ಸದಸ್ಯ:2240558samarthrhombal/sandbox

ರಿಚರ್ಡ್ ಫಿಲಿಪ್ಸ್ ಫೇಯ್ನ್ಮನ್

ಬದಲಾಯಿಸಿ
 
ರಿಚರ್ಡ್ ಫಿಲಿಪ್ಸ್ ಫೇಯ್ನ್ಮನ್

ಕಳೆದ ನಾಲ್ಕೈದು ಸಾವಿರ ವರ್ಷಗಳ ಕಾಲದಲ್ಲಿ ವಿಜ್ಞಾನ ಕ್ಷೇತ್ರ ಕಂಡ ಬೆಳವಣಿಗೆ ಅಪಾರವಾದದ್ದು. ವಿಜ್ಞಾನದ ವಿಕಾಸಕ್ಕೆ ಕೊಡುಗೆ ನೀಡಿದವರು ಒಬ್ಬರೇ, ಇಬ್ಬರೇ? ಇದರ ಬೆಳವಣಿಗೆಯ ಹಿಂದೆ ದುಡಿದ ಅದೆಷ್ಟೋ ಮಹಾನ್ ವಿಜ್ಞಾನಿಗಳ ಪ್ರಶ್ನೆಗಳು, ಆ ಪ್ರಶ್ನೆಗಳಿಗಾಗಿ ಉತ್ತರ ಹುಡುಕಲು ಹೊರಟ ದಾರಿಗಳು, ಆ ದಾರಿಗಳಿಗೆ ಬೆಳಕು ಹಿಡಿದ ಜ್ಯೋತಿಗಳು... ಹೀಗೆ ಅನೇಕ ಪ್ರತಿಭೆಗಳು ಅನ್ವೇಷಣೆಯ ದಾರಿಯನ್ನು ಹಿಡಿದು ಹೊಸ ಆವಿಷ್ಕಾರವೊಂದನ್ನು ಮಾಡಿ ತಮ್ಮ ಗುರುತನ್ನು  ಇತಿಹಾಸದ ಪುಟಗಳಲ್ಲಿ ಅಚ್ಚೊತ್ತಿ ಹೋಗಿದ್ದಾರೆ. ಇವರೆಲ್ಲರೂ ಮಹಾನ್ ಜ್ಞಾನಿಗಳಾಗಿದ್ದರು ಹೌದು, ಆದರೆ ಇವರೆಲ್ಲರೂ ಒಳ್ಳೆಯ ಶಿಕ್ಷಕರಾಗಿದ್ದರೆ? ಸೂಕ್ಷ್ಮ ವಿಷಯಗಳನ್ನು ಬಿಡಿಸಿ ವಿವರಿಸುವಂತವರಾಗಿದ್ದರೆ? ಬಹಳಷ್ಟು ಮಂದಿ ವಿಜ್ಞಾನಿಗಳು ಉತ್ತಮ ನಿರೂಪಣೆ ಮಾಡುವವರಾಗಿರಲಿಲ್ಲ. ವಿಜ್ಞಾನ ಹಾಗೂ ಅದನ್ನು ಕಲಿಸುವ ಕಲೆ, ಇವೆರೆಡರ ಪಾಂಡಿತ್ಯವನ್ನು ಸಾಧಿಸಿದವರು ಬೆರಳೆಣಿಕೆಯಷ್ಟು. ಇಂತಹ ಹೆಸರಾಂತ ವ್ಯಕ್ತಿಗಳಲ್ಲಿ ರಿಚರ್ಡ್ ಫೇಯ್ನ್ಮನ್ ಕೂಡ ಒಬ್ಬರು.

ರಿಚರ್ಡ್ ಫೇಯ್ನ್ಮನ್ (ಮೇ ೧೧, ೧೯೧೮ - ಫೆಬ್ರವರಿ ೧೫, ೧೯೮೮) ವಿಜ್ಞಾನ ಹಾಗೂ ಶಿಕ್ಷಣದ ಗುಡಿಗಳಲ್ಲಿ ಹೆಜ್ಜೆಹೆಜ್ಜೆಗೂ ಕೇಳಿಬರುವ ಹಾಗೂ ಪ್ರತಿಧ್ವನಿಸುವ ಒಂದು ಹೆಸರು. ಭೌತಶಾಸ್ತ್ರಕ್ಕೆ ಇವರು ನೀಡಿರುವ ಕೊಡುಗೆ ಅಪಾರವಾದದ್ದು. ಕ್ವಾಂಟಮ್ ಭೌತಶಾಸ್ತ್ರ ಹಾಗೂ ಕ್ವಾಂಟಮ್ ಎಲೆಕ್ಟ್ರೋಡೈನಾಮಿಕ್ಸ್ ಕ್ಷೇತ್ರದ ದಿಕ್ಕನ್ನೇ ಬದಲಿಸಿ ಆ ವಿಷಯಗಳಿಗೆ ಹೊಸದೊಂದು ಅರ್ಥ ಕೊಟ್ಟ ಶ್ರೇಯ ಫೇಯ್ನ್ಮನ್ ರವರಿಗೆ ಸೇರತಕ್ಕದ್ದು. ಗಣಿತಕ್ಕೆ ಸಂಬಂಧಿಸಿದಂತೆ ಪರಮಾಣುಗಳು ಹಾಗೂ ಅವುಗಳ ಉಪ ತಳಿಗಳ ವರ್ತನೆಯ ವಿವರಣೆಯನ್ನು  ಚಿತ್ರಗಳ ಮುಖಾಂತರ ಅರ್ಥೈಸಿದ ಇವರ 'ಫೇಯ್ನ್ಮನ್ ರೇಖಾಚಿತ್ರಗಳು' ಗಣಿತವನ್ನು ಅರಿತು, ನೋಡಿ ತಿಳಿದು ಗ್ರಹಿಸುವ ದಾರಿಗೆ ಹೊಸದೊಂದು ಚೈತನ್ಯ ನೀಡಿದವು. ಇದಲ್ಲದೆ, ಫೇಯ್ನ್ಮನರ ವ್ಯಕ್ತಿತ್ವ, ಅವರ ಜ್ಞಾನ ಹಾಗೂ ಶೈಕ್ಷಣಿಕ ಮನೋಭಾವ ಅವರನ್ನು ಕೇವಲ ವಿಜ್ಞಾನಕ್ಕಷ್ಟೇ ಸೀಮಿತವಾಗದೆ ಜನಪ್ರಿಯ ಸಂಸ್ಕೃತಿಯಲ್ಲಿಯೂ ಹೆಸರು ತಂದು ಕೊಟ್ಟಿದೆ. ಭೌತಶಾಸ್ತ್ರವಷ್ಟೇ ಅಲ್ಲದೆ ನ್ಯಾನೋತಂತ್ರಜ್ಞಾನದ ಬೆಳವಣಿಗೆಯಲ್ಲಿಯೂ ತಮ್ಮ ಕೊಡುಗೆಯನ್ನು ನೀಡಿದರು.

