ಸದಸ್ಯ:Amritha Nairy/ನನ್ನ ಪ್ರಯೋಗಪುಟ1

ಸಾವಯವ ಕೃಷಿಕ ದಿನಕರ್ ಗೌಡ

ಬದಲಾಯಿಸಿ
 ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಕಡಮ್ಮಾಜೆಯ ದಿನಕರ ಗೌಡ ಸಮಾಜ ಸೇವೆಯ ಚಿಂತನೆಯೊಂದಿಗೆ ಗುರುತಿಸಿಕೊಂಡ ಒಬ್ಬ ಪ್ರಗತಿಪರ ಕೃಷಿಕ. ಸಾಮಾಜಿಕ ಹೋರಾಟಗಾರನಾಗಿ, ಬಂದಾರು ಗ್ರಾಮ ಪಂಚಾಯತ್‍ನ ಮಾಜಿ ಸದಸ್ಯರಾಗಿ, ಸ್ವಉದ್ಯೋಗದಲ್ಲಿಯೂ ಸಾಧನೆ ಗೈದ ವ್ಯಕ್ತಿ. ವಿವಿಧ ಸಂಘ, ಸಂಸ್ಥೆಗಳಲ್ಲಿ ಸಕ್ರೀಯರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಪ್ರಾಣಿ ಪಕ್ಷಿಗಳೆಂದರೆ ಬಹಳ ಕಾಳಜಿ ಹೊಂದಿರುವ ಇವರು ಮನೆಯಲ್ಲಿಯೇ ಹಲವಾರು ಪ್ರಾಣಿ - ಪಕ್ಷಿಗಳನ್ನು ಸಾಕಿಕೊಂಡು ವೈಜ್ಞಾನಿಕ ಪ್ರಯೋಗಗಳನ್ನು ಕೃಷಿಯಲ್ಲಿ ಅಳವಡಿಸುತ್ತಾ ಇತರರಿಗೆ ಪ್ರೇರಣೆಯಾಗಿದ್ದರು.

