ದೀಪಾವಳಿ ಹಬ್ಬಕ್ಕೆ ಪಟಾಕಿಗಳದ್ದೇ ಬೆಳಕು. ಬೆಳಕಿನ ವಯ್ಯಾರದೊಂದಿಗೆ ಮೈ ಕುಲುಕಿಸುತ್ತಾ ಓಲಾಡುವ ಪಟಾಕಿಗಳು ಕಣ್ಮನಗಳಿಗಷ್ಟೇ ಖುಷಿ ಕೊಡುತ್ತಿಲ್ಲ. ಅದರೊಂದಿಗೆ ಪರಿಸರ ಸ್ನೇಹಿ ವಾತಾವರಣವನ್ನು ನಿರ್ಮಿಸುತ್ತಿವೆ. ಹೌದು, ಕಳೆದ ವರ್ಷಕ್ಕೆ ಹೋಲಿಸಿದರೆ ದೀಪಾವಳಿಯ ಟ್ರೆಂಡ್‌ಸೆಟ್ ಬದಲಾಗಿದೆ. ಅದೀಗ ಮತ್ತೂ ಶಬ್ದ ಸ್ನೇಹಿಯಾಗಿದೆ. ಟ್ರೆಂಡ್‌ಗೆ ತಕ್ಕಂತೆ ಬಗೆ ಬಗೆಯ ಸ್ಪಾರ್ಕ್‌ಲರ್‌ಗಳು ಮಾರುಕಟ್ಟೆಗೆ ಬಂದಿವೆ. ರಿಮೋಟ್ ಕಂಟ್ರೋಲ್ ಕಾರ್ ಇದ್ದಂತೆ ರಿಮೋಟ್ ಪಟಾಕಿ ಇದ್ಯಾ? ಪುಟ್ಟ ಕಂದನ ಮುಗ್ಧ ಪ್ರಶ್ನೆ ಹೂಬಾಣದಂತೆ ಎರಗಿತ್ತು. ಹೌದಲ್ವಾ, ರಿಮೋಟ್ ಕಂಟ್ರೋಲ್‌ನಿಂದಲೇ ಮನೇಲಿರೋ ಲೈಟು, ಟಿವಿ, ಫ್ರಿಡ್ಜ್, ಫ್ಯಾನ್ ಆನ್ ಮಾಡ್ತೀವಿ. ನಮ್ಮ ವಿಜ್ಞಾನಿಗಳು ದೂರದಲ್ಲಿರೋ ರಾಕೆಟ್ ಅನ್ನು ಇಗ್ನೈಟ್ ಮಾಡಿ ಉಡಾಯಿಸ್ತಾರೆ. ಆದ್ರೆ ಪಟಾಕಿ ಹೊಡೆಯೋ ತಂತ್ರಜ್ಞಾನಕ್ಕೇಕೆ ರಿಮೋಟ್ ಇಗ್ನೈಟರ್‌ಗಳು ಬಂದಿಲ್ಲ?

ಪಟಾಕೀನಾ ಸೇಫ್ ಝೋನ್‌ನಲ್ಲಿಟ್ಟು ದೂರದಿಂದ ಇಗ್ನೈಟ್ ಮಾಡುವ ತಂತ್ರಜ್ಞಾನ ಸದ್ಯ ಲಭ್ಯವಿಲ್ಲ. ಮುಂದೆ ಅಂತಹದ್ದೊಂದು ತಂತ್ರಜ್ಞಾನ ಬಂದ್ರೂ ಆಶ್ಚರ್ಯವಿಲ್ಲ. ಆದರೆ ಹಾಗೆ ಪಟಾಕಿ ಹೊಡೆದ್ರೆ ಖುಷಿ ಸಿಗುತ್ತಾ? ಪಟಾಕಿ ಬಾಲಕ್ಕೆ ಬೆಂಕಿ ಹಚ್ಚಿ ಸರ್ರ‌್‌ ಅಂತ ಅಲ್ಲಿಂದಿಲ್ಲಿಗೆ ಜಂಪ್ ಮಾಡ್ಕೊಂಡು. ಎದೆ ಝಲ್ಲೆನಿಸಿಕೊಳ್ತಾನೇ ಬೆನ್ನ ಹಿಂದಿನಿಂದ ಪಟಾಕಿ ಸಿಡಿಯೋ ಸಂಭ್ರಮನಾ ನೋಡ್ತಾ ಖುಷಿ ಪಡೋ ಆ ಕ್ಷಣಗಳು ಸಿಗುತ್ತಾ? ಇಲ್ಲ ತಾನೇ... ಆ ಕಾರಣದಿಂದಲೇ ಪಟಾಕಿಗಳಿನ್ನೂ ಲೈವ್ಲಿಯಾಗಿವೆ. ಪಟಾಕಿ ಹಚ್ಚೋಕೆ ಸುಸ್ಸೂರು ಬತ್ತಿ, ಉದ್ದುದ್ದ ಅಗರಬತ್ತಿಗಳು ಬಳಕೆಯಾಗ್ತಾ ಇವೆ. ಹೌದು, ಪಟಾಕಿ ಹಚ್ಚೋ ರೀತಿ ಬದಲಾಗದಿದ್ದರೂ ಪಟಾಕಿ ಸಿಡಿಸೋ ಟ್ರೆಂಡ್ ಮಾತ್ರ ಬದಲಾಗಿದೆ.

ಪಟಾಕಿಗಳನ್ನು ಸೇಫ್‌ಝೋನ್‌ನಲ್ಲಿಟ್ಟು ಸಿಡಿಸೋ ಬದಲಿಗೆ ಸೇಫ್ ಆಗಿರೋ, ಬೆಳಕುಗಳನ್ನು ಚೆಲ್ಲುತ್ತಾ ದೀಪಾವಳಿ ಹಬ್ಬಕ್ಕೆ ನಿಜವಾದ ಅರ್ಥ ಕೊಡುವ ಪಟಾಕಿಗಳಿಗೆ ಬೇಡಿಕೆ ಹೆಚ್ಚಿದೆ. 'ಮೊದಲೆಲ್ಲಾ ಹಂಡ್ರೆಡ್‌ವಾಲಾ, ಥೌಸೆಂಡ್‌ವಾಲಾ, ಆಟಂಬಾಂಬ್, ಏರ್‌ಗನ್, ಲಕ್ಷ್ಮೀ ಪಟಾಕಿ ಅಂತ ಜನ ಮುಗಿ ಬಿದ್ದು ತಗೊಳ್ತಾ ಇದ್ದರು. ಆಗೆಲ್ಲಾ ಹೂವಿನ ಕುಂಡ, ಭೂಚಕ್ರ, ವಿಷ್ಣು ಚಕ್ರ, ಮತಾಪು, ಸುಸ್ಸೂರು ಬತ್ತಿ ಅಂದ್ರೆ ಗುಂಡಿಗೆ ಇಲ್ಲದವರಿಗೆ ಅನ್ತಿದ್ರು. ಆದರೀಗ ಟ್ರೆಂಡ್ ಬದಲಾಗಿದೆ. ನೆಲದ ಮೇಲೆ ಹಚ್ಚೋಕ್ಕಿಂತ ಆಕಾಶದಲ್ಲಿ ಹೂಮಳೆ ಸುರಿಸುವ, ಸಾಲ್ಸಾ ಡ್ಯಾನ್ಸ್ ಆಡುವ, ಹಕ್ಕಿಗಳ ಕಲರವದಂತೆ ವಿಷಿಲ್ ಹಾಕುವ. ಒಂದು ಸ್ಪೋಟದ ನಂತರ ನೂರು, ಸಾವಿರ ಬಾರಿ ಸಿಡಿಯುತ್ತಾ ಬಗೆ ಬಗೆ ಬಣ್ಣದ ಹೂಮಳೆ ಸುರಿಸುವ ಸ್ಪಾರ್ಕ್‌ಲರ್‌ಗಳಿಗೆ ಬೇಡಿಕೆ ಹೆಚ್ಚಿದೆ' ಎನ್ನುತ್ತಾರೆ ಚೆಂದಾಪುರದ ಪಟಾಕಿ ವ್ಯಾಪಾರಿ ಕೃಷ್ಣಾರೆಡ್ಡಿ.

