Anisha pereira
ಚಂದ್ರ
ಸೃಷ್ಟಿಯ ಇನ್ನುಳಿದ ಚರಾಚರ ವಸ್ತುಗಳಿಗಿಂತ ಸೂರ್ಯ ಚಂದ್ರ ತುಂಬಾ ವಿಸ್ಮಯಕಾರಿ ಹಾಗೂ ಅದ್ಭುತ ವಸ್ತುಗಳಾಗಿವೆ. ಪ್ರಕೃತಿಯ ಈ ಅದ್ಭುತ ಸೃಷ್ಟಿಯಿಂದ ಪ್ರಪಂಚದಾದ್ಯಂತ ನೈಸರ್ಗಿಕ ಬದಲಾವಣೆಗಳಾಗುವುದನ್ನು ಕಾಣುತ್ತೇವೆ. ಸೂರ್ಯ ಹುಟ್ಟಿದಾಗ ಬೆಳಕು, ಮುಳುಗಿದಾಗ ಕತ್ತಲೆ, ಚಂದ್ರನ ಶೀತಳ ಬೆಳಕು, ಮೋಡ-ಮಳೆ, ನಕ್ಷತ್ರಗಳ ಮಿನುಗುವಿಕೆ- ಇಂಥ ಅಸಂಖ್ಯಾತವಾದ ನೈಸರ್ಗಿಕ ವ್ಯಾಪಾರವು ಯಾಂತ್ರಿಕವೆನ್ನುವ ರೀತಿಯಲ್ಲಿ ನಡೆದಿರುತ್ತದೆ. ಈ ಬಗೆಯ ನೈಸರ್ಗಿಕ ಬದಲವಣೆಯು ಮಾನವನ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮವನ್ನುಂಟು ಮಾಡುತ್ತದೆ. ಪ್ರಾಚೀನ ಕಾಲದಿಂದಲೂ ಮಾನವ ಈ ಬದಲಾವಣೆಯನ್ನು ನಿರಂತರವಾಗಿ ಗಮನಿಸುತ್ತಾ, ಅನುಭವಿಸುತ್ತಾ ಬಂದಿದ್ದಾನೆ. ಕಣ್ಣಿಗೆ ಕಾಣುವ, ಕೈಗೆಟ್ಟುಕದ, ಭೂಮಿಗೆ ಹತ್ತಿರವಾದ, ನಿರ್ಜೀವವಾದರೂ ಭೂಮಿಯನ್ನು ಸುತ್ತುವ ಜೀವಶಕ್ತಿಯನ್ನು ಪಡೆದಿರುವ ಚಂದ್ರ ಸೌರವ್ಯೂಹದ ಎಲ್ಲ ಗ್ರಹಗಳಿಗಿಂತಲೂ ಆಕರ್ಷಕನಾಗಿದ್ದಾನೆ. ಭೂಮಿಯ ಏಕೈಕ ಉಪಗ್ರಹ ಇದಾಗಿದೆ. ಚಂದ್ರನ ಬಗೆಗೆ ಮೊದಲಿನಿಂದಲೂ ಸಾಕಷ್ಟು ಕುತೂಹಲ ಬೆಳೆಯಿಸಿ ಕೊಂಡ ಮಾನವ ಇತ್ತೀಚೆಗೆ ಈ ಗ್ರಹದ ಮೇಲೆ ಪಾದಾರ್ಪಣೆ ಮಾಡಿ, ಅವನ ಬಗೆಗೆ ಈವರೆಗಿದ್ದ ಮಾನವನ ಅನೇಕ ಕಲ್ಪನೆ ನಂಬಿಕೆಗಳಿಗೆ ಹೊಸ ತಿರುವುದು ಕೊಟ್ಟಂತಾಗಿದೆ. ಚಂದ್ರನ ಬಗೆಗೆ ವೈಜ್ಞಾನಿಕವಾಗಿ ಹಾಗೂ ಸೈದ್ಧಾಂತಿಕವಾಗಿ ನಡೆದಿರುವ ಅಭ್ಯಿಯನ ತುಂಬಾ ಪರಿಣಾಮಕಾರಿಯಾಗಿದೆ.