ಕೃಷಿ ಜೀವನದ ಆರಂಭ

ಬದಲಾಯಿಸಿ
ಆರಂಭದಲ್ಲಿ ಸಾಮಾನ್ಯ ಕೃಷಿಕನಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಕಳೆದ ಹದಿನೈದು ವರ್ಷಗಳಿಂದ ಪ್ರಾಣಿ ಪಕ್ಷಿಗಳ ಸಾಕಾಣಿಕೆಯಲ್ಲಿಯೂ ಇವರು ತೊಡಗಿಸಿಕೊಂಡಿದ್ದರು. 
 ಸುಮಾರು ಹದಿನೈದು ವರ್ಷಗಳ ಕಾಲ ಬಂದಾರು ಗ್ರಾಮ ಪಂಚಾಯತ್ ಸದಸ್ಯನಾಗಿ ಉತ್ತಮ ಕೆಲಸಗಳನ್ನು ಮಾಡಿ ಜನ ಮನ್ನಣೆಗೆ ಪಾತ್ರರಾಗಿದ್ದರು. ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದರು. ನಂತರ ಅವರಿಗೆ ಬಹಳ ಹಣದ ಸಮಸ್ಯೆ  ಉಂಟಾದ್ದರಿಂದ 2007 ರಲ್ಲಿ ಸ್ವತಃ ಮನೆಯಲ್ಲಿಯೇ ಗಿರಿರಾಜ ಕೋಳಿಗಳನ್ನು  ಸಾಕಲು ಪ್ರಾರಂಭಿಸಿದರು. ಆಗ ಅದರ ಮಾರಾಟಕ್ಕೆ ಖರೀದಿದಾರರು ಕಡಿಮೆ ಆಗಿದ್ದರಿಂದ ಉಪ್ಪಿನಂಗಡಿಯಲ್ಲಿ ಒಂದು ಕೋಳಿ ಫಾರಂನ್ನು ಸ್ವತಃ ಅವರೇ ಆರಂಭಿಸಿದರು. ಆ ನಂತರ ಇದರ ಉಳಿದ ತ್ಯಾಜ್ಯವನ್ನು ಬಳಸಿಕೊಳ್ಳಲು ಹಂದಿಗಳ ಸಾಕಾಣೆ ಮಾಡಲು ಆರಂಭಿಸಿದರು. ಹಂದಿಗಳನ್ನು ಸ್ವಚ್ಛಗೊಳಿಸಿದ ನೀರಿನಿಂದ ಗೋಬರ್ ಗ್ಯಾಸ್ ವ್ಯವಸ್ಥೆ ರೂಪಿಸಿದ್ದಾರೆ. ಮನೆಯ ಅಡುಗೆ ಕಾರ್ಯಕ್ಕೆ ಇದನ್ನೇ ಉಪಯೋಗಿಲಾಗುತ್ತದೆ. ಅದರಲ್ಲಿ ಹೆಚ್ಚಾದ ತ್ಯಾಜ್ಯವನ್ನು ಪೈಪ್ ಮೂಲಕ ತೋಟಕ್ಕೆ ಬಿಡುವ ವ್ಯವಸ್ಥೆ ಇದೆ. ಈ ವ್ಯವಸ್ಥೆಗಳು ವ್ಯವಸ್ಥಿತವಾಗಿರುವುದರಿಂದ ಆಯಾಯ ಕೆಲಸಗಳು ಸುಲಭವಾಗಿ ಆಗುತ್ತಿರುತ್ತದೆ. ಹಂದಿ ಸಾಕಾಣೆ ಕೇಂದ್ರ ಎತ್ತರದಲ್ಲಿ ಇರುವುದರಿಂದ ಈ ವ್ಯವಸ್ಥೆ ಸುಲಭ ಸಾಧ್ಯವಾಗಿದೆ.
  ದನಗಳ ಸಾಕಾಣಿಕೆಯಲ್ಲೂ  ಅದರ ತ್ಯಾಜ್ಯಗಳನ್ನು ಬಳಸಿ ಗೋಬರ್ ಗ್ಯಾಸ್ ಉತ್ಪಾದಿಸಿ, ಹೆಚ್ಚುವರಿ ಗೊಬ್ಬರವನ್ನು ಸಂಗ್ರಹಿಸಲು ಸ್ಲರಿ ಟ್ಯಾಂಕ್ ನಿರ್ಮಿಸಿದ್ದಾರೆ. ಸ್ಲರಿಯನ್ನು ಮಿಶ್ರಣ ಮಾಡಲು ಸ್ವಯಂಚಾಲಿತ ಯಂತ್ರವನ್ನು ಅಳವಡಿಸಿದ್ದಾರೆ. ಈ ಯಂತ್ರದ ಮೂಲಕ ತೋಟಕ್ಕೆ ಗೊಬ್ಬರ ಸ್ವಯಂಚಾಲಿತವಾಗಿ ಹೋಗುತ್ತದೆ. ಗೀರ್, ಸಾಯಿವಾಲ ತಳಿಯ ದನಗಳನ್ನು ಇವರ ಮನೆಯಲ್ಲಿ ಸಾಕಲಾಗುತ್ತದೆ. ದನಗಳಿಗೆ ಅಡಿಕೆ ಮರದ ಹಾಳೆಗಳನ್ನು ಚಾಪ್ ಕಟರ್‍ನಲ್ಲಿ ತುಂಡರಿಸಿ ಹಾಕುತ್ತಾರೆ. ಮಳೆಗಾಲಕ್ಕೂ ಅದನ್ನು ದಾಸ್ತಾನು ಮಾಡಿಡಲಾಗುತ್ತದೆ. ಇದರಿಂದಾಗಿ ಬೈ ಹುಲ್ಲಿನ ಅವಶ್ಯಕತೆ ಇರುವುದಿಲ್ಲ. ಅಡಿಕೆಯನ್ನು ಒಣಗಿಸಲು ಮತ್ತು ಮಳೆಯಿಂದ ರಕ್ಷಣೆ ಪಡೆಯಲು ವಿವಿಧ ತಂತ್ರವನ್ನು ಮಾಡಿಕೊಂಡಿದ್ದಾರೆ.  ಹೀಗೆ ಹೈನುಗಾರಿಕೆಯನ್ನೂ ನಿರ್ವಹಿಸುತ್ತಿರುವ ಇವರು ಜೇನು, ನಾಟಿಕೋಳಿ, ದನ, ಹಂದಿ, ವಿವಿಧ ತಳಿಯ ನಾಯಿಗಳು, ಮೊಲಗಳನ್ನೂ ಸಾಕಿದ್ದಾರೆ. ಪ್ರಾಣಿ ಪಕ್ಷಿಗಳನ್ನು ಸಾಕಲು ಇಚ್ಚಿಸುವವರಿಗೆ ಮಾರಾಟವನ್ನು ಕೂಡ ಮಾಡುತ್ತಾರೆ. 

