Appaajirao
ಶಂ.ಬಾ ಜೋಷಿಯವರು:
ನವೋದಯ ಕಾಲದಲ್ಲಿ ಧಾರವಾಡಕ್ಕೇ ಭೇಟಿನೀಡಿದಾಗ ಸಾಹಿತ್ಯ ಪ್ರಿಯರಿಗೆ ಹೊಗಲೇ ಬೇಕಾದ ಎರಡು ತಾಣಗಳಿದ್ದವು. ಭಾವಜೀವಿಗಳಾದ ಕಾವ್ಯಪ್ರಿಯರು ಸಾಧನ ಕೇರಿಯ ಹಾದಿ ಹಿಡಿದು .ಬೇಂದ್ರೆಯವರ ದರ್ಶನ ಪಡೆದರೆ , ವಿಚಾರವಂತರಿಗೆ ವಿದ್ವಾಂಸರಿಗೆ ನೋಡಲೇ ಬೇಕಾದ ಇನ್ನೊಬ್ಬ ವ್ಯಕ್ತಿ ಎಂದರೆ ಶಂಬಾ ಜೋಷಿ. ಇಬ್ಬರನ್ನೂ ನೋಡಿಕೊಂಡು ಬರುವವರು ಇದ್ದರೂ, ತಮ್ಮ ಭೇಟಿಯ ಬಗೆಗೆ ಬಾಯಿ ಬಿಚ್ಚುತ್ತಿರಲಿಲ್ಲ. ಇಬ್ಬರ ಘಟಾನುಘಟಿಗಳು. ಒಟ್ಟಿಗೆ ಸೇರಿ ರಾನಡೆಯವರ ಉಪನಿಷದ್ ರಹಸ್ಯ ಎಂಬ ಕೃತಿಯನ್ನು ೧೯೨೮ ರಲ್ಲಿಯೇ ಅನುವಾದಿಸಿದ್ದರು. ಇಬ್ಬರ ಹಿನ್ನೆಲೆಯೂ ಸಮಾನವಾಗಿತ್ತು. ಜೀವನ ಶೈಲಿ ಒಂದೇ ಆಗಿತ್ತು , ಇಬ್ಬರೂ ಕನ್ನಡದ ಸಾಧನೆ ಶಿಖರವಾಗಿದ್ದರೂ ಅದೇಕೋ ಅನೇಕ ಸಲ ಅವರು ಉತ್ತರ ಧೃವ ಮತ್ತು ದಕ್ಷಿಣ ಧೃವ ಆಗುತಿದ್ದರು ಎನಿಸುತಿತ್ತು. ಪರಸ್ಪರ ಸಾಧನೆಯ ಕುರಿತು ಗೌರವ ಇದ್ದರೂ ಏನೋ ಕಸಿವಿಸಿ ಕಾಡುತಿತ್ತು. ಹೀಗೆ ಬೇಂದ್ರೆಯವರ ಸರಿಸಮನಾದ ಸಾಧನೆಯನ್ನು ಸಂಶೋಧನೆ ಮತ್ತು ಭಾಷಾ ಶಾಸ್ತ್ರ ಕ್ಷೇತ್ರದಲ್ಲಿ ಸಾಧಿಸಿದ ಹಿರಿಮೆ ಶಂಬಾ ಅವರದು. ಆ ಕಾಲಕ್ಕೆ ಕನ್ನಡ ನಾಡು ನುಡಿಯ, ಧರ್ಮ ಮತ್ತು ಸಂಸ್ಕೃತಿ ಬಗ್ಗೆ ಆಳವಾದ ಸಂಶೋಧನೆ ಮಾಡಿ ಅಧಿಕೃತವಾಗಿ ಮಾತನಾಡುವ ವ್ಯಕ್ತಿ ಅವರೊಬ್ಬರೇ ಆಗಿದ್ದರು. ವಿಚಾರವೇ ಜೀವನದ ಬೆಳಕು ಎಂದು ಬಾಳಿದವರು ಶಂಬಾ.
ಶಂಬಾ ಜೊಷಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲ ಹೊಸೂರಿನಲ್ಲಿ ೧೮೮೬, ಜನವರಿ ೪ ರಂದು ಜನಿಸಿದರು.ಅವರ ಹುಟ್ಟು ಹೆಸರು ಶಂಕರ. ತಂದೆ ಬಾಳಾ ದೀಕ್ಷಿತ .ಅವರದು ಶ್ರೋತ್ರಿಯ ಮನೆತನ ಹೀಗಾಗಿ ಜೋಷಿ ಅವರ ಹೆಸರಿಗೆ ಸೇರಿತು. ಪೂರ್ಣ ಹೆಸರು ಶಂಕರ ಬಾಳಾ ದೀಕ್ಷಿತ ಜೋಷಿ ಆದರೂ ಅವರು ನಾಡಿನಾದ್ಯಂತ ಶಂಬಾ ಎಂದೇ ಪರಿಚಿತರು.