ಸಿರಿ ಎಂ ಆದ ನಾನು ಕೋಲಾರ ನಗರದ ಎನ್ ಜಿ ಓ ಬಡಾವಣೆಯ ನಿವಾಸಿಗಳಾದ ಡಾ. ಎಸ್. ಮುರಳೀಧರ್ ಮತ್ತು ಶ್ರೀಮತಿ ವಾಣಿಶ್ರೀ ದಂಪತಿಗಳ ದ್ವಿತೀಯ ಪುತ್ರಿ, ಸ್ಪೂರ್ತಿ ಮುರಳೀಧರ್ ಅವರ ಏಕೈಕ ತಂಗಿಯಾಗಿದ್ದು, ಪ್ರಸ್ತುತ, ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು, ನಲ್ಲಿ ಎರಡನೇ ವರ್ಷದ ಬಿಎಸ್ಸಿ EMS ಕೋರ್ಸ್ ಮಾಡುತ್ತಿದ್ದೇನೆ.

ಮನೆಯಲ್ಲಿ ಯಾವಾಗಲೂ ಜಗತ್ತಿನ ಪ್ರವೃತ್ತಿಗಳ ಬಗ್ಗೆ ಚರ್ಚೆಯಾಗುತ್ತಿದ್ದರಿಂದ,ಸಣ್ಣ ವಯಸ್ಸಿನಿಂದಲೇ ಓದುವ ಹವ್ಯಾಸ, ಎಲ್ಲರೊಡನೆ ಮಾತನಾಡುವ ಅಭ್ಯಾಸ ರೂಢಿಯಾಗಿತ್ತು. ಬರವಣಿಗೆ, ಪುಸ್ತಕ ಓದುವುದು, ಅಡಿಗೆ ಮಾಡುವುದು ,ನೃತ್ಯ ಮಾಡುವುದು ನನ್ನ ಹವ್ಯಾಸಗಳು. ಭರತನಾಟ್ಯದಲ್ಲಿ ಗಂಧರ್ವ ವಿಶ್ವವಿದ್ಯಾಲಯದಲ್ಲಿ ಉತ್ತೀರ್ಣಳಾಗಿದ್ದು, ಈಗಲೂ ನೃತ್ಯ ಮಾಡುವ ಅಭ್ಯಾಸ ಉಂಟು. ಗುಣದಿಂದ ಮೃದುಭಾಷಿಯಾಗಿದ್ದು, ಎಲ್ಲರೊಳಗೊಂದಾಗು ಮಂಕುತಿಮ್ಮ ಎನ್ನುವಂತೆ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ವ್ಯಕ್ತಿತ್ವ ನನ್ನದು. ಮಿತವಾದ ಸಾಮಾಜಿಕ ಸಂಪರ್ಕ ಹೊಂದಿದ್ದರೂ ಸಮಾಜದ ಪರವಾದ ಕಳಕಳಿ ಅನನ್ಯವಾಗಿದೆ. ಇದಕ್ಕೆ ನಿದರ್ಶನವೆಂದರೆ ಇ - ವಿದ್ಯಾಲೋಕ ಎನ್ನುವ ಸಂಸ್ಥೆಯೊಂದರ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷಾ ವಿಷಯವನ್ನು ಪಾಠ ಮಾಡುತ್ತಿದ್ದು, ವಾರಕ್ಕೆ ಎರಡು ದಿನ ಅವರೊಂದಿಗೆ ಮಾತನಾಡಿ ಎಳೆ ಮನಸ್ಸುಗಳ ಜೊತೆಗೆ ಬೆರೆಯುವ ಅವಕಾಶ ಸಿಕ್ಕಿರುವ ಖುಷಿ , ನನಗೆ.

ಶಾಲಾ ವಿದ್ಯಾಭ್ಯಾಸವನ್ನು ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ ಪೂರೈಸಿ ಶಾಲೆಯ ಎಲ್ಲಾ ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ವಿದ್ಯಾರ್ಥಿನಿಯಾಗಿದ್ದೆ ಎನ್ನುವುದು ನನ್ನ ಹೆಗ್ಗಳಿಕೆ ಆಗಿದೆ. ಶಾಲಾ ಹಂತದಿಂದಲೇ ಸುಮಾರು ವಿಜ್ಞಾನ ವಸ್ತು ಪ್ರದರ್ಶನ, ಪ್ರಬಂಧ ರಚನೆ, ಕವನ ರಚನೆ ಹೀಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿದ್ದೆ, 9ನೇ ತರಗತಿಯಲ್ಲಿ ಓದುತ್ತಿದ್ದಾಗ ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ನಮ್ಮ ಕೋಲಾರ ಜಿಲ್ಲೆಯನ್ನು ಪ್ರತಿನಿಧಿಸಿದ್ದೆ.

