ಗೌರವ್ ಶೆಟ್ಟಿ
ಮೂಲತಃ ಮಂಗಳೂರಿನವನಾದ ನಾನು ಪ್ರಸ್ತುತ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ ಪದವಿಯನ್ನು ಓದುತ್ತಿದ್ದೇನೆ.ಬೆಂಗಳೂರಿನಲ್ಲಿ ವಾಸವಾಗಿರುವ ನಾನು ಸಮಾಜ ಸೇವೆ,ವಿದ್ಯಾರ್ಥಿ ಸಂಘಟನೆ,ಪತ್ರಿಕೋದ್ಯಮ,ಆಂಗ್ಲ ಮತ್ತು ಕನ್ನಡ ಸಾಹಿತ್ಯ,ರಾಜಕೀಯ,ಶಿಕ್ಷಣ,ಯಕ್ಷಗಾನ,ನಾಟಕ,ಮಾನವ ಸಂಪನ್ಮೂಲ-ಹೀಗೆ ಅನೇಕ ಕ್ಷೇತ್ರಗಳಲ್ಲಿ ಆಸಕ್ತಿಯನ್ನೂ ಅಭಿರುಚಿಯನ್ನೂ ಬೆಳೆಸಿಕೊಂಡಿದೇನೆ ಹಾಗೂ ತೊಡಗಿಸಿಕೊಂಡಿದ್ದೇನೆ. ಓದಿನ ಜೊತೆಗೆ ಬೆಂಗಳೂರಿನ ಜಯನಗರದಲ್ಲಿರುವ ಸಂಸ್ಥೆಯೊಂದರಲ್ಲಿ HR ಕನ್ಸಲ್ಟೆಂಟ್ ಆಗಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದೇನೆ.ನೇಮಕಾತಿ ವಿಭಾಗದಲ್ಲಿ ಹಿರಿಯ ಸಲಹೆಗಾರನಾಗಿ ಕೆಲಸ ಮಾಡುತ್ತಿರುವ ನಾನು ಈ ಕ್ಷೇತ್ರದಲ್ಲಿ ಅಪಾರವಾದ ಅನುಭವವನ್ನು ಪಡೆದುಕೊಂಡಿದ್ದೇನೆ.
ಇದಲ್ಲದೆ 'ಲಕ್ಷ್ಯ' ಎಂಬ ವಿದ್ಯಾರ್ಥಿ ಸಂಘಟನೆಯೊಂದನ್ನು ನನ್ನ ಸ್ನೇಹಿತರೊಡಗೂಡಿ ಸ್ಥಾಪಿಸಿರುವ ನಾನು,ಪ್ರಸ್ತುತ ಈ ಸಂಸ್ಥೆಯ ಅಧ್ಯಕ್ಷ ಹಾಗೂ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೇನೆ.ಶಿಕ್ಷಣ ಕ್ಷೇತ್ರದ ಸುಧಾರಣೆಯ ಉದ್ದೇಶದೊಂದಿಗೆ;ವಿದ್ಯಾರ್ಥಿಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ,ಓದಿನ ಜೊತೆಗೆ ಸಮಾಜ ಸೇವೆ ಮಾಡಲು ಅವಕಾಶ ಒದಗಿಸುವ ಸಲುವಾಗಿ ಸ್ಥಾಪಿಸಿಲಾಗಿರುವ ಈ ಸಂಸ್ಥೆ ಪ್ರಸ್ತುತ ಬೆಂಗಳೂರಿನ ಕೆಲವು ಪ್ರಮುಖ ಕಾಲೇಜುಗಳಲ್ಲಿ ಹಬ್ಬಿರುವುದಲ್ಲದೆ,ಪಕ್ಕದ ತುಮಕೂರಿನಲ್ಲಿಯೂ ಸ್ಥಾಪನೆಯಾಗಿದೆ.೭ ಯೋಜನೆಗಳನ್ನು ಈ ಸಂಸ್ಥೆ ನಡೆಸುತ್ತಿದ್ದು ಬೆಂಗಳೂರಿನ ಕೋರಮಂಗಲ,ಲಕ್ಕಸಂದ್ರ,ಚಂದಾಪುರ,ಕೆಂಗೇರಿ ಹಾಗೂ ತುಮಕೂರಿನ ಮೈದಾಳಗಲ್ಲಿ ಕಾರ್ಯನಿರ್ವಹಿಸುತ್ತಿದೆ.