ಪಟಾಕಿ ಕೊಳ್ಳುವಿಕೆಯಲ್ಲಿ ಬದಲಾವಣೆ ಕಂಡು ಬಂದಂತೆ ಪಟಾಕಿ ಮಾರಾಟದಲ್ಲೂ ಹೊಸ ಬಗೆಯ ಟ್ರೆಂಡ್ ಬಂದಿದೆ. ಅದುವೇ ಆನ್‌ಲೈನ್ ಕ್ರೇಜ್. 'ಆನ್‌ಲೈನ್‌ನಲ್ಲಿ ಗ್ಯಾಜೆಟ್‌ಗಳನ್ನು ಕೊಂಡಂತೆ ಇದೀಗ ಪಟಾಕಿಗಳನ್ನು ಆನ್‌ಲೈನ್‌ನಲ್ಲಿ ಕೊಳ್ಳಬಹುದು. ಅದೂ ಕಸ್ಟಮೈಸ್ಡ್ ಆಪ್ಷನ್ ಇರುವುದರಿಂದ ನಿಮ್ಮ ಬಜೆಟ್‌ಗೆ ತಕ್ಕಂತೆ ಪಟಾಕಿ ಕಿಟ್, ಗಿಫ್ಟ್ ಪ್ಯಾಕ್‌ಗಳನ್ನು ಹೊಂದಿಸಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಬುಕ್ ಮಾಡಿದ ನಂತರ ಅವರಿಚ್ಛೆಯಂತೆ ಪಟಾಕಿಯನ್ನು ಅವರ ಮನೆಯ ಬಾಗಿಲಿಗೇ ತಲುಪಿಸುತ್ತೇವೆ. ತಾವು ಖರೀದಿಸಿದ ವಸ್ತುಗಳು ಸರಿಯಾಗಿದೆಯೇ ಇಲ್ಲವೇ ಎಂದು ಪರೀಕ್ಷಿಸಿಕೊಂಡ ನಂತರ ಹಣ ಪಾವತಿಸಬಹುದು' ಎಂದು ವಿವರಿಸುತ್ತಾರೆ ಬೆಂಗಳೂರಿನ ಆನ್‌ಲೈನ್ ಮಾರಾಟ ಮಳಿಗೆಯ ಮಾಲೀಕರಾದ ಶಿವಸುಬ್ರಹ್ಮಣ್ಯಂ ಕೃಷ್ಣಂರಾಜು (ಶಿವು ಕೆ,)

ಕುಟ್ಟಿ ಜಪಾನ್ ಸದಾ ಬಿಸಿಲ ಮಾಳಿಗೆಯಲ್ಲೇ ಉಸಿರೆಳೆಯುವ ಶಿವಕಾಶಿಯ ಕಾರ್ಮಿಕರು ಧಗೆಯಲ್ಲಿ ಬೆಂದರೂ, ಅನಿರೀಕ್ಷಿತ ಅಪಘಾತಗಳಿಂದ ಮೈ-ಕೈ ಸುಟ್ಟುಕೊಂಡರೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನರಿಗೆ ಬೆಳಕಿನ ಖುಷಿ ಕೊಡುವ ಕಾಯಕದಲ್ಲೇ ನಿರತರಾಗಿರುತ್ತಾರೆ. ಬಹುಶಃ ಆ ಕಾರಣದಿಂದಲೇ ಏನೋ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಶಿವಕಾಶಿಯನ್ನು ಮಿನಿ ಜಪಾನ್ (ಕುಟ್ಟಿ ಜಪಾನ್) ಎಂದು ಕರೆದಿರಬಹುದು ಎಂದು ಮುಖವರಳಿಸುತ್ತಾರೆ ಮೂರ್ತಿ.

