ಇತ್ತು.

*ಒಂದು ವೇಳೆ ದಕ್ಷಿಣದ ಯಾದವರು ಹೊಯ್ಸಳರು ಕಾಕತೀಯರು ಪಾಂಡ್ಯರು ಒಂದಾಗಿದ್ದರೆ ದೆಹಲಿಯ ಸುಲ್ತಾನರು ಇತ್ತ ಕಡೆ ತಲೆ ಹಾಕಿಯು ಮಲಗುತ್ತಿರಲಿಲ್ಲಾ. ಆದರೆ ಇವರ ಇವರೊಳಗೆ ಅಂತಃಕಲವು ಇದ್ದದುಕ್ಕಾಗಿಯೇ ದೆಹಲಿ ಸುಲ್ತಾನರು ಈ ಕಡೆ ಬಂದರು.

*ಕ್ರಿ.ಶ ೧೩೦೭ರಲ್ಲಿ "ಅಲ್ಲಾವುದ್ದೀನ್ ಖಿಲ್ಜಿ" ಮತ್ತೊಮ್ಮೆ ದೇವಗಿರಿಯ ಯಾದವರ ಮೇಲೆ ತನ್ನ ಸೇನಾನಿಯಾದ "ಮಲಿಕ್ ನಾಯಿಬ್ ಕಪೂರ"ನನ್ನು ದಾಳಿ ಮಾಡಲು ಕಳುಹಿಸುತ್ತಾನೆ.

ಈ ಯುದ್ಧದಲ್ಲಿ ರಾಮಚಂದ್ರನನ್ನು ಬಂಧಿಸಿ ದೆಹಲಿಗೆ ಕರೆದೊಯ್ಯಲಾಗುತ್ತದೆ. ಹಾಗು ಈ ಯುದ್ಧದಲ್ಲಿ "ರಾಮಚಂದ್ರನ" ಮಗ ಮೂರನೇ "ಸಿಂಘಣ"ನು ಯುದ್ಧಭೂಮಿಯಿಂದ ಓಡಿ ಹೋಗುತ್ತಾನೆ. ದೆಹಲಿಯಲ್ಲಿ ರಾಮಚಂದ್ರನನ್ನು ಗೌರವಿಸಿ ಮರಳಿ ಕಳುಹಿಸಿ ಕೊಡಲಾಗುತ್ತದೆ. ನಂತರ ರಾಮಚಂದ್ರನು ದೆಹಲಿಯ ಸಾಮಂತನಾಗಿ‌ ಮುಂದುವರೆಯುತ್ತಾನೆ. ಯಾದವರ ಈ ಸೋಲು ಅಲ್ಲಾವುದ್ದೀನ್ ಖಿಲ್ಜಿಗೆ ದಕ್ಷಿಣದ ಇನ್ನುಳಿದ ರಾಜ್ಯಗಳ ಮೇಲೆ ದಂಡೆತ್ತಿ ಹೋಗಲು ಸುಲಭ ಮಾರ್ಗ ಮಾಡಿಕೊಡುತ್ತದೆ. ನಂತರ ರಾಮಚಂದ್ರನ ಸಾಹಯದಿಂದ "ಓರಂಗಲ್ಲು" ಮತ್ತು "ದ್ವಾರಸಮುದ್ರಗಳ" ಮೇಲೆ ಆಕ್ರಮಣ ಮಾಡಿ ಅಲ್ಲಿ ಮುಮ್ಮಡಿ ಬಲ್ಲಾಳನ ಸಹಾಯದಿಂದ  "ಚೋಳರ ಪಾಂಡ್ಯ" ರಾಜ್ಯದ ಮೇಲೆ ದಾಳಿ ಮಾಡಿ ಕ್ರಿ.ಶ ೧೩೧೨ರಲ್ಲಿ ಅಪಾರ ಸಂಪತ್ತಿನೊಂದಿಗೆ ದೆಹಲಿಗೆ ಹಿಂತಿರುಗುತ್ತಾನೆ.ಇದೆ ವರ್ಷವು ಯಾದವರ ರಾಮಚಂದ್ರನು ಮರಣಹೊಂದಿ ದಕ್ಷಿಣಕ್ಕೆ ಮತ್ತೊಂದು ಅಘಾತ ನೀಡುತ್ತದೆ. ಇದರಿಂದಾಗಿ ದೇವಗಿರಿಯು ಅಲ್ಲಾವುದ್ದೀನ್ ಖಿಲ್ಜಿಯ ಕೈಗೆ ಸೇರಿ "ದೌಲತಬಾದ್" ಆಗಿ ಮಾರ್ಪಾಡಾಯಿತು.

*"ಒಂದು ರೀತಿಯಲ್ಲಿ ರಾಮಚಂದ್ರನ ಸಾವು ಕಂಪಿಲನಿಗೆ ಲಾಭವಾಯಿತು ಅದು ಹೇಗೆ ಅಂದರೆ ಕಂಪಿಲರಾಯ ತನ್ನ ರಾಜ್ಯ ವಿಸ್ತರಣೆ ಮಾಡಿಕೊಳ್ಳಲ್ಲು ಅನುವು ಆಯಿತು. ಕರ್ನಾಟಕದಲ್ಲಿ ಶಿವಮೊಗ್ಗ,ಚಿತ್ರದುರ್ಗ, ಬಳ್ಳಾರಿ,ರಾಯಚೂರು, ಧಾರವಾಡ ಜಿಲ್ಲೆಗಳು ಮತ್ತು ಆಂದ್ರದ ಅನಂತಪುರ ಹಾಗೂ ಕರ್ನೂಲ್ ಜಿಲ್ಲೆಗಳು ಕಂಪಿಲರಾಯನ ವಶದಲ್ಲಿದ್ದವು".