ಪದವಿ ಪೂರ್ವ ಶಿಕ್ಷಣವನ್ನು ಎಸ್ ಡಿ ಸಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಕೋಲಾರದಲ್ಲಿ ಪಡೆದ ನಾನು,ವಾಣಿಜ್ಯಶಾಸ್ತ್ರದ ಬಗೆಗೆ ಮುಂಚಿನಿಂದಲೂ ಒಲವು ಇದ್ದರಿಂದ, ಬಹಳ ಕಾಲೇಜು ಚಟುವಟಿಕೆಗಳಲ್ಲಿ ಅತ್ಯಂತ ಕ್ರಿಯಾಶೀಲಳಾಗಿ ತೊಡಗಿಕೊಳ್ಳುತ್ತಿದ್ದೆ. ಬಿಸಿನೆಸ್ ಲಾಬ್ ಒಂದನ್ನು ನಾವೇ ಸ್ನೇಹಿತರೆಲ್ಲ ಸೇರಿ ತೆರೆದದ್ದುಂಟು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ನಾನು ಕಾಲೇಜಿನ ಕಾರ್ಯಕ್ರಮಗಳ ನಿರೂಪಣೆ, ನೃತ್ಯ ಸಂಯೋಜನೆಯನ್ನು ಕೂಡ ಮಾಡುತ್ತಿದ್ದೆ. ಇದರ ಜೊತೆ ಜೊತೆಯಲ್ಲಿಯೇ ಪಠ್ಯ ಚಟುವಟಿಕೆಗಳನ್ನು ಕೂಡ ನಿಭಾಯಿಸುತ್ತಾ, ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಲ್ಲದೆ, ಜಿಲ್ಲೆಗೆ ಮೊದಲಿಗಳಾಗಿ, ರಾಜ್ಯಕ್ಕೆ 4ನೇ ಸ್ಥಾನ ಪಡೆದು ಹೊರಹೊಮ್ಮಿದ್ದು ಅತ್ಯಂತ ಸಂತಸದ ಸಂಗತಿಯಾಗಿದೆ. ಕನ್ನಡ, ಗಣಿತ ವಿಷಯಗಳಲ್ಲಿ 100 ಕ್ಕೆ 100 ಅಂಕ ಪಡೆದದ್ದು ಬಹಳ ಮನಸ್ಸಿಗೆ ಖುಷಿ ಕೊಟ್ಟ ಸಂಗತಿ

ನನ್ನ ವ್ಯಕ್ತಿತ್ವದ ಬೆಳವಣಿಗೆ ಸುಧಾ ಮೂರ್ತಿ ಯವರ ಪುಸ್ತಕಗಳು ಲೇಖನಗಳು ಕಾರಣ ವಾದರೆ, ಇಂದಿನ ನನ್ನ ಯೋಚನಾ ಶೈಲಿಗೆ ಪೂರ್ಣ ಚಂದ್ರ ತೇಜಸ್ವಿ ಅವರ ಕೃತಿಗಳೇ ಮುಖ್ಯ ಕಾರಣ.ನನ್ನಿಷ್ಟದ ಬರಹಗಾರರು, ಅವರ ಬರಹಗಳಿಂದ ಪ್ರಭಾವಿತಳಾದ ನಾನು ಮುಂದೆ ಒಂದು ದಿನ ಒಳ್ಳೆಯ ಲೇಖಕಿಯಾಗಬೇಕೆಂಬ ಕನಸನ್ನು ಹೊತ್ತಿದ್ದೇನೆ!

ಪ್ರೊಫೆಸರ್ ಮಗಳಾದ ನನಗೆ ಅರ್ಥಶಾಸ್ತ್ರ ತಜ್ಞೆಯಾಗಿ ನನ್ನ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂಬ ಆಸೆ ಇದ್ದು, ಈಗಾಗಲೇ ಅದೇ ದಾರಿಯಲ್ಲಿ ಸಾಗಲು, ನನ್ನದೊಂದು ಸಂಶೋಧನೆಯ ಮೇಲೆ ಕೆಲಸ ಮಾಡುತ್ತಿದ್ದೇನೆ.ಒಂದೆರಡು ಲೇಖನಗಳು,ಬ್ಲಾಗ್ ಗಳು ಬರೆದಿದ್ದು, ಇದಾಗಲೇ ಅದೇ ಕ್ಷೇತ್ರದ ಹಿರಿಯರ ಸಮೀಕ್ಷೆಯ ಹಂತದಲ್ಲಿದೆ. ಇಷ್ಟೇ ಅಲ್ಲ, ನನ್ನ ಅಪ್ಪ ಅಮ್ಮ, ಅವರ ಮಾರ್ಗದರ್ಶನ ನನ್ನ ಜೀವನದಲ್ಲಿ ದೀರ್ಘಕಾಲಿಕ ಪ್ರೇರಣೆ ನೀಡುತ್ತಿದೆ. ಅವರ ಪ್ರೀತಿಯ ಬೆನ್ನಿಟ್ಟಲ್ಲಿಯೇ ನನ್ನ ವಿದ್ಯಾಭ್ಯಾಸ ಮತ್ತು ಸಂಶೋಧನೆಯ ಹೆಜ್ಜೆ ಹೆಜ್ಜೆಯಾಗಿ ಸಾಗುತ್ತಿರುವುದು ನನಗೆ ಹೆಮ್ಮೆ ಮತ್ತು ಸಂತಸಕ್ಕೆ ಕಾರಣವಾಗಿದೆ. ನಾಗರ್ಭವಿಯ CESS ಎಂಬ ಸಂಶೋಧನಾ ಕೇಂದ್ರದ ಮುಖ್ಯ ಪುಟದಲ್ಲಿ, ನನ್ನದೊಂದು "Redefining Learning: Embracing Outcome Based Education" ಎನ್ನುವ ಶೀರ್ಷಿಕೆ ಹೊತ್ತ ಬ್ಲಾಗ್ ಹೊರಬರಲಿದೆ.