ಬಾಲ್ಯ ಹಾಗು ಶಿಕ್ಷಣ

ಬದಲಾಯಿಸಿ

ರಿಚರ್ಡ್ ಫೇಯ್ನ್ಮನ್ ಅವರು ೧೯೧೮ರ ಮೇ ೧೧ರಂದು ಅಮೇರಿಕಾದ ನ್ಯೂ ಯಾರ್ಕ್ ಪಟ್ಟಣದಲ್ಲಿ ಲುಸಿಲ್ಲ್ ಹಾಗೂ ಮೇಲ್ವಿಲ್ಲ್ ದಂಪತಿಗೆ ಜನಿಸಿದರು. ಫೇಯ್ನ್ಮನ್ ಅವರ ತಂದೆಯ ಕುಟುಂಬದವರು ಅಂದು ಯು.ಎಸ್.ಎಸ್.ಆರ್ ನ (ರಷ್ಯಾ) ಸಾಮ್ರಾಜ್ಯದ ಭಾಗವಾಗಿದ್ದ ಬೆಲಾರಸ್ ದೇಶದ ಮಿನ್ಸ್ಕ್ ಎಂಬ ಪಟ್ಟಣದಿಂದ ಅಮೇರಿಕಾ ದೇಶಕ್ಕೆ ವಲಸೆ ಬಂದಿದ್ದರು. ಇತ್ತ, ಅವರ ತಾಯಿಯ ಕುಟುಂಬದವರು ಪೋಲ್ಯಾಂಡ್ ದೇಶದಿಂದ ಅಮೇರಿಕಾ ದೇಶಕ್ಕೆ ವಲಸೆ ಬಂದಿದ್ದರು.

ಪುಟ್ಟ ಫೇಯ್ನ್ಮನ್ ಗೆ ಬಾಲ್ಯದಿಂದಲೂ ವಿಜ್ಞಾನದ ಹುಚ್ಚು. ಕುತೂಹಲಕಾರಿ ಮನಸ್ಸನ್ನು ಅರಿತ ಅವರ ತಂದೆ -ತಾಯಿ ಇಬ್ಬರು ತಮ್ಮ ಮಗನ ಪ್ರಶ್ನಾರ್ಥಕ ಹಾಗೂ ಕುತೂಹಲಕಾರಿ ವ್ಯಕ್ತಿತ್ವವನ್ನು ಪ್ರೋತ್ಸಾಹಿಸಿದರು. ಫೇಯ್ನ್ಮನ್ ಗೆ ಒಬ್ಬ ತಂಗಿಯಿದ್ದಳು. ಆಕೆಯ ಹೆಸರು ಜೋನ್. ಈಕೆಯ ಮೊದಲು ಹುಟ್ಟಿದ್ದ ಮತ್ತೊಬ್ಬ ತಮ್ಮ ಹೆನ್ರಿ ನಾಲ್ಕು ವಾರದ ಕೂಸು ಆಗಿದ್ದಾಗಲೇ ಸತ್ತಿದ್ದ. ತನ್ನ ತಂಗಿಯೊಡನೆ ಮನೆಯಲ್ಲಿಯೇ ಪುಟ್ಟದೊಂದು 'ಪ್ರಯೋಗಾಲಯ' ತೆರೆದ ಫೇಯ್ನ್ಮನ್ ತನ್ನ ವಿಜ್ಞಾನದ ಮನಸ್ಸನ್ನು ಅಲ್ಲಿ ಪೋಷಿಸಿ ಬೆಳೆಸಲು ಶುರು ಮಾಡಿದರು. ಅಲ್ಲಿ ಇಲ್ಲಿ ಬಿದ್ದ ಚಿಕ್ಕ ಮೋಟಾರ್ ಹಾಗೂ ಬಲ್ಬುಗಳು, ರೇಡಿಯೋ ತಂತಿಗಳು, ಕಬ್ಬಿಣದ ತುಂಡುಗಳು, ಹಳೆಯದೊಂದು ಸೂಕ್ಷ್ಮದರ್ಶಕ ಹಾಗೂ ಕಡ್ಡಿ ಪಟ್ಟಣಗಳು ಇವರ 'ಪ್ರಯೋಗಾಲಯ'ದ ಮೂಲ ವಸ್ತುಗಳು. ಕುತೂಹಲವು ನೀಡುವ ನಿರ್ದೇಶನಗಳನ್ನು ಬೆನ್ನಟ್ಟಿ ಹೋದ ಫೇಯ್ನ್ಮನ್ ಆಗಾಗ ತನ್ನ ಮನೆಯ ರೇಡಿಯೋ ಯಂತ್ರವನ್ನು ಸಂಪೂರ್ಣವಾಗಿ ಬಿಚ್ಚಿ, ಮತ್ತೆ ತಾನೇ ಖುದ್ದಾಗಿ ಅದನ್ನು ಜೋಡಿಸಿ ಕೆಲಸ ಮಾಡುವಂತೆ ಮಾಡುತ್ತಿದ್ದ. ಆ ಪುಟ್ಟ ಪ್ರತಿಭೆಯು ಇತರರ ಮನೆಗೆ ಹೋಗಿ ಅಲ್ಲಿ ಪಾಳುಬಿದ್ದ ರೇಡಿಯೋವನ್ನು ಸರಿಗೊಳಿಸಿ ಹಿರಿಯರು ನಿಬ್ಬೆರಗಾಗುವಂತ ಮಾಡುತ್ತಿದ್ದ.

