ಸದಸ್ಯ:AnanthKC/ನನ್ನ ಪ್ರಯೋಗಪುಟ
ಉಗಿ ಉತ್ಪಾದಕಗಳು
ಅಧಿಕ ಸಂಮರ್ದ ಮತ್ತು ಅಧಿಕೋಷ್ಣತೆಯಲ್ಲಿರುವ ಉಗಿಯನ್ನು ಉತ್ಪನ್ನಮಾಡುವ ಸಮಗ್ರ ಯಾಂತ್ರಿಕ ವ್ಯವಸ್ಥೆ (ಸ್ಟೀಂ ಜನರೇಟರ್ಸ್). ಇಂಧನ ದಹನದಿಂದ ಅಧಿಕೋಷ್ಟವಿರುವ ಮೂಲವನ್ನು ಏರ್ಪಡಿಸಿ ಅದರಿಂದ ಉಷ್ಣಶಕ್ತಿಯನ್ನು ನೀರಿಗೆ ವರ್ಗಾಯಿಸಿ ನೀರನ್ನು ಬಾಷ್ಪೀಕರಿಸಲು ಬಳಸುವ ಒಂದು ಸಂಮರ್ದಪುರಿತ ವ್ಯವಸ್ಥೆಯ ಹೆಸರು ಉಗಿಆವಿಗೆ (ಸ್ಟೀಂ ಬಾಯ್ಲರ್). ಇಲ್ಲಿ ಉಗಿಯನ್ನು ಪಡೆಯುವುದೂ ಅದರಲ್ಲಿ ಸುಪ್ತವಾಗಿರುವ (ಲೇಟೆಂಟ್) ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಉಪಯೋಗಿಸಿಕೊಳ್ಳುವುದೂ ಮುಖ್ಯ ಉದ್ದೇಶಗಳು. ಆದ್ದರಿಂದ ಉಷ್ಣಯಂತ್ರಗಳಲ್ಲಿ ಉಗಿಆವಿಗೆ ಒಂದು ಪ್ರಧಾನವಿಭಾಗ. ಶಕ್ತ್ಯುತ್ಪಾದನೆಗೆ ಮಾತ್ರವಲ್ಲ. ಕೈಗಾರಿಕೆಗಳಲ್ಲಿನ ಕೆಲವು ಪ್ರಕ್ರಿಯೆಗಳಲೂ ಬಿಸಿಮಾಡುವ ಕ್ರಿಯೆಯಲ್ಲೂ (ನೋಡಿ- ಉಗಿತಾಪನ) ನೀರಿನ ಉಗಿಯ ವಿನಿಯೋಗವಿರುವುದರಿಂದ ಆವಿಗೆಗಳ ಬಳಕೆ ಬಲು ಹಿಂದಿನ ಕಾಲದಿಂದಲೂ ನಡೆದು ಬಂದಿದೆ. ಈ ಕಾರಣದಿಂದ ಅವುಗಳ ಅಲೇಖ್ಯದಲ್ಲೂ (ಡಿಸೈನ್) ರಚನೆಯಲ್ಲೂ ರಚನೆಗೆ ಉಪಯೋಗಿಸುವ ಪದಾರ್ಥ ಹಾಗೂ ವಿಧಾನಗಳಲ್ಲೂ ಹೆಚ್ಚಿನ ಸುಧಾರಣೆ ಸಾಧ್ಯವಾಗಿದೆ. ಆದ್ದರಿಂದ ಇಂದು ಆವಿಗೆ (ಬಾಯ್ಲರ್) ಪದದ ಅರ್ಥವ್ಯಾಪ್ತಿ ವಿಶಾಲವಾಗಿ ಅದೊಂದು ಉಗಿ ಉತ್ಪಾದಕ ವ್ಯವಸ್ಥೆ (ಸ್ಟೀಂ ಜನರೇಟಿಂಗ್ ಯೂನಿಟ್) ಎಂದೇ ಪರಿಗಣಿಸಲಾಗಿದೆ. ಪ್ರಸಕ್ತ ಲೇಖನದಲ್ಲಿ ಉಗಿ, ಆವಿಗೆ ಪದಗಳನ್ನು ಈ ವಿಶಾಲ ಅರ್ಥದಲ್ಲಿ ಬಳಸಲಾಗಿದೆ. ಇಂಧನದಹನದಿಂದ ಉತ್ಪತ್ತಿಯಾದ ಉಷ್ಣವನ್ನು, ಅದನ್ನು ಒಳಗೊಂಡಿರುವ ನೀರಿಗೆ ಹಾಯಿಸುವುದರ ಮೂಲಕ, ಮೊದಲೇ ನಿಗದಿಸಿರುವ ಸಂಮರ್ದ ಮತ್ತು ಉಷ್ಣತೆಗಳ ಮಟ್ಟದ ಉಗಿಯಾಗಿ ನೀರನ್ನು ಪರಿವರ್ತಿಸುವುದೇ ಆವಿಗೆಯ ಕೆಲಸ. ಇದು ತೃಪ್ತಿಕರವಾಗಿ ನೆರವೇರಿಸಲು ಕೆಳಗಿನ ಅಂಶಗಳಿಗೆ ಗಮನವೀಯಬೇಕು. ದಹನಜನ್ಯ ಅನಿಲಗಳು ಲೋಹಮಧ್ಯಸ್ಥವಾಗಿ ನೀರನ್ನು ಸಂಧಿಸುವ ಪ್ರದೇಶ ಆದಷ್ಟು ಹೆಚ್ಚು ವಿಸ್ತಾರವಾಗಿರಬೇಕು; ಉಷ್ಣ ಸಲೀಸಾಗಿ ಪ್ರವಹಿಸುವಂತೆ ಆವಿಗೆಯ ಲೋಹ ಸಾಧ್ಯವಾದಷ್ಟು ತೆಳುವಾಗಿಯೂ ಉತ್ತಮ ಉಷ್ಣವಾಹಕವಾಗಿಯೂ ಇರಬೇಕು; ಇಂಥ ರಚನೆಯಲ್ಲಿ ಆವಿಗೆ ಸುಭದ್ರವಾಗಿರಬೇಕು. ರಚನೆಯ ಖರ್ಚು ಮಿತಿಯಲ್ಲಿರಬೇಕು: ಲೋಹದ ಎರಡೂ ಮಗ್ಗುಲುಗಳಲ್ಲಿರುವ ನೀರು (ಅಥವಾ ಉಗಿ) ಮತ್ತು ದಹನಜನ್ಯ ಅನಿಲಗಳು ಸದಾ ಚಲಿಸುತ್ತಿರಬೇಕು: ಆ ನೀರು ಸಹ ಶುಭ್ರ ಮಾತ್ರವಲ್ಲದೆ ಶುದ್ಧವಾಗಿಯೂ ಇರಬೇಕು.[೧]
ವಿಂಗಡಣೆ
ಬದಲಾಯಿಸಿಆವಿಗೆಗಳನ್ನು ಹಲವಾರು ರೀತಿಗಳಲ್ಲಿ ವಿಂಗಡಿಸಬಹುದು. ಒಂದು ವಿಂಗಡಣೆಯದರಲ್ಲಿನ ಬೆಳೆವಣಿಗೆ ಇನ್ನೊಂದರ ವ್ಯಾಪ್ತಿಯನ್ನು ಅತಿಕ್ರಮಿಸುವುದರಿಂದ ವಿಂಗಡಣೆಯ ನಿಖರತೆ ಅಸ್ಪಷ್ಟವಾಗಬಹುದಾದರೂ ಈ ಕೆಳಗಿನ ಯಾದಿಯನ್ನು ಗಮನಿಸಬಹುದು.
1. ನೀರು ಹಾಗೂ ದಹನಜನ್ಯ ಅನಿಲಗಳ ಪರಸ್ಪರ ಸ್ಥಾನ ನಿರ್ದೇಶಕವಾಗಿ, ಜಲ-ನಾಳಿ ಆವಿಗೆಗಳು ಮತ್ತ ಧೂಮ-ನಾಳಿ ಆವಿಗೆಗಳು.
2. ಆವಿಗೆಯಲ್ಲಿ ಅಗ್ನಿಕುಲುಮೆಯ ಸ್ಥಳ ಸೂಚಕವಾಗಿ ಹೊರಬೆಂಕಿ ಆವಿಗೆಗಳು, ಒಳಬೆಂಕಿ ಆವಿಗೆಗಳು.
3. ಅವುಗಳ ಪ್ರಧಾನ ಅಕ್ಷದ ದಿಕ್-ಸೂಚಿಯಾಗಿ, ಮಟ್ಟವಾಗಿರುವ ಆವಿಗೆಗಳು, ನೆಟ್ಟಗಿರುವ ಆವಿಗೆಗಳು, ಓರೆಯಾದ ಆವಿಗೆಗಳು.
4. ಅವುಗಳ ಸೇವಾಕ್ಷೇತ್ರಕ್ಕೆ ಅನುಗುಣವಾಗಿ ಸ್ಥಿರ ಆವಿಗೆಗಳು, ಒಯ್ಯಲಾಗುವ ಆವಿಗೆಗಳು, ಸ್ವಯಂಚಲಿ (ಅಥವಾ ಉಗಿ ಬಂಡಿಗ) ಆವಿಗೆಗಳು ಮತ್ತು ನೌಕಾ ಆವಿಗೆಗಳು.
5. ನೇರ ಕೊಳವೆಯ ಆವಿಗೆಗಳು ಮತ್ತು ಬಾಗು ಕೊಳವೆಯ ಆವಿಗೆಗಳು.
6. ಕಡಾಯಿ ಆವಿಗೆಗಳು ಮತ್ತು ಕೊಲವಿ ಆವಿಗೆಗಳು, ಇತ್ಯಾದಿ.
ಚ.ಅಂ.ಕ್ಕೆ. 25 ಪೌಂಡ್ ಗೇಜ್ ಅಥವಾ ಕಡಿಮೆ ಸಂಮರ್ದದಲ್ಲಿ ಕೆಲಸಮಾಡುವ ಆವಿಗೆಗಳನ್ನು ಉಷ್ಣವಿಗೆಗಳೆಂದೂ ಅದಕ್ಕಿಂತ ಹೆಚ್ಚು ಸಂಮರ್ದದಲ್ಲಿ ಕೆಲಸ ಮಾಡುವವನ್ನು ಶಕ್ತಿ ಆವಿಗೆಗಳೆಂದೂ ಕರೆಯುವುದುಂಟು. ಕೆಲವು ವರ್ಷಗಳ ಹಿಂದೆ ಶಕ್ತಿ ಆವಿಗೆಗಳ ಸಂಮರ್ದ ಚ.ಅ.ಕ್ಕೆ 100 ಪೌಂಡ್ ಗೇಜ್ ಎಂಬುದು ಬಲು ಸಾಧಾರಣವಾಗಿತ್ತು. ಆದರೆ ಈಚೆಗೆ 400-600 ಪೌಂಡ್ ಶಕ್ತಿ ಉತ್ಪಾದಕ ಕೇಂದ್ರಗಳಲ್ಲಿ ಬಲು ಸಾಮಾನ್ಯ. ನಿರ್ವಹಣೆಯಲ್ಲಿ ಯಾವ ಹೆಚ್ಚಳವೂ ಕಾಣದೆ 1,470 ಪೌಂಡ್ ಗೇಜ್ ಇರುವಂಥವನ್ನು ಭಾರತದಲ್ಲೇ ಹೊಸದಾಗಿ ನಿರ್ಮಿತವಾಗಿರುವ ಕೇಂದ್ರಗಳಲ್ಲಿ ಕಾಣಬಹುದು. ಉಗಿಯ ಅವಧಿಕ (ಕ್ರಿಟಿಕಲ್) ಸಂಮರ್ದವಾದ 3,206 ಪೌಂಡುಗಳು ಮತ್ತು ಇನ್ನೂ ಹೆಚ್ಚಿನ ಸಂಮರ್ದಗಳಲ್ಲಿ ಉಗಿ ಉತ್ಪಾದಿಸುವ ಆವಿಗೆಗಳೂ ಬಳಕೆಗೆ ಬಂದಿವೆ.
ಸಾಧಾರಣವಾಗಿ ಪ್ರತಿ ಆವಿಗೆಯಲ್ಲೂ ಇರುವ ಕೆಲವು ಪ್ರಮುಖಭಾಗಗಳು ಹೀಗಿವೆ: ಸಂಮರ್ದಭಾಗಗಳು, ಬೆಂಕಿ ಏರ್ಪಾಡು, ಆವರಣ, ಉಪಕರಣಗಳು.