ವೇದ, ಪುರಾಣ, ಐತಿಹ್ಯಗಳಲ್ಲಿ ಚಂದ್ರ:
ಚಂದ್ರನಿಗೆ ಸಂಬಂಧಿಸಿದಂತೆ ನಮ್ಮ ವೇದ, ಪುರಾಣ, ಹಾಗೂ ಐತಿಹ್ಯಾದಿಗಳಲ್ಲಿ ವಿಭಿನ್ನ ಉಲ್ಲೇಖಗಳು ಕಂಡು ಬರುತ್ತವೆ. ಅವುಗಳು ಚಂದ್ರನ ಬಗೆಗೆ ವಿವಿಧ ನಂಬಿಕೆ, ಕತೆ-ಕಲ್ಪನೆಗಳನ್ನೊಳಗೊಂಡಿವೆ. ಭಗ್ನಾತ್ಮಾ, ಇಂದು, ಕುಮುದಪತಿ, ಮೃಗಾಂಕಾ, ನಿಶಾಕರಾ, ಶಶಿನ್, ಶಿವಶೇಖರ, ನಕ್ಷತ್ರನಾಥ, ಔಷಧಿಪತಿ, ಶಿತಾಗು, ಸೋಮ, ಶ್ವೇತವಾಜಿ, ಮಂಗಳ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಚಂದ್ರ ತುಂಬಾ ಪ್ರಭಾವಶಾಲಿಯಾಗಿದ್ದಾನೆ.
ಸೂರ್ಯನಿಗೆ ಈಶಾನ್ಯಕೋನದಲ್ಲಿ ಚಂದ್ರನಿರುತ್ತಾನೆ. ಇವನು ನವಗ್ರಹಗಳಲ್ಲಿ ಒಬ್ಬ. ಈ ದೇವತೆಗೂ ವೈದಿಕ ಹಿನ್ನೆಲೆಯಿದೆ. ಜಾತಿಯಲ್ಲ ಅವನು ಪೈಶ್ಯನಾಗಿದ್ದು, ರೋಹಿಣಿಯು ಅವನ ಹೆಂಡತಿಯಾಗಿದ್ದಾಳೆ. ಅವನ ವಾಹನ ಚಿಂಕೆ. ಅವನ ರಥಕ್ಕೆ ಎರಡು ಗಾಲಿಗಳು. ಮೂರೆಂಬ ಅಭಿಪ್ರಾಯವೂ ಇದೆ. ಅದನ್ನು ಬಿಳಿಬಣ್ಣದ ಹತ್ತು ಕುದುರೆಗಳು ಎಳೆಯುವವು. ಇಬ್ಬರು ಸಾರಥಿಗಳು. ಚಂದ್ರನ ತಂದೆ ಅತ್ರಿ ಎಂದೂ, ತಾಯಿ ಅನಸೂಯೆ ಎಂದೂ, ಇವನದು ಬಿಳಿಯ ಮಂಡಲವೆಂದೂ ಪುರಾಣದ ವಿವರ.