ಫಾರ್ ರಾಕವೇ ಹೈ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಫೇಯ್ನ್ಮನ್ ಗಣಿತದಲ್ಲಿ ಹಾಗೂ ವಿಜ್ಞಾನದ ವಿಷಯಗಳಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಹೊರಬಂದರು. ೧೯೩೫ರಲ್ಲಿ ಫೇಯ್ನ್ಮನ್ ಮಸಾಚುಸೆಟ್ಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂ.ಐ.ಟಿ)ಗೆ ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಪಡೆಯಲು ಸೇರಿದರು. ಭೌತಶಾಸ್ತ್ರವನ್ನು ತಮ್ಮ ಪ್ರಮುಖ ವಿಷಯವಾಗಿ ಆಯ್ದುಕೊಂಡರು. ಅಲ್ಲಿದ್ದ ಅನೇಕರಿಗೆ ಗಣಿತವು ಹೆಮ್ಮಾರಿಯಾಗಿ ಕಾಡುತ್ತಿದಾಗ ಇವರು ಗಣಿತವನ್ನು ಒಂದು ಆನಂದದಾಯಕ ಹವ್ಯಾಸವಾಗಿ ಕಾಣುತ್ತಿದ್ದರು.

ಲಾಸ್ ಅಲಾಮೋಸ್ ನಲ್ಲಿ ಫೇಯ್ನ್ಮನ್

ಬದಲಾಯಿಸಿ
 
ಲಾಸ್ ಅಲಾಮೋಸ್ ನಲ್ಲಿ ಫೇಯ್ನ್ಮನ್

ಪರ್ಲ್ ಹಾರ್ಬರಿನ ಮೇಲೆ ಜಪಾನ್ ದೇಶವು ದಾಳಿಯನ್ನು ಎಸಗಿದ ನಂತರ ಮಹಾಯುದ್ಧದ ರಣರಂಗಕ್ಕೆ ಇಳಿದ ಅಮೇರಿಕಾ ಕೂಡಲೇ ಅಣು ಬಾಂಬಿನ ಉತ್ಪಾದನೆಯಲ್ಲಿ ಕಾರ್ಯನಿರತರಾದರು. ೧೯೪೩ರ ಮೊದಲಾರ್ಧದಲ್ಲಿ ರಾಬರ್ಟ್ ಒಪೆನ್ಹೈಮರ್ ಮೆಕ್ಸಿಕೋ ದೇಶದಲ್ಲಿ 'ಲಾಸ್ ಅಲಾಮೋಸ್' ಎಂಬ ಗೌಪ್ಯ ಪ್ರಯೋಗಾಲಯವೊಂದನ್ನು ಸ್ಥಾಪಿಸುತ್ತಿದ್ದರು. ಇನ್ನೂ ವಿದ್ಯಾಭ್ಯಾಸ ನಡೆಸುತ್ತಿದ್ದ ಫೇಯ್ನ್ಮನ್ ತಮ್ಮ ಸಂಶೋಧನೆಗೆ ಬೇಕಾದ ಕಾರ್ಯಗಳನ್ನು ನಡೆಸುವ ಸಂದರ್ಭದಲ್ಲಿ ಅಣು ಬಾಂಬಿನ ತಯಾರಿಕೆಗೆ ಸಂಬಂಧಿಸಿದಂತೆ ಸಹಾಯ ಒಡ್ಡಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ದೇಶದ ಸೇವೆಯಲ್ಲಿ ಭಾಗಿಯಾಗುವ ಅವಕಾಶ ನೀಡುಲಾಗುತ್ತದೆ ಎಂಬ ಪ್ರಸ್ತಾಪವು ಒಪೆನ್ಹೈಮರ್ ಕಡೆಯಿಂದ ಮಾಡಲಾಯಿತು.

ಇಪ್ಪತ್ತರ ಹರೆಯದಲ್ಲಿದ್ದ ಫೇಯ್ನ್ಮನ್ ಗೆ ಇದೊಂದು ದೊಡ್ಡ ಅವಕಾಶ. ತನ್ನ ಅತ್ಯಂತ ಪ್ರಿಯವಾದ ಕ್ಷೇತ್ರದಲ್ಲಿ ಕೆಲಸ ಹಾಗೂ ದೇಶದ ಸೇವೆ ಎರಡು ಒಟ್ಟಿಗೆ ಬಂದ ಪ್ರಸ್ತಾಪವನ್ನು ಮನಪೂರ್ವಕವಾಗಿ ಒಪ್ಪಿ ಆಗಷ್ಟೇ ವಿವಾಹ ಜೀವನಕ್ಕೆ ಕಾಲಿಟ್ಟಿದ್ದ ತನ್ನ ಮಡದಿ ಆರ್ಲಿನ್ ಜೊತೆ ಮೆಕ್ಸಿಕೋಗೆ ತೆರಳಿದರು. ರಾಬರ್ಟ್ ಒಪೆನ್ಹೈಮರ್ ಅವರ ನಾಯಕತ್ವದಲ್ಲಿ ನಿರ್ಮಿಸಲಾಗುತ್ತಿದ್ದ ಅಣು ಬಾಂಬಿನ ತಯಾರಿಕೆಯಲ್ಲಿ ಸೇರಿದರು. ಪ್ರಾಯೋಗಿಕ ಕೆಲಸಕ್ಕೆ ಸಂಬಂಧಿಸಿದಂತೆ ಇನ್ನೂ ಅಷ್ಟು ಅನುಭಾವಿಯಲ್ಲದ ಫೇಯ್ನ್ಮನ್ ಗೆ ಮೊದಮೊದಲು ಕೇವಲ ಗಣಿತದ ಲೆಕ್ಕಾಚಾರದ ಕೆಲಸವನ್ನು ನೀಡಲಾಯಿತು. ಅಲ್ಲಿ ಅನೇಕ ವಿಭಾಗಗಳಿದ್ದವು ಮತ್ತೂ ಒಂದೊಂದು ವಿಭಾಗಕ್ಕೂ ಒಬ್ಬೊಬ್ಬ ವಿಜ್ಞಾನಿಯ ನಾಯಕತ್ವವಿತ್ತು. ಹಾನ್ಸ್ ಬೇತ ಎಂಬ ವಿಜ್ಞಾನಿಯ ಅಡಿಯಲ್ಲಿ ಫೇಯ್ನ್ಮನ್ ಗೆ ಕೆಲಸ ಮಾಡುವ ಅವಕಾಶ ಲಭಿಸಿತು. ತನ್ನ ಚಾಲಾಕಿತನ ಹಾಗೂ ವಿಜ್ಞಾನಿಕ ಕೌಶಲ್ಯಗಳ ಮೂಲಕ ಬೇತ ಅವರ ಮನಗೆದ್ದು ಪುಟ್ಟ ಗುಂಪೊಂದರ ನಾಯಕನಾಗಿ ನಂತರ ತಾನು ಹಾಗೂ ತನ್ನ ಇತರ ಮಿತ್ರರಂತೆ ವಿದ್ಯಾರ್ಥಿಗಳನ್ನು ದೇಶದ ಸೇವೆಗೆ ಎಂದು ಕರೆಸಿದ್ದ ನೂರಾರು ಹೆಣ್ಣುಮಕ್ಕಳ ಒಂದು ತಂಡವನ್ನು ನಡೆಸಲು ನೇಮಿಸಲಾಯಿತು.