*ಕುಮ್ಮಟದುರ್ಗ ಮತ್ತು ಹೊಸಮಲೆದುರ್ಗ ಹಾಗೂ ಕಂಪ್ಲಿಗಳು ಸಂಪತ್ತಿನಿಂದ ತುಂಬಿದ್ದವು. ಇದರಿಂದಲೆ ಪ್ರಸಿದ್ಧಿಯು ಸಹ ಹೊಂದಿದ್ದವು. ಇದರ ಲೂಟಿಗಾಗಿಯೇ ಬೇರೆ ಅರಸರುಗಳು ದಾಳಿ ಮಾಡಿದ್ದರು ಆದರೆ ಇದರಲ್ಲಿ ಮುಸಲ್ಮಾನರ ಆಕ್ರಮಣವೇ ನಿರ್ಣಾಯಕವಾಗಿದ್ದವು. ಕ್ರಿ.ಶ. ೧೩೧೫ರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಕಣ್ಣು ಕುಮ್ಮಟ ರಾಜ್ಯದ ಮೇಲೆ ಬಿತ್ತು. ಇವನು ಮಲ್ಲಿಕ್ ನಾಯಿಬ್ ಕಪೂರನನ್ನು ಕುಮ್ಮಟದ ಮೇಲೆ ದಾಳಿ ಮಾಡಲು ಕಳುಹಿಸಿದನು. ಮಲ್ಲಿಕ್ ನಾಯಿಬ್ ಕಪೂರನು ದೊಡ್ಡ ಸೈನ್ಯದೊಂದಿಗೆ ಮಿಂಚಿನ ವೇಗದಲ್ಲಿ ಬಂದು ಕುಮ್ಮಟದ ಮೇಲೆರೆಗಿದನು. ಆದ್ರೆ ಅಷ್ಟೇ ಮಿಂಚಿನ ವೇಗದಲ್ಲಿ ಸೋತು ವಾಪಸ್ ದೆಹಲಿ ಸೇರಿದನು. ಕಂಪಿಲ ಮತ್ತು ಆತನ ಮಗನಾದ ಗಂಡುಗಲಿ ಕುಮಾರರಾಮನ ಅಪ್ರತಿಮ ಸಾಹಸದಿಂದ ದೆಹಲಿ ಸುಲ್ತಾನನು ಬರಿಗೈಯಲ್ಲಿ ದೆಹಲಿಗೆ ವಾಪಸ್ಸಾದನು. ಸುಮಾರು ಹತ್ತೊಂಬತ್ತು ವರ್ಷಗಳ ಕಾಲ ಸೋಲೆ ಕಾಣದ ದೆಹಲಿ ಸುಲ್ತಾನರಿಗೆ ಕಮ್ಮಟವು ಸೋಲಿನ ರುಚಿ ಮೊದಲ ಬಾರಿಗೆ ತೋರಿಸಿತು. ಈ ಗೆಲವು ಎಷ್ಟು ಪ್ರಖ್ಯಾತಹೊಂದಿತು ಎಂದರೆ ೧೩೧೮ರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಮೂರನೇ ಮಗ "ಮೊಬಾರಕ್ ಖಾನನು ಗುಲ್ಬರ್ಗದವರೆಗೆ" ದಂಡೆತ್ತಿ ಬಂದರೂ ಆತ ಕುಮ್ಮಟಕ್ಕೆ ಬರುವ ಸಾಹಸವೇ ಮಾಡಲಿಲ್ಲ, ಇದರರ್ಥ ಕುಮ್ಮಟದ ಶಕ್ತಿ.

*ಯಾದವರು , ಕಾಕತೀಯರು, ಹೊಯ್ಸಳರು ದೆಹಲಿಯ ಸುಲ್ತಾನರಿಗೆ ಸಹಾಯ ಮಾಡಿ ತಮ್ಮ ಅವನತಿಗೆ ತಾವೆ ಕಾರಣರಾದರೆ, ಕಂಪಿಲನು ಮಾತ್ರ ಇಂಥ ಯಾವುದೇ ಅಂತಃಕಲಹಕ್ಕೆ ಗಮನಕೊಡದೆ ದೆಹಲಿ ಸುಲ್ತಾನನ ಎದುರು ಹೋರಾಡುವ ಮೂಲಕ "ಛಲದಂಕಮಲ್ಲನಾಗಿದ್ದನು".

* ಕುಮ್ಮಟದುರ್ಗದಲ್ಲಿ ದೊರೆತ ಎರಡು ವೀರಗಲ್ಲು ಶಾಸನಗಳು ೧೫೧೫ ರ ಮಲ್ಲಿಕ್ ನಾಯಿಬ್ ಕಫೂರನ ದಾಳಿಯನ್ನು ಮತ್ತು ಇತರ ವಿಷಯಗಳನ್ನು ಉಲ್ಲೇಖಿಸುತ್ತವೆ. ಕ್ರಿ.ಶ. ೧೫೧೫ರಲ್ಲಿ ಕುಮ್ಮಟ ರಾಜ್ಯದಲ್ಲಿ ಕಂಪಿಲನು "ಪ್ರತಾಪ ಚಕ್ರವರ್ತಿ" ಎಂಬ ಬಿರುದನ್ನು ಧರಿಸಿ ರಾಜ್ಯವಾಳುತ್ತಿರಲು ಸುಲ್ತಾನನ ಸೈನ್ಯ ನೇಮಿ ಎಂಬುವವನ ಮುಂದಾಳತ್ವದಲ್ಲಿ ದಾಳಿ ಮಾಡಿತೆಂದು ಈ ದಾಳಿಯಲ್ಲಿ ರಾಮನಾಯಕ ಮಡಿದನೆಂದು ತಿಳಿಯುತ್ತದೆ.

