ಗಾಳಿಯನ್ನು ಶುದ್ಧೀಕರಿಸುವ ಚಿನ್ನ

ಬದಲಾಯಿಸಿ

ಇತ್ತೀಚಿನ ದಶಕಗಳಲ್ಲಿ ನಾನೋ ತಂತ್ರಜ್ಞಾನ ಪ್ರಾಶಸ್ತ್ಯ ಪಡೆಯುತ್ತಿದೆ. ಆ ತಂತ್ರಜ್ಞಾನದಿಂದ ಅನೇಕ ವೈಜ್ಞಾನಿಕ ಪವಾಡಗಳನ್ನು ಸಾಧಿಸಬಹುದಾಗಿದೆ ಎಂಬುದು ವಿಜ್ಞಾನಿಗಳ ನಂಬಿಕೆಯಾಗಿದೆ. ಉದಾಹರಣೆಗೆ ಸ್ವೀಡನ್ನಿನ ಸಂಶೋಧಕರು ಸೆಲ್ಯುಲೋಸ್ ನಾನೋ- ಎಳೆಗಳಿಂದ ಕಾಗದವೊಂದನ್ನು ತಯಾರಿಸಿದ್ದಾರೆ. ಸಾಮಾನ್ಯವಾಗಿ ಉಪಯೋಗಿಸುವ ಕಾಗದ ೩೦ ಮೈಕ್ರೋಮೀಟರ್ಗಳ ವ್ಯಾಸದ ಎಳೆಗಳ ಜಾಲದಿಂದ ಕೂಡಿರುತ್ತದೆ. ಆದರೆ ಈ ಪ್ರಸ್ತುತ ಕಾಗದ ಅದರ ಮೂರು ಪಟ್ಟು ಸಣ್ಣ ಅಂದರೆ ೧೦ ಮೈಕ್ರೋಮೀಟರ್ಗಳ ವ್ಯಾಸದ ಎಳೆಗಳ ಜಾಲದಿಂದ ಕೂಡಿರುತ್ತದೆ. ವಿಶೇಷ ಸಂಗತಿಯೆಂದರೆ ಈ ಕಾಗದ ತಾಂಡವಾಳಕ್ಕಿಂತ (ಕ್ಯಾಸ್ಟ್ ಐರನ್) ಗಟ್ಟಿಯಾಗಿರುತ್ತದೆ. ಈ ನಾನೋ ತಂತ್ರಜ್ಞಾನದ ಕಲ್ಪನೆ ಇತ್ತೀಚಿನದು ಎಂಬುದಾಗಿ ಭಾವಿಸಲಾಗಿತ್ತು. ಆದರೆ ಈ ತಂತ್ರಜ್ಞಾನ ಮಧ್ಯಯುಗದಲ್ಲಿಯೂ ಅಸ್ತಿತ್ವದಲ್ಲಿದ್ದಿತು ಎಂಬ ವಿಷಯ ಇತ್ತೀಚೆಗೆ ಬೆಳಕಿಗೆ ಬಂದಿದೆ. ಆ ಕಾಲದಲ್ಲಿ ಕಿಟಕಿಯ ಗಾಜಿನ ಬಾಗಿಲ ಮೇಲೆ ಬಣ್ಣ ಬಣ್ಣದ ಚಿತ್ತಾರವಿರುತ್ತಿತ್ತು. ಸಾಮಾನ್ಯವಾಗಿ ಅಂತಹ ಚಿತ್ತಾರದ ಗಾಜಿನ ಕಿಟಕಿಗಳನ್ನು ಇಗರ್ಜಿಗಳಲ್ಲಿ ಕಾಣಬಹುದಾಗಿತ್ತು. ಅಂತಹ ಗಾಜಿನ ಚಿತ್ತಾರಗಳ ಅಧ್ಯಾಯನ ನಡೆಸಿದ ಝಹುವಾಯ್ ಯಂಗ್ ಎಂಬ ಪ್ರಾಧ್ಯಾಪಕರಿಗೆ ಒಂದು ಸೋಜಿಗದ ಸುದ್ಧಿ ಕಾದಿತ್ತು. ಆ ಚಿತ್ತಾರಗಳನ್ನು ಚಿನ್ನದ ಹುಡಿಯಿಂದ ರಚಿಸಲಾಗಿತ್ತು. ಆ ಹುಡಿಗೆ ಅನೇಕ ವಿಶೇಷವಾದ ಗುಣಸ್ವಭಾವಗಳಿದ್ದವು.

