ಸಿ ಪಿ ರವಿಕುಮಾರ್ ಅವರು ಒಬ್ಬ ಸಂಶೋಧಕ, ಲೇಖಕ, ಅನುವಾದಕ ಮತ್ತು ಪತ್ರಿಕಾಬರಹಗಾರ.

ಸಂಶೋಧನೆಸಂಪಾದಿಸಿ

ಸಂಶೋಧನೆಯಲ್ಲಿ ಅವರ ಆಸಕ್ತಿ ಹಲವು ಕ್ಷೇತ್ರಗಳಿಗೆ ವಿಸ್ತರಿಸಿದೆ - ವಿ‌ಎಲ್‌ಎಸ್‌ಐ ವಿನ್ಯಾಸ ಮತ್ತು ಪರೀಕ್ಷೆ, ಅಡಕ ಎಲೆಕ್ಟ್ರಾನಿಕ್ಸ್ ವ್ಯವಸ್ಥೆಗಳು ಮತ್ತು ಅತಿವೇಗದ ಗಣಕವ್ಯವಸ್ಥೆಗಳು. ಈ ಕ್ಷೇತ್ರಗಳಲ್ಲಿ ಅವರು ೨೫೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ[೧]. ಅವರಿಗೆ ಮೂರು "ಅತ್ಯುತ್ತಮ ಸಂಶೋಧನಾ ಪ್ರಬಂಧ" ಪ್ರಶಸ್ತಿಗಳು ಸಂದಿವೆ [೨][೩]. ಅವರು ಹದಿನೈದು ಸಂಶೋಧನಾ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಬರೆವಣಿಗೆಸಂಪಾದಿಸಿ

ಸಿ ಪಿ ರವಿಕುಮಾರ್ ಅವರು ಕನ್ನಡದಲ್ಲಿ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. "ದಂತಪಂಕ್ತಿ" ಎಂಬ ಕವನ ಸಂಗ್ರಹವನ್ನು ಕ್ರೈಸ್ಟ್ ಕಾಲೇಜ್ ಕನ್ನಡಸಂಘ ಪ್ರಕಟಿಸಿದೆ. ನವಕರ್ನಾಟಕ ಸಂಸ್ಥೆಯ "ವಿಶ್ವಕಥಾಕೋಶ" ಮಾಲಿಕೆಯಲ್ಲಿ "ಕಾಡಿನಲ್ಲಿ ಬೆಳದಿಂಗಳು" ಎಂಬ ಅನುವಾದಿತ ಕತೆಗಳ ಸಂಗ್ರಹ ಪ್ರಕಟವಾಗಿದೆ[೪]. ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದ "ಮೌಲಾನಾ ಅಬುಲ್ ಕಲಾಂ ಆಜಾದ್" ಎಂಬ ಜೀವನಚರಿತೆಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಸರ್ವೇಶ್ವರದಯಾಲ್ ಸಕ್ಸೇನಾ ಅವರ "ಬಕರಿ" ಎಂಬ ಹಿಂದಿ ನಾಟಕವನ್ನು "ಕುರಿ" ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ; ಇದನ್ನು ಸಮುದಾಯ ನಾಟಕತಂಡದವರು ನೂರಕ್ಕೂ ಹೆಚ್ಚುಸಲ ಪ್ರದರ್ಶಿಸಿದ್ದಾರೆ.

ಬ್ಲಾಗ್ ಬರವಣಿಗೆಗಳುಸಂಪಾದಿಸಿ

ರವಿಕುಮಾರ್ ಅವರು ಅನೇಕ ಬ್ಲಾಗ್ ಬರಹಗಳನ್ನು ಬರೆಯುತ್ತಿದ್ದಾರೆ

  1. ರವಿಕಾಣದ್ದು
  2. ಸಿಪಿ ಸಂಪದ
  3. ಕನ್ನಡ ಬರಹದ ಇಂಗ್ಲಿಷ್ ಅನುವಾದಗಳು
  4. ಹಿಂದಿ ಬರಹಗಳ ಇಂಗ್ಲಿಷ್ ಅನುವಾದಗಳು
  5. ಸ್ವತಂತ್ರ ಇಂಗ್ಲಿಷ್ ಬರಹಗಳು

ಪತ್ರಿಕಾ ಬರಹಸಂಪಾದಿಸಿ

ರವಿಕುಮಾರ್ ಅವರ ಬರಹಗಳು ಪ್ರಜಾವಾಣಿ, ವಿಜಯಕರ್ನಾಟಕ, ಕನ್ನಡಪ್ರಭ, ಸುಧಾ, ಕರ್ಮವೀರ, ಮಯೂರ, ಗಾಂಧಿಬಜಾರ್ ಮೊದಲಾದ ಕನ್ನಡದ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಅವರು "ಜನಮುಖಿ ತಂತ್ರಲೋಕ" ಎಂಬ ಅಂಕಣ ಬರಹವನ್ನು ಬರೆಯುತ್ತಿದ್ದಾರೆ.