ಅವರು ಚಿತ್ಪಾವನ ಬ್ರಾಹ್ಮಣರು ಹೀಗಾಗಿ ಕನ್ನಡದ ಜೊತೆ ಮರಾಠಿಯ ಪರಿಚಯ ಬಾಲ್ಯದಿಂದಲೇ ಇತ್ತು, ಅವರ ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲೇ ಆಯಿತು. ಮಲಫ್ರಭೆಯ ಮಹಾಪೂರದ ಹಾವಳಿಯಲ್ಲಿ ಅವರು ವಾಸವಿದ್ದ ಮನೆ ಹೋಯಿತು. ಅದೇ ಸಮಯದಲ್ಲಿ ತಂದೆಯೂ ತೀರಿಕೊಂಡರು. ಪುಣೆಯಲ್ಲಿದ್ದ ವೈದಿಕ ವೃತ್ತಿ ಮಾಡುತಿದ್ದ ಅಣ್ಣನ ಮನೆಯಲ್ಲಿ ಕೆಲಕಾಲ ಆಶ್ರಯ ಪಡೆದರು. ಅವರಂತೆ ವೈದಿಕ ವೃತ್ತಿ ಹಿಡಿಯಲು ಮನಸ್ಸು ಬರಲಿಲ್ಲ. ಅಲ್ಲಿಗೆ ಹೋದುದರ ಲಾಭವೆಂದರೆ ಲೋಕಮಾನ್ಯ ತಿಲಕರ ದರ್ಶನ ಮತ್ತು ಅವರ ಪ್ರಭಾವದಿಂದ ದೇಶಭಕ್ತಿಯ ಕಿಚ್ಚು ಮನದಲ್ಲಿ ಹತ್ತಿತು. ತಮ್ಮ ಕಾಲಮೇಲೆ ತಾವು ನಿಲ್ಲಲು ಧಾರವಾಡದಲ್ಲಿ ಟೀಚರ್ ಟ್ರೇನಿಂಗ್ ಸೇರಿದರು. ೧೯೧೯ರಲ್ಲಿ ಪ್ರಪ್ರಥಮ ಸ್ಥಾನ ಪಡೆದರು ಚಿಕ್ಕೋಡಿಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರ ಹುದ್ದೆ ದೊರಕಿತು.ಅದೇ ಸಮಯದಲ್ಲಿ ಚಿಕ್ಕೋಡಿಗೆ ಬಂದ ಗಾಂಧೀಜಿಯವರು ಬಂದರು. ಶಂಬಾರವರಲ್ಲಿದ್ದ ರಾಷ್ಟ್ರಭಕ್ತಿಯ ಕಿಡಿ ಪ್ರಜ್ವಲಿಸಿತು. ಗಾಂಧೀಜಿಯವರ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿ ದುಡಿದರು. ಸರ್ಕಾರಿ ನೌಕರರೆಂಬ ವಿಷಯ ಅವರಿಗೆ ಅಡ್ಡ ಬರಲೇ ಇಲ್ಲ. ಗಾಂಧೀಜಿಯವರ ಜೊತೆಗೂಡಿ ಪ್ರವಾಸ ಮಾಡಿದರು, ಅವರಿಗಾಗಿ ದುಡಿದರು. ಖಾದಿ ಪ್ರಚಾರ, ಹರಿಜನೋದ್ಧಾರ , ಸತ್ಯಾಗ್ರಹ ಮೊದಲಾದವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಇದರಿಂದ ಸರ್ಕಾರದ ಕ್ರೂರ ದೃಷ್ಟಿಗೆ ಬೀಳ ಬೇಕಾಯಿತು. ಪರಿಣಾಮವಾಗಿ ಎಚ್ಚರಿಕೆ ನೀಡಿ ವರ್ಗಾವಣೆಯಾಯಿತು. ಅದೇ ಸಮಯದಲ್ಲಿ ಕನ್ನಡ ಸಾಹಿತ್ಯದ ಅಧ್ಯಯನ ಮೊದಲು ಮಾಡಿದರು. ಪತ್ರಿಕಾ ಲೇಖನ ಬರೆಯ ತೊಡಗಿದರು.