*ಕ್ರಿ.ಶ. ೧೩೨೦ರಲ್ಲಿ ಮುಮ್ಮಡಿ ವೀರಬಲ್ಲಾಳನು ಕಂಪಿಲರಾಯನ ಮೂಲ ನೆಲೆಯಾದ ದೊರವಡಿಯ( ದರೋಜಿ ಬಳ್ಳಾರಿ, ಜಿ) ಮೇಲೆ ದಂಡೆತ್ತಿ ಬಂದಾಗ ಈ ಕದನದಲ್ಲಿ ಬಲ್ಲಾಳನ ಸೇನಾಧಿಪತಿಯಾದ "ಕೂರುಕನಾಯಕ"ನು ಹತನಾದನು. ಇದಾದ ನಂತರ ಮತ್ತೊಮ್ಮೆ ಅಂದರೆ ಕ್ರಿ.ಶ. ೧೩೨೩ರಲ್ಲಿ ಮುಮ್ಮಡಿ ಬಲ್ಲಾಳನಿಗು ಮತ್ತು

ವೀರ ಕಂಪಿಲರಾಯನಿಗು ಯುದ್ಧವಾಗಿರುವುದು ರಾಮಘಢದ ಶಾಸನದಿಂದ ತಿಳಿಯುತ್ತದೆ. ಈ ಶಾಸನದಿಂದ ಮತ್ತೊಂದು ಮಹತ್ವದ ವಿಷಯ ತಿಳಿಯುತ್ತದೆ ಅದೆನೆಂದರೆ,

"ಹೊಯ್ಸಳರು" ಮತ್ತು "ಕುಮ್ಮಟದುರ್ಗದ ಅರಸರು"( ಕಂಪಿಲರಾಯ ಮತ್ತು ಕುಮಾರರಾಮ) ದಾಯಾದಿಗಳಾಗಿದ್ದರೆಂದು".

*ದೆಹಲಿಯಲ್ಲಿ ಖಿಲ್ಜಿ ಸಂತತಿಯ ಆಡಳಿತ ಕೊನೆಗೊಂಡು ತುಘಲಕ್ ಸಂತತಿ ಆಳ್ವಿಕೆ ಪ್ರಾರಂಭವಾಗುತ್ತದೆ. ಕೊನೆಗು ಅಲ್ಲಾವುದ್ದೀನ್ ಖಿಲ್ಜಿಯು ಕುಮ್ಮಟದುರ್ಗದ ಮೇಲೆ ಗೆಲವು ಸಾಧಿಸದೆ ಕುಮ್ಮಟದುರ್ಗದವರ ಜೊತೆ "ಎರಡು ಬಾರಿ ಸೋತು" ತನ್ನ ರಾಜ್ಯಾಭಾರ ಕಳೆದುಕೊಳ್ತಾನೆ.

* ದೆಹಲಿಯ ಹೊಸ ಸುಲ್ತಾನನಾಗಿ "ಘಿಯಾಸುದ್ದೀನ" ತುಘಲಕ್ ಅಧಿಕಾರ ಸ್ವೀಕರಿಸಿದ. ಅವರ ವ್ಯಾಪ್ತಿಗೆ ಒಳಪಟ್ಟಿದ್ದ ಕಾಕತೀಯರು ಕೊಡಬೇಕಾಗಿದ್ದ ಕಪ್ಪವು ಹಾಗೆಯೇ ಬಾಕಿಯಿತ್ತು ಹಾಗಾಗಿ ಆ ಕಪ್ಪವನ್ನು ಪಡೆದುಕೊಂಡು ಬರಲು ಘಯಾಸುದ್ದೀನನು ತನ್ನ ಮಗನಾದ "ಉಲಾಫಖಾನನನ್ನು" ಕಳುಹಿಸುತ್ತಾನೆ ಕಾಲಾನಂತರದಲ್ಲಿ ಇದೆ "ಉಲಾಫಖಾನನು ಮಹಮದ ಬೆನ್ ತುಘಲಕ್" ಎಂದು ಪ್ರಸಿದ್ಧಿ ಹೊಂದುತ್ತಾನೆ. ಮಹದ್ ಬಿನ್ ತೊಘಲಕನು ತಂದೆಯ ಆಗ್ನೆಯಂತೆ ದಕ್ಷಿಣದ ಕಾಕತೀಯರ ಕಪ್ಪ ಕಾಣಿಕೆ ವಸೂಲಾತಿ ಮಾಡಲು ದಕ್ಷಿಣಕ್ಕೆ ತನ್ನ ಸೈನ್ಯದೊಂದಿಗೆ ಬಂದು ವಾರಂಗಲ್ಲಿನ ಕಾಕತೀಯರ ಮೇಲೆರೆಗೆ ದಾಳಿ ಮಾಡಿ ಕಾಕತೀಯರ ಪ್ರತಾಪ ರುದ್ರನನ್ನು ಸೆರೆ ಹಿಡಿದು ದೆಹಲಿಗೆ ಕೊಂಡೊಯ್ಯುವಾಗ ಮಾರ್ಗಮಧ್ಯದಲ್ಲಿ ಅವಮಾನದಿಂದ ಪ್ರತಾಪರುದ್ರನು ಕ್ರಿ.ಶ ೧೩೨೩ರಲ್ಲಿ ಆತ್ಮಹತ್ಯೆ ಮಾಡಿಕೊಂಡನು.