ಚಂದ್ರನ ಉಗಮ, ನಿಲವುಗಳ ಬಗೆಗೆ ಅನೇಕ ವಾದವಿವಾದಗಳಿವೆ. ಬ್ರಹ್ಮ ಅತ್ರಿ ಮುನಿಯನ್ನು ಸೃಷ್ಟಿಕಾರ್ಯದಲ್ಲಿ ನಿಯಮಿಸಿದ. ಅತ್ರಿ ತಪೋನಿರತನಾದಾಗ ಆತನ ಕಣ್ಣಿಂದ ದಿವ್ಯ ತೇಜಸ್ಸು ಹೊರಟಿತು. ಆ ತೇಜಸ್ಸನ್ನು ದಶದಿಕ್ಕುಗಳೂ ಧರಿಸಿದುವು. ಆದರೆ ಆ ತೇಜಸ್ಸಿನ ವೇಗವನ್ನು ಸಹಿಸಲಾರದೆ ಕ್ಷೀರಸಮುದ್ರದಲ್ಲಿ ಬಿಟ್ಟವು. ಬ್ರಹ್ಮ ಆ ತೇಜಸ್ಸನ್ನೆಲ್ಲ ಒಟ್ಟುಗೂಡಿಸಿ, ಪುರುಷಾಕಾರದಿಂದ ಒಂದು ವ್ಯಕ್ತಿಯಾಗುವಂತೆ ಮಾಡಿ, ಚಂದ್ರನೆಂಬ ಹೆಸರಿಟ್ಟು ಗ್ರಹಮಂಡಲದಲ್ಲಿ ಒಬ್ಬನಾಗಿರುವಂತೆ ನಿಯಮಿಸಿದ.
ಚಂದ್ರ, ತನ್ನ ಗುರುವಾದ ಬೃಹಸ್ಪತಿಯ ಹೆಂಡತಿ ತಾರೆಯನ್ನು ಅಪಹರಿಸಿ, ಅವಳಿಂದ ’ಬುಧ’ (ಗ್ರಹ)ನೆಂಬ ಮಗುವನ್ನು ಪಡೆದನೆಂದು ಪುರಾಣದ ಕಥೆ. ಚಂದ್ರನು ದಕ್ಷ ಪುತ್ರಿಯರಲ್ಲಿ ಅಶ್ವಿನೀ ಮೊದಲಾದ ಇಪ್ಪತ್ತೇಳು ಜನರನ್ನು ಮದುವೆಯಾಗಿದ್ದ. ಆದರೆ ಅವನು ರೋಹಿಣಿಯಲ್ಲಿ ವಿಶೇಷವಾಗಿ ಲೋಲನಾಗಿದ್ದನೆಂಬ ಕಾರಣಕ್ಕಾಗಿ ದಕ್ಷನಿಂದ ಕ್ಷಯರೋಗ ಪೀಡಿತನಾಗಿರುವಂತೆ ಶಾಪವುಂಟಾಯಿತು. ಶಾಪಗ್ರಸ್ಥನಾದ ಚಂದ್ರ ಸಂಪತ್ತು ನಾಶವಾಗುವಂತೆ ಶಾಪವಿತ್ತು ಕ್ಷೀರಸಮುದ್ರದಲ್ಲಿ ಅಡಗಿಕೊಂಡನು. ಔಷಧಿಗಳಿಗೆ ಅಧಿಪತಿಯಾದ ಚಂದ್ರನಿಲ್ಲದುದರಿಂದ ಪೈರು, ಪಚ್ಚೆ, ಗಿಡ, ಮರ, ಬಳ್ಳಿಗಳೆಲ್ಲವೂ ಸಾರಹೀನವಾದವು. ಬ್ರಹ್ಮನ ಸೂಚನೆಯ ಮೇರೆಗೆ ದೇವತೆಗಳೆಲ್ಲರೂ ಔಷಧಿಗಳನ್ನೆಲ್ಲ ತಂದು ಪಾಲ್ಗಡಲಲ್ಲಿ ಹಾಕಿ ಕಡೆಯಲಾಗಿ ಚಂದ್ರನು ಅಲ್ಲಿಂದ ಹರಬಂದನು. ದೇವತೆಗಳು ಕ್ಷೀರಸಮುದ್ರವನ್ನು ಮಥನಮಾಡಿದಾಗ ಚಂದ್ರ ಅಲ್ಲಿಂದ ಹುಟ್ಟಿದನೆಂದು ಪುರಾಣದ ವಿವರ.
ವೇದಗಳಲ್ಲಿ ಸೂರ್ಯನ ಬಗೆಗೆ ದೊರಕುವಷ್ಟು ಮಾಹಿತಿ ಚಂದ್ರನ ಬಗೆಗೆ ದೊರಕುವುದಿಲ್ಲ. ಯಾಕೆಂದರೆ ಚಂದ್ರ ಆರ್ಯೇತರ ಜನಾಂಗದ ದೇವತೆಯಾದ್ದರಿಂದ ಇದರ ಉಲ್ಲೇಖ ವೇದಗಳಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ.