ಆವಿಗೆಯ ಉತ್ಪಾದನ ಸಾಮರ್ಥ್ಯ
ಬದಲಾಯಿಸಿಆವಿಗೆ ಒಂದು ಗಂಟೆಯಲ್ಲಿ ಉತ್ಪಾದಿಸುವ ಆವಿಯ ತೂಕದಿಂದ ಇದನ್ನು ಅಳೆಯಲಾಗುವುದು. ಆದರೆ ಬೇರೆ ಬೇರೆ ಸಂಮರ್ದಗಳಲ್ಲಿ ಮತ್ತು/ಅಥವಾ ಉಷ್ಣತೆಗಳಲ್ಲಿ ತಯಾರಾದ ಒಂದೇ ತೂಕದ ಆವಿ ಒಳಗೊಂಡಿರುವ ಶಕ್ತಿಯ ಪ್ರಮಾಣ ಭಿನ್ನವಾಗಿರುವುದರಿಂದ ಈ ಕ್ರಮ ಸಾಮರ್ಥ್ಯದ ಸರಿಯಾದ ಅಳತೆಯಾಗಲಾರದು. ಆವಿಗೆಯ ಉಷ್ಣ ಪ್ರವಹಿಸುವ ಕ್ಷೇತ್ರದಲ್ಲಿ ಒಂದು ಗಂಟೆಗೆ ಪ್ರವಹಿಸುವ ಉಷ್ಣದ ಪ್ರಮಾಣ ಹೆಚ್ಚು ನಿಖರವಾದ ಅಳತೆಯಾದೀತು. ಇದನ್ನೇ ಗಂಟೆಗೆ ಸಹಸ್ರ-ಬ್ರಿಟಿಷ್ ಉಷ್ಣಮಾನದಲ್ಲಾಗಲೀ (ಕಿಲೋ ಬಿಟಿಯು) ದಶ ಲಕ್ಷ -ಬ್ರಿಟಿಷ್ ಉಷ್ಣಮಾನದಲ್ಲಾಗಲೀ (ಮೆಗಾ ಬಿಟಿಯು) ಹೇಳಿದರೆ ಸಂಖ್ಯೆ ಮಿತಿಯಲ್ಲಿರುತ್ತದೆ. [೨]
ಬಹಳ ಹಿಂದಿನಿಂದಲೂ ಬಳಗೆಯಲ್ಲಿರುವ ಒಂದು ಮಾನ ಆವಿಗೆಯ ಅಶ್ವ ಸಾಮರ್ಥ್ಯ. ಹಿಂದಿನ ಸ್ಥಿತಿಯಲ್ಲಿ ಇದು ಸಮಂಜಸವೇ. ಆದರೆ ಇಂದು ಆವಿಗೆಯ ಅಶ್ವಸಾಮರ್ಥ್ಯಕ್ಕೂ ಅದು ಉತ್ಪಾದಿಸುವ ಉಗಿಯನ್ನೇ ಉಪಯೋಗಿಸಿ ನಡೆಯುವ ಯಂತ್ರದ ಅಶ್ವಸಾಮರ್ಥ್ಯಕ್ಕೂ ತಾಳೆಯಾಗುವುದಿಲ್ಲ. ಆದರೂ ಬಳಕೆಯಲ್ಲಿರುವ ಅದನ್ನೇ ಒಂದು ಪ್ರಮಾಣದ ಮಾನವಾಗಿ ಉಳಿಸಿಕೊಂಡಿರಲು ಅದನ್ನು 100º ಸೆಂ. ಗ್ರೇಡಿನಲ್ಲಿರುವ ಒಂದು ಪೌಂಡ್ ನೀರನ್ನು 100º ಸೆಂ. ಗ್ರೇಡಿನಲ್ಲಿರುವ ಉಗಿಯಾಗಿ ಪರಿವರ್ತಿಸಲು ಬೇಕಾಗುವ ಉಷ್ಣದ 34 1/2 ದಷ್ಟು ಎಂದು ವಿಧಾಯಕಗೊಳಿಸಿದ್ದಾರೆ.
ಸಮಾನ ಬಾಷ್ಪೀಕರಣ (ಈಕ್ವಿವಲೆಂಟ್ ಇವಾಪೊರೇಷನ್) ಎಂಬುದು ಹೆಚ್ಚು ಅರ್ಥವತ್ತಾದ ಅಳತೆ. ಯಾವ ಸಂಮರ್ದ, ಉಷ್ಣತೆಗಳಲ್ಲಿ ಉಗಿ ಉತ್ಪತ್ತಿಯಾಗಿರಲಿ ಒಂದು ಗಂಟೆಗೆ ಅಷ್ಟೇ ಉಷ್ಣವನ್ನು ಉಪಯೋಗಿಸಿಕೊಂಡು 1000 ಸೆಂ. ಗ್ರೇಡಿನಲ್ಲಿರುವ ನೀರನ್ನು 1000 ಸೆಂ. ಗ್ರೇಡಿನ ಉಗಿಯಾಗಿ (ಎಂದರೆ ಬರಿಯ ಸುಪ್ತೋಷ್ಣವನ್ನು ಬಳಸಿ) ಎಷ್ಟು ಪೌಂಡ್ ಪರಿವರ್ತಿಸಬಹುದು ಎಂಬುದು ಇದರ ಪ್ರಮಾಣ.
ಸಣ್ಣ ಆವಿಗೆಗಳ ಬಗ್ಗೆ ಬಳಕೆಯಲ್ಲಿರುವ ಇನ್ನೊಂದು ಪದ ನಿಗದಿ ಮಾಡಿದ ಅಶ್ವ ಸಾಮರ್ಥ್ಯ (ರೇಟೆಡ್ ಎಚ್.ಪಿ.). ಆವಿಗೆಯಲ್ಲಿ ಉಷ್ಣ ಪ್ರವಹಿಸುವ ಪ್ರತಿ 10 ಚದರ ಅಡಿ ವಿಸ್ತಾರಕ್ಕೆ ಒಂದು ಅಶ್ವಸಾಮರ್ಥ್ಯ ಎಂದು ಇದರ ಅಳತೆ. ಇದು ಅಂದಾಜಿನ ಅಳತೆಯೇ ಹೊರತು ನಿಖರವಾದುದೇನೂ ಅಲ್ಲ.
ಕೆಲವು ಪ್ರಮುಖ ಅವಿಗೆಗಳ ವಿವರಣೆ
ಬದಲಾಯಿಸಿಧೂಮಾನಾಳಿ ಹಾಗೂ ಜಲನಾಳಿ ಆವಿಗೆಗಳು(ಫೈರ್ ಟ್ಯೂಬ್ ವಾಟರ್ ಟ್ಯೂಬ್ ಬಾಯ್ಲರ್ಸ್)
ಬದಲಾಯಿಸಿಅವಿಗೆ ಮೊಟ್ಟಮೊದಲು ಬಳಕೆಗೆ ಬಂದಾಗ (ರೋಮನರ ಕಾಲದಲ್ಲಿ) ಅದು ಒಂದು ಕಡಾಯಿಯ ಆಕಾರದಲ್ಲಿತ್ತು. ಸಮರ್ಪಕವಾಗಿ ಅಳವಡಿಸಿದ್ದ ಒಲೆಯ ಉರಿಯಿಂದ ಸುತ್ತಲೂ ನೀರು ಕಾಯುವಂತೆ ಏರ್ಪಡಿಸಲಾಗಿತ್ತು. ಇದರಲ್ಲಿ ಉಗಿ ಉತ್ಪಾದನೆಯಾಗುತ್ತಿದ್ದುದು ವಾತಾವರಣದ ಸಂಮರ್ದದಲ್ಲಿ ಮಾತ್ರ. 1080ರಲ್ಲಿ ಪೇಪಿನ್ ಎಂಬಾತ ಸನ್ನೆ ರಕ್ಷಣಾಕವಾಟವನ್ನು ಬಳಕೆಗೆ ತಂದ. ವಾತಾವರಣಕ್ಕಿಂತ ಹೆಚ್ಚು ಸಂಮರ್ದದಲ್ಲಿ ಉಗಿ ಉತ್ಪಾದನೆಯನ್ನು ಇದರೊಳಗೆ ಸುರಕ್ಷಿತವಾಗಿ ಸಾಧಿಸಿದ. ಅಲ್ಲದೆ ಕಡಾಯಿಯ ಒಳಗೆ ಮಾತ್ರ ಉರಿ ತಾಕಿದರೆ ಹೆಚ್ಚು ಉತ್ಪಾದನೆಗೆ ಬೇಕಾದ ಉಷ್ಣದ ಪ್ರವಾಹಕ್ಕೆ ಜಾಗ ಸಾಲದೆಂಬುದನ್ನು ಮನಗಂಡು ನೀರಿನೊಳಗೆ ತೂರುವಂತೆ ಇನ್ನೂ ಕೆಲವು ಕೊಳವೆಗಳನ್ನು ಅಳವಡಿಸಿ ಅವುಗಳ ಮುಖಾಂತರವೂ ಉರಿಯ ಅನಿಲಗಳು ಹಾಯುವಂತೆ ಮಾಡಿದ. ಹೀಗೆ ಧೂಮನಾಳಿ ಆವಿಗೆಯ ಉಗಮವಾಗಿ ಉತ್ಪಾದನೆ ಹಾಗೂ ಮಿತವ್ಯಯ ಎರಡರಲ್ಲೂ ಹೆಚ್ಚಳ ಸಾಧ್ಯವಾಯಿತು. ಕಾರ್ನಿಷ್ ಆವಿಗೆ, ಲ್ಯಾಂಕಷೈರ್ ಆವಿಗೆ, ಸ್ಕಾಚ್ ನೌಕಾ ಆವಿಗೆ, ಉಗಿಬಂಡಿಯ ಆವಿಗೆ-ಇವೆಲ್ಲ ಈ ಬಗೆಯವಕ್ಕೆ ಉದಾಹರಣೆಗಳು. ಸಾಧಾರಣ ಸಂಮರ್ದದಲ್ಲಿ, ಎಂದರೆ ಚ.ಅಂ.ಕ್ಕೆ ಸುಮಾರು 300 ಪೌಂಡಿಗೆ ಮೀರದಂತೆ ಮತ್ತು ಉಗಿ ಉತ್ಪಾದನಾ ಪ್ರಮಾಣ ಗಂಟೆಗೆ ಸುಮಾರು 5 ಟನ್ನಿಗಿಂತ ಹೆಚ್ಚಿಲ್ಲದಿರುವಂಥ ಕಡೆಗಳಲ್ಲಿ (ಉದಾಹರಣೆಗೆ ಕಾರ್ಖಾನೆಗಳಲ್ಲಿ ನೌಕಾ, ಸಾರಿಗೆ, ಉಗಿಬಂಡಿ, ಗಣಿ ಕೆಲಸ ಇಂಥಲ್ಲಿ) ಈ ಬಗೆಯ ಆವಿಗೆಗಳ ಬಳಕೆ ಅನುಕೂಲಕರ. ಸಂಮರ್ದ ಇನ್ನೂ ಹೆಚ್ಚಿದಂತೆ ಉತ್ಪಾದನಾ ಪ್ರಮಾಣವೂ ಏರಿದಂತೆ ಕಡಾಯಿ ಹಾಗೂ ಧೂಮನಾಳಿ ಆವಿಗೆಗಳು ಅತಿ ಭಾರವೂ ವಿಪರೀತ ದೊಡ್ಡವೂ ಆದುವು. ಕಡಾಯಿಯ ಪ್ರಮಾಣವನ್ನು ಒಂದು ಮಿತಿಯಲ್ಲಿಡನೋಸುಗ ಒಳಗಿದ್ದ ಒಲೆಯನ್ನು ಆವಿಗೆಯ ಕಡಾಯಿಯ ಹೊರಗಿಟ್ಟು, ದಹನಜನ್ಯ ಅನಿಲಗಳನ್ನು ಕೊಳವೆಗಳ ಮುಖಾಂತರ ನೀರಿನಲ್ಲಿ ಹಾಯಿಸುವುದನ್ನು ಬಿಟ್ಟು ಕಡಾಯಿಯ ನೀರನ್ನೇ ಅನೇಕ ಕೊಳವೆಗಳಲ್ಲಿ ಹಾಯಿಸಿ ಉರಿಯ ಅನಿಲಗಳು ಇವನ್ನು ಸುತ್ತುವರಿದು ಕಾಯಿಸುವಂತೆ ಮಾಡಲಾಯಿತು. ಅಲ್ಲದೆ ನೀರಿನ ಸಹಜವಾದ ಸುತ್ತುವಿಕೆಯನ್ನು ಉಂಟುಮಾಡಲೋಸ್ಕರ ಕೊಳವೆಗಳನ್ನು ಇಳಿಜಾರಾಗಿ ಇಡಲಾಯಿತು. ಈ ಬದಲಾವಣೆಯಿಂದ ರೂಪುಗೊಂಡವು ಜಲನಾಳಿ ಆವಿಗೆಗಳು. ಇವುಗಳ ವಿಶೇಷ ಸುಭದ್ರತೆ ಹಾಗೂ ಕಡಿಮೆ ತೂಕದ ಕಾರಣ ಮಿತವಾದ ಸ್ಥಳದಲ್ಲಿ ಹೆಚ್ಚಿನ ಶಕ್ತಿ ಉತ್ಪಾದನೆ ಬೇಕಾದಂಥ ಕಡೆಗಳಲೆಲ್ಲ ಇವುಗಳ ಉಪಯೋಗ ಅನಿವಾರ್ಯವಾಗಿದೆ. ಈ ಬಗೆಯ ಆವಿಗೆಗಳು ಬೆಳವಣಿಗೆಯ ಶಿಖರವನ್ನು ಏಕನಾಳಿ ಆವಿಗೆಗಳಲ್ಲಿ ಕಾಣಬಹುದು. ಇಲ್ಲಿ ಆವಿಗೆಯೆಂದರೆ ಅತಿ ಕಿರಿದಾದ ಸ್ಥಳದಲ್ಲಿ ಅತಿ ಹೆಚ್ಚಿನ ಉಷ್ಣಪ್ರವಾಹ ಪ್ರದೇಶವನ್ನು ಹೊಂದಿರುವ, ಉದ್ದವಾದ ಆದರೆ ಸುರುಳಿ ಸುತ್ತಿದ್ದ, ಒಂದೇ ಕೊಳವಿ. ಆವಿ ತಯಾರಾಗುವ ವೇಗವನ್ನು ಸೂಚಿಸುವುದಕ್ಕಾಗಿ ಇವನ್ನು ಮಿಂಚಿನ ಆವಿಗೆಗಳೆಂದು (ಫ್ಲಾಶ್ ಬಾಯ್ಲರ್ಸ್) ಕರೆಯುತ್ತಾರೆ.[೩]
ಬ್ಯಾಬ್ಕಾಕ್ ವಿಲ್ಕಾಕ್ಸ್, ಯಾರೋ ಮತ್ತು ಸ್ಟರ್ಲಿಂಗ್ ಆವಿಗೆಗಳನ್ನು ಜಲನಾಳಿ ಅವಿಗೆಗಳಿಗೆ ಉದಾಹರಣೆಯಾಗಿ ಹೆಸರಿಸಬಹುದು.