*ದೆಹಲಿಯಲ್ಲಿ ನಂತರ ನಡೆದ ವಿದ್ಯಮಾನಗಳಲ್ಲಿ ಸ್ವಂತ ತಂದೆಯನ್ನು ಕೊಂದು

ಕ್ರಿ.ಶ. ೧೩೨೫ ರಲ್ಲಿ ದೆಹಲಿ ಸಿಂಹಾಸನಕ್ಕೆ ಚಕ್ರವರ್ತಿಯಾಗಿ  "ಮಹಮದ್ ಬಿನ್ ತುಘಲಕ್" ಪಟ್ಟಾಭಿಷಕ್ತನಾದ  ಸೋದರ ಸಂಬಂಧಿ ಗುಲ್ಬರ್ಗಾ ಜಿಲ್ಲೆಯ ಸಾಗರದ ರಾಜ್ಯಪಾಲನಾಗಿದ್ದ "ಬಹ-ಉದ್-ದಿನ್ ಗುರ್ಶಾಸ್ಪನಿಂದ" ವಿರೋಧವನ್ನು ಎದುರಿಸಬೇಕಾಗಿ ಬಂತು. ದೆಹಲಿ ಸಿಂಹಾಸನಕ್ಕೆ ತಾನು ಹಕ್ಕುದಾರನೆಂದು "ಬಹಾವುದ್ದೀನ ಗುರ್ಶಾಸ್ಪನು ದಂಗೆ" ಏಳುತ್ತಾನೆ. ಇದರಿಂದ ಸಿಟ್ಟಿಗೆದ್ದ ತೊಘಲಕನು ಬಹಾವುದ್ದೀನನ್ನು ಸೆರೆಹಿಡಿದು ತರಲು ಸೈನ್ಯವನ್ನು ಕಳುಹಿಸುತ್ತಾನೆ. ಆ ಸೈನ್ಯವನ್ನು ಎದಿರಿಸಲಾಗದೆ ಬಹಾವುದ್ದೀನನು ದಕ್ಷಿಣದ ರಾಜರಲ್ಲಿ ಆಶ್ರಯ ಬೇಡುತ್ತಾನೆ ಆದರೆ ಯಾರು ಇವನಿಗೆ ಸಹಾಯ ಮಾಡುವುದಿಲ್ಲ ಆಗ ಅವನು  ದೆಹಲಿ ಸುಲ್ತಾನರನ್ನು ಈಗಾಗಲೇ ಎರಡು ಬಾರಿ ಸೋಲಿಸಿದ್ದ ಕುಮ್ಮಟದುರ್ಗದ ಕಂಪಲಿರಾಯನ ಬಳಿ ಸಹಾಯ ಕೇಳಿಕೊಂಡು ಹೋಗುತ್ತಾನೆ. ಬಹಾವುದ್ದಿನನಿಗೆ ಕಂಪಿಲರಾಯನು ಆಶ್ರಯ ನೀಡುತ್ತಾರೆ.

*ತನ್ನ ವೈರಿಗೆ ಕಂಪಿಲರಾಯ ಆಶ್ರಯ ನೀಡಿದನ್ನು ಕೇಳಿ ತೊಘಲಕನಿಗೆ ಬಹಳ ಕೊಪ ಬಂದು ಕಂಪಲಿಯ ರಾಜ್ಯದ ಮೇಲೆ ಯುದ್ಧ ಸಾರಿದನು. ಈ ಯುದ್ಧದಲ್ಲಿ ತೊಘಲಕನು ಸೋತನು. ಇದರಿಂದ ಮತ್ತಷ್ಟು ಕೋಪಗೊಂಡ ತೊಘಲಕನು ಕೊನೆಯದಾಗಿ ದೆಹಲಿಯ ದೊಡ್ಡ ಸೈನ್ಯವನ್ನೆ ಕಳುಹಿಸಿದನು ಈ ಯುದ್ಧದಲ್ಲಿ ತೊಘಲಕನ ಪರವಾಗಿ "ಮಲಿಕ್-ಜಾದಾ-ಖ್ವಾಜಾ-ಇಜಾಹ"ನು ಮುಂದಾಳತ್ವ ವಹಿಸಿಕೊಂಡಿದ್ದನು. ಶತ್ರು ಸೈನ್ಯವು ಕುಮ್ಮಟದುರ್ಗದ ಎಲ್ಲಾ ದಿಕ್ಕಿನಿಂದಲು ಸುತ್ತುವರಿದಿತ್ತು. ಕಂಪಿಲನು ಕೂಡ ಕುಮ್ಮಟದ‌ ರಕ್ಷಣೆಗಾಗಿ ದೊಡ್ಡ ಸೈನ್ಯವನ್ನೆ ನಿಯೋಜನೆ ಮಾಡಿದ್ದ. ಆದರೆ ಬಹಳ ದಿನಗಳ ಕಾಲ ದೆಹಲಿ ಸುಲ್ತಾನರ ಸೈನ್ಯ ಕುಮ್ಮಟದುರ್ಗವನ್ನು ಸುತ್ತುವರೆದು ನಿಂತ ಕಾರಣ ಕುಮ್ಮಟದ ಒಳಗಡೆ ಇರುವ ಜನ ಜಾನುವಾರುಗಳಿಗೆ ಸೈನಿಕರಿಗೆ ರಾಜ ಮನೆತನದವರಿಗೆ ಆಹಾರ ಮತ್ತು ನೀರಿನ ಅಭಾವ ಆಯಿತು. ಆಗ ಕುಮ್ಮಟದ ಕೊಟೆಯ ಬಾಗಿಲುಗಳನ್ನು ತೆರೆಯಲು ಹೇಳಿದ ಕಂಪಲಿರಾಯ ತನ್ನ ಮಗನಾದ ಕುಮಾರ ರಾಮನ ಜೊತೆಗೂಡಿ ನಾಲ್ಕನೇ ಬಾರಿ ದೆಹಲಿ ಸುಲ್ತಾನರ ಮೇಲೆ ಬಿದ್ದ. ಹಾಗೂ ಕಂಪಲಿರಾಯ ತನ್ನ ರಾಜ ಪರಿವಾರವನ್ನೆಲ್ಲಾ ಹೊಸಮಲೆದುರ್ಗಕ್ಕೆ ಗುಪ್ತದಾರಿಗಳ ಮೂಲಕ ಕಳುಹಿಸಿಕೊಟ್ಟು ನಮಗೆ ಯುದ್ಧದಲ್ಲಿ ಅಪಾಯ ಸಂಭವಿಸಿ ಪ್ರಾಣ ಹಾನಿ ಸಂಭವಿಸಿದರೆ ರಾಜಪರಿವಾರದ ಹೆಣ್ಣುಮಕ್ಕಳಿಗೆ ಬೆಂಕಿಗೆ ಹಾರಿ ಪ್ರಾಣತ್ಯಾಗ(ಜೋಹರ್) ಮಾಡಿಕೊಳ್ಳಲು ಅನುಮತಿ ಕೊಟ್ಟಿದ್ದನು, ಹಾಗೂ ಇದೆ ಸಂದರ್ಭದಲ್ಲಿ ಕಂಪಿಲರಾಯನು ಬಹಾವುದ್ದೀನನ ರಕ್ಷಣೆಗಾಗಿ ದ್ವಾರಸಮುದ್ರದ ಮುಮ್ಮಡಿ ಬಲ್ಲಾಳನ ಬಳಿ ಕಳುಹಿಸುತ್ತಾನೆ ಆದರೆ ಬಹಾವುದ್ದೀನನ್ನು ರಕ್ಷಣೆ ಮಾಡಿದರೆ ಮುಂದೆ ಆಗುವ ಅಪಾಯವನ್ನರಿತ ಬಲ್ಲಾಳನು ಬಹಾವುದ್ದನನ್ನು ಹಿಡಿದು ಸುಲ್ತಾನನಿಗೆ ಒಪ್ಪಿಸುತ್ತಾನೆ.