ಓಡಾಟದೊಂದಿಗೆ ಮೂಜಿನಾಟ

ಬದಲಾಯಿಸಿ

ಬೇತ ಮತ್ತು ಫೇಯ್ನ್ಮನ್ ಸೇರಿ ಬಾಂಬಿನ ಉತ್ಪಾದನ ಶಕ್ತಿಯನ್ನು ಕಂಡುಹಿಡಿಯಲು 'ಬೇತ - ಫೇಯ್ನ್ಮನ್' ಸೂತ್ರವನ್ನು ಮುಂದಿಡುತ್ತಾರೆ. ಗಣಕಯಂತ್ರಕ್ಕೆ ಸೇರಿದ ಅನೇಕ ಸಮಸ್ಯೆಗಳನ್ನು ಬಗೆಹರಿಸುವುದರಿಂದ ಹಿಡಿದು ಅವುಗಳಿಗೆ ಸಂಬಂಧಿಸಿದ ಸುಮಾರು ಹೊಸ ತಂತ್ರಗಳನ್ನು ಅರಿತ ಕೆಲವರಲ್ಲಿ ಒಬ್ಬರಾದುದರಿಂದ ವಿವಿಧ ತಂತ್ರಾಂಶಗಳ ಆವಿಷ್ಕಾರಗಳನ್ನು ಫೇಯ್ನ್ಮನ್ ಮಾಡುವಲ್ಲಿ ಯಶಸ್ವಿಯಾಗುತ್ತಾರೆ.

ಇಲ್ಲಿ ಕೊಂಚ ಕಾಲ ಕೆಲಸ ಮಾಡಿದ ನಂತರ ಇವರನ್ನು ಟೆನ್ನೆಸ್ಸೇಯಲ್ಲಿನ 'ಕ್ಲಿನ್ಟನ್ ಇಂಜಿನಿಯರ್ ವರ್ಕ್ಸ್' ಎಂಬ ಕಾರ್ಯಗ್ರಹಕ್ಕೆ ಕಳುಹಿಸಿ, ಅಲ್ಲಿ ಅಪಘಾತಗಳ ಕಾಲದಲ್ಲಿ ಸುರಕ್ಷಿತವಾಗಿರಲು ನಿರಪದ ವಿಧಾನಗಳನ್ನು ರೂಪಿಸಿ ಮತ್ತೆ ಲಾಸ್ ಅಲಾಮೋಸ್ ಗೆ ಹಿಂದಿರುಗಿದರು. ಇಲ್ಲಿ ಅವರಿಗೆ ನೀಲ್ಸ್ ಬೋರ್ ರಂತಹ ಮಹಾಶಯಗಳ ಭೇಟಿ ಆಗುತ್ತದೆ. ತಮಗಿಂತಲೂ ವಯಸ್ಸು ಹಾಗೂ ಅನುಭವದಲ್ಲಿ ದೊಡ್ಡವರಾಗಿದ್ದರು, ಫೇಯ್ನ್ಮನ್ ಭೋತಾಶಾಸ್ತ್ರದ ಚರ್ಚೆಗಿಳಿದರೆ ತನ್ನ ಮುಂದಿರುವವರನ್ನು ಮರೆತು ತನಗೆ ತೊಚಿದ ಮಾತುಗಳನ್ನೇ ಆಡುತ್ತಿದ್ದರು. ತಪ್ಪು ಕಂಡಲ್ಲಿ ಅದನ್ನು ಹಿಡಿದು ಬೋರ್ ಕಂಡುಹಿಡಿದ ಸೂತ್ರಗಳನ್ನು ಮತ್ತೊಮ್ಮೆ ಅವರೇ ಪರಿಶೀಲಿಸುವಂತೆ ಮಾಡುವ ತುಂಟಾಟಿಕೆ ಹಾಗೂ ಜಾಣರಾದ ಫೇಯ್ನ್ಮನ್ ಲಾಸ್ ಅಲಾಮೋಸ್ ನಲ್ಲಿ ಕಳೆದ ಎರಡು ವರ್ಷಗಳಲ್ಲಿ ಅನೇಕ ವಿಷಯಗಳನ್ನು ಕಲಿತರು, ಇತರರಿಗೆ ಕಲಿಸಿದರು.

ಇದರ ನಡುವೆ ದುರಾದೃಷ್ಟವಶಾತ್ ತಮ್ಮ ಮಡದಿಯನ್ನು ಕ್ಷಯರೋಗಕ್ಕೆ (ಟ್ಯೂಬರ್ಕ್ಯೂಲೋಸಿಸ್) ಕಳೆದುಕೊಂಡರು.