ಲ್ಯಾಂಕಷೈರ್ ಆವಿಗೆ
ಬದಲಾಯಿಸಿಒಳಬೆಂಕಿಯ ಕಡಾಯಿ ಮಾದರಿಯ ಉತ್ತಮ ಉದಾಹರಣೆ ಯಾದ ಲ್ಯಾಂಕಷೈರ್ ಆವಿಗೆ ಕಳೆದ ಶತಮಾನದ ಮಧ್ಯಭಾಗದಲ್ಲಿ ಬಳಕೆಗೆ ಬಂದು ಈಗ ಶತಮಾನೋತ್ಸವವನ್ನು ಆಚರಿಸಿ ಜನಪ್ರಿಯವಾದ ಉಗಿ ಉತ್ಪಾದಕ ವೆನಿಸಿಕೊಂಡಿದೆ.
ಇದು ಸುಮಾರು 25"-30" ಉದ್ದ ಮತ್ತು 6 1/2"-9" ವ್ಯಾಸವುಳ್ಳ ಉಕ್ಕಿನ ದೊಡ್ಡ ಪಿಪಾಯಿಯಂತಿದೆ. ಇದನ್ನು ಸೂಕ್ತ ರಚನೆಯ ಇಟ್ಟಿಗೆಯ ಕಟ್ಟಡದ ಮೇಲೆ ಅಳವಡಿಸಿದೆ. 4"-5" ಅಗಲವಿರುವ ಮಂದವಾದ ಉಕ್ಕಿನ ತಗಡುಗಳನ್ನು ದುಂಡಗೆ ಬಾಗಿಸಿ ಉಂಗುರದಂತೆ ಬೆಸೆದು ಅಥವಾ ಕೀಲಿಗಳಿಂದ (ರಿವೆಟ್) ಬಿಗಿದು ಇಂಥ ಐದಾರು ಉಂಗುರಗಳನ್ನು ಸಾಲಾಗಿ ಒಂದು ಒಳಗೆ ಮತ್ತೊಂದು ಹೊರಗೆ ಬರುವಂತೆ ಅದೇ ರೀತಿ ಕೂಡಿಸಿ ಎರಡು ತುದಿಗಳ ಬಾಯಿಗೂ ದುಂಡನೆಯ ಫಲಕಗಳನ್ನು ಬೆಸೆದು ಅಥವಾ ಕೀಲಿಗಳಿಂದ ಬಿಗಿದು ಮುಚ್ಚಿ ಈ ಪಿಪಾಯಿಯನ್ನು ಮಾಡಿದೆ. ಎರಡೂ ತುದಿಯ ಈ ದುಂಡು ಬಿಲ್ಲೆಗಳ ಕೆಳಪಾಶರ್ವ್‌ದಲ್ಲಿ ಸುಮಾರು 2 1/2'-3 1/2' ವ್ಯಾಸದ ಎರಡು ರಂಧ್ರಗಳನ್ನು ಕೊರೆದಿದೆ. ಪಿಪಾಯಿಯ ಮುಂತುದಿಯಿಂದ ಹಿಂತುದಿಯವರೆಗೂ ಎರಡು ಕುಲುಮೆಯ ಕೊಳವೆಗಳು ಹಾಯುತ್ತವೆ. ಇವನ್ನು ಸಹ ಹೊರಗಿನ ಪಿಪಾಯಿಯಂತೆಯೇ ಹಲವಾರು ಉಂಗುರಗಳಿಂದಲೇ ಮಾಡಲಾಗಿದೆ. ಆದರೆ ಒಂದಕ್ಕೊಂದು ಸೇರಿಸುವಾಗ ಅವುಗಳ ಅಂಚುಗಳನ್ನು ಹೊರಗೆತ್ತಿ ನಡುವೆ ಒಂದು ಬಳೆ ಇಟ್ಟು ಅಲ್ಲಿ ಕೀಲಿಗಳಿಂದ ಬಿಗಿದಿರುತ್ತಾರೆ. ಕೊಳವೆಗಳೊಳಗಿನ ಉರಿಯ ಅತಿ ಉಷ್ಣದಿಂದ ಕೀಲಿಗಳು ದುರ್ಬಲಗೊಳ್ಳದಿರಲೆಂದೇ ಈ ಏರ್ಪಾಡು. ಕೊಳವೆಯ ಉಂಗುರಗಳು ಮುಂತುದಿಯಿಂದ ಹಿಂತುದಿಗೆ ಕ್ರಮೇಣ ಸಣ್ಣದಾಗುತ್ತ ಹೋಗಿವೆ. ಅವನ್ನು ಪಿಪಾಯಿಯ ಎರಡೂ ಕಡೆಯ ದುಂಡು ಬಿಲ್ಲಿಗಳ ರಂಧ್ರಗಳ ಅಂಚಿಗೆ (ಮುಂದೆ ಹೊರ ಮುಗ್ಗುಲಿಗೂ ಹಿಂದೆ ಒಳ ಮಗ್ಗುಲಿಗೂ) ಸೂಕ್ತವಾಗಿ ಕೀಲಿಸಲಾಗಿದೆ. ಈಚಿನ ಮಾದರಿಗಳಲ್ಲಿ ಈ ಒಳ ಕೊಳವೆಗಳನ್ನು ಮಾಡಲು ಉಪಯೋಗಿಸುವ ಫಲಕದ ಉಂಗುರಗಳ ಸಂಖ್ಯೆಯನ್ನು ಕಡಿಮೆ ಮಾಡಿ ಭದ್ರತೆಗೆ ಲೋಪಬಾರದಿರಲು ನಿರಿಗೆಯ ಉಂಗುರಗಳನ್ನು ಉಪಯೋಗಿಸುತ್ತಾರೆ. ಹಾಗೆಯೇ ಹಿಂದಿನ ಮಾದರಿಗಳಲ್ಲಿ ಪಿಪಾಯಿಯ ತುದಿಗಳಾದ ದುಂಡು ಬಿಲ್ಲೆಗಳು ಚಪ್ಪಟೆಯಾಗಿದ್ದು ಒಳಗಿನ ಸಂಮರ್ದವನ್ನು ತಡೆದುಕೊಳ್ಳಲಾಗುವಂತೆ ಅವನ್ನು ಸುತ್ತಲೂ ತ್ರಿಕೋನ ಪಟ್ಟಿಗಳಿಂದ ಸುತ್ತು ಫಲಕಕ್ಕೆ ಬಿಗಿದು ಭದ್ರಪಡಿಸಿ ಎರಡೂ ತುದಿ ಬಿಲ್ಲೆಗಳನ್ನು ಸಲಾಕೆಗಳಿಂದ ಒಂದಕ್ಕೊಂದು ಬಿಗಿದಿರುತ್ತಿದ್ದರು. ಈಚಿನ ಮಾದರಿಗಳಲ್ಲಿ ತುದಿಬಿಲ್ಲಗಳಿಗೆ ಚಪ್ಪಟೆ ಫಲಕಗಳ ಬದಲು ಉಬ್ಬಿದವನ್ನು ಉಪಯೋಗಿಸಿ ಈ ಬಿಗಿಪಟ್ಟಿಗಳ ಅವಶ್ಯಕತೆ ಇಲ್ಲದಂತೆ ಮಾಡಿರುತ್ತಾರೆ.
ಲ್ಯಾಂಕಷೈರ್ ಆವಿಗೆ ಬಲು ಜನಪ್ರಿಯವಾಗಿದೆ. ಇದರ ಕಾರಣಗಳು ಸ್ಥೂಲವಾಗಿ-1. ರಚನೆಯಲ್ಲಿ ಸರಳತೆ; ತಪ್ಪು ಮಾಡಲು ಅಷ್ಟು ಇಲ್ಲದಿರುವುದು. 2. ನಿರ್ವಹಣೆಯಲ್ಲಿನ ಸುಲಭತೆ; ಒರಟುತನವನ್ನು ಅದು ತಡೆದುಕೊಳ್ಳುಬಲ್ಲುದು. 3. ನಿಗದಿ ಮಾಡಿದ ಸಾಮರ್ಥ್ಯಕ್ಕೆ ಹೋಲಿಸಿದರೆ ಅದರ ಗಾತ್ರ ಹೆಚ್ಚಿದ್ದು ಪರಮಾವಧಿ ಹೊರೆ ಬಂದ ಸಮಯದಲ್ಲಿ ಸಂಮರ್ದದಲ್ಲಿ ಹೆಚ್ಚಿನ ಇಳಿತವಿಲ್ಲದೆ ಆವಿಯೊದಗಿಸುವ ಅದರ ಸಾಧ್ಯತೆ. ಆದರೆ ಈ ಆವಿಗೆ ಒಳಗೊಂಡಿರುವ ನೀರಿನ ಹೆಚ್ಚಿನ ಪ್ರಮಾಣದಿಂದ, ಒಲೆಗಳ ವಿಸ್ತಾರಕ್ಕಿರುವ ಮಿತಿಯಿಂದ ಮತ್ತು ಸುತ್ತುವಿಕೆಯ ನಿಧಾನದಿಂದ ಉಗಿಉತ್ಪಾದನವೇಗ ನಿಧಾನವಾಗುತ್ತದೆ. ಒಂದು ನಿರ್ದಿಷ್ಟ ಸಾಮರ್ಥ್ಯಕ್ಕೆ ಆವಿಗೆ ಆಕ್ರಮಿಸುವ ನೆಲ ವಿಸ್ತಾರವೂ ಹೆಚ್ಚು, ಅಲ್ಲದೆ ಇದರ ಇಟ್ಟಿಗೆ ಆವರಣದ ರಚನೆ ದುಬಾರಿಯಾಗಿದ್ದು ಅದನ್ನು ಸರಿಯಾದ ದುರಸ್ತಿಯಲ್ಲಿಟ್ಟಿರುವುದು ಕಷ್ಟಸಾಧ್ಯವೇ. ಸಾಗಣಿಗೆ ಇದರ ವಿಶೇಷಗಾತ್ರ ತೊಂದರೆಯೇ ಸರಿ. ಇಷ್ಟಾದರೂ ಎಂಥೆಂಥ ಅಗಮ್ಯ ಪ್ರದೇಶಗಳಲ್ಲೂ ಲ್ಯಾಂಕಷೈರ್ ಆವಿಗೆಗಳನ್ನು ಕಾಣಬಹುದು.
ಕಾರ್ನಿಶ್ ಆವಿಗೆ
ಬದಲಾಯಿಸಿಇದು ಲ್ಯಾಂಕಷೈರ್ ಆವಿಗೆಯದೇ ಚಿಕ್ಕದಾದ ಸ್ವರೂಪ. ಒಂದು ವ್ಯತ್ಯಾಸವೆಂದರೆ ಎರಡು ಕುಲುಮೆ ಕೊಳವೆಗಳಿಗೆ ಬದಲಾಗಿ ನಡು ಮಧ್ಯದಲ್ಲಿ ಅಂಥ ಒಂದೇ ಕೊಳವೆಯಿರುವುದು. ಕೆಲವೊಮ್ಮೆ ನಡುನೇರದಲ್ಲಿಡುವ ಬದಲು ಒಂದೆರಡು ಅಂಗುಲಗಳಷ್ಟು ಪಕ್ಕಕ್ಕೆ ಜರುಗಿಸಿ ಒಳಗೆ ಚೊಕ್ಕಟ ಮಾಡುವುದಕ್ಕೆ ಸೌಲಭ್ಯ ಕಲ್ಪಿಸುತ್ತಾರೆ. ನೀರಿನ ಸುತ್ತುವಿಕೆಗೂ ಇದರಿಂದ ಪ್ರಚೋದನೆಯುಂಟಾಗುತ್ತದೆಂದೂ ಹೇಳುವುದುಂಟು. ಆವರಣದ ಒಳರಚನೆಯಲ್ಲೂ ಒಂದು ವ್ಯತ್ಯಾಸವನ್ನು ಗಮನಿಸಬಹುದು. ಕುಲುಮೆ ಕೊಳವೆಯಿಂದ ಹೊರಬಿದ್ದ ಅನಿಲಗಳು ಮೊದಲು ಪಿಪಾಯಿಯ ಎರಡೂ ಪಕ್ಕಗಳಲ್ಲಿ ಮುಂತುದಿಗೆ ಪ್ರವಹಿಸಿ ಅಲ್ಲಿ ಒಟ್ಟು ಸೇರಿ ಕೆಳಗಿನ ಮಾರ್ಗದಲ್ಲಿ ಹಿಂತಿರುಗುವುವು. ಈ ರೀತಿಯ ರಚನೆಯನ್ನೇ ಲ್ಯಾಂಕಷೈರ್ ಆವಿಗೆಗಳಿಗೆ ಉಪಯೋಗಿಸುವ ಪರಿಪಾಠ ಜರ್ಮನಿಯಲ್ಲಿದೆ.