ಸೂರ್ಯನ ಬೆಳಕು ಆ ಚಿತ್ತಾರದ ಕಿಟಕಿಗಳ ಮೇಲೆ ಬಿದ್ದಾಗ, ಅದರಲ್ಲಿರುವ ಚಿನ್ನದ ಹುಡಿ ತನ್ನ ಸುತ್ತಲಲ್ಲಿರುವ ಗಾಳಿಯನ್ನು ಶುದ್ಧೀಕರಿಸುತ್ತಿತ್ತು. ಸಾಮಾನ್ಯವಾಗಿ ಹೊಸ ಪೀಠೋಪಕರಣಗಳು, ನೆಲಹಾಸುಗಳು ಮತ್ತು ಹೊಸದಾಗಿ ಗೋಡೆಗಳಿಗೆ ಹಾಕಿರುವ ಬಣ್ಣಗಳು ಗಾಳಿಯಲ್ಲಿ ಮಾಲಿನ್ಯತೆಯುಂಟು ಮಾಡುವ ಪದಾರ್ಥಗಳನ್ನು ಅಂದರೆ ಬಾಷ್ಪಶೀಲ ಜೈವಿಕ ರಾಸಾಯನಿಕ ಪದಾರ್ಥಗಳನ್ನು ಹೊರಸೂಸುತ್ತವೆ. ಆ ರಾಸಾಯನಿಕಗಳು ಮಿಥೆನಾಲ್ ಮತ್ತು ಇಂಗಾಲದ ಮೊನಾಕ್ಸೈಡ್ ಗಳ ಜೊತೆ ಬೆರೆತರೆ, ಅವು ಸಣ್ನ ಪ್ರಮಾಣಗಳಲ್ಲಿದ್ದರೂ ಮಾನವನ ಆರೋಗ್ಯಕ್ಕೆ ಮಾರಕವಾಗಿರುತ್ತದೆ. ಅ ಪದಾರ್ಥಗಳನ್ನು ನಾಶಮಾಡುವ ಶಕ್ತಿ ಸೂರ್ಯನ ಬೆಳಕಿನಿಂದ ಉತ್ತೇಜನ ಹೊಂದಿದ ಆ ಚಿನ್ನದ ಹುಡಿಯಲ್ಲಿ ಕಾಣಿಸಿಕೊಳ್ಳುತ್ತಿತ್ತು ಎಂಬುದಾಗಿ ಕಂಡುಹಿಡಿಯಲಾಯಿತು.

ಝ ಹುವಾಯ್ ಯಂಗ್ ರವರು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ತಾಂತ್ರಿಕ ವಿದ್ಯಾಲಯದ ಒಂದು ವಿಭಾಗವಾದ ಭೌತ ಮತ್ತು ರಾಸಾಯನಿಕ ಶಾಲೆಯಲ್ಲಿ ಉಪ ಪ್ರಾಧ್ಯಾಪಕರಾಗಿದ್ದಾರೆ. ಅವರು ಮತ್ತು ಅವರ ತಂಡ ಯುರೋಪಿನ ಇಗರ್ಜಿಗಳಲ್ಲಿರುವ ಗಾಜಿನ ಕಿಟಕಿಗಳ ಮೇಲಿನ ಚಿತ್ತಾರವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಮೇಲಿನ ಸೋಜಿಗದ ವಿಷಯಗಳು ಕಂಡುಬಂದವು. ನಂತರ ಅವರ ಸಂಶೋಧನೆಯನ್ನು ಹೀಗೆ ಪ್ರಕಟಿಸಿದ್ದಾರೆ: " ಚಿನ್ನದ ವಿವಿಧ ಗಾತ್ರದ ಹುಡಿಯನ್ನು 'ನಾನೋ-ಗಾತ್ರದಲ್ಲಿ' ತಯಾರಿಸಿ, ಅವುಗಳಿಂದ ಬಣ್ಣದ ಚಿತ್ರಣ ನಡೆಸುವ ಕುಶಲಕಲೆಯಲ್ಲಿ ಪರಿಣಿತಿ ಸಾಧಿಸಿದ, ಗಾಜಿನ ವಸ್ತುಗಳಿಗೆ ಹೊಳಪು ನೀಡುವ ಗಾಜುಗಾರರು ಆ ಕಲೆಗೆ ಸಂಬಂಧಪಟ್ಟಂತೆ ಮೊತ್ತಮೊದಲ ನಾನೋ ತಂತ್ರಜ್ಞಾನರಾಗಿದ್ದಾರೆ. ಏಕೆಂದರೆ ಆ ಗಾತ್ರದಲ್ಲಿರುವ ಚಿನ್ನದ ಕಣಗಳಿಗೆ ಸೂರ್ಯನ ಬೆಳಕು ಚೇತನ ನೀಡುತ್ತದೆ. ಅಂದರೆ ಸೂರ್ಯನ ಬೆಳಕಿನಲ್ಲಿರುವ ವಿದ್ಯುದಯಸ್ಕಾಂತ ಕಿರಣಗಳು ಚಿನ್ನದ ಋಣವಿದ್ಯುತ್ ಕಣಗಳ ಕಂಪನಗಳ ಜೊತೆ ಸ್ಪಂದಿಸಿ, ಅನುರಣನೆಯನ್ನು ಸೃಷ್ಟಿಸುತ್ತದೆ.