ಕಾರ್ನೆಲ್ ದಿನಗಳು

ಬದಲಾಯಿಸಿ
 
ಫೇಯ್ನ್ಮನ್ ರೇಖಾಚಿತ್ರ

ಹೆಂಡತಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ಫೇಯ್ನ್ಮನ್ ಅವರಿಗೆ ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕನ ಹುದ್ದೆ ಲಭಿಸಿತು. ಕಾರ್ನೆಲ್ ನಲ್ಲಿ ಐದು ವರ್ಷ ಕಳೆದ ಫೇಯ್ನ್ಮನ್ ತಮ್ಮ ವೃತ್ತಿ ಜೀವನದ ಶ್ರೇಷ್ಠ ಸಾಧನೆಗಳನ್ನು ಮಾಡಿದರು. ತಾವು ವಿಜ್ಞಾನಕ್ಕೆ ನೀಡಿದ ಬಹು ದೊಡ್ಡ ಕೊಡುಗೆಗಳು ಕಾರ್ನೆಲ್ ನಲ್ಲಿ ಕಳೆದ ದಿನಗಳಲ್ಲಿಯೇ ಬಂದದ್ದು. ಭೌತಶಾಸ್ತ್ರದ ಹಲವಾರು ಕ್ಷೇತ್ರಗಳಿಗೆ, ಮುಖ್ಯವಾಗಿ ಕ್ವಾಂಟಮ್ ಭೌತಶಾಸ್ತ್ರ ಹಾಗೂ ಕ್ವಾಂಟಮ್ ಎಲೆಕ್ಟ್ರೋಡೈನಾಮಿಕ್ಸ್ ನಲ್ಲಿ ಮಾಡಿದ ಹೊಸ ಅನ್ವೇಷಣೆಗಳು ಫೇಯ್ನ್ಮನರ ಖ್ಯಾತಿಯನ್ನು ಹೆಚ್ಚು ಮಾಡಿತು. ಬೆಳಕು, ಅದರ ಲಕ್ಷಣಗಳು ಹಾಗು ವಸ್ತುಗಳ ಜೊತೆ ಅದರ ಪರಸ್ಪರ ವರ್ತನೆಯನ್ನು ಪರಮಾಣುಗಳ ಮಟ್ಟದಲ್ಲಿ ವಿವರಿಸಿದ ಫೇಯ್ನ್ಮನ್ ಇದರ ಮೊದಲು ಮತ್ತಾರೂ ಅರಿಯದ ವಿಷಯಗಳನ್ನು ಜಗತ್ತಿಗೆ ಸುಲಭವಾಗಿ ತಿಳಿಸಿಕೊಟ್ಟರು. ಕ್ವಾಂಟಮ್ ಭೌತಶಾಸ್ತ್ರದಲ್ಲಿ ಹೊಸ ಹೊಸ ಪರಿಕಲ್ಪನೆಗಳು ಹೊರಬರುತ್ತಿದ್ದ ಆ ಕಾಲದಲ್ಲಿ ಅನೇಕರಿಗೆ ಅಣುಗಳನ್ನು ಮತ್ತು ಅದರ ವರ್ತನೆಯನ್ನು ಚಿತ್ರೀಕರಿಸಲು ಕಷ್ಟವಾಗುತ್ತಿತ್ತು. ಇಂತಹ ಸೂಕ್ಷ್ಮವಾದ ವಿಚಾರಗಳನ್ನು ಚಿತ್ರದ ಮೂಲಕ ಮುಂದಿಡುವುದು ಸುಲಭವಲ್ಲ. ಆದರೆ ಫೇಯ್ನ್ಮನ್ ರ ಸೃಜನಶೀಲತೆಗೆ ಯಾವುದು ತಾನೇ ಸಾಧ್ಯವಿಲ್ಲ? ಅವರು 'ಫೇಯ್ನ್ಮನ್ ರೇಖಾಚಿತ್ರಗಳು' ಎಂಬ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿದಾಗ ಇಡೀ ವಿಜ್ಞಾನದ ಸಮೂಹವೇ ಬೆರಗಾಯಿತು. ಈ ರೇಖಾಚಿತ್ರಗಳ ಮೂಲಕ ಸಣ್ಣ ಕಣಗಳ ಪರಸ್ಪರ ವರ್ತನೆಯನ್ನು ಗಣಿತದ ಲೆಕ್ಕಗಳ ಮೂಲಕ ನಿಖರವಾದ ಮೌಲ್ಯಗಳನ್ನು ಪಡುಯುವಲ್ಲಿ ಸಾಧ್ಯವಾಯಿತು.

ನೊಬೆಲ್ ಪ್ರಶಸ್ತಿಯ ಒಡೆಯ

ಬದಲಾಯಿಸಿ

ವಿಜ್ಞಾನದ ಕ್ಷೇತ್ರದಲ್ಲಿ ಆಗ ತಾನೇ ಪುಟಿದೇಳುತ್ತಿದ್ದ ಕ್ವಾಂಟಮ್ ಎಲೆಕ್ಟ್ರೋಡೈನಾಮಿಕ್ಸ್ ಎಂಬ ಹೊಸ ವರ್ಗದ ಬೆಳಯಣಿಗೆಯಲ್ಲಿ ಫೇಯ್ನ್ಮನ್ ಪಾತ್ರ ವಹಿಸಿದಷ್ಟು ಮತ್ತಾರೂ ಮಾಡಿಲ್ಲ. ಅಣು - ಕಣಗಳು ವಿದ್ಯುತ್ಕಾಂತೀಯ ಕ್ಷೇತ್ರದಲ್ಲಿ, ಬೆಳಕಿನ ಅಡಿಯಲ್ಲಿ ಮತ್ತು ಪರಸ್ಪರ ತಮ್ಮ ನಡುವೆ ಹೇಗೆ ವರ್ತಿಸುತ್ತವೆ ಎಂಬ ಲಕ್ಷಣಗಳನ್ನು ವಿಶೇಷವಾಗಿ ಅಧ್ಯಯನ ಮಾಡುವ ಈ ಕ್ಷೇತ್ರವು 'ಫೇಯ್ನ್ಮನ್ ರೇಖಾಚಿತ್ರಗಳ' ಪರಿಚಯದೊಂದಿಗೆ ಹೊಸ ಚೈತನ್ಯ ಹಾಗು ಬೆಳವಣಿಗೆಯನ್ನು ಕಂಡಿತು. ವಿದ್ಯುತ್ಕಾಂತೀಯ ಪ್ರಭಾವದ ಮೇಲೆ ಬದಲಾಗುವ ಅಣು - ಕಣಗಳ ವರ್ತನೆಯ ಸುತ್ತ ಹೆಣೆದ ಸಿದ್ಧಾಂತಕ್ಕಾಗಿ ಮತ್ತು ತಾವು ಕ್ವಾಂಟಮ್ ಭೌತಶಾಸ್ತ್ರ ಹಾಗೂ ಕ್ವಾಂಟಮ್ ಎಲೆಕ್ಟ್ರೋಡೈನಾಮಿಕ್ಸ್ ಕ್ಷೇತ್ರಕ್ಕಾಗಿ ನೀಡಿದ ಅಪಾರ ಕೊಡುಗೆಗಳನ್ನು ಗುರುತಿಸಿ 'ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್' ಇವರಿಗೆ ೧೯೬೫ರಲ್ಲಿ ಭೌತಶಾಸ್ತ್ರದ ಕ್ಷೇತ್ರದ ಅಡಿಯಲ್ಲಿ ಮಾಡಿದ ಸಾಧನೆಗೆ ಶಿನ್'ಇಚಿರೋ ತೊಮನಗ ಹಾಗೂ ಜೂಲಿಯಾನ್ ಶ್ವಿನ್ಗರ್ ಅವರೊಡನೆ ಫೇಯ್ನ್ಮನ್ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕ್ಯಾಲ್ಟೆಕ್ ನಲ್ಲಿ ಒಬ್ಬ ಮೇಧಾವಿ