ಮಟ್ಟಸನಾಳ ಪ್ರತಿವಾಹಿ ಆವಿಗೆ (ಹಾರಿeóÁಂಟಲ್ ರಿಟರ್ನ್ ಟ್ಯೂಬ್ ಬಾಯ್ಲರ್: ಸರಳ ರಚನೆ, ಪ್ರಥಮತಃ ಸುಲಭವಾದ ಬೆಲೆ, ಹೆಚ್ಚಿನ ಬಾಷ್ಪೀಕರಣ ಸಾಮರ್ಥ್ಯ ಮತ್ತು ಅಡಕವಾಗಿರುವಿಕೆ ಈ ಕಾರಣಗಳಿಂದ ಸಣ್ಣ ಶಕ್ತ್ಯಾಗಾರಗಳಲ್ಲಿ ಸಾಮಾನ್ಯವಾಗಿ ಇದು ಬಳಕೆಯಲ್ಲಿದೆ. ಕುಲುಮೆ ಕಡಾಯಿಯ ಹೊರಗಿರುವುದರಿಂದ ಯಾವ ಬಗೆಯ ಕಿಚ್ಚಿನ ಸಜ್ಜನ್ನಾದರೂ ಇಲ್ಲಿ ಸರಿಹೊಂದಿಸಿಕೊಳ್ಳಬಹುದು. ಉಕ್ಕಿನ ತಗಡುಗಳಿಂದ ಮಾಡಿದ ಉದ್ದವಾದ ಪಿಪಾಯಿ ಇದೆ. ಅದರ ಚಪ್ಪಟೆಯಾದ ದುಂಡು ಫಲಕಗಳಲ್ಲಿ ರಂಧ್ರಗಳನ್ನು ಮಾಡಿ ಅವುಗಳ ಮೂಲಕ ಸಣ್ಣ ನಾಳಗಳನ್ನು ಹಾಯಿಸಿದೆ. ತುದಿ ಫಲಕಗಳನ್ನು ಬಿಗಿಪಡಿಸುವ ಕೆಲಸವೂ ನಾಳಗಳದ್ದೇ ಆಗಿದ್ದು ಅವಿಲ್ಲದ ಮೇಲ್ಬಾಗದಲ್ಲಿ ಮಾತ್ರ ಆವಿಯ ಒತ್ತಡವನ್ನು ತಡೆದುಕೊಳ್ಳಲಾಗುವಂತೆ ಬಿಗಿಪಟ್ಟಿಗಳನ್ನು ಸೇರಿಸಬಹುದು. ಇಡೀ ಪೀಪಾಯಿಯನ್ನು ಮೇಲೆ ಎತ್ತರದಲ್ಲಿರುವ ತೊಲೆಗಳಿಂದ ಸರಳುಗಳ ಮೂಲಕ ಇಳಿಬಿಟ್ಟು ಕೆಳಭಾಗದಲ್ಲಿ ಅದರ ಸುತ್ತಲೂ ಇಟ್ಟಿಗೆಯ ಕಟ್ಟಡವನ್ನು ರಚಿಸಿರುತ್ತಾರೆ. ಪಿಪಾಯಿಗಳೊಳಗೆ ನೀರು ಅತಿ ಎತ್ತರದಲ್ಲಿರುವ ನಾಳಕ್ಕಿಂತ 3ಹಿ-4" ಮೇಲ್ಮಟ್ಟದಲ್ಲಿರುತ್ತದೆ.
ಸ್ವಯಂಚಲನ ಆವಿಗೆ(ಲೋಕೊಮೋಟಿವ್ ಬಾಯ್ಲರ್)
ಬದಲಾಯಿಸಿಇದು ನೇರ ಧೂಮನಾಳಿ ಮಾದರಿಯ ಒಳಗೆ ಉರಿ ಪೆಟ್ಟಿಗೆಯುಳ್ಳ ಆವಿಗೆ, ಹೆಚ್ಚಿನ ಉಷ್ಣಪ್ರವಾಹ ಕ್ಷೇತ್ರವೂ ಕಲ್ಲಿದ್ದಲನ್ನು ಅತ್ಯಂತ ರಭಸದಿಂದ ಉರಿಸಬಲ್ಲ ಕುಲುಮೆಯೂ ಇಲ್ಲಿ ಆವಶ್ಯಕ ಅಂಶಗಳು. ಅನೇಕ ನಾಳಿಗಳನ್ನು ಕ್ರಮರಹಿತ ರೀತಿಯಲ್ಲೋ ಎಂಬಂತೆ ಇದರಲ್ಲಿ ಜೋಡಿಸಿದೆ. 130 ವರ್ಷಗಳಿಗಿಂತಲೂ ಹಳೆಯದಾದ ಸ್ಟೀಫನ್ ಸನ್ನನ ಕಲ್ಪನೆಯಾದ ಈ ಆವಿಗೆ ಒಂದು ದಕ್ಷ ಸಾಧನೆ.
ಸಾಮಾನ್ಯ ಮಾದರಿಯೊಂದರ ರೂಪ ವಿವರ ಹೀಗಿದೆ: ಉಕ್ಕಿನ ತಗಡುಗಳಿಂದ ರಚಿತವಾದ ಕೊಳವೆಗಳನ್ನು ಜೋಡಿಸಿ ಮಾಡಿದ ಸುಮಾರು 5' ವ್ಯಾಸದ ದೊಡ್ಡ ಪಿಪಾಯಿ, ಇದರೊಳಗೆ ಮುಂಭಾಗದಲ್ಲಿ ಹೊಗೆ ಪೆಟ್ಟಿಗೆಯನ್ನೂ ಹಿಂಭಾಗದಲ್ಲಿ ಉರಿ ಪೆಟ್ಟಿಗೆಯನ್ನೂ ಬೇರ್ಪಡಿಸುವಂತೆ ಎರಡು ನಾಳ ಫಲಕಗಳು, ಇವುಗಳಲ್ಲಿ ನೂರಾರು ನಾಳ ರಂಧ್ರಗಳು, ಈ ರಂಧ್ರಗಳ ಮುಖಾಂತರ ತೂರಿಸಿ ಎರಡೂ ಅಂಚುಗಳಲ್ಲಿ ಫಲಕದೊಡನೆ ಬಿಗಿದ ಅಷ್ಟೇ ಸಂಖ್ಯೆಯ ಮತ್ತು 1 1/4"-3 1/2" ವ್ಯಾಸದ 12'-19' ಉದ್ದದ ಸಣ್ಣ ಕೊಳವೆಗಳು. ಇವು ಸಂಖ್ಯೆಯಲ್ಲಿ 120-500ರ ವರೆಗೂ ಇರಬಹುದು. ಉರಿ ಪೆಟ್ಟಿಗೆಗಳನ್ನು ಒಳಗೊಂಡಿರುವ ಆವಿಗೆಯ ಹಿಂಭಾಗವನ್ನು ಒಂದು ಸುತ್ತುಫಲಕ. ತುದಿಫಲಕ ಹಾಗೂ ಕಂಠಫಲಕಗಳಿಂದ ಮಾಡಿದೆ. ಇದನ್ನು ಆವಿಗೆಯ ಉಳಿದ ಪಿಪಾಯಿ ಭಾಗಕ್ಕೆ ಬೆಸೆಯಲಾಗಿದೆ. ಉರಿಪೆಟ್ಟಿಗೆಯನ್ನು ಮೊದಲು ಸಾಮಾನ್ಯವಾಗಿ ತಾಮ್ರದಿಂದ ರಚಿಸುತ್ತಿದ್ದರು. ಈಗ ಉಕ್ಕಿನಿಂದ ಪ್ರತ್ಯೇಕವಾಗಿ ತಯಾರಿಸಲಾಗುತ್ತಿದೆ. ಇದು ಆಯಾಕಾರದ ಅಷ್ಟು ಎತ್ತರವಲ್ಲದ ಒಂದು ಪೆಟ್ಟಿಗೆ, ಇದರ ನೆತ್ತಿ, ಸುತ್ತು ಹಾಗೂ ಫಲಕಗಳನ್ನು ಸುತ್ತುವರಿದಿರುವ ಆವಿಗೆಯ ಫಲಕಗಳೊಡನೆ ಅನೇಕ ಆಧಾರಬಂಧನಗಳಿಂದ ಬಿಗಿಪಡಿಸಿರುತ್ತಾರೆ. ಒಳಗಿನ ಫಲಕಗಳಿಗೂ ಹೊರಗಿನದಕ್ಕೂ ನಡುವಿನ ಜಾಗ ನೀರಿನಿಂದ ತುಂಬಿದೆ. ಕೆಳಭಾಗದಲ್ಲಿ ಕೆಸರು ಬಳೆ ಅಥವಾ ಪಾಯದ ಬಳೆಯೆಂದು ಕರೆಯುವ ಉಕ್ಕಿನ ಬಳೆಯೊಂದು ಮುಚ್ಚಿದೆ. ಇದರ ಮೇಲೆ ಒಂದು ರಂಧ್ರವನ್ನೂ ನೆತ್ತಿ ಫಲಕದ ಸಮಕ್ಕೆ ಇನ್ನೊಂದು ರಂಧ್ರವನ್ನೂ ಹೊರಗಿನ ಫಲಕಗಳಲ್ಲಿ ಮಾಡಿ ಮುಚ್ಚಿರುತ್ತಾರೆ. ಒಳಗೆ ಚೊಕ್ಕಟಗೊಳಿಸಬೇಕಾದಾಗ ಇವುಗಳ ಉಪಯೋಗವಿದೆ. ಉರಿ ಪೆಟ್ಟಿಗೆಯ ಮುಂಭಾಗದ ಹಿಂದಿನ ಫಲಕ ಹಾಗೂ ಆವಿಗೆಯ ತುದಿ ಫಲಕಗಳೆರಡರಲ್ಲೂ ಸೇರಿಸಿದಂತೆ ಮಾಡಿರುವ ದುಂಡು ರಂಧ್ರವೇ ಕುಲುಮೆಯ ಬಾಗಿಲು. ಉರಿ ಪೆಟ್ಟಿಗೆಯ ಒಳಗೆ ಕಬ್ಬಿಣದ ಪಟ್ಟಿಗಳಿಂದ ಮಾಡಿದ ಕುಲುಮೆಯೂ ಅದಕ್ಕೆ ಸ್ವಲ್ಪ ಮೇಲೆ ಕಾವಿಟ್ಟಿಗೆಯೂ ಕಮಾನೂ ಕುಲುಮೆಯ ಕೆಳಗೆ ಬೇಕಾದಾಗ ತೆಗೆಯಲಾಗುವಂತೆ ಕೀಲು ಬಾಗಿಲುಗಳಿರುವ ಬೂದಿ ಸಂಗ್ರಾಹಿಯೂ ಇವೆ.
ಸ್ಕಾಚ್ ನೌಕಾ ಆವಿಗೆ (ಸ್ಕಾಚ್ ಮರೀನ್ ಬಾಯ್ಲರ್)
ಬದಲಾಯಿಸಿಇದು ವ್ಯಾಪಾರೀ ನೌಕೆಗಳಲ್ಲಿ ಸಾಧಾರಣವಾಗಿ ಯಾವಾಗಲೂ ಬಳಕೆಯಲ್ಲಿರುವ ಆವಿಗೆ. ಆಕ್ರಮಿಸಿಕೊಳ್ಳುವ ಜಾಗಕ್ಕೆ ಹೋಲಿಸಿದಾಗ ಉಷ್ಣಪ್ರವಾಹ, ವಿಸ್ತಾರ ಹೆಚ್ಚಾಗಿರುವುದೂ ಯಾವ ಬಗೆಯ ಇಟ್ಟಿಗೆಯ ಆವರಣವೂ ಬೇಕಿಲ್ಲದೆ ಸ್ವಯಂಪೂರ್ಣವಾಗಿರುವುದೂ ಇದರ ಗುಣವಿಶೇಷಗಳು.