[]

 ವಾಣಿಜ್ಯ ಕೃಷಿಯತ್ತಾ ಮುಖ ಮಾಡುತ್ತಿರುವ ಇಂದಿನ ಜನತೆ ಹಣ ಸಂಪಾದನೆಯ ಹಿಂದೆ ಬಿದ್ದು ಮನುಷ್ಯ ಸೇವಿಸುವ ಆಹಾರ ಬೆಳೆಗಳಿಗೂ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಅಧಿಕ ಇಳುವರಿಯನ್ನು ತೆಗೆಯುವ ಭ್ರಮೆಯಲ್ಲಿ ಮಣ್ಣಿನ ಫಲವತ್ತತೆಯನ್ನು ನಾಶ ಮಾಡುವ ಇಂದಿನ ಕೃಷಿ ಪದ್ಧತಿಗೆ ಸೆಡ್ಡು ಹೊಡೆದು ಸಂಪೂರ್ಣ ಜೈವಿಕ ಗೊಬ್ಬರವನ್ನು ಬಳಸಿ ಅಧಿಕ ಇಳುವರಿ ತೆಗೆದು ಲಾಭವನ್ನು ಗಳಿಸುವಲ್ಲಿ ದಿನಕರ ಗೌಡರು ಯಶಸ್ವಿಯಾಗಿದ್ದಾರೆ. 
ಆದರೆ ಇವರು ಕೃಷಿಗೆ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಸಾವಯುವ ಗೊಬ್ಬರವನ್ನು ಮಾತ್ರ ಉಪಯೋಗಿಸುತ್ತಾರೆ. ಇದರಿಂದಾಗಿ ರಾಸಾಯನಿಕ ಔಷಧಿಯನ್ನು ಸಿಂಪಡಿಸುವ ಅವಶ್ಯಕತೆ ಇರುವುದಿಲ್ಲ. ಗದ್ದೆ, ತೋಟ, ತರಕಾರಿ ಹೀಗೆ ಸಮಗ್ರ ಕೃಷಿಯೊಂದಿಗೆ ಮನೆಗೆ ಬೇಕಾದ ಎಲ್ಲಾ ತರಕಾರಿಗಳು ಹಾಗೂ ದವಸ ಧಾನ್ಯಗಳನ್ನು ಮನೆಯಲ್ಲೇ ಬೆಳೆಯುತ್ತಾರೆ.

[]