ಆದ್ದರಿಂದ ಚಿನ್ನದ ನಾನೋ-ಗಾತ್ರದ ಕಣಗಳ ಮೇಲ್ಮೈಯ ಅಯಸ್ಕಾಂತ ಕ್ಷೇತ್ರವನ್ನು ನೂರು ಪಟ್ಟು ವೃದ್ಧಿಸಿದಾಗ ಅವು ಗಾಳಿಯಲ್ಲಿರುವ ಮಾಲಿನ್ಯಯುತ ಅಣುಗಳನ್ನು ಒಡೆದು ಗಾಳಿಯನ್ನು ಶುದ್ಧೀಕರಿಸುತ್ತದೆ. ಅಂತಹ ಪ್ರಕ್ರಿಯೆಯಲ್ಲಿ ಉತ್ಪತ್ತಿಯಾಗುವ ಉಪೋತ್ಪನ್ನವಾದ ಸಣ್ಣ ಪ್ರಮಾಣದ ಇಂಗಾಲದ-ಡೈ-ಆಕ್ಸೈಡ್ ನಿಂದ ಅಪಾಯವೇನೂ ಇರುವುದಿಲ್ಲ. ಸೌರಶಕ್ತಿಯಿಂದ ಚೇತನ ಹೊಂದುವ ಚಿನ್ನದ ನಾನೋ ಗಾತ್ರದ ಕಣಗಳು ಉತ್ಸರ್ಜಿಸುವ ರಾಸಾಯನಿಕ ಪ್ರತಿಕ್ರಿಯೆಗಳ ಉಪಯೋಗಗಳು ವೈಜ್ಞಾನಿಕ ಸಂಶೋಧನೆಯಲ್ಲಿ ಅತ್ಯಂತ ಹೆಚ್ಚಿನ ರೋಚಕವಾದ ಸಾಧ್ಯತೆಗಳನ್ನು ನಮ್ಮ ಮುಂದಿಟ್ಟಿವೆ. ಅನೇಕ ಶತಮಾನಗಳಿಂದ ಜನಸಾಮಾನ್ಯರು ಆ ಹೊಳಪಿನ ಗಾಜಿನ ಮೇಲೆ ಬಿಡಿಸಿರುವ ಚಿತ್ತಾರದ ಹಿನ್ನಲೆಯ ಕಲಾಪ್ರತಿಭೆಯನ್ನು ಪ್ರಶಂಸಿಸುತ್ತಿದ್ದರು ಮತ್ತು ಅದರ ಮಾಸದ ಬಣ್ಣಗಳ ದೀರ್ಘ‍ ಬಾಳಿಕೆಯ ಬಗ್ಗೆ ಅಚ್ಚರಿ ಪಡುತ್ತಿದ್ದರು. ಆಧುನಿಕ ವೈಜ್ಞಾನಿಕ ಭಾಷೆಯಲ್ಲಿ ಹೇಳಬಹುದಾದರೆ, ಅಂದಿನ ಆ ಕಲಾಕೃತಿಗಳು ಕೇವಲ ಪರಿಣಿತ ಕಲಾವಿದರಿಂದ ಚಿತ್ರಿಸಲ್ಪಟ್ಟ ಕಲೆಯಾಗಿರಲಿಲ್ಲ, ಅವು ನಾನೋ-ರಚನೆಯ ಚಿತ್ರದ ಕ್ರಿಯಾವರ್ಧಕ ಮತ್ತು ದ್ಯುತಿ ಕ್ರಿಯಾವರ್ಧಕ ಪ್ರಕ್ರಿಯೆಗಳ ಸಂಮಿಲನದ ಪ್ರಕ್ರಿಯೆಯಾಗಿವೆ.