ಲಂಬಸನಾಳಿ ಆವಿಗೆಗಳು (ವರ್ಟಿಕಲ್ ಟ್ಯೂಬ್ಯುಲರ್ ಬಾಯ್ಲರ್ಸ್): ಈ ಬಗೆಯ ಆವಿಗೆಗಳು ತಮ್ಮ ಅಶ್ವಸಾಮರ್ಥ್ಯದ ಪ್ರಮಾಣಕ್ಕೆ ವ್ಯಾಪಿಸುವ ಜಾಗ ಬಲುಕಡಿಮೆ. ಕೇವಲ 3ಅಶ್ವ ಸಾಮರ್ಥ್ಯದ ಹೊರಗೆಲಸಕ್ಕೆ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಅನುಕೂಲವಾದ ಸಣ್ಣ ಮಾದರಿಗಳಿರುವಂತೆಯೇ 500ಅಶ್ವ ಸಾಮರ್ಥ್ಯವುಳ್ಳವು ಇರುತ್ತದೆ. ಅಧಿಕೋಷ್ಣದ ಉಗಿಯನ್ನು ಪಡೆಯುವ ಸೌಕರ್ಯವಿದ್ದರೂ ಸಾಮಾನ್ಯವಾಗಿ ಇವು ಅಲ್ಪ ದಕ್ಷತೆಯವು. ಮ್ಯಾನಿಂಗ್ ಮಾದರಿಯ ಇಂಥ ಒಂದು ಆವಿಗೆಯ ಚಿತ್ರ ಇಲ್ಲಿ ಕೊಟ್ಟಿದೆ. ಮೂರು ವರಸೆಯ ಲಂಬವಾದ ಪಿಪಾಯಿಯಲ್ಲಿ ಕೆಳಗಿನದರ ಒಳಗೆ ಉರಿಪೆಟ್ಟಿಗೆ ಅಡಕವಾಗಿದೆ. ಮೇಲಿನ ವರಸೆಗೆ ಒಂದು ಹೊಗೆಪೆಟ್ಟಿಗೆಯನ್ನು ಸೇರಿಸಿ ಅಲ್ಲಿಂದ ಹೊಗೆ ಕೊಳವೆಗೆ ಮಾರ್ಗವನ್ನು ರಚಿಸಿದೆ. ಉರಿಪೆಟ್ಟಿಗೆಯ ಸುತ್ತಿನ ದುಂಡು ಫಲಕವನ್ನು ಅದರ ಹೊರಗಿನ ಪಿಪಾಯಿಗಳ ಫಲಕಕ್ಕೆ ಆಧಾರ ಬಂಧನಗಳಿಂದ ಬಿಗಿದಿರುತ್ತದೆ. ಇಲ್ಲಿ ಮೇಲಿನವ ಕ್ಕಿಂತ ಕೆಳಗಿನ ವರಸೆ ಕೊಂಚ ದೊಡ್ಡದಾಗಿದ್ದರೂ ಸರಳತೆಗಾಗಿ ಸಮವ್ಯಾಸದ ಪಿಪಾಯಿಯನ್ನೂ ಉಪಯೋಗಿಸುವುದುಂಟು. ಉರಿ ಪೆಟ್ಟಿಗೆಯ ಸುತ್ತ ಇರುವ ನೀರುಚಾಚಿನ ಕೆಳಭಾಗವನ್ನು ಪಾಯದ ಬಳೆಯೊಂದು ಮುಚ್ಚಿರುತ್ತದೆ. ಇದರ ಮೇಲೆ ಮುಚ್ಚಿರುವ ಒಂದು ಕೆಸರು-ಗಂಡಿ ಇದೆ. ಹೊಗೆ ಪೆಟ್ಟಿಗೆಯ ತಳ ಫಲಕಕ್ಕೂ ಉರಿಪೆಟ್ಟಿಗೆಯ ನತ್ತಿ ಫಲಕಕ್ಕೂ ನಡುವೆ ಹಲವಾರು ಧೂಮನಾಳಗಳಿದ್ದು ಇವೇ ಅವೆರಡನ್ನೂ ಬಿಗಿದಿರುತ್ತವೆ. ಉರಿ ಪೆಟ್ಟಿಗೆಯೊಳಗಣ ಕುಲುಮೆಯಿಂದ ಹೊರಟ ಅನಿಲಗಳು ಈ ಕೊಳವೆಗಳ ಮುಖಾಂತರ ಹಾದು ಹೊಗೆ ಪೆಟ್ಟಿಗೆಯನ್ನು ತಲುಪುತ್ತದೆ. ಪಿಪಾಯಿಯ ಮುಕ್ಕಾಲು ಮಟ್ಟದವರೆಗೂ ನೀರಿದ್ದು, ನಾಳಗಳ ಅಲ್ಲಿಯವರೆಗಿನ ಮೇಲ್ಮೈ ವಿಸ್ತಾರ ಆವಿ-ಉತ್ಪಾದಕವಾಗಿಯೂ ಅದರಿಂದ ಮೇಲಿನದು ಅಧಿಕೋಷ್ಣಕವಾಗಿಯೂ ಕಾರ್ಯ ನಿರ್ವಹಿಸುತ್ತವೆ. ವಾಡಿಕೆಯ ಆವರಣವೇನೂ ಈ ಬಗೆಯ ಆವಿಗೆಗಳಿಗೆ ಬೇಕಿಲ್ಲ: ಸಿಮೆಂಟ್ ಕಾಂಕ್ರೀಟ್ ಪಾಯದ ಮೇಲೆ ಎರಕದ ಕಬ್ಬಿಣದ ಪೀಠವೊಂದನ್ನಿಟ್ಟು ಅದರ ಮೇಲೆ ಇದನ್ನು ನಿಲ್ಲಿಸಿರುತ್ತಾರೆ. ಆ ಪೀಠವೇ ಕುಲುಮೆಗೆ ಆಧಾರವನ್ನೂ ಕೆಳಗೆ ಬೂದಿ ಗುಂಡಿಯನ್ನೂ ಒದಗಿಸುತ್ತದೆ.
ಲಂಬಸನಾಳಿ ಆವಿಗೆಗಳಲ್ಲಿ ಕಾಕ್ರೇನ್ ಆವಿಗೆ ಎಂಬುದೂ ಹೆಚ್ಚು ಬಳಕೆಯಲ್ಲಿದೆ. ಇದರಲ್ಲಿ ಧೂಮನಾಳ ಗಳು ಲಂಬವಾಗಿರದೆ ಮಟ್ಟವಾಗಿದ್ದು, ದಹನಕೋಶಕ್ಕೂ ಹೊಗೆಪೆಟ್ಟಿಗೆಗೂ ಸಂಪರ್ಕವೇರ್ಪಡಿಸಿವೆ. ಈ ವಿವರದಲ್ಲಿ ಸ್ಕಾಚ್ ನೌಕಾ ಆವಿಗೆಯ ರಚನೆಯನ್ನು ಇದು ಹೋಲುತ್ತದೆ.
ಏಕ ಕೊಪ್ಪರಿಗೆಯ ನೇರನಾಳದ ಆವಿಗೆಗಳು (ಸಿಂಗಲ್ ಡ್ರಂ ಸ್ಟ್ರೇಟ್ ಟ್ಯೂಬ್ ಬಾಯ್ಲರ್ಸ್)
ಬದಲಾಯಿಸಿಇದುವರೆಗೆ ಆವಿಗೆಗಳು ಬೆಳೆದುಬಂದ ಬಗೆ ಹೀಗಿದೆ. ಉಗಿಸಂಮರ್ದ, ಉಷ್ಣತೆ ಏರಿ ಯಾಂತ್ರಿಕ ಬಲೋತ್ಪಾದನೆ ವೃದ್ಧಿಯಾಯಿತು: ಇದರೊಂದಿಗೆ ಕಡಾಯಿ, ನಳಿಗೆ ಮುಂತಾದುವು ಸರಿಯಾಗಿ ಬೆಳೆಯದೆ ತಪ್ಪುಗಾಲಿಕ್ಕಿ ದಾಗ ಅಪಾಯ, ಅಸಾಮರ್ಥ್ಯ ತಲೆದೋರಿದುವು. ಈ ನ್ಯೂನತೆಗಳನ್ನು ಮನಗಂಡ ವಿಲ್ಕಾಕ್ಸ್ ಎಂಬಾತ 1850ರಲ್ಲಿ ಬಳಕೆಗೆ ತಂದು ಮುಂದೆ ಬ್ಯಾಬ್ಕಾಕ್ ಎಂಬಾತನೊಡನೆ ಸಹ ಕರಿಸಿ ನೂತನ ಪರಿಷ್ಕೃತ ಸಾಧನವೇ ಏಕಕೊಪ್ಪರಿಗೆಯ ನೇರನಾಳದ ಆವಿಗೆ.
ಬಹುಕೊಪ್ಪರೆಗೆಯ ಬಾಗು ನಾಳದ ಆವಿಗೆಗಳು (ಮಲ್ಟಿಪಲ್ ಡ್ರಮ್ ಬೆಂಟ್ ಟ್ಯೂಬ್ ಬಾಯ್ಲರ್ಸ್)
ಬದಲಾಯಿಸಿನೇರನಾಳದ ಆವಿಗೆಗಳನ್ನು ಸುಲಭ ವಾಗಿ ಪರೀಕ್ಷಿಸುವ ಮತ್ತು ಚೊಕ್ಕಟ ಗೊಳಿಸುವ ಸೌಲಭ್ಯವೇನೋ ಇದೆ. ಆದರೆ ಇದೇ ಕಾರಣದಿಂದ ಆವಿಗಳಲ್ಲಿ ಒಂದು ಕೊರತೆ ತಲೆದೋರಿದೆ-ನಾಳಗಳ ತುದಿಗಳಲ್ಲಿ ತಲೆಪೆಟ್ಟಿಗೆಗಳನ್ನು ಅಳವಡಿಸಬೇಕು. ಬಾಗಿರುವ ನಾಳಗಳನ್ನು ಉಪಯೋಗಿಸುವುದರಿಂದ ನೇರನಾಳದ ಆವಿಗೆಯ ಅನುಕೂಲತೆಗಳು ಮೊಟಕಾಗುವುವಾದರೂ ತಲೆಪೆಟ್ಟಿಗೆಗಳ ಅಗತ್ಯವಿರುವುದಿಲ್ಲ: ಕೊಳವೆಗಳನ್ನು ಕೊಪ್ಪರಿಗೆಗಳಿಗೆ ಸೇರಿಸುವಲ್ಲಿ ಸಿಕ್ಕುವ ಹೆಚ್ಚಿನ ಸ್ವಾತಂತ್ರ್ಯ, ಕೊಳವೆಗಳ ಗಾತ್ರವನ್ನು ಕಡಿಮೆ ಮಾಡಿ ಸಂಖ್ಯೆಯನ್ನು ಹೆಚ್ಚಿಸಬಹುದಾದ ಸಾಧ್ಯತೆ ಇದೆ; ಅಲ್ಲದೆ ಹೆಚ್ಚು ಪ್ರಯೋಜನಕರವಾಗಿ ಉಷ್ಣಪ್ರವಾಹ ವಿಸ್ತಾರವನ್ನು ಬಳಸಲು ನಾಳ ಸಮೂಹದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬಹುದು. ಅತ್ಯಧಿಕ ಸಂಮರ್ದ ಹಾಗೂ ಉತ್ಪಾದನೆಯ ಆಧುನಿಕ ಆವಿಗೆಗಳೆ¯್ಲ ಈ ದಿಕ್ಕಿನಲ್ಲೇ ಮುಂದುವರಿಯುತ್ತಿರುವುದನ್ನು ನಾವು ಕಾಣಬಹುದು. ಅನುಭವ ಹೆಚ್ಚಿದಂತೆಲ್ಲ ಕಟ್ಟುಪಾಡುಗಳಿಂದ ಬಂಧಿತವಾಗದೆ ಪ್ರಯೋಜನ ದೃಷ್ಟಿಯೊಂದ ರಿಂದಲೇ ರೂಪಗೊಂಡ ನಾಳ ಸಮೂಹದ ವ್ಯವಸ್ಥೆಗಳಿಂದ ವಿವಿಧ ಮಾದರಿಗಳು ಹೊರಬರುತ್ತಿವೆ. ಕಾವಿಟ್ಟಿಗೆಯ ಆವರಣದೊಳಗೆಲ್ಲ ಹಲವು ಹೆಸರುಗಳಿಂದ ವಿನ್ಯಾಸಗೊಂಡ ಕೊಳವೆಗಳ ಪಾತ್ರವೇ ಹಿರಿದಾದದ್ದು ಕೊಪ್ಪರಿಗೆಗಳ ಸಂಖ್ಯೆ ಜಾಸ್ತಿಯಾಗಿರಬಹುದಾದರೂ ಅವುಗಳ ಗಾತ್ರ ಕಡಿಮೆಯಾಗುತ್ತಿರುವುದನ್ನು ಕಾಣಬಹುದು.