*ದೆಹಲಿ ಸುಲ್ತಾನರ ಜೊತೆ ಘನಘೋರ ಯುದ್ಧ ಸಂಭವಿಸಿತು, ಕುಮಾರರಾಮನು ದೆಹಲಿಸುಲ್ತಾನರನ್ನು ತನ್ನ ರಾಜ್ಯದಿಂದ  ಅಂದರೆ "ಮುದ್ಗಲ್" (ರಾಯಚೂರು ಜಿ )ಕೋಟೆಯ ವರೆಗು ಓಡಿಸಿಕೊಂಡು ಬಂದಿದ್ದ. ಮುದ್ಗಲ್ ಹತ್ತಿರ "ಕುಮಾರಖೇಡ" ಎಂಬ ಚಿಕ್ಕ ಊರಿದೆ ಇಲ್ಲಿಯೂ ಕೂಡ ಕುಮಾರರಾಮನ ಕೋಟೆ ಇದೆ. ಕುಮಾರರಾಮನ ಕೋಟೆ ಇರುವ ಊರೆ ಕುಮಾರಖೇಠ ಆಗಿದ್ದು ಇಂದು ಕುಮಾರಖೇಢವಾಗಿದೆ ಎಂದು ನಮ್ಮ‌  ಸಂಶೋಧನೆಯಿಂದ ತಿಳಿದು ಬರುತ್ತದೆ. ದೆಹಲಿ ಸುಲ್ತಾನರು ಸೋತು ವಾಪಸ್ ಹೋದರು ಎಂದು ಕುಮಾರರಾಮ ಹಾಗು ಕಂಪಲಿರಾಯನ ಸೈನ್ಯವು ಕುಮಾರಖೇಠದಲ್ಲಿ ವಿಜಯಪತಾಕೆಯನ್ನು ಹಾರಿಸಿ ಸಂಭ್ರಮಾಚರಣೆ ಮಾಡುತ್ತಾ‌ ಇದ್ದರು. ಆದರೆ ಸೋತು ವಾಪಸ್ ಹೊರಟ ದೆಹಲಿ ಸುಲ್ತಾನರನ್ನು ಪುನಃ ಬನ್ನಿ ನಾನು ಕುಮ್ಮಟದುರ್ಗದ ಕುಮಾರರಾಮನನ್ನು ಕೊಂದು ಕುಮ್ಮಟದುರ್ಗವನ್ನು ಸೋಲಿಸಿ ಕಂಪಲಿರಾಯನ ಸಾಮ್ರಾಜ್ಯವನ್ನು ನಿಮಗೆ ಕೊಡುತ್ತೇನೆ ಎಂದು "ಮಾತಂಗಿ" ಎಂಬುವ ಹೆಣ್ಣು ದೆಹಲಿ ಸುಲ್ತಾನರ ಸೈನ್ಯವನ್ನು ವಾಪಸ್ ಕರೆಸಿಕೊಳ್ತಾಳೆ.