ಸರ್ಕಾರಿ ಚಾಕರಿ ಬೇಡವೆನಿಸಿತು. ರಾಜಿನಾಮೆ ನೀಡಿದರು. ಲೇಖನ ವ್ಯವಸಾಯ ಮುಂದುವರಿಸಿದರು. ಕೆಲಕಾಲ ಕರ್ಮವೀರದಲ್ಲಿ ಕೆಲಸ ಮಾಡಿದರು. ಅವರ ಮದುವೆ ೧೯೨೧ ರಲ್ಲಿ ಪಾರ್ವತಿಬಾಯಿಯೊಡನೆ ಮದುವೆಯಾಯಿತು. ಅವರು ಗಂಡನ ಸಂಕಷ್ಟಗಳಲ್ಲಿ ಸಹಭಾಗಿಯಾಗಿ ಸಂಶೋಧನೆಯ ಬಗೆಗೆ ಬಹಳ ಗೌರವ ಹೊಂದಿ ಎಲ್ಲ ರೀತಿಯಲ್ಲೂ ಸಹಕರಿಸಿದರು. ಎರಡು ಗಂಡು ಮತ್ತು ಒಂದು ಹೆಣ್ಣು ಮಗುವಿನ ಸಂಸಾರವನ್ನು ಸಹನೆಯಿಂದ ನಿಭಾಯಿಸಿದರು. ಆಗಲೇ ಮಡದಿ ಮಕ್ಕಳನ್ನು ಸಾಕುವ ಹೊಣೆ ಹೆಗಲೇರಿತ್ತು . ಬೇರೆ ಆದಾಯದ ಮೂಲವಿರಲಿಲ್ಲ. ದೇಶ ಸೇವೆಯನ್ನೇ ಕಸುಬು ಆಗಿಸಿಕೊಳ್ಳಲು ಮನವಿರಲಿಲ್ಲ. ಜೀವನದಲ್ಲಿ ಸ್ಥಿರತೆ ಅಗತ್ಯವೆನಿಸಿತು ಹಾಗಾಗಿ ಮತ್ತೆ ಉದ್ಯೋಗದತ್ತ ಮನಮಾಡಿದರು.. ಧಾರವಾಡದಲ್ಲಿ ೧೯೨೬ ರಲ್ಲಿ ಕರ್ನಾಟಕ ಹೈಸ್ಕೂಲಿನಲ್ಲಿ ನಂತರ ೧೯೨೮ರಿಂದ ನಿವೃತ್ತರಾಗುವವರೆಗೆ ಅಂದರೆ ೧೯೪೮ ರತನಕ ( ಅಂದಿನ ವಿಕ್ಟೋರಿಯಾ) ಈಗಿನ ವಿದ್ಯಾರಣ್ಯ ಹೈಸ್ಕೂಲಿನಲ್ಲಿ ಸೇವೆ ಸಲ್ಲಿಸಿದರು. ಅದು ಖಾಸಗಿ ಶಾಲೆಯಾದ್ದರಿಂದ ಅವರ ಚಟುವಟಿಕೆಗಳಿಗೆ ನಿರ್ಬಂಧವಿರಲಿಲ್ಲ. ಸಾಕಷ್ಟು ವಿರಾಮವೂ ಸಿಗುತಿತ್ತು. ಶೈಕ್ಷಣಿಕ ವಾತಾವರಣ ಮತ್ತು ಅಗತ್ಯ ಪರಾಮರ್ಶನ ಗ್ರಂಥಗಳ ಲಭ್ಯತೆ ಅವರ ಹುಮ್ಮಸ್ಸು ಹೆಚ್ಚಿಸಿತು. ನೂರಾರು ವಿದ್ಯಾರ್ಥಿಗಳಲ್ಲಿ ಕನ್ನಡದ ಅಭಿಮಾನ ಬೆಳಗಿಸಿದರು .ಕನ್ನಡ ಮತ್ತು ಮರಾಠಿಯಲ್ಲಿ ಬರವಣಿಗೆ ಮುಂದುವರಿಯಿತು. ಕನ್ನಡ ಸಾರಸ್ವತ ಲೋಕದಲ್ಲಿ ಪ್ರವೇಶ ದೊರೆಯಿತು..ಕನ್ನಡ ಮತ್ತು ಮರಾಠಿ ಸಾಹಿತ್ಯಲೋಕದ ದಿಗ್ಗಜಗಳ ಗೆಳೆತನ ಲಭಿಸಿತು.ಸಂಸ್ಕೃತವೂ ಕರಗತವಾಗಿತ್ತು. ತಾರುಣ್ಯದಲ್ಲಿ ಶಂಬಾ ಅವರಲ್ಲಿ ಭಾವನೆ ಮತ್ತು ವೈಚಾರಿಕತೆ ಎರಡು ಇದ್ದರೂ ಬರಬರುತ್ತಾ ಭಾವನೆಯು ಗೌಣವಾಗಿ ಅವರ ಜೀವನದಲ್ಲಿ ವಿಚಾರಪರತೆಯೇ ಪ್ರಧಾನವಾಯಿತು. ಅವರ ಬರವಣಿಗೆ ಕಲ್ಪನೆಗಿಂತ ವಾಸ್ತವಕ್ಕೆ, ಸತ್ಯಕ್ಕೆ ಹೆಚ್ಚು ಬದ್ಧವಾಯಿತು. ಕನ್ನಡ - ಸಂಸ್ಕೃತಿ- ಇತಿಹಾಸಗಳ ಅಧ್ಯಯನಕ್ಕೆ ಮೊದಲು ಅವರ ಮೇಲೆ ವಿವೇಕಾನಂದ, ಅರವಿಂದ ತಿಲಕ್ ಮತ್ತು ಗಾಂಧೀಜಿಯವರ ಪ್ರಭಾವ ದಟ್ಟವಾಗಿತ್ತು, ಅಸಹಕಾರ ಚಳುವಳಿಯ ಅವಧಿಯಲ್ಲಿ ಆರು ತಿಂಗಳ ಕಾಲ ಗೃಹ ಬಂಧನದಲ್ಲೂ ಇರಬೇಕಾಯಿತು. ಆದರೆ ಅಂತಿಮವಾಗಿ ಅವರನ್ನು ಆವರಿಸಿದ್ದು ಸತ್ಯಾನ್ವೇಷಣೆಯ ಸಂಶೋಧನೆ.
ಅವರ ಅಧ್ಯಯನದ ಫಲವಾದ " ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ" ಕೃತಿಯು ಕನ್ನಡ ನಾಡು ನುಡಿಯ ಕುರಿತಾದ ಸರ್ವವಿಷಯಗಳನ್ನೂ ಒಳಗೊಂಡಿದೆ. ಅದನ್ನು ವೇದ, ಉಪನಿಷತ್ತು, ಪುರಾಣ, ಸ್ಮೃತಿ, ಐತಿಹ್ಯ , ಮೊದಲಾದ ಎಲ್ಲ ಆಕರಗಳಲ್ಲಿನ ಅಂಶಗಳನ್ನೂಒಳಗೊಂಡ ಬೃಹತ್‌ಕೃತಿ. ಅದರ ಆಳ , ಅಗಲ ಮತ್ತು ವ್ಯಾಪಕತೆಗಳು ವಿದ್ವತ್‌ಲೋಕವನ್ನು ಚಕಿತಗೊಳಿಸಿದವು. ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿತು. ಸಂಸ್ಕೃತಿ ಇತಿಹಾಸಗಳ ಅಧ್ಯಯನದ ಆಳಕ್ಕೆ ಹೋಗಲು ಕನ್ನಡ , ಮರಾಠಿ,ಸಂಸ್ಕೃತ ಜೊತೆಗೆ ಇಂಗ್ಲಿಷ್ ಅಗತ್ಯವೆನಿಸಿತು. ತಮ್ಮ ೨೪ ವರ್ಷದಲ್ಲಿ ಕಲಿಯಲು ಪ್ರಾರಂಭಿಸಿದರು. ಸತತ ಅಧ್ಯಯನದಿಂದ ಅಗತ್ಯವಿರುವ ಗ್ರಂಥಗಳ ಪರಾಮರ್ಶೆ ಮತ್ತು ವಿದ್ವತ್‌ಸಂವಾದಗಳನ್ನು ನಡೆಸುವ ಪ್ರಾವಿಣ್ಯತೆಯನ್ನು ೧೯೩೦ರ ಹೊತ್ತಿಗೆ ಗಳಿಸಿಕೊಂಡರು. ಅಧ್ಯಯನ ಅನವರತ ಸಾಗಿತ್ತು. ಕನ್ನಡ ನಾಡು ನುಡಿಗಳ ಕುರಿತ ತಮ್ಮ ಬರಹಗಳ ಪ್ರಕಟಣೆಯ ಜೊತೆಗೆ.ನಾಡು ನುಡಿಗಳ ಅಂತಃಸತ್ವ ತಿಳಿಸುವ ಗ್ರಂಥಗಳ ಅನುವಾದ ಮತ್ತು ಪ್ರಕಟಣೆಯನ್ನೂ ಕೈಗೊಂಡರು. ಆಗ ಕರ್ನಾಟಕ ಏಕೀಕರಣ ಚಳುವಳಿಯ ಕಾಲ. ಆಗಲೇ ಶಂಬಾರವರು ಕನ್ನಡನಾಡಿನ ಹುಟ್ಟು, ಬೆಳವಣಿಗೆ ವ್ಯಾಪ್ತಿಯ ಕುರಿತ ಸಂಶೋಧನ ಲೇಖನ ಪ್ರಕಟಿಸಿದರು.