1888ರಲ್ಲಿ ಬಳಕೆಗೆ ಬಂದ ಸ್ಟರ್ಲಿಂಗ್ ಆವಿಗೆ ಬಾಗುನಾಳದ ಆವಿಗೆಗಳಲ್ಲಿ ಮೊಟ್ಟಮೊದಲನೆಯದೂ ಪ್ರತಿನಿಧಿಕವೂ ಆಗಿದೆ. ಅದರ ಈಚಿನ ಒಂದು ಮಾದರಿತ ಸ್ಥೂಲ ವಿವರಗಳು ಹೀಗಿವೆ: ಒಟ್ಟು 3, 4 ಅಥವಾ 5 ಕೊಪ್ಪರಿಗೆಗಳುಳ್ಳಂತೆ ಮೂರುದರ್ಜೆಯ ಆವಿಗೆಗಳು ಇದರಲ್ಲಿವೆ. ಈ ಆವಿಗೆಯಲ್ಲಿ ಮೂರು ಆವಿ ಕೊಪ್ಪರಿಗೆಗಳೂ ಎರಡು ಕೆಸರು ಕೊಪ್ಪರಿಗೆಗಳೂ ಇವೆ. ಇಟ್ಟಿಗೆಯ ಆವರಣದಿಂದ ಪ್ರತ್ಯೇಕವಾದಂತೆ ಉಕ್ಕಿನ ಕಂಬಗಳ ಮೇಲೆ ನಿಂತ ತೊಲೆಗಳಿಂದ ಆವಿ ಕೊಪ್ಪರಿಗೆಗಳು ಆಸರೆ ಪಡೆದಿರುತ್ತವೆ. ಕೆಸರು ಕೊಪ್ಪರಿಗೆ ಗಳನ್ನು ಆವಿಕೊಪ್ಪರಿಗೆಗಳಿಂದ ನಾಲ್ಕು ನಾಳ ಸಮೂಹಗಳ ನೆರವಿನಿಂದ ತೂಗುಬಿಟ್ಟಿದೆ. ಇವುಗಳಿಗೆ ಆವರಣದ ಗೋಡೆಗಳ ಸಂಪರ್ಕವಿಲ್ಲದಿರುವುದರಿಂದ ಉಷ್ಣದ ಹಿಗ್ಗು ಕುಗ್ಗುಗಳಿಗೆ ತಾವೇ ಸರಿಹೊಂದಿಸಕೊಳ್ಳಬಲ್ಲವು. ಆವರಣದೊಳಗೆ ರಚಿತವಾದ ಕಾವಿಟ್ಟಿಗೆಯ ತಡೆ ಗೋಡೆಗಳು ಕುಲುವೆಯ ಅನಿಲಗಳು ನಾಳಸಮೂಹಗಳ ಮೇಲೆ ಸರಿಯಾದ ಮಾರ್ಗದಲ್ಲಿ ಪ್ರವಹಿಸುವಂತೆ ಮಾಡುತ್ತವೆ. ಮುಂದಿನ ಹಾಗೂ ಮೊದಲನೆಯ ನಾಳಸಮೂಹದ ಮುಂಬದಿಯಲ್ಲಿ ಹಾಗೂ ಕುಲುಮೆಯ ಮೇಲುಗಡೆ ಒಂದು ಕಾವಿಟ್ಟಿಗೆಯ ಕಮಾನು ರಚಿತವಾಗಿದ್ದು ಅದರ ಮೇಲಿನ ತ್ರಿಕೋನಾಕಾರದ ಪ್ರದೇಶವೆಲ್ಲ ದಹನ ಕೋಣೆಯಾಗಿ ಪರಿಣಮಿಸುತ್ತದೆ. ಈ ಕಮಾನು ಕುಲುಮೆಯ ಉಷ್ಣದಿಂದ ಕಾವೇರಿ ಪ್ರಜ್ವಲಿಸುತ್ತ ದಹನ ಕ್ರಿಯೆಗೆ ಬೇಕಾದ ಗಾಳಿಯನ್ನು ಕಾಯಿಸುತ್ತಲೂ ಇಂಧನದಿಂದ ಒಸರುವ ಅನಿಲಗಳನ್ನು ಹೊತ್ತಿಸುತ್ತಲೂ ಕುಲುಮೆಯ ಬಾಗಿಲನ್ನು ತೆರೆದಾಗ ಒಳನುಗ್ಗುವ ತಣ್ಣನೆಯ ಗಾಳಿಯಿಂದ ಆವಿಗೆಗೆ ಶೈತ್ಯವಾಗದಂತೆ ತಡೆಯುತ್ತಲೂ ಒಂದು ಉಷ್ಣ ಪ್ರಸಾರಕವಾಗಿ ಕೆಲಸ ಮಾಡುತ್ತದೆ. ಹಿಂಬದಿಯ ಉಗಿ ಕೊಪ್ಪರಿಗೆಗೆ ಬಿಡಲಾಗುವ ಆವಿಗೆಯ ಕುಡಿನೀರು ಕೊಪ್ಪರಿಗೆಯ ಉದ್ದಕ್ಕೂ ಇರುವ ನಾಳಗಳಿಗೆಲ್ಲ ಹಂಚಲ್ಪಟ್ಟು ಹಿಂಬದಿಯ ನಾಳ ಸಮೂಹದಿಂದಿಳಿದು ಮೂರನೆಯದಲ್ಲೇರಿ ಎರಡನೆಯದರಲ್ಲಿಳಿದು ಮತ್ತೆ ಮೊದಲನೆಯದರಿಂದ ಮುಂಬದಿಯ ಉಗಿ ಕೊಪ್ಪರಿಗೆಗೆ ಸೇರುತ್ತದೆ. ಈ ಮಾರ್ಗದಲ್ಲಿ ಉತ್ಪತ್ತಿಯಾದ ಉಗಿ ಇಲ್ಲಿ ಬಿಡುಗಡೆ ಹೊಂದಿ ಉಗಿಸಂಪರ್ಕನಾಳಗಳಿಂದ ನಡುವಿನ ಕೊಪ್ಪರಿಗೆಗೆ ತಲಪುತ್ತದೆ. ಇನ್ನೂ ಉಗಿಯಾಗದ ನೀರು ಜಲಸಂಪರ್ಕ ನಾಳಗಳಿಂದ ನಡುವಿನ ಕೊಪ್ಪರಿಗೆಗೆ ಬಂದು ಎರಡನೆಯ ನಾಳ ಸಮೂಹದಲ್ಲಿಳಿಯುತ್ತ ಮೂಲಪ್ರವಾಹದೊಡನೆ ಸೇರಿಕೊಂಡು ಪುರ್ತಿ ಉಗಿ ಆಗುವವರೆಗೂ ಸುತ್ತುತ್ತಿರುತ್ತದೆ. ಕುಲುಮೆಯಿಂದ ಹೊರಟ ಬಿಸಿ ಅನಿಲಗಳ ಪ್ರವಾಹಮಾರ್ಗ ಇದಕ್ಕೆ ವ್ಯತಿರಿಕ್ತವಾಗಿದ್ದು ಮೊದಲು ಮುಂದಿನ ನಾಳಸಮೂಹದ ಮೇಲೇರಿ ಎರಡನೆಯದರ ಮೇಲಿಳಿದು ಮೂರನೆಯದರಲ್ಲೇರಿ ಕಡೆಗೆ ಹಿಂದಿನ ನಾಳ ಸಮೂಹಗಳ ಮೇಲಿನಿಂದ ಹೊಗೆ ಕೊಳವೆಯ ಮಾರ್ಗವನ್ನು ಹಿಡಿಯುತ್ತದೆ. ನಡುವಿನ ಉಗಿ ಕೊಪ್ಪರಿಗೆಯ ಮೇಲಿನ ನಡುಭಾಗದಲ್ಲಿ ರಚಿತವಾದೊಂದು ಕೋಣೆಯಿಂದ ಹೊರಟ ಉಗಿ ಮೊದಲಿನ ಎರಡು ನಾಳಸಮೂಹಗಳ ಮಧ್ಯ ಪ್ರದೇಶದಲ್ಲಿ ಇಟ್ಟಿರುವ ಅಧಿಕೋಷ್ಣಕಗಳ ಮೂಲಕ ಹಾದು ಒಂದು ಬಿಡುಕವಾಟದಿಂದ ಪ್ರಧಾನ ಉಗಿ ಕೊಳವೆಗೆ ಸೇರುತ್ತದೆ. ಒಂದೊಂದು ನಾಳಸಮೂಹಕ್ಕೆದುರಾಗಿಯೂ ಪಕ್ಕದ ಆವರಣ ಗೋಡೆಗಳಲ್ಲಿ ಮಸಿ ಬಾಗಿಲುಗಳಿದ್ದು, ಅಲ್ಲಿಂದ ಉಗಿಧಾರೆಯನ್ನು ಬಿಟ್ಟು ನಾಳಗಳ ಹೊರಗೆ ಕಟ್ಟಿರುವ ಮಸಿಯನ್ನು ತೊಳೆದು ಶುದ್ಧಿ ಮಾಡಲು ಸೌಕರ್ಯವಿದೆ. ಇವಲ್ಲದೆ ಒಳಗೆ ಪರೀಕ್ಷಿಸಲೂ ರಿಪೇರಿ ಕೆಲಸ ಮಾಡಲೂ ಚೊಕ್ಕಟಗೊಳಿಸಲೂ ಆಗುವಂತೆ ಇನ್ನೂ ಕೆಲವು ಬಾಗಿಲುಗಳೂ ಆವರಣದಲ್ಲಿರುತ್ತದೆ.
ವಿದ್ಯುದಾವಿಗೆ (ಎಲೆಕ್ಟ್ರಿಕ್ ಬಾಯ್ಲರ್)
ಬದಲಾಯಿಸಿವಿದ್ಯುದುತ್ಪಾದನೆಗಾಗಿಯೇ ಆವಿಗೆಯ ಬಳಕೆ ಹೆಚ್ಚಾಗಿರುವಲ್ಲಿ ವಿದ್ಯುತ್ತಿನಿಂದ ಉಗಿ ಉತ್ಪಾದಿಸುವ ಆವಿಗೆಯೆಂದರೆ ಒಂದು ವಿಶೇಷವೇ ಸರಿ. ಜಲವಿದ್ಯುತ್ ಅಧಿಕವಾಗಿ ದೊರೆಯುವ ಕಡೆಗಳಲ್ಲಿ ಪರೀಕ್ಷಣ ಹಾಗೂ ಸಂಶೋಧನ ಕಾರ್ಯಗಳಿಗಾಗಿ ಒಮ್ಮೊಮ್ಮೆ ಇಂಥ ವಿದ್ಯುದಾವಿಗೆಗಳನ್ನು ಉಪಯೋಗಿಸುವುದುಂಟು. ದೊಡ್ಡ ಗಾತ್ರದ ವಿದ್ಯುದಾವಿಗೆಗಳು ಸಾಮಾನ್ಯವಾಗಿ ವಿದ್ಯದ್ಧ್ರುವ ಮಾದರಿಯವಾಗಿವೆ. ಇವುಗಳಲ್ಲಿ ನೀರಿನಲ್ಲಿ ಮುಳುಗಿಸಿದ ಎರಡು ವಿದ್ಯುದ್ಧ್ರುವಗಳ ಮೂಲಕ ವಿದ್ಯುತ್ತನ್ನು ಹರಿಸುವುದರಿಂದ ಉಷ್ಣ ಉತ್ಪತ್ತಿಯಾಗುತ್ತದೆ.
ಪ್ರೇರಿತ ಪರಿಚಲನೆಯ ಆವಿಗೆಗಳು (ಫೋಸ್ರ್ಡ್ ಸಕ್ಯುಲೇಶನ್ ಬಾಯ್ಲರ್ಸ್)
ಬದಲಾಯಿಸಿಈ ವರೆಗೆ ಪರಿಶೀಲಿಸಿದ ಆವಿಗೆಗಳಲ್ಲೆಲ್ಲ ನೀರಿನ ಹಾಗೂ ನೀರು ಉಗಿ ಮಿಶ್ರಣದ ಸಾಂದ್ರತೆಯ ವ್ಯತ್ಯಾಸವೇ ಕಾರಣವಾಗಿ ನೀರಿನ ಪರಿಚಲನೆ ಸ್ವಾಭಾವಿಕವಾಗಿಯೇ ಆಗುತ್ತಿದ್ದು ಯಾವ ಬಗೆಯ ರೇಚಕದ ಉಪಯೋಗವೂ ಇರುವುದಿಲ್ಲ. ಆದರೆ ಸಂಮರ್ದ ಏರಿದಂತೆಲ್ಲ ಈ ಸಾಂದ್ರತೆಯ ವ್ಯತ್ಯಾಸ ಕಡಿಮೆಯಾಗುತ್ತ ಹೋಗಿ ಉಗಿಯ ಅವಧಿಕ ಸಂಮರ್ದವಾದ ಚ.ಅಂ.ಕ್ಕೆ ಸುಮಾರು 3,206 ಪೌಂಡಿನಲ್ಲಿ ಶೂನ್ಯವಾಗುತ್ತದೆ. ಈ ಅಂಶ ಒಂದು ಕಾಲದಲ್ಲಿ ಸಹಜ ಪರಿಚಲನೆಯ ಆವಿಗೆಗಳ ಮುನ್ನಡೆಗೆ ಬಲು ದೊಡ್ಡ ಆತಂಕವೆನಿಸಿತ್ತು. 1930ರಲ್ಲಿ ಪ್ರಕಾಶಕ್ಕೆ ಬಂದ ಆವರ್ತ ಉಗಿ ಪ್ರತ್ಯೇಕಕದ (ಸೈಕ್ಲೋನ್ ಸ್ಟೀಂ ಸೆಪರೇಟರ್) ಬಳಕೆಯಿಂದ ಇದು ಸ್ವಲ್ಪಮಟ್ಟಿಗೆ ನಿವಾರಣೆಗೊಂಡಿತು. ಇದನ್ನು ಉಗಿಕೊಪ್ಪರಿಗೆಯ ಒಳಗೆ ಇಟ್ಟಿದೆ. ಅಲ್ಲಿ ಇದು ನೀರು ಮತ್ತು ಉಗಿ ಮಿಶ್ರಣವನ್ನು ಸುಂಟರಗಾಳಿಯಂತೆ ಸುತ್ತಿ ಸುತ್ತ ಪರಿಚಲನೆಗೆ ಸಹಾಯಕವಾಗಿ ನೀರನ್ನು ಕೆಳಗಡೆಗೆ ನೂಕುತ್ತ ಉಗಿ ಮೇಲೇರಿ ಅಧಿಕೋಷ್ಣಕಕ್ಕೆ ಹೋಗುವಂತೆ ಮಾಡುತ್ತದೆ. ಈ ಸಾಧನದ ಬಳಕೆಯಿಂದ ಚ.ಅಂ.ಕ್ಕೆ 2,800 ಪೌಂಡಿನಷ್ಟು ಸಂಮರ್ದದವರೆಗೂ ಸಹಜ ಪರಿಚಲನೆಯ ಆವಿಗೆಗಳನ್ನು ರಚಿಸುವುದು ಸಾಧ್ಯವಾಗಿದೆ. ರೇಚಕದ ಬಳಕೆಯಿಂದ ನೀರಿನ ಪರಿಚಲನೆಯನ್ನು ಪ್ರೇರಿಸಿದಾಗ ನಾಳದ ಮೂಲಕ ಹರಿಯುವ ನೀರಿನ ವೇಗದಲ್ಲಾಗುವ ಹೆಚ್ಚಳದಿಂದ ನಾಳದ ಗಾತ್ರವನ್ನು ಕಡಿಮೆ ಮಾಡಬಹುದು. ಉಗಿಯ ಒಂದು ನಿರ್ದಿಷ್ಟ ಸಂಮರ್ದಕ್ಕೆ ನಾಳದ ದಪ್ಪವನ್ನು ಕಡಿಮೆ ಮಾಡಿ ಉದ್ದವನ್ನು ಹೆಚ್ಚಿಸಿ ಉಷ್ಣಪ್ರವಾಹದ ವಿಸ್ತಾರವನ್ನು ಹೆಚ್ಚು ಅನುಕೂಲಕರವಾಗಿ ನಿಯೋಜಿಸಬಹುದಲ್ಲದೆ ಈ ಏರ್ಪಾಡಿನಿಂದ ಉಷ್ಣಪ್ರವಾಹದ ವೇಗವೂ ತ್ವರಿತಗೊಳ್ಳುವುದ ರಿಂದ ಕಡಿಮೆ ಪ್ರದೇಶದಲ್ಲಿ ಆವಿಗೆಯನ್ನು ಅಳವಡಿಸಬಹುದು. ಯಾವ ಉತ್ಪಾದನ ಪ್ರಮಾಣಕ್ಕಾದರೂ ಸರಿಹೊಂದಿಸಿಕೊಳ್ಳಲಾಗುವಂತೆ ಪರಿಚಲನೆಯ ವೇಗವೂ ಸಂಪೂರ್ಣ ಹಿಡಿತದಲ್ಲಿರುವುದು ಇದರ ಇನ್ನೊಂದು ಉಪಯುಕ್ತ ಅಂಶ. ಆದರೆ ಇವುಗಳಲ್ಲಿ ಉಪಯೋಗಿಸುವ ನೀರು ಮಾತ್ರ ಅತ್ಯಂತ ಶುದ್ಧವಾಗಿರಬೇಕು. ಇಂಥ ಆವಿಗೆಯನ್ನು ಮೊದಲು ರಚಿಸಿದವ ಮಾರ್ಟಿನ್ ಬೆನ್ಸನ್ (1856).