ಬದಲಾಯಿಸಿ

ಕಾರ್ನೆಲ್ ನಲ್ಲಿ ಐದು ವರ್ಷಗಳ ಕಾಲ ಕಳೆದು ನಂತರ ಬ್ರಜಿಲ್ ನ ರಿಯೋ ಡಿ ಜನೈರೋ ಪಟ್ಟಣಕ್ಕೆ ಹೋದರು. ಶೀತಲ ಸಮರದ ಭಯದಲ್ಲಿದ್ದ ದೇಶಗಳು ಆಗ ಒಪ್ಪಂದಗಳು ಹಾಗೂ ಶಾಂತಿಯನ್ನು ಸಾರುವ ವಾದದಲ್ಲಿ ಅಧಿಕಾರ ನಡೆಸುತ್ತಿದ್ದವು. ರಿಯೋ ದಲ್ಲಿ ಸ್ವಲ್ಪ ಸಮಯ ಕಳೆದು ನಂತರ ಫೇಯ್ನ್ಮನ್ ಕಾರ್ನೆಲ್ ಗೆ ತೆರಳದೇ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಕ್ಯಾಲ್ಟೆಕ್)ಯ ಸದಸ್ಯರಾಗಿ ಸೇರಿದರು. ೧೯೫೦ರಿಂದ ತಮ್ಮ ಜೀವನದ ಕೊನೆಯ ದಿನಗಳವರೆಗೂ ಈ ಸಂಸ್ಥೆಯೊಂದಿಗೆ ಅವರ ಒಡನಾಟವಿತ್ತು. ಇಲ್ಲಿ ತಾವು ಅನೇಕ ಉಪನ್ಯಾಸಗಳನ್ನು ನೀಡಿ ಒಬ್ಬ ಪ್ರತಿಷ್ಠಿತ ಶಿಕ್ಷಕರಾಗಿ ಗುರುತಿಸಿಕೊಂಡರು. ನೊಬೆಲ್ ಪ್ರಶಸ್ತಿ ಬಂದ ತದನಂತರದಲ್ಲಿ ಇವರ ಖ್ಯಾತಿಯನ್ನು ಸರಿಗಟ್ಟಲು ಸಮನಾರೂ ಇರಲಿಲ್ಲ. ತಾವು ನೀಡುವ ಉಪನ್ಯಾಸಗಳಿಂದ ಪ್ರೇರಿತಗೊಂಡು ಅನೇಕ ವಿದ್ಯಾರ್ಥಿಗಳು ಭೌತಶಾಸ್ತ್ರದ ಕಡೆ ಮುಖ ಮಾಡಿದರು. ಗಣಿತವನ್ನು ಒಂದು ಕಲೆಯನ್ನಾಗಿ ಬಿಂಬಿಸಿ ಅದನ್ನು ಕಾವ್ಯದಂತೆ ಹೇಳಿಕೊಡುವ ಅವರ ಶೈಲಿಯು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಈ ಸಮಯದಲ್ಲಿ ಅನೇಕ ಪುಸ್ತಕಗಳನ್ನು ಬರೆದ ಫೇಯ್ನ್ಮನ್ ತಮ್ಮ ಬರವಣಿಗೆಯ ಮುಖಾಂತರ ಸಾಮಾನ್ಯ ಜನರ ಮನಸ್ಸಿಗೂ ಹತ್ತರರಾದರು.

ವೈವಾಹಿಕ ಜೀವನ

ಬದಲಾಯಿಸಿ

ಇದರ ನಡುವೆ ಮೇರಿ ಲೂಯಿಸ್ ಬೆಲ್ ಎಂಬ ಇತಿಹಾಸದ ಶಿಕ್ಷಕಿಯೊಬ್ಬರನ್ನು ಮದುವೆಯಾಗಿ ಕೆಲವು ವರ್ಷಗಳ ನಂತರ ಮನಃಸ್ತಾಪಗಳ ಕಾರಣದಿಂದಾಗಿ ಅವರಿಂದ ವಿಚ್ಛೆದನ ಪಡೆದರು. ನಂತರ ಫೇಯ್ನ್ಮನ್ ತಮ್ಮ ಮೂರನೆಯ ಹಾಗು ಕೊನೆಯ ಮದುವೆಯನ್ನು ಗ್ವೆನೆತ್ ಹಾವರ್ತ್ ಅವರೊಂದಿಗೆ ೧೯೬೦ರಲ್ಲಿ ಮಾಡಿಕೊಂಡರು.