ಮೂರ್ತಿ ಬೆಂಗಳೂರಿನಲ್ಲಿ ಕಳೆದ 15 ವರ್ಷಗಳಿಂದಲೂ ಪಟಾಕಿ ವ್ಯಾಪಾರ ಮಾಡುತ್ತಿದ್ದಾರೆ. 'ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಂತಹ ಹೊಸ ಬಗೆಯ ಪಟಾಕಿಗಳೇನು ಮಾರುಕಟ್ಟೆಗೆ ಬಂದಿಲ್ಲ. ಆದರೆ ಜನ ಮಾತ್ರ ಪಟಾಕಿ ಕೊಳ್ಳೋದರಲ್ಲಿ ಜಾಣ್ಮೆ ತೋರಿಸುತ್ತಿದ್ದಾರೆ. ನೆಲದ ಮೇಲೆ ಹೊಗೆ ಸೂಸುವ ಪಟಾಕಿಗಳಿಗಿಂತ ರಾತ್ರಿ ವೇಳೆ ಬೆಳಗುವ ಸ್ಪಾರ್ಕ್‌ಲರ್‌ಗಳನ್ನೇ ಹೆಚ್ಚಾಗಿ ಕೊಳ್ಳುತ್ತಿದ್ದಾರೆ' ಎಂದವರು ವಿವರಿಸುತ್ತಾರೆ.

ಮನೋಲ್ಲಾಸಕ್ಕೆ ಹೂವಿನ ಮಳೆ ಈ ಬಾರಿಯ ದೀಪಾವಳಿ ಹಬ್ಬಕ್ಕೆ ಬಗೆ ಬಗೆ ಪಟಾಕಿಗಳ ಸಾಲೇ ನಿಮ್ಮ ಮುಂದಿದೆ. ಅವೆಂದರೆ ಸಾಲ್ಸಾ ಡ್ಯಾನ್ಸ್, ದಿ ಸೆವೆನ್ ವಂಡರ್ಸ್‌, ರಾಕೆಟ್ ವಾರ್ಸ್‌, ಮ್ಯಾಜಿಕ್ ವಿಪ್, ಐಸ್‌ಕೋಲ್ಡ್, ಚಾಕೋಮೇನಿಯಾ ಇತ್ಯಾದಿ. 'ಪಟಾಕಿ ಸಿಡಿಸೋ ವಿಚಾರದಲ್ಲಿ ಮಕ್ಕಳಲ್ಲಿ ಅದರಲ್ಲೂ ಯವಕರ ಕ್ರೇಜ್ ಹೆಚ್ಚಿದೆ. ಹಾಗೆಂದೇ ನಾವೆಲ್ ಐಟಂಗಳಿಗೆ ಬೇಡಿಕೆ ಹೆಚ್ಚಿದೆ. ಉದಾಹರಣೆಗೆ ಹೇಳಬೇಕೆಂದರೆ ಸಾಲ್ಸಾ ಡ್ಯಾನ್ಸ್. ಇದು 100 ಬಾರಿ ಆಕಾಶದಲ್ಲಿ ಸ್ಫೋಟಿಸುತ್ತದೆ. ಪ್ರತಿಬಾರಿ ಸ್ಫೋಟಿಸಿದಾಗಲೂ ನಕ್ಷತ್ರಗುಚ್ಛಗಳನ್ನು ಐದು ಬಣ್ಣಗಳಲ್ಲಿ ಆಕಾಶದಲ್ಲಿ ಚೆಲ್ಲುತ್ತದೆ. ನೋಡಿದರೆ ನಕ್ಷತ್ರ ಮಳೆಯೇ ಸುರಿಯುತ್ತಿದೆಯೇನೋ ಎನಿಸುವಷ್ಟು ಖುಷಿ ಕೊಡುತ್ತದೆ. ರಾಕೆಟ್‌ವಾರ್ ವಿನೂತನ ಬಗೆಯ ಪಟಾಕಿ. ಒಮ್ಮೆ ಹಚ್ಚಿದರೆ, ಒಂದಾದ ನಂತರ ಒಂದು ರಾಕೆಟ್‌ಗಳು ಆಕಾಶಕ್ಕೆ ಚಿಮ್ಮುತ್ತದೆ. ಇನ್ನು ಸೆವೆನ್ ವಂಡರ್ಸ್‌ ಹೂವಿನಕುಂಡದಂತೇ ಹೂಮಳೆಯನ್ನು ಸುರಿಸುತ್ತದೆ. ಏಳು ಬಗೆಯಲ್ಲಿ ಸಿಡಿಯುತ್ತಾ ಬಣ್ಣದ ಚೆಂಡುಗಳನ್ನು ಉದುರಿಸುತ್ತದೆ. ಮ್ಯಾಜಿಕ್ ವಿಪ್ ಹೂವಿನ ಮಾಲೆಯಂತೆ ಬಣ್ಣದ ಬಿರುಸುಗಳೊಂದಿಗೆ ನಿಮ್ಮ ಮುಂದೆ ಅನಾವರಣಗೊಳ್ಳುತ್ತದೆ' ಎಂದು ವಿವರಿಸುತ್ತಾರೆ ಶಿವು ಕೆ.