ಅವರ ಮೊದಲ ಕೃತಿ " ಕಣ್ಮರೆಯಾದ ಕನ್ನಡ" ,ವಿದ್ವತ್‌ಲೋಕದಲ್ಲಿ ಪ್ರಶಂಸೆಗಳಿಸಿ ಸಂಶೋಧನೆಯ ಕೆಲಸ ಮುಂದುವರಿಸಲು ಅವರಿಗೆ ಹುಮ್ಮಸ್ಸು ತಂದಿತು. ಅವರ ಸಂಶೋಧನೆಯ ವ್ಯಾಪ್ತಿ ವೇದ, ಉಪನಿಷತ್ತು, ಇತಿಹಾಸ, ಪುರಾಣ. ಸಾಹಿತ್ಯಗಳನ್ನು ಒಳಗೊಂಡಿದ್ದು ಅವರ ನಿರ್ಧಾರಗಳು ಖಚಿತವಾಗಿರುತಿದ್ದವು. "ಕಂನುಡಿಹುಟ್ಟು" ಕನ್ನಡ ಭಾಷೆಯ ಉಗಮ ಮತ್ತು ಬೆಳವಣಿಗೆ ತಿಳಿಸಿದರೆ, ಅವರ " ಮಹಾರಾಷ್ಟ್ರ ಮೂಲ" ಕೃತಿಯು ಮರಾಠಿ ಜ್ಞಾನ ಕ್ಞೇತ್ರದಲ್ಲಿ ಅವರ ಸ್ಥಾನ ಸ್ಥಿರ ಪಡಿಸಿತು. ಈ ಕೃತಿಯಿಂದ ಅವರ ತಾತ್ವಿಕ ಮತ್ತು ಸಾಂಸ್ಕೃತಿಕ ಕರ್ನಾಟಕ ಸಂಸ್ಕೃತಿಯಿಂದ ಭಾರತೀಯ ಸಂಸ್ಕೃತಿಯ ಆಳಕ್ಕೆ ಎಳಸಿರುವುದನ್ನು ಗುರತಿಸಬಹುದು.. ಹಾಲುಮತ ದರ್ಶನ,ಋಗ್ವೇದ ಸಾರ: ನಾಗಪ್ರತಿಮಾ ವಿಚಾರ, ವೈವಸ್ವತ ಮನುಪ್ರಣೀತ ಮಾನವ ಧರ್ಮದ ಅಕೃತಿ, ಬುಧನ ಜಾತಕ, ಬಿತ್ತಿದುದ ಬೆಳಕೋ ಅವರ ಪ್ರಮುಖ ಕೃತಿಗಳಲ್ಲಿ ಕೆಲವು.ಅವರು ಅನೇಕ ಸಂಶೋಧನ ಲೇಖನಗಳು ಪ್ರಕಟವಾಗಿ ದೇಶಾದ್ಯಂತ ಗಮನ ಸೆಳೆದು ಅರವಿಂದ ಘೋಷರ ಚರಿತ್ರ(೧೯೨೧) ಯಿಂದ ಪ್ರಾರಂಭವಾದ ಅವರ ಲೇಖನವ್ಯವಸಾಯವು ಸತತ ೬೩ ವರ್ಷ ಸಕ್ರಿಯವಾಗಿದ್ದು ಬಿತ್ತದ್ದನ್ನು ಬೆಳೆದುಕೋ (೧೯೮೪ ) ಅವರ ಕೊನೆಯ ಗ್ರಂಥ.ಅರವತ್ತು ಮೂರುವರ್ಷದಲ್ಲಿ ಉದ್‌ಗ್ರಂಥಗಳ ಕಾಣಿಕೆ ನೀಡಿರುವರು. ಇಂದಿಗೂ ಸಂಶೋಧಕರಿಗೆ ಅವರ ಕೃತಿಗಳ ಪರಾಮರ್ಶನೆಯಿಂದ ಸ್ಪೂರ್ತಿ ಸಿಗುವುದು ರಾಷ್ಟ್ರಮಟ್ಟದ ವಿಚಾರವಾದಿ ಮತ್ತು ಸಂಶೋದಕರ ಸಾಲಿನಲ್ಲಿ ಅವರಗೆ ಪ್ರಮುಖ ಸ್ಥಾನವಿದೆ. ವ್ಯಕ್ತಿ ಸಮಾಜ ಸೃಷ್ಠಿಯ ಎಂಬ ಅಂಶವನ್ನು ಅರ್ಥಮಾಡಿಕೊಂಡರೆ ಜಾತಿ, ಧರ್ಮ.ವರ್ಗ ವರ್ಣ,ಪಂಥಾಭಿಮಾನಗಳು ಬೆಳೆದು ಸಮಾಜವನ್ನು ವಿಭಜಿಸುವ ಸಾಧ್ಯತೆ ಇಲ್ಲ ಎಂಬ ಸರ್ವಕಾಲಿಕ ಸತ್ಯವನ್ನೇ ಅವರ ಎಲ್ಲ ಕೃತಿಗಳೂ ಸಾರಿವೆ. ಶಂ.ಬಾ. ಜೋಶಿಯವರ ಕೃತಿಗಳನ್ನು ಸಾಂಸ್ಕೃತಿಕ ಸಂಶೋಧನಾ ಸಾಹಿತ್ಯವೆಂದು ಕರೆಯಬಹುದು. ಮಾನವ ಜನಾಂಗಗಳ ನಾಗರಿಕತೆಯ ಮಜಲುಗಳನ್ನು ಅವರವರ ಭಾಷಾಪ್ರಯೋಗಗಳಲ್ಲಿ ಕಾಣಬಹುದು ಎನ್ನುವದನ್ನು ಶಂಬಾ ಜೋಶಿಯವರು ತಮ್ಮ ಸಂಶೋಧನ ಲೇಖನಗಳಲ್ಲಿ ತೋರಿಸಿಕೊಟ್ಟರು. ಜೋಶಿಯವರು ಈ ಶಾಸ್ತ್ರವಿಭಾಗವನ್ನು ಪ್ರಾರಂಭಿಸಿದ ಭಾರತೀಯರಲ್ಲಿ ಮೊದಲಿಗರು. ಇದೇ ಸಮಯಕ್ಕೆ ಯುರೋಪಿನಲ್ಲಿ ಸಹ ಅದೇ ತಾನೇ ಈ ತರಹದ ಶಾಸ್ತ್ರವಿಭಾಗ ಪ್ರಾರಂಭವಾಯಿತು. ಆದುದರಿಂದ ಜಗತ್ತಿನಲ್ಲಿ ಇವರನ್ನು ಸಹಪ್ರಥಮರು ಎಂದು ಹೇಳಲು ಅಡ್ಡಿಯಿಲ್ಲ. ‘‘ಕರ್ನಾಟಕದ ದರ್ಶನ ಮತ್ತು ಪಂಥಗಳ ಮೇಲೆ ಸಂಶೋಧನೆಯನ್ನು ಮಾಡಿದವರಲ್ಲಿ ಶಂಬಾ ಜೋಶಿಯವರು ಪ್ರಮುಖರು. ದುರಂತವೆಂದರೆ ಭಾರತದ ಮುಖ್ಯ ಸಂಶೋಧಕರಲ್ಲಿ ಒಬ್ಬರಾದ ಶಂಬಾ ಚಿಂತನೆಗಳಿಗೆ ಅವರು ಬದುಕಿದ್ದ ಕಾಲದಲ್ಲಿ ಅವರ ಸಮಕಾಲೀನರಿಂದ ಸರಿಯಾದ ಪ್ರತಿಸ್ಪಂದನೆ ಸಿಗಲಿಲ್ಲ. ‘ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ' ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ' ಎಂದು ಕರೆಗೊಟ್ಟ ಕುವೆಂಪು ಅವರಂತಹ ಅಧ್ಯಾತ್ಮವಾದಿ ಚಿಂತಕರಿಗೆ ಸಿಕ್ಕ ಮನ್ನಣೆ, ಶಂಬಾ ಅವರಿಗೆ ಸಿಕ್ಕಲಿಲ್ಲ. ಸ್ಮೃತಿ ಹಾಗೂ ಭಗವದ್ಗೀತೆಗಳನ್ನೂ ಶಂಬಾ ತೀವ್ರ ವಿಮರ್ಶೆಗೆ ಒಳಪಡಿಸಿದರು ಎಂಬ ಕಾರಣಕ್ಕಾಗಿ ಸಂಪ್ರದಾಯವಾದಿಗಳು ಶಂಬಾ ಚಿಂತನೆಗಳನ್ನು ಮೂಲೆಗುಂಪು ಮಾಡಿದರು. ಬೇಂದ್ರೆಯವರ ಪ್ರಖರ ಪ್ರಭಾವಳಿಯಲ್ಲಿ ಉತ್ತರ ಕರ್ನಾಟಕ, ಅದರಲ್ಲೂ ಧಾರವಾಡ ಸಹ ಶಂಬಾ ಅವರನ್ನು ಬಹಳ ನಿರ್ಲಕ್ಷಿಸಿತು. ಅದು ಸಹಜವೂ ಆಗಿತ್ತು. ಕಾರಣ ಅವರ ಬರಹ ಪಂಡಿತರಿಗೇ ಕಬ್ಬಿಣದ ಕಡಲೆಯಾಗಿದ್ದವು. ಅವು ಜನಪ್ರಿಯ ಬರಹಗಳಲ್ಲ. ಸಾಮಾನ್ಯ ಓದುಗರನ್ನು ಮೆಚ್ಚಿಸುವ ಗುಣ ಅವರ ಕೃತಿಗಳಲ್ಲಿ ಇರಲಿಲ್ಲ. ಜೊತೆಗೆ ರೂಢಿಯಲ್ಲಿದ್ದ ನಂಬಿಕೆಯನ್ನು ಅವರು ಪ್ರಶ್ನಿಸುತಿದ್ದರು. ಅವಕ್ಕೆ ಹೊಸ ವಾಖ್ಯೆ ನೀಡುತಿದ್ದರು. ಮೊದಲಿನಿಂದಲೂ ಬಂಡುಕೋರ ಚಿಂತಕರು, ಸಂತರು, ಪಂಥಗಳನ್ನು ವ್ಯವಸ್ಥೆಯ ಭಾಗವಾದ ಸಂಪ್ರದಾಯವಾದವು ನಿರಾಕರಣ ಮಾಡಿದೆ. ಇಲ್ಲವೇ ನಾಶ ಮಾಡಲು ಯತ್ನಿಸಿದೆ. ಚಿಂತನೆಗಳು ಸತ್ಯ ಸದಾ ಶಾಶ್ವತ. ಹಾಗಾಗಿ ಶಂಬಾ ಚಿಂತನೆಗಳಿಗೆ ಅವರ ಮರಣಾನಂತರವೂ ಗೌರವ ದೊರಕಿದೆ. ಆಗಲೂ ಒಂದು ಸೀಮಿತ ವಲಯದಲ್ಲಿ ಅವರ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ ಇದ್ದಿತು. ಅವರ ಬರಹ ನೆಲದ ಮರೆಯ ನಿದಾನ, ಅವರುಎಲೆಯ ಮರೆಯ ಕಾಯಿ. ಹಾಗಾಗಿ ಹಲವು ಪ್ರಶಸ್ತಿಗಳು ಅರಸಿಬಂದವು. ಮಡಿಕೇರಿಯಲ್ಲಿ ೧೯೮೧ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಕನ್ನಡನಾಡು ಗೌರವ ಸಲ್ಲಿಸಿತು, ಅವರ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು ಬಂದವು , ಮೈಸೂರು ವಿಶ್ವವಿದ್ಯಾಲಯದ೧೯೭೧ ರಲ್ಲಿ ಡಾಕ್ಟರೇಟ್.ಪದವಿ ನೀಡಿತು.ವಿದ್ವತ್‌ಲೋಕವು ಅವರ ಅಧ್ಯಯನ ಶೀಲತೆಯನ್ನು ಗುರುತಿಸಿ ಶಂಬಾರವರಿಗೆ ಅರ್ಪಿಸಿದ ಅಭಿನಂದನ ಗ್ರಂಥ ‘ಅಧ್ಯಯನ' . ಇವರು ಕಣ್ಮರೆಯಾದ ನಂತರ (೨೮.೯.೧೯೯೧) ಅರ್ಪಿಸಿದ ಇನ್ನೊಂದು ಗ್ರಂಥ ‘ಶಂಬಾ ಸ್ಮೃತಿ ಗಂಧ.' ಅವರ ಹೆಸರಲ್ಲಿ ಶಂಭಾ ಜೋಷಿ ಪ್ರಶಸ್ತಿಯನ್ನು ಸಂಶೋದಕರಿಗೆ ನೀಡಿ ಅವರ ಸ್ಮರಣೆಗೆ ಗೌರವ ಸಲ್ಲಿಸಲಾಗುತ್ತಿದೆ. ಇಂದಿನ ಜೀವನದ ವೈಪರೀತ್ಯಕ್ಕೆ ವರ್ತಮಾನ ಮಾತ್ರ ಕಾರಣವಾಗಿರದೆ ಅದಕ್ಕೆ ಭೂತಕಾಲದ ಅಂಶಗಳೂ ಹೇಗೆ ಕಾರಣ ಎಂಬುದನ್ನುಸಮರ್ಥವಾಗಿ ನಿರೂಪಿಸಿರುವರು. ವರ್ತಮಾನದ ಬಿಕ್ಕಟ್ಟುಗಳಿಗೆ ಕಾರಣ ಹುಡುಕುವುದೇ ಅವರ ಸಂಶೋಧನೆಯ ಸಾರ. ಅವರ ಪ್ರವಾಹ ಪತಿತರ ಕರ್ಮ ಹಿಂದೂಧರ್ಮ ಮತ್ತು ಭಗವದ್ಗೀತೆಯಲ್ಲಿ ಅಡಗಿರುವ ರಾಜ ಯೋಗ ಸ್ವರೂಪ ಕೃತಿಗಳಲ್ಲಿನ ಅವರ ತಳಸ್ಪರ್ಶಿ ವಿಶ್ಲೇಷಣೆ ಅನೇಕ ಸಂಪ್ರದಾಯವಾದಿಗಳ ಕಣ್ಣು ಕೆಂಪಾಗಿಸಿದುದು ಸಹಜ. ಅವರ ಹಿಂದೂ ಎಂಬ ಪದ ವ್ಯುತ್ಪತ್ತಿ ಮತ್ತು ಅದುನಾಡಿನ ಹೆಸರು ಹೇಗಾಯಿತು ಎಂಬ ಅವರ ವಿಚಾರವನ್ನು ಓದಿದರೆ ಶಂಬಾರವರ ವಿದ್ವತ್ತಿನ ಮತ್ತು ವೈಚಾರಿಕ ಪ್ರಖರತೆಯ ಪರಿಚಯ ಆಗುವುದು. ಅವರ ಗ್ರಂಥಗಳ ಅಧ್ಯಯನಕ್ಕಂತೂ ಅಪಾರ ಶ್ರದ್ಧೆ ಮತ್ತು ಪೂರ್ವ ಸಿದ್ದತೆ ಬೇಕೇ ಬೇಕು. ಹಾಗೆ ಓದಿ ಹೀಗೆ ಮರೆಯುವ ವರ್ಗಕ್ಕೆ ಸೇರಿಲ್ಲ ಅವುಗಳು. ಅವರ ಕೊಡುಗೆಯ ಸಾರ್ಥಕತೆ ಮತ್ತು ಅದರ ಹಿಂದಿರುವ ವಿದ್ವತ್, ವಿವೇಚನೆ ಮತ್ತು ವಿಚಾರಪರತೆಯ ಪರಿಚಯ ಕೆಳಗೆ ನೀಡಿರುವ ಅವರ ಗ್ರಂಥಗಳ ಪಟ್ಟಿಯ ಅವಲೋಕನದಿಂದಲೇ ವಿದಿತವಾಗುವುದು. : ಅರವಿಂದ ಘೋಷರ ಚರಿತ್ರವು(೧೯೨೧), ಕಂನುಡಿಯ ಹುಟ್ಟು(೧೯೨೨), ಕಣ್ಮರೆಯಾದ ಕನ್ನಡ(೧೯೩೩),, ಮಹಾರಾಷ್ಟ್ರದ ಮೂಲ(೧೯೩೪), ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆ-ಭಾಗ೧(೧೯೩೭), ಕನ್ನಡದ ನೆಲೆ(೧೯೩೯), ಶಿವರಹಸ್ಯ(೧೯೩೯),, ರೂಢಿ ಹಾಗು ಭಾವಿಕಲ್ಪನೆಗಳು(೧೯೪೦),, ಅಗ್ನಿವಿದ್ಯೆ(೧೯೪೬),. ಸೌಂದರ್ಯವಿಚಾರ(೧೯೪೬), ಕರ್ಣನ ಮೂರುಚಿತ್ರಗಳು(೧೯೪೭), ಎಡೆಗಳು ಹೇಳುವ ಕಂನಾಡಕಥೆ(೧೯೪೭,), ಯಕ್ಷಪ್ರಶ್ನೆ(೧೯೪೮), ಸಮಾಜದರ್ಶನ(೧೯೪೯), ಹಾಲುಮತ ದರ್ಶನ(೧೯೬೦),ಕರ್ನಾಟಕಸಂಸ್ಕೃತಿಯ ಪೂರ್ವಪೀಠಿಕೆ-ಭಾಗ ೨(೧೯೬೬), ಮಕ್ಕಳ ಒಡಪುಗಳು(೧೯೬೬), ದಾರಿಯಬುತ್ತಿ(೧೯೬೯),ಋಗ್ವೇದಸಾರ-ನಾಗಪ್ರತಿಮಾವಿಚಾರ(೧೯೭೧), ಕನ್ನಡ ನುಡಿಯ ಜೀವಾಳ(೧೯೭೩), ಸಾತತ್ಯ ಮತ್ತು ಸತ್ಯ(೧೯೭೫), ಭಾಷೆ ಮತ್ತು ಸಂಸ್ಕೃತಿ(೧೯೭೫), ಕನ್ನಡ ಸಾಹಿತ್ಯ ಅಭಿವೃದ್ಧಿ(೧೯೭೬), ಪ್ರವಾಹಪತಿತರ ಕರ್ಮ ಹಿಂದೂ ಧರ್ಮ(೧೯೭೬), ಶ್ರೀಮತ್ ಭಗವದ್ಗೀತೆಯಲ್ಲಿ ಹುದುಗಿರುವ ರಾಜಯೋಗದ ಸ್ವರೂಪ(೧೯೭೭), ಮಾನವಧರ್ಮದ ಆಕೃತಿ(೧೯೭೯), ಬುಧನ ಜಾತಕ(೧೯೮೨) ,ಬಿತ್ತಿದ್ದನ್ನು ಬೆಳೆದುಕೊ(೧೯೮೪). ಈ ಸ್ವತಂತ್ರ ಕೃತಿಗಳಲ್ಲದೆ ಎರಡು ಅನುವಾದಗಳೂ ಇವೆ.:ಉಪನಿಷತ್ ರಹಸ್ಯ(ಮೂಲ: ರಾನಡೆ; ಬೇಂದ್ರೆ ಹಾಗು ದಿವಾಕರ್ ಜೊತೆಗೆ ಸಹ ಅನುವಾದ; ೧೯೨೮), ಶ್ರೀಮತ್ ಭಗವದ್ಗೀತಾ ಭಾಗ-೧ (ಮೂಲ :ಸಾತವಳೇಕರ;೧೯೪೪)