* ತೆಲುಗಿನವಳಾದ ಮಾತಂಗಿಯು ಕನ್ನಡದ ದೊರೆ ಕಂಪಲಿರಾಯ ಹಾಗೂ ಕುಮಾರರಾಮನಿಗೆ ಮೋಸ ಬಗೆಯುತ್ತಾಳೆ. (ಮಾತಂಗಿಯು ಕುಮಾರರಾಮನ ಮೇಲೆ ಏಕೆ ಅಷ್ಟೊಂದು ವಿಷಕಾರುತ್ತಿದ್ದಳು ಎಂಬ ಕಥೆಯನ್ನು ಕುಮಾರರಾಮನ ಇತಿಹಾಸದಲ್ಲಿ ಬರೆಯುತ್ತೇನೆ). ಮಾತಂಗಿಯು ದೆಹಲಿ ಸುಲ್ತಾನರ ಸೈನ್ಯವನ್ನು ತೆಗೆದುಕೊಂಡು ಗಂಡಿನ ವೇಷ ಧರಿಸಿ ಮತ್ತೆ ಕುಮ್ಮಟದುರ್ಗದ ಕುಮಾರಖೇಡದ ಕೋಟೆಯ ಮೇಲೆ ಎರಗುತ್ತಾಳೆ. ಆದರೆ ಕುಮಾರರಾಮನ ಹಾಗು ಕಂಪಲಿರಾಯನ ಸೈನ್ಯವು ವಿಜಯ ಸಂಭ್ರಮಾಚರಣೆಯಲ್ಲಿ ಇದ್ದ ಕಾರಣ. ಮಾತಂಗಿಯ ಈ ಹುನ್ನಾರ ತಿಳಿಯುವುದೆ ಇಲ್ಲಾ.

*ಇದ್ದಕ್ಕಿದ್ದ ಹಾಗೆ ಬಂದೆರಗಿದ ಮಾತಂಗಿ ಮತ್ತು ದೆಹಲಿ ಸುಲ್ತಾನರ ಸೈನ್ಯದ ಜೊತೆ ಯುದ್ಧ ಮಾಡಲು ತಡವರಿಸಿದ ಕಂಪಲಿರಾಯನ ಸೈನ್ಯವು ಕಷ್ಟಪಡುತ್ತದೆ ಕಾರಣ ವಿಜಯಸಂಭ್ರಾಮಚರಣೆ ಸಲುವಾಗಿ ಆಗಲೇ ಕುಮಾರರಾಮನ ಹಾಗು ಕಂಪಲಿರಾಯನ ಸೈನ್ಯವು ಪಾನಮತ್ತರಾಗಿ ಬಿಟ್ಟಿರುತ್ತಾರೆ. ಇದನ್ನೆ ದಾಳವಾಗಿ ಬಳಸಿಕೊಂಡ ಸುಲ್ತಾನರ ಸೈನ್ಯವು ಕುಮ್ಮಟದ ಸೈನ್ಯವನ್ನು ಕೊಂದು ಹಾಕುತ್ತದೆ.

*ಇದೆ ಯುದ್ಧದಲ್ಲಿಯೇ "ಕಂಪಲಿರಾಯನು" ಕೂಡ ವೀರಮರಣ ಹೊಂದುತ್ತಾನೆ "ಕುಮಾರರಾಮನು" ಕೂಡ ಇದೆ ಯುದ್ಧದಲ್ಲಿ ಕುಮಾರಖೇಢದ ಪಕ್ಕದ ಊರಾದ "ತಲೆಖಾನ"ದಲ್ಲಿ ( ರಾಯಚೂರು ಜಿ ) ಮಾತಂಗಿ ಕುಮಾರರಾಮನ ಎದುರಾಗಿ ನಿಲ್ಲುತ್ತಾಳೆ ಆದರೆ ಮಾತಂಗಿಯನ್ನು ಹೆಣ್ಣೆಂದು ಗಮನಿಸಿದ ಕುಮಾರರಾಮನು ಒಂದು ಹೆಣ್ಣಿನ ಮೇಲೆ ಕೈಎತ್ತುವುದು ಧರ್ಮವಲ್ಲ  ಹೆಣ್ಣಿನ ಜೊತೆ ಯುದ್ಧ ಮಾಡಬಾರದೆಂದು ಪ್ರತಿಜ್ಞೆ ಮಾಡಿ ಪರನಾರಿ ಸಹೋದರ ಎಂಬುವ ಬಿರುದು ಧರಿಸಿದ್ದನು.

* ಗಂಡುಗಲಿ ಕುಮಾರರಾಮ ತನ್ನ ಶಸ್ತ್ರಾಸ್ತ್ರ ಗಳನ್ನೆಲ್ಲಾ ಬಿಟ್ಟು ನಿಲ್ಲುತ್ತಾನೆ. ಆಗ ಮಾತಂಗಿಯು ಕುಮಾರರಾಮನ "ತಲೆಯನ್ನು ಇದೆ ತೆಲೆಖಾನ" ಎಂಬ ಊರಿನಲ್ಲೆ ಕಡಿಯುತ್ತಾಳೆ. ಹಿಂದೆ "ತೆಂಕವಾವಿ" ಎಂಬ ಹೆಸರಿನಿಂದ ಇದ್ದ ಊರು "ಕುಮಾರರಾಮನ ತಲೆ ಕಡಿದ ಮೇಲೆ ತಲೆಖಾನ" ಆಯಿತು.

"ಕುಮಾರರಾಮನ ತಲೆ ತಿಂದ ಊರು ತಲೆಖಾನ".

ಈ ಊರಲ್ಲಿ ಕುಮಾರರಾಮನ ದೇವಸ್ಥಾನ ಇದೆ. ಅದು ಇಂದಿಗು ಕೂಡ ಸುಸ್ಥಿತಿಯಲ್ಲಿದೆ. ಕ್ರಿ.ಶ ೧೩೨೭ ರಲ್ಲಿ ನಡೆದ ಈ ಯುದ್ಧದಲ್ಲಿ ಕಂಪಿಲ ಮತ್ತು ಕುಮಾರರಾಮ ಮರಣ ಹೊಂದುತ್ತಾರೆ.

*ನಂತರ ಕಂಪಿಲ ರಾಜ್ಯವು ದೆಹಲಿ ಸುಲ್ತಾನರ ಕೈವಶವಾಗುತ್ತದೆ ಹಾಗು ಇದನ್ನು ಪ್ರತ್ಯೇಕ ಪ್ರಾಂತ್ಯವನ್ನಾಗಿ ಮಾಡಿ "ಮಲ್ಲಿಕ್ ಮಹಮದ್" ನನ್ನು ರಾಜ್ಯಪಾಲನನ್ನಾಗಿ ನೇಮಿಸಿದನು.

ಯುದ್ಧದಲ್ಲಿ ಉಳಿದ ಕಂಪಿಲರಾಯನ ಬಂಧುಗಳನ್ನು ಬಂಧಿಸಿ ದೆಹಲಿಗೆ ಕರೆದೊಯ್ದರು.

*ಇದರಲ್ಲಿ "ಕಂಪಿಲರಾಯನ ಹಿರಿಯ ಮಗಳಾದ ಮಾರಮ್ಮ" ಮತ್ತು "ಭಾವಸಂಗಮದೇವನ ಮಕ್ಕಳಾದ"  "ಹರಿಹರಹಕ್ಕ- ಬುಕ್ಕರು" ಹಾಗು

"ಎರಡನೇ ಮಗಳಾದ ಸಿಂಗಮ್ಮಳ" ಮಗನಾದ "ಚಿತ್ರನಾಯಕ" ( ಚಿತ್ರದುರ್ಗದ ಅರಸು ) ಇನ್ನಿತರರು ಇದ್ದರು.ಮುಂದೆ ದೆಹಲಿ ಸುಲ್ತಾನನಿಂದ ಬಿಡುಗಡೆಗೊಂಡು "ಹರಿಹರಹಕ್ಕ- ಬುಕ್ಕರು" "ಆನೆಗೊಂದಿ"ಗೆ ಬಂದರು.

*ಕಂಪಿಲರಾಯ ಮತ್ತು ದೆಹಲಿ ಸುಲ್ತಾನರ ನಡುವೆ ನಡೆದ ಕೊನೆಯ ಯುದ್ಧವೆ ನಿರ್ಣಾಯಕ ಯುದ್ಧ ಆಗುವ ಪರಿಣಾಮವನ್ನು ಅರಿತಿದ್ದ  ಕುಮಾರರಾಮನು ಅಪಾರವಾದ ಸಂಪತ್ತನ್ನು  ಹಕ್ಕಬುಕ್ಕರ ಸಮ್ಮುಖದಲ್ಲಿ ಬಚ್ಚಿಟ್ಟು ಮುಂದೆ ಕುಮ್ಮಟದುರ್ಗ ಅಳಿದರೆ ಈ ಸಂಪತ್ತಿನಿಂದ "ಬಲಿಷ್ಠ ಹಿಂದೂ ಸಾಮ್ರಾಜ್ಯ" ಸ್ಥಾಪಿಸುವ ಸಂಕಲ್ಪವನ್ನು ಮಾಡಿಸಿ

ವಚನವನ್ನು ಹಕ್ಕಬುಕ್ಕರಿಂದ ಪಡೆದುಕೊಂಡಿದ್ದನು.

*ಕಂಪಿಲರಾಯ ಮತ್ತು ಕುಮಾರರಾಮನ ಆಶಯದಂತೆ "ಬೃಹತ್ತಾದ ಬಲಿಷ್ಠ ಹಿಂದೂ ಧರ್ಮ" ಸಾಮ್ರಾಜ್ಯಕ್ಕೆ "೧೮-೦೪-೧೩೩೬"ರಂದು ತಾಯಿ ತುಂಗಭದ್ರೆಯ ತಟದ ಆನೆಗೊಂದಿಯಲ್ಲಿ ಭದ್ರವಾದ ಅಡಿಪಾಯವನ್ನು ಹಾಕಿದರು.