ಕಾವ್ಯಗಳಲ್ಲಿ ಚಂದ್ರ:
ಕಾವ್ಯ ಪ್ರಪಂಚದಲ್ಲಿ ಆಕಾಶದ ಇನ್ನುಳಿದ ವಸ್ತುಗಳಿಗಿಂತ ಚಂದ್ರನಿಗೆ ತುಂಬಾ ಮಹತ್ವದ ಸ್ಥಾನವಿದೆ. ನಮ್ಮ ಹಳಗನ್ನಡ ಕಾವ್ಯಗಳಲ್ಲಂತೂ ಚಂದ್ರನ ವರ್ಣನೆ ಮಾಡದೆ ಗತ್ಯಂತರವಿಲ್ಲ. ಯಾಕೆಂದರೆ ಅಷ್ಟಾದಶ ವರ್ಣನೆಗಳಲ್ಲಿ ಚಂದ್ರೋದರ ವರ್ಣನೆಯೂ ಒಂದಾಗಿದೆ. ಚಂದ್ರನ ಶೀತಲ ಬೆಳಕು ಸೌಂದರ್ಯದ ಪ್ರತೀಕವಾಗಿರುವುದರಿಂದ ಸೌಂದರ್ಯಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾಗಿ ನಮ್ಮ ಕವಿಗಳು ಸ್ತ್ರೀಯರನ್ನು ಹೋಲಿಸುವುದುಂಟು. ಸ್ತ್ರೀಯ ಮುಖಲಾವಣ್ಯವನ್ನು ಬಣ್ಣಿಸುವಾಗ ಚಂದ್ರ ಮುಖಿ, ಚಂದ್ರವದನೆ, ಶಶಿವದನೆ, ಇತ್ಯಾದಿಯಾಗಿ ಬಳುಸುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅನೇಕ ಜನ ಸಂಸ್ಕೃತ ಕವಿಗಳು ಸೌಂದರ್ಯಕ್ಕೆ ಪ್ರತಿಯಾಗಿ ಶ್ರೀ ಲಕ್ಷ್ಮೀ, ಕಾಂತಿ, ರಶ್ಮಿ ಇತ್ಯಾದಿಯಾಗಿ ಬಳಸಿರುವುದು ಗಮನಾರ್ಹ. ಹೆಣ್ಣು, ಕವಿಯ ದೃಷ್ಟಿಯಲ್ಲಿ ಸಮಸ್ತ ಪ್ರಕೃತಿ ಸೌಂದರ್ಯದ ಆಗರ. ಕಾವ್ಯಗಳಲ್ಲಿ ಬರುವ ಚಂದ್ರೋದಯದ ವರ್ಣನೆ ಸಾಮಾನ್ಯವಾಗಿ ಸ್ತ್ರೀ ಚೈತನ್ಯಾರೋಪಣೆಯಾಗಿರುತ್ತದೆ. ಮನುಷ್ಯನ ಭಾವನೆಗಳೊಂದಿಗೆ ಹೆಚ್ಚಿನ ಸಂಬಂಧವನ್ನು ಪಡೆದಿರುವ ಚಂದ್ರ ಕಾವ್ಯಕ್ಕೆ ಪ್ರೇರಕ ಶಕ್ತಿಯಾಗಿದ್ದಾನೆ ಕಾವ್ಯಗಳಲ್ಲಿ ಕವಿಸಮಯಗಳನ್ನು ಬಳಸುವುದು ಸ್ವಾರಸ್ಯಕರವಾದ ಸಂಗತಿ. ಚಂದ್ರ-ಅಬುಧಿ, ಮಾಮರ-ಕೋಗಿಲೆ, ಚಕೋರ-ಚಂದ್ರಮ, ಅಂಬುಜ-ಭಾನು, ಪರಿಮಳ-ದುಂಬಿ, ಬೆಳ್ಗೊಡೆ-ಆಗಸ, ಚಂದ್ರ-ತಿಲಕ ಈ ಜೋಡಿಗಳು ಮಧುರ ಬಾಂಧವ್ಯದ ಸಂಕೇತಗಳಾಗಿ ನಮ್ಮ ವಚನಕಾರರ ವಚನಗಳಲ್ಲಿ ಬಳಕೆಗೊಂಡಿರುವುದನ್ನು ಕಾಣಬಹುದಾಗಿದೆ. ’ಗಗನವೇ ಗುಂಡಿಗೆ, ಆಕಾಶವೇ ಅಗ್ಭವಣಿ, ಚಂದ್ರ-ಸೂರ್ಯರಿಬ್ಬರೂ ಪುಷ್ಪನೋಡಾ!’ (ಅಲ್ಲಮ, ವ. ೨೦೮ ಪು. ೧೨೩) ಎಂಬ ವಚನದಲ್ಲಿ ಬರುವ ವರ್ಣನೆ ತುಂಬಾ ಸೊಗಸಾಗಿದೆ. ಸಕಲಜನಪ್ರಿಯನಾದ ಚಂದ್ರನನ್ನು ಕುರಿತು ಕವಿ ಕುವೆಂಪು ’ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೊ’ ಎಂದೂ, ಲಕ್ಷ್ಮೀಶನು ’ಜನಾವಲೋಕಪ್ರಿಯಂ’ ಎಂದು ಬಣ್ಣಿಸಿದ್ದಾನೆ’. ’ಇರುಳ್ಗಣ್ಣನೆಂದು ಚೆಂದವನಕ್ಕುಂ’ (ರಾಮಾಶ್ವ ೮೯-೨೮) ’ಬೆಳ್ಗೊಡೆಯಾಗಸಕೇರ‍್ದಿ ಚಂದವಂ ಗಡ (ಕಬ್ಬಿಕಾ ೧೮೩), ’ಚಂದ್ರಕಳೆ ಕಣ್ದೆಱೆದಂತೆ ನೆಱೆ ಮೆಱೆದು ನಡೆತಂದು ನಗತನೂಜೆ, ಚಂದ್ರಧರನ ಮುಂದೆ ನಿಂದು’ (ಗಿರಿಕ ೫-೭ ೬ವ), ’ಈ ಚಂದ್ರವೀಧಿಗೆ ರಸಿಕರೆ ವಿಬುಧರೆ ಬನ್ನಿರಿ ಕವಿ ಸಹೃದಯರೆ’ (ಚಂದ್ರವೀ ೧-೬) ಹೀಗೆ ಕಾವ್ಯಗಳಲ್ಲಿ ಚಂದ್ರ ಹಾಗೂ ಚಂದ್ರನ ಬೆಳಗಿನ ಚಿಂತೆ’ (ಬಸವ. ೩೬೪). ತಿಂಗಳ ಬೆಳಕಿನ ಸಿರಿಯಂ ಕಂಡು ನಾಯಿ ಹರುಷಗೊಂಡ ಬಳ್ಳಿಟ್ಟು ಬೊಗಳಿದಂತಾಯಿತು’ (ಘನವ ೩೬), ’ಹೊಳೆವ ಕೆಂಜೆಡೆಗಳ ಮೇಲೆ ಎಳೆವಳುದಿಂಗಳು (ಅಕ್ಷಮ), ’ನಂದಿಯನು ಏಱೆದನ ಚಂದಿರನ ಸೂಡಿದನ’ (ಸರ್ವಜ್ಞ – ೧) ಮುಂತಾದ ವಚನಗಳಲ್ಲಿ ವ್ಯಕ್ತವಾಗಿರುವ ಬೆಳದಿಂಗಳ ವರ್ಣನೆ ಸ್ವಾರಸ್ಯಪೂರ್ಣವಾಗಿದೆ.