ಹವ್ಯಾಸಗಳು

ಬದಲಾಯಿಸಿ
 
ಫೇಯ್ನ್ಮನ್ ನುಡಿಸುತ್ತಿದ್ದ ಚರ್ಮದ ವಾದ್ಯ

ಫೇಯ್ನ್ಮನ್ ಪ್ರಯೋಗಿಸದ ಕ್ಷೇತ್ರವಿಲ್ಲ, ಅವರು ಯತ್ನಿಸಿದ ಕಾರ್ಯಗಲಿಲ್ಲ. ಸಂಗೀತದ ಮೇಲೆ ಭಾರಿ ಒಲವನ್ನು ಬೆಳೆಸಿಕ್ಕೊಂಡಿದ್ದ ಫೇಯ್ನ್ಮನ್ ರಿಗೆ ವಾದ್ಯಗಳನ್ನು ನುಡಿಸುವ ಹುಚ್ಚು, ಅದರಲ್ಲೂ ಬೊಂಗೋ ಎಂಬ ಚರ್ಮ ವಾದ್ಯವನ್ನು ನುಡಿಸುವ ಆಸಕ್ತಿ. ಇದರಲ್ಲೂ ಪ್ರಾವಿಣ್ಯತೆ ಪಡೆದ ಈ ಹುಚ್ಚು ವಿಜ್ಞಾನಿಗೆ ಸಂಗೀತ ಹಾಗೂ ವಿಜ್ಞಾನದ ಸಂಗಮ ನೀಡುತ್ತಿದ್ದ ಆನಂದ ಅಪಾರವಾದದ್ದು ಎಂದು ಅನೇಕ ಭಾರಿ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಇದಲ್ಲದೆ ಫೇಯ್ನ್ಮನ್ ಒಬ್ಬ ಅದ್ಭುತ ಕಲಾವಿದ. ತಮ್ಮ ಮನೆಯ ಬಳಿ ಇದ್ದ ಒಬ್ಬ ಕಲಾವಿದನೊಂದಿಗೆ ಸ್ನೇಹ ಬೆಳೆಸಿ ತದನಂತರ ವಾರಕ್ಕೊಮ್ಮೆ ಭೇಟಿಯಾಗಿ ಒಂದು ಘಂಟೆಗಳ ಕಾಲ ಇಬ್ಬರು ತಮ್ಮ ತಮ್ಮ ಕ್ಷೇತ್ರದಲ್ಲಿ ತಾವು ಅರಿತ ಜ್ಞಾನವನ್ನು ಎದುರಿನವರಿಗೆ ಹಂಚಿ, ಅವರ ಜ್ಞಾನವನ್ನು ತಾವು ಕಲಿಯುವ ಒಪ್ಪಂದ ಮಾಡಿಕೊಂಡರು. ಹೀಗೆ ಫೇಯ್ನ್ಮನ್ ಚಿತ್ರಗಳನ್ನು ಬಿಡಿಸುವ ಕಾಯಕಕ್ಕೆ ಕೈ ಹಾಕಿದರು, ಹಾಗೆಯೇ ಕಲಾವಿದನೊಬ್ಬನಿಗೆ ವಿಜ್ಞಾನದ ಜಗತ್ತನ್ನು ಪರಿಚಯಿಸಿದರು. ಫೇಯ್ನ್ಮನ್ ಗೆ ಲಾಕರ್ ಹಾಗೂ ಬೀಗಗಳನ್ನು ಒಡೆಯುವ ವಿಚಿತ್ರ ಹವ್ಯಾಸವೊಂದಿತ್ತು. ವಿಚಿತ್ರವೆನಿಸಿದರು ಇದು ತಮಗೆ ಸಮಸ್ಯೆ ಪರಿಹಾರ ಮಾಡುವಲ್ಲಿ ಪ್ರಯೋಜನಕಾರಿ ಎಂದು ಹೇಳಿ ಬೀಗುತ್ತಿದ್ದರು. ಅಷ್ಟೇ ಅಲ್ಲದೆ ಇವರು ಅನೇಕ ಭಾಷೆಗಳನ್ನು ನೀರರ್ಗಳವಾಗಿ ಮಾತನಾಡುತ್ತಿದ್ದರು. ಪೋರ್ಚುಗೀಸ್ ಹಾಗೂ ಜಪಾನೀಸ್ ಸೇರಿದಂತೆ ಮತ್ತಷ್ಟು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು.

ಕೊನೆಯ ಕ್ಷಣಗಳು

ಬದಲಾಯಿಸಿ

೧೯೭೮ರಲ್ಲಿ ತಮ್ಮ ಹೊಟ್ಟೆಯಲ್ಲಿ ನೋವು ಕಂಡುಬಂತೆಂದು ಚಿಕಿತ್ಸೆ ಪಡೆಯಲು ವೈದ್ಯಕೀಯ ಸಹಾಯದತ್ತ ಮುಖ ಮಾಡಿದಾಗ ತಮಗೆ 'ಲೈಪೋಸಾರ್ಕೊಮ' (ಕ್ಯಾನ್ಸರ್) ಎಂಬ ವಿಚಿತ್ರ ಕಾಯಿಲೆ ಇರುವುದಾಗಿ ತಿಳಿದುಬರುತ್ತದೆ. ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕಾದ ಸಂಗತಿ ಬಂದಾಗ ವೈದ್ಯರು ಫೇಯ್ನ್ಮನ್ ಅವರ ಮೂತ್ರಪಿಂಡಕ್ಕೆ ಹರಡಿದ ದೊಡ್ಡ ಕ್ಯಾನ್ಸರಿನ ಗೆಡ್ಡೆಯೊಂದನ್ನು ತೆಗೆದರು. ಕೆಲವು ವರ್ಷಗಳ ನಂತರ ಆರೋಗ್ಯದಲ್ಲಿ ಏರು ಪೇರು ಆಗುವುದನ್ನು ಗಮನಿಸಿ ಮತ್ತೆ ಚಿಕಿತ್ಸೆ ಪಡೆಯಲು ವೈದರ ಬಳಿ ತೆರಳಿದಾಗ ತಮಗೆ 'ವಾಲ್ದೇನ್ಸ್ಟ್ರೋಮ್ ಮ್ಯಾಕ್ರೋಗ್ಲೋಬುಲಿನೇಮಿಯಾ' ಎಂಬ ರಕ್ತದ ಕ್ಯಾನ್ಸರ್ ಇರುವುದಾಗಿ ತಿಳಿದುಬರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಉಪಚಾರ ಮಾಡುವ ಹೊತ್ತಿಗೆ ಅವರ ದೇಹದ ರೋಗ ನಿರೋಧಕ ಶಕ್ತಿಯು ಕುಗ್ಗತೊಡಗಿತು. ಸುಮಾರು ತಿಂಗಳುಗಳ ಕಾಲ ತಮ್ಮ ದೇಹ ನೀಡಿದ ನೋವುಗಳನ್ನು ಸಹಿಸಿಕೊಳ್ಳುತ್ತಾ ಸಾಗಿದ ಫೇಯ್ನ್ಮನ್ ಅವರಿಗೆ ತದನಂತರ ಹೊಟ್ಟೆಯೊಳಗಾದ ಹುಣ್ಣೊಂದು ಒಡೆದು ಅವರ ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಯಿತು.

ಸಾವು ಹತ್ತಿರವಾಗುವ ವೇಳೆ ತಮ್ಮ ಮಡದಿ, ತಂಗಿ ಜೋನ್ ಹಾಗೂ ಸೋದರ ತಂಗಿ ಫ್ರಾನ್ಸೆಸ್ ಲೆವೀನ್ ಇವರ ಬದಿಯಲ್ಲಿದ್ದು ಸೇವೆ ಮಾಡಿದರು. ಫೆಬ್ರವರಿ ೧೫ರ ದಿನದಂದು ಫೇಯ್ನ್ಮನ್ ತಮ್ಮ ಜೀವನದ ಪಯಣಕ್ಕೆ ವಿದಾಯವೊಡ್ಡಿ ಕೊನೆಯುಸಿರೆಳೆದರು.