ಆಯ್ಕೆಗೊಂದು ಕೆಟಗರಿ ಅನ್ನಾರ್ : ಭಾರಿ ಶಬ್ದಕ್ಕೆ ಕಿವಿ ಮುಚ್ಚಿಕೊಂಡೇ ಎಂಜಾಯ್ ಮಾಡುವವರಿಗೆಂದೇ ತಯಾರಾಗಿರುವ ಪಟಾಕಿ.

ಸ್ಪಾರ್ಕ್‌ಲರ್ಸ್‌ : ಪರಿಸರ ಸ್ನೇಹಿ ಹಾಗೂ ಮನೋಲ್ಲಾಸಿನಿ. ಮಕ್ಕಳ ಫೇವರಿಟ್.

ಲಾಡಿಸ್ : ಎಲ್ಲ ವಯೋಮಾನದವರೂ ಇಷ್ಟ ಪಡುವ ಪಟಾಕಿ. ಹನುಮಂತನ ಬಾಲ ಬೆಸ್ಟ್ ಎಕ್ಸಾಂಪಲ್.

ರಾಕೆಟ್ : ಮನಸ್ಸಿಗೆ ಖುಷಿ ಕೊಡುವ ಪಟಾಕಿ. ಗಾಳಿಯಲ್ಲಿ ಸ್ಫೋಟಿಸುತ್ತಾ ಬಣ್ಣ ಬಣ್ಣದ ಹೂಮಳೆಗೆರೆಯುವ ರಾಕೆಟ್‌ಗಳು ಆಯತಪ್ಪಿದರೆ ಹಾನಿ ಉಂಟು ಮಾಡುವ ಸಾಧ್ಯತೆಯೂ ಹೆಚ್ಚು.

ಚಕ್ರಗಳು : ಹೆಸರಿಗೆ ತಕ್ಕಂತೆ ಗಿರ ಗಿರನೆ ತಿರುಗುತ್ತಾ ಬಣ್ಣದ ಬೆಳಕನ್ನು ಹೊರಹೊಮ್ಮಿಸುವ ಪಟಾಕಿಗಳು.

