Alakananda123456
ಹಳೇಬೀಡು
ಹೊಯ್ಸಳ ವಂಶ ಸುಮಾರು ಕ್ರಿ.ಶ. ೧೦೦೦ ದಿಂದ ಕ್ರಿ.ಶ. ೧೩೪೬ರ ವರೆಗೆ ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ (ಇಂದಿನ ಹಳೇಬೀಡು), ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, ಹೊಯ್ಸಳ ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ವ್ಯುತ್ಪತ್ತಿಯಾದದ್ದು. ಚಾರಿತ್ರಿಕವಾಗಿ ಈ ಸಂಸ್ಥಾಪಕನ ಹೆಸರು ನೃಪಕಾಮ ಎಂದು ಊಹಿಸಲಾಗಿದೆ.
ಹೊಯ್ಸಳೇಶ್ವರ ದೇವಸ್ಥಾನ ಹಳೇಬೀಡು ಶಿಲ್ಪಕಲೆಯ ನೆಲೆವೀಡು. ಹಳೆಯಬೀಡಿನ ಮೊದಲ ಹೆಸರು ದೋರಸಮುದ್ರ. ಕ್ರಿ.ಶ. 950ಕ್ಕೆ ಮೊದಲೇ ರಾಷ್ಟ್ರಕೂಟರ ದೊರೆ ಭಾವದೋರ ಎಂಬಾತ ಇಲ್ಲಿ ಕೆರೆಯನ್ನು ನಿರ್ಮಿಸಿ ರಾಜ್ಯಭಾರ ಮಾಡಿದ್ದರಿಂದ ಇದಕ್ಕೆ ದೋರಸಮುದ್ರ ಎಂದು ಹೆಸರು ಬಂದಿತ್ತು ಎನ್ನುತ್ತಾರೆ.ಹೆಸರು ಹಳೆಯ ಬೀಡಾದರೂ, ಇಲ್ಲಿನ ಶಿಲ್ಪಕಲೆಗಳು ನವನವೀನ, ನಿತ್ಯನೂತನ. ಹಳೆಯ ಬೀಡಿನಲ್ಲಿ ಹಲವಾರು ಅತ್ಯಂತ ಸುಂದರ ದೇಗುಲಯಗಳಿವೆಯಾದರೂ, ಅಲ್ಲಾಉದ್ದೀನನ ದಂಡನಾಯಕ ಮಲ್ಲಿಕ್ ಕಾಫೂರ್ ಸೇರಿದಂತೆ ಹಲವು ಮುಸಲ್ಮಾನ ದೊರೆಗಳ ದಾಳಿಯ ಬಳಿಕ ಈ ಹೊತ್ತು, ಸುಸ್ಥಿತಿಯಲ್ಲಿ ಉಳಿದಿರುವುದು ಹೊಯ್ಸಳೇಶ್ವರ ದೇವಾಲಯ ಮಾತ್ರ.. ಬೆಟ್ಟಗುಡ್ಡಗಳಿಂದಾವರಿಸಿ, ವಿಶಾಲ ಕಣಿವೆಗಳಿದ್ದ ಈ ರಮ್ಯತಾಣ ಮುಮ್ಮಡಿ ಬಲ್ಲಾಳನ ಕಾಲದಲ್ಲಿ ವಿಸ್ತಾರಗೊಂಡಿತು.
ನಿರ್ಮಾಣ ಇದು ಶಿವನ ಆಲಯ. ಇಲ್ಲಿಗೆ ಸಮೀಪದ ಘಟ್ಟದಹಳ್ಳಿಯಲ್ಲಿ ದೊರೆತಿರುವ ಶಾಸನವನ್ನು ಆಧರಿಸಿ ಈ ದೇವಾಲಯವನ್ನು ರಾಜ ವಿಷ್ಣುವರ್ಧನನ ಅಕಾರಿ ಅಥವಾ ದಂಡನಾಯಕ ಕೇತಮಲ್ಲ 1121ರಲ್ಲಿ ಕಟ್ಟಿಸಿಲು ಆರಂಭಿಸಿದ ಎಂದು ಹೇಳಲಾಗಿದೆ. ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ ಅಥವಾ ಬಲ್ಲಾಳ ಬಿಟ್ಟಿದೇವ. ಈತನ ನಂತರದ ಹೆಸರು ವಿಷ್ಣುವರ್ಧನ (ಆಡಳಿತ: ಸು ೧೧೧೦-೧೧೪೨). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯ ಅತ್ಯುನ್ನತ ಉದಾಹರಣೆಗಳು ಮೂಡಿಬಂದವು.
ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯದ ನಿರ್ಮಾಣ ಕಾರ್ಯವು ಸುಲಲಿತವಾಗಿ ಸಾಗಿದ್ದು ವಿಷ್ಣುವರ್ಧನನ ಅಂತ್ಯಕಾಲದಲ್ಲಿ. ಈತನ ಮಗನಾದ ನರಸಿಂಹ ಬಲ್ಲಾಳನ ಆಸಕ್ತಿಯಿಂದಾಗಿ ಮಹೋನ್ನತ ಕಲೆಯ ನೆಲವೀಡೊಂದು ರೂಪುಗೊಂಡಿತು. ದೇವಾಲಯದ ಮೂಲ ಸ್ವರೂಪವನ್ನು ಕಟ್ಟಲು ೪೦ ವರ್ಷಗಳು ಮತ್ತು ದೇವಾಲಯದ ಶಿಲ್ಪಕಲಾ ಕೆತ್ತನೆಯ ಕುಸುರಿ ಕೆಲಸವನ್ನು ಮುಗಿಸಲು ೧೨೦ ರುಷಗಳು (ನಾಲ್ಕು ತಲೆಮಾರುಗಳು)ಬೇಕಾದವು!. ವಿಷ್ಣುವರ್ಧನನ ಅಂತ್ಯಕಾಲದಲ್ಲಿ ಆರಂಭವಾಗುವ ದೇವಾಲಯದ ನಿರ್ಮಾಣ ಕಾರ್ಯವು ಹೊಯ್ಸಳರ ಕಡೆಯ ಅರಸ ವಿಶ್ವನಾಥ ಬಲ್ಲಾಳನ ಕಾಲದವರೆವಿಗೂ ಮುಂದುವರಿದಿತ್ತೆಂದು ಶಾಸನಗಳಿಂದ ತಿಳಿದುಬರುತ್ತದೆ.
ಈ ದೇವಾಲಯದ ನಿರ್ಮಾಣಕ್ಕೆ ಬಳಪದ ಕಲ್ಲು ಬಳಕೆಯಾಗಿದೆ. ಇದನ್ನು ಸೋಪಸ್ಟೋನ್ ಅಥವಾ ಸ್ಟಿಯೋಟೈಟ್ ಎಂದು ಕರೆಯಲಾಗುತ್ತದೆ. ಈ ಕಲ್ಲು ಬಹುವಾಗಿ ದೊರೆಯುವುದು ಭೂಮಿಯ ಒಳಭಾಗದ ಮೇಲ್ಪದರದಲ್ಲಿ. ಇದು ಪುಡಿ ಮತ್ತು ಉಂಡೆಯಂತಹ ರಚನೆಯನ್ನು ಹೊಂದಿರುತ್ತದೆ. ಹೊರತೆಗೆದು ವಾತಾವರಣಕ್ಕೆ ಹೊಂದಿಕೊಳ್ಳಲು ಬಿಟ್ಟಾಗ ಕ್ರಮೇಣ ಗತ್ಟಿಯಾಗುತ್ತದೆ. ಕಲ್ಲಿನ ಈ ವಿಶೇಷ ಗುಣದಿಂದಲೇ ಹೊಯ್ಸಳರ ದೇವಾಲಯಗಳಲ್ಲಿ ಸೂಕ್ಷ್ಮ ಕುಸುರಿ ಕೆತ್ತನೆಗಳನ್ನು ಕಾಣಲು ಸಾಧ್ಯವಾಗಿದೆ.
ಹೊಯ್ಸಳ ರಾಜವಂಶದ ಬಗೆಗೆ ಜನರಲ್ಲಿದ್ದ ಗೌರವ ಭಾವನೆಗಳೇ ಈ ದೇವಾಲಯದ ನಿರ್ಮಾಣಕ್ಕೆ ಕಾರಣ ಎನ್ನಲಾಗಿದೆ. ಹೊಯ್ಸಳ ವಂಶದ ಹೆಸರು ಅಜರಾಮರವಾಗಿ ಉಳಿಯಬೇಕೆಂಬ ಕಾರಣದಿಂದ ದೊಡ್ಡ ದೇವಾಲಯವನ್ನು ನಿರ್ಮಿಸಿ ಮೂಲ ಶಿವನ ಮೂರ್ತಿಗೆ ಹೊಯ್ಸಳ ವಂಶದ ಹೆಸರನ್ನೇ ಇಡಲಾಗಿದೆ. ಹೊಯ್ಸಳರ ಪ್ರಭುವೇ ಹೊಯ್ಸಳೇಶ್ವರ.