ಸಾಮಾನ್ಯರಲ್ಲಿ ಸಾಮಾನ್ಯ

ಬದಲಾಯಿಸಿ

"ನಿಪುಣರಲ್ಲಿ ಎರಡು ವಿಧ. ಮೊದಲನೆಯದಾಗಿ, ಸಾಮಾನ್ಯ ನಿಪುಣರಾದವರು ಮಹಾನ್ ಕಾರ್ಯಗಳನ್ನು ಮಾಡುವಂತವರು, ಮತ್ತು ನೀವು ಸಹ ಅವರಂತೆಯೇ ಪರಿಶ್ರಮದ ಫಲದಿಂದ ಮುಂದೊಮ್ಮೆ ಆ ಗುರಿ ತಲುಪಬಹುದೆಂಬ ಆಶ್ವಾಸನೆಯನ್ನು ನೀಡುವಂತವರು. ಈ ಮೊದಲನೇ ವರ್ಗದವರನ್ನು ಬಿಟ್ಟರೆ ಇನ್ನುಳಿದವರು ಮಾಯಾವಿಗಳು. ಈ ಮೇಧಾವಿಗಳು ತಾವು ತಮ್ಮ ಗುರಿಗಳನ್ನು ಹಾಗೂ ಮಾಡ ಬಯಸುವ ಕಾರ್ಯಗಳನ್ನು ಹೇಗೆ ಸಾಧಿಸುತ್ತಾರೋ ಎಂಬದೆ ನಮಗೆ ತಿಳಿಯುವುದಿಲ್ಲ. ಫೇಯ್ನ್ಮನ್ ಒಬ್ಬ ಮಾಯಾವಿ."                                          - ಹಾನ್ಸ್ ಬೇತ (ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ

 
ಫೇಯ್ನ್ಮನ್ ರ ಹಾಸ್ತಾಕ್ಷರ

ಈ ಜಗದ ಕುರಿತು ಪ್ರತಿಯೊಬ್ಬ ಮಾನವನು ಯೋಚಿಸಬೇಕು, ಕೇವಲ ವಿಜ್ಞಾನಿಗಳಾದವರಷ್ಟೇ ಅಲ್ಲ ಎಂದು ಪ್ರತಿಪಾದಿಸಿದ ಫೇಯ್ನ್ಮನ್ ಬರೀ ಒಬ್ಬ ಪ್ರತಿಭಾವಂತ ವಿಜ್ಞಾನಿಯಷ್ಟೇ ಅಲ್ಲದೆ ಶ್ರೇಷ್ಠ ಶಿಕ್ಷಕ, ಚಿಂತಕ ಹಾಗೂ ಒಬ್ಬ ಸಂಪೂರ್ಣ ಮಾನವನಾಗಿ ಜೀವಿಸಿದರು.

"ನಾನು, ಕಣಗಳ ಒಂದು ಪ್ರಪಂಚ, ಈ ಪ್ರಪಂಚದಲ್ಲಿ ಒಂದು ಕಣ." - ರಿಚರ್ಡ್ ಫೇಯ್ನ್ಮನ್

ತಾನು ಸಹ ಎಲ್ಲರಂತೆಯೇ ಸಾಮಾನ್ಯ ಎಂದು ಹೇಳಿ ಹೋದ ಫೇಯ್ನ್ಮನ್ ತಾವು ಪರಿಚಯಿಸಿ, ಪ್ರಚಾರಿಸಿ ಹಾಗೂ ಖ್ಯಾತಿಗೊಳಿಸಿದ ಅನೇಕ ವಿಷಯಗಳು, ಫೇಯ್ನ್ಮನ್ ತಂತ್ರ, ಕ್ವಾಂಟಮ್ ಎಲೆಕ್ಟ್ರೋಡೈನಾಮಿಕ್ಸ್ ಹಾಗೂ ಫೇಯ್ನ್ಮನ್ ರೇಖಾಚಿತ್ರಗಳ ಮುಖಾಂತರ ಇಂದಿಗೂ ಜೀವಿಸುತ್ತಿರುವರು.

ಉಲ್ಲೇಖಗಳು

ಬದಲಾಯಿಸಿ
  1. https://r.search.yahoo.com/_ylt=Awrx.rm4kQZm6l8KrWu7HAx.;_ylu=Y29sbwNzZzMEcG9zAzEEdnRpZAMEc2VjA3Ny/RV=2/RE=1711735352/RO=10/RU=https%3a%2f%2fen.wikipedia.org%2fwiki%2fRichard_Feynman/RK=2/RS=wkQQ4EyuJ9ibCSwKclfA7B1nQ_Q-
  2. https://r.search.yahoo.com/_ylt=Awrx.rm4kQZm6l8Ktmu7HAx.;_ylu=Y29sbwNzZzMEcG9zAzIEdnRpZAMEc2VjA3Ny/RV=2/RE=1711735352/RO=10/RU=https%3a%2f%2fwww.britannica.com%2fbiography%2fRichard-Feynman/RK=2/RS=mlQcL1lSoF4gOARhTk5I_TD42Cg-
  3. https://r.search.yahoo.com/_ylt=Awrx.rm4kQZm6l8Kxmu7HAx.;_ylu=Y29sbwNzZzMEcG9zAzYEdnRpZAMEc2VjA3Ny/RV=2/RE=1711735353/RO=10/RU=http%3a%2f%2fwww.richardfeynman.com%2f/RK=2/RS=aB.lXwmK5H.2nbsEulxk30o7C5M-
  4. https://r.search.yahoo.com/_ylt=Awrx.rmUkwZmUmAKW5G7HAx.;_ylu=Y29sbwNzZzMEcG9zAzEEdnRpZAMEc2VjA3Ny/RV=2/RE=1711735828/RO=10/RU=http%3a%2f%2fwww.feynman.com%2fstories%2fbiography%2f/RK=2/RS=C9H4zIHfl5kixK4K2bf3HYJNanc-
  5. https://www.youtube.com/watch?v=JIJw3OLB9sI&t=134s
  6. []Surely You're joking Mr. Feynman.
  1. Feynman, Richard. Surely you're joking, Mr. Feynman. Vintage.