 ಬಗೆಬಗೆಯ ಪಕ್ಷಿಗಳನ್ನು ಕಾಣಬೇಕಾದರೆ ಕಾಡಿನ ಕಡೆ ಚಿತ್ತ ಹರಿಸಬೇಕಾಗುತ್ತದೆ. ಒಂದೇ ಕಡೆ ಸುಲಭವಾಗಿ ನೋಡಬೇಕೆಂದಾದರೆ ಪಕ್ಷಿಧಾಮಗಳಿಗೆ ಭೇಟಿ ನೀಡಬೇಕು. ಆದರೆ ದಿನಕರ ಗೌಡ ಅವರ ಮನೆಗೆ ಭೇಟಿ ನೀಡಿದರೆ ಸಾಕು, ತರಹೇವಾರಿ ಹಕ್ಕಿಗಳ ಕಲರವ ಇಲ್ಲಿ ಎದುರುಗೊಳ್ಳುತ್ತದೆ. ಬಗೆಬಗೆಯ ಬಾನಾಡಿಗಳ ಪಿಸುಮಾತುಗಳು ಕೇಳಿಬರುತ್ತವೆ. ಈ ಮನೆಯಲ್ಲಿ ದೇಶಿಯ ಹಕ್ಕಿಗಳೊಂದಿಗೆ ವಿವಿಧ ವಿದೇಶಿ ಹಕ್ಕಿಗಳನ್ನು ಕಾಣಬಹುದು. ಹಕ್ಕಿಗಳ ಕಲರವದ ಜೊತೆಗೆ ಇವರ ದಿನಚರಿಯಾಗಿತ್ತು. ಪ್ರತಿನಿತ್ಯ ಅದನ್ನು ಗಮನಿಸುತ್ತಾ ಅದಕ್ಕೆ ಬೇಕಾದ ವಾತಾವರಣವನ್ನು ಕಲ್ಪಿಸಿಕೊಡುತ್ತಿದ್ದರು.
 ಮೊಗ್ರು ಗ್ರಾಮದಲ್ಲಿ ‘ಕಡಮ್ಮಾಜೆ’ ಎಂಬ ಹೆಸರಿನ ಮನೆ ಮರಗಿಡಗಳ ನಡುವಿನ ಸುಂದರ ಪರಿಸರದೊಂದಿಗೆ ಮನೆಗೆ ಬಂದವರನ್ನು ಸ್ವಾಗತಿಸುತ್ತದೆ. ಮನೆಯವರ ಮಾತುಗಳಿಗಿಂತ ಮೊದಲೇ ಹಕ್ಕಿಗಳ ಸಂಭಾಷಣೆ ಕೇಳಿಬರುತ್ತದೆ. ಆದ್ದರಿಂದ ಬಂದವರು ಮೊದಲು ಹಕ್ಕಿಗಳ ಮನೆಗೆ ಹೋಗಿ ಅದರ ಬಗ್ಗೆ ವಿಚಾರಿಸಿ ಪಕ್ಷಿಗಳನ್ನು ವೀಕ್ಷಣೆ ಮಾಡಿ ಅದರ ಜೊತೆ ಕಾಲ ಕಳೆದು ಖುಷಿಪಡುತ್ತಾರೆ.

ಪಕ್ಷಿಗಳ ಸಾಕಾಣಿಕೆ

ಬದಲಾಯಿಸಿ
 ಇವರು ಸ್ಥಳೀಯ ಹಕ್ಕಿಗಳನ್ನು ಸಾಕುವುದರ ಜೊತೆ ವಿದೇಶಿ ಹಕ್ಕಿಗಳನ್ನು ಕರೆತಂದು ಸಾಕುವ ನಿಸರ್ಗಸ್ನೇಹಿ ಹವ್ಯಾಸಿಯೂ ಆಗಿದ್ದರು. ಇವರ ಪಕ್ಷಿ ಸಂಗ್ರಾಹಲಯದಲ್ಲಿ ಹಲವು ವಿದೇಶಿ ಹಕ್ಕಿಗಳು ನೆಲೆಸಿವೆ. ಆಫ್ರಿಕಾದ ‘ಎಮು’, ‘ಲವ್ ಬಡ್ರ್ಸ್’, ‘ಟರ್ಕಿ’, ‘ಗ್ರೇ ಕಾಕ್‍ಟೈಲ್’, ‘ಬಡ್ಗಿ’ ಲವ್ ಪಕ್ಷಿಗಳು, ‘ಫಿಂಚ್’, ‘ಸ್ಪೈಸ್ ಫಿಂಚ್’, ‘ಬೆಂಜಲೇಸ್ ಫಿಂಚ್’, ‘ಡೈಮಂಡ್ ಡವ್’, ‘ಜಾವ ಸ್ಪೇರೊ’, ‘ಫ್ಯಾನ್ಸಿ ಬಡ್ರ್ಸ್’ ಹೆಸರಿನ ಹಕ್ಕಿಗಳು, ವಿವಿಧ ತಳಿಯ ಗಿಳಿಗಳು, ಬಾತುಕೋಳಿ, ವಿವಿಧ ಜಾತಿಯ ಪಾರಿವಾಳಗಳು ಇಲ್ಲಿವೆ.
 ಗ್ರಾಮೀಣ ಪ್ರದೇಶದಲ್ಲಿ ವಿದೇಶಿ ಪಕ್ಷಿಗಳಿಗೆ ನೆಲೆ ಕಲ್ಪಿಸಿಕೊಟ್ಟ ಗೌಡರೊಂದಿಗೆ ಹಕ್ಕಿಗಳು ಒಳ್ಳೆಯ ಸ್ನೇಹವನ್ನು ಹೊಂದಿದ್ದವು. ಹಾಗೂ ಅದನ್ನು ನೋಡಿ ಕಣ್ಣು ತುಂಬಿಸಿಕೊಳ್ಳುವವರ ಜೊತೆಗೆ ತನ್ನದೇ ಆದ ರೀತಿಯಲ್ಲಿ ಸ್ವಚ್ಛಂದ ಮಾತುಕತೆಯನ್ನು ನಡೆಸುತ್ತವೆ. ಬಣ್ಣ ಬಣ್ಣದ ಪಕ್ಷಿಗಳನ್ನು ಕಂಡಾಗ ಮನಸ್ಸು ಉಲ್ಲಾಸವಾಗುತ್ತದೆ. ಹಕ್ಕಿಗಳ ಮನೆ ಹೊಕ್ಕಾಗ ಅದರದ್ದೆ ಪ್ರಪಂಚವೆಂದು ತಿಳಿದು ಪಂಜರದೊಳಗೆ ಅತ್ತ ಇತ್ತ ಹಾರುತ್ತ, ಚಿಲಿಪಿಲಿ ಗುಟ್ಟುವ ವಿವಿಧ ಸ್ವರಗಳು ಕಿವಿಗೆ ಇಂಪು ನೀಡುತ್ತದೆ. 
  ಯಾವುದೇ ಒಂದು ಹೊಸ ತಳಿಯ ಹಕ್ಕಿಯನ್ನು ತಂದು ಸಾಕುವಲ್ಲಿ ಇವರು ನಿಪುಣರಾಗಿದ್ದರು. ಅದರ ಚಲವಲನವನ್ನು ದೀರ್ಘಕಾಲ ಗಮನಿಸುತ್ತಾ, ಅದು ಹೊಂದಾಣಿಕೆಯಾಗುವ ಪರಿಸರವನ್ನು ಅದಕ್ಕೆ ಒದಗಿಸಿಕೊಟ್ಟು ಅವುಗಳ ಆಹಾರ ಕ್ರಮಗಳನ್ನು ತಿಳಿದುಕೊಳ್ಳುತ್ತಾ, ಅದಕ್ಕೆ ಬೇಕಾಗುವ ಹಾಗೇ ವಾತಾವರಣವನ್ನು ಕಲ್ಪಿಸಿಕೊಡುತ್ತಾರೆ. 
 ಆಧುನಿಕ ಅಭಿವೃದ್ಧಿಯ ಭರಾಟೆಯಲ್ಲಿ ಅರಣ್ಯ ನಾಶ ಆಗುತ್ತಿರುವ ಈ ಕಾಲದಲ್ಲಿ ಮತ್ತು ಆಧುನಿಕ ತಂತ್ರಜ್ಞಾನದ ತರಂಗಾಂತರ ಪರಿಣಾಮದಿಂದಾಗಿ ಒಂದಷ್ಟು ಜಾತಿಯ ಹಕ್ಕಿಗಳು ಅವನತಿಯ ಅಂಚಿನತ್ತ ತಲುಪುತ್ತಿರುವ ಪಸ್ತುತ ದಿನಗಳಲ್ಲಿ ಪಕ್ಷಿಗಳನ್ನು ರಕ್ಷಿಸುವ ಕಾರ್ಯದಲ್ಲಿ ದಿನಕರ್ ಗೌಡರು ತೊಡಗಿರುವುದು ನಾವೆಲ್ಲಾ ಹೆಮ್ಮೆ ಪಡುವಂತದ್ದು. 