ವಿದ್ಯಾಭ್ಯಾಸಸಂಪಾದಿಸಿ

ಸಿ ಪಿ ರವಿಕುಮಾರ್ ಅವರು ಸದರ್ನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿದ್ಯುತ್ ಇಂಜಿನಿಯರಿಂಗ್ ಸಿಸ್ಟಮ್ಸ್ ವಿಭಾಗದಿಂದ ಕಂಪ್ಯೂಟರ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪಿಎಚ್.ಡಿ. ಪದವಿ ಪಡೆದರು (೧೯೯೧). ಭಾರತೀಯ ವಿಜ್ಞಾನ ಸಂಸ್ಥೆಯಿಂದ (ಬೆಂಗಳೂರು) ಕಂಪ್ಯೂಟರ್ ವಿಜ್ಞಾನದಲ್ಲಿ ಎಂಇ ಪದವಿ ಗಳಿಸಿದರು (೧೯೮೭). ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಬಿಇ ಪದವಿ ಪಡೆದರು (೧೯೮೩). ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಮತ್ತು ನ್ಯಾಷನಲ್ ಹೈಸ್ಕೂಲಿನಲ್ಲಿ ಅವರು ಪ್ರೌಢಶಾಲಾ ಶಿಕ್ಷಣ ಪಡೆದರು.

ಉದ್ಯೋಗಸಂಪಾದಿಸಿ

ಸಿ ಪಿ ರವಿಕುಮಾರ್ ಅವರು ಪ್ರಸಕ್ತ ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್ (ಭಾರತ) ಸಂಸ್ಥೆಯಲ್ಲಿ ಡೈರೆಕ್ಟರ್ (ಟ್ಯಾಲೆಂಟ್ ಡೆವಲೆಪ್‍ಮೆಂಟ್) ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ (೨೦೦೧-). ಇದಕ್ಕೆ ಮುಂಚೆ ಅವರು ದೆಹಲಿಯ ಐಐಟಿಯಲ್ಲಿ (ಭಾರತೀಯ ತಂತ್ರಜ್ಞಾನ ಸಂಸ್ಥೆ) ಪ್ರೊಫೆಸರ್ ಹುದ್ದೆಯಲ್ಲಿದ್ದರು (೧೯೯೧-೨೦೦೧). ಕಂಟ್ರೋಲ್‍ನೆಟ್ ಇಂಡಿಯಾ ಎಂಬ ಸಂಸ್ಥೆಯಲ್ಲಿ ಅವರು ಒಂದು ವರ್ಷ ಕಾಲ ವೈಸ್ ಪ್ರೆಸಿಡೆಂಟ್ (ಟ್ರೈನಿಂಗ್) ಹುದ್ದೆಯಲ್ಲಿದ್ದರು (೨೦೦೦-೨೦೦೧). ಸದರ್ನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ (೧೯೮೭-೧೯೯೧) ಅವರು ಸಹಾಯಕ ಸಂಶೋಧಕರಾಗಿ ಮತ್ತು ಅತಿಥಿ ಸಂಶೋಧಕರಾಗಿ (೧೯೯೫-೧೯೯೬) ಸೇವೆ ಸಲ್ಲಿಸಿದರು. ಇನ್ಫೋಸಿಸ್ ಬೆಂಗಳೂರಿನಲ್ಲಿ (೧೯೮೩-೧೮೮೫) ಮತ್ತು ಪ್ರೊಸೆಸರ್ ಸಿಸ್ಟಮ್ಸ್ ಇಂಡಿಯಾ ಬೆಂಗಳೂರು ಸಂಸ್ಥೆಯಲ್ಲಿ (೧೯೮೫) ಸೇವೆ ಸಲ್ಲಿಸಿದ್ದಾರೆ.

ಉಲ್ಲೇಖಗಳುಸಂಪಾದಿಸಿ

  1. ಸಿ ಪಿ ರವಿಕುಮಾರ್ ಅವರ ಸಂಶೋಧನಾ ಪ್ರಕಟಣೆಗಳು
  2. ಸಿ ಪಿ ರವಿಕುಮಾರ್ ಅವರಿಗೆ ವಿ‌ಎಲ್‌ಎಸ್‌ಐ ಸಮ್ಮೇಳನದಲ್ಲಿ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿ, ೨೦೦೧
  3. ರವಿಕುಮಾರ್ ಅವರಿಗೆ ವಿ‌ಟಿ‌ಎಸ್ ಅತ್ಯುತ್ತಮ ಪ್ರಶಸ್ತಿ , ೨೦೦೫
  4. ಕಾಡಿನಲ್ಲಿ ಬೆಳದಿಂಗಳು, ಅನುವಾದಿತ ಕತೆಗಳ ಸಂಗ್ರಹ, 1980| ಮರುಮುದ್ರಣ 2012