ಪ್ರೇರಿತ ಪರಿಚಲನೆಯ ಆವಿಗೆಗಳಲ್ಲಿ ಎರಡು ಬಗೆಗಳುಂಟು.
1. ಗೊತ್ತಾದ ವೇಳೆಯಲ್ಲಿ ಅದು ಉಗಿಯಾಗಿಸುವುದಕ್ಕಿಂತ ಮೂರು ನಾಲ್ಕು ಪಟ್ಟು ಹೆಚ್ಚಿನ ಪ್ರಮಾಣದ ನೀರನ್ನು ಪರಿಚಲಿಸುತ್ತಿದ್ದು ನೀರು ಮತ್ತು ಉಗಿಯ ಬೇರ್ಪಡೆಗಾಗಿ ಒಂದು ಕೊಪ್ಪರಿಗೆಯನ್ನು ಅಗತ್ಯವಾಗಿ ಹೊಂದಿರುವ ಆವಿಗೆ. ಇದನ್ನು ಸಂತತ ಪ್ರವಾಹಿ ಆವಿಗೆಯಿಂದ ಕರೆದಿದೆ. ಅವಧಿಕ ಸಂಮರ್ದಕ್ಕಿಂತ ಕಡಿಮೆ ಸಂಮರ್ದಗಳಲ್ಲಿ ಈ ಬಗೆಯ ಆವಿಗೆಗಳನ್ನು ಉಪಯೋಗಿಸುತ್ತಾರೆ.
2. ಏಕವಾಗಿ ಎಂದು ಕರೆಯುವ ಇನ್ನೊಂದು ಬಗೆಯಲ್ಲಿ ಒಂದೇ ಅಥವಾ ಸಮಾನಾಂತರದ ಹಲವು ನಾಳ ಮಾರ್ಗಗಳಿದ್ದು ಒಂದು ತುದಿಯಲ್ಲಿ ಒಳಹೊಕ್ಕು ಕುಡಿನೀರು ಕ್ರಮಕ್ರಮವಾಗಿ ಮುನ್-ಉಷ್ಣಗೊಂಡು ಉಗಿಯಾಗಿ ಅಧಿಕೋಷ್ಟಿತಗೊಂಡು ಇನ್ನೊಂದು ತುದಿಯಲ್ಲಿ ಹೊರಬರುತ್ತದೆ. ಕುಡಿನೀರು ಅಷ್ಟೂ ಉಗಿಯಾಗಿ ಹೆಚ್ಚಿನ ನೀರಿನ ಪುನಃ ಪರಿಚಲನೆಯ ಪ್ರಶ್ನೆ ಇರುವುದಿಲ್ಲವಾದ್ದರಿಂದ ಕೊಪ್ಪರಿಗೆಯ ಅವಶ್ಯಕತೆ ಇಲ್ಲ. ಯುದ್ಧಕಾಲದಲ್ಲಿ ಸೈನ್ಯದ ಅಗತ್ಯತೆಯನ್ನು ಪುರೈಸಲು ಬೇಕಾದ ಉಕ್ಕಿನ ಉಳಿತಾಯ ಮಾಡುವ ದೃಷ್ಟಿಯಿಂದ ಒಂದು ಉಪಯುಕ್ತ ವಿಶೇಷವೆಂದು ಇದನ್ನು ಪರಿಗಣಿಸಿದ್ದರು. ಇಂಥ ಆವಿಗೆಗಳನ್ನು ಅವಧಿಕ ಸಂಮರ್ದದ ಮೇಲ್ಪಟ್ಟು ಅಥವಾ ಕಡಿಮೆಯೂ ಸಂಮರ್ಧ ಗಳಲ್ಲೂ ಉಪಯೋಗಿಸಲಾಗುವುದು. ಸಾಮಾನ್ಯವಾಗಿ ಪರಿಚಲನೆಯನ್ನು ಪ್ರೇರಿಸಲು ಬಳಸುವ ರೇಚಕಕ್ಕಾಗಿ ಆವಿಗೆಯ ಉತ್ಪಾದನ ಸಾಮರ್ಥ್ಯದ 3% ಖರ್ಚಾಗುತ್ತದೆಂದು ಹೇಳಬಹುದು. ಈ ಮಾದರಿಯವಕ್ಕೆ ಮುಂದಿನ ಮೂರು ಆವಿಗೆಗಳನ್ನು ಪ್ರಮುಖ ಉದಾಹರಣೆಗಳೆಂದು ಪರಿಗಣಿಸಬಹುದು.
ಬೆನ್ಸನ್ ಆವಿಗೆ
ಬದಲಾಯಿಸಿಆವಿಗೆಯ ಜಲಪ್ರದೇಶದಲ್ಲಿ ಗುಳ್ಳೆಗಳು ಉತ್ಪತ್ತಿಯಾಗಿ ಲೋಹದ ಗೋಡೆಗೆ ಅಂಟಿಕೊಳ್ಳುವುದರಿಂದ ಕುಲುಮೆಯ ಬಿಸಿ ಅನಿಲಗಳಿಂದ ನೀರಿಗೆ ತಟ್ಟುವ ಉಷ್ಣ ಪ್ರವಾಹಕ್ಕೆ ಅಡ್ಡಿಯಾಗುವುದೆಂದೂ ಆದ್ದರಿಂದ ಆವಿಗೆಯ ಸಂಮರ್ದ ಅವಧಿಕ ಸಂಮರ್ದಕ್ಕಿಂತ ಮೇಲಿದ್ದರೆ ನೀರು ಮತ್ತು ಉಗಿ ಸಮಾನ ಸಾಂದ್ರತೆಯವಾಗಿ ಗುಳ್ಳೆಗಳ ಉತ್ಪತ್ತಿಗೇ ಅವಕಾಶವಿರುವುದಿಲ್ಲವೆಂದೂ ತರ್ಕಿಸಿ ಮಾರ್ಕ್ ಬೆನ್ಸನ್ ತನ್ನ ಹೆಸರಿನ ಆವಿಗೆಯನ್ನು 1922ರಲ್ಲಿ ಹೊರತಂದ. ಇದು ಒಂದು ಪ್ರೇರಿತ ಪ್ರವಾಹದ ಏಕವಾಹಿ ಜಲನಾಳಿ ಆವಿಗೆ ಮೊದಲೇ ಕುಡಿನೀರನ್ನು ಅವಧಿಕಸಂಮರ್ದಕ್ಕೆ ಪ್ರೇರಿಸಿ ಕಾಯಿಸುವುದರಿಂದ ಅದರ ಸುಪ್ತೋಷ್ಣ ಶೂನ್ಯವಾಗಿ ನೀರು ದ್ರವರೂಪದಿಂದ ಅಧಿಕೋಷ್ಣಿತ ಆವಿಯಾಗಿ ಸೀದಾ ರೂಪಾಂತರಗೊಳ್ಳುತ್ತದೆ.
ಇದೇ ಮಾದರಿಯ ಇನ್ನೊಂದು ಆವಿಗೆ ಸುಲ್ಜರ್ ಎಂಬುವನದು. ಇಂಥ ಆವಿಗೆಗಳಲ್ಲಿ ನಿರ್ಧಾರಿತ ಅಧಿಕೋಷ್ಣ ಹೊಂದಿದ ಉಗಿಯನ್ನು ಎಲ್ಲ ಸಂದರ್ಭಗಳಲ್ಲೂ ಪಡೆಯಲಾಗು ವಂತೆ ಇಂಧನ ದಹನವೇಗವನ್ನೂ ನೀರಿನ ಪರಿಚಲನೆಯ ವೇಗವನ್ನೂ ಸರಿಯಾಗಿ ನಿಯಂತ್ರಿಸಲು ನಿಖರ ಹಾಗೂ ಸೂಕ್ಷ್ಮಗ್ರಾಹಿಗಳಾದ ಏರ್ಪಾಡುಗಳು ಅಗತ್ಯ.
ಅವಧಿಕ ಸಂಮರ್ಧಾತೀತ ಸಂಮರ್ದಗಳಲ್ಲಿ (3,640 ಪೌಂಡಿಗಿಂತ ಹೆಚ್ಚು) 565ಔ ಸೆಂ.ಗ್ರೇ. ಉಷ್ಣತೆಯಲ್ಲಿ ಗಂಟೆಗೆ 30,00,000 ಪೌಂಡುಗಳಷ್ಟು ಅಧಿಕ ಪ್ರಮಾಣದ ಉತ್ಪತ್ತಿಯ ಏಕವಾಹಿ ಆವಿಗೆಗಳು ಬಳಕೆಗೆ ಬಂದಿರುವುದನ್ನು ಈ ಮಾರ್ಗದಲ್ಲಿನ ಮುನ್ನಡೆಗೆ ಉದಾಹರಣೆಯಾಗಿ ಕೊಡಬಹುದು.
ಲ್ಯಾಫ್ಲರ್ ಆವಿಗೆ
ಬದಲಾಯಿಸಿಇದು ಪುನಃಪರಿಶೀಲನೆಯ ಎಂದರೆ ಸಂತತಪ್ರವಾಹಿ ವರ್ಗಕ್ಕೆ ಸೇರಿದ ಪ್ರೇರಿತ ಪರಿಚಲನೆಯ ಆವಿಗೆ. ನೀರನ್ನು ಉಗಿಯಾಗಿಸುವುದಕ್ಕೆ ಅಧಿಕೋಷ್ಣಿತ ಉಗಿಯನ್ನು ಬಳಸುವುದು ಇದರ ಇನ್ನೊಂದು ವೈಶಿಷ್ಟ್ಯ. ಆದ್ದರಿಂದ ಕುಲುಮೆಯ ಬಿಸಿ ಅನಿಲಗಳ ಮುಖ್ಯ ಕಾರ್ಯ ಉತ್ಪಾದಿತ ಉಗಿಯನ್ನು ಅಧಿಕೋಷ್ಣಿತಗೊಳಿಸುವುದೇ ಆಗಿದೆ. ಉಷ್ಣವಾಹಕ ವಸ್ತು ಸಹ ಉಗಿಯೇ ಆಗಿದ್ದು ಇಲ್ಲಿ ಪರೋಕ್ಷ ಕಾಯಿಸುವಿಕೆಯ ಅನುಕೂಲಗಳೂ ಸಿದ್ಧಿಸಿವೆ. ಭೂಮಿ ಅಥವಾ ಸಮುದ್ರದ ಮೇಲಿನ ಸಾರಿಗೆಯಲ್ಲಿ ಶಕ್ತ್ಯುತ್ಪಾದನೆಗೆ ಬಲು ಸಮರ್ಥ ಸಾಧನ.
ವೀಲಕ್ಸ್ ಆವಿಗೆ
ಬದಲಾಯಿಸಿಇದರಲ್ಲಿ ನೀರಿನ ಪರಿಚಲನೆ ಮಾತ್ರವಲ್ಲದೆ ದಹನಕ್ರಿಯೆ ಸಹ ಪ್ರೇರಿತವಾಗಿದೆ. ಒಂದು ಅನಿಲ ತನ್ನಲ್ಲಿನ ಶಬ್ದವೇಗಕ್ಕಿಂತ ಮೀರಿದ ವೇಗದಲ್ಲಿ ಒಂದು ನಾಳದೊಳಗೆ ಚಲಿಸುತ್ತಿದ್ದರೆ ಅದರಿಂದ ನಾಳದ ಗೋಡೆಗಳಿಗೆ ಉಷ್ಣಪ್ರವಹಿಸುವ ವೇಗ ಅತಿ ಶೀಘ್ರವಾಗಿರುತ್ತದೆಂದು ಕಂಡುಬಂದಿದ್ದು ಅದರ ಪ್ರಯೋಜನವನ್ನು ಇಲ್ಲಿ ಪಡೆದಿದೆ. ಸಾಮಾನ್ಯವಾಗಿ ದ್ರವ ಅಥವಾ ಅನಿಲರೂಪದ ಇಂಧನವನ್ನು ಉಪಯೋಗಿಸುವ ಈ ಆವಿಗೆಯಲ್ಲಿ ದಹನಕ್ರಿಯೆಗೆ ಬೇಕಾದ ಗಾಳಿಯನ್ನು ವಾಯು ಸಂಕೋಚಕವೊಂದರಿಂದ ಸುಮಾರು 50 ಪೌಂ. ಸಂಮರ್ದದಲ್ಲಿ ಜ್ವಾಲಕಕ್ಕೆ ಒದಗಿಸುವುದರಿಂದ ದಹನೋತ್ಪನ್ನ ಅನಿಲಗಳ ವೇಗ ಶಬ್ದಾತೀತವಾಗಿರುತ್ತದೆ.