೫೦ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಸಂಸ್ಥೆಯಲ್ಲಿ ವಿವಿಧ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಸಂಸ್ಥೆಯ ಎಲ್ಲಾ ದೈನಿಂದಿನ ವ್ಯವಹಾರಗಳನ್ನೂ ವಿದ್ಯಾರ್ಥಿಗಳೇ ನಿರ್ವಹಿಸುವುದು ಇದರ ವಿಶೇಶತೆ.'ಲಕ್ಷ್ಯ'ವನ್ನು ಕಟ್ಟುವ ಮೊದಲು ಬೆಂಗಳೂರು ಮೂಲದ 'ಹೆಡ್ ಸ್ಟ್ರೀಮ್ಸ್' ಎಂಬ ಸಂಸ್ಥೆಯಲ್ಲಿ ಒಂದು ವರ್ಷದ ಕಾಲ ಕಾರ್ಯ ನಿರ್ವಹಿಸಿದ್ದ ನಾನು ನನ್ನ ಸಮಾಜಸೇವೆಯ ಆರಂಭಿಕ ತರಬೇತಿಯನ್ನು ಇಲ್ಲಿ ಪಡೆದೆ.
ರಂಗಭೂಮಿ ಹಾಗೂ ಯಕ್ಷಗಾನಗಳಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವ ನಾನು,ನಮ್ಮ ಕಾಲೇಜಿನಲ್ಲಿ ನಡೆದಿರುವ ಅನೇಕ ಕನ್ನಡ ಹಾಗೂ ಆಂಗ್ಲ ನಾಟಕಗಳಲ್ಲಿ ನಾಯಕನಾಗಿ ಅಭಿನಯಿಸಿದ್ದೇನೆ.ಇದಲ್ಲದೆ ಇತರೆಡೆಯಲ್ಲೂ ಅಭಿನಯಿಸಿರುತ್ತೇನೆ.ಯಕ್ಷಗಾನದಲ್ಲಿ ಅನೇಕ ವರ್ಷಗಳ ಕಾಲ ಸಾಂಪ್ರದಾಯಿಕ ತರಬೇತಿಯನ್ನು ಪಡೆದಿರುವ ನಾನು,ತೆಂಕುತಿಟ್ಟು ಪ್ರಕಾರದಲ್ಲಿ ಅನೇಕ ಪಾತ್ರಗಳನ್ನು ಚಿಕ್ಕ ವಯಸ್ಸಿನಿಂದಲೂ ನಿರ್ವಹಿಸುತ್ತಾ ಬಂದಿದ್ದೇನೆ.ಪರಶುರಾಮ,ಬಲರಾಮ,ದುರ್ಯೋಧನ,ವಿಶ್ವಾಮಿತ್ರ ಹೀಗೆ ಅನೇಕ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದೇನೆ.ಬಡಗುತಿಟ್ಟು ಪ್ರಕಾರದಲ್ಲಿಯೂ ಅಲ್ಪ ಮಟ್ಟಿಗೆ ತರಬೇತಿಯನ್ನು ಪಡೆದಿರುವ ನಾನು,ಸ್ವಲ್ಪ ಅನುಭವವನ್ನು ಪಡೆದಿದ್ದೇನೆ.ಉಡುಪಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ನಾಟಕೋತ್ಸವದಲ್ಲಿ ನನ್ನ ಅಂಗುಲಿಮಾಲ ಪಾತ್ರದ ನಟನೆಗಾಗಿ 'ರಂಗಾಂಕುರ' ಪ್ರಶಸ್ತಿಯನ್ನು ಪಡೆದಿರುತ್ತೇನೆ.