ಆನ್‌ಲೈನ್ ಕ್ರೇಜ್ ಗಿಫ್ಟ್ ಪ್ಯಾಕ್ ಕೊಂಡ್ಕೊಂಡು ಅದರಲ್ಲಿರೋ ಐಟಂಗಳಿಗೇ ತೃಪ್ತಿ ಪಟ್ಟುಕೊಳ್ಳೋರು ಒಂದೆಡೆಯಾದ್ರೆ, ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ತಮಗಿಷ್ಟವಾದ ಪಟಾಕೀನಾ ಆಯ್ಕೆ ಮಾಡಿಕೊಳ್ಳುವವರು ಮತ್ತೊಂದು ಕಡೆ. ಪಟಾಕಿ ಅಗ್ಗವಾಗಿ ಸಿಗುತ್ತೆ ಅನ್ನೋ ನೆವದಲ್ಲಿ ಶಿವಕಾಶಿವರೆಗೂ ಕಾಲೆಳೆದುಕೊಂಡು ಹೋಗೋರಿಗೂ ಕಡಿಮೆಯಿಲ್ಲ. ಆನ್‌ಲೈನ್ ಭರಾಟೆ ಹೆಚ್ಚಿರುವ ಈ ದಿನಗಳಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳಾದ ಸ್ಟ್ಯಾಂಡರ್ಡ್, ಪೀಕಾಕ್, ಆರ್ಯನ್, ಐಯ್ಯನ್ ಪಟಾಕಿ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಆನ್‌ಲೈನ್ ಶಾಪಿಂಗ್ ಮೂಲಕ ಕೊಡುತ್ತಿವೆ. ಅದಕ್ಕಾಗಿ ಅವು ದೊಡ್ಡ ದೊಡ್ಡ ಆನ್‌ಲೈನ್ ಶಾಪಿಂಗ್ ಪೋರ್ಟಲ್‌ಗಳ ಜತೆ ಹೊಂದಾಣಿಕೆ ಮಾಡಿಕೊಂಡಿವೆ. ಬೆಂಗಳೂರಿನಲ್ಲಿ ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟಕ್ಕೆಂದೇ ಪೋರ್ಟಲ್ ಒಂದಿದೆ. ಅವರ ಜಾಲತಾಣದಲ್ಲಿ 150ಕ್ಕೂ ಹೆಚ್ಚು ಬಗೆಯ ಕ್ಯಾಟಗೊರಿಗಳಿವೆ. ನಿಮಗಿಷ್ಟವಾದ ಕ್ಯಾಟಗೊರಿಯನ್ನು ಆಯ್ಕೆ ಮಾಡಿಕೊಂಡು ಕಸ್ಟಮೈಸ್ಡ್ ಬ್ಯಾಸ್ಕೆಟ್ ತಯಾರಿಸಿಕೊಂಡು ಆರ್ಡರ್ ಬುಕ್ ಮಾಡಬಹುದು. ಅದೂ ನಿಮ್ಮ ಬಜೆಟ್‌ಗೆ ತಕ್ಕಂತೆ.

ದುಬಾರಿ ಪಟಾಕಿ ಆಕಾಶದಲ್ಲಿ ನೂರು ಬಾರಿ ಸಿಡಿಯುವ ಸಾಲ್ಸಾ ಡ್ಯಾನ್ಸ್ ಬಗ್ಗೆ ತಿಳಿದುಕೊಂಡಿರಿ. ಇದೀಗ 1000 ಸ್ಕೈ ಶಾಟ್ ಬಂದಿದೆ. ಬಹುಶಃ ಅತಿ ದುಬಾರಿ ಪಟಾಕಿ ಎಂದರೂ ಆಶ್ಚರ್ಯವಿಲ್ಲ. ಇದರ ಬೆಲೆ ಬರೋಬ್ಬರಿ 12 ಸಾವಿರ ರೂಗಳಷ್ಟೇ. 1000 ಸ್ಕೈ ಶಾಟ್ ಆಕಾಶದಲ್ಲಿ ಸುಮಾರು ಒಂದು ಗಂಟೆಯ ಕಾಲ ಬೆಳಗುತ್ತದೆ. ಅಂದಹಾಗೆ 1000 ಸ್ಕೈಶಾಟ್‌ನ ಉದ್ದವೇ ಬರೋಬ್ಬರಿ 3 ಅಡಿಯಷ್ಟಿದೆ. ಅದರ ಪುಟ್ಟ ವರ್ಷನ್ 500 ಸ್ಕೈ ಶಾಟ್ ಸಹ ಮಾರುಕಟ್ಟೆಯಲ್ಲೀಗ ಲಭ್ಯವಿದೆ. ಒಮ್ಮೆ ಆಕಾಶದಲ್ಲಿ ಅದು ಬೆಳಗಿದಾಗ ನಿಮ್ಮ ಮುಂದೆ ಬಣ್ಣದ ಗೆರೆಗಳ ಚಿತ್ತಾರವೇ ಮೂಡುತ್ತದೆ. ಅದರೊಂದಿಗೆ ಸಣ್ಣಪುಟ್ಟ ನಕ್ಷತ್ರಗಳು ಮಿನುಗುತ್ತವೆ. ಸಾಮಾನ್ಯವಾಗಿ ಇವನ್ನು ಶೋ ಸ್ಟಾಪರ್ ಆಗಿ ಬಳಸುತ್ತಾರೆ.

Start a discussion with Yatheen M

Start a discussion