*ಹಂಪೆಯ ಹೇಮಕೂಟದಲ್ಲಿರುವ ಶಾಸನವು ಕಂಪಿಲದೇವನ ಅಪಾರವಾದ ಮಾತಾ ಪಿತೃಗಳ ಭಕ್ತಿ ಗೌರವಗಳನ್ನು ತಿಳಿಸುತ್ತದೆ. ಈತನ ಪಟ್ಟದ ರಾಣಿ ವೀರಗುಜ್ಜಲ ಹರಿಹರ(ಹರಿಯಾಲ) ದೇವಿ. ಇವರ ಮಗ ಕುಮಾರರಾಮನಾಥ. ಮನೆಯ ಕುಲದೇವರಾದ "ಜಟ್ಟಂಗಿ ರಾಮೇಶ್ವರನ" ವರಪ್ರಸಾದದಿಂದ ಜನಿಸಿದ ಕಾರಣದಿಂದಾಗಿಯೇ ಈತನಿಗೆ ಕುಮಾರ ರಾಮನಾಥನೆಂದು ಹೆಸರಿಸಿದ್ದರು. ಮಾರಮ್ಮ ಮತ್ತು ಸಿಂಗಮ್ಮ ಕಂಪಿಲನಗಿದ್ದ ಎರಡು ಹೆಣ್ಣುಮಕ್ಕಳು. ಭಾವಸಂಗಮನೆಂಬ ಅಳಿಯನಿದ್ದ ಎಂದು ನಂಜುಂಡ ಕವಿಯ ಸಾಂಗತ್ಯದಿಂದ ತಿಳಿದುಬರುತ್ತಸದೆ.  ಇದೆ ಭಾವಸಂಗಮನು ಕಂಪಲಿರಾಯನ ಮಗಳಾದ ಮಾರಮ್ಮಳ ಪತಿಯಾಗಿದ್ದ. ವಿಜಯನಗರ ಸಾಮ್ರಾಜ್ಯದಲ್ಲಿ ರಾಮರಾಯನನ್ನು ಹೇಗೆ ಅಳಿಯ ರಾಮರಾಯ ಎಂದು ಕರೆಯುತ್ತೇವೆಯೋ ಹಾಗೆ ಕುಮಾರರಾಮನ ಅಕ್ಕನ ಗಂಡನಾದ ಸಂಗಮನಿಗೆ ಭಾವಸಂಗಮ ಎಂದು ಕರೆಯಲಾಗಿದೆ. ಹಂಪಿಯ ಪರಿಸರದಲ್ಲಿ ಭಾವಸಂಗಮನನ್ನು ಒಂದನೇ ಬುಕ್ಕರಾಯನ ಎಡತೊರೆಯ ೪೬ನೇ ಶಾಸನವು  ಉಲ್ಲೇಖಿಸಿದೆ. ಕಂಪಿಲನಿಗೆ ಕಪ್ಪಕಾಣಿಕೆ ಸಲ್ಲುಸುತ್ತಿದ್ದವರಲ್ಲಿ ಕುರುಗೋಡಿನ ಭಾವಸಂಗಮನು ಒಬ್ಬನೆಂದು ಕೈಫಿಯತ್ತುಗಳು ಸೂಚಿಸುತ್ತವೆ. ಹಂಪೆಯ ಪರಿಸರದಲ್ಲೆ ಕುರುಗೋಡು ನಾಡು ಕಂಡು ಬರುವುದರಿಂದ ಇವನೇ ಶಾಸನದ ಭಾವಸಂಗಮನಾಗಿದ್ದಾನೆ. ಹೀಗಾಗಿ ಸಾಂಗತ್ಯದಲ್ಲಿ ಬರುವ ಭಾವಸಂಗಮ  ಹಾಗು ಶಾಸನಗಳಲ್ಲಿ ಉಲ್ಲೇಖಿತ ಭಾವಸಂಗಮ ಕೈಫಿಯತ್ತುಗಳು ಸೂಚಿಸುವ ಕುರುಗೋಡು ಸಂಗಮ ಬೇರೆಯಾಗಿರದೆ ಈತನೇ ಒಬ್ಬನೆ ಕಂಪಿಲರಾಯನ ಅಳಿಯನೆಂದು ಹೇಳಬಹುದು. ವಿಜಯನಗರ ಸ್ಥಾಪಕರಾದ ಹರಿಹರಹಕ್ಕ- ಬುಕ್ಕರು ಸಹೋದರರು ಇದೆ ಭಾವಸಂಗಮನ ಮಕ್ಕಳು. ಇವರು ಕಂಪಿಲರಾಯನ ಬಳಿ ಭಂಡಾರದ( ಖಜಾನೆ ಉಸ್ತುವಾರಿ) ಸೇವೆಯಲ್ಲಿದ್ದರೆಂದು ತಿಳಿದು ಬರುವುದು. ಕಂಪಿಲರಾಯನಿಗೆ ಪಟ್ಟದ ರಾಣಿ ಹರಿಯಾಲ ದೇವಿಯಲ್ಲದೆ ಕಾಟಮ್ಮ, ಹಾಗೂ ರತ್ನಾಜೀ ಎಂಬ ಮೂರು ಜನ ಹೆಂಡತಿಯರಿದ್ದರು. ಅಣ್ಣ ಭೈರವ,ಕಾಟಣ್ಣ, ಕಂಪಿಲನ ಈ ಹೆಂಡತಿಯರಲ್ಲಿ ಜನಿಸಿದ ಗಂಡು ಮಕ್ಕಳು. ಕಂಪಿಲನ ಗಂಡು ಮಕ್ಕಳಲ್ಲಿ ಹೆಚ್ಚು ಪರಾಕ್ರಮಿ ಎಂದರೆ,

*"ಸೂರ್ಯ ಚಂದ್ರರಿರುವವರೆಗೂ ತನ್ನ ಕೀರ್ತಿಯನ್ನು ಉಳಿಸಿಹೋದ ವಿಶ್ವದ ಚರಿತ್ರೆಯಲ್ಲೇ ದೇವರಂತೆ ಪೂಜೆಗೊಳ್ಳುತ್ತಿರುವ ತನ್ನ ಹೆಸರಿನಲ್ಲಿ ಜಾತ್ರೆ ಪರುಷೆಗಳಿಂದ ಆರಾಧನೆಗೊಳ್ಳುತ್ತಿರುವ ಏಕೈಕ ಅರಸ".

"ದೆಹಲಿ ಸುಲ್ತಾನರ ಮಿಂಡ"

"ನಲವತ್ತು ತೆಲುಗರ ಗಂಡ"

"ಕನ್ನಡದ ಕಡುಗಲಿ"

"ಕನ್ನಡ ನಾಡಿನ ಸಾಂಸ್ಕೃತಿಕ ವೀರ"

"ಪರನಾರಿ ಸಹೋದರ"

                                           

"ಗಂಡುಗಲಿ ಕುಮಾರರಾಮ".

ಅಶೋಕ ನಾಯಕ ದಿದ್ದಿಗಿ