ಪರಿಸರ ಸಂರಕ್ಷಣೆ ಹಾಗೂ ಪತ್ರಿಕೋದ್ಯಮದಲ್ಲೂ ಕೆಲಸ ಮಾಡಿರುವ ಅನುಭವ ಹೊಂದಿರುವ ನಾನು,ಒಂದು ವರ್ಷದ ಮಟ್ಟಿಗೆ(೨೦೧೪-೧೫) 'ವಿಜಯ ಕರ್ನಾಟಕ' ಪತ್ರಿಕೆಯ ಬೆಂಗಳೂರು ನಗರದ ಹಸಿರು ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದೇನೆ.ಈ ಸಮಯದಲ್ಲಿ ಅನೇಕ ಶಾಲೆಗಳಲ್ಲಿ ಭಾಷಣದ ಮೂಲಕ ಪರಿಸರ ಜಾಗೃತಿಗೆ ಶ್ರಮಿಸಿರುತ್ತೇನೆ.ಇದಲ್ಲದೆ ಬೇರೆ ಬೇರೆ ಕಡೆ ಏರ್ಪಡಿಸಲಾದ ಮೆರವಣಿಗೆ,ವಿಚಾರ ಸಂಕಿರಣ ಮುಂತಾದ ಕಾರ್ಯಕ್ರಮಗಳಲ್ಲಿ ಅಥಿತಿಯಾಗಿ ಭಾಗವಹಿಸುವ ಮೂಲಕ ನನ್ನ ಕೈಲಾಗುವ ಮಟ್ಟಿಗೆ ಕೆಲಸವನ್ನು ಮಾಡಿರುತ್ತೇನೆ.ಕೆಲವೊಂದು ಕಾರ್ಯಕ್ರಮಗಳನ್ನು ನಾನೆ ಆಯೋಜಿಸಿರುತ್ತೇನೆ.ಇದಲ್ಲದೆ ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ವಿಭಾಗದ ೬೫ ಸ್ವಾತಂತ್ರ್ಯೋತ್ಸವದ ವಿಶೇಷ ವಿದ್ಯಾರ್ಥಿ ಪುರವಣಿಯ ಅತಿಥಿ ಸಂಪಾದಕನಾಗುವ ಗೌರವಕ್ಕೆ ಪಾತ್ರನಾಗಿದ್ದೇನೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವ ನಾನು,ಚಿಕ್ಕ ವಯಸ್ಸಿನಿಂದಲೇ ಲೇಖನ,ಕಥೆ ಹಾಗೂ ಕವನಗಳನ್ನು ರಚಿಸುತ್ತಾ ಬಂದಿದ್ದೇನೆ.ನನ್ನ ಕಥೆ ಹಾಗೂ ಕವನಗಳು ಕನ್ನಡದ ಪ್ರಮುಖ ದಿನ ಪತ್ರಿಕೆಗಳಲ್ಲಿ ಹಾಗೂ ಪಾಕ್ಷಿಕಗಳಲ್ಲಿ ಪ್ರಕಟವಾಗಿವೆ.ದಿನಪತ್ರಿಕೆಗಳಲ್ಲಿ ಯುವಕರು,ಶಿಕ್ಷಣ ಹಾಗೂ ರಾಜಕೀಯದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳನ್ನು ಬರೆಯುತ್ತಾ ಬಂದಿದ್ದೇನೆ.ಕಾರ್ಕಳದ ಕುಕ್ಕಂದೂರಿನಲ್ಲಿ ನಡೆದ ರಾಜ್ಯ ಮಟ್ಟದ ಯುವ ಕವಿ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸುವ ಗೌರವಕ್ಕೆ ಪಾತ್ರನಾಗಿರುತ್ತೇನೆ.ಇದಲ್ಲದೆ ಯುವ ಕವಿ ಹಾಗೂ ಕಥೆಗಾರನಾಗಿ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಲ್ಪ ಕೊಡುಗೆಯನ್ನು ಗುರುತಿಸಿ ಬೆಂಗಳೂರಿನ ಸಂಘಟನೆಯೊಂದು ತನ್ನ ೨೦೧೨ನೇ ಸಾಲಿನ 'ವಚನ ಮಂದಾರ' ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಹೀಗೆ ಅನೇಕ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಹೊಂದಿರುವ ನಾನು ಪ್ರಸ್ತುತ 'ಲಕ್ಷ್ಯ'ದಲ್ಲಿ ಹೆಚ್ಚು ಸಕ್ರಿಯನಾಗಿದ್ದು ಸಂಘಟನೆಯನ್ನು ಬೆಳೆಸುವತ್ತ ಗಮನವನ್ನು ಹರಿಸುತ್ತಿದ್ದೇನೆ.