ದಹನಕೋಣೆಯ ಒಳಸುತ್ತಲೂ ಇರುವ ನೀರಿನ ಕೊಳವೆಯೊಳಗೆ ಹಾದಿರುವ ಧೂಮನಾಳಗಳ ಮೂಲಕ ಬಿಸಿ ಅನಿಲಗಳು ಆ ಗತಿಯಲ್ಲಿ ಪ್ರವಹಿಸಿ ನೀರನ್ನು ಉಗಿಯಾಗಿ ಸುತ್ತವೆ. ಅಲ್ಲಿಂದ ಮುಂದೆ ಅವು ಅಧಿಕೋಷ್ಣಕಕ್ಕೆ ಹೋಗಿ ಉಗಿಯನ್ನು ಅಧಿಕೋಷ್ಣಗೊಳಿಸಿ ಅನಂತರ ಅನಿಲ ತಿರುಬಾನಿಯೊಂದರಲ್ಲಿ ವಿಸ್ತರಿಸಿ ವಾಯು ಸಂಕೋಚವನ್ನು ತಿರುಗಿಸಲು ಬೇಕಾದ ಶಕ್ತಿಯನ್ನು ಉತ್ಪಾದಿಸುತ್ತವೆ. ತಿರುಬಾನಿಯಿಂದ ಬಿಡಲ್ಪಟ್ಟ ಅನಿಲಗಳು ಮಿತವ್ಯಯಿ ಯೊಂದರ ಮೂಲಕ ಹಾದು ತಮ್ಮ ಉಳಿಕೆಯ ಉಷ್ಣದಿಂದ ಕುಡಿನೀರನ್ನು ಕಾಯಿಸುತ್ತವೆ.
ಮಿತವ್ಯಯಿಯಿಂದ ಬರುವ ಕಾದು ಕುದಿನೀರು ಪರಿಚಲನಾ ರೇಚಕವೊಂದರಿಂದ ದಹನಕೋಣೆ ಒಳಗಿನ ನೀರು ಕೊಳವೆಗಳ ಮೂಲಕ ಹಾದು ಅಲ್ಲಿ ಭಾಗಶಃ ಉಗಿಯಾಗಿ ಈ ನೀರು ಮತ್ತು ಉಗಿ ಮಿಶ್ರಣ ಒಂದು ಪ್ರತ್ಯೇಕಕ್ಕೆ ಬರುತ್ತವೆ. ಇಲ್ಲಿ ಪ್ರತ್ಯೇಕಿಸಲ್ಪಟ್ಟ ಒಣ ಉಗಿ ಅಧಿಕೋಷ್ಣಕಕ್ಕೆ ಸಾಗಿ ಉಳಿದ ನೀರು ಪುನಃ ಅದೇ ಕೊಳವೆಗಳಿಗೆ ಕಳುಹಿಸಲ್ಪಡುತ್ತದೆ. ಈ ರೀತಿ ಉತ್ಪತ್ತಿಯಾಗುವ ಉಗಿಯ 10-20 ರಷ್ಟು ಪ್ರಮಾಣದ ನೀರು ಹೆಚ್ಚಿನ ವೇಗದಲ್ಲಿ ದಹನಕೋಣೆಯ ಕೊಳವೆಗಳ ಮೂಲಕ ಪರಿಚಲಿಸುತ್ತಲಿದ್ದು ಲೋಹ ಅತಿಯಾಗಿ ಕಾದುಬಿಡದಂತೆ ತಡೆಯುತ್ತದೆ. ಚಿತ್ರದಲ್ಲಿ ತೋರಿಸಿರುವಂತೆ ಅಧಿಕೋಷ್ಣಕದ ಕೆಳಗಿನಿಂದ ಆವಿ ಉಗಿತಿರುಬಾನಿಗೆ ಸಾಗುತ್ತದೆ. ಆವಿಗೆಯನ್ನು ಮೊದಲು ಹೊತ್ತಿಸುವಾಗ ವಾಯು ಸಂಕೋಚಕಗಳನ್ನು ತಿರುಗಿಸಲು ನಿಷ್ಕಾಸಾನಿಲತಿರುಬಾನಿಯ ಬದಲಿಗೆ ಒಂದು ವಿದ್ಯುತ್ ಮೋಟಾರನ್ನು ಜೋಡಿಸಿರುತ್ತದೆ. ಒಂದು ನಿರ್ದಿಷ್ಟ ಉತ್ಪಾದನೆಗೆ ವೀಲಕ್ಸ್ ಆವಿಗೆ ಅಡಕವಾದುದು; ಸಂದರ್ಭೋಚಿತವಾಗಿ ಹೊಂದಿಸಲು ಅನುಕೂಲತೆಯುಳ್ಳದ್ದು: ಶೀಘ್ರವಾಗಿ ಆರಂಭಿಸಬಹುದಾದದ್ದು (ಹೊತ್ತಿಸಿ 5-8 ಮಿನಿಟುಗಳಲ್ಲಿ ಪೂರ್ಣ ಸಾಮರ್ಥ್ಯಕ್ಕೆ ತರಬಲ್ಲ ಉದಾಹರಣೆಗಳುಂಟು). ಆದ್ದರಿಂದ ಇದು ಶಕ್ತ್ಯಾಗಾರಗಳಲ್ಲಿ ಸಹಾಯಕ ಅಥವಾ ಅವಲಂಬಿ (ಸ್ಟ್ಯಾಂಡ್ಬೈ) ಉತ್ಪಾದಕವಾಗಿ ಬಹಳ ಉಪಯುಕ್ತವಾಗಿದೆ.
ಉಳಿಕೆಯ ಕಾವಿನ ಅವಿಗೆಗಳು (ವೇಸ್ಟ್ ಹೀಟ್ ಬಾಯ್ಲರ್ಸ್)
ಬದಲಾಯಿಸಿಎಷ್ಟೊ ಸ್ಥಾವರಗಳಲ್ಲಿ ಕೈಗಾರಿಕಾ ಕುಲುಮೆಗಳಿಂದಲೊ ಬಲೋತ್ಪಾದಕಗಳಿಂದಲೊ ಇತರ ಪ್ರಕ್ರಿಯೆಗಳಿಂದಲೊ ಅವುಗಳ ಮೂಲೋದ್ದೇಶ ಸಾಧಿತವಾದ ಮೇಲೆ ಹೊರಬರುವ ದಹನಜನ್ಯ ಅನಿಲಗಳಲ್ಲಿ ಉಳಿದಿರುವ ಉಷ್ಣದಿಂದಲೇ ಅಲ್ಲಿಗೆ ಬೇಕಾಗುವ ಉಗಿಯಷ್ಟನ್ನೂ ಒದಗಿಸುವ ಸಾಧ್ಯತೆಯಿದೆ. ಉದಾಹರಣೆಗೆ, ಆಂತರ್ದಹನ ಯಂತ್ರಗಳ ನಿಷ್ಕಾಸದ ಉಷ್ಣತೆ ಅವುಗಳ ನಿರ್ವಹಣಾ ಭಾರ ಮತ್ತು ಯಂತ್ರದ ಬಗೆಗಳನ್ನು ಅವಲಂಬಿಸಿ 150º-425º ಸೆಂ.ಗ್ರೇ. ಇರಬಹುದು; ತೈಲ ಶುದ್ಧೀಕರಣ ಬಟ್ಟಿಗಳಿಂದ 480º-540º ಸೆಂ.ಗ್ರೇಡಿನಲ್ಲಿ ಅನಿಲಗಳ ಸಂತತ ನಿರ್ಗಮನವಾಗುತ್ತಿರಬಹುದು
ತೆರೆದ ಒಲೆ (ಓಪನ್ ಹಾರ್ತ್) ಮಾದರಿಯ ಉಕ್ಕಿನ ಕುಲುಮೆಗಳಿಂದ ಹೊರಬರುವ ಅನಿಲಗಳು 6500-7050 ಸೆಂ.ಗ್ರೇ.ವರೆಗೂ ಇದ್ದಿರಬಹುದು. ಈ ಅನಿಲಗಳಲ್ಲಿರುವ ಉಷ್ಣಶಕ್ತಿಯನ್ನು ಅವುಗಳ ನಿರ್ಗಮನ ಮಾರ್ಗದಲ್ಲಿ ಸೂಕ್ತ ಮಾದರಿಯ ಉಷ್ಣವಿನಿಮಯ ಸಾಧನಗಳನ್ನು ಅಳವಡಿಸುವುದರಿಂದ ಹೀರಿಕೊಳ್ಳಬಹುದು. ಇಷ್ಟು ಪ್ರಮಾಣದ ಉಷ್ಣ ಹೊರಹೋಗುತ್ತಿದೆ ಎಂಬುದರಿಂದಲೇ ಮೂಲ ಸಾಧನ ದಕ್ಷತೆಯಿಂದ ಕೆಲಸಮಾಡಿತ್ತಿಲ್ಲ ವೆಂದಾಗಲೀ ಅದರ ಕ್ಷೀಣದಕ್ಷತೆಯನ್ನು ಮರಿಮಾಚಲು ಇದರ ಉಪಯೋಗವೆಂದಾಗಲೀ ಭಾವಿಸಬಾರದು. ಏಕೆಂದರೆ ಪ್ರಕ್ರಿಯೆಯಲ್ಲಿ ಉಷ್ಣ ಹೀರುತ್ತಿರುವ ಪದಾರ್ಥದ ಉಷ್ಣತೆಯ ಮೇಲೂ ಇದು ಅವಲಂಬಿಸಿದೆ. ಅಲ್ಲದೆ ಹೀಗೆ ಉಳಿಕೆಯ ಉಷ್ಣವನ್ನು ಉಪಯೋಗಿಸು ವಾಗಲೂ ಮೂಲಸಾಧನದ ದಕ್ಷತೆಗೆ ಭಂಗ ಬರದಂತೆ ಎಚ್ಚರಿಕೆ ವಹಿಸಬೇಕಾದದ್ದು ಅಗತ್ಯ. ಈ ಉಳಿಕೆಯ ಉಷ್ಣದ ಅವಿಗೆಗಳಲ್ಲಿ ಜಲನಾಳಿ ಹಾಗೂ ಧೂಮನಾಳಿ ಯಾವ ಮಾದರಿಯಾದರೂ ಇರಬಹುದು. ಮೊದಮೊದಲು ಬಳಕೆಗೆ ಬಂದ ಇಂಥ ಆವಿಗೆಗಳು ಮಿಕ್ಕವುಗಳಂತೆಯೇ ಇದ್ದು ಅನಿಲಗಳ ಉಷ್ಣತೆ ಅಧಿಕವಾಗಿದ್ದವರೆಗೂ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದವು. ಅನಿಲದ ವೇಗಗಳನ್ನು ಹೆಚ್ಚು ಮಾಡುವುದುರಿಂದ ಉಷ್ಣಪ್ರವಾಹ ಅಧಿಕಗೊಳ್ಳುವುದೆಂಬ ಅಂಶ ಗೋಚರವಾದ ಮೇಲೆ ಇವುಗಳ ರಚನೆಯ ರೀತಿಯೇ ಬದಲಾಯಿತು. ಉಷ್ಣಪ್ರವಹನಕ್ಕೆ ಪ್ರಸರಣಕ್ಕಿಂತ (ಕನ್ವೆಕ್ಷನ್) ವಹನವನ್ನು (ಕಂಡಕ್ಷನ್) ಅವಲಂಬಿಸಬೇಕು. ಅಡಕವಾದ ವಿನ್ಯಾಸದಲ್ಲಿ 1.5 ಹಿ-2" ವ್ಯಾಸವುಳ್ಳ ಕೊಳವೆಗಳೂ ಅನಿಲದ ಶೀಘ್ರ ವೇಗವೂ ಅಪೇಕ್ಷಣೀಯ. ತಡೆಯಿಂದ ಹರಿವು ಕ್ಷೀಣವಾಗುವುದನ್ನು ತಪ್ಪಿಸಲೂ ಕೊಳವೆಗಳ ಮೂಲಕ ವೇಗದ ಅಧಿಕ್ಯ ನಿರಂತರವಾಗಿರುವುದಕ್ಕೂ ಪ್ರಚೋದಿತ ಹರಿವಿನ ಪಂಖಾಗಳನ್ನು ಉಪಯೋಗಿಸಬೇಕು. ಇಟ್ಟಿಗೆಯ ಕಟ್ಟಡ ಸಾಧ್ಯವಾದಷ್ಟು ಕಡಿಮೆಯಿದ್ದು ಆಧುನಿಕವಾದ ಇಂಥ ಅವಿಗೆಗಳಲ್ಲಿ ಒಳಮಾರ್ಗಕ್ಕೆ ಕಾವಿಟ್ಟಿಗೆಯ ಅಂಚು ಕಟ್ಟಿರುವುದನ್ನು ಬಿಟ್ಟರೆ ಬೇರೆ ಕಟ್ಟಡವೇ ಇರುವುದಿಲ್ಲ. ಅಧಿಕೋಷ್ಣಿತ ಉಗಿ ಬೇಕಾದಲ್ಲಿ ಅಧಿಕೋಷ್ಣಕ ನಾಳಗಳನ್ನು ಈ ಒಳ ಮಾರ್ಗದಲ್ಲಿ ನಿಯಂತ್ರಕ ಬಾಗಿಲುಗಳ ಅನಂತರದಲ್ಲಿ ಇಟ್ಟಿರುತ್ತದೆಯೇ ಹೊರತು ಉಷ್ಣತೆ ಕಡಿಮೆಯಿರುವ ಹೊರಮಾರ್ಗದಲ್ಲಲ್ಲ.
ಉಲ್ಲೇಖಗಳು
ಬದಲಾಯಿಸಿ