 ಈ ರೀತಿಯಾಗಿ ವಿವಿಧ ಪ್ರಯೋಗಗಳನ್ನು ನಡೆಸುತ್ತಿರುವ ಇವರ ಮನೆಗೆ ಹಲವಾರು ಶಾಲಾ ಕಾಲೇಜು ಹಾಗೂ ಇತರ ಜನರು ಇಲ್ಲಿಯ ವೀಕ್ಷಣೆಗೆ ಭೇಟಿಕೊಡುತ್ತಾರೆ. ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದಲೂ ಹಲವು ಅಧ್ಯಯನ ತಂಡಗಳು ಇಲ್ಲಿಗೆ ಬಂದು ಮಾಹಿತಿಯನ್ನು ಪಡೆದುಕೊಳ್ಳುತ್ತಿವೆ. 
  ವಿದ್ಯಾಭ್ಯಾಸ ಪಡೆದ ಮಕ್ಕಳು ಉದ್ಯೋಗಕ್ಕಾಗಿ ನಗರ ಕಡೆಗೆ ಕಾಲುಕೀಳುವ ಈ ಕಾಲದಲ್ಲಿ  ದಿನಕರ ಗೌಡರ ಒಬ್ಬ ಮಗ ಎಲ್.ಎಲ್.ಬಿ ಪದವೀಧರ ಹಾಗೂ ಇನ್ನೊಬ್ಬ ಪದವಿ ಶೈಕ್ಷಣಿಕ ಹಂತ ಪೂರೈಸಿದ್ದಾರೆ. ಇವರ ಇಬ್ಬರು ಮಕ್ಕಳು ಕೂಡ ಈ ಕೃಷಿ ಚಟುವಟಿಕೆಯಲ್ಲಿಯೇ ತೊಡಗಿಕೊಂಡು ತಂದೆಗೆ ಸಾಥ್ ನೀಡುತ್ತಿದ್ದಾರೆ.
 ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ದಿನಕರ ಗೌಡರು ತನ್ನ ಊರಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕಡಮ್ಮಾಜೆ ಗ್ರಾಮದ 3 ಕಿ.ಮೀ. ಉದ್ದದ ರಸ್ತೆ ನಿರ್ಮಾಣ, ಊರ ಶಾಲೆಗೆ ದೂರದಿಂದ ಬರುವ ಅಧ್ಯಾಪಕರಿಗೆ ವಸತಿ ಗೃಹ ನಿರ್ಮಾಣ, ಗ್ರಾಮಸ್ಥರಿಗೆ ಎಲ್ಲರಿಗೂ ಉಪಯೋಗವಾಗುವಂತೆ ಅಂಚೆ ಕಛೇರಿಯನ್ನು ಗ್ರಾಮದ ಮಧ್ಯ ಭಾಗಕ್ಕೆ ಸ್ಥಳಾಂತರ ಮಾಡಿದ್ದಾರೆ. ಪ್ರೌಢಶಾಲೆಯ ಸ್ಥಾಪನೆಗೆ ನಿವೇಶನದ ವ್ಯವಸ್ಥೆ, ಮೊಗ್ರು ಗ್ರಾಮದಲ್ಲಿ ದೂರವಾಣಿ ವಿನಿಮಯ ಕೇಂದ್ರ, ಊರಿಗೆ ಸರಕಾರಿ ಬಸ್ ವ್ಯವಸ್ಥೆ, ಕಾಲನಿಗಳ ಅಭಿವೃದ್ಧಿ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, ದುಶ್ಚಟಗಳ ವಿರುದ್ಧ ಮಹಿಳಾ ಜಾಗೃತಿ ಕಾರ್ಯಕ್ರಮ, ತ್ಯಾಜ್ಯ ಮುಕ್ತ ಮಾದರಿ ಗ್ರಾಮ, ಕುಟುಂಬಕ್ಕೊಂದು ಶೌಚಾಲಯ ನಿರ್ಮಾಣ, ಸಾಕ್ಷರತಾ ಯೋಜನೆಯಲ್ಲಿ ಮೇಲ್ವಿಚಾರಕರಾಗಿ  ಕಾರ್ಯನಿರ್ವಹಣೆ, ಸಾರ್ವಜನಿಕರಿಂದ ವಂತಿಗೆ ಸಂಗ್ರಹಣೆ ಮಾಡಿ 1.5 ಕಿ.ಮೀ. ಉದ್ದದ ರಸ್ತೆ ರಚನೆ ಹೀಗೆ ತಮ್ಮ ಗ್ರಾಮದ ಅಭಿವೃದ್ಧಿಗಾಗಿ ಇವರು ಸಾಕಷ್ಟು ಶ್ರಮವಹಿಸಿದ್ದಾರೆ. 

ತೆಂಗಿನ ಮರಕ್ಕೆ ಹತ್ತುವ ರೀತಿ, ಅಡಕೆ ಮರಕ್ಕೆ ಹತ್ತುವ ರೀತಿ ಹೀಗೆ ಎಲ್ಲಾ ಬಗೆಯ ಕೃಷಿಗಳ ಬಗ್ಗೆ, ಪ್ರಾಣಿ ಪಕ್ಷಿಗಳ ಬಗ್ಗೆ, ಮಣ್ಣಿನ ಬಗ್ಗೆ ವೈಜ್ಞಾನಿಕವಾದ ಇಂಚಿಂಚು ಮಾಹಿತಿಯನ್ನು ಹೊಂದಿದ್ದರು. ಅದೇ ರೀತಿ ಅದನ್ನು ವ್ಯವಸ್ಥಿತವಾಗಿ ಅವರು ಅಳವಡಿಸುತ್ತಾ ಒಬ್ಬ ಯಶಸ್ವಿ ಪ್ರಗತಿಪರ ಕೃಷಿಕನಾಗಿ, ವಿಚಾರ ಪರ ಚಿಂತಕನಾಗಿ ಹೆಸರುವಾಸಿಯಾಗಿದ್ದರು.

ಲಭಿಸಿದ ಪ್ರಶಸ್ತಿಗಳು

ಬದಲಾಯಿಸಿ
	ಇವರ ಈ ಸಾಧನೆಯನ್ನು ಗುರುತಿಸಿ 2011 ರಲ್ಲಿ ನಡೆದ ಬೆಳ್ತಂಗಡಿ ಸುದ್ದಿ ಬಿಡುಗಡೆ ವಾರ ಪತ್ರಿಕೆಯ ಬೆಳ್ಳಿಹಬ್ಬ ಸಮಾರಂಭ ‘ಸುದ್ದಿ 25 ಬೆಳ್ತಂಗಡಿ ಹಬ್ಬ’ದಲ್ಲಿ ಸಾಧಕ ಪ್ರಶಸ್ತಿ, ಮಂಜುಶ್ರೀ ಬೆಳ್ತಂಗಡಿಯಿಂದ ಸಾಧನಾ ಶ್ರೀ ಪ್ರಶಸ್ತಿ, ಸೇರಿದಂತೆ ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ, ಗೌರವಿಸಿವೆ. (ಸುದ್ದಿ ಬಿಡುಗಡೆ ಪತ್ರಿಕೆಯಿಂದ ಮಾಹಿತಿ). 
 ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಸಾವಯುವ ಕೃಷಿಕರಿಗೆ ನಷ್ಟವಾಗುತ್ತದೆ. ಹಳ್ಳಿಯಿಂದ ಪಟ್ಟಣಕ್ಕೆ ಹೋಗುವ ಅವಶ್ಯಕತೆ ಇಲ್ಲ. ಭೂಮಿಯನ್ನು ಹೊಂದಿರುವ ಜನ ಅದನ್ನು ಸದುಪಯೋಗಪಡಿಸಿಕೊಳ್ಳುವ ನಿಸರ್ಗಸ್ನೇಹಿ ತಂತ್ರಗಳನ್ನು ಅನುಸರಿಸಬೇಕು. ಅದರಿಂದ ಬೇಕಾದ ಸಂಪಾದನೆಯನ್ನು ಮಾಡಬಹುದು ಎಂಬ ವಿಚಾರ ಜನರಿಗೆ ತಿಳಿದು ಬರಲಿ ಎಂದು ದಿನಕರ್ ಗೌಡ ಹಾಗೂ ಅವರ ಮಕ್ಕಳು ಇದರಲ್ಲಿ ತೊಡಗಿದ್ದಾರೆ. ಈ ಹಾದಿಯಲ್ಲಿ ನಾನು ಕ್ರಮಿಸುತ್ತಿದ್ದೇನೆ ಎಂಬ ಬಗ್ಗೆ ಹೆಮ್ಮೆಯಿದೆ ಎನ್ನುತ್ತಾರೆ. ದಿನಕರಗೌಡರು.

ಉಲ್ಲೇಖಗಳು

ಬದಲಾಯಿಸಿ
  1. https://krishijagran.com/agripedia/least-investments-most-profits-poultry/
  2. http://www.horticulture.kar.nic.